ಆರತಿಯವರ ‘ಪ್ರಣಯ ಶತಕ’

ನಿಘಂಟಿಗಂಟದ ಚೇತೋಹಾರಿ ಅನುವಾದ

ಡಿ.ಎಸ್.ರಾಮಸ್ವಾಮಿ

ಅನುವಾದವೆನ್ನುವುದು ನಿಘಂಟಿಗಂಟಿಕೊಂಡ ಒಣ ತಜರ್ುಮೆಯಲ್ಲ, ಹಾಗೇ ಭಾವಾನುವಾದದ ಭರದಲ್ಲಿ ಮೂಲದ ಸ್ರೋತವನ್ನು ಬದಿಗೊತ್ತಿ ಭಾಷೆಯ ಗಾಂಭೀರ್ಯದಲ್ಲಿ ಕಠಿಣಗೊಳಿಸುವುದೂ ಅಲ್ಲ. ಬಿ.ಎಂ.ಶ್ರೀ ಅವರಿಂದ ಮೊದಲ್ಗೊಂಡು ಇತ್ತೀಚಿನ ಅನುವಾದಕರೆಲ್ಲರನ್ನೂ ಈ ಪ್ರಶ್ನೆ ಕಾಡದೇಬಿಟ್ಟಿಲ್ಲ. ವಿಶ್ವದೆಲ್ಲೆಡೆಯ ಪ್ರಾಚೀನ ಕಾವ್ಯವನ್ನು ಇಂಗ್ಲಿಷ್ ಮೂಲಕ ಕನ್ನಡಕ್ಕೆ ತರುವ ಪ್ರಯತ್ನವೂ ಇವತ್ತು ನಿನ್ನೆಯದಲ್ಲ. ಅದರೆ ಸೋದರ ಭಾಷೆಯೊಂದರ ಸಮಕಾಲೀನ ಕವಿಯೊಬ್ಬನನ್ನು ವರ್ತಮಾನದ ಸಾಂಸ್ಕೃತಿಕ ಚೌಕಟ್ಟಿನೊಳಗೇ ಕನ್ನಡಕ್ಕೆ ಕರೆತರುವ ಕೆಲಸ ಬರಿಯ ಸವಾಲಿನದಷ್ಟೇ ಅಲ್ಲ ಅದೊಂದು ಎಚ್ಚರದ ಮತ್ತು ತೀವ್ರ ನಿಗಾ ಬೇಡುವ ಕೆಲಸ.

ಪಕ್ಕದ ತಮಿಳು ಕಾವ್ಯ ಕನ್ನಡಕ್ಕೆ ಬಂದಾಗಲೆಲ್ಲ ಆ ಭಾಷೆಯ ಸಿನಿಮೀಯ ಮಾದರಿಯ ಪ್ರಾಸ ಮತ್ತು ಅಬ್ಬರಗಳಲ್ಲಿ ಸಮಕಾಲೀನ ಹೆಜ್ಜೆ ಗುರುತುಗಳನ್ನು ಕಾಣಲಾಗುವುದಿಲ್ಲ. ಇನ್ನು ತೆಲುಗು ಕಾವ್ಯ ಮೂಲತಃ ನಮ್ಮ ಬಂಡಾಯದ ಮೂಲ ಸೆಲೆ. ಹಾಗಾಗಿ ಅಲ್ಲಿ ಶಬ್ದದ ಸದ್ದು ಮತ್ತು ವರ್ತಮಾನದ ಕಾಳಜಿಗಳೇ ಮುಖ್ಯವಾಗಿ ಎದೆಗಿಳಿಯುವ ಕಾವ್ಯದ ಸಾಲು ಕಡಿಮೆಯೇ. ಇನ್ನು ಮರಾಠಿಯ ವಿಂಧಾಕರಂದೀಕರ್ ಮೊದಲಾದವರನ್ನು ಕನ್ನಡದಲ್ಲಿ ಕಂಡಾಗಲೆಲ್ಲ ನಮ್ಮ ನವ್ಯದ ಹೊಲದ ಹುಲುಸು ಪೈರು ಕಣ್ಣಮುಂದೆ ಸುಳಿಯುತ್ತದೆ. ಆದರೆ ಪಕ್ಕದ ಮಲೆಯಾಳಂಭಾಷೆಯಲ್ಲಿ ನಡೆಯುತ್ತಿರುವ ಕಾವ್ಯ ಪ್ರಯೋಗಗಳನ್ನು ಸಮರ್ಥ ಅನುವಾದಕರ ಮೂಲಕ ಪಡೆದುಕೊಳ್ಳುತ್ತಿರುವ ಕನ್ನಡದ ಸಂದರ್ಭದಲ್ಲಿ ತುಲನೆ ಮಾಡಿದರೆ ಪ್ರಾಯಶಃ ಕನ್ನಡದಷ್ಟೇ ಪ್ರಯೋಗಮತಿಗಳು ಅಲ್ಲೂ ವ್ರತಕ್ಕೆ ಕೂತವರಂತೆ ಕಾಣುತ್ತಾರೆ. ಅಂಥದೊಂದು ಪ್ರಯತ್ನ ಟಿ.ಪಿ.ರಾಜೀವನ್ ಅವರ ‘ಪ್ರಣಯ ಶತಕಂ’.

ಸ್ವತಃ ಇಂಗ್ಲಿಷ್ ಮತ್ತು ಮಲೆಯಾಳಂನಲ್ಲೂ ಬರೆಯಬಲ್ಲ ರಾಜೀವನ್ ಉಭಯ ಭಾಷಾ ಕವಿ. ನಾಲ್ಕುಸಾಲುಗಳ ಅಥವ ಆರು ಸಾಲುಗಳ ಶತಕ ಪ್ರಯೋಗ ಕನ್ನಡಕ್ಕೆ ಹೊಸದೇನೂ ಅಲ್ಲ. ಆದರೆ ಮುಕ್ತ ಛಂದಸ್ಸಿನ ಮತ್ತು ಏಕವಿಷಯಾಧಾರಿತ ಸಮಕಾಲೀನ ನಿಲುವು ಅವರ ಈ ಕೃತಿಯ ವಿಶೇಷ. ಅದನ್ನು ಅಷ್ಟೇ ಸಮಂಜಸವಾಗಿ ಮತ್ತು ಮೂಲಕ್ಕೆ ತೀವ್ರಥರದ ಮುಖಭಂಗ ಮಾಡದಂತೆ ಎಚ್.ಎನ್.ಆರತಿ ಮೂಲದ ಶೀಷರ್ಿಕೆಗೂ ಚ್ಯುತಿ ಬಾರದಂತೆ ‘ಪ್ರಣಯ ಶತಕ’ವನ್ನಾಗಿಸಿದ್ದಾರೆ.

ಹೆಸರೇ ಸೂಚಿಸುವಂತೆ ಸಂಕಲನದ ನೂರು ಮುಕ್ತಕಗಳನ್ನು ಒಂದೇ ಸಿಟ್ಟಿಂಗ್ನಲ್ಲಿ ಓದಿ ಮುಗಿಸಿ ಬಿಡಬಹುದು. ತೀವ್ರ ಬೌದ್ಧಿಕ ಪ್ರದರ್ಶನವನ್ನು, ಓದಿನ ಸಿದ್ಧತೆಯನ್ನೂ ಬೇಡದ, ಒಂದು ರೀತಿಯಲ್ಲಿ ಆಧುನಿಕ ನೆಟ್ ಬ್ರೌಸಿಂಗ್ ಥರದಲ್ಲಿ ಆದರೆ ಸುಲಭಕ್ಕೆ ಪಕ್ಕಕಿಡಲಾರದ ಈ ರಚನೆಗಳು ‘ಹೌದೆ’ನ್ನಿಸುವಂತೆ ಸಮಕಾಲೀನವೂ ಮತ್ತು ಹ್ರಸ್ವವಾಗಿರುವುದೂ ಇದರ ವಿಶೇಷ. ಹನಿಕವನಗಳಷ್ಟು ಹಗುರವಲ್ಲದ ಆದರೆ ಮಿನಿಯಷ್ಟು ಕಿರಿದಲ್ಲದ ಇಲ್ಲಿನ ರಚನೆಗಳು ವಸ್ತುವಿನ ಸಾಧ್ಯತೆಗಳಿಗನುಗುಣವಾಗಿ ಬೆಳೆದಿವೆ. ಪ್ರತಿ ಕವಿತೆಗೂ ಒಂದೊಂದು ಹದವಾದ ಚಿತ್ರ ರಚಿಸಿರುವ ರಾ. ಸೂರಿ ಅನುವಾದಕರಷ್ಟೇ ಮುತುವಜರ್ಿವಹಿಸಿ ಮೂರ್ತವಾಗಿಬಿಡಬಹುದಾಗಿದ್ದದ್ದನ್ನು ಅಮೂರ್ತಗೊಳಿಸಿದ್ದಾರೆ. ಇಂಗ್ಲಿಷ್, ಕನ್ನಡ, ಮಲೆಯಾಳಂ, ಮೂರೂ ಭಾಷೆಗಳಲ್ಲೂ ಕವಿತೆಯೊಂದನ್ನು ಒಂದೇ ಪುಟದಲ್ಲಿ ಪ್ರಕಟಿಸಿ. ಮತ್ತು ಅವೆಲ್ಲವನ್ನೂ ಉತ್ತಮ ಕಾಗದ, ಪುಟ ವಿನ್ಯಾಸ, ಮತ್ತು ಕರಡು ತಿದ್ದುವಿಕೆಯಂಥ ಸೂಕ್ಷ್ಮ ಕೆಲಸಗಳಲ್ಲಿ ಶ್ರೀಮಂತಿಕೆ ಎದ್ದು ಕಾಣುವಂತೆ ಪ್ರಕಟಿಸಿರುವ ಪ್ರಕಾಶಕರ ಔದಾರ್ಯವೂ ಪ್ರಕಾಶನವೆಂಬ ಕೈ ಕಚ್ಚುವ ಉದ್ದಿಮೆಯಲ್ಲಿ ಬಹಳ ದೊಡ್ಡದೇ.

ಹೊಸ ಬಿತ್ತನೆ ಕಾಳುಗಳನು ಹೊತ್ತು

ಮರಳಿ ಹಾರುತ್ತಿವೆ

ನಿನ್ನೆಡೆಗೆ ನಾನು

ತೇಲಿ ಬಿಟ್ಟ ನುಡಿಗಳು (31)

ಪದ್ಯದ ಹೊಳಹು ಇರುವುದೇ ಇಂಥ ಸಾಲುಗಳಲ್ಲಿ. ನುಡಿ ಅನ್ನುವ ಶಬ್ದಕ್ಕೆ ನಮ್ಮ ವಚನಕಾರರ ಮೂಲಕ ಕಲಿತಿದ್ದ ವ್ಯಾಖ್ಯೆಯನ್ನೂ ಮರೆಸಿ, ಪ್ರಿಯೆಗಾಗಿ ಹೊಸದೇ ಶಬ್ದವನ್ನು ನೇಯ್ದಿರುವ ಕವಿಯ ಯತ್ನ ಶ್ಲಾಘನೀಯವಾದದ್ದೇ.

ಇಂದು ಬೆಳದಿಂಗಳಿದೆ

ನಾಟ್ಯ ಶಾಲೆಗಳಲ್ಲಿ ಉದ್ಯಾನಗಳಲ್ಲಿ

ಗಾಳಿ

ನಿನ್ನ ನೆರಳನ್ನು ಬಿಡಿಸುತ್ತಿದೆ (45)

 

ಬೆಳದಿಂಗಳ ದಿನ ಮಾತ್ರ ಅವಳ ಪ್ರವೇಶವಲ್ಲ, ಅವಳ ಪ್ರವೇಶವಿರುವಲ್ಲೆಲ್ಲ ಹುಣ್ಣಿಮೆ ಎನ್ನುವುದು ಪ್ರೇಮದ ಹುಚ್ಚಲ್ಲ, ಬದಲಿಗೆ ಅದು ಅವನ ಪ್ರೇಮೋನ್ಮಾದ.

ಕಾಡಿಲ್ಲ

ಕಡಲಿಲ್ಲ

ಮರುಭೂಮಿಯಿಲ್ಲ

ಬಯಲುಗಳಿಲ್ಲ

ಇದೇ ನಾನು ನಿನಗಾಗಿ

ಕಂಡು ಹಿಡಿದ ನಾಡು (80)

 

ಕದಳಿಯಷ್ಟೇ ಗೊತ್ತಿದ್ದ ನಮಗೆ ಕಾಡು, ಕಡಲು, ಬಯಲು, ಇಲ್ಲದ ನಾಡನ್ನು ಕಂಡು ಹಿಡಿದ ಕವಿ ‘ಹೃದಯ’ ವಿಶಾಲಿ.

ಆದರೆ ಮೂಲದ ಆಶಯವನ್ನು ಬೇರೆಯದೇ ಬಗೆಯಲ್ಲಿ ಭಾವಿಸಿದರೆ ಅಥರ್ಾಂತರಗಳಾಗುತ್ತವೆ ಎನ್ನುವುದಕ್ಕೆ ಉದಾಹರಣೆ;

A drop drops

two drops drop

a vein of water

a rivulet,

two paper boats

 

ಒಂದು ಹನಿ ಹನಿ

ಎರಡು ಹನಿ ಹನಿ

ಒಂದು ಕಾಲುವೆ

ಒಂದು ಕಿರು ತೊರೆ

ಎರಡು ಕಾಗದದ ದೋಣಿಗಳು (26)

 

ಇದನ್ನು ಹೇಗೆ ತಾನೆ ಮೂಲಕ್ಕೆ ಸಾಧುವಾದ ಅನುವಾದವೆನ್ನಬಹುದು?

 

ಅಗಲುವ ಹೊತ್ತು

ಎದೆಯಲಿ ನೀನಿಟ್ಟ

ಒಂದು ಮಲ್ಲಿಗೆ ಮೊಗ್ಗು

ಮನೆ ತಲುಪಿದಾಗ ಅರಳಿ ಆಗಿತ್ತು

ಮಲ್ಲಿಗೆ ಹೂವಿನ ತೋಟ (49)

 

ಹೇಳುವುದಕ್ಕೆ ಏನೆಲ್ಲ ಸಾಧ್ಯತೆಗಳಿದ್ದರೂ ಹ್ರಸ್ವದಲ್ಲೇ ಸಂದೇಶವನ್ನು ಮುಟ್ಟಿಸುವ ಕವಿಯ ಪರಿ ಖುಷಿಗೊಳಿಸುತ್ತದೆ.

 

How much

I want you,

I don’t know.

ಅನುವಾದವಾದಾಗ ಹೀಗಾಗಿದೆ;

ನನಗೆ ಗೊತ್ತಿಲ್ಲ

ಎಷ್ಟರವರೆಗೆ ಬೇಕು

ನನಗೆ ನೀನೆಂದು.

 

ಇನ್ನೂ ಸೂಕ್ಷ್ಮವಾಗಿ ಹೇಳಬಹುದಾಗಿದ್ದಕ್ಕೆ ಅವಸರದ ತೇಪೆ ಇದು.

 

ಬೆಳಕಿಗಿಂತಲೂ ದೊಡ್ಡದಾದ

ನೆರಳಿಲ್ಲ

ನಿನಗಿಂತಲೂ ಉಜ್ವಲ

ಬೆಳಕಿರುವ ದೀಪವಿಲ್ಲ ( 87)

 

ಶಂ. ಬಾ. ಜೋಷಿಯವರ ತಾತ್ವಿಕತೆಯನ್ನು ಹೋಲುವ ಅಪ್ರತಿಮ ಸಾಲು ಇವು.

ಕಡೆಯಲ್ಲಿ ಸಣ್ಣದೊಂದು ತಕರಾರು, ಶೀಷರ್ಿಕೆಯ ಬಗ್ಗೆ. ಮೂಲದ ನಿಷ್ಠೆಗೆ ಹೆಸರು ಬದಲಾಗಿಲ್ಲ ಅನ್ನುವುದು ಸರಿಯಾದರೂ, ಕನ್ನಡದ ಮಟ್ಟಿಗೆ ಪ್ರಣಯ ಎನ್ನುವ ಶಬ್ದ ಹೆಣ್ಣು ಗಂಡುಗಳ ಆಂಗಿಕ ಸಂಗಕ್ಕೆ ಸಂಬಂಧಿಸಿದ್ದು. ಆದರೆ ಇಲ್ಲಿನ ಕವಿತೆಗಳ ನೆಲೆ ಪ್ರಣಯೋನ್ಮಾದದ ಆಚೆಯ ದಡದ್ದು. ಒಲವು ಎನ್ನುವ ಶಬ್ದ ಅದನ್ನು ಹಿಡಿಯಲಾರದು. ಏಕೋ ಮಧುರ ಚೆನ್ನರು ನೆನಪಾಗುತ್ತಿದ್ದಾರೆ, ಬೇಂದ್ರೆಯ ಸಖೀಗೀತ ಕೂಡ. ಒಂದು ಓದಿನಿಂದ ಪರಂಪರೆಯನ್ನು ನೆನೆಯುವಂತೆ ಮಾಡಿದ ಮೂಲ ಕವಿಗೆ ಅನುವಾದಕಿಗೆ ಸಾವಿರದ ಸಲಾಮು.

 

 

 

‍ಲೇಖಕರು G

October 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This