ಆಸ್ಫೋಟ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಈ ಎಲ್ಲ ಕೆಲಸಗಳಲ್ಲಿ ಮುಳುಗಿ ಹೋಗಿದ್ದರೂ ನಾನು ನನ್ನ ಸುತ್ತಲ ಆಗು ಹೋಗುಗಳಿಗೆ ವಿಮುಖನಾಗಿರಲಿಲ್ಲ. ನನ್ನ ಬಗ್ಗೆ ಏನೆಲ್ಲ ‘ಪಿಸುಮಾತುಗಳು-ಗುಸುಗುಸು ಮಾತುಗಳು’ ಕ್ಯಾಂಟೀನ್‌ನಲ್ಲಿ, ಪ್ರೆಸ್ ಕ್ಲಬ್‌ನಲ್ಲಿ, ಪ್ರೆಸ್ ರೂಮಿನಲ್ಲಿ ನಡೆಯುತ್ತಿವೆ ಇತ್ಯಾದಿ ಸಮಸ್ತ ವ್ಯಕ್ತಿ-ವಿಚಾರ-ಸಂಗತಿಗಳಿಗೆ ಜಾಗೃತನಾಗಿದ್ದು ಅವುಗಳನ್ನು ಎದೆಗೆ ಬರಮಾಡಿಕೊಳ್ಳುತ್ತಿದ್ದೆ. ‘ದಲಿತ ವಿರೋಧಿ-ಜಾತಿವಾದಿ-ಸ್ವಜನ ಪಕ್ಷಪಾತಿ-ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ-ನವ್ಯ ಪಕ್ಷಪಾತಿ-‘ ಇತ್ಯಾದಿ ಪಿಸುಗುಸು ಮಾತುಗಳು.

ಬ್ರಾಹ್ಮಣರೊಳಗೇ ಅಸ್ಪೃಶ್ಯನಾಗಿದ್ದ ನನಗೆ ಈ ‘ಪಿಸುಗುಸು’ ಮಾತುಗಳ ಹಿಂದಿನ ನೋವು, ಆಕ್ರೋಶಗಳ ಅರಿವಿತ್ತು, ಅನುಭವವಿತ್ತು. ಆದರೆ ಈ ಮೊದಲು ಎಂ.ಬಿ.ಸಿಂಗ್, ಹೇಮದಳ ರಾಮದಾಸ್, ದಾಸಪ್ಪ, ಮುನಿಯಪ್ಪ, ದೇವನಾಥ್, ಕ್ರೃಷ್ಣಾರೆಡ್ಡಿ, ಟಿ. ನಾಗರಾಜು, ಅರ್ಜುನ ದೇವ, ಶ್ರೀಮತಿ ಕುಶಾಲ ಡಿಮೆಲೊ ಮೊದಲಾದವರು ನೀಡಿದ ಸಹಕಾರ, ತೋರಿದ ಸ್ನೇಹ-ಪ್ರೀತಿ-ವಾತ್ಸಲ್ಯಗಳಿಗೂ ಹೊಸ ಪೀಳಿಗೆಯ ಪತ್ರಕರ್ತರು ತೋರುತ್ತಿರುವ ಈ ಪರಿಯ ‘ಪ್ರೀತಿ’ ನಡುವಣ ಕಂದರ ಕಂಡು ಕಳವಳವಾಯಿತು. ಹೊಸ ಪೀಳಿಗೆಯ ಪತ್ರಕರ್ತರು ಹೆಚ್ಚು ಮಂದಿ ಸ್ನಾತಕೋತ್ತರ ಪದವೀಧರರರಾಗಿದ್ದು ಪಠ್ಯೇತರ ರಾಜಕೀಯ-ಸಾಮಾಜಿಕ ಓದುಗಳಲ್ಲೂ ಮುಂದಿದ್ದವರು, ಪ್ರಜ್ಞಾವಂತರು.

ಶತಶತಮಾನಗಳಿಂದ ತುಳಿತಕ್ಕೊಳಗಾದ ಅವರ ನೋವು, ಶೋಷಣೆ ವಿರೋಧಿ ಆಕ್ರೋಶಗಳು ಈಗ ಅಭಿವ್ಯಕ್ತಿ ಪಡೆಯುತ್ತಿದ್ದವು. ಜೊತೆಗೇ ಆ ದಿನಗಳ ಕಾಲದ ಒತ್ತಡವೂ ಇಂಥ ಅಭಿವ್ಯಕ್ತಿಗೆ ಪೂರಕವಾಗಿದ್ದವು. ಶಿವರುದ್ರಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ವಿಚಾರ ಸಂಕಿರಣ, ನಂತರ ನಡೆದ ಮೈಸೂರು ಜಾತಿ ವಿನಾಶ ಸಮ್ಮೇಳನ, ಸಾಹಿತ್ಯದಲ್ಲಿ ಕೇಳಿ ಬಂದ ದಲಿತ ಬಂಡಾಯ ದನಿಗಳು ಈ ಹಿನ್ನೆಲೆಯಲ್ಲಿ ತುಳಿತದ ವಿರುದ್ಧ ದನಿ ಎತ್ತುವ, ತಮ್ಮನ್ನು ಸಮರ್ಥಿಸಿಕೊಳ್ಳುವ, ಕಂಠೋಕ್ತವಾಗಿ ತಮ್ಮ ವಾದವನ್ನು ಪ್ರತಿಪಾದಿಸುವ, ತಮ್ಮ ಇರುವಿಕೆಯನ್ನು ಸಾಕ್ಷಾತ್ಕರಿಸುವ ನವ ಜಾಗೃತಿಯೊಂದು ಉಂಟಾಗಿದ್ದು, ಅದು ಈ ‘ಕಾಲದ ರೂಪಕ’ವಾಗಿ ಅವರಲ್ಲಿ ಪ್ರಕಟಗೊಳ್ಳುತ್ತಿದೆ ಎಂದೇ ನಾನು ಭಾವಿಸಿದ್ದೆ. ಕೆ.ವಿ. ಸುಬ್ಬಣ್ಣನವರು ಶ್ರೀ ಬಸವಲಿಂಗಪ್ಪನವರಿಗೆ ಬರೆದ ಪತ್ರವೊಂದರ(೧೯೯೦) ಮಾತುಗಳು ನನಗೆ ನೆನಪಾದವು. ಸುಬ್ಬಣ್ಣನ ಮಾತುಗಳು ಹೀಗಿವೆ:

      ‘…..ನಿಮಗೆ ಗರ್ವ ಇರುವುದು ಸುಳ್ಳಲ್ಲ.ಆದರೆ ಅದು ನಿಮಗೆ ಭೂಷಣ. ಇವತ್ತು ನಮ್ಮ ಸಂದರ್ಭದಲ್ಲಿ

      ಒಬ್ಬ ಬ್ರಾಹ್ಮಣನಿಗೆ ಅಗತ್ಯವಾದದ್ದು ವಿನಯ. ದಲಿತನಿಗೆ ಅಗತ್ಯವಾದದ್ದು ಗರ್ವ. ಭೂತ ಕಾಲದ

      ‘ಕಾಲದೋಷ’ದಿಂದ ಮುಕ್ತಿ ಪಡೆಯಲಿಕ್ಕೆ ಅವನಿಗೆ ವಿನಯ ಬೇಕು, ಇವನಿಗೆ ಗರ್ವ ಬೇಕು.

      ಆತ ವಿನಿಯದಿಂದ ಇವನಿಗೆ ಸಮೀಪವಾಗಲು ಯತ್ನಿಸಬೇಕು ಮತ್ತು ಈತ ಗರ್ವದಿಂದ ಅವನಿಗೆ

      ಹತ್ತಿರ ಹೋಗಿ ಸರೀಕನಾಗಿ ನಿಲ್ಲಬೇಕು’

ನನ್ನ ವಿರುದ್ಧ ಕೇಳಿಬರುತ್ತಿರುವ ಮಾತುಗಳು, ಅಸಹನೆಗಳು ಈ ‘ಕಾಲದೋಷ’ದ ವಿರುದ್ಧ ಇವತ್ತಿನ ‘ಆಕ್ರೋಶ’ವಿರಬಹುದು.

ಭೂತ ಕಾಲದ ಪಾಪಲೇಪಿತ ನಾನು ಎಂದು ಪಾಪಪ್ರಜ್ಞೆಯಿಂದ ನರಳಿ ಬಳಲಿದೆ. ಕೇಳಿ ಬರುತ್ತಿರುವ ವಿರೋಧ, ಪ್ರತಿಭಟನೆ, ಅಸಹನೆ, ಆಕ್ರೋಶಗಳೆಲ್ಲ ಅಪೌರುಷೇಯ ಗ್ರಂಥಗಳ, ಸ್ಮೃತಿಗಳ ‘ಸ್ಥಾಪಿತ ವ್ಯವಸ್ಥೆ’ ವಿರುದ್ಧ ಎಂದು ತೋರಿತು. ‘ವಿನಯ’ನಾಗಿದ್ದುಕೊಂಡು ಅವರ ಅಹಂ-ಅಸಹನೆಗಳ ಅಭಿವ್ಯಕ್ತಿಗೆ ಅಡ್ಡಿಪಡಿಸದೆ ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದೆ.

ನಾನು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದು ನನ್ನ ಬಗ್ಗೆ ಇದ್ದ ದೂರು ಅಥವಾ ಅಸಮಾಧಾನಗಳಲ್ಲಿ ಒಂದಾಗಿತ್ತು.

ಎರಡನೆಯದು ನಾನು ‘ಬೈಲೈನ್’ ಕೊಡುವುದರಲ್ಲಿ ಉದಾರಿಯಲ್ಲ ಹಾಗೂ ಕೆಲವೊಂದು ವಿಶೇಷ ಕೆಲಸಗಳನ್ನು ನೀಡುವುದರಲ್ಲಿ ಕೆಲವರ ಬಗ್ಗೆ ಹೆಚ್ಚಿನ ಒಲವು ತೋರುತ್ತೇನೆ-

ಮೂರನೆಯದಾಗಿ ನಾನು ಸ್ವಜನ ಪಕ್ಷಪಾತಿ-ನನ್ನ ಜಾತಿಯ ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುತ್ತೇನೆ, (ಇದನ್ನು ಒಬ್ಬಿಬ್ಬರು ಬಂದು ನೇರವಾಗಿಯೇ ನನ್ನ ಬಳಿ ‘ನೀವು ಸ್ವಜನಪಕ್ಷಪಾತಿ’ ಎಂದು ಮಾತಾಡಿಕೊಳ್ಳುತ್ತಾರೆ ಎಂದು ಹೇಳಿದ್ದೂ ಉಂಟು). ನಿಜವಾಗಿ ಹೇಳಬೇಕಾದರೆ, ನನ್ನ ಓರಿಗೆಯವರು ಒಬ್ಬಿಬ್ಬರು ಬಿಟ್ಟರೆ, ಉಳಿದಂತೆ ಯಾರು ಯಾವ ಜಾತಿ-ಯಾವ ಕುಲ ಎಂಬುದು ನನಗೆ ತಿಳಿದೇ ಇರಲಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ನನಗಿರಲಿಲ್ಲ.

ಇವೆಲ್ಲ ಅಭಿಪ್ರಾಯಗಳಾಗಿದ್ದವು. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ‘ಪ್ರವಾ’ ಮುನ್ನಡೆಸಬೇಕು ಎಂಬ ನಿರ್ಧಾರದಿಂದಲೇ ಹೊಸ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದೆ. ಎಲ್ಲವನ್ನೂ ನಾನೇ ಮಾಡುತ್ತೇನೆ ಎನ್ನುವ ಅಹಂಕಾರ ನನಗಿರಲಿಲ್ಲ. ಆದರೆ ಇದೊಂದು ಸೂಕ್ಷ್ಮ ಸಂಗತಿಯಾಗಿತ್ತು. ಯಾರೇ ಒಬ್ಬರನ್ನು ಕರೆದು ಅವರೊಡನೆ ಸಮಾಲೋಚಿಸಿದ ಕೂಡಲೇ, ‘ಸಂಪಾದಕರಿಗೂ ಅವರಿಗೂ ಬಹಳ ಖಾಸಾಖಾಸ ಕಣಪ್ಪ. ಹೀ ಈಸ್ ಹಿಸ್ ಬ್ಲೂ ಐಡ್ ಬಾಯ್’ ಎನ್ನುವ ಗುಸುಗುಸು ಶುರುವಾಗುತ್ತಿತ್ತು. ಇಂಥ ಅನುಭವದ ನಂತರ ನಾನು ಸಂಜೆಯ ಸಭೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ.

ಆ ಸಭೆಯಲ್ಲೇ ಸಂಬಂಧಪಟ್ಟವರ ಜೊತೆಗೆ ಎಲ್ಲರ ಸಮಕ್ಷಮದಲ್ಲೇ ಆಗಬೇಕಾದ ಕೆಲಸಗಳು/ಸುಧಾರಣೆಗಳ ಬಗ್ಗೆ ಚರ್ಚೆ/ಸಮಾಲೋಚನೆಗಳನ್ನು ನಡೆಸುತ್ತಿದ್ದೆ. ಬಾಕಿಯಂತೆ ‘ಮೌನ’ಕ್ಕೆ ಶರಣಾಗುತ್ತಿದ್ದೆ. ಒಬ್ಬೊಬ್ಬರನ್ನೇ ಕರೆದು ಚರ್ಚಿಸುತ್ತಿರಲಿಲ್ಲ. ಈ ‘ವಿಶ್ವಾಸಕ್ಕೆ ತೆಗೆದುಕೊಳ್ಳುವುದು’ ಎನ್ನುವುದರಲ್ಲೇ ಸಂಚಿನ ಒಂದು ಘಾಟು ಇದೆ ಎಂದೇ ಯಾರನ್ನೂ ಕರೆದು ರಹಸ್ಯವೆಂಬಂತೆ ಮಾತುಕತೆ ನಡೆಸುತ್ತಿರಲಿಲ್ಲ. ಗೋಪ್ಯ ಸಮಾಲೋಚನೆ ನಡಸುತ್ತಿರಲಿಲ್ಲ. ಬಹಿರಂಗವಾಗಿಯೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ.

ವಿಶೇಷ ಲೇಖನಗಳಿಗೆ. ವರದಿಗಳಿಗೆ ಬರೆದವರ ಹೆಸರನ್ನು ಶುರುವಿಗೆ ಸೂಚಿಸುವ ಈ ‘ಬೈಲೈನ್’ ಬಗ್ಗೆ ಟಿಎಸ್ಸಾರ್ ಕಾಲದಿಂದಲೂ ಚರ್ಚೆ, ವಾದ ವಿವಾದಗಳಿವೆ. ಲೇಖನ/ವರದಿಯ ವಸ್ತು-ವಿಷಯ, ಅದರ ಸಾರ್ವತ್ರಿಕ ಮಹತ್ವ, ಮಾನವಾಸಕ್ತಿ, ಆದರೆ ಬಗ್ಗೆ ನಡೆಸಿರುವ ಅಧ್ಯಯನ/ಸಂಶೋಧನೆ/ತನಿಖೆ, ಅದನ್ನು ಮಂಡಿಸಿರುವ ರೀತಿ, ಭಾಷೆ, ಶೈಲಿ ಇತ್ಯಾದಿ ಹಲವಾರು ಮಾನದಂಡಗಳನ್ನು ಅನುಸರಿಸಿ ‘ಬೈಲೈನ್’ಬಗ್ಗೆ ನಿರ್ಧರಿಸಲಾಗುತ್ತಿತ್ತು. ಇದು ನನ್ನೊಬ್ಬನದೇ ನಿರ್ಧಾರವಾಗಿರುತ್ತಿರಲಿಲ್ಲ.

ಸುದ್ದಿ ಸಂಪಾದಕರು/ಮುಖ್ಯ ವರದಿಗಾರರ ಜೊತೆ ಸಮಾಲೋಚಿಸಿಯೇ, ಬೈಲೈನ್ ಕೊಡಬೇಕೆ-ಬೇಡವೇ ನಿರ್ಧಾರ ಕೈಗೊಳ್ಳುತ್ತಿದ್ದೆ. ಎಲ್ಲರಿಗೂ ತಮ್ಮ ಹೆಸರನ್ನು ಪ್ರಿಂಟ್ನಲ್ಲಿ ಕಾಣುವ ಆಸೆ ಸಹಜ. ಈ ಕೆಲವು ಕಾರಣಗಳಿಂದ ಬೈಲೈನ್ ಸಿಗದಿದ್ದಾಗ ಅದಕ್ಕೆ ‘ಬ್ಲೂ ಐಡ್ ಬಾಯ್’ ಎಂದೋ ಸ್ವಜನ ಪಕ್ಷಪಾತ ಎಂಬಂಥ ಕಾರಣಗಳನ್ನು ಕೆಲವರು ಹುಡುಕುತ್ತಿದ್ದರು. ಪ್ರತಿಭೆ, ಸಾಮರ್ಥ್ಯಗಳಿಂದ ಅದನ್ನು ಪಡೆದುಕೊಳ್ಳಳಬೇಕು ಎಂಬ ಅರಿವಿಗಿಂತ ಬೇರೆ ರೀತಿಯ ಆಲೋಚನೆಗಳೆ ಹೆಚ್ಚು ಜನರ ತಲೆಯಲ್ಲಿ ಕೊಂಡಿಯಾಡಿಸುತ್ತಿದ್ದವು. ಇದು ಪತ್ರಕರ್ತರು/ಪತ್ರಿಕಾ ವೃತ್ತಿ ಅವನತಿಯತ್ತ ಜಾರುತ್ತಿರುವುದರ ಇಂಗಿತವೂ ಆಗಿತ್ತು.

ಇನ್ನು ವಿಶೇಷ ಲೇಖನ/ವರದಿಗಳ ಬಗ್ಗೆ. ವರದಿಗಾರಿಕೆ ಕೆಲಸವನ್ನು ಮುಖ್ಯವರದಿಗಾರರರು ನೋಡಿಕೊಳ್ಳುತ್ತಿದ್ದರು. ವಿಶೇಷ ವರದಿ/ತನಿಖಾ ವರದಿ ಇಂಥಾದ್ದು ಏನು ಆಗ ಬೇಕಾದರೂ ಅವರಿಗೆ ತಿಳಿಸುತ್ತಿದ್ದೆ. ನಾನು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಅವರಿಗೆ ಆ ಸ್ವಾತಂತ್ರ್ಯ ಕೊಟ್ಟಿದ್ದೆ. ಅವರ ಗೈರು ಹಾಜರಿಯಲ್ಲಿ ಮಾತ್ರ ನಾನು ಒಮ್ಮೊಮ್ಮೆ ಅವರ ಕೆಲಸ ಮಾಡ ಬೇಕಾಗುತ್ತಿತ್ತು. ಒಮ್ಮೆ ಹೀಗಾಯಿತು. ಮಂಡ್ಯದ ಹತ್ತಿರ ಒಂದು ಭಾರಿ ಅಗ್ನಿ ಅಪಘಾತವೋ/ವಾಹನ ಅಪಘಾತವೋ ಸಂಭವಿಸಿ ಹಲವಾರು ಮಂದಿ ಮೃತರಾಗಿದ್ದರು. ಅದನ್ನು ವರದಿ ಮಾಡಲು ವರದಿಗಾರರು ಮತ್ತು ಛಾಯಾಚಿತ್ರಗ್ರಾಹಕರನ್ನು ಇಲ್ಲಿಂದ ಕಳುಹಿಸಿದೆರೆ ಹೇಗೆ ಎಂದು ‘ಡೆಕ್ಕನ್ ಹೆರಾಲ್ಡ್’ ಶ್ರೀನಿವಾಸ ರಾಜು ಕೇಳಿದರು. ಸರಿ ಎನಿಸಿತು. ಆ ಕ್ಷಣ ಮುಖ್ಯ ವರದಿಗಾರರು ಇರಲಿಲ್ಲ. ಬೆಳಗಿನ ಸಮಯವಾದ್ದರಿಂದ ವರದಿಗಾರರು ಯಾರೂ ಇರಲಿಲ್ಲ.

ಸುದ್ದಿ ಮೇಜಿನ ಉಪಸಂಪಾದಕರೊಬ್ಬರಿಗೆ ಈ ಕೆಲಸ ವಹಿಸಿದೆ. ಆ ಕ್ಷಣ ಅವರ ಜಾತಿ ಮನಸ್ಸಿಗೆ ಬಂದಿರಲಿಲ್ಲ. ಅವರ ಸಾಮರ್ಥ್ಯವಷ್ಟೆ ನನ್ನ ದೃಷ್ಟಿಯಲ್ಲಿದ್ದುದು. ‘ಅವರನ್ನೇ ಏಕೆ ಕಳುಹಿಸಬೇಕಿತ್ತು ನನ್ನೇಕೆ ಕಳುಹಿಸಲಿಲ್ಲ’ ಎಂದು ಒಬ್ಬರು ದೊಡ್ಡ ರಾದ್ಧಾಂತ ಮಾಡಿದರು. ಆತನಿಗೂ ಅವಕಾಶಗಳನ್ನು ಕೊಡಲಾಗುತ್ತಿತ್ತು. ಅತನನ್ನು ಸಂಪೂರ್ಣವಾಗಿ ಅಲಕ್ಷಿಸಿದ್ದರೆ ಅದು ಬೇರೆ ಮಾತು. ಹೀಗಿರಲಿಲ್ಲ. ಆದಗ್ಯೂ ರಾದ್ಧಾಂತ ಮಾಡಿದ್ದರ ಹಿಂದೆ ‘ನಾನು ಸ್ವಜನ  ಪಕ್ಷಪಾತಿ’ ಎಂದು ಸಾರುವುದೇ ಆತನ ಉದ್ದೇಶವಾಗಿತ್ತು.

ಇಂಥ ಇರುಸುಮುರುಸು ಆಗಿಂದಾಗ್ಗ್ಯೆ ನಡೆಯುತ್ತಲೇ ಇದ್ದವು. ಅದರಲ್ಲೂ ಕೆಲವರು ಸಿಕ್ಕ ಒಂದು ಸಣ್ಣ ಸಂದರ್ಭವನ್ನು ನನ್ನ ವಿರುದ್ಧ ಈ ರೀತಿಯ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು. ನನ್ನ ವಿರುದ್ಧ ಟ್ಯಾಬ್ಲಾಯ್ಡ್ ಒಂದರಲ್ಲಿ ಲೇಖನವೊಂದನ್ನು ಪ್ರಕಟಿಸುವುದರೊಂದಿಗೆ ಅವರ ಅಸಹನೆ-ಅಸಮಾಧಾನಗಳು ಸ್ಫೋಟಿಸಿದ್ದವು.

‘ನಿಮ್ಮ ಮೇಲೆ ವಾಚಾಮಗೋಚರ ದೋಷಾರೋಪ ಮಾಡಿರುವ, ನಿಂದಿಸಿರುವ ಲೇಖನವೊಂದು ಪ್ರಕಟವಾಗಿದೆ’ ಎಂದು ಸಹೋದ್ಯೋಗಿಯೊಬ್ಬರು ತಿಳಿಸಿದರು. ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅದನ್ನು ಓದುವ ಗೋಜಿಗೂ ಹೋಗಲಿಲ್ಲ. ನನ್ನ ಕೆಲಸದಲ್ಲಿ ನಾನು ತಲ್ಲೀನನಾಗಿದ್ದೆ. ಈ ಲೇಖನ ಬರೆಸಿದವರು ದಲಿತರೂ ಅಲ್ಲ ಬಂಡಾಯದವರೂ ಆಗಿರಲಿಲ್ಲ. ಇದರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊಫೆಸರ್ ಒಬ್ಬರ ಕೈವಾಡವಿದ್ದುದು ನನಗೆ ಸ್ವಲ್ಪ ದಿನಗಳ ನಂತರ ಗೊತ್ತಾಯಿತು. ಇದರ ಬಗ್ಗೆಯೂ ನಾನು ನಿರ್ಲಿಪ್ತನಾಗೇ ಉಳಿದೆ. ಆ ಪ್ರೊಫೆಸರನ ಪೈಕಿ ಒಬ್ಬರು ನಮ್ಮಲ್ಲಿ ವರದಿಗಾರರಾಗಿದ್ದು ಆತನಿಗೆ ನನ್ನಿಂದ ಅನ್ಯಾಯವಾಗಿದೆ ಎಂಬ ಅಸಮಾಧಾನವೇ ಈ ಲೇಖನಕ್ಕೆ ಪ್ರಚೋದನೆ.

ಲೇಖನದ ಬಗ್ಗೆಯೂ ಸಹೋದ್ಯೋಗಿಗಳು ಗುಸುಗುಸು ಮಾತಾಡಿಕೊಂಡರು. ಇದೆಲ್ಲದಕ್ಕೂ ದಿವ್ಯ ನಿರ್ಲಕ್ಷ್ಯವೇ ನನ್ನ ಪ್ರತಿಕ್ರಿಯೆಯಾಗಿತ್ತು. ‘ಪ್ರವಾ’ ಹೊರಗೂ ಲೇಖಕ/ಪತ್ರಿಕಾ ವಲಯಗಳಲ್ಲೂ ಈ ಲೇಖನದ ಬಗ್ಗೆ ಹಲವು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾದದ್ದೂ ನನ್ನ ಗಮನಕ್ಕೆ ಬಂದಿತ್ತು. ದಲಿತ ಹೆಣ್ಣುಮಗಳೊಬ್ಬಳು ಬರೆದು ತಿಳಿಸಿದ ಪ್ರತಿಕ್ರಿಯೆ ಹೀಗಿದೆ:

      ‘…..ಹಿಂದೊಮ್ಮೆ ‘ಹಾಯ್ ಬೆಂಗಳೂರ್’ನಲ್ಲಿ ನಿಮ್ಮ ಬಗ್ಗೆ ಲೇಖನ ಬಂದಾಗ ನಾನು ತುಂಬ ದು:ಖಪಟ್ಟೆ.

      ನನ್ನಂಥವರನ್ನು ಜಾತಿಗೋತ್ರ ನೋಡದೆ ಪರಿಚಯಿಸಿದ, ಬರೆಯುವುದಕ್ಕೆ ಚೈತನ್ಯ ತುಂಬಿದ ನಿಮ್ಮ

      ಹಿರಿದಾದ ವ್ಯಕ್ತಿತ್ವಕ್ಕೆ ಈ ಜನರು ಗೌರವ ಕೊಡಲಿಲ್ಲವಲ್ಲ ಎನ್ನುವ ನೋವು. ಇಷ್ಟೆಲ್ಲದರ ನಡುವೆಯೂ ನೀವು

      ನೆಮ್ಮದಿಯಿಂದ ಹಿಡಿದ ಕೆಲಸ ಮಾಡಿ ಮುಗಿಸುವ ಸ್ಥೈರ್ಯ ಉಳಿಸಿಕೊಂಡಿರುವಿರಲ್ಲ ಅದು ನಮಗೆ

      ಅನುಕರಣೀಯ….’

ಲೇಖಕ ಸಮುದಾಯದ ಇಂಥ ಸ್ನೇಹ-ಸಹಕಾರಗಳೇ ನಾನು ನಲವತ್ತಕ್ಕೂ ಹೆಚ್ಚಿನ ವರ್ಷಗಳ ಪತ್ರಿಕಾ ವೃತ್ತಿಯಲ್ಲಿ ಗಳಿಸಿದ ಅಮೂಲ್ಯ ಆಸ್ತಿ.

January 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This