ಆರಿಫ್ ರಾಜಾ: ಜೋಳಿಗೆ ಬಿಚ್ಚಿಸಿ ಕೂತಾಗ..

ತಾಜ್ಮಹಲ್ ಕಟ್ಟಬೇಕು, ಗೋರಿಯ ಮೇಲಲ್ಲ! “ರಾಜಾಜ್ಞೆ”
ಒಳಗೂ..ಹೊರಗೂ ಬ್ಲಾಗ್ ನ ಅಂತರ್ಮುಖಿ ಕವಿಗಳನ್ನು ನೋಡುವ ರೀತಿಯೇ ಭಿನ್ನ.
ಇಲ್ಲಿದೆ ಅರೀಫ್ ರಾಜಾ ಸಂದರ್ಶನ.
ಕನ್ನಡಪ್ರಭ ಸಾಪ್ತಾಹಿಕಕ್ಕೆ ನಡೆಸಿಕೊಟ್ಟದ್ದು
`ಉರ್ದು ಕವಿ ಸಾಹಿರ್ ಹೇಳಿದ ಹಾಗೆ `ಗಮ್ ಔರ್ ಭಿ ಹೈ, ದುನಿಯಾಮೆ ಮೊಹಬ್ಬತ್ ಕೆ ಸಿವಾ’. ನಿಮ್ಮ ಕವಿತೆಗಳು ಲೈಂಗಿಕತೆಯನ್ನೇ ಬಂಡವಾಳ ಮಾಡಿಕೊಳ್ಳದೆ ಲೋಕದ ಎಲ್ಲಾ ದಂದುಗಗಳ ಬಗ್ಗೆ ಕಾಳಜಿ ಹೊಂದಿ ವಿಶೇಷವಾದ ವ್ಯಾಪಕತೆ ಪಡೆದುಕೊಂಡಿವೆ…’ ಹೀಗಂತ ಎಚ್.ಎಸ್.ಶಿವಪ್ರಕಾಶ್ ಆರಿಫ್ ರಾಜಾರ ಮೊದಲ ಸಂಕಲನದಲ್ಲಿ ಬರೆದಿದ್ದಾರೆ.ತೀವ್ರ, ಆದ್ರ್ರ, ಭಾವಪೂರ್ಣ, ಮಾನವೀಯ ಕವಿತೆಗಳನ್ನು `ಜಂಗಮ ಫಕೀರನ ಜೋಳಿಗೆ’ ತುಂಬ ತುಂಬಿಕೊಂಡು ನಮ್ಮ ನಡುವೆ ನಿಂತಿರುವ ಕವಿ ಆರಿಫ್ ರಾಜಾ. ರಾಯಚೂರು ಸಮೀಪದ ಗ್ರಾಮವೊಂದರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಾ ಮಗುವಿನ ಬೆರಗು ಕಣ್ಣನ್ನು, ಗಾಢವಾದ ಭಾವ ಹೊಂದಿದ ಕವಿ.ಸಂಕಲನ ಮೊದಲನೆಯದ್ದೇ ಆದರೂ ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಕವಿತೆಗಳು ಇದರಲ್ಲಿವೆ, ಸಾಕಷ್ಟು ಮೆಚ್ಚಿಸಿಕೊಂಡಿವೆ. ಬಹುಮಾನ, ಅಭಿಮಾನಗಳನ್ನು ಪಡೆದುಕೊಂಡಿವೆ. ಬದುಕು-ಬರಹ `ಜೀವವಿರೋಧಿ’ಯಾಗಬಾರದೆಂದು ಹಂಬಲಿಸುವ ಈ ಕವಿಯ ಮಾತಿನ ಜೋಳಿಗೆ ಬಿಚ್ಚಿಸಿ ಕೂತಾಗ…
ನೀವು ಕವಿತೆಯ ಕೈ ಹಿಡಿದಿರಾ? ಅಥವಾ ಕವಿತೆ ನಿಮ್ಮನ್ನು ಮಡಿಲಿಗೆ ಹಾಕಿಕೊಂಡಿತಾ?
keep a green tree in your heart, singing bird will surely come ಅಂತಾ ಒಂದು ಚೀನಿ ಗಾದೆ. ನನ್ನದೇ ಕವಿತೆಯ ಸಾಲುಗಳಲ್ಲಿ ಹೇಳುವುದಾದರೆ,
ನಾನಾಗ ಕವಿತೆ ಬರೆಯುತ್ತಿದ್ದೆ
ಕವಿತೆ ನನ್ನಿಂದ ಬರೆಯಿಸಿಕೊಳ್ಳುತ್ತಿದೆ.
ಕವಿತೆಯ ಸಖ್ಯ ಯಾಕೆ ಬೇಕು?
ನೀವು ಕೇಳಿದ ಪ್ರಶ್ನೆಯಷ್ಟೇ ನೇರವಾಗಿ, ಸರಳವಾಗಿ ಉತ್ತರಿಸುವುದು ಕಷ್ಟ. ಜಗದ ಮೊದಲ ಹಾಡು ಹೇಗೆ ಹುಟ್ಟಿತು? ಗುಡ್ಡ ಗಾಡುಗಳಲ್ಲಿ ಬೇಟೆಯಾಡಿಕೊಂಡು, ತನ್ನಷ್ಟಕ್ಕೆ ತಾನಿದ್ದ ಮನುಷ್ಯ ಗುಹೆಗಳಲ್ಲಿ ಯಾಕೆ ಚಿತ್ರ ಬರೆಯುವ ಸಾಹಸ ಮಾಡಿದ? ಇದನ್ನು ಸೃಜನಶೀಲತೆ ಎಂದು ಯಾಕೆ ಕರೆದೆವು? ಗುರುತರವಾದ ಬೆರಗೊಂದು ಕಾಲನ ಕೈಯಿಂದ ಜಾರಿ ಶಾಶ್ವತ ನೆನಪಾಗುಳಿಯುವುದನ್ನು ಮನುಷ್ಯ ಸಹಿಸಲಾರ ಎನಿಸುತ್ತದೆ. ಅದಕ್ಕೆ ಈ ಕಲೆ ಕವಿತೆ. ಹಾಗಾಗಿ ಈ ಪ್ರಶ್ನೆಗೆ ಸಾಮುದಾಯಿಕ ನೆಲೆಯಲ್ಲೇ ಉತ್ತರ ಹುಡುಕಬೇಕು ಅನ್ನಿಸುತ್ತೆ.
ಸಾತ್ವಿಕ ಆಕ್ರೋಶ, ಬಿಸಿ ರಕ್ತದ ಸಿಡುಕು, ಅದಮ್ಯ ಪ್ರೇಮ ನಿಮ್ಮ ಕವಿತೆಯಲ್ಲಿವೆ. ಕಾವ್ಯ ಖಡ್ಗ ಆಗಬೇಕು ಅನ್ನಿಸುತ್ತಾ? ತತ್ವದ ಬೆಳಕಾಗಬೇಕು ಅನ್ನಿಸುತ್ತಾ?
ನಾನೊಬ್ಬ ಮನುಷ್ಯ ಎಂದ ಮೇಲೆ ಎಲ್ಲರ ಹಾಗೆ ಬಲ-ಬಲಹೀನತೆಗಳು ಸಹಜವಾಗಿ ನನ್ನ ಬರವಣಿಗೆಯಲ್ಲಿ ಬರಬೇಕು. ಸಂಕೀರ್ಣ ಸನ್ನಿವೇಶದಲ್ಲಿ ಮಾನವ ವರ್ತನೆಯನ್ನು ಇದು ತಪ್ಪು-ಸರಿ, ಇದು ಹಿಂಸೆ, ಇದು ಅಹಿಂಸೆ, ನೈತಿಕ-ಅನೈತಿಕ ಎಂದು ಕಪ್ಪು -ಬಿಳುಪಾಗಿ ವಿಶ್ಲೇಷಣೆ ಮಾಡಲು ಆಗುವುದಿಲ್ಲ. ಖಡ್ಗಕ್ಕೊಂದು ತಾತ್ವಿಕತೆ ಇಲ್ಲ ಅನ್ನುತ್ತೀರಾ?
ಮಂದಿರ, ಮಸೀದಿ, ಬದಲು ತಾಜ್ಮಹಲ್ ಕಟ್ಟಬೇಕೆನ್ನುತ್ತೀರಿ. ನಿಮ್ಮ ಕವಿತೆಗಳಲ್ಲಿ ಹೀಗೆ ಕಾಣಿಸಿಕೊಳ್ಳುವ ಪ್ರೇಮ ಎಂಥದ್ದು ಅನ್ನೋ ಕುತುಹೂಲ..
ಹೌದು, ತಾಜ್ಮಹಲ್ ಕಟ್ಟಬೇಕು. ಯಾರದ್ದೋ ಗೋರಿಯ ಮೇಲಲ್ಲ. ಸಂಬಂಧಗಳಲ್ಲಿ ಸೌಹಾರ್ದತೆಯನ್ನು ಬೆಳೆಸುವ ಸೇತುವೆಯಾಗಿ. ನನ್ನ ಕವಿತೆಗಳಲ್ಲಿ ಕಾಣುವ ಪ್ರೇಮ ಅಂದರೆ ಜೀವನ ಪ್ರೇಮ, ಯಾವ ದೇಶದಲ್ಲೇ ಆಗಲಿ, ಯಾವ ಕಾಲದಲ್ಲೇ ಆಗಲಿ ಇದೊಂದು ಮಾತ್ರ ಅವಮಾನವೀಯವಾಗಿರಲು ಸಾಧ್ಯವಿಲ್ಲವಲ್ಲ. ಅಂಥ ಪ್ರೇಮ ಇಲ್ಲಿದೆ. ಸಾಂಸ್ಕೃತಿಕ ಚಹರೆಗಳು, ಈ ವಿಷಯದಲ್ಲಿ ಕೇವಲ ಹೊರಹೊದಿಕೆಗಳು ಮಾತ್ರ…
ನಿಮ್ಮ ಕವಿತೆಗಳಲ್ಲಿ ನಿಮಗೆ ಇಷ್ಟವಾದ ಸಾಲುಗಳು
..ಜಂಗಮ ಫಕೀರನ ಜೋಳಿಗೆ ಪದ್ಯದ…
ನಿನ್ನ ಯುಗಾದಿಯ ಬೇವು ಬೆಲ್ಲ
ನನ್ನ ರಮ್ಜಾನಿನ ದೂದ್ ಖುರ್ಮಾ
ಎಂದೂ ಒಂದಾಗುವುದಿಲ್ಲ.
ಈ ಹುಡುಗರಿಗೆ ಮತ್ತೆ
ರಕ್ತದಲ್ಲಿ ಪ್ರೇಮಪತ್ರ ಬರೆವ ಹುಚ್ಚು
ನಿಮ್ಮನ್ನು ಪ್ರಭಾವಿಸಿದ್ದು ಯಾರು?
ಎಚ್.ಎಸ್. ಶಿವಪ್ರಕಾಶ್. ಮಾದರಿಗಳೇ ಇಲ್ಲದ ಹೊತ್ತಲ್ಲಿ ಹೊಸ ನಡೆ ಕಂಡುಕೊಂಡವರು, ದೊಡ್ಡ ಸಾಧನೆ ಮಾಡಿದವರು ಶಿವಪ್ರಕಾಶ್. ಹಾಗೆಯೇ ಭಿನ್ನ ನೆಲೆಯಲ್ಲಿ ನಡೆದ ಎಸ್.ಮಂಜುನಾಥ್.
ನಿಮ್ಮ ವಾರಿಗೆಯ ಕವಿಗಳ ಬಗ್ಗೆ ಹೇಳಿ..
ಖುಷಿ ಇದೆ. ಇವತ್ತಿನ ಬರಹಗಾರರು ತಮ್ಮ ಮಿತಿಯೊಳಗೆ ಪ್ರಾಮಾಣಿಕವಾಗಿದ್ದಾರೆ. ಮೈಗೆ ಬೆಂಕಿ ಹಚ್ಚಿಕೊಂಡು ಬರೆಯುತ್ತಾರೆ. ರಕ್ತ ಸುಟ್ಟುಕೊಳ್ಳುತ್ತಾರೆ. ಇಂಥವರು ಎಂದು ಹೆಸರು ಹೇಳುವುದರಲ್ಲೇನಿದೆ. ನಿಜವಾದ ಓದುಗನಿಗೆ ಅವರ್ಯಾರು ಗೊತ್ತಾಗುತ್ತೆ..
ವಾರಿಗೆಯ ಕವಿಗಳಲ್ಲಿ ನೀವು ಸ್ನೇಹಿತನಾಗಿ ಏನನ್ನಾದರೂ ಹೇಳಿಕೊಳ್ಳಲೇಬೇಕು ಅನ್ನಿಸಿದ ಸಂಗತಿ..
ನಾವೆಲ್ಲಾ ಮಾತಿಗಿಂತಲೂ ಕ್ರಿಯೆ ಮುಖ್ಯ ಅನ್ನೋ ಎಚ್ಚರ ಸದಾ ನೆನಪಿನಲ್ಲಿಟ್ಟುಕೊಂಡರೆ ಸಾಕು. ಬರಹಗಾರನಿಗೆ ಮುದ್ರಣ, ದೃಶ್ಯ ಮಾಧ್ಯಗಳಲ್ಲಿ ಇಂದು ತುಂಬಾ ಅವಕಾಶಗಳಿವೆ. ಯಾವುದೇ ಅವಕಾಶ ಲೇಖಕನನ್ನು ಬೆಳೆಸಬೇಕು. ಆದರೆ ಅವನನ್ನು ಅವಕಾಶವಾದಿಯನ್ನಾಗಿ ಮಾಡಿ ವಾಚಾಳಿಯಾಗಿಸಬಾರದು. ಇಂಥ ಅವಕಾಶಗಳ ಬಗ್ಗೆ ಎಚ್ಚರವಹಿಸಬೇಕು ಎನ್ನುವುದು ನನ್ನ ಭಿನ್ನಹ.
ಮತ್ತೇನು ಬರೆಯಬೇಕೆಂದಿದ್ದೀರಿ?
ನಾಟಕ ಬರೀಬೇಕು ಅಂತಿದ್ದೀನಿ. ನಾವು ಮುಖ್ಯವಾಹಿನಿ ಅಂದುಕೊಂಡ ಪಠ್ಯಗಳಲ್ಲಿ ದಾಖಲಾಗದೆ ಉಳಿದ ಪ್ರತಿ ಇತಿಹಾಸ, ಹಾಲು ಜೇನಿನಂತೆ ಬೆರೆತು ಹೋಗಿದ್ದ ಸೂಫಿ-ಶರಣ ತತ್ವಗಳು, ಮೊನ್ನೆ ತಾನೇ ರಾಜಧಾನಿಯಲ್ಲಿ 60 ಸಾವಿರ ಭಿಕ್ಷುಕರನ್ನು ಪ್ರಾಣಿಗಳಂತೆ ಹೊರಹಾಕಿದ್ದು, ದಿಲ್ಲಿ ಬಜಾರು, ದಿಲ್ಲಿ ದರ್ಬಾರು ಇದೆಲ್ಲವೂ ನಾಟಕದಲ್ಲಿ ಇರುತ್ತವೆ..

‍ಲೇಖಕರು avadhi

November 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This