ಆರ್ ಪೂರ್ಣಿಮಾ ಹೇಳುತ್ತಾರೆ..

‘ಅವಧಿ’ಯ ಜನಪ್ರಿಯ ಅಂಕಣ ಜಿ ಎನ್ ರಂಗನಾಥರಾವ್ ಅವರ ‘ಮೀಡಿಯಾ ಡೈರಿ’ಯಲ್ಲಿ ಫೆಬ್ರುವರಿ ೪ ರಂದು ಪ್ರಕಟವಾದ ‘ಪ್ರಜಾವಾಣಿ ಮತ್ತು ನೈತಿಕ ಬಿಕ್ಕಟ್ಟು’ ಬರಹಕ್ಕೆ ಹಿರಿಯ ಪರ್ತಕರ್ತೆ ಆರ್‌ ಪೂರ್ಣಿಮಾ ಅವರು ನೀಡಿದ ಸ್ಪಷ್ಟನೆ ಇಲ್ಲಿದೆ.

ಆರ್ ಪೂರ್ಣಿಮಾ

ಜಿ.ಎನ್ ರಂಗನಾಥರಾವ್ ಅವರ ‘ಮೀಡಿಯಾ ಡೈರಿ’ ಅಂಕಣದಲ್ಲಿ ಫೆಬ್ರುವರಿ ೪ ರಂದು ಪ್ರಕಟವಾದ ‘ಪ್ರಜಾವಾಣಿ ಮತ್ತು ನೈತಿಕ ಬಿಕ್ಕಟ್ಟು’ ಬರಹದ ಕೆಲವು ವಿವರಗಳನ್ನು ಓದಿ ಆಶ್ಚರ್ಯ ಆಯಿತು. ಅದರಲ್ಲಿ  ಪ್ರಸ್ತಾಪಿತವಾಗಿರುವ ‘ಪ್ರಜಾವಾಣಿ ಸಂಗೀತೋತ್ಸವ’ ಕುರಿತ ಕೆಲವು ವಿವರಗಳು ಖಂಡಿತ ನಿಜವಲ್ಲ ಮತ್ತು ಸರಿಯಲ್ಲ. ಆದ್ದರಿಂದ ಸತ್ಯಸಂಗತಿಗಳನ್ನು ತಿಳಿಸಲೇಬೇಕು ಎಂದು ಈ ಸ್ಪಷ್ಟೀಕರಣವನ್ನು ನೀಡುತ್ತಿದ್ದೇನೆ.

ಸರಿಯಾಗಿ ೨೮ ವರ್ಷಗಳ ಹಿಂದೆ ನಡೆದ ಸಂಗೀತೋತ್ಸವ ಪ್ರಸಂಗವನ್ನು, ಸಹೋದ್ಯೋಗಿ ಗೆಳತಿಯರಾದ ನಾನು ಮತ್ತು ಎಂ.ಪಿ. ಸುಶೀಲ ಇಬ್ಬರೂ ಸೇರಿ ಎಳೆಎಳೆಯಾಗಿ ನೆನಪಿಸಿಕೊಂಡೆವು. ನಮ್ಮ ನೆನಪಿಗೆ ಮರಳಿ ದಕ್ಕಿದ ವಿವರಗಳನ್ನು ಇಲ್ಲಿ ಬರೆದಿದ್ದೇನೆ. ದಯವಿಟ್ಟು ಇದನ್ನು ಪ್ರಕಟಿಸಬೇಕು ಮತ್ತು ನಿಜವಲ್ಲದ ಸಂಗತಿಗಳು ಜಾಲತಾಣದಲ್ಲಿ ದಾಖಲಾಗುವುದನ್ನು ತಪ್ಪಿಸಬೇಕು ಎಂದು ನಾವಿಬ್ಬರೂ ಮನವಿ ಮಾಡುತ್ತೇವೆ.

ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿದ್ದ ನಾವೆಲ್ಲ ಗೆಳತಿಯರು ಬಿಡುವಿನ ಸಮಯದಲ್ಲಿ ಸಾಹಿತ್ಯ, ಸಂಗೀತ, ಸಿನಿಮಾ ಕುರಿತು ಚರ್ಚಿಸುವುದು, ವಾದವಿವಾದ ನಡೆಸುವುದು ಸಾಮಾನ್ಯವಾಗಿತ್ತು. ಹಾಗೆ ಒಂದು ದಿನ ನಾನು ಮತ್ತು ಎಂ.ಪಿ. ಸುಶೀಲ ಡೆಸ್ಕ್‌ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಡೆಕನ್ ಹೆರಾಲ್ಡ್ನ ಸಹಾಯಕ ಸಂಪಾದಕರಾದ ವತ್ಸಲಾ ವೇದಾಂತ ಅವರು ನಮ್ಮ ಬಳಿಗೆ ಬಂದರು. ‘ಪ್ರಜಾವಾಣಿ ಸಂಗೀತೋತ್ಸವ ಕಾರ್ಯಕ್ರಮದ ಎಲ್ಲ ವಿವರಗಳ ಜಾಹೀರಾತು ಎರಡೂ ಪತ್ರಿಕೆಗಳಲ್ಲಿ ಬರಬೇಕು. ಅದರ ಕನ್ನಡ ಅನುವಾದ ಬೇಕಿದೆ. ಇದನ್ನೊಮ್ಮೆ ನೋಡಿ ಮಾಡಿಕೊಡಿ’ ಎಂದು ಇಂಗ್ಲಿಷ್‌ನಲ್ಲಿ ಹೇಳಿ ಒಂದು ಬಿಳಿ ಹಾಳೆಯನ್ನು ಕೈಗಿತ್ತು ಹೋದರು.

ನಮ್ಮ ಪ್ರಜಾವಾಣಿ- ಡೆಕನ್ ಹೆರಾಲ್ಡ್ ಪತ್ರಿಕೆಗಳು ಇಂಥ ಸಾಂಸ್ಕೃತಿಕ ಉತ್ಸವಗಳನ್ನು ಆರಂಭಿಸಿರುವ ಬಗ್ಗೆ ಬಹಳ ಹೆಮ್ಮೆ ಪಡುತ್ತಿದ್ದ ನಾವು, ಕಾರ್ಯಕ್ರಮದ ವಿವರಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದಂತೆ ಬಹಳ ಬೇಸರವಾಯಿತು. ಏಕೆಂದರೆ ಅಷ್ಟೂ ದಿನಗಳ ಕರ್ನಾಟಕ ಸಂಗೀತೋತ್ಸವ ಕಾರ್ಯಕ್ರಮದಲ್ಲಿ, ಕನ್ನಡ ನಾಡಿಗೆ ಸೇರಿದ ಕಲಾವಿದರಲ್ಲಿ ಒಬ್ಬರಿಗೂ ಅವಕಾಶ ಇರಲಿಲ್ಲ. ಎಲ್ಲ ಸಂಗೀತಗಾರರೂ ತಮಿಳುನಾಡಿಗೆ ಸೇರಿದವರೇ ಆಗಿದ್ದರು.

‘ಸಂಗೀತದಲ್ಲಿ ಪ್ರತಿಭೆ ಪ್ರಧಾನವೇ ಹೊರತು ಭಾಷೆಯಲ್ಲ, ಸಂಗೀತದಿಂದ ಅನುಭೂತಿ ಪಡೆಯಲು ಭಾಷೆಯ ಹಂಗು ಬೇಕಾಗಿಲ್ಲ, ಕಲಾವಿದ ಎಲ್ಲಿಗೆ ಸೇರಿದರೇನು ಸಂಗೀತ ಮಾತ್ರ ಮುಖ್ಯ’ – ಇತ್ಯಾದಿ ವಾದಗಳ ಅರಿವು ನಮಗಿದ್ದರೂ ಇಲ್ಲಿ ತಾರತಮ್ಯ ನಡೆದಿದೆ, ಕನ್ನಡನಾಡಿನ ಕಲಾವಿದರಿಗೆ ಅನ್ಯಾಯವಾಗಿದೆ ಎಂದು ನಮಗೆ ಅನ್ನಿಸಿಬಿಟ್ಟಿತು. ಕೊನೆಗೆ ವತ್ಸಲಾ ವೇದಾಂತ ಅವರ ಬಳಿಯೇ ಇದನ್ನು ಚರ್ಚಿಸುವುದು ಸೂಕ್ತ ಎಂದು ನಿರ್ಧರಿಸಿದೆವು.

‘ಬೆಂಗಳೂರಿನಲ್ಲಿ ಇಂಥ ಪ್ರತಿಷ್ಠಿತ ಸಂಗೀತೋತ್ಸವದಲ್ಲಿ ಕರ್ನಾಟಕಕ್ಕೆ ಸೇರಿದ ಕಲಾವಿದರಿಗೂ ಅವಕಾಶ ಕೊಡುವುದು ನ್ಯಾಯೋಚಿತ’ ಎಂಬ ವಾದವನ್ನು ನಾನು, ಸುಶೀಲ ಇಬ್ಬರೂ ಒಟ್ಟಾಗಿ ಅವರ ಮುಂದಿಟ್ಟೆವು. ಅಲ್ಲದೆ ಕನ್ನಡಿಗರ ನೆಚ್ಚಿನ ಪತ್ರಿಕೆ ಪ್ರಜಾವಾಣಿ ಹೀಗೆ ಮಾಡಬಾರದು ಎಂಬುದನ್ನೂ ಅವರಿಗೆ ಹೇಳಲೆತ್ನಿಸಿದೆವು. ಆದರೆ ನಮ್ಮ ಮಾತಿಗೆ ವಿಪರೀತ ಸಿಡಿಮಿಡಿಗೊಂಡ ಅವರು ನಮ್ಮ ವಿಚಾರಗಳನ್ನು ಒಂದಿಷ್ಟೂ ಒಪ್ಪಲಿಲ್ಲ. ನಮ್ಮ ವಾದವನ್ನು ಕೇಳಿಸಿಕೊಂಡು ಚರ್ಚೆ ಮಾಡಲೂ ನಿರಾಕರಿಸುವ ಅವರ ನಿಲುವು ಸರಿಯಲ್ಲ ಎಂದು ನಾವಿಬ್ಬರೂ ಬೇಸರಪಟ್ಟುಕೊಂಡೆವು. ನಂತರ ಒಂದೆರಡು ದಿನ ಈ ವಿಷಯವನ್ನು ನಮ್ಮ ಕೆಲವು ಸಹೋದ್ಯೋಗಿಗಳ ಜೊತೆಗೂ ಹೇಳಿಕೊಂಡು ಸುಮ್ಮನಾದೆವು.

‘ಪ್ರಜಾವಾಣಿ ಸಂಗೀತೋತ್ಸವ’ ವನ್ನು ಸಂಯೋಜನೆ ಮಾಡುವ ವತ್ಸಲಾ ವೇದಾಂತ ಅವರಿಗೆ, ಕರ್ನಾಟಕದ ಪ್ರಸಿದ್ಧ ಸಂಗೀತಗಾರರ ಹೆಸರುಗಳನ್ನು ಹೇಳುತ್ತ ಒತ್ತಾಯಿಸಿದ್ದ ನಮ್ಮ ಮೇಲೆ ತುಂಬಾ ಕೋಪ ಬಂದಿರುವುದು ನಂತರ ನಮಗೆ ತಿಳಿಯಿತು. ಅವರು ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಇದನ್ನು ವರದಿ ಮಾಡಿರುತ್ತಾರೆ ಎಂದು ನಾವು ಊಹಿಸಿದೆವು. ಆದರೆ ನಮ್ಮ ಸಂಸ್ಥೆ ಮಾಡುತ್ತಿದ್ದ ಈ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ನಮ್ಮ ಅಭಿಪ್ರಾಯವನ್ನು ಬರೀ ಕಚೇರಿಯ ಆಂತರಿಕ ವಲಯದಲ್ಲಿ ಮತ್ತು ಸಂಗೀತೋತ್ಸವದ ಸಂಯೋಜಕರೊಂದಿಗೆ ಮಾತ್ರ ಚರ್ಚಿಸಿದ್ದೇವೆ, ಇದೇನೂ ತಪ್ಪಾಗಲಾರದು ಎಂದು ಭಾವಿಸಿ ನಾವಿಬ್ಬರೂ ಸುಮ್ಮನಾದೆವು. 

ಆದರೆ ಕನ್ನಡ ಕಲಾವಿದರಿಗೆ ಅವಕಾಶ ಇಲ್ಲದ ವಿಷಯವು, ಪ್ರಜಾವಾಣಿ ಕಾರ್ಯಾಲಯವನ್ನು ದಾಟಿ ಕನ್ನಡ ಹೋರಾಟಗಾರರನ್ನು ತಲುಪುತ್ತದೆ ಎಂದು ನಾನು ಕನಸುಮನಸಿನಲ್ಲೂ ಊಹಿಸಿರಲಿಲ್ಲ. ಏಕೀಕರಣದ ನಂತರ ರಾಜ್ಯದಲ್ಲಿ ಬೆಳೆಯುತ್ತಿದ್ದ ಕನ್ನಡಪರ ಚಳವಳಿ ಎಪ್ಪತ್ತು, ಎಂಬತ್ತರ ದಶಕದಲ್ಲಿ ಇನ್ನಷ್ಟು ಬಲಗೊಂಡಿತ್ತು. ಗೋಕಾಕ್ ಚಳವಳಿಗೆ ಬೆಂಬಲ ನೀಡಲು ನಿರಾಕರಿಸಿದ ಪ್ರಜಾವಾಣಿಯ ನಿಲುವು ಎಲ್ಲೆಡೆ ಜನಜನಿತವಾಗಿತ್ತು. ಕನ್ನಡದ ಪರವಾಗಿ ‘ಸಾಹಿತಿ- ಕಲಾವಿದರ ಬಳಗ’ ದ ಪ್ರದರ್ಶನಗಳು, ೧೯೮೮ ರಲ್ಲಿ ರೂಪುಗೊಂಡ ‘ಕನ್ನಡ ಶಕ್ತಿ ಕೇಂದ್ರ’ ದ ಹೋರಾಟಗಳು, ಅದಕ್ಕೆ ಡಾ. ಎಂ. ಚಿದಾನಂದಮೂರ್ತಿ ಅವರಂಥ ಪ್ರಸಿದ್ಧ ವಿದ್ವಾಂಸರ ನಾಯಕತ್ವ ಎಲ್ಲವೂ ನಾಡಿನಲ್ಲಿ ವಿಶಿಷ್ಟ ಕನ್ನಡ ಸಂವೇದನೆಯನ್ನು, ಭಾಷಾ ಪ್ರೇಮವನ್ನು ಗಟ್ಟಿಗೊಳಿಸುತ್ತಿತ್ತು- ಇವೆಲ್ಲದರ ಬಗ್ಗೆ ಪತ್ರಕರ್ತರಾದ ನಮಗೆ ಚೆನ್ನಾಗಿ ಅರಿವಿತ್ತು.

ಪ್ರಜಾವಾಣಿ ಸಂಗೀತೋತ್ಸವದ ೧೯೯೩ರ ವರ್ಷದ ಈ ಕಾರ್ಯಕ್ರಮದ ವಿಷಯ ಡಾ. ಎಂ. ಚಿದಾನಂದಮೂರ್ತಿ ಅವರಿಗೆ ತಲುಪಿದೆ ಎಂಬ ಸುದ್ದಿ ತಿಳಿದೊಡನೆ ನಾನು ನಿಜಕ್ಕೂ ಬೆಚ್ಚಿಬಿದ್ದೆ, ಸಹೋದ್ಯೋಗಿಗಳೊಂದಿಗೆ ಆ ಕುರಿತು ಮಾತನಾಡುವುದನ್ನೂ ತಕ್ಷಣ ನಿಲ್ಲಿಸಿದೆ. ಏಕೆಂದರೆ ಕನ್ನಡದ ಕಲಾವಿದರಿಗೆ ಅವಕಾಶ ಇಲ್ಲದ ವಿಚಾರ, ಇನ್ನು ಸಾರ್ವಜನಿಕ ಹೋರಾಟದ ವಿಷಯವಾಗುವುದು ಖಚಿತ ಅನ್ನಿಸಿತು. ಅದು ಹಾಗೆಯೇ ಆಯಿತು. ಆದರೆ ಅದರಲ್ಲಿ ನನ್ನ ಪಾತ್ರ ಇರಲು ಸಾಧ್ಯವೇ ಇರಲಿಲ್ಲ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಚಿದಾನಂದಮೂರ್ತಿಗಳು ಎಂ.ಎ. ಪದವಿಗೆ ಓದುವಾಗ (೧೯೭೧-೭೩) ನನಗೆ ಗುರುಗಳು. ನಂತರ ೧೯೭೫ರ ತುರ್ತು ಪರಿಸ್ಥಿತಿ ಕಾಲದಿಂದ ನಾನು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪ್ರತಿರೋಧಗಳಲ್ಲಿ, ಮೆರವಣಿಗೆಗಳಲ್ಲಿ, ಧರಣಿ ಮುಷ್ಕರಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ, ಎಂಬತ್ತರ ದಶಕದಲ್ಲಿ ಡಾ. ಚಿದಾನಂದಮೂರ್ತಿಗಳ ನೇತೃತ್ವದಲ್ಲಿ ಬೆಳೆದುಬಂದ ಹೋರಾಟಗಳಲ್ಲಿ ನಾನು ಭಾಗವಹಿಸಿಲ್ಲ.

ಬೆಂಗಳೂರಿನ ವಿಜಯನಗರದಲ್ಲಿ ನಮ್ಮ ಮನೆ ಹತ್ತಿರವೇ ಇದ್ದ ಗುರುಗಳಾದ ಡಾ. ಚಿದಾನಂದಮೂರ್ತಿ ಅವರ ವಿದ್ವತ್ತು, ಪ್ರಾಮಾಣಿಕತೆಯ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ ಎಂಬತ್ತರ ದಶಕದಲ್ಲಿ ಅವರೂ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ್ ಚಳವಳಿಗೆ ನಾವ್ಯಾರೂ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ವ್ಯಕ್ತಪಡಿಸಲಿಲ್ಲ ಮತ್ತು ಅದರಲ್ಲಿ ಪಾಲ್ಗೊಳ್ಳಲಿಲ್ಲ ಎನ್ನುವುದು ಖಂಡಿತ ಅವರ ಗಮನಕ್ಕೆ ಬಂದಿತ್ತು.

ಪ್ರಧಾನ ಸಂಪಾದಕರಾಗಿದ್ದ ಕೆ.ಎನ್. ಹರಿಕುಮಾರ್ ಅವರ ಪ್ರೇರಣೆಯಿಂದ ಗೋಕಾಕ್ ಚಳವಳಿಯನ್ನು ಸಾಮಾಜಿಕ ವಿಶ್ಲೇಷಣೆಗೆ ಒಳಪಡಿಸಿ ‘ಪ್ರಜಾವಾಣಿ’ ೧೨- ೧೦ – ೧೯೮೨ ರಂದು ‘ಭಾಷಾ ಚಳವಳಿ: ಮುಕ್ತ ವಿಚಾರ ಮಂಥನ’ ಎಂಬ ವಿಶೇಷ ಪುರವಣಿ ಪ್ರಕಟಿಸಿತು. ಅದರಲ್ಲಿ, ಡಾ. ಸಿ. ವೀರಣ್ಣ ಅವರು ಒಂದು ಲೇಖನ ಬರೆದದ್ದು ಮತ್ತು ಪುರವಣಿಯ ಸಂಯೋಜನೆ ತಂಡದಲ್ಲಿದ್ದ ನಾನು, ಆಗ ಕನ್ನಡ ಅಧ್ಯಯನ ಕೇಂದ್ರದಲ್ಲಿದ್ದ ಜಪಾನ್ ದೇಶದ ಬಹುಭಾಷಾ ವಿದ್ವಾಂಸ ಡಾ. ನೊರಿಹಿಕೊ ಉಚಿದ ಅವರಿಂದ ಭಾಷಾ ಚಳವಳಿ ಕುರಿತು ಒಂದು ಲೇಖನವನ್ನು ಬರೆಸಿದ್ದು ಚಿಮೂ ಅವರಿಗೆ ಒಂದಿಷ್ಟೂ ಇಷ್ಟವಾಗಿರಲಿಲ್ಲ. ಕನ್ನಡ ಭಾಷೆ, ಕನ್ನಡ ನಾಡು, ಕರ್ನಾಟಕ ಸಂಗೀತ ಇವುಗಳ ಬಗ್ಗೆ ಚಿಕ್ಕಂದಿನಿಂದ ನನಗೆ ಅಪಾರ ಪ್ರೀತಿ ಇದ್ದರೂ ಸೈದ್ಧಾಂತಿಕ ಭಿನ್ನತೆಯ ಈ ಹಿನ್ನೆಲೆಯಲ್ಲಿ, ಚಿಮೂ ನಾಯಕತ್ವದ ಯಾವುದೇ ಪ್ರತಿಭಟನಾ ಪ್ರದರ್ಶನಕ್ಕೆ ನಾನು ಸೇರಿಕೊಳ್ಳುವುದು ಸಾಧ್ಯವೇ ಇರಲಿಲ್ಲ. 

ಅದಕ್ಕಿಂತ ಮುಖ್ಯವಾದ ತಾತ್ವಿಕ ಬದ್ಧತೆಯ ವಿಚಾರವೆಂದರೆ, ನನಗೆ ಪತ್ರಿಕೋದ್ಯಮದಲ್ಲಿ ಉದ್ಯೋಗ, ಅವಕಾಶ ಮತ್ತು ಅಸ್ಮಿತೆ ಕೊಟ್ಟ ನನ್ನ ನೆಚ್ಚಿನ ‘ದಿ ಪ್ರಿಂಟರ್ಸ್ ಮೈಸೂರು (ಪ್ರೈ) ಲಿ.’ ಸಂಸ್ಥೆಯ ನೀತಿನಿರ್ಧಾರಗಳ ವಿರುದ್ಧ ನಡೆಯಬಹುದಾದ ಸಾರ್ವಜನಿಕ ಪ್ರತಿಭಟನಾ ಪ್ರದರ್ಶನದಲ್ಲಿ `ಸಂಗೀತದ ಕಾರಣ’ ಮುಂದಿಟ್ಟುಕೊಂಡು ಪಾಲ್ಗೊಳ್ಳುವುದೂ ಕೂಡ ನನ್ನಿಂದ ಸಾಧ್ಯವೇ ಇಲ್ಲ. ಸಂಗೀತದ ಮೇಲಿನ ಪ್ರೇಮದಿಂದ ರಾಜ್ಯದ ಕಲಾವಿದರಿಗೆ ಅವಕಾಶ ಕೊಡುವ ವಿಷಯವನ್ನು ಪತ್ರಿಕೆಯ ಆಂತರಿಕ ವಲಯದೊಳಗೆ ಚರ್ಚಿಸಿದ್ದೆನೇ ಹೊರತು ಅದನ್ನು ಕುರಿತು ಬಹಿರಂಗವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಪತ್ರಿಕಾವೃತ್ತಿಯಲ್ಲಿ ನನಗೆ ಅದ್ಭುತ ಅವಕಾಶ ಕೊಟ್ಟ ಎರಡೂ ಪತ್ರಿಕಾ ಸಂಸ್ಥೆಗಳ ವಿಚಾರದಲ್ಲೂ ನಾನು ಈ ನೀತಿ ಸಂಹಿತೆಯನ್ನು ಮನಃಪೂರ್ವಕವಾಗಿ ಸದಾ ಪಾಲಿಸಿದ್ದೇನೆ.  

ಇನ್ನು ಪ್ರಜಾವಾಣಿ ಸಂಗೀತೋತ್ಸವದಲ್ಲಿ ಕನ್ನಡ ಕಲಾವಿದರಿಗೆ ಅವಕಾಶ ಇಲ್ಲ ಎಂದು ಪ್ರತಿಭಟಿಸಿ ‘ಡಾ. ಚಿದಾನಂದ ಮೂರ್ತಿಗಳ ನೇತೃತ್ವದಲ್ಲಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ಪ್ರಜಾವಾಣಿ- ಡೆಕನ್ ಹೆರಾಲ್ಡ್ ಸಂಸ್ಥೆ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು, ಪ್ರಜಾವಾಣಿ ಉದ್ಯೋಗಿಯಾಗಿದ್ದ ನಾನು ಅದರಲ್ಲಿ ಭಾಗವಹಿಸಿದ್ದನ್ನು ವತ್ಸಲಾ ವೇದಾಂತ ಅವರು ಮೊದಲು ನೋಡಿದರು, ನಂತರ ಅದನ್ನು ಜಂಟಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದರು, ಅವರು ಅದನ್ನು ತಮ್ಮ ಛೇಂಬರಿನ ಕಿಟಕಿಯ ಮೂಲಕ ನೋಡುವುದು ಸುಲಭವಾಗಿತ್ತು’ – ಎನ್ನುವ ಈ ಮಿಥ್ಯಾರೋಪಗಳಿಗೆ ಏನು ಹೇಳಬೇಕೋ ನನಗೆ ನಿಜಕ್ಕೂ ತಿಳಿಯುತ್ತಿಲ್ಲ! ಸತ್ಯವಾದ ಸಂಗತಿ ಏನೆಂದರೆ, ಯಾವ ದಿನ ಡಾ. ಚಿದಾನಂದಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಿಗದಿಯಾಗಿತ್ತೋ ಅಂದು ಬೆಳಿಗ್ಗೆ ಮನೆಮನೆಗೆ ಬಂದ ಪತ್ರಿಕೆಯಲ್ಲಿ ‘ಪ್ರಜಾವಾಣಿ ಸಂಗೀತೋತ್ಸವ ಕಾರ್ಯಕ್ರಮ’ ವನ್ನು ರದ್ದು ಮಾಡುವ ಆಡಳಿತ ವರ್ಗದ ನಿರ್ಧಾರ ಪ್ರಕಟವಾಗಿತ್ತು, ಅಂದು ಸಂಗೀತೋತ್ಸವವೇ ನಡೆಯಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಪ್ರತಿಭಟನಾ ಪ್ರದರ್ಶನವೂ ನಡೆಯದೆ ರದ್ದಾಯಿತು. ನಡೆಯದ ಪ್ರತಿಭಟನಾ ಪ್ರದರ್ಶನದಲ್ಲಿ ಮುಂಚೂಣಿಯಲ್ಲಿ ನಾನು ಹೇಗೆ ಕಾಣಿಸಿದೆನೋ ಗೊತ್ತಿಲ್ಲ. ಅದು ಒಂದೊಮ್ಮೆ ನಡೆದಿದ್ದರೂ ನಾನು ಅದರಲ್ಲಿ ಖಂಡಿತ ಭಾಗವಹಿಸುತ್ತಿರಲಿಲ್ಲ.

ಐವತ್ತು ವರ್ಷಗಳಿಂದ ಕನ್ನಡ ಹೋರಾಟದಲ್ಲಿ ಸಕ್ರಿಯರಾಗಿರುವ ಮತ್ತು ಡಾ. ಚಿದಾನಂದಮೂರ್ತಿಗಳ ಅತ್ಯಂತ ನಿಕಟವರ್ತಿಯಾಗಿದ್ದ ರಾ.ನಂ. ಚಂದ್ರಶೇಖರ ಅವರು ಕರ್ನಾಟಕದ ಕನ್ನಡಪರ ಚಳವಳಿ ಕುರಿತು ಬರೆದಿರುವ ‘ಕನ್ನಡ ಡಿಂಡಿಮ’ ಗ್ರಂಥದಲ್ಲಿ ‘ಪ್ರಜಾವಾಣಿ ಸಂಗೀತೋತ್ಸವ’ ವಿರುದ್ಧ ಯೋಜಿಸಿದ್ದ ಪ್ರತಿಭಟನಾ ಪ್ರದರ್ಶನ ಕುರಿತು ಹೀಗೆ ಬರೆದಿರುವುದನ್ನು ಇಲ್ಲಿ ಉಲ್ಲೇಖಿಸುತ್ತೇನೆ :

‘ಕನ್ನಡದ ಪ್ರಮುಖ ಪತ್ರಿಕೆಗಳಲ್ಲೊಂದಾದ ಪ್ರಜಾವಾಣಿಯು ೧೯೯೨ ರಿಂದ ಸಂಗೀತೋತ್ಸವವನ್ನು ಆರಂಭಿಸಿತು. ಕನ್ನಡಿಗರಿಂದಲೇ ಬೆಳೆದು ಕರ್ನಾಟಕದಲ್ಲಿಯೇ ಬಹುಪಾಲು ಓದುಗರನ್ನು ಪಡೆದಿರುವ ಪ್ರಜಾವಾಣಿ ಪತ್ರಿಕೆಯು ಅಪ್ಪಿತಪ್ಪಿಯೂ ಸ್ಥಳೀಯ ಸಂಗೀತಗಾರರನ್ನು ಆಹ್ವಾನಿಸಿರಲಿಲ್ಲ. ೨೬- ೧- ೧೯೯೩ ರಿಂದ ಆರು ದಿನಗಳ ಸಂಗೀತೋತ್ಸವದಲ್ಲಿ ಕರ್ನಾಟಕದ ಪ್ರಮುಖ ಗಾಯಕ ಅಥವಾ ವಾದಕರು ಯಾರೂ ಇರಲಿಲ್ಲ. ಐದು ಜನ ತಮಿಳುನಾಡಿನವರು ಹಾಗೂ ಒಬ್ಬರು ಕೇರಳದವರನ್ನು ಮಾತ್ರ ಆಹ್ವಾನಿಸಲಾಗಿತ್ತು.

ಆ ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಆಗಿರುವ ಅನ್ಯಾಯದ ಬಗ್ಗೆ ಜನರ ಗಮನ ಸೆಳೆಯುವ ಉದ್ದೇಶದಿಂದ ಡಾ. ಎಂ. ಚಿದಾನಂದಮೂರ್ತಿ ಮತ್ತು ತಿರುಮಲೆ ಶ್ರೀರಂಗಾಚಾರ್ ಅವರು ಸೇರಿ ಬೆಂಗಳೂರಿನ ಕಲಾವಿದರ ಸಹಕಾರದಿಂದ ‘ಸಾಂಕೇತಿಕ ಧರಣಿ’ಯ ವ್ಯವಸ್ಥೆ ಮಾಡಿದರು. ಈ ಬೆಳವಣಿಗೆಯಿಂದ ವಿಚಲಿತರಾದ ಪ್ರಜಾವಾಣಿ ಪತ್ರಿಕೆಯವರು ಆ ಸಂಗೀತೋತ್ಸವವನ್ನೇ ರದ್ದು ಮಾಡಿದರು. ‘ಧರಣಿ’ ನಡೆಸುವ ಅಗತ್ಯವೇ ಬರಲಿಲ್ಲ.’

(‘ಕನ್ನಡ ಡಿಂಡಿಮ’ ಗ್ರಂಥದಲ್ಲೇ ಮುಂದೆ ಹೇಳುವಂತೆ – ಮರುವರ್ಷ ಡೆಕನ್ ಹೆರಾಲ್ಡ್ ನೃತ್ಯೋತ್ಸವ ೧-೨-೧೯೯೪ ರಿಂದ ಐದು ದಿನಗಳ ಕಾಲ ನಡೆಯಿತು. ಅದರಲ್ಲೂ ಕರ್ನಾಟಕದ ನೃತ್ಯ ಕಲಾವಿದರನ್ನು ಕಡೆಗಣಿಸಲಾಗಿದೆ ಎಂದು ನೃತ್ಯೋತ್ಸವದ ಹಿಂದಿನ ದಿನ (೩೧- ೧- ೧೯೯೪) ಕನ್ನಡ ಶಕ್ತಿ ಕೇಂದ್ರವು ಇತರ ಸಂಘಟನೆಗಳ ಕಾರ್ಯಕರ್ತರು ಮತ್ತು ಕಲಾವಿದರೊಂದಿಗೆ ಪತ್ರಿಕಾಲಯದ ಮುಂದೆ ಪ್ರದರ್ಶನ ನಡೆಸಿತು. ನಂತರ ನೃತ್ಯೋತ್ಸವ ನಡೆದ ಚೌಡಯ್ಯ ಸ್ಮಾರಕ ಭವನದ ಮುಂದೆ ನೃತ್ಯ ಗುರುಗಳು, ನೃತ್ಯ ಕಲಾವಿದರೂ ಸೇರಿದಂತೆ ಕನ್ನಡ ಕಾರ್ಯಕರ್ತರು ಸೇರಿದ್ದರು. ಆದರೆ ಇದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ.)

‍ಲೇಖಕರು Avadhi

February 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಅವರು ಹಾರ ತೆಗೆದು ಬಿಸಾಡಿದರು…

ಅವರು ಹಾರ ತೆಗೆದು ಬಿಸಾಡಿದರು…

ನೆಂಪೆ ದೇವರಾಜ್ ಹಾರ ಕಸಿದುಕೊಂಡು ಬಿಸಾಡಿದ ರೀತಿಗೆ ಇಡೀ ಸಭೆ ರೌರವ ಮೌನದ ಬಿಕ್ಕಳಿಕೆಯಾಗಿತ್ತು. ಇಂದು ಮಹಾ ರೈತನಾಯಕನ ಜನುಮ ದಿನ ಆ ಒಂದು...

‘ಕುಣಿ ಕುಣಿ ನವಿಲೆ’ ಫೋಟೋ ಆಲ್ಬಮ್

‘ಕುಣಿ ಕುಣಿ ನವಿಲೆ’ ಫೋಟೋ ಆಲ್ಬಮ್

ಖ್ಯಾತ ರಂಗ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್‌ ಅವರು ಶಿವಮೊಗ್ಗದಲ್ಲಿ 'ಹೊಂಗಿರಣ' ತಂಡಕ್ಕೆ ಕುಣಿ ಕುಣಿ ನವಿಲೆ ನಾಟಕ ನಿರ್ದೇಶಿಸಿದರು. ಎಚ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This