ಆಯ್ದ ಸುದ್ದಿಗಳನ್ನಷ್ಟೇ ಬಿತ್ತರಿಸಬೇಕು..

ಕಪ್ಪು ಹಣ ಮತ್ತು ಕಪ್ಪುಬಿಳುಪು ಚಿಂತನೆಗಳು

prasad-naik

ಪ್ರಸಾದ್ ನಾಯ್ಕ್

ಅಂಗೋಲಾದಿಂದ 

ದೂರದ ಆಫ್ರಿಕಾದಲ್ಲಿ ಕುಳಿತಿದ್ದರೂ ಭಾರತದ ಆಗುಹೋಗುಗಳ ಬಗ್ಗೆ, ಅದರಲ್ಲೂ ಮಾಧ್ಯಮಗಳ ನೋಟದ ಬಗ್ಗೆ ಆಸಕ್ತಿಯಿಂದ ಗಮನಿಸುತ್ತಾ ಬಂದಿರುವವನು ನಾನು.

ಅದರಲ್ಲೂ ಕಳೆದ ಕೆಲವಾರಗಳಿಂದ ಮೋದಿಯವರ `ಮಾಸ್ಟರ್ ಸ್ಟ್ರೋಕ್’ ಎಂದು ಕರೆಯಿಸಿಕೊಳ್ಳುತ್ತಿರುವ ಡಿಮೋನಿಟೈಸೇಷನ್ ನಡೆಯನ್ನೂ ಕೂಡ ಜನರ, ತಜ್ಞರ ಮತ್ತು ಮಾಧ್ಯಮಗಳ ದೃಷ್ಟಿಕೋನಗಳಿಂದ ತನ್ನೊಳಗೆ ಇಳಿಸಿಕೊಳ್ಳುತ್ತಾ ಬಂದಿದ್ದೇನೆ. ಇದರ ಸರಿ-ತಪ್ಪು, ಲಾಭ-ನಷ್ಟಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿರುವುದರಿಂದ ಸದ್ಯಕ್ಕೆ ಅವುಗಳನ್ನು ಬದಿಗಿಟ್ಟು ಸಾಮಾನ್ಯ ನಾಗರಿಕನೊಬ್ಬನ ನೆಲೆಯಲ್ಲಿ ನೋಡಿದರೂ ಹಲವು ಕಟುಸತ್ಯಗಳು ಗೋಚರಿಸುವುದು ಸ್ಪಷ್ಟ.

black_and_white_handsಮಹತ್ವದ ನಡೆಗಳೆಂದು ಕರೆಯಲ್ಪಡುವ ಅದೆಷ್ಟೇ ಹೆಜ್ಜೆಗಳನ್ನು ಈ ಸರಕಾರವು ಇಟ್ಟಿದ್ದರೂ, ಜೊತೆಗೇ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದುಹೋದರೂ ಟೀಕೆಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವು ಕೇಂದ್ರದಲ್ಲಿರುವ ಆಡಳಿತ ಪಕ್ಷವು ಇನ್ನೂ ಮೈಗೂಡಿಸಿಕೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಲೋಕಸಭಾ ಚುನಾವಣೆಯ ವಿಜಯದಿಂದ ಹಿಡಿದು ಇಂದಿನವರೆಗೂ ಸರಕಾರದ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಇಣ್ಣಿಗೆ ರಾಚುವ ಅಂಶವೇ.

ವಿರೋಧಪಕ್ಷಗಳೆಂದರೆ ವಿರೋಧಿಸಲಿಕ್ಕೆಂದೇ ಇರುವುದು ಎಂದು ಹಿಂದೆಲ್ಲಾ ನಾವು ತಮಾಷೆಯಾಗಿ ಮಾತನಾಡುತ್ತಿದ್ದೆವು. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ವಿರೋಧಿಸುವುದು ಹಾಗಿರಲಿ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದೇ ಕಷ್ಟಸಾಧ್ಯ ಎಂಬಂತಾಗಿದೆ. ಇದಕ್ಕೆ ಪೂರಕವಾಗಿ ಸಮರ್ಥ ನಾಯಕತ್ವವಿಲ್ಲದೆ ಜಂಘಾಬಲವೇ ಉಡುಗಿಹೋದಂತಿರುವ ವಿರೋಧಪಕ್ಷವೂ ಆಡಳಿತ ಪಕ್ಷಕ್ಕೊಂದು ಬೋನಸ್ ಪಾಯಿಂಟ್ ಇದ್ದಂತೆ.

ಎಲ್ಲಾ ವಿಷಯಗಳಂತೆ ಐನೂರು ಮತ್ತು ಸಾವಿರದ ನೋಟು ರದ್ದತಿಯ ವಿಷಯದಲ್ಲೂ ಹಲವು ಅಭಿಪ್ರಾಯಗಳು ಕೇಳಿಬಂದುದು ಸಹಜ. ಯಾವ ಯೋಜನೆಯಾಗಲೀ ‘ಐಡಿಯಲ್” ಅಥವಾ ‘ಪರ್ಫೆಕ್ಟ್’ ಆಗಿ ಇರಲು ಸಾಧ್ಯವಿಲ್ಲ, ವ್ಯವಸ್ಥೆಯೊಂದರಲ್ಲಿ ಕುಂದುಕೊರತೆಗಳು ಕಾಣುವುದು ಸರ್ವೇಸಾಮಾನ್ಯವೆಂಬುದು ಅಕ್ಷರಶಃ ನಿಜವಾದರೂ ಸರಕಾರವು `ಹಾಗೇನೂ ಆಗೇ ಇಲ್ಲ’ ಎನ್ನುವಂತೆ ತೋರ್ಪಡಿಸಿಕೊಳ್ಳುವುದು ಮೂರ್ಖತನವಷ್ಟೇ ಅಲ್ಲ, ಅಮಾನವೀಯವೂ ಹೌದು.

ಜನರು ಸರಕಾರದ ಈ ನಡೆಯನ್ನು ಮೇಲ್ನೋಟಕ್ಕೆ ಸ್ವಾಗತಿಸಿದ್ದು ನಿಜವೇ. ಜೊತೆಗೇ ಬ್ಯಾಂಕು, ಎ.ಟಿ.ಎಮ್ ಗಳ ಮುಂದೆ ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿರುವ ವೃದ್ಧರು, ರೋಗಿಷ್ಟರು, ನಗದಿನ ಕೊರತೆಯಿಂದಾಗಿ ದೈನಂದಿನ/ತುರ್ತು ಖರ್ಚುಗಳಿಗಾಗಿ ಒದ್ದಾಡುತ್ತಿರುವ ಚಿಕ್ಕಪುಟ್ಟ ವ್ಯಾಪಾರಸ್ಥರು, ಕೃಷಿಕರು, ಕಾರ್ಮಿಕರು ಮತ್ತು ಒಟ್ಟಾರೆಯಾಗಿ ಗ್ರಾಮೀಣ ಜನತೆಗಳ ಕೂಗು ಅರಣ್ಯರೋದನವಾಗಿರುವುದೂ ಕೂಡ ಒಪ್ಪಿಕೊಳ್ಳಲೇಬೇಕಾದ ಸತ್ಯ.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದರೆ, ಚರ್ಚೆಗಳಾದರೆ `ಇವುಗಳು ಜನತೆಯ ದಿಕ್ಕುತಪ್ಪಿಸುವ ಮಾರ್ಗವಷ್ಟೇ’ ಎಂದು ಹೇಳಿ ಜಾರಿಕೊಳ್ಳುತ್ತಿರುವುದು ದುರದೃಷ್ಟಕರ. ಅಷ್ಟರ ಮಟ್ಟಿಗೆ ಆಯ್ದ ಸುದ್ದಿಗಳನ್ನಷ್ಟೇ ಬಿತ್ತರಿಸಬೇಕು ಎಂಬ ಧಾಟಿಯಲ್ಲಿ ಸರಕಾರವು ಪರೋಕ್ಷವಾಗಿ ಮಾತನಾಡಿದಂತಾಯಿತು.

ಯೋಜನೆಯಲ್ಲಿನ ಕುಂದುಕೊರತೆಗಳ ಬಗ್ಗೆ ಮುಕ್ತವಾಗಿ ಚರ್ಚೆಯಾಗುವುದರ ಬದಲು ಭಿನ್ನಾಭಿಪ್ರಾಯದ ಸ್ವರಗಳು ಕೇಳಿಬಂದಾಗಲೆಲ್ಲಾ ಆ ದನಿಯ ಸದ್ದಡಗಿಸುವುದರಲ್ಲೇ ವ್ಯವಸ್ಥೆಯು ಗಮನಹರಿಸಿದರೆ ಪ್ರಜಾಪ್ರಭುತ್ವಕ್ಕೆ ಎಲ್ಲಿಯ ಮೌಲ್ಯ? ವ್ಯಕ್ತಿಯಾಗಲೀ, ವ್ಯವಸ್ಥೆಯಾಗಲೀ ಹೊಸ ದಿಕ್ಕಿನತ್ತ ನಡೆಯುವ ಸಮಯದಲ್ಲಿ ಇಂಥಾ ಟೀಕೆಗಳು ಕೇಳಿಬರುವುದು ಸಾಮಾನ್ಯ. ಸರಕಾರಗಳು ಮೊದಲೂ ಇದ್ದವು, ಮುಂದೆಯೂ ಇರುತ್ತವೆ. ಮಾಧ್ಯಮಗಳು ಈ ಹಿಂದೆಯೂ ಇದ್ದವು, ಮುಂದೆಯೂ ಹೊಸಹೊಸ ರೂಪಗಳಲ್ಲಿ ಬರಲಿವೆ. ಹೀಗಾಗಿ ಟೀಕೆಗಳು, ಭಿನ್ನಾಭಿಪ್ರಾಯಗಳು, ಚರ್ಚೆಗಳು, ವಿಚಾರ ಮಂಡನೆಗಳು ಆಡಳಿತ ವ್ಯವಸ್ಥೆಗೆ ಹೊಸವಿಷಯಗಳೇನೂ ಅಲ್ಲ. ಆದರೆ ಈ ಬಾರಿ ಟೀಕೆಗಳನ್ನು ಕೊಂಚ ಹೆಚ್ಚೇ ನಾಜೂಕಾಗಿ ತೆಗೆದುಕೊಂಡು, ಅವುಗಳು ಸುಳ್ಳೇಸುಳ್ಳು ಎಂಬುದಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ.

clockಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯಾಗಲೀ, ಮಾಧ್ಯಮಗಳಾಗಲೀ ತನ್ನ ನಿರ್ಧಾರಗಳನ್ನು, ನಡೆಗಳನ್ನು ಪ್ರಶ್ನಿಸಲೇಬಾರದು ಎನ್ನುವಂತೆ ನಡೆದುಕೊಳ್ಳುವುದು ಪೆದ್ದುತನ. ಪಕ್ಷವೋ, ಪಕ್ಷದ ನಾಯಕನೋ ಪ್ರಶ್ನಾತೀತನಾಗಿಬಿಟ್ಟರೆ ಅಲ್ಲಿ ಉಳಿಯುವುದು ಡೆಮಾಕ್ರಸಿಯಲ್ಲ. ಹೊಗಳುಭಟ್ಟರು, ಭಟ್ಟಂಗಿಗಳ ಮಧ್ಯೆಯೇ ಇದ್ದು ನಾಶವಾಗಿ ಹೋದ ಸರಕಾರಗಳ, ನಾಯಕರುಗಳ ಇತಿಹಾಸವೇ ನಮ್ಮಲ್ಲಿದೆ.

ನಾನು ನಟನೊಬ್ಬನ ಅಥವಾ ರಾಜಕಾರಣಿಯೊಬ್ಬನ ಅಭಿಮಾನಿ ಎಂದ ಮಾತ್ರಕ್ಕೆ ಆತ ಪ್ರಶ್ನಾತೀತನಾಗಬೇಕೆಂದೇನೂ ಇಲ್ಲ. ಏಕೆಂದರೆ ಅಭಿಮಾನಕ್ಕೂ, ಮುಖಸ್ತುತಿಗೂ ವ್ಯತ್ಯಾಸವಿದೆ. ಮಾತೆತ್ತಿದರೆ ನಮ್ಮನ್ನು, ನಮ್ಮ ನಡೆಗಳನ್ನು ಹೊಗಳುತ್ತಾ ಇರಬೇಕು, ಇಲ್ಲದಿದ್ದರೆ ಬಾಯಿ ತೆರೆಯುವಂತಿಲ್ಲ ಎಂಬ ಆಶಯಗಳೇ ಮೂಲ ಉದ್ದೇಶವಾದರೆ ಮಾಧ್ಯಮಗಳ ಅವಶ್ಯಕತೆಯೇ ನಮಗಿಲ್ಲ. ಪಕ್ಷದ ವಕ್ತಾರರೇ ತಮ್ಮ ಸಾಧನೆಯ, ಸಾಹಸಗಳ ಎಲ್ಲಾ ವರದಿಗಳನ್ನೂ ಜನರ ಮುಂದಿಟ್ಟರೆ ಸಾಕು. ಚುನಾವಣೆಯ ಮುನ್ನದ ಪ್ರಣಾಳಿಕೆ ಮತ್ತು ಪಕ್ಷ ವಕ್ತಾರರ ವರದಿಗಳೇ ಸರ್ವಮಾನ್ಯವಾದರೆ ಎಲ್ಲಲ್ಲೂ ತೋರಿಕೆಯ ರಾಮರಾಜ್ಯವೇ.

ಸೋಷಿಯಲ್ ಮೀಡಿಯಾಗಳ ಮೂಲಕ ಜನತೆಗೆ ಮತ್ತಷ್ಟು ಹತ್ತಿರವಾದ ಸರಕಾರವು ಅಲ್ಲೂ ಹಾದಿತಪ್ಪಿದ್ದು ಸತ್ಯ. ಸೈದ್ಧಾಂತಿಕ ನೆಲೆಯಲ್ಲಿ ನಡೆಯಬೇಕಾದ ಚರ್ಚೆಗಳ ಕತ್ತುಹಿಸುಕಿ ವೈಯಕ್ತಿಕ ವಿಚಾರಗಳನ್ನು, ನಿಂದನೆಗಳನ್ನು ಮುಂದೊಡ್ಡಿ ನೈಜಪರಿಸ್ಥಿತಿಯಿಂದ ದಿಕ್ಕುತಪ್ಪಿಸುವ ಪ್ರಯತ್ನಗಳು ಮುಕ್ತಚಿಂತನೆಯ ವಿಚಾರಧಾರೆಗೆ ಶೋಭೆ ತರುವಂಥದ್ದಲ್ಲ.

ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಎರಡು ವರ್ಷಗಳ ಹಿಂದೆ `ಪ್ರೆಸ್ಟಿಟ್ಯೂಟ್’ ಎನ್ನುವ ಪದವೂ ಒಂದಿದೆ ಎನ್ನುವುದೂ ಗೊತ್ತಿರಲಿಲ್ಲ. ತಮ್ಮ ಬಗ್ಗೆ ಕೊಂಚ ಭಿನ್ನಾಭಿಪ್ರಾಯದ ಮಾತುಗಳು ಕೇಳಿಬಂದರೂ ಮಾಧ್ಯಮಬಂಧುಗಳಿಗೆ ಈ ಪಟ್ಟವನ್ನು ವ್ಯವಸ್ಥೆಯು ಧಾರಾಳವಾಗಿ ಕೊಟ್ಟುಬಿಟ್ಟಿತು. ತಮ್ಮದೇ ಸರಿ ಎಂಬ ಭ್ರಮೆಯನ್ನು ಮೂಡಿಸಲು ಸೋಷಿಯಲ್ ಮೀಡಿಯಾಗಳಲ್ಲಿ ಪರೋಕ್ಷವಾಗಿ ತೇಲಿಬಿಟ್ಟ ಈ ಶಬ್ದವು ನಿರ್ಧಿಷ್ಟವಾಗಿ ಯಾವ ಮಾಧ್ಯಮ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಮತ್ತು ಯಾಕಾಗಿ ಗುರಿಯಾಗಿಸಲ್ಪಟ್ಟಿತು ಎಂಬುದು ಎಂಬುದು ಅಂಗೈಹುಣ್ಣಿನಷ್ಟೇ ಸ್ಪಷ್ಟ.

ತನ್ನ ಅಭಿಪ್ರಾಯಕ್ಕಿಂತ ಭಿನ್ನವಾದುದೆಲ್ಲಾ ವಿರುದ್ಧವೇ ಎನ್ನುವಂಥಾ ಧಾಟಿಯಿದು. ಸರಕಾರವು ಇಂತಹ ಕಪ್ಪು-ಬಿಳುಪು ಚಿಂತನಾ ಲಹರಿಯಿಂದ ಎಂದು ಹೊರಬರುತ್ತದೆಂಬುದನ್ನು ಕಾದು ನೋಡಬೇಕು. ಭಾರತೀಯತೆ, ದೇಶಪ್ರೇಮ, ಸೈನ್ಯ ಇತ್ಯಾದಿ ಭಾವನಾತ್ಮಕ ವಿಚಾರಗಳು ಈ ಮೊದಲು ಈ ಮಟ್ಟಿಗೆ ರಾಜಕಾರಣಿಗಳ, ಜನರ ಬಾಯಿಚಪಲಕ್ಕೊಳಗಾಗಿದ್ದು ನನಗಂತೂ ಗೊತ್ತಿಲ್ಲ. ಪ್ರೀತಿಯೆಂಬ ಭಾವವನ್ನು ಹೇಳಿಕೊಂಡೇ ಜಗಜ್ಜಾಹೀರಾಗಿಸಬೇಕು ಎನ್ನುವಂತಹ ಬಾಲಿಶ ಪ್ರಯತ್ನದ ಬಗ್ಗೆ ಏನು ಹೇಳಲಾದೀತು! ತಾಯಿಗಾದರೂ, ಪ್ರೇಯಸಿಗಾದರೂ ದಿನಕ್ಕೈವತ್ತು ಬಾರಿ “ಐ ಲವ್ ಯೂ” ಎಂದು ನಾಮಸ್ಮರಣೆಯಂತೆ ಹೇಳುವುದು ಬಹುಷಃ ಚಲನಚಿತ್ರಗಳಲ್ಲಷ್ಟೇ ಸಾಧ್ಯವೇನೋ!

ಡಿಮೋನಿಟೈಸೇಷನ್ ವಿಷಯದಲ್ಲೂ ಈ ನಡೆಯ ಹಿಂದಿನ ರೂಪುರೇಷೆಗಳ ಮತ್ತು ಸಂಬಂಧಿ ವಿಚಾರಗಳ ಬಗ್ಗೆಯೇ ವೈಭವೀಕರಣದ ರೂಪದಲ್ಲಿ ಸರಕಾರದ ವಲಯದಿಂದ ಚರ್ಚೆಯಾಯಿತೇ ಹೊರತು ತಳಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಲ್ಲ. ಹಠಾತ್ ಆದ ಈ ಬದಲಾವಣೆಯಿಂದ ಸಂಕಷ್ಟಕ್ಕೀಡಾದ ಕೆಲ ಜೀವಗಳು ಬಲಿಯಾದರೂ ವ್ಯವಸ್ಥೆಯ ಮನಸ್ಸು ಕರಗುವ ಮಾತು ಹಾಗಿರಲಿ, ಇಂಥಾ ದೈತ್ಯನಡೆಗಳನ್ನಿಟ್ಟಾಗ ಕೆಲದಿನಗಳವರೆಗೆ `ಅಡಚಣೆ'(?)ಗಳಾಗುವುದು ಸಹಜವೇ ಎನ್ನುವ ಮಾತುಗಳು ಕೇಳಿಬಂದವು.

oppressionsmallಕಪ್ಪುಹಣವನ್ನು ಸಂಪೂರ್ಣವಾಗಿ ಅಳಿಸಿಹಾಕುವ ನಿಟ್ಟಿನಲ್ಲಿ ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ ಸರಕಾರ. ಯಶಸ್ಸು ಸಿಕ್ಕರೆ ಸಂತೋಷವೇ. ಚಂಚಲೆ ಲಕ್ಷ್ಮಿ ಹತ್ತಾರು ರೂಪಗಳಲ್ಲಿ ತನ್ನ ಲೀಲೆಗಳನ್ನು ತೋರಿಸುವವಳಾದ್ದರಿಂದ ನಿಜಕ್ಕೂ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಂಬುದನ್ನು ಕಾಲವೇ ಹೇಳಬೇಕು.

ಆದರೆ ಹಲವು ಮಾಧ್ಯಮಸಂಸ್ಥೆಗಳು ಸರಕಾರದ ಯೋಜನೆಗಳನ್ನು ವಿರೋಧಿಸಲೆಂದೇ ಟೊಂಕಕಟ್ಟಿ ನಿಂತಿವೆ ಎಂದು ಷರಾ ಹೊರಡಿಸುವುದು ತಪ್ಪಾಗುತ್ತದೆ. ಏಕೆಂದರೆ ‘ಸ್ವಚ್ಛ ಭಾರತ ಅಭಿಯಾನ’ದಂತಹ ಯೋಜನೆಗಳಲ್ಲಿ ಸರಕಾರದ ನಡೆಯನ್ನು ಮಾಧ್ಯಮಗಳು ಮುಕ್ತವಾಗಿ ಸ್ವಾಗತಿಸಿದ್ದನ್ನೂ, ಪ್ರಶಂಸಿಸಿದ್ದನ್ನೂ ಮರೆಯುವಂತಿಲ್ಲ. ಯೋಜನೆಯೊಂದರ ಕುಂದುಕೊರತೆಗಳನ್ನು ಮುನ್ನೆಲೆಗೆ ತಂದು ಸರಕಾರಕ್ಕೆ ಎಚ್ಚರಿಸುವುದು `ಸೆಲೆಕ್ಟಿವ್ ಮೀಡಿಯಾ’ ಎನ್ನುವುದಾದರೆ ಕೇವಲ ಯಶಸ್ಸನ್ನೇ ಜಪಿಸುವುದೂ ಕೂಡ ಸೆಲೆಕ್ಟಿವ್ ಮೀಡಿಯಾದ ಕೆಟಗರಿಗೇ ಸೇರುವಂಥದ್ದು. ಅತಿಯಾದ ವೈಭವೀಕರಣ, ಮುಖಸ್ತುತಿ, ಆಕರ್ಷಕ ಟ್ಯಾಗ್-ಲೈನುಗಳಾಚೆಗೆ ಸಂಸತ್ತಿನ ಅಂಗಳದಲ್ಲಿ ಮಾನವೀಯತೆಯೂ ಉಸಿರಾಡುವಂತಾಗಲಿ ಎಂಬುದೇ ಸಾಮಾನ್ಯ ಪ್ರಜೆಯೊಬ್ಬನ ಹಾರೈಕೆ.

‍ಲೇಖಕರು Admin

November 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

2 ಪ್ರತಿಕ್ರಿಯೆಗಳು

 1. damodara shetty n

  ಲೇಖನದಲ್ಲಿ ಬ್ಯಾಲೆನಸ್ ಮಾಡುವ ಯತ್ನ ಇದೆ. ಇದೇನೋ ಮಹತ್ತರವಾದದ್ದು ನಡೀತಾ ಇದೆ. ಕಾದು ನೋಡೋಣ.ಸಹನೆ ಬಹಳ ಅಗತ್ಯ.

  ಪ್ರತಿಕ್ರಿಯೆ
 2. Pradeep

  ಇನ್ನೊಂದು ಗಮನಿಸಿದ್ದೆಂದರೆ, ಇದೆ ಪ್ರಥಮ ಬಾರಿಗೆ ಸರ್ಕಾರವೊಂದು ಕೆಲಸ ಮಾಡಿ ಹಿಗ್ಗಿದ್ದಕಿಂತ, ವಿರೋದಿಸಿದವರ ಮಣಿಸಿ ಹಿಗ್ಗಿದ್ದೆ ಹೆಚ್ಚು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: