‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ.

ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು ವಿವರವಾಗಿ ಅವಧಿಯಲ್ಲಿ ನಿರೂಪಿಸಿದ್ದರು. ಅದು ಇಲ್ಲಿದೆ 

ಅದನ್ನು ವಿನತೆ ಶರ್ಮ ಇಲ್ಲಿ ವಿಶ್ಲೇಷಿಸಿದ್ದಾರೆ 

ವಿನತೆ ಶರ್ಮ

ಕೃಷ್ಣರವರೇ,

ಕನ್ನಡದಲ್ಲಿ ಆನೆಗಳ ಬಗ್ಗೆ ಕಥೆ ಹೇಳಿರುವ ಹೊಸಪುಸ್ತಕದ ವಿಷಯ ಕೇಳಿ ಖುಷಿಯಾಯ್ತು. ‘ಅಭಿನವ ಪ್ರಕಾಶನ’ ಮತ್ತು ಲೇಖಕ ನಾಗರಾಜ್ ರಿಗೆ ಅಭಿನಂದನೆಗಳು. ಕೃಪಾಕರ-ಸೇನಾನಿ ಈ ಪುಸ್ತಕದ ಕುರಿತು ಪ್ರೋತ್ಸಾಹದ ಮಾತನ್ನು ಹೇಳಿ ಓದುಗರನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ. ‘ಅವಧಿ’ ಯ ಲೇಖನದಲ್ಲಿ ಈ ಕೃತಿ ಕುರಿತು ನೀವು ಏನಂತ ಬರೆದಿದ್ದೀರ ಅಂತ ಕುತೂಹಲದಿಂದ ಮುಂದಕ್ಕೆ ಓದಿದೆ. ಆಗ ತಾನೇ ಪೂರ್ತಿರೂಪ ತಾಳಿ ಚೆಂದನೆಯ ಪುಸ್ತಕವಾಗಿ ಹೊರಬಂದಿದ್ದ ಕೃತಿಯ ಪ್ರತಿಗಳನ್ನು ಹೊತ್ತು ನೀವೇ ಖುದ್ದಾಗಿ ಲೇಖಕರಿಗೆ ತಲುಪಿಸುವ ಉತ್ಸಾಹವನ್ನ ಮೆಚ್ಚಿದೆ.

ಆದರೆ ನಂತರ ನೀವು ಹಂಚಿಕೊಂಡ ನಿಮ್ಮದೇ ಸ್ವಂತ ‘ಕಾರಿನ ಒಳಗೂ ಆನೆ, ಹೊರಗೂ ಆನೆ’ ಕಥೆ ಓದಿ ತುಂಬಾ ಬೇಸರವಾಯ್ತು. ಚಿಂತೆಯೂ ಆಯ್ತು. ನಿಮ್ಮ ಅನುಭವಹಂಚಿಕೆಯಲ್ಲಿ ಕೆಲ ಪೂರ್ಣಸತ್ಯಗಳು, ಅರ್ಧಸತ್ಯಗಳು ನಿಚ್ಚಳವಾಗಿ ಎದ್ದುಕಂಡವು. ಅವನ್ನು ಹಾಗೆ ಅರ್ಥೈಸಿಕೊಂಡಿದ್ದು ನನ್ನ ದೃಷ್ಟಿಕೋನ ಮಾತ್ರವೇ. ಬೇರೆ ಓದುಗರು ನಿಮ್ಮ ಅನುಭವವನ್ನು ಅವರವರದೇ ಕಣ್ಣಿನಲ್ಲಿ ಓದುತ್ತಾರೆ ಎನ್ನುವುದು ನಿಜ. ನಾನು ಕಂಡಿದ್ದು ಹೀಗಿದೆ.

ಕಾಡಿನಂಚಿನಲ್ಲಿ ಆನೆಗಳನ್ನು ನೋಡುತ್ತಾ ಬೆಳೆದ ನಿಮಗೆ ಆನೆಗಳ ಪರಿಸರ, ಸ್ವಭಾವ, ಚರ್ಯೆ, ಅವುಗಳ ದಿನಚರಿ ಕುರಿತು ಸ್ವಲ್ಪವಾದರೂ ತಿಳಿದಿರಬೇಕಲ್ಲವೇ? ಕಾಡನ್ನು, ಪ್ರಾಣಿಪ್ರಪಂಚವನ್ನು ಕಾಪಾಡಲು ನಾವೇ ಮನುಷ್ಯರು ಮಾಡಿರುವ ಕಾನೂನುಗಳ ಬಗ್ಗೆ ಇನ್ನೂ ಹೆಚ್ಚಾಗಿ ಗೊತ್ತಿರಬೇಕಲ್ಲವೇ? ಆರು ಗಂಟೆಯ ನಂತರ ಬೆಟ್ಟಕ್ಕೆ ಪ್ರವೇಶವಿಲ್ಲ ಎಂದಾದಮೇಲೂ, ಫಾರೆಸ್ಟ್ ಆಫೀಸರ್ ಅದರ ಬಗ್ಗೆ ಎಚ್ಚರಿಸಿದ ಮೇಲೂ ಐದೂವರೆಗೆ ನೀವು ಬೆಟ್ಟಕ್ಕೆ ಹೊರಟದ್ದನ್ನ, ದಾರಿಮಧ್ಯದಲ್ಲಿ ಕಾರು ನಿಲ್ಲಿಸಿ ಸಂಜೆಯೂಟ ಮಾಡುತ್ತಿದ್ದ ಆನೆಗಳ ಫೋಟೋ ಹಿಡಿದ್ದನ್ನ, ಆರು ಗಂಟೆ ಹತ್ತು ನಿಮಿಷಕ್ಕೆ ಬೆಟ್ಟ ತಲುಪಿದ ವಿಷಯವನ್ನು, ಪೂಜೆ ಮುಗಿಸಿ ಹೊರಬಂದಾಗ ಆಗಲೇ ಏಳು ಗಂಟೆಯಾಗಿತ್ತು ಅನ್ನೋದನ್ನ ಕರಾರುವಕ್ಕಾಗಿ ಲೇಖನದಲ್ಲಿ ದಾಖಲಿಸಿದ್ದೀರಿ. ಕಾನೂನು ಮೀರಿ ಆ ಸಮಯದಲ್ಲಿ ಬೆಟ್ಟವಿಳಿಯುವ ನಿಮ್ಮ ಪ್ರಯತ್ನವನ್ನು ಪ್ರಶ್ನಿಸಿ ಆ ಫಾರೆಸ್ಟ್ ಆಫೀಸರ್ ತನ್ನ ಕರ್ತವ್ಯವನ್ನು ಪರಿಪಾಲಿಸಿದಾಗ ಅವರು ನಿಮ್ಮನ್ನು ಮುಕ್ಕಾಲು ಗಂಟೆ ನಿಲ್ಲಿಸಿದ್ದರು ಎಂದು ಹೇಳಿಕೊಂಡಿದ್ದೀರಿ.

ಅಷ್ಟೇ ಅಲ್ಲ, ಅರಣ್ಯಇಲಾಖೆಯಲ್ಲಿರುವ ನಿಮ್ಮ ಸಂಬಂಧಿಕರ ವಶೀಲಿ ಬಳಸಿ ಕಾನೂನು ಉಲ್ಲಂಘಿಸಿ ಬೆಟ್ಟವನ್ನು ಇಳಿದು ಬಂದು ಆ ಸರಕಾರೀ ಸಿಬ್ಬಂದಿ ಫಾರೆಸ್ಟ್ ಆಫೀಸರ್ ಅವರ ಕರ್ತವ್ಯ ಪ್ರಜ್ಞೆಯ ವಿರುದ್ಧ ಹೋಗಿ ಅವರನ್ನು ದಾರಿತಪ್ಪಿಸಿದ್ದೀರಿ. ಅವರಿಗೆಷ್ಟು ಅವಮಾನ, ಬೇಸರವಾಯ್ತೋ?

ನಿಮ್ಮ ಅನುಭವದ ಕಥೆ ಇಷ್ಟಕ್ಕೆ ಕೊನೆಗೊಳ್ಳಲಿಲ್ಲವಲ್ಲಾ… ನೀವು ಕಾರಿನಲ್ಲಿ ಹೋಗುತ್ತಿದ್ದಾಗ ಆನೆಗಳು ಹೇಗೆ ಎದುರಾದವು, ಹಿಂಡಿನ ಒಂದಾನೆಗೆ ನಿಮ್ಮ ಕಾರಿನಿಂದ ಹೇಗೆ ತೊಂದರೆಯಾಯ್ತು, ಅದಕ್ಕೆ ಎಷ್ಟು ಆತಂಕವುಂಟಾಯ್ತು, ಒಂದಾನೆಯ ಆತಂಕ ಇಡೀ ಗುಂಪಿಗೆ ಕ್ಷಣಮಾತ್ರದಲ್ಲಿ ಹೇಗೆ ಹಬ್ಬಿಬಿಟ್ಟಿತು ಅನ್ನೋದನ್ನ ಹೇಳಿದ್ದೀರ. ಸಂಜೆ-ರಾತ್ರಿ ಸಮಯದಲ್ಲಿ ತಮ್ಮ ವಿಶ್ರಾಂತಿಸುವ, ನಿದ್ದೆ ಸ್ಥಳಕ್ಕೆ ತಲುಪುವ ಗಮನದಲ್ಲಿದ್ದು, ಆ ಪ್ರಾಣಿಗಳ ಸ್ವಾಭಾವಿಕ ಪರಿಸರದಲ್ಲಿ (ಆನೆ ಕಾರಿಡಾರ್ ಅನ್ನೋಣವೇ) ಮನುಷ್ಯರು ನಿರ್ಮಿಸಿರುವ ರಸ್ತೆಯನ್ನು ಹುಷಾರಾಗಿ ದಾಟುತ್ತಾ ರಸ್ತೆಯ ಆ ಕಡೆಯಿದ್ದ ಕಾಡಿನ ಭಾಗಕ್ಕೆ ಹೋಗುತ್ತಿದ್ದ ಗಜಪಡೆಯಲ್ಲಿ ನೀವು ಅಲ್ಲೋಲಕಲ್ಲೋಲವೆಬ್ಬಿಸಿದ್ದೀರಿ ಅನ್ನೋದು ನಿಮಗೆ ಗೊತ್ತಾಯ್ತೆ?

ನೀವು ಮಾಡುತ್ತಿದ್ದ ಕಾರಿನ ಲೈಟ್ ಡಿಮ್ ಅಂಡ್ ಡಿಪ್ ಆ ಆನೆಗಳನ್ನು ಅದೆಷ್ಟು ಗೊಂದಲಕ್ಕೀಡು ಮಾಡಿರಬೇಡ? ಅವಕ್ಕಾದ ಗೊಂದಲ, ಆತಂಕ, ಇಡೀ ಹಿಂಡಿಗೆ ಉಂಟಾಗಿದ್ದ ಭಯ, ಹೆದರಿಕೆ ನಿಮಗೆ ಅರ್ಥವಾಯ್ತೆ? ನಿಮ್ಮದನ್ನ ಹೇಳಿಕೊಂಡಿದ್ದೀರ. ‘ಬಿಳಿಗಿರಿ ರಂಗನ ದರ್ಶನ ಪಡೆದಿದ್ದರಿಂದ ಅದ್ಹೇಗೋ ಬದುಕಿಬಂದೆವು’ ಅಂತ ಹೇಳಿಕೊಂಡಿದ್ದೀರಾ – ನೀವು ಪಡೆದ ದರ್ಶನವೇ ಭ್ರಷ್ಟಾಚಾರದ ನಡೆಯಾಯ್ತಲ್ಲಾ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ? ನಿಮ್ಮ ಕಾರಿನಿಂದ, ಕಾರಿನ ಲೈಟಿನಿಂದ ಭಯಗೊಂಡು ಹೆದರಿಕೆಯಿಂದ ಕೂಗಿಕೊಂಡ ಆ ಆನೆಯ ಸ್ಥಳದಲ್ಲಿ ಒಂದು ಕ್ಷಣ ನಿಮ್ಮನ್ನಿರಿಸಿಕೊಂಡು ಊಹಿಸಿಕೊಳ್ಳಿ. ನಿಮ್ಮ ಕಾರಿನಿಂದ ಗುದ್ದಿಸಿಕೊಳ್ಳುವ ಮತ್ತು ಗಾಯಗೊಳ್ಳುವ ಪರಿಸ್ಥಿತಿಯಲ್ಲಿ ಆ ಆನೆ ಇತ್ತು. ಆ ದೇವರ ಕೃಪೆಯಿಂದ ನಿಮ್ಮಿಂದ ಆಗಬಹುದಾಗಿದ್ದ ಅಪಘಾತದಿಂದ ಆನೆ ತಪ್ಪಿಸಿಕೊಂಡು ಪ್ರಾಣಸಹಿತ ಉಳಿಯಿತು.

ಮನುಷ್ಯ-ಪ್ರಾಣಿ ಸಂಘರ್ಷದ ಬಗ್ಗೆ ಭಾರತದಲ್ಲಿ ಮತ್ತು ಪ್ರಪಂಚದ ಪೂರ್ತಿ ಅನೇಕ ಕೆಲಸಗಳು ನಡೆದಿವೆ. ಪ್ರಾಣಿಗಳ ಪರಿಸರವನ್ನು ಆಕ್ರಮಿಸುವ ಮನುಷ್ಯ ಚಟುವಟಿಕೆಗಳನ್ನು ಕಡಿಮೆಮಾಡಲು, ಪರ್ಯಾಯ ವಿಧಾನಗಳನ್ನು ಜಾರಿಗೊಳಿಸಲು ಅನೇಕಾನೇಕ ಪ್ರಯತ್ನಗಳು ನಡೆಯುತ್ತಿವೆ. ವಸ್ತುಸ್ಥಿತಿ ಹೀಗಿರಬೇಕಾದರೆ ಅದಕ್ಕೆ ವಿರುದ್ಧವಾಗಿ ಕಾಡಿನ ಪರಿಸರದಲ್ಲಿ ನೀವು ಮಾಡಿದ ಕಾನೂನು ಉಲ್ಲಂಘನೆ ವಿಷಯ, ನಿಮ್ಮಿಂದ ಆನೆಗಳಿಗೆ ಆದ ತೊಂದರೆಯ ವರ್ಣನೆ ಬಗ್ಗೆ ನೀವು ಉತ್ಸಾಹದಿಂದ ಬರೆದಿದ್ದೀರಿ.

ಭಾರತದ ಕಾಡುಗಳಲ್ಲಿ, ಸ್ವಾಭಾವಿಕ ಪರಿಸರದಲ್ಲಿ ಈಗ ಉಳಿದಿರುವುದು (೨೦೧೭ ಪ್ರಕಾರ) ಕೇವಲ ೨೭,೦೦೦ ಆನೆಗಳು ಮಾತ್ರ. ಪ್ರಾಜೆಕ್ಟ್ ಟೈಗರ್ ನಂತರ ಪ್ರಾಜೆಕ್ಟ್ ಆನೆ ಅತ್ಯಂತ ಮುಖ್ಯವಾದ ಕಾರ್ಯಕ್ರಮ. ಆನೆಗಳನ್ನು ಉಳಿಸಲು, ಅವುಗಳ ನೈಸರ್ಗಿಕ ಪರಿಸರವನ್ನು ಕಾಪಾಡಲು ಭಾರತ ಸರ್ಕಾರವಷ್ಟೇ ಅಲ್ಲ ಭಾರತದೊಂದಿಗೆ ಅನೇಕ ಅಂತರರಾಷ್ತ್ರೀಯ ಸಂಸ್ಥೆಗಳು, ಸರಕಾರಗಳು ಕೆಲಸಮಾಡುತ್ತಿವೆ. ಸಾಕಷ್ಟು ಹಣದ ಹೊಳೆ ಹರಿದಿದೆ. ಆದರೆ ಎಲ್ಲಕ್ಕಿಂತ ಬೇಕಿರುವುದು ನಮ್ಮ ಪ್ರಜ್ಞಾವಂತಿಕೆ. ನಮ್ಮಿಂದ ಇತರ ಜೀವಿಗಳಿಗೆ ತೊಂದರೆಯಾಗಬಾರದು ಎನ್ನುವ ಕನಿಷ್ಠ ನಿಲುವು. ‘ತಲುಪಬೇಕಿರುವ ಸ್ಥಳವೇ ಮುಖ್ಯವಾಗಿತ್ತು’ ಅನ್ನೋ ನಿಮ್ಮ ಹಠ, ನಿರ್ಧಾರಕ್ಕಿಂತಲೂ ಸಂಜೆ ಆರು ಗಂಟೆಯಾದ ಮೇಲೆ ಕಾಡುಪ್ರಾಣಿಗಳಿಗೆ ನಮ್ಮಿಂದ ತೊಂದರೆಯಾಗಬಾರದು ಅನ್ನೋದು ನಿಮ್ಮ ಗಮನದಲ್ಲಿರಬೇಕಿತ್ತು. ಪಾಪದ ಪ್ರಾಣಿಗಳಿಗೆ ನಿಮ್ಮಿಂದ ಭಯ, ಹೆದರಿಕೆಯಾಗುತ್ತಿರಲಿಲ್ಲ. ನೀವಂತೂ ಸಂತೋಷವಾಗಿ ನಾಗರಾಜರ ಕೈಕುಲುಕಿ ವಾಪಸ್ ಬಂದಿರಿ. ಅವು ಹೇಗೆ ಚೇತರಿಸಿಕೊಂಡವೋ ಏನೋ. ಬಲ್ಲವರ್ಯಾರು? ಕೇಳುವವರಿದ್ದಾರೆಯೇ?

-ವಿನತೆ ಶರ್ಮ

‍ಲೇಖಕರು avadhi

October 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. Vasundhara k m

  ವಾವ್…! ಎಷ್ಟು ಚೆನ್ನಾಗಿ ಪ್ರಶ್ನಿಸಿದ್ದೀರಿ ವಿನತೆ ಶರ್ಮಾ ಅವರೆ.. ಸೂಕ್ಷ್ಮತೆ ಇರದವ ಉತ್ತಮ ಬರಹಗಾರ ಅಲ್ಲ ಉತ್ತಮ ಮಾನವ ಕೂಡ ಆಗಲಾರ. ನಿಮ್ಮ ಧಾರ್ಷ್ಟ್ಯ ನನಗೆ ಹಿಡಿಸಿತು. ಗುರಿ ಸಾಧನೆಗೆ ಬದ್ಧತೆ ಇರಬೇಕು ನಿಜ. ಆದರೆ ಅದಕ್ಕೂ ಮಿಗಿಲಾಗಿ ವಿವೇಚನೆ ಇರಬೇಕು.. ಶಹಬ್ಬಾಷ್ ನಿಮಗೆ…

  ಪ್ರತಿಕ್ರಿಯೆ
 2. Krishna Chengadi

  ವಿನಿತೆ ಶರ್ಮ ಅವರಿಗೆ….
  ನಾನು ಬರೆದ ಬರೆಹವನ್ನ ಓದಿ, ನಮಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು…
  ಅಂದು ಬೆಟ್ಟದಲ್ಲಿ ಉಳಿಯದೇ ವಾಪಸ್ ಬರಲು ಮುಖ್ಯವಾದ ಕಾರಣ: ನಾವು ಬೆಂಗಳೂರಿನಿಂದ ಹೋಗಿದ್ದವರಲ್ಲಿ ಕೆಲವರನ್ನ (ಮಕ್ಕಳು) ಚಾಮರಾಜನಗರದಲ್ಲಿಸಿ ಹೋಗಿದ್ದೆವು. ತುಂಬಾ ಸಣ್ಣ ಮಕ್ಕಳು ನಗರದಲ್ಲಿಸಿದ್ದರಿಂದ, ತಾಯಿ ನಮ್ಮೊಟ್ಟಿಗಿದ್ದರಿಂದ ವಾಪಸ್ ಬರಲೇಬೇಕಾಯಿತು….
  ಮತ್ತೊಮ್ಮೆ ಧನ್ಯವಾದಗಳು…

  ಪ್ರತಿಕ್ರಿಯೆ
 3. Shreedevi Keremane

  ವಿನತೆ ಶರ್ಮ, ಸಾಧ್ಯವಾದರೆ ಬಂಡೂಲ ಪುಸ್ತಕ ಒಮ್ಮೆ ಓದಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: