ಆರ್ ವಿ ಭಂಡಾರಿ ಇನ್ನಿಲ್ಲ

-ಜಿ ಎನ್ ಮೋಹನ್ 
ಆರ್ ವಿ ಭಂಡಾರಿ ಇನ್ನಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ಮನಸ್ಸು ಭಾರವಾಗಿದೆ. ಇತ್ತೀಚಿಗೆ ನಟರಾಜ್ ಹುಳಿಯಾರ್ ತೇಜಸ್ವಿ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ಹೆಡ್ ಮಾಸ್ತರ್ ಗಳು ಖಾಲಿ ಆಗುತ್ತಿದ್ದಾರೆ ಎಂದಿದ್ದ. ಹೋರಾಟಕ್ಕೆ, ಸಾಮಾಜಿಕ ಚಳುವಳಿಗೆ, ಜನಪರ ಮನಸ್ಸು ರೂಪಿಸುವುದಕ್ಕೆ ತುಡಿದಿದ್ದ ಲಂಕೇಶ್, ತೇಜಸ್ವಿ, ರಾಮದಾಸ್ ಒಬ್ಬೊಬ್ಬರಾಗಿ ಇಲ್ಲವಾಗಿದ್ದು ಖೇದ ಉಂಟು ಮಾಡಿತ್ತು. ಆ ಸಾಲಿಗೆ ಇನ್ನೊಬ್ಬರು ಹೆಡ್ ಮಾಸ್ತರ್ ದಾಖಲಾದರು.
 
ಆರ್ ವಿ ಭಂಡಾರಿ ವೃತ್ತಿಯಲ್ಲಿಯೂ, ಸಾಮಾಜಿಕ ಬದುಕಿನಲ್ಲಿಯೂ ಹೆಡ್ ಮಾಸ್ತರ್ ಆಗಿದ್ದವರು. ಎಕ್ಕುಂಡಿ ಹೇಗೆ ಸದ್ದಿಲ್ಲದೆ ಶಿಷ್ಯ ಗಧನವನ್ನು ರೂಪಿಸಿದರೋ ಹಾಗೆ ಭಂಡಾರಿ ಅವರೂ ಸಹಾ.
 
ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ ಕೃತಿ
ನನಗೆ ಈಗಲೂ ನೆನಪಿದೆ. ಎಕ್ಕುಂಡಿ ಅವರು ತಮ್ಮ ಸಾಮಾಜಿಕ ಕಳಕಳಿಯ ಬಗ್ಗೆ ಮಾತನಾಡುತ್ತಾ ನನಗೆ ಹೋರಾಟದ ಅಂಗಳಕ್ಕೆ ಧುಮುಕಲು ಸಾಧ್ಯವೇ ಆಗಲಿಲ್ಲ. ಆದರೆ ಒಂದು ತೃಪ್ತಿಯಿದೆ. ಹೋರಾಟಕ್ಕೆ ಯೋಧರನ್ನು ತಯಾರು ಮಾಡಿದ್ದೇನೆ ಎಂದಿದ್ದರು. ಯೋಧನಾಗಿ ರಣರಂಗಕ್ಕೆ ಹೋಗಲಾಗಲಿಲ್ಲ ಆದರೆ ರಣರಂಗಕ್ಕೆ ಹೋದವರಿಗೆ ಕತ್ತಿ ಗುರಾಣಿ ಶಸ್ತ್ರಗಳನ್ನು ತಯಾರಿಸಿಕೊಟ್ಟಿದ್ದೇನೆ ಎಂದಿದ್ದರು.
 
ಭಂಡಾರಿ ಯೋಧರಾಗಿ ರಣರಂಗಕ್ಕೂ ಧುಮುಕಿದವರು ಹಾಗೂ ರಣರಂಗದಲ್ಲಿದ್ದವರಿಗೆ ಶಸ್ತ್ರಾಸ್ತ್ರಗಳನ್ನು ರೂಪಿಸಿಕೊಟ್ಟವರೂ ಹೌದು. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ, ಪರೋಕ್ಷವಾಗಿ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸಿದವರು ಅವರು.
ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಮಾರಂಭದಲ್ಲಿ
ಭಂಡಾರಿ ಬಂಡಾಯ ಚಳವಳಿಯ ಉಸಿರಾಗಿದ್ದರು. ಮಂಗಳೂರು ವಿಶ್ವವಿದ್ಯಾಲಯದಿಂದ ಇದೇ ವಿಷಯದಲ್ಲಿ ಸಂಶೋಧನೆ ನಡೆಸಿದರು. ಅವರ ನಾಟಕಗಳಂತೂ ಕಿರಣ ರ ಕೈಗೆ ಸಿಕ್ಕು ನಾಡಿನ ಎಲ್ಲೆಡೆ ಓಡಾಡಿತ್ತು. ‘ಭಾವನಾ’ ದಲ್ಲಿ ಮಂಚದ ಕುರಿತು ಒಂದು ಕಥೆ ಬರೆದಿದ್ದರು. ನನ್ನನ್ನು ಗಾಢವಾಗಿ ಕಾಡಿದ ಕಥೆ ಅದು. ತನ್ನದೇ ಆದ ಒಂದು ಮಂಚ ಬೇಕು ಎಂದು ಆಸೆ ಪಟ್ಟ ಕಥೆ.
 
ಮಗ ವಿಠ್ಠಲ ಭಂಡಾರಿ ಸೊಸೆ ಯಮುನಾ ಇಬ್ಬರೂ ಹೋರಾಟದಲ್ಲಿ ಪ್ರತಿಯೊಬ್ಬರೂ ಗುರುತಿಸುವ ಹೆಸರು. ಅವರನ್ನು ರೂಪಿಸುವುದರ ಹಿಂದೆ ಆರ್ ವಿ ಭಂಡಾರಿ ಅವರ ವಿಚಾರಧಾರೆಯ ಪ್ರಭಾವವಿತ್ತು. ಆವರು ಹೇಗೆ ಸದಾ ತಮ್ಮ ಮುಂದಿನ ಜನಾಂಗಕ್ಕೆ ಹೋರಾಟದ ಹುರುಪನ್ನು ದಾಟಿಸುತ್ತಿದ್ದರು ಎಂಬುದಕ್ಕೆ ಇದು ಉದಾಹರಣೆಯಾಗಿತ್ತು.
 
ಅವರ ಗರಡಿಯಲ್ಲಿ ಪಳಗಿದ ಎಷ್ಟೊಂದು ಮಂದಿ ಬೆಳಕು ಹಂಚುವ ದೊಂದಿ ಹಿಡಿದಿದ್ದಾರೆ. ಆದರೆ ‘ಬೆಳಕು ಹಂಚಿದ ಬಾಲಕ’ ( ಅವರ ನಾಟಕದ ಹೆಸರು) ದೀಪಾವಳಿಯ ದಿನಗಳಲ್ಲೇ ಜಾಗತೀಕರಣದ ಕತ್ತಲು ಎಲ್ಲರನ್ನೂ ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಎದ್ದು ಹೋಗಿದ್ದಾರೆ.

‍ಲೇಖಕರು avadhi

October 25, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This