ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ


ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು ಗಂಡನ ಮನೆಗೆ ಕಳೆಸುವಲ್ಲಿ, ಕರೆತರುವಲ್ಲಿ, ಉಡಿ ತುಂಬುವಾಗ, ಧಾನ್ಯ ತುಂಬುವಾಗ, ಮದುವೆ, ಸೋಬಾನೆ, ಗೃಹಪ್ರವೇಶದ ಸಮಯದಲ್ಲಿ ಹೀಗೆ ಒಳ್ಳೆಯ ಕಾರ್ಯಕ್ರಮಕ್ಕೆಲ್ಲ ಊರವರು ಮೊದಲು ಬೊಟ್ಟಿಟ್ಟು ಕರೆಯೊದೆ ಚಿನ್ನವಳನ್ನು.

ಕರೆದಾಗ ಅವಳಿಗೊಂದು ಸೀರೆ, ರವಿಕೆ,ಜೊತೆಗೆ ಉಡಿತುಂಬಿ ಹತ್ತೊ ಇಪ್ಪತ್ತೊ ರೂಪಾಯಿ ಅವಳ ಕೈಗಿತ್ತು ಹರಸಿಕೊಳ್ಳುತ್ತಿದ್ದರು ಜನ. ಅದಕ್ಕೆ ಕಾರಣ ಅವಳ ಬಲಗೈಯಲ್ಲಿರುವ ಆರು ಬೆರಳುಗಳು. ಒಂದು ಕಾಲಕ್ಕೆ ಇದು ಇಡೀ ಸುಂಕದ ಕಟ್ಟೇಯಲ್ಲಿ ದುರಾದುಷ್ಟದ ಸಂಕೇತವಾಗಿತ್ತು. 
ಆದರೆ ಮಗದೊಂದು ಕಾಲಕ್ಕೆ ಇನ್ನೊಬ್ಬರ ಬಾಳಿಗೆ ಹರಸುವ ಕೈ ಆದುದ್ದು ಎಂತಹ ಸೋಜಿಗ..?

ಅವಳನ್ನು ನೋಡಲು ಬಂದ ಗಂಡುಗಳೆಲ್ಲ ಅವಳಿಗೆ ಆರು ಬೆರಳೆಂದು ತಿಳಿದು ತಿರಸ್ಕರಿಸಿದವರೇ ಹೆಚ್ಚು. ನೆರೆಹೊರೆಯವರಲ್ಲಿ, ಊರಲ್ಲಿ ಆರು ಬೆರಳು ಹಲವರಲ್ಲಿ ಇದೆ. ಅದೇನು ಸೋಜಿಗವಲ್ಲ ಎಂದು ಅನೇಕರು ತಮಗಿದ್ದ ಆರು ಬೆರಳುಗಳನ್ನು ತೋರಿಸಿ ವಾದಮಾಡಿದ್ದು ಉಂಟು. 

ಆದರೆ ವಿಶೇಷವಾಗಿ ಎಲ್ಲರಿಗೂ ಆರನೇ ಬೆರಳು ಹೆಬ್ಬರಳಿಗೆ, ಅಥವಾ ಕಿರು ಬೆರಳಿಗೆ ಅಂಟಿಕೊಂಡಿರುತ್ತದೆ. ಆದರೆ ಚಿನ್ನವಳಿಗೆ ಮಾತ್ರ ಅದು ಅವಳ ಬಲಗೈ ಉಂಗುರ ಬೆರಳಿನ ಜೊತೆ ಹುಟ್ಟಿಕೊಂಡಿತ್ತು. ಹಾಗಾಗಿ ಆರು ಬೆರಳು ಅವಳಲ್ಲಿ ವಿಶೇಷತೆಯನ್ನು ಮೂಡಿಸಿತ್ತು. 

ಶಿವಾಪೂರಿನ ಹಲವು ಹೆಂಗಸರ ಹೆಬ್ಬೆರಳ ಜೊತೆ ಹುಟ್ಟಿಕೊಂಡಿದ್ದ ಆರನೇ ಬೆರಳು ನೋಡಿ ಅದನ್ನು ತಿಕ್ಕುತ ಇದು ಇಲ್ಲಿ ಹುಟ್ಟದೆ ಉಂಗುರ ಬೆರಳಿನ ಜೊತೆಗಾದ್ರು ಹುಟ್ಟಬಾರದಿತ್ತಾ.. ನಾನು ಚಿನ್ನವಳ ತರಾ ಅದೃಷ್ಟದ ಹೆಂಗಸಾಗುತಿದ್ದೆ ಅಂತ ಹಲುಬಿದ್ದಾರೆ. 

ಅವಳು ಹತ್ತು ದಿನಕ್ಕೊಮ್ಮೆಯೊ, ಹದಿನೈದು ದಿನಗಳಿಗೊಮ್ಮೆಯೊ ಗೋಕಾವಿಗೆ ಹೋಗುತ್ತಾಳೆ, ದಿನಸಿ ತರೊಕೆ, ಸೀರೆ, ಭತ್ತ, ಬಟ್ಟೇ, ಮದುವೆ ಹೀಗೆ ಅಗತ್ಯ ಮತ್ತು ಅನಿವಾರ್ಯ ಸಮಯದಲ್ಲಿ, ವಸ್ತುಗಳಿಗಾಗಿ ಆಕೆ ಹೊರ ಹೋದಾಗಲೆಲ್ಲ. ಬಲಗೈಗೆ ಬಟ್ಟೆ ಸುತ್ತಿಕೊಳ್ಳುತ್ತಾಳೆ. ನೋಡಿದ ಕೆಲವರು ಸೋಜಿಗವೆಂಬಂತೆ ನಗುತ್ತಾರೆ, ಕೆಲವರು ಆಶ್ಚರ್ಯರಾಗುತ್ತಾರೆ, ಇನ್ನು ಕೆಲವರು ಅನಿಷ್ಟದವಳು ಅನ್ನೊ ತರಾ ದುರಗುಟ್ಟುತ್ತಾರೆ.

ಮೊದಲೆಲ್ಲ ಹೊರಗಡೆ ಹೊರಟಾಗೆಲ್ಲ ಎರಡು ಬೆರಳುಗಳಿಗೆ ಸೇರಿಸಿ ಒಂದು ಬಟ್ಟೆ ಕಟ್ಟಿ ಬಿಡುತ್ತಿದ್ದಳು. ಯಾರಾದರು ಕೇಳಿದರೆ ಗಾಯವಾಗಿದೆ ಅಂತ ಸುಳ್ಳು ಹೇಳುತ್ತಿದ್ದಳು. ಗದ್ದೆಗೆ ಕೆಲಸಕ್ಕೆಂದು ಹೋದಾಗಲೆಲ್ಲ ಸಹವರ್ತಿಗಳು ಚಿನ್ನವಳನ್ನು ನೋಡಿ ಮಾಯದ ಗಾಯದವಳು ಅಂತ ಲೇವಡಿ ಮಾಡುತ್ತಿದ್ದರು. ಆವಾಗೆಲ್ಲ ಮೈಯೆಲ್ಲು ಉರಿದು ಹೋಗುತ್ತಿತ್ತು. ಥೂ ಈ ಬೆರಳಿನಿಂದ ನೆಟ್ಟಗೆ ಎಲ್ಲರ ಜೊತೆ ಕೂಡೊಕು ಆಗ್ತಿಲ್ಲವಲ್ಲ ಅಂತ ಯಾರು ಇಲ್ಲದ ಸಮಯದಲ್ಲೆಲ್ಲ ಅದನ್ನು ಕತ್ತರಿಸಲು ಅನೇಕ ಸಲಾ ವ್ಯರ್ಥ ಪ್ರಯತ್ನ ಮಾಡಿ ಸೋತಿದ್ದಾಳೆ. 

ಒಬ್ಬಳೆ ಕೂತಿದ್ದಾಗೆಲ್ಲ ಅವಳು ಆ ಬೆರಳನ್ನು ಒಮ್ಮೆ ನೋಡಿಕೊಳ್ಳುತ್ತಾಳೆ.. ದೇವರು ಅದೇನು ಸೋಜಿಗವ ಈ ಬೆರಳಲ್ಲಿ ಇಟ್ಟಿದ್ದಾನೆ.. ನನ್ನ ಕೈಯಿಂದ ಮಾಡಿಸಿದ ಪೂಜೆ ಹರಕೆ, ಉಡಿ ತುಂಬುವುದು ಎಲ್ಲವೂ ಒಳ್ಳೇಯದಾಗುತ್ತದೆ. ನನ್ನ ಬಾಳೆಕೆ ಹೀಗೆ ಒಣಗಿದ ಒಂಟಿ ಮರವಾಯ್ತು..? ಈ ಬೆರಳಿನಿಂದಲೆ ಅಲ್ವೇ ಬಂದ ಗಂಡುಗಳೆಲ್ಲ ನನ್ನನ್ನು ಬೇಡ ಅಂದದ್ದು. 

ಪಕ್ಕದ ಮನೆ ಗಿರಿಜೆಯ ಮಗಳು ಸುಮಂಗಲಿ ಗೋಕಾವಿಯ ಕಾಲೇಜಿಗೆ ಹೋಗ್ತಾಳೆ. ಅವಳು ಹೇಳಿದ್ದು ನೆನಪಾಯ್ತು. ”ಚಿನ್ನವತ್ತೆ ಈಗ ವಿಜ್ಞಾನ ತುಂಬಾ ಮುಂದುವರಿದಿದೆ. ನಿನಗೆ ಆ ಬೆರಳು ಬೇಡವೆಂದರೆ ಡಾಕ್ಟರ್ ಆಪರೇಷನ್ ಮಾಡಿ ತೆಗೆದು ಬಿಡತಾರೆ. ಒಂಚೂರು ನೋವಾಗಲ್ಲ ನಿನಗೆ ಆ ಬೆರಳು ಬೇಡ ಅನಿಸಿದರೆ ಹೇಳು ನಾನೇ ಡಾಕ್ಟರ್ ಹತ್ರ ಕರಕೊಂಡ ಹೋಗಿ ಕಟ್ ಮಾಡಿಸಿಕೊಂಡು ಬರತಿನಿ ಆಮೇಲೆ ಚಿಂತೆನೆ ಇಲ್ಲ,” ಅಂದಿದ್ದಳು. 

ಆವಾಗೆಲ್ಲ ತುಂಬ ಹೆದರಿಕೆ ಆಗಿ ಒಪ್ಪಿರಲಿಲ್ಲ. ಮದುವೆಗೆ ಮುಂಚೆ ಹೀಗೆಲ್ಲ ಇದ್ದಿದ್ದರೆ ಖಂಡಿತ ಆ ಬೆರಳನ್ನು ಕತ್ತರಿಸುತ್ತಿದ್ದಳೊ ಏನೋ. ಅದು ಊಟ ಮಾಡುವಾಗೆಲ್ಲ ಮಧ್ಯ ಬರುತ್ತದೆ. ಏನಾದರು ಹಿಡಿದುಕೊಳ್ಳುವಾಗೆಲ್ಲ ಅಡ್ಡ ನಿಲ್ಲುತ್ತೆ, ಉಂಗುರ ಬೆರಳು ಹಾಗೂ ಕಿರು ಬೆರಳಿನ ನಡುವೆ ಅಗತ್ಯಕ್ಕಿಂತ ಹೆಚ್ಚಿನ ಅಂತರದಿಂದ ವಿಪರೀತ ನೋವು ಹೀಗಾಗಿ ಎರಡು ಬೆರಳನ್ನು ದಾರದಿಂದ ಕಟ್ಟಿ ಬಿಡುತ್ತಿದ್ದಳು. 

ಒಂದೊಮ್ಮೆ ಆ ಬೆರಳನ್ನು ಕತ್ತರಿಸಲೆಂದು ಅಂಗಡಿಯಿಂದ ಬ್ಲೇಡ್ ತರಿಸಿ ಅದರ ಬುಡಕ್ಕೆ ತಾಗಿಸಿದ್ದೇ ತಡ ಅಸಾಧ್ಯ ನೋವು, ರಕ್ತ ಚಿಲ್ಲೆಂದು ಸಿಡಿಯಿತು. ಮೋರ್ಛೆ ಹೋಗಿ ಬೀಳೋದೊಂದೆ ಬಾಕಿ. ಬ್ಲೇಡ ಎಸೆದು, ಗಟ್ಟಿಯಾಗಿ ಅದುಮಿ ಹಿಡಿದು ಸೀಮೆ ಎಣ್ಣೆ ಡಬ್ಬದಲ್ಲಿ ಬೆರಳನ್ನು ಅದ್ದಿ ತೆಗೆದಳು. 

ನಡುಮನೆಯಲ್ಲಿ ಕೆಲಸ ಮಾಡುತ್ತಿದ್ದ ಚಿನ್ನವಳ ತಾಯಿ ಮಹಾದೇವಿ ಓಡೋಡಿ ಬಂದವಳೆ “ಚಿನ್ನಿ ಏನೇ ಮಾಡಿಕೊಂಡೆ ಬೆರಳ ಕೊಯ್ಯಕೊಂಡ್ಯಾ..? ಅಯ್ಯ ನಿನ್ನ ಮಾರಿಗಿ ಕಲ್ಲ ಬಡೀಲಿ ಅದೇನ ನಿನ್ನ ಪಾಲಾ ಕೇಳಾಕತ್ತಿತಗ..? ಅವಳ ಬೆರಳ ಹಿಡಿದು ಗದರಿಸಿದ್ದಳು ಅವಳಿಗೆ ಆ ರಕ್ತ ನೋಡಿ ಭಯವಾಗಿತ್ತು. 

ಚಿನ್ನವಳ ಈ ಆರನೇ ಬೆರಳಿನೊಂದಿಗೆ ಆ ಕೇರಿಯ ಎಳೆಯ ಮಕ್ಕಳು, ಮನೇಯ ಮಕ್ಕಳೆಲ್ಲ ಆಟ ಆಡಿವೆ. ಅಂಗನವಾಡಿಯಲ್ಲಿ ಕಲಿಸುವ ಟೀಚರ್ ಅಂಕಿ ಮಗ್ಗಿ ಕೈ ಬೆರಳು ಹತ್ತು ಅನ್ನುವ ಗಣಿತವನ್ನು ತಪ್ಪು ಎಂದು ಸಾರಿವೆ. 

ಆ ಬೆರಳಿಗೊಂದು ಬಂಗಾರದ ಕವಚ ಮಾಡಿಸಬೇಕೆಂದು ಅವಳ ಅಭಿಲಾಷೆ. ಕೊರಳಲ್ಲಿ ಮೂರುಗುಂಜಿ ಬಂಗಾರವಿಲ್ಲದಿದ್ದರು ಆಸೆಗೆನು ಕಡಿಮೆಯಿರಲಿಲ್ಲ. ಆ ಬೆರಳು ಬಟ್ಟೆ ತೊಳೆಯುವಾಗ, ಪಾತ್ರೆ ತೊಳೆಯುವಾಗ, ಊಟ ಮಾಡುವಾಗ, ಕೈ ಕೈ ಸೇರಿಸಿ ಮಕ್ಕಳೊಂದಿಗೆ ಆಟವಾಡುವಾಗ, ಬೊಗಸೆಯೊಡ್ಡಿ ನೀರು ಕುಡಿಯುವಾಗ, ಬೊಗಸೆ ತುಂಬಿ ಕಾಳು ನೀಡುವಾಗ ಸೋರಿಕೆಯಾಗಿ, ಅಗತ್ಯಕ್ಕಿಂತ ಹೆಚ್ಚು ಅಂತರ ಕಾಯ್ದು ಅವಮಾನಿಸಿದ್ದು, ಬೈಸಿಕೊಂಡದ್ದೆ ಜಾಸ್ತಿ. 

ಮದುವೆ ಸಮಯದಲ್ಲಿ ಗಂಡಿನ ಕಡೆಯವರು ಕೈಗಳನ್ನು ನೋಡಿ ಜೋಡಿಸಲು ಹೇಳಿದಾಗ ಆರನೇ ಬೆರಳಿನ ಮಧ್ಯ ಇರುವ ಅಂತರ ಗಮನಿಸಿ ಈ ಹುಡಿಗಿ ಕೈಯಲ್ಲಿ ಯಾವುದು ನಿಲ್ಲಲ್ಲ ಎಲ್ಲ ಸೋರಿ ಹೋಗತದೆ. ದುಡ್ಡು, ಧಾನ್ಯ, ಬದುಕು ಕೂಡ ಅಂತ ಮುಖದ ಮೇಲೆ ಹೊಡೆದಂತೆ ಹೇಳಿದಾಗೆಲ್ಲ ಅಟ್ಟದ ಮೇಲಿನ ಕಿಟಕಿಯಲ್ಲಿ ಮುಖವಿಟ್ಟುಕೊಂಡು ಎಷ್ಟುಸಲ ಅತ್ತಿದ್ದಾಳೊ ದೇವರೆ ಬಲ್ಲ. 

ಶತ್ರುಗಳು ಬರೀ ಮನುಷ್ಯರಾಗಿರಲ್ಲ ನಮ್ಮ ಶರೀರ, ಆರೋಗ್ಯ, ಹಾಗೂ ಕೆಲವು ಸಲ ಮನಸ್ಸು ಮತ್ತು ಮೈಮೇಲಿನ ಅಂಗಾಂಗಳು ಕೂಡ ಶತ್ರುಗಳಾಗುವ ಸಾಧ್ಯತೆ ತುಂಬಾ ಇರತಾವೆ ಅಂತ ಎಲ್ಲೋ ಕೇಳಿದ್ದ ನೆನಪು. ಅದು ಆ ಬೆರಳನ್ನು ನೋಡಿದಾಗೆಲ್ಲ ನಿಜವಾಯಿತಲ್ಲ ಅಂತನಿಸಿದೆ ಅವಳಿಗೆ.

ಕಪಿಲ್ ಅಂಕಲ್ ನಿನ್ನ ನೋಡಬೇಕೆಂದು ಬೆಂಗಳೂರಿನಿಂದ ಬಂದಿದ್ದಾನೆ ಬರಬೇಕಂತೆ ಚಿಕ್ಕಮ್ಮ ಅಂತ ನಾದಿನಿಯ ಆರು ವರ್ಷದ ಮಗ ರಜತ್ ಕೊಟ್ಟಿಗೇಲಿ ಶೆಗಣಿ ಗುಡಿಸುತ್ತಿದ್ದ ಚಿನ್ನವಳಿಗೆ ಹೇಳಿ ಹೋದ ಮೇಲೆ ಆ ಚೌಕಟ್ಟಿನತ್ತ ಒಂದು ಸಲ ನೋಡಿ ಸುಮ್ಮನಾದಳು. 

ದನಗಳ ಕಾಲಲ್ಲಿನ ಗಂಜಲ, ಸೆಗಣಿಯನ್ನು ಒಂದೆಡೆ ಗುಪ್ಪೆ ಹಾಕಿ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಸೀರೆಯನ್ನು ಬಿಡಿಸಿಕೊಂಡು ಅಲ್ಲೇ ಇದ್ದ ನೀರಿನಿಂದ ಕೈಕಾಲು ತೊಳೆದುಕೊಂಡು ಪಡಸಾಲೆಗೆ ಬಂದಳು ಇಷ್ಟು ದಿನ ಎಲ್ಲಿದ್ದರು ಇವರು..? ಇವರಿಗೆ ನಾನು ಪರಿಚಯವಿಲ್ಲ ಅವರ ಪರಿಚಯ ತನಗಿಲ್ಲ ನನ್ನನ್ನೇ ಹುಡುಕಿಕೊಂಡು ಬರುವದೆಂದರೆ..? ಸತ್ಯಾಸತ್ಯತೆ ಎನಿಹುದೋ..? ಗಾಢ ಚಿಂತೆಗಳು ಅನುಮಾನಗಳನ್ನು ಸಂಬಾಳಿಸುತ್ತ ಸುತ್ತುವರಿದು ನೋಡಿದಳು. 

ಕುರ್ಚಿ ಮೇಲೆ ಕೆಂಪು ಬಣ್ಣದ ಶರ್ಟು, ನೀಲಿ ಪ್ಯಾಂಟು, ಗುಂಗುರ ಕೂದಲಿನ 45ರ ಪ್ರಾಯದ ಗಂಡಸು ಚಿನ್ನವಳಿಗಾಗಿಯೇ ತದೇಕ ಚಿತ್ತದಿಂದ ಕಾಯುತ್ತಿದ್ದ. ಅವನ ಕಣ್ಣಲ್ಲಿ ದೇವರನ್ನು ಕಂಡ ಭಕ್ತನಂತೆ, ಆಶಾವಾದದ ಸಂತಸವೊಂದು ಕುಣಯುತ್ತಿತ್ತು. ದಡಕ್ಕನೆ ಮೇಲೆದ್ದವ “ಅಕ್ಕಾರ ನಮಸ್ಕಾರ್ರೀ.. ಅಂದ. 

ಈತ ಯಾವ ಕಡೇಯಿಂದ ಸಂಬಂಧ.. ಹೇಗೆ ಮಾತಾಡಬೇಕು..? ಏನೆಂದು ಮಾತಾಡಬೇಕೆಂದು ಇನ್ನು ನಿಗೂಢವಾಗಿದ್ದಾಕೆಗೆ ನೆರವಿಗೆ ಬಂದವಳೆ ನಾದಿನಿ ಮಾಲಾ. ಅಕ್ಕಾ ಬಾ ಒಳಗ ಒಲಿಮ್ಯಾಲ ಚಹಾ ಇಟ್ಟಿದೀನಿ ತರತಿನಿ ಕೂಡ್ರು ಅಂತಂದು ಒಳ ಹೋದಳು. 

ಚಿನ್ನವ್ವ ಅವನನ್ನು ಒಮ್ಮೆ ನೋಡಿದಳು. ಇವನೇಕೆ ನನ್ನ ಹುಡುಕಿಕೊಂಡು ಬಂದಿದಾನೊ ಗೊತ್ತಿಲ್ಲ ಅನುಮಾನಗಳು ಹೆಣಗಾಡುತ್ತಿದ್ದವು. ಸಂಬಾಳಿಸುವುದು ತುಂಬ ಕಷ್ಟಸಾಧ್ಯವೆನಿಸುತಿತ್ತು. ಮಾಲಾ ತಂದುಕೊಟ್ಟ ಚಹಾ ಕುಡಿದು ಅವರತ್ತ ಮುಖ ಮಾಡಿ ಮಾತಿಗೆ ಶುರು ಮಾಡಿ ಎಂಬಂತ ನೋಡಿದಳು.

ಇದಕ್ಕಾಗಿ ಕಾಯುತ್ತಿದ್ದ ಅವನು “ಅಕ್ಕಾರ ನಮಸ್ಕಾರ್ರೀ.. ನಾನು ಈ ಊರ ಗೌಡರ ಅಳಿಯ ಕಪಿಲ್ ಅಂತ ನನ್ನ ಹೆಸರು. ನಿಮ್ಮ ಕೈಗುಣ, ನಿಮ್ಮ ಬೆರಳಿನ ಬಗ್ಗೆ ಬಾಳ ಹೇಳತಾರೆ ನಮ್ಮ ಮಾವನವರು ಅಂದಾಗ ಚಿನ್ನವಳ ಮುಖದ ಮ್ಯಾಲ ಮಂದಹಾಸ ತನ್ನ ಬೆರಳು ಬೆಂಗಳೂರವರೆಗೂ ಪ್ರಸಿದ್ಧಿ ಆಗಿದೆಯಾ ಶಿವನೆ..? ಅಂತ ಬೆರಗಾದಳು ಬೆಂಗಳೂರಿನ ತನಕ ಸುದ್ದಿ ಹಬ್ಬಿದ ಸುದ್ದಿ ಕೇಳಿ ಮೈಮ್ಯಾಲಿನ ಕೂದಲುಗಳು ನಿಮರಿ ನಿಂತವು. ಆರನೇ ಬೆರಳನ್ನು ಸೀರಿ ಶೆರಗಿನಿಂದ ಒರೆಸಿಕೊಂಡಳು. 

“ಈಗ ನಿಮ್ಮಿಂದ ಒಂದ ಕೆಲಸ ಅಗಬೇಕಾಗೇತಿ ಅಂತ ಅಂದಾಗ ಚಿನ್ನವ್ವ ಗಾಬರಿ ಜೊತೆ ಸಣ್ಣದಾಗಿ ನಡಕು ಹುಟ್ಟಿತು. ಎಲ್ಲಿ ಬೆಂಗಳೂರಿಗಿ ಹೋಗೊಣ ನಡಿ ಅಂತಾರೊ ಎನ್ನುವ ಭಯವು ಇತ್ತು. “ಈ ಊರಲ್ಲಿ ನಿಮಗ ನಿಮ್ಮ ಅದೃಷ್ಠದ ಈ ಬೆರಳಿಗಿ ಜನ ಎಷ್ಟ ಗೌರವ ಕೊಡತಾರೊ ಗೊತ್ತಿಲ್ಲ ಆದರೆ ನೀವು ಒಪ್ಪಿದರ ದಿನ ಒಂದಕ್ಕ ಐದನೂರ ರೂಪಾಯಿ ಭಕ್ಷಿಸ ಕೊಡತೇನ. ಅದು ನಮ್ಮ ಮಾವನವರ ಮನಿಯೊಳಗ ಕುತಗೊಂಡ ಊಟ ಮಾಡಿಕೊಂಡು ಚಹಾ ಕುಡಿರಿ ಹೊತ್ತ ಮುಣಗೋ ಮುಂದ ನಿಮ್ಮ ಮನೀಗಿ ಬಂದ ಬಿಡ್ರಿ ತಲಿಬ್ಯಾನಿ ಕೆಲಸ ಏನು ಇಲ್ಲರಿ ಅಂದ. 

ಚಿನ್ನವಳಿಗಿ ದಿನಕ್ಕ ಐದನೂರ ರೂಪಾಯಿ ಭಕ್ಷಿಸ ಕೊಡತಿನಿ ಅಂದಾಗ ಸುಖದ ಮುಗಿಲ ಮೈಮ್ಯಾಲ ಮುರಕೊಂಡ ಬಿದ್ದಂಗಾತು. ಬೆರಳ ಕುರಿತು ಇದ್ದ ನಿರಾಸೆ, ನೋವು ಅಸಡ್ಡೇಗಳೆಲ್ಲ ಮಾಯವಾಗಿ ಮುಖದ ತುಂಬ ಖುಷಿ ಕುಣದಾಡಿತು. ಚಿನ್ನವ್ವ ಆತಂಕದ ನೋಟದಿಂದ ಮಾಲಾಳ ಕಡೀಗಿ ನೋಡಿದಳು ಕೆಲಸ ಏನ ಮಾಡಬೇಕು ಅನ್ನೋದ ಹೇಳವಲ್ಲರಲ್ಲ ಅಂತ. 

“ಕೆಲಸ ಬಂದ ಇಷ್ಟ ಐತಿ .ನಮ್ಮ ಹುಡುಗ ನಿಮ್ಮ ಮುಂದ ಮೊಬೈಲ ಹಿಡಿತಾನ ಅದನ ನೋಡಿಕೊಂಡ ನೀವೆನು ಮಾಡಬೇಕಿಲ್ಲ ಅವ ಯಾವಾಗ ನಿಮ್ಮ ಆರನೇ ಬೆರಳಿನಿಂದ ಒತ್ತಿ ಅಂತಾನ ಅದರಮ್ಯಾಲ ಒತ್ತಬೇಕು, ಎಳಿರಿ ಅಂದರ ಎಳೆದ ಬಿಡಬೇಕು ಇದ ನಿಮ್ಮ ಕೆಲಸ. ಇದು ನಿಮ್ಮ ಅದೃಷ್ಟದ ಬೆರಳಿನಿಂದಲೇ ಮಾಡಬೇಕು. ಇದ ನಿಮ್ಮ ಕೆಲಸ! 

ಚಿನ್ನವ್ವ ಇಷ್ಟ ಕೆಲಸಕ ಐದನೂರ ರೂಪಾಯಿ ಕೊಡತೀರಿ…? ಅಂತ ಕೇಳಿದಳು ಕಪಿಲ್ ಮುಖದ ತುಂಬ ನಗೆ ಹೊತ್ತು “ಹೌದರೀ ಅಕ್ಕಾರ ಇದಕ್ಕ ನಿಮಗ ಐದನೂರ ರೂಪಾಯಿ ಸಿಗತಾವ ಅಂದ. ಗೊಂದಲದ ಗೂಡಾದ ಚಿನ್ನವಳ ಮನಸ್ಸಿಗಿ ಕ್ಲಾರಿಟಿ ಸಿಗಲಿಲ್ಲ. “ಅಲ್ಲಾ ಇದೇನ ಕೆಲಸಾ. ಅದನ್ನ ನೀವ ಮಾಡಿದರ ನಿಮಗ ಸಿಗತೈತಲ್ಲಾ ಅದನ್ನ ನನ್ನ ಕಡೀಂದ ಯಾಕ ಮಾಡಸತಿದಿರಿ..? ಅಂದಳು. ನಿಮ್ಮದು ಅದೃಷ್ಠದ ಬೆರಳು ಇದರ ಹೆಸರು ರಮ್ಮಿ ಸರ್ಕಲ್ ಅಂತ. 

ಬರೀ ಅರ್ಜಿ ಹಾಕೋದು ನಮ್ಮ ಹುಡುಗ ಹೇಳಿದಂಗ ನೀವು ಎಳೆಯೊದು ಒತ್ತೋದು ಮಾಡಿದರ ಸಾಕು ಆ ಕೆಲಸ ನಮಗ ಸಿಗತೈತಿ ಪಗಾರ ಬರತೈತಿ ಅದರಾಗ ಸಿಂಹ ಪಾಲ ನಿಮಗ ಕೊಟ್ಟು ಉಳಕಿದರಾಗ ನಾವ ತಗೋತಿವಿ. ಏನಂತೀರಿ ಅಲ್ಲಿ ಇಲ್ಲಿ ದುಡಿಲಾಕ ಹೋಗೊಕ್ಕಿಂತ ಒಂದಕಡೆ ಕುಂತ ಬೆರಳ ಒತ್ತಿಕೊಂತ ಕುಳಿತು ಪಗಾರ ತಗೋಬಹುದಲ್ಲಾ..? ಅಂದಾಗ ಚಿನ್ನವಳಿಗೆ ಅದು ಚಲೋ ಅನಿಸಿತು.

ಕಪಿಲ್ ತನ್ನ ಕಿಸೆಯೊಳಗಿನ ಪೋನ್ ತೆಗೆದು ಇದ ನೋಡ್ರಿ ನೀವು ಮಾಡುವ ಕೆಲಸ ಅಂತ ರಮ್ಮಿ ಸರ್ಕಲ್ ಓಪನ್ ಮಾಡಿ ಆಟ ಶುರು ಮಾಡಿ ಅವಳ ಆರನೇ ಬೆರಳಿನಿಂದ ರಮ್ಮಿ ಆಡತೊಡಗಿದ. ಬಣ್ಣ ಬಣ್ಣದ ಇಸ್ಫಿಟ ಎಲೆಗಳನ್ನು ಎಳೆಯುತ ಚಿನ್ನವ್ವ ಬೆರಗಾಗಿ ಕಪಿಲ ಹೇಳಿದಂತೆ ಎಳೆಯೊದು, ಒತ್ತುವುದು ಮಾಡತೊಡಗಿದಳು. ಆತ ಒಂದು ಗಂಟೆಯಲ್ಲಿ ಸಾವಿರು ರೂಪಾಯಿ ಗೆದ್ದಿದ್ದ ಆಕೆ ಉತ್ಸಾಹದಿಂದ ಎಳೆಯುತ್ತಿದ್ದಳು ಮತ್ತು ಒತ್ತುತ್ತಿದ್ದಳು.

ಅದೃಷ್ಟ ಯಾರಿಗಾದರೂ ಇರಲಿ ಯಾರು ಯಾರಿಗೆ ಹೆಂಗೆಲ್ಲ ಅದು ಬಳಕೆ ಆಗುತ್ತೆ ಅನ್ನೋದೆ ಮುಖ್ಯ ಅಂತ ಅವನ ಮನಸ್ಸಿನ ತುಂಬ ಖುಷಿಯ ವಿಚಾರಗಳು ಕುಣಿಯುತ್ತಿದ್ದವು. ಚಿನ್ನವ್ವ ಎಳಿಯುತ್ತಿದ್ದಳು ಒತ್ತುತ್ತಿದ್ದಳು. ಬೆರಗುಗಣ್ಣಿಂದ ಅದನ್ನೆ ನೋಡುತ ಮೈ ಮರೆತಳು. ತದೇಕ ಚಿತ್ತದಿಂದ ಅದನ್ನೇ ನೋಡಿ ನೋಡಿ ಕಣ್ಣಲ್ಲಿ ನೀರ ಬಂದವು. ಕಪಿಲ್ ಅದಾಗಲೇ ಎರಡು ಸಾವಿರ ರೂಪಾಯಿ ಗೆದ್ದಿದ್ದ!!

‍ಲೇಖಕರು Avadhi

November 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This