ಆಗ, ನಾನು ತಂದೆಯವರ ಬಳಿ ‘ಅದು ಏನು’ ಅಂತ ಕೇಳಿದೆ…

ಒಬ್ಬ ಪುಟಾಣಿ ಹುಡುಗಿ ದೊಡ್ಡ ಸಾಧನೆ ಮಾಡಿದ್ದಾಳೆ. ಹುಳಿಮಾವಿನ ಬಿ ಜಿ ಎಸ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿರುವ ಜೀವನಾ ಆರ್ ಹೆಗಡೆ ತನ್ನ ತುರುಬಿಗೆ ಇಸ್ರೋ ಗರಿ ಮುಡಿಸಿಕೊಂಡಿದ್ದಾಳೆ.

ಈಕೆ ‘ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯ ಅವಕಾಶಗಳು’ ಕುರಿತು ಬರೆದ ಪ್ರಬಂಧ ಇಸ್ರೋ ಏರ್ಪಡಿಸಿದ್ದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮೊದಲ ಸ್ಥಾನಕ್ಕೆ ಪಾತ್ರವಾಗಿದೆ. ಹೇಗಿದೆ ಪ್ರಬಂಧ ನೋಡಿ-

 

2200t

-ಜೀವನಾ ಆರ್ ಹೆಗಡೆ

ನಾವು ಒಮ್ಮೆ ಹೈದರಾಬಾದಿಗೆ ಹೋಗಿದ್ದೆವು. ಅಲ್ಲಿ ಊರು ನೋಡಲು ನಾವು ಕಾರಿನಲ್ಲಿ ಅಡ್ಡಾಡ್ಡುತ್ತಿದ್ದೆವು. ನನ್ನ ತಂದೆ ಕಾರು ಓಡಿಸುತ್ತಿದ್ದರು.ಆದರೆ,ಅವರಿಗೆ ಅಲ್ಲಿನ ದಾರಿ ಸರಿಯಾಗಿ ಗೊತ್ತಿರಲಿಲ್ಲ.ಆದರೂ, ಅವರು ಸರಿಯಾದ ದಾರಿಯಲ್ಲೇ ಕಾರು ಓಡಿಸುತ್ತಿದ್ದರು. ಹೇಗೆಂದರೆ, ಅವರ ಫೋನಿನಲ್ಲಿ ಊರಿನ ನಕಾಶೆ ಹಾಗೂ ದಾರಿ ತೋರಿಸುವ ವ್ಯವಸ್ಥೆ ಇತ್ತು. ಅದರಲ್ಲಿ, ಯಾವ ರಸ್ತೆಯಲ್ಲಿ ಹೋಗಬೇಕು,ಯಾವ ಕ್ರಾಸಿನಲ್ಲಿ ಕಾರು ತಿರುಗಿಸಬೇಕು, ಎಂದೆಲ್ಲ ತಂದೆಯವರಿಗೆ ಸರಿಯಾಗಿ ತಿಳಿಯುತ್ತಿತ್ತು.

ಆಗ, ನಾನು ತಂದೆಯವರ ಬಳಿ, ಅದು ಏನು ಅಂತ ಕೇಳಿದೆ.

ಅದಕ್ಕೆ ತಂದೆ ಉತ್ತರಿಸಿದರು… ಮರಿ, ಇದು ಜಿಪಿಎಸ್ ಉಪಕರಣ ಅಂತ.

ಹಾಗಂದರೆ ಏನು ಎಂದು ನಾನು ಕೇಳಿದೆ.

ಅದಕ್ಕೆ ಅವರು ಹೇಳಿದರು… ಮರೀ ಇದು, ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆ. ಉಪಗ್ರಹವನ್ನು ಬಳಸಿಕೊಂಡು ನಾವು ಎಲ್ಲಿದ್ದೇವೆ, ನಾವು ಹೋಗಬೇಕಾದ ದಾರಿ ಯಾವುದು ಎಂದು ತಿಳಿದುಕೊಳ್ಳುವ ತಂತ್ರಜ್ಞಾನ ಎಂದು ಅವರು ವಿವರಿಸಿದರು.

ಅದೇ ಸಮಯದಲ್ಲಿ, ದೂರದ ಅಮೆರಿಕದಲ್ಲಿ ನನ್ನ ಚಿಕ್ಕಮ್ಮ ತಮ್ಮ ಕಂಪ್ಯೂಟರಿನಲ್ಲಿ ನಮ್ಮ ಕಾರು ಎಲ್ಲಿದೆ ತಿಳಿದುಕೊಳ್ಳುತ್ತಿದ್ದರು. ಅವರಿಗೆ ನಮ್ಮ ಕಾರು ಹೈದರಾಬಾದಿನ ಯಾವ ರಸ್ತೆಯಲ್ಲಿ ಚಲಿಸುತ್ತಿದೆ ಎಂದು ನಕಾಶೆಯಲ್ಲಿ ಕಾಣಿಸುತ್ತಿತ್ತು.

ಇದು ಕೇವಲ ದಾರಿ ತೋರಿಸುವ ತಂತ್ರಜ್ಞಾನವಲ್ಲ. ಜಿಪಿಎಸ್ ತಂತ್ರಜ್ಞಾನದಿಂದ ಇನ್ನೂ ಅನೇಕ ಉಪಯೋಗವಿದೆ. ಇಂದು ಪಧ ನಿರ್ದೇಶನ ಉಪಗ್ರಹಗಳಿಂದ ಭೂಮಿಯಲ್ಲಿ ಯಾವುದೇ ಒಂದು ವಸ್ತುವಿನ ನಿಖರವಾದ ಸ್ಥಳ, ದಿಕ್ಕು ಹಾಗೂ ವೇಳೆ ತಿಳಿಯುತ್ತದೆ. ಇದಕ್ಕೆ PNT (Position, Navigation & Timing) ಸೇವೆ ಎಂದು ಹೇಳುತ್ತಾರೆ. ಇವುಗಳನ್ನು ಉಪಯೋಗಿಸಿಕೊಂಡು ವಾಹನಗಳು ಹೈವೇಯಲ್ಲಿ ಎಲ್ಲಿ ಚಲಿಸುತ್ತಿವೆ? ರೈಲು ಯಾವ ವೇಳೆಯಲ್ಲಿ, ಎಲ್ಲಿದೆ? ವಿಮಾನ ಹಾಗೂ ಹಡಗುಗಳು ಎಲ್ಲಿ ಎಷ್ಟು ವೇಗದಲ್ಲಿ ಯಾವ ದಿಕ್ಕಿನಲ್ಲಿ ಚಲಿಸುತ್ತಿವೆ? ಎಂದೆಲ್ಲಾ ತಿಳಿಯುತ್ತದೆ. ಈ ತಂತ್ರಜ್ಞಾನವನ್ನು ಹೈವೇ ಹಾಗೂ ನಗರ ಟ್ರಾಫಿಕ್ ನಿರ್ವಹಣೆ, ವಾಯು ಹಾಗೂ ಜಲ ಸಂಚಾರ ನಿರ್ವಹಣೆ, ಯುದ್ಧ ಗೂಢಚಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು ಎಂದು ತಂದೆಯವರು ವಿವರಿಸಿದರು.

ಅಮೆರಿಕದ ಜಿಪಿಎಸ್, ಭಾರತದ ಆಕಾಶ್

ಜಿಪಿಎಸ್ ಎಂದರೆ, ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಇದು ಅಮೆರಿಕದ ರಕ್ಷಣಾ ಇಲಾಖೆ 1970ರಲ್ಲಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ. ಗಗನದಲ್ಲಿ 28 ಉಪಗ್ರಹಗಳ ಒಂದು ಜಾಲ ಸ್ಥಾಪಿಸಲಾಗಿದೆ. ಈ ಮೂಲಕ ಭೂಮಿಯ ಪ್ರತಿಯೊಂದೂ ವಸ್ತುವಿನ ಚಲನ-ವಲನ ತಿಳಿದುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗಿದೆ. ಈ ತಂತ್ರಜ್ಞಾನವನ್ನು ಮಿಲಿಟರಿ ಬಳಕೆಗೆ ಮಾತ್ರವಲ್ಲ ಸಾಮಾನ್ಯ ನಾಗರಿಕರ ಬಳಕೆಗೂ ಅಮೆರಿಕ ನೀಡುತ್ತದೆ. ಆದ್ದರಿಂದ, ಈ ಜಿಪಿಎಸ್ ಉಪಗ್ರಹ ಸೇವೆಯನ್ನು ಜಗತ್ತಿನ ಅನೇಕ ದೇಶಗಳು ಬಳಸಿಕೊಳ್ಳುತ್ತಿವೆ. ಈಗ ಬೇರೆ ಬೇರೆ ದೇಶಗಳು ತಮ್ಮದೇ ಉಪಗ್ರಹ ಆಧಾರಿತ ಪಥ ನಿರ್ದೇಶನ ಉಪಗ್ರಹ ಜಾಲಗಳನ್ನು ರೂಪಿಸುತ್ತಿವೆ.

ಸದ್ಯ, ಭಾರತ ಅಮೇರಿಕದ ಜಿಪಿಎಸ್ ವ್ಯವಸ್ಥೆಯನ್ನೇ ಬಳಸಿಕೊಳ್ಳುತ್ತಿದೆ. ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಕೂಡ ತನ್ನದೇ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಸಿಸಿದೆ. 7 ಉಪಗ್ರಹಗಳ ಈ IRNSS ವ್ಯವಸ್ಥೆಗೆ 1600 ಕೋಟಿ ರುಪಾಯಿ ವೆಚ್ಚವಾಗಲಿದೆ. ಇನ್ನು 3-4 ವರ್ಷದಲ್ಲಿ ಈ ನಮ್ಮ ಸ್ವತಂತ್ರ ವ್ಯವಸ್ಥೆ ಜಾರಿಗೆ ಬರಬಹುದು. ಭಾರತದ “ಇಸ್ರೋ” ಈ ಯೋಜನೆಯನ್ನು ರೂಪಿಸಿದೆ. ಈಗಾಗಲೇ, ಗಗನ್ ಎಂಬ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯನ್ನು ನಾಗರಿಕ ವಿಮಾನ ಸಂಚಾರ ನಿರ್ವಹಣೆಗಾಗಿ ಇಸ್ರೋ ಸ್ಥಾಪಿಸಿದೆ.

ಈ ಆಧುನಿಕ ವ್ಯವಸ್ಥೆ ಭಾರತದಲ್ಲಿ ಸಂಪೂರ್ಣವಾಗಿ ಜಾರಿಯಾದರೆ, ನಗರದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಸುಧಾರಿಸಿ ಈಗಿನಂತೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನು ತಡೆಯಬಹುದು. ಅಪಘಾತ ಆದಲ್ಲಿಗೆ ತಕ್ಷಣ ರಕ್ಷಣಾ ದಳವನ್ನು ಕಳಿಸಬಹುದು. ಶಾಲೆಯಲ್ಲಿರುವ ಕಂಟ್ರೋಲ್ ರೂಮಿನಲ್ಲಿ ನಮ್ಮ ಸ್ಕೂಲ್ ಬಸ್ ಎಲ್ಲಿದೆ ಎಂದು ತಿಳಿದುಕೊಳ್ಳಬಹುದು. ಆಕಾಶದಲ್ಲಿ ವಿಮಾನಗಳು ಹಾಗೂ ರೇಲ್ವೆ ಹಳಿಯ ಮೇಲೆ ರೈಲುಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಬಹುದು. ಮೀನುಗಾರರು ಸಮುದ್ರದಲ್ಲಿ ಕಳೆದುಹೋಗದಂತೆ ಮಾಡಬಹುದು. ಭಾರತದ ಗಡಿ ಕಾಯಲು ಹಾಗೂ ಸೈನಿಕರ ಚಲನ ವಲನ ನಿರ್ವಹಣೆಗೆ ಈ ತಂತ್ರಜ್ಞಾನ ಬಹು ಉಪಯುಕ್ತವಾಗಲಿದೆ. ಎಲ್ಲೋ ಕಾಡಿನ ನಡುವೆ ಇರುವ ವಿದ್ಯುತ್ ಅಥವಾ ಜಾಲ ಸರಿಯಾಗಿದೆಯೇ? ಅಥವಾ ಎಲ್ಲಿ ತುಂಡಾಗಿದೆ? ಎಂದು ತಿಳಿದುಕೊಳ್ಳಲು ಬಳಸಿಕೊಳ್ಳಬಹುದು.

ಆದ್ದರಿಂದ, ಭಾರತದಲ್ಲಿ ಈ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಗೆ ಅಪಾರ ಅವಕಾಶವಿದೆ ಎಂದು ನನಗೆ ಅರಿವಾಯಿತು.

‍ಲೇಖಕರು avadhi

March 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ minchulliCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: