ಆಕಾಶರಾಜ ತಂಬಾಕು ಉಗುಳುತ್ತಿದ್ದ

ಸುನಂದಾ ಬೆಳಗಾವಕರ ಅವರ ‘ಕಜ್ಜಾಯ’ ಓದಿ ಒಂದಷ್ಟು..
ರಮೇಶ್ ಗುರುರಾಜ ರಾವ್
ಏಕೋ ಈ ಬಾರಿ, ಬರೆಯುವುದು ಆತ್ಮೀಯ ಎನಿಸಿತ್ತು.. ಬಹುಷಃ ನಾನು ಕಂಡ ಸಂದರ್ಭಗಳು ಕಣ್ಣ ಮುಂದೆ ಬಂದದ್ದಕ್ಕೋ ಏನೋ
ನನ್ನ ತಾಯಿಯ ಕಾಕಾನ ಮನೆಯಲ್ಲಿ (ಧಾರವಾಡ, ಹುಬ್ಬಳ್ಳಿ ಹಾಗು ಶಿಸುವಿನಹಾಳ).
ಸುನಂದಾ ಬೆಳಗಾಂವಕರ  ಅವರು ಬರೆದ ಖಾದ್ಯಗಳ ಸವಿ ಉಂಡ ನೆನಪಾಯಿತು. ನನ್ನ ನೆನಪಿನಂಗಳಕ್ಕೆ ನಾನೇ ಮತ್ತೊಮ್ಮೆ ದಾಳಿ ಇಡುವಂತಾಯಿತು

ಕಜ್ಜಾಯದಷ್ಟೇ ಸಿಹಿ ಇಲ್ಲಿನ ನೆನಪುಗಳು… ಮನುಷ್ಯ ಮನುಷ್ಯ ಸಂಬಂಧಗಳು, ಸಣ್ಣ ಸಣ್ಣ ಮಾತುಗಳು, ಸಣ್ಣ ಸಣ್ಣವು ಎನಿಸಬಹುದಾದ ಆದರೆ ವಿಪರೀತ ಕೊನೆ ಕೊಡುವ ಘಟನೆಗಳು, ಧಾರವಾಡದ ಹವೆ, ಅಲ್ಲಿನ ತಿಂಡಿಗಳು, ತಿಂಡಿ ಮಾಡುವ ವಿಧಾನಗಳು, ಹೀಗೆ ಎಲ್ಲಾ ಕಜ್ಜಾಯ, ಕಜ್ಜಾಯ… ಅಲ್ಲಲ್ಲಿ ಕಜ್ಜಾಯ ಸೀದುಹೋಗಿ ಆ ಕಪ್ಪಿನ ಕಹಿ ಇರುವಂತೆ ನೋವಿನ ಎಳೆಗಳು ಫಟಕ್ಕನೆ ಕಾಣಿಸಿಕೊಳ್ಳುತ್ತವೆ. ಇಲ್ಲಿ ಲೇಖಕಿಯ ಉದ್ದೇಶ ಬರೀ ನೆನಪಿನಂಗಳದಲ್ಲಿ ಕುಂಟಾಬಿಲ್ಲೆ ಆಡುವುದು ಮಾತ್ರವಲ್ಲ ಎನ್ನುವುದು ಬಹಳ ಸ್ಪಷ್ಟ.
ಮಣ್ಣು, ಸ್ಮೃತಿ, ಕೆಂಪು ಡಬ್ಬಿ, ಹೀಗೆ ಸಾಮಾನ್ಯವಾದ ಕಜ್ಜಾಯದಂತೆ ಕಂಡರೂ ಒಂದೊಂದೂ ಡೈನಮೈಟ್.
ಎಲ್ಲಿ ನೋಡಿದರೂ, ಸಾಲು ಸಾಲಲ್ಲಿ, ಪದ ಪದಗಳಲ್ಲಿ ಧಾರವಾಡ, ಧಾರವಾಡ…

ನೀವು ಮಳೆಗಾಲದಲ್ಲಿ ಧಾರವಾಡ ನೋಡಬೇಕು… ಇದು ನನಗೆ ನೆನಪಿದ್ದಂತೆ ನಾನು ಕಂಡ ಮೊದಲ ಧಾರವಾಡದ ಚಿತ್ರ…. ಕೆಂಪು ಮಣ್ಣು ಕೆಸರು, ಜಿಟಿ ಜಿಟಿ ಮಳೆ, ಸಣ್ಣ ಸಣ್ಣ ಕಪ್ಪೆ ಮರಿಗಳು, ಇವೆಲ್ಲದರ ಮಧ್ಯೆ ಸಾಧನಕೇರಿ, ಬಾಬುಸಿಂಗ್ ಫೇಡ, ಹೀಗೆ ಹಲವಾರು ನೆನಪುಗಳು… ಬೆಂಗಳೂರಿನವನಾದ ನನ್ನ ಮನಸ್ಸಿನಲ್ಲೇ ಇಷ್ಟು ಅಲೆಗಳು ಎದ್ದಿರಬೇಕಾದರೆ, ಇನ್ನು ಅಲ್ಲಿಯವರೆ ಆದ ಸುನಂದಾ ಬೆಳಗಾಂವ್ಕರ್ ಅವರಿಗೆ ಸುನಾಮಿಯ ಅಲೆಯಂತೆ ಧಾರವಾಡ ನೆನಪಾಗಿದ್ದು ಅಚ್ಚರಿಯೇನಲ್ಲ. ಮೊದಲ ನಾಲ್ಕು ಸಾಲುಗಳಲ್ಲಿ ಅವರ ಮನಸ್ಸಿನ ಚಿತ್ರ ದಾಖಲಾಗುತ್ತದೆ.. “ಪಿಚ್ ಪಿಚ್ ಕೆಸರು ತುಳಿಯುತ್ತ ಕಾಲೇಜಿಗೆ ಹೊರಟಿದ್ದೆ… ಆಕಾಶರಾಜ ತಂಬಾಕು ಉಗುಳುತ್ತಿದ್ದ. ಕೆಂಪು ಕೆಂಪು ನೀರು ಹರಿಯುತ್ತಿತ್ತು. ಶ್ರಾವಣದ ಜಿಟಿಜಿಟಿ ಮಳೆ, ಧಾರವಾಡ ಮಣ್ಣು, ಜಡವಾದ ಚಪ್ಪಲಿಗಳು…….” . ಈ ತಂಬಾಕು ಉಗುಳುವ ಪರಿಕಲ್ಪನೆ ಅದ್ಭುತ.
“ಮಣ್ಣು” ಪ್ರಬಂಧದಲ್ಲಿ, ಧಾರವಾಡದ ಕೆಂಪು ಮಣ್ಣಿಂದ ಶುರುವಾಗಿ ಮಣ್ಣಲ್ಲಿ ಮೂರ್ತಿ ಮಾಡುವ ದಾನಪ್ಪ ಮಾಸ್ತರರ ಜೀವನದ ಆಳಕ್ಕೆ ನಮ್ಮನ್ನು ಹುಗಿದುಬಿದುತ್ತದೆ.. ಪುನಃ ಮತ್ತದೇ ಧಾರವಾಡದ ಮಣ್ಣಿನ ಜಿಗುಟಿನಷ್ಟೇ ಗಟ್ಟಿಯಾಗಿ ಈ ಪ್ರಬಂಧ ನಮ್ಮ ಮನಸ್ಸಿಗೆ ಅಂಟಿಬಿಡುತ್ತದೆ
ಈ ಪ್ರಬಂಧ ನಮಗೆ ಆಪ್ತವಾಗುವುದೇ ಅದರಲ್ಲಿನ ಸಂಭಾಷಣೆಗಳಿಂದ. ದಾನಪ್ಪ ಮಾಸ್ತರರು ಮತ್ತು ಅವರ ಮಗ ಶ್ರೀಶೈಲನ ನಡುವೆ ನಡೆಯುವ ಮಾತಿನ ಚಕಮಕಿಯಲ್ಲಿ ಹಾರಿಬರುವ ಒಂದೇ ಒಂದು ಮಾತಿನ ಕಿಡಿ ಸಾಕು.
ಮಗ ಶ್ರೀಶೈಲ ಹೇಳುತ್ತಾನೆ “ಮುಂಬೈಯಾಗ ನೌಕರಿ ಮಾಡಕೋತ ಮೂರ್ತೀನೂ ಮಾಡ್ತೀನಿ. ಅಲ್ಲೇ ರೊಕ್ಕ ಐತಿ. ಈ ಊರಾಗ ಏನೈತಿ?”
“ಈ ಊರಾಗ ಮಣ್ಣ ಐತಿ” ಅಂದರು ದಾನಪ್ಪ
ಕಣ್ಣು ತುಂಬಿ ಬರುವ ಈ ಸಂಭಾಷಣೆ ಒಬ್ಬ ಕಲಾವಿದನಿಗೆ, ಅದರಲ್ಲೂ ಮಣ್ಣಲ್ಲಿ ಕಲೆ ಸೃಷ್ಟಿಸುವ ಜೀವಕ್ಕೆ ಮತ್ತು ಮಣ್ಣಿಗೆ ಇರುವ ಅಗೋಚರ ಸೂತ್ರವನ್ನು ಇಲ್ಲಿ ನಮಗೆ ಕಾಣಿಸುತ್ತದೆ
ಪ್ರಬಂಧದ ಕೊನೆಯಲ್ಲಿ ಬರುವ ಮಾತುಗಳು ಯಾವತ್ತಿಗೂ ಸಾರ್ವಕಾಲಿಕ “ಶ್ರೀಮಂತನಾಗಲು ಮುಂಬಯಿಗೆ ಹೋದ ಮಗ ಅಂತಃಕರಣದ ಜೀವಿಗಳನ್ನು ಕಳೆದುಕೊಂಡು ಮರಳಿ ಮಣ್ಣಿಗೆ ಬಂದಾಗ ಬಡವನಾಗಿದ್ದ”
ಎಲ್ಲೋ ಒಂದು ನೋವಿನ ಎಳೆ ಸುನಂದಾ ಅವರನ್ನು ಹಿಡಿದು ಜಗ್ಗಿತ್ತಾ? ತಿಳಿಯಲಿಲ್ಲ..
ಇದಿಷ್ಟು “ಮಣ್ಣಾ”ದರೆ, ಇನ್ನು ನೆನಪಿನಾಳದಿಂದ ಹೆಕ್ಕಿ ತೆಗೆದಿರುವ “ಸ್ಮೃತಿ” ಯಂತೂ ಇನ್ನೂ ಅದ್ಭುತ. ಈ ಲೇಖನ ಓದಿ ಮುಗಿಸುವ ವೇಳೆಗೆ ನಿಮ್ಮನ್ನು ಧಾರವಾಡದ ಖಾದ್ಯಗಳು ಕಾಡಲಿಲ್ಲ ಅಂದರೆ ಕೇಳಿ.. ನೆನಪಿನಾಳದಲ್ಲಿ ಮರೆಯಾಗಿ ಹೋಗಿ ಎಷ್ಟೋ ಕಾಲವಾದರೂ ದೈನಂದಿನ ಘಟನೆಗಳ ಜೊತೆ ಧಾರವಾಡದ ಖಾದ್ಯಗಳ ಮೆಲುಕು ಹಾಕುವ ಈ ಲೇಖನ ಅತ್ಯದ್ಭುತ… ಖಾದ್ಯದ ನೆಪದಲ್ಲಿ ಹಿಟ್ಟು ಒತ್ತುವ ತಾಯಿಯ ಬಳೆಯ ಖಣಖಣ, ಭಕ್ಕರಿ ಜೊತೆ ಪುಂಡಿಯ ಪಲ್ಲೆ, ಮೆಣಸಿನಕಾಯಿ ಸವಿಯುವ ತಂದೆ, ಮನೆಯ ಕೆಲಸದಾಳಿಗೆ ಬಿಸಿ ಬಿಸಿ ಭಕ್ಕರಿ ಬಡಿದು ಕೊಡುವ ದೃಶ್ಯಗಳು ಆಪ್ತವಾಗುತ್ತವೆ. ಈ ಲೇಖನದ ಒಂದು ಸಾಲು ಇಲ್ಲಿ ನಾನು ಕೊಡಲೇ ಬೇಕು
“ಮನೆಯಲ್ಲಿ ಕಡೆದ ತಾಜಾ ಎಮ್ಮೆ ಬೆಣ್ಣೆಯ ಮುದ್ದೆ ಎಲೆಯಲ್ಲಿ ಬಿತ್ತು. ಪುಟಾಣಿ ಚಟ್ನಿಪುಡಿ ಮೊಸರು ಹಾಕಿದರು. ಹಸಿ ಸೌತೆಯ ಕಾಯಿ, ಉಳ್ಳಾಗಡ್ಡಿಯ ತುಣುಕುಗಳು ಎಲೆಯಲ್ಲಿ ಓಡಾಡಿದವು…..
“ಇದನ್ನ ಬ್ರಹ್ಮ ತಿಂದ್ರ ಸರಸ್ವತಿಗೆ ಓದೋದ ಬಿಟ್ಟು ಬರೇ ಅಡಿಗಿ ಕಲಿ ಅಂತಾನ. ಅವನ ನಾಲ್ಕು ರಸನೆಂದ್ರೀಯದ ಚಪಲ ತೀರಬೇಕಲ್ಲ……”
ಇದಷ್ಟೇ ಅಲ್ಲದೆ ಭೇಲ್ ಪುರಿ, ಪಾನೀ ಪುರಿಗಳ, ಅದನ್ನು ತಿನ್ನುವ ವೈಖರಿಯ ವರ್ಣನೆ ಅದ್ಭುತ.. ಅದನ್ನು ಓದಿದ ಮೇಲೆ ನಿಮಗೆ ಅದನ್ನು ಸವಿಯುವ ರೀತಿ ಬಗ್ಗೆ ಯೋಚನೆ ಬರದಿದ್ದರೆ ಕೇಳಿ..
ಇಲ್ಲಿ ಖಾದ್ಯಗಳೇ ಪಾತ್ರಗಳಾಗುತ್ತವೆ. ಅದೇ ಈ ಲೇಖನದ ವೈಶಿಷ್ಟ್ಯ
ಪೋಸ್ಟ್ ಡಬ್ಬಿಯನ್ನು ಜೀವನಕ್ಕೆ ಹೋಲಿಸಿದ್ದು ನಾನು ಇದೆ ಮೊದಲ ಬಾರಿಗೆ ನೋಡಿದ್ದು.. ಅದ್ಭುತ. ಕೆಂಪು ಡಬ್ಬಿಯ ಒಳಗೆ ತುಂಬುವ ಪತ್ರಗಳು, ಸುಖ ದುಃಖದ ಮೂಟೆ ಹೊತ್ತು ಡಬ್ಬಿಯಲ್ಲಿ ಬಂದು ಬೀಳುತ್ತವೆ.
ಪೋಸ್ಟ್ ಹೊತ್ತು ತರುವ ಅಂಚೆಯಣ್ಣನ ಅಂತರಂಗದ ಬಹಿರಂಗ ದರ್ಶನ ಈ ಲೇಖನ… ತನ್ನ ಮಗಳು ತೀರಿಕೊಂಡಿದ್ದರೂ ಆ ದುಃಖದಲ್ಲಿ ಕೂಡ ತನ್ನ ಮಗಳ ಗೆಳತಿಗೆ ಇಷ್ಟದ ತಿನಿಸಿನ ಬಗ್ಗೆ ಯೋಚನೆ ಮಾಡುವ ಅದ್ಭುತ ಚೇತನ.. ಎಲ್ಲಿ ಹೋದವು ಈ ಮನಸ್ಸುಗಳು? ಬರೀ ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡುವ ಮನಸ್ಸುಗಳ ಮಧ್ಯೆ, ಈ ಮನಸ್ಸುಗಳು ಮರುಭೂಮಿಯ ಓಯಸಿಸ್ ಆಗಿ ಕಾಣುತ್ತವೆ.
“ಈ ಸಂಸಾರ ಅಂದ್ರ ನಮ್ಮ ಪೋಸ್ಟಿನ ಕೆಂಪು ಡಬ್ಬಿ. ಆ ಡಬ್ಬಿಯೊಳಗ ಸುಖದುಃಖ ಎರಡೂ ತುಂಬೇತಿ. ಮಧ್ಯಾನ್ಹ ಊಟದ ಹೊತ್ತಿಗೆ ಯಾ ತಾಯವ್ವಗ ಆಕಿ ಮಗಾ ಸತ್ತ ಸುದ್ದಿ ಮುಟ್ಟಿಸಿನೇನೋ ಯವ್ವಾ……” ಎನ್ನುವ ಪೋಸ್ಟ್ ಮ್ಯಾನ್ ಸಿದ್ದಪ್ಪ, ವೃತ್ತಿ, ಮಾನವೀಯತೆ ಎರಡನ್ನು ಒಟ್ಟಿಗೆ ಹೊತ್ತು ಸಾಗುತ್ತಾನೆ.
ಯಾರದೋ ಸಂಸಾರ… ಯಾತರದ್ದೋ ದುಃಖ…. ತಿರುಗಿ ಬಿದ್ದ ಸಂಸಾರದ ಸದಸ್ಯ… ಅವನ ತಾಯಿಗೆ ಸಂಕಷ್ಟ…ಸಂಕಷ್ಟಕ್ಕೆ ಬಿದ್ದ ಪರಿ… ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿ ಇಡುತ್ತದೆ “ಹೆಣ್ಣು-ಭೂಮಿ” ಲೇಖನ.. ಇವತ್ತಿಗೂ ಎಷ್ಟೋ ಮಂದಿ ಹೆಣ್ಣು ಮಕ್ಕಳ ಬಾಳಿನ ಕನ್ನಡಿ ಈ ಲೇಖನ…
ಇಷ್ಟಾಗಿ… ಆ ಹೆಣ್ಣು ಮಗಳ ಮಗನನ್ನೂ ದೂರುವಂತಿಲ್ಲ. ಹೊರಗೆ ಸಮಾಜದಲ್ಲಿ ಅವನಿಗಾಗುವ ಅವಮಾನ ಕೂಡ ಘೋರ… ತಂದೆ ಯಾರೆಂದು ಗೊತ್ತು ಆದರೆ ಅವನಿಗೆ ತಂದೆಯೇ ಇಲ್ಲವೇನೋ ಎಂಬಂತಿರಬೇಕು…. ಇದು ಸಂದಿಗ್ಧ. “ಹೆಣ್ಣು – ಭೂಮಿ ತಾಯಿ. ಏನ ಬಿತ್ತತಿ ಅದನ್ನ ಬೆಳೀತಿ” ಎಂಥಾ ಮಾರ್ಮಿಕವಾದ ಮಾತು
ಹತ್ತು – ಐದು….. ಈ ಲೇಖನದಲ್ಲಿ ಸ್ವಲ್ಪ ಸಿನಿಮೀಯತೆ ಇದೆ ಎನ್ನಿಸಿದರೂ, ಮಣ್ಣಿನ ಗುಣ ದಟ್ಟವಾಗಿದೆ. ಬಹುಷಃ ನಾನು ಸಿನೆಮಾಗಳಲ್ಲಿ ಈ ರೀತಿಯ ಸಂದರ್ಭಗಳನ್ನು ನೋಡಿ ಅಭ್ಯಾಸವಾಗಿರುವುದರಿಂದ, ಬಹುಷಃ ನನಗೆ ಹಾಗನ್ನಿಸಿರಬಹುದು. ಹೀಗಾಗಿ ಇದಕ್ಕಿಂತ ಹೆಚ್ಚಿಗೆ ಏನೂ ಹೇಳಲಾರೆ
ಒಟ್ಟಿನಲ್ಲಿ “ಕಜ್ಜಾಯ” ಸುಪ್ತ ಮನಸ್ಸಿನ ಕನ್ನಡಿ. ನೆನಪಿನಂಗಳದಲ್ಲಿ ಒಡೆಯದೇ ಉಳಿದು ಹೋದ ಡುಮ್ಮ ಗೋಲಿಗಳು.. ಮಣ್ಣಿಗೆ ತೀರ ಹತ್ತಿರವಾದ ಸಂದರ್ಭಗಳು, ಜನಗಳು,
ಎಲ್ಲಕ್ಕಿಂತ ಹೆಚ್ಚಾಗಿ ಈ ಪುಸ್ತಕ ಅವಲಕ್ಕಿ ಮೊಸರಲ್ಲ, ಮೊಸರವಲಕ್ಕಿ

‍ಲೇಖಕರು avadhi

May 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

  1. Gopaal Wajapeyi

    ಅಹುದಹುದು ಎನ್ನುವ ಹಾಗಿದೆ ನಿಮ್ಮ ಬರಹ… ಧಾರವಾಡ… ನನ್ನ ಪ್ರೀತಿಯ ಧಾರವಾಡ… ಮತ್ತೆ ಕಣ್ಣ ಮುಂದೆ ತಂದದ್ದಕ್ಕಾಗಿ ಧನ್ಯವಾದಗಳು ರಮೇಶ್ ಗುರುರಾಜಾರಾವ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: