ಆಗ ನಾನು ಚಿಕ್ಕವನಾಗಿದ್ದೆ..

-ರಾಮಚಂದ್ರ ದೇವ

ಆಗ ನಾನು ಚಿಕ್ಕವನಾಗಿದ್ದೆ, ಬಹುಶಃ ಆಗ ಜಗತ್ತು ಬಲು ದೊಡ್ಡದಾಗಿತ್ತು, ನನ್ನ ಎಳೆಯ ಕಣ್ಣುಗಳಿಗೆ, ಊರಿನ ಕೇರಿ, ನಗರದ ಪೇಟೆ, ಬಿರಿದು, ಹಿರಿದಾಗಿ ಕಾಣುತ್ತಿತ್ತು. ನನಗೆ ನೆನಪಿದೆ, ಎಡೆಬಿಡದ ಸಾಲು ಸಾಲು ಮನೆಗಳು, ಸಾದು ಮನಸ್ಸಿನ ಸಾಚಾ ಜನಗಳು, ಕನ್ನಡಿಯಂಥ ಶುಭ್ರ ಮನಗಳು, ಸರಳ ಬದುಕಿಗೆ ಅವರದೇ ಧಾಟಿ, ರೀತಿ ರಿವಾಜಿಗೆ ಅವರದೇ ನೀತಿ, ಈಗ ಕಾಲ ಬದಲಾಗಿದೆ, ನಾನು ಈಗ ಚಿಕ್ಕವನಾಗಿಲ್ಲ, ಆ ಮನೆಗಳು ಇಲ್ಲ, ಜನಗಳೂ ಇಲ್ಲ, ಪ್ರೀತಿ ತುಂಬಿದ ಸುಂದರ ಮನಗಳೂ ಇಲ್ಲ, ಅಲ್ಲೆಲ್ಲಾ ಈಗ ಅನ್ಯರ ಶೈಲಿ ಅನ್ಯರ ಅಚ್ಚು ತಾಯ್ನುಡಿಯ ಮರೆತು ಇಂಗ್ಲೀಷಿನ ಹುಚ್ಚು ನನಗೆ ನೆನೆಪಿದೆ, ಮನೆಯಿಂದ ಶಾಲೆಯ ತನಕ… ಗೂಡಂಗಡಿಗಳ ಸಾಲು, ಐಸ್ಕ್ರೀಮಿನ ಗಾಡಿ ಮಕ್ಕಳ ಹಿಂಡು, ಸರಳತೆಯ ಮೋಡಿ ಮನೆ ಹಿತ್ತಲಿನಲ್ಲಿ ಗೋಳಿಮರಗಳ ಜೋಡಿ ಈಗ ಎಲ್ಲವೂ ಬದಲಾಗಿದೆ, ಈಗ ಹೆಜ್ಜೆ ಹೆಜ್ಜೆಗೆ ಮೊಬೈಲ್ ಶಾಪುಗಳು, ನೆಟ್ ಕೆಫೆಗಳು, ಬ್ಯೂಟಿ ಪಾರ್ಲರುಗಳು ಹೊಸ ಹೊಸ ಮಾಲುಗಳು, ನವೀನ ಮಳಿಗೆಗಳು ಆದರೂ ಹರಡಿದೆ ಮೌನ ನೀರವತೆ! ಬಹುಶಃ ಈಗ ಬದುಕೇ ಬದಲಾಗುತ್ತಿದೆ!

ಕಲೆ: ವೆಂಕಟರಮಣ  ಭಟ್

ಆಗ ನಾನು ಚಿಕ್ಕವನಾಗಿದ್ದೆ, ಬಹುಶಃ ಆಗ ಸಂಜೆ ಅಗಲವಾಗಿರುತ್ತಿತ್ತು ಬಿಸಿಲ ತಾಪವೇರಿದ ಹಗಲ ನಂತರ ಸಂಜೆಯ ತಣ್ಣಗೆ ನೆಳಲು ಎಷ್ಟು ಹಿತವೆನಿಸುತ್ತಿತ್ತು ಈಗ ಮುಸ್ಸಂಜೆ ಮೂಡುವುದಿಲ್ಲ ದಿನ ಮುಗಿಯುತ್ತದೆ, ಇರುಳು ಆವರಿಸುತ್ತದೆ ಇರುಳ ಕತ್ತಲ ಸೆರಗಲ್ಲೂ ತಾರೆಗಳು ಹೊಳೆಯುವುದಿಲ್ಲ, ಮಿಂಚುಳಗಳು ಮಿನುಗುವುದಿಲ್ಲ ಆ ಸುಖಭರಿತ ನಿದ್ದೆಯ ಸುಳಿವಿಲ್ಲ, ಬಹುಶಃ ಈಗ ಕಾಲವೇ ಬಹುರೂಪಿಯಾಗಿದೆ! ಆಗ ನಾನು ಚಿಕ್ಕವನಾಗಿದ್ದೆ, ಆಗಿನ ಆಟೋಟಗಳೂ ವಿಚಿತ್ರವಾಗಿರುತ್ತಿತ್ತು ಹಗ್ಗದ ಬಸ್ಸಿನ ಅಗ್ಗದ ಪಯಣ, ಚಿನ್ನಿ ದಾಂಡು,ಕುಂಟೆ ಬಿಲ್ಲೆ, ಕ್ರಿಕೆಟ್ , ಕಬಡ್ಡಿ , ಕಣ್ಣು ಮುಚ್ಚಾಲೆ , ಆಟಕ್ಕಿಂತ ಓಟವೇ ಅಧಿಕ ಪಾಠಕ್ಕಿಂತ ಆಟಕ್ಕೇ ಅಂಕ, ಮಣ್ಣಿನ ಆಟಿಕೆಯಂತೂ ಇದ್ದೇ ಇತ್ತು ಈಗ ಮಣ್ಣೂ ಇಲ್ಲ ಮಣ್ಣಿನ ಅನುಬಂಧವೂ ಇಲ್ಲ. ನಾಲ್ಕು ಗೋಡೆಯ ಕೋಣೆ ಆಟದ ಬಯಲು ಲ್ಯಾಪ್ ಟಾಪ್ ಮತ್ತು ಇಂಟರ್ನೆಟ್ , ಮೊಬೈಲು ಮತ್ತು ವಿಡಿಯೋ ಗೇಮ್ ಇದುವೇ ಇಂದಿನ ಮಕ್ಕಳ ಆಟಿಕೆ ಬಹುಶಃ ಈಗ ಮಕ್ಕಳ ಪ್ರಕೃತಿ ಬದಲಾಗುತ್ತಿದೆ! ಆಗ ನಾನು ಚಿಕ್ಕವನಾಗಿದ್ದೆ, ಆಗ ಸ್ನೇಹ ಬಹುಶಃ ಆಳವಾಗಿರುತ್ತಿತ್ತು ಹೊಡೆದಾಟ, ಬಡಿದಾಟ, ದೂರು ಚಾಡಿ ಇಂದಿನಂತೆ ಎಲ್ಲವೂ ಅಂದೂ ಇರುತ್ತಿತ್ತು, ಆದರೆ ಸ್ನೇಹವೆಂದೂ ಕುಂದುತ್ತಿರಲಿಲ್ಲ ಪ್ರೀತಿಗೀತರ ಬರವಿರಲಿಲ್ಲ, ಗೆಳೆಯರೇನೋ ಈಗಲೂ ಅನೇಕರಿದ್ದಾರೆ ಆದರೆ ಸ್ನೇಹದ ಎಲ್ಲೂ ಸುಳಿವಿಲ್ಲ ದಾರಿಯಲ್ಲೆಲ್ಲೋ ಮಿತ್ರರ ಮಿಲನವಾದರೆ ‘ಹಾಯ್, ಬಾಯ್’ ಹೇಳಿ ಮುನ್ನಡೆಯುತ್ತಾರೆ ಸಭೆ ಸಂಭ್ರಮ ನಡೆದರೆ, ಹಬ್ಬ, ಹರಿದಿನ ಬಂದರೆ, ಹುಟ್ಟು ಸಾವಿನ ಸಂದರ್ಭಗಳಲ್ಲಿ ಇಲ್ಲವೆಂದರೆ ಯಾವುದೇ ಭಾನುವಾರ ಒಂದು ‘ಕರೆ’ ಬರುತ್ತದೆ, ಅಥವಾ ಒಂದು ಎಸ್ಎಂಎಸ್ ಬಹುಶಃ ಈಗ ನೆಂಟಸ್ತಿಕೆಗಳು ಬದಲಾಗುತ್ತಿದೆ! ಆಗ ನಾನು ಚಿಕ್ಕವನಾಗಿದ್ದೆ, ಮನದಲ್ಲಿ ಮುಗ್ಧ ಆಸೆಗಳು ಪುಟಿದೇಳುತ್ತಿತ್ತು ಮೇಘದಿಂದ ಸುರಿವ ನೀರಧಾರೆಯಲ್ಲಿ ಸಿಡಿಲಿನ ಅಬ್ಬರ ಮಿಂಚಿನ ಓಟಗಳಲ್ಲಿ ಹುಣ್ಣಿಮೆ ಬೆಳಗುವ ಬೆಳದಿಂಗಳಲ್ಲಿ ತಾರೆಗಳು ಸೂಸುವ ಬೆಳಕಲ್ಲಿ ಕರೆಯನ್ನು ಮುಟ್ಟುವ ಅಲೆಯಲ್ಲಿ ತಂಗಾಳಿಯು ಚೆಲ್ಲುವ ತಂಪಲ್ಲಿ ಕುಸುಮಗಳು ಹರಡುವ ಕಂಪಲ್ಲಿ ಮನ ಮುದಗೊಳಿಸುವ ನಾದಕವಿತ್ತು ಒಲವಿನ ಧಾರೆ ಹರಿಯುತ್ತಿತ್ತು ಆಹ್ಲಾದದ ಹನಿಗಳು ತಂಪೆರೆಯುತ್ತಿತ್ತು ಆನಂದದ ಮದಿರೆ ತುಳುಕುತ್ತಿತ್ತು ಅದರಲ್ಲಿ ನಶೆಯೂ ಇತ್ತು, ರಾಗ, ಅನುರಾಗವೂ ಇತ್ತು ಈಗ ಬಯಕೆಗಳಲ್ಲಿ ವಿಷ ಬೆರೆತಿದೆ ಸಂತಸಗಳಿಗೆ ಶೋಕವು ಕವಿದಿದೆ ಈಗ ಬಹುಶಃ ಮನುಜರಿಂದ ಮನಸೇ ಮುನಿಸಿದೆ! ಆಗ ನಾನು ಚಿಕ್ಕವನಾಗಿದ್ದೆ ಆಗ ಬಹುಶಃ ಮಕ್ಕಳಿಗೆ ಬಾಲ್ಯ ಗೊತ್ತಿರುತ್ತಿತ್ತು ಮನಸಲಿ ಹಿರಿಯರ ಗೌರವ ಇತ್ತು ಆದರ, ಅನುಸರಣೆಗೆ ಕಾತರವಿತ್ತು ಅವರ ಭಯ ಅವರನ್ನು ನೆಟ್ಟಗಿಡುತ್ತಿತ್ತು ಅವರ ಪ್ರೀತಿ ಎಳೆ ಮನಸ್ಸಲ್ಲಿ ಚೇತನ ತುಂಬುತ್ತಿತ್ತು ಈಗ ಹಿರಿಯ ಕಿರಿಯರ ಅಂತರ ಮುಗಿದಿದೆ, ಪ್ರೀತಿ ಆದರವೆಲ್ಲಾ ಕಳೆದು ಹೋಗಿದೆ ಅಹಂಕಾರ, ಅವಿಧೇಯತೆ ತಲೆಹತ್ತಿದೆ ಅಪ್ಪನ ಮೇಲೆ ಮಗನ ಹುಕೂಮತ್ತು ಅಮ್ಮನ ಮೇಲೆ ಮಗಳದೇ ಒತ್ತು ವಿಶ್ವಾಸವು ಕುಂದಿದೆ ನಂಬಿಕೆ ಕೆಟ್ಟಿದೆ ನೀತಿ ಅಳಿದಿದೆ ಅನುಬಂಧವು ಹಳಸಿದೆ ಈಗ ಬಹುಶಃ ಮಕ್ಕಳು ಎಳೆಯರಾಗುವುದೇ ಇಲ್ಲ! ಆಗ ನಾನು ಚಿಕ್ಕವನಾಗಿದ್ದೆ ಆಗ ಬಹುಶಃ ಧರೆಯ ಚೆಲುವೇ ಅನುಪಮವಾಗಿತ್ತು ಮನ ಸೆಳೆಯುವ ಮುಂಜಾವಿನ ಬೆಳುಪು ಮುದ ನೀಡುವ ಸಂಜೆಯ ತಂಪು ತನ್ಮಯಗೊಳಿಸುವ ಮಳೆಯ ಧಾರೆ ಇರುಳ ಕತ್ತಲ ಸೊಗಸೇ ಬೇರೆ ಕಥೆ ಹೇಳುತ್ತಿದ್ದ ಸಮುದ್ರ ಅಲೆಗಳು ಬೇಗುದಿ ಕೆರೆವ ದೈತ್ಯ ಅಲೆಗಳು ಈಗ ತೆರೆ ಏಳುವುದು ಮನದಲ್ಲಿ… ಭೋರ್ಗರೆವ ನೋವಿನ ತೆರೆ ಮನದಲ್ಲಿ ಅಪ್ಪಳಿಸಲು ಮಾತ್ರ ದಡವಿಲ್ಲ ನೋವನು ನೀಗಲು ಮದ್ದಿಲ್ಲ ಆಗ ಮಳೆ ನೀರು ಮನೆಯಂಗಳ ಸೇರುತ್ತಿತ್ತು ಈಗ ಮಕ್ಕಳ ಹಡೆಯದ ಬಂಜೆಯಂತೆ, ಮನೆಗಳಿಗೆ ಅಂಗಳವೇ ಇಲ್ಲ ಘಮ ಘಮಿಸುವ ಮಣ್ಣಿನ ಸುಗಂಧವಿಲ್ಲ ಆಗ ಮುಳ್ಳುಗಳ ಸಂದಿನಲ್ಲಿ ಹೂ ಅರಳುತ್ತಿತ್ತು ಈಗ ಮುಳ್ಳೇ ಮುಳ್ಳು ಹೂ ಅರಳುವುದಿಲ್ಲ ಈಗ ಬಹುಶಃ ನಿಸರ್ಗದ ಸ್ವರೂಪ ಬದಲಾಗಿದೆ! ಆಗ ನಾನು ಚಿಕ್ಕವನಾಗಿದ್ದೆ ಆಗ ಬಹುಶಃ ಈ ಬದುಕು ಮತ್ತು ಚಿಟ್ಟೆ ಎರಡೂ ಭಿನ್ನ ಭಿನ್ನವಾಗಿ ತೋರುತ್ತಿತ್ತು ಅಂದ ಚಂದದ ರಂಗುರಂಗಿನ ಚಿಟ್ಟೆಗಳು ಹೂಗಳ ಮೋಹಕ್ಕೆ ಮನ ಸೋತಾಗ ಚಿನ್ನವರಾದ ನಮ್ಮನ್ನು ಸೆಳೆಯುತ್ತಿತ್ತು ಆಸೆ ತೋರಿಸಿ ಹತ್ತಿರ ಕರೆಸಿ ದಾಹ ಹುಟ್ಟಿಸಿ ಕೈಗೆಟುಕದೆ ದೂರ ಹಾರಿ ಬಿಡುತ್ತಿತ್ತು ನಿರಾಶರಾಗಿ ನಾವೂ ಕೈ ಕೈ ಹಿಸುಕಿ ಬಿಡುತ್ತಿದ್ದೆವು ಈಗ ಬದುಕೂ ಚಿಟ್ಟೆಯಂತೆ ಅನಿಸುತ್ತದೆ ಸಿಂಗಾರ ಮಾಡಿ ರಸಿಕ ವೇಷ ಧರಿಸಿ ಚಿತ್ತಾಕರ್ಷಕ ರಂಗಿನ ಬಲೆ ಬೀಸಿ ಬಡಪಾಯಿ ಮನಸನ್ನು ಬಂಧಿಸಿ ಧರ್ಮ, ನಂಬಿಕೆಗಳ ಸುಲಿಗೆ ಮಾಡಿ ಅಚಾರ , ಆದರ್ಶಗಳನ್ನು ನಾಶ ಮಾಡಿ ಮನುಷ್ಯನನ್ನು ಮೃಗದಂತೆ ಮಾಡಿ ಓಡಿ ಹೋಗುತ್ತದೆ ದೂರ ಸರಿಯುತ್ತದೆ ಅಗಲಿದ ವೇದನೆ ಹೊತ್ತು ಮನುಷ್ಯನೂ ಕೈ ಕೈ ಹಿಸುಕುತ್ತಾನೆ , ಪರಿತಪಿಸಿ ಸೊರಗುತ್ತಾನೆ ಬಹುಶಃ ಬದುಕಿನ ಧಾಟಿ ಇದೇ ತರನಾಗಿರುತ್ತೆ ! ಆಗ ನಾನು ಚಿಕ್ಕವನಾಗಿದ್ದೆ ಆಗ ಬಹುಶಃ ಕಣ್ಣೀರಿಗೂ ಒಂದು ಅರ್ಥವಿರುತ್ತಿತ್ತು ಎಳೆ ಮನಸ್ಸಿಗೆ ನೊವೇನಾದರೆ, ನಮ್ಮದೇ ತುಂಟಾಟ ನಮಗೆ ದಂಡನೆ ಕೊಟ್ಟರೆ, ಕಣ್ಣಂಚಲ್ಲಿ ಕಂಬನಿ ತುಳುಕಿ ಹೊರ ಚೆಲ್ಲುತ್ತಿತ್ತು ಮತ್ತೀ ಕಣ್ಣೀರ ಮೋಡಿಗೆ ಎಷ್ಟೋ ಮನಗಳು ಕರಗುತ್ತಿತ್ತು ತಂದೆಯ ಉಕ್ಕಿನ ಮನಸ್ಸು ನೀರಾಗುತ್ತಿತ್ತು ತಾಯಿ ಸೆರಗನ್ನು ಪಸರಿಸಿ ತಬ್ಬುತ್ತಿದ್ದಳು ಒಡಹುಟ್ಟಿದ ಸೋದರ ಸೋದರಿಯರು, ಅನುಕಂಪದ ನೋಟ ಬೀರುತ್ತಿದ್ದರು ವೇದನೆ ಹಂಚಲು ಯಾರಾದರೂ ಇರುತ್ತಿದ್ದರು ಘಾಸಿ ಮನಸ್ಸಿಗೆ ಲೇಪನ ಹಚ್ಚಲು ಯಾರಾದರೂ ಸಿಗುತ್ತಿದ್ದರು ಈಗ ಎಲ್ಲರದ್ದೂ ಕಲ್ಲು ಮನಸ್ಸು ನಮ್ಮದೂ ನಮ್ಮವರದ್ದೂ ಭಾವಗಳಿಲ್ಲದ ಬರಡು ಮನಸ್ಸು ಅನುಕಂಪವಿಲ್ಲದ ಭಾವ ಶೂನ್ಯ ಮನಸ್ಸು ಇಲ್ಲಿ ಕಣ್ಣೀರಿಗೆ ಬೆಲೆ ಏನಿರಬಹುದು ಬಹುಶಃ ಇಲ್ಲಿ ಕಂಬನಿ ಸುರಿಸುವುದೇ ವ್ಯರ್ಥ !

]]>

‍ಲೇಖಕರು G

February 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

ಕೋಟೆ ಬಾಗಿಲಿಗೆ ಬಂದವರು..

ಕೋಟೆ ಬಾಗಿಲಿಗೆ ಬಂದವರು..

ಮಂಜುನಾಥ್ ಚಾಂದ್ ಧರೆಯ ಒಡಲಿನಿಂದತೊರೆಗಳಾಗಿ ಬಂದವರಗುಂಡಿಗೆಗೆ ತುಪಾಕಿಹಿಡಿಯುವ ಮುನ್ನದೊರೆ ತಾನೆಂದು ಬೀಗಿಸೆಟೆಯುವ ಮುನ್ನನಿನ್ನ ದುಃಖ ನನ್ನ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

3 ಪ್ರತಿಕ್ರಿಯೆಗಳು

 1. Pramod ambekar

  Deva Sir,
  Same thing experienced by me when I had been to my native.
  Ambekar Pramod

  ಪ್ರತಿಕ್ರಿಯೆ
 2. Sandhya

  Sir,
  I have felt like this many times…you have put it in right words….thanks..
  Sandhya, Secunderabad

  ಪ್ರತಿಕ್ರಿಯೆ
 3. Uday Itagi

  ಬದಲಾಗುತ್ತಿರುವ ಆಧುನಿಕ ಜಗತ್ತು ಮತ್ತು ಅದರ ತಲ್ಲಣಗಳನ್ನು ಮುಖಕ್ಕೆ ರಾಚುವಂತೆ ನಿಮ್ಮ ಕವನ ಎತ್ತಿ ತೋರಿಸುತ್ತದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: