ಆ ಒಂದು ಬಿಂದಿ…

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ
 
ಮೊಮ್ಮಗಳ ಒತ್ತಾಯಕ್ಕೆ ಅಪರೂಪಕ್ಕೊಮ್ಮೆ ಅವಳು ಹಣೆಗೊಂದು ಕಪ್ಪನೆಯ ಬಿಂದಿ ಇಟ್ಟುಕೊಂಡು ಬಿಡುತ್ತಾಳೆ. ಅವಳ ಮೈಬಣ್ಣಕ್ಕೋ ಅಥವಾ ಆ ಮುಖದಲ್ಲಿ ಇನ್ನು ಜೀವಂತವಾಗಿರೋ ಸೌಂದರ್ಯಕ್ಕೋ ಏನೋ?  ಅಕ್ಕಪಕ್ಕದ ಮನೆಯ ಚಿಕ್ಕ ಚಿಕ್ಕ ಹೈಕಳೆಲ್ಲಾ ಅಜ್ಜೀ ನಿನಗೆ ಕಪ್ಪು ಬಿಂದಿ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ . ಅವಳಿಗೋ ಮತ್ತೆ ಕಳೆದು ಹೋದ ಯೌವನ  ಮರುಕಳಿಸಿದ ಅನುಭವ. ತುಟಿಯಂಚಿನಲ್ಲಿ ನಗು. ಆದರೆ ಅದನ್ನು ತೋರಿಸಲೊಲ್ಲಳು. ಹೃದಯದಲ್ಲಿ ತನ್ನ ಅಪ್ರತಿಮ ಸೌಂದರ್ಯದ ಬಗ್ಗೆ ಮೊಮ್ಮಕ್ಕಳು,ಸುತ್ತಮುತ್ತಲ ಮಕ್ಕಳೆಲ್ಲಾ  ಹೆಮ್ಮೆ ವ್ಯಕ್ತಪಡಿಸಿದ ರೀತಿ ಅವಳಿಗೆ ಖುಷಿ ನೀಡುತ್ತದೆ. ತನ್ನ ಸೌಂದರ್ಯ ಎನ್ನೋದು ಸುತ್ತಮುತ್ತಲ ಹಳ್ಳಿಗಳಲ್ಲಿ  ಚರ್ಚೆಯ ವಿಷಯವಾಗಿದ್ದ ದಿನಗಳು ಅವಳಿಗೆ ನೆನಪಾಗತೊಡಗುತ್ತವೆ. ತನಗೆ ಒಡತಿಯ ಸ್ಥಾನಮಾನ ನೀಡಿದ ತನ್ನ ಸೌಂದರ್ಯ ಮತ್ತು  ಅದರೊಟ್ಟಿಗೆ ಅಂಟಿಕೊಂಡು ಬಂದ ನೂರಾರು ಕಷ್ಟಗಳು ಅವಳ ಕಣ್ಣೆದುರು  ನಿಲ್ಲುತ್ತವೆ.

ಆಗ ಅವಳಿಗಿನ್ನೂ 12 ವರ್ಷ. ಹಳ್ಳಿಗಾಡಿನಲ್ಲಿ ಬಡತನದ ಬೇಗೆಯಲ್ಲೂ ಅರಳಿದ  ಅಪ್ರತಿಮ ಸೌಂದರ್ಯದ ಬಗೆ ಅದು.  ಕುಂಟುಬಿಲ್ಲೆಯಾಡುತ್ತ, ಲಂಗ ದಾವಣಿಯಲ್ಲಿ ಮಿರಮಿರಮಿಂಚುತ್ತ ಕುಣಿದಾಡುತ್ತಿದ್ದವಳು ಒಂದು ದಿನ  ಊರ ಗೌಡನ ಕಣ್ಣಿಗೆ ಬೀಳುತ್ತಾಳೆ. ಗೌಡನೋ… ಗೌಡರ ಗೌಡ. ಸುತ್ತೇಳು ಹಳ್ಳಿಯಲ್ಲಿ ಗೌಡನದೇ ಗುಣಗಾನ. ಹುಟ್ಟು ಶ್ರೀಮಂತನಾದರೂ ಬಡವನ ಪಾಲಿನ ದೇವರು, ನಿಷ್ಠುರವಾದಿ,ಯೆಂಬಿತ್ಯಾದಿಗಳು  ಅವನ ಹೆಸರಿನೊಂದಿಗೆ ಬಂದಿವೆ.
ದೇವರಲ್ಲಿ ವಿಶೇಷ ಭಕ್ತಿ. ಊರ ಜಾತ್ರೆಯಲ್ಲಿ ಎಲ್ಲ ಸಾಂಗವಾಗಿ ನಡೆಯಬೇಕು. ಸಾವಿರಾರು ಜನ ಉಂಡು ತೇಗುವುದನ್ನು ನೋಡಿಯೇ ಗೌಡ ಖುಷಿಪಟ್ಟು ಕೊಳ್ಳುತ್ತಾನೆ. ಗೌಡನದು ಎಲ್ಲದರಲ್ಲೂ ಒಂದು ವಿಶೇಷ.ಅವನದೇ  ಗತ್ತು. ಅವನ ವಿರುದ್ಧ ತಲೆಎತ್ತಿ ನಿಲ್ಲುವ ಧೈರ್ಯ ಯಾರಿಗೂ ಇಲ್ಲ. ತಮ್ಮ ಯಜಮಾನನ ವಿರುದ್ಧ  ಮಾತು ಕೇಳುವ ತಾಳ್ಮೆ ಆ ಹಳ್ಳಿಜನರಿಗಿಲ್ಲ. ವಿಧುರ. ಮನೆಮಕ್ಕಳಿಗೆ ಪ್ರೀತಿಯ ಅಪ್ಪನಾದರೂ ಶಿಸ್ತಿನ ವಿಚಾರದಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಮನೆಯಿಂದ ದೂರಾಚೆ ಇರುವ ತೋಟದ ಮನೆಯಲ್ಲಿ ಮಾತ್ರ ಸೂಳೆಯರದ್ದೆ ಕಾರುಬಾರು. ಅಂಥ ಗೌಡನಿಗೆ 12 ವರ್ಷದ ಪೋರಿ ಇಷ್ಟವಾಗುತ್ತಾಳೆ. ಅಂದು ಆ ಊರಿನ ತುಂಬ ಜನರ ಕಷ್ಟ ಸುಖ ವಿಚಾರಿಸಿದ ಬಳಿಕ ಕೊನೆಗೊಂದು ಕಡೆ ವಿಶ್ರಮಿಸುವಾಗ ಈಕೆ ಕಣ್ಣಿಗೆ ಬೀಳುತ್ತಾಳೆ. ತನ್ನ ಹೆಗಲ  ಮೇಲೆ ಕುಳ್ಳಿಸಿಕೊಂಡು ಆಕೆಯನ್ನು ಗೌಡ ಪ್ರೀತಿಯಿಂದ ಕೇಳುತ್ತಾನೆ.
ನನ್ನ ಮದುವೆ ಮಾಡಿಕೊಳ್ತೀಯಾ
ಹೋ ಎನ್ನುತ್ತಾಳೆ.
ತಿನ್ನೋಕೆ ಏನೆಲ್ಲಾ ಕೊಡ್ತೀಯಾ ಮುಂದಿನ ಪ್ರಶ್ನೆ ಹಾಕುತ್ತಾಳೆ.
ನೀ ಕೇಳಿದ್ದೆಲ್ಲ ಗೌಡ ಭರವಸೆ ನೀಡುತ್ತಾನೆ.
ಅಷ್ಟೊತ್ತಿಗಾಗಲೇ ಮದುವೆಯ ಏರ್ಪಾಟಿಗೆ ಆದೇಶ ಹೊರಡುತ್ತದೆ. ಸುತ್ತಮುತ್ತಲ ಊರುಗಳಲ್ಲಿ ಸಂಭ್ರಮವೋ ಸಂಭ್ರಮ. ಈ ಹುಡುಗಿಗೋ ಮದುವೆ ದಿನ ತರಾವರಿ ಸಿಹಿ ತಿಂಡಿ ನೋಡಿಯೇ ಖುಷಿ. ಧಾರೆ ಹುಯ್ಯುವಾಗ ಯಾರೋ ಇವಳನ್ನು ಎತ್ತಿಕೊಳ್ಳುತ್ತಾರೆ. ತಾಳಿ ಕಟ್ಟುವಾಗಲೂ ಇನ್ಯಾರದೋ ಕೈಯ್ಯಲ್ಲಿ. ಅಂತೂ ಮದುವೆ ಮುಗಿಯುತ್ತದೆ.
ಅಂದಿನಿಂದ ಹೊಸ ಬದುಕಿನ ಆರಂಭ. ಒಂದೆರಡು ದಿನ ಅಪ್ಪ ಅಮ್ಮಂದಿರ ನೆನಪಾಗಿ ಹೋಗುತ್ತೇನೆ ಎಂದು ಹಠ ಹಿಡಿಯುವ ಹುಡುಗಿಗೆ ಸುತ್ತಮುತ್ತಲಿನ ಪುಠಾಣಿಗಳು  ಪರಿಚಯ ಆದ ಬಳಿಕ ಕ್ರಮೇಣ ಆ ಊರಿಗೆ ಹೊಂದಿಕೊಳ್ಳುತ್ತಾಳೆ. ಮನೆಯಲ್ಲಿ ಉದ್ದಗಲಕ್ಕೆ ಬೆಳೆದು ನಿಂತ ಗೌಡನ ಮೊದಲ ಹೆಂಡತಿಯ ಮಕ್ಕಳು. ಇವಳಿಗಿಂತ ದೊಡ್ಡವರು. ಕೆಲವರಿಗೆ ಮದುವೆಯಾಗಿದೆ. ಅವರನ್ನು ಇವಳು ಅಣ್ಣಯ್ಯಾ ಅವರ ಹೆಂಡಂದಿರಿಗೆ ಅಕ್ಕಯ್ಯಾ ಎಂದು ಕರೆಯುತ್ತಾಳೆ. ಗೌಡನ ಭಯಕ್ಕೆ ಇವಳನ್ನು ಚಿಕ್ಕಮ್ಮ ಎಂದು ಸಂಭೋಧಿಸುವ ಅವರು ಹಿಂದಿನಿಂದ  ನಮ್ಮಪ್ಪನ ಆಸ್ತಿ ಮೇಲೆ ಕಣ್ಣಿಟ್ಟು ಬಂದಿದ್ದಾಳೆ  ಎಂದು ಕುಹಕವಾಡುತ್ತಾರೆ. ಅವಳಿಗೆ ಇದ್ಯಾವುದು ಅರ್ಥವಾಗಲ್ಲ.
 ಒಂದು ವಾರಕ್ಕೂ ಹೆಚ್ಹು ಕಾಲ ನಡೆದ ಮದುವೆಯಲ್ಲಿ ಅವಳು ಎಂದೂ ಕಾಣದ ಸಿಹಿ ತಿಂಡಿ, ಊಟದ ರುಚಿ ನೋಡಿದ್ದಾಳೆ. ತೊಡಲು ಹೊಸ ಬಟ್ಟೆಯು ಸಿಕ್ಕಿದೆ.ಕಿವಿಯಲ್ಲಿ ಅಂದದ ವಾಲೆಗಳು.ಕಾಲಿಗೆ ಗಲಗಲ ಗೆಜ್ಜೆ. ಆದರೆ ಎಲ್ಲೋ ಒಂದೊಂದು ಸಲ ಅವಳಿಗೆ  ಮನೆಯ ಜನರ ವರ್ತನೆ ವಿಚಿತ್ರ ಎನಿಸುತ್ತದೆ. ಗೌಡನ ಮುಂದೆ ತಾನು ಕೇಳಿದ್ದೆಲ್ಲವನ್ನು ಕೊಡುವ ಅವರು ಗೌಡನ ಅನುಪಸ್ಥಿತಿಯಲ್ಲಿ ತಿನ್ನೋಕೆ ಕೊಡದೆ ಇದ್ದುದು ಅವಳ ಕಣ್ಣಲ್ಲಿ ಒಮ್ಮೊಮ್ಮೆ ನೀರು  ತರಿಸುತ್ತದೆ.
ಅದಕ್ಕಾಗಿ ಅವಳಿಗೆ ತಾನು ಕೇಳಿದ್ದನ್ನು ಕೊಡಿಸುವ ಗೌಡ ಹೆಚ್ಚು ಇಷ್ಟವಾಗ್ತಾನೆ.
ಮನೆ ಸುತ್ತ ಮುತ್ತ ಇರುವ ಸಾವಿರಾರು ಕುರಿಗಳನ್ನು ನೋಡಿ ಖುಷಿಪಡುವ ಅವಳು ಒಂದು ದಿನ ತಾನು ಕೂಡ ಕುರಿಕಾಯಲು ಹೋಗುವುದಾಗಿ ಹಠ ಮಾಡುತ್ತಾಳೆ. ತನ್ನೂರಲ್ಲಿ ತಾನು ದಿನಾ ಕುರಿ ಕಾಯುತ್ತಿದ್ದ ಬಗೆಯನ್ನು ಅವಳು ವರ್ಣಿಸುತ್ತಾಳೆ. ಮೊದಮೊದಲಿಗೆ ಬೇಡ ಎನ್ನುವ ಗೌಡ ನಂತರ ಅವಳ  ಮುದ್ದು ಮಾತುಗಳಿಗೆ ಮಣಿದುಬಿಡುತ್ತಾನೆ. ಆದರೆ ಅದನ್ನೇ ಕಾಯುತ್ತಿದ್ದ ಮನೆ ಜನರಿಗೆ ಇನ್ನಿಲ್ಲದ ಖುಷಿ ಆಗುತ್ತದೆ. ಅಂದಿನಿಂದ ಕುರಿ ಕಾಯುವುದು ಅವಳ ಕೆಲಸವಾಗುತ್ತದೆ.
ದೊಡ್ದವಳಾಗುತ್ತಿದ್ದಂತೆ ಇದೆ ರೀತಿ ಬೇರೆ ಜವಾಬ್ದಾರಿಗಳು ಸಹ ಅವಳೊಂದಿಗೆ ಅಂಟಿಕೊಂಡು ಬರುತ್ತವೆ.
ಮೊದಲೇ ಗುಲಾಬಿ ಬಣ್ಣದ ಆಕೆ ಗೌಡನ ಮನೆಯಲ್ಲಿ  ಮೈತುಂಬಿ ಬೆಳೆಯತೊಡಗುತ್ತಾಳೆ. ಗೌಡ  ಮಲೆನಾಡಿನ  ಪ್ರದೇಶಕ್ಕೆ, ತಿರ್ಥಕ್ಷೇತ್ರಗಳಿಗೆ ಕರೆದೊಯ್ಯುತ್ತಾನೆ . ಹೀಗೊಂದು ದಿನ ಪುಟ್ಟ ಬಾಲೆ ಗೌಡತಿಯಾಗಿ ಸಂಸಾರ ಆರಂಭಿಸಲು ಶುರುವಿಟ್ಟುಕೊಳ್ಳುತ್ತಾಳೆ. ಹೊರಗಿನ ಪ್ರಪಂಚವೇ ನೋಡದ ಆಕೆಗೆ ತನಗಿಂತ ಮೂರು ಪಟ್ಟು ಹೆಚ್ಚು ವಯಸ್ಸಿನ ವ್ಯಕ್ತಿಯೊಂದಿಗೆ ಬಾಳ್ವೆ ನಡೆಸುವಾಗ ಅಂತಹ ವ್ಯತ್ಯಾಸ ಏನೂ ಕಂಡು ಬರುವುದಿಲ್ಲ.
ಹಾಗೆ ಸ್ವಲ್ಪ ದಿನದಲ್ಲಿ ಅವಳು ಪೂರ್ಣಪ್ರಮಾಣದ  ಗೌಡತಿಯಗುತ್ತಾಳೆ. ಇದೆ ಬದುಕು ಎಂದುಕೊಳ್ಳುತ್ತಲೇ ಅವಳ ದಿನಗಳು ಕಳೆಯುತ್ತವೆ. ಹಬ್ಬ ಹರಿದಿನಗಳಿರಲಿ, ನೆಂಟರು ಬರಲಿ ಅಡುಗೆ ಇವಳ ಕೈಯ್ಯದ್ದೆ. ದೈತ್ಯಾಕಾರದ ಒಲೆಯ ಮುಂದೆ ನಿಂತು ದಿನನಿತ್ಯ ನೂರಾರು ಜನರಿಗೆ ನಗುತ್ತಲೇ  ಉಣ ಬಡಿಸುವ ಅವಳಿಗೆ ಒಮ್ಮೊಮ್ಮೆ ತಲೆ ಕೆರೆದುಕೊಳ್ಳಲು ಕೂಡ ಪುರುಸೊತ್ತಿಲ್ಲ . ಸಾಕ್ಷಾತ್ ಅನ್ನಪುರ್ಣೆಯ ಬದುಕು ಅವಳದ್ದು. ಎಲ್ಲರದ್ದು ಊಟ ಆದ ಮೇಲೆ ತಾನೂ ಕೂಡ ಚೆನ್ನಾಗಿಯೇ ತಿನ್ನುವ ಆಕೆಗೆ ಒಮ್ಮೊಮ್ಮೆ  ಅನ್ನಿಸಿದ್ದಿದೆ. ಇಷ್ಟು ಕೆಲಸ ಮಾಡಿದ್ದಕ್ಕೆ ಚೆನ್ನಾಗಿ ಊಟನಾದ್ರು ಸಿಕ್ತಲ್ಲ. ಒಮ್ಮೊಮ್ಮೆ ತವರು ಮನೆಯ ನೆನಪಾಗಿ ಗದ್ಗದಿತಳಾಗುವ ಅವಳಿಗೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಕುರಿ ಕಾದ ಬಳಿಕ ಸರಿಯಾಗಿ ಊಟ ಸಿಗದೇ ಇದ್ದುದು ನೆನಪಾಗುತ್ತದೆ. ಸದ್ಯ ತಾನೂ  ಗೌಡನನ್ನು ಮದುವೆಯಾದದ್ದು ಒಳ್ಳೆಯದ್ದೆ ಆಯಿತು ಎನಿಸಿಬಿಡುತ್ತದೆ.
ಕಷ್ಟನೋ, ಸುಖಾನೋ ತನ್ನ ತವರು ಮನೆಯ ಕಷ್ಟ ಸುಖ ವಿಚಾರಿಸಬಹುದು. ತನಗೆ ಬುದ್ಧಿ ಬಂದ ಮೇಲೆ ತನ್ನ ಅಣ್ಣತಮ್ಮಂದಿರ  ಬದುಕಿಗಾಗುವಷ್ಟು ಸಣ್ಣ ಪುಟ್ಟ ಸಹಾಯವನ್ನು ಮಾಡಿರುವುದು ಅವಳಿಗೆ ಖುಷಿ ನೀಡಿದೆ.
ಈ ಮಧ್ಯೆ ತಾನೇ ನಿಂತು ಹಿರಿ ಹೆಂಡರ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿಸಿದ್ದಾಳೆ. ಆದರೆ  ಹಿರಿಯ ಸೊಸೆಯಂದಿರು ಮಾತ್ರ ಅವಳಿಗೆ ಸ್ವಲ್ಪವು ಹಿಡಿಸುವುದಿಲ್ಲ.  ಇಡೀ ದಿನ ತಮ್ಮ ಕೋಣೆ ಬಾಗಿಲು ಭದ್ರಪಡಿಸಿ ತಂತಮ್ಮ ಗಂಡಂದಿರ ತೋಳಲ್ಲಿ ಮಲಕ್ಕೊಂಡವರನ್ನು ಕಂಡು ಇವಳು ಒಮ್ಮೊಮ್ಮೆ ಕೆಂಡಾಮಂಡಲವಾಗುತ್ತಾಳೆ. ಮಿಟುಕಲಾಡಿಗಳು ಎಂದು ಗೊಣಗುತ್ತಲೇ ತನ್ನೆಲ್ಲ  ಕೆಲಸ ಮುಗಿಸುವ ಅವಳಿಗೆ ಗಾಣದೆತ್ತಿನಂತೆ ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿಯುವಾಗ ಅವಳಮ್ಮ ನೆನಪಾಗುತ್ತಾಳೆ. ಕೆಲಸ ಮುಗಿಸಿ ಮಧ್ಯಾಹ್ನದ ಹೊತ್ತಿನಲ್ಲಿ ಸ್ವಲ್ಪ ಹೊತ್ತು ಅವಳು ಮನೆಯ ಜಗುಲಿಯಲ್ಲಿ ವಿಶ್ರಮಿಸುತ್ತಾಳೆ. ತನ್ನ ಮನೆಯ ಆಳು ಕಾಳುಗಳೊಂದಿಗೆ ಕುಳಿತು ಎಲೆ ಅಡಿಕೆ ಹಾಕುವ ಅವಳಿಗೆ ಅವರೆಲ್ಲ ಬಾಯ್ತುಂಬ ಗೌಡತಿ ಎಂದು ಕರೆಯುವಾಗ ಖುಷಿಯಾಗುತ್ತದೆ. ಅವರು ಆ ರೀತಿ ಕರೆಯುವುದು ಅವಳಿಗೆ ಸಾಕಷ್ಟು ಸಮಾಧಾನ ತಂದುಕೊಡುತ್ತದೆ.
ಅಯ್ಯೋ ಹೋಗ್ರಪ್ಪಾ ಈ ಗೌಡತಿ ಜವಾಬ್ದಾರಿ ಕಷ್ಟ ಅಂಥ ಅವಳು  ಹುಸಿಮುನಿಸಿನಿಂದಲೇ ಹೇಳುತ್ತಾಳೆ. ಅವಳಿಗೂ ಎಲ್ಲರೂ ತನ್ನನ್ನು ಅದೇ ರೀತಿ ಕರೆಯಲಿ ಎಂಬ ಆಸೆ . ಒಮ್ಮೊಮ್ಮೆ ಅವಳಿಗೆ ಈ ಗೌಡತಿ ಪದವಿ ತಂದುಕೊಟ್ಟ ಜವಾಬ್ದಾರಿಗಳು, ನೋವುಗಳು ನೆನಪಾಗಿ ಮತ್ತೆ ಮೌನವಾಗುತ್ತಾಳೆ. ಹಾಗೆ ಜಗುಲಿ ಮೇಲೆ ಕುಳಿತುಕೊಂಡಾಗ ಅವಳು ಎಷ್ಟೋ ಸಾರಿ ಗೌಡನ ಕೈಯ್ಯಲ್ಲಿ ಬೈಸಿಕೊಂಡಿದ್ದಾಳೆ. ಗೌಡನಿಗೆ ಸೌಂದರ್ಯವತಿ ಹೆಂಡತಿಯ ಮೇಲೆ ಎಲ್ಲಿಲ್ಲದ ಗುಮಾನಿ.
ಯಾರನ್ನಾದರೂ ಇಟ್ಕಂಡಿದ್ದೀಯೇನೆ ಎಂದು ಗೌಡ ಎಷ್ಟೋ ಸಾರಿ ತಿವಿಯುವುದುಂಟು. ಅದನ್ನೆಲ್ಲ ಅವಳು ಮೌನವಾಗಿಯೇ ಸಹಿಸಿಕೊಂಡಿದ್ದಾಳೆ.
 
ಅಷ್ಟೊತ್ತಿಗಾಗಲೇ ಅವಳಿಗೂ ಒಂದೆರಡು ಮಕ್ಕಳು ಹುಟ್ಟಿವೆ. ಗೌಡನಿಗೆ ಮಕ್ಕಳ ಮೇಲೇನೋ ವಿಶೇಷ ಪ್ರೀತಿ. ಆದರೆ ಊರ ಜವಾಬ್ದಾರಿ ಮುಂದೆ ಹೆಂಡತಿ ಮಕ್ಕಳನ್ನು ವಿಚಾರಿಸಲು ಅವರಿಗೆ ಪುರುಸೊತ್ತಾಗಲ್ಲ. ಇದು ಅವಳಿಗೂ ಅರಿವಾಗಿದೆ. ತನ್ನ ನೋವನ್ನು ಹೇಳಿಕೊಳ್ಳಲಾರಳು. ತನ್ನ ಮಕ್ಕಳನ್ನು ಸವತಿ ಮಕ್ಕಳಂತೆ ಕಾಣುವ ಹಿರಿಮಕ್ಕಳ ಬಗ್ಗೆ ಅವಳಿಗೆ ಆಗಾಗ ಕೋಪ, ನೋವು ಒಟ್ಟೊಟ್ಟಿಗೆ ಬರುತ್ತದೆ. ಇವರನ್ನು ನಾನೆಷ್ಟು ಪ್ರೀತಿಯಿಂದ ನೋಡಿಕೊಳ್ಳಲಿಲ್ಲ. ಆದರೆ ನನ್ನ
ಮಕ್ಕಳು ಮಾತ್ರ ಇವರಿಗೆ ಬೇಡವಾದರು. ತನ್ನ ಮಕ್ಕಳ ವಿರುದ್ಧದ ದ್ವೇಷ ಎಲ್ಲದರಲ್ಲೂ ಕಂಡುಬರುತ್ತದೆ. ಅವರಿಗೆ ಹೊಸ ಬಟ್ಟೆ ಕೊಡಿಸುವಾಗ, ಶಾಲೆಗೆ ಫೀಸು ಕಟ್ಟುವಾಗ…..ಅವಳಿಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಸುರಿಯುತ್ತದೆ. ಒಮ್ಮೊಮ್ಮೆ ಆವೇಶಕ್ಕೊಳಗಾಗಿ ಆಕಾಶಕ್ಕೆ ನೋಡಿ  ಹಾದರಗಿತ್ತೀಯರಾ ಎಂದು ಕೂಗುತ್ತಾಳೆ.
ರಾತ್ರಿ ಹೊತ್ತು ಗೌಡ ಪ್ರಸನ್ನನಾಗಿರುವಾಗ ಕಿವಿಗೆ ಉಸುರುತ್ತಾಳೆ.  ಆದರೆ ಗೌಡನೋ ಗೌಡತಿಯಾದವಳಿಗೆ ಇರಬೇಕಾದ ತಾಳ್ಮೆಯ ಬಗ್ಗೆ ಬುದ್ದಿ ಮಾತು ಹೇಳುತ್ತಾನೆ. ಅವಳು ಬಿಕ್ಕುತ್ತಲೇ ಮತ್ತೆ ಬೆಳಗಾಗೆದ್ದು ಕೆಲಸ ಆರಂಭಿಸುತ್ತಾಳೆ. ಇತ್ತಿತ್ತಲಾಗಿ ಅವಳಿಗೆ ತನ್ನ ಮಕ್ಕಳಿಗೆ ಯಾರಾದರೂ ಕೇಡು ಬಗೆದರೆ ಎಂಬ ಭಯ ಆವರಿಸಿಬಿಟ್ಟಿದೆ. ಆ ಕಾರಣಕ್ಕಾಗಿ ಹೊಲಕ್ಕೆ ಹೋಗುವುದರಿಂದ ಹಿಡಿದು ಎಲ್ಲೆಡೆ ತನ್ನಿಬ್ಬರು ಪುಟ್ಟ ಮಕ್ಕಳನ್ನು ಹೊತ್ತು ಕೊಂಡೆ ತಿರುಗುತ್ತಾಳೆ.
ನೋವಿನ ಮಧ್ಯೆಯೂ ಅವಳಿಗೆ ಖುಷಿ ಕೊಡುವ ಇನ್ನೂ ಒಂದು ವಿಷಯವಿದೆ. ಅದು ಅವಳ ವಿಶೇಷ ಸೌಂದರ್ಯ. ಈ ಬಗ್ಗೆ ಜನರು ಮಾಡುವ ಗುಣಗಾನವೇ ಅವಳ ಶಕ್ತಿ ಇಮ್ಮಡಿಗೊಳ್ಳುವಂತೆ ಮಾಡುತ್ತದೆ. ತನ್ನೆಲ್ಲ ಕಷ್ಟಗಳನ್ನು ಮರೆಸುತ್ತದೆ. ಅದೆಲ್ಲಿಗೋ ಹೋದಾಗ ಗೌಡ ತನಗಾಗಿ ತಂದ ದೊಡ್ಡ ಕನ್ನಡಿ ಮುಂದೆ ಅಪರೂಪಕ್ಕೆ ನಿಂತು  ಯಾರು ಇಲ್ಲದಾಗ ತನ್ನನ್ನು ತಾನು ಕಣ್ತುಂಬಿ ನೋಡಿಕೊಳ್ಳುತ್ತಾಳೆ.. ತನ್ನ ಗುಲಾಬಿ ಮೈ ಬಣ್ಣಕ್ಕೆ ತಾನೆ ಮನಸೋಲುತ್ತಾಳೆ. ಆಕರ್ಷಕ  ಮುಖದಲ್ಲಿ
ಕೆಂಪನೆಯ ಕುಂಕುಮ  ಅವಳ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಆದರೆ ತಾನು ದಿನಗಳೆದಂತೆ ಮತ್ತಷ್ಟು ಚೆನ್ನಾಗಿ ಆಗುತ್ತಿರುವುದು ಇದು ವೃದ್ಧಾಪ್ಯದ ಹೊಸ್ತಿಲಲ್ಲಿರುವ ಗೌಡನಿಗೆ ಇರಿಸು ಮುರುಸು ಮಾಡುತ್ತಿರುವುದು ಅವಳ ಗಮನಕ್ಕೆ ಬಂದಿದೆ. ಆ ಕಾರಣಕ್ಕೆ ಗೌಡನ ಮುಂದೆ ಅವಳು ಅಪ್ಪಿ ತಪ್ಪಿಯೂ ಕನ್ನಡಿ ಮುಂದೆ ಸುಳಿದಾಡುವುದಿಲ್ಲ.ಒಮ್ಮೊಮ್ಮೆ ಅವಳಿಗೆ ಗದ್ದೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಅನ್ನಿಸುತ್ತದೆ. ಊರವರಿಗೇನೋ ತಾನು ಗೌಡತಿ.
ಆದರೆ, ತನ್ನೊಡಲಲ್ಲಿ ಹೊತ್ತು ಉರಿಯುತ್ತಿರುವ ಬೇಗೆ ಇಡಿ ಊರು ಸುಡಲು ಸಾಕು ಎಂದುಕೊಂಡು ಮನಸ್ಸಿನಲ್ಲಿಯೇ ನಗುತ್ತಾಳೆ.
ನೋಡುನೋಡುತ್ತಿದ್ದಂತೆ ಅವಳ ಮಕ್ಕಳೂ ವಯಸ್ಸಿಗೆ ಬರುತ್ತವೆ. ಸಾಕಷ್ಚು ಬದಲಾವಣೆಗಳೂ ಆಗುತ್ತವೆ. ಗೌಡ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾನೆ. ಸಿಂಹಗರ್ಜನೆಯ ದ್ವನಿ ಕ್ಷಿಣಿಸಿದೆ. ಬುದ್ದಿ ಮೊದಲಿನಂತೆ ಕೆಲಸ ಮಾಡುತ್ತಿಲ್ಲ. ಕಣ್ಣುಗಳು ಮುಸುಕಾಗಿವೆ. ಅವನ ಹಿರಿಯ ಮಕ್ಕಳೋ ದಿನಾ ಬೆಳಗಾಗೆದ್ದರೆ ಆಸ್ತಿ ಹಂಚಿಕೆಗೆ ಪಟ್ಟು ಬಿದ್ದಿದ್ದಾರೆ.  ತನ್ನ ಕುಂಕುಮ ಸೌಭಾಗ್ಯವನ್ನು ಕಳೆದುಕೊಳ್ಳುವ ನೋವಿನಲ್ಲಿ ಅವಳು ನೊಂದು ಬೆಂದರೆ  ಇತ್ತ ಆಸ್ತಿ ಹಂಚಿಕೆಗೆ ವೇದಿಕೆ ಸಿದ್ದವಾಗುತ್ತಿದೆ. ನೋಡು ನೋಡುತ್ತಿದ್ದಂತೆ  ಆ  ದಿನ ಬಂದೆ ಬಿಡುತ್ತದೆ. ನೂರಾರು ಎಕರೆ ಆಸ್ತಿ ಹಚಿಕೆಯಾಗುತ್ತದೆ. ಹಿರಿಕಿರಿಯರೆನ್ನದೆ ತನ್ನೆಲ್ಲ  ಮಕ್ಕಳಿಗೂ ಗೌಡ ಸರಿ ಸಮಾನಾಗಿ ಆಸ್ತಿ ಹಂಚುತ್ತಾನೆ. ತನ್ನ ನಂಬಿಕೊಂಡು ಬಂದ  ಅಕ್ಕ ತಂಗಿಯರು ಅಣ್ಣ ತಮ್ಮಂದಿರ ಮಕ್ಕಳಿಗೂ ಆಸ್ತಿ ನೀಡುತ್ತಾನೆ ತನ್ನ ಮನೆಯಲ್ಲಿ ವರ್ಷಾನುಗಟ್ಟಲೆ ಕೆಲಸ ಮಾಡಿಕೊಂಡಿದ್ದ ಎರಡು ಮೂರೂ ಕುಟುಂಬಗಳಿಗೆ  ಮನೆ, ತನ್ನ ಹೊಲದಲ್ಲಿಯೇ ಸಾಗುವಳಿ ಮಾಡಿಕೊಳ್ಳಲು ಅನುಮತಿ ಕೊಡುತ್ತಾನೆ. ಆ ದಿನ ಅವಳಿಗೆ ಗೌಡನ ಯುಗ ಮುಗಿದು ಹೋದ ನೋವು ಆವರಿಸಿಕೊಳ್ಳತೊಡಗುತ್ತದೆ. ಎಲ್ಲ  ಮಕ್ಕಳಿಗೆ ಗೌಡ ಸಮಾನ ಆಸ್ತಿ ಹಂಚಿಕೆ ಮಾಡಿದ ಬಗ್ಗೆ ಮನ ಕರಗುತ್ತದೆ. ಎಲ್ಲೋ ಒಂದು ಮೂಲೆಯಲ್ಲಿ ತನಗೇನು ನೀಡದ ಬಗ್ಗೆ ಸ್ವಲ್ಪ ನೋವು ಮೂಡುತ್ತದೆ. ಲೋಕಕ್ಕಂಜಿ ಹೇಳಿಕೊಳ್ಳುತ್ತಿಲ್ಲವೇನೋ.ತನ್ನ ಹೆಸರಿನಲ್ಲಿ ಏನಾದರೂ ಮಾಡಿಯೇ  ಇರುತ್ತಾರೆ. ಅವಳ ಧೃಢ ನಂಬಿಕೆ.  ಹುಸಿಮುನಿಸಿನಿಂದ ಏಕಾಂತದಲ್ಲಿ ನನಗೇನು  ನೀಡಿದ್ದೀರಿ ಎಂದು ಬೇಡಿಕೆ ಮುಂದಿಡುತ್ತಾಳೆ. ಅವಳನ್ನು  ತನ್ನ ಹತ್ತಿರ ಕರೆದು ಕೆಮ್ಮುತ್ತಲೇ ಹೇಳುವ ಗೌಡ ನೀನು ಗೌಡತಿ. ಯಾವುದು ಆಸೆ ನಿನಗಿರಕೂಡದು. ನಿನ್ನ ಮಕ್ಕಳು ನಿನ್ನನ್ನು ನೋಡಿಕೊಳ್ಳುತ್ತಾರೆ. ಇದು  ಅವಿಭಕ್ತ ಕುಟುಂಬ. ಅದರ ಧರ್ಮವನ್ನು ನಾನು ಪಾಲಿಸಿದ್ದೇನೆ. ನಿನ್ನ ಹೆಸರಿಗೆ ಆಸ್ತಿ ಮಾಡಿ ಕೊನೆಗಾಲದಲ್ಲಿ ಜನ ನನ್ನನ್ನು ಹೆಂಡತಿ ಗಂಡ ಎಂದು ಆಡಿಕೊಳ್ಳಲ್ವಾ . ಗೌಡ ಕಷ್ಚ ಪಟ್ಟು ನಗುತ್ತಾನೆ. ಅವಳು  ಮೌನವಹಿಸುತ್ತಾಳೆ.
 
ಮುಂದೊಂದು ದಿನ ಅವಳ ಹಣೆ ಬರಿದಾಗುತ್ತದೆ. ತನ್ನ ಮಕ್ಕಳು ಸಂಸಾರಸ್ಥರಾಗುತ್ತಾರೆ. ವೃದ್ಧಾಪ್ಯ ಅವಳಿಗೂ ಕಾಡತೊಡಗುತ್ತದೆ. ಆ ಮಗನ ಮನೆಯಲ್ಲೊಂದು ದಿನ ಈ ಮಗನ ಮನೆಯಲ್ಲೊಂದು ದಿನ ಅವಳು ಕಾಲ ಕಳೆಯತೊಡಗುತ್ತಾಳೆ. ಎಷ್ಟೋ ಸಾರಿ ಅವಳಿಗೆ ತಾನು ತನ್ನ ಮನೆಜನರಿಗೆ ಭಾರ ಆಗುತ್ತಿದ್ದೇನೆ ಎಂದು ಅನ್ನಿಸುತ್ತದೆ. ಆದರೆ ಹೋಗುವುದೆಲ್ಲಿಗೆ. ಜೀವನದ ಕೊನೆಗಾಲವನ್ನು ಹೆಂಗೋ ಒಟ್ಟಾರೆ ಕಳೆದರಾಯ್ತು ಅಂಥ ಅವಳು ನಿರ್ಧರಿಸುತ್ತಾಳೆ. ಇಷ್ಟಾದರೂ ಅವಳ ಮುಗಿಯದ  ಸೌಂದರ್ಯ ಬಗ್ಗೆ ಗುಣಗಾನಗಳು  ನಡೆಯುತ್ತಲೇ ಇರುತ್ತವೆ.  ಮದುವೆಮನೆಗಳಲ್ಲಿ,ಊರ ಜಾತ್ರೆಯಲ್ಲಿ ಗೌಡತಿ ಬಣ್ಣ ಯಾರಿಗೂ ಬರಲ್ಲ. ಅಂಥ ಸೌಂದರ್ಯ ಇಡೀ ಕುಟುಂಬದಲ್ಲಿ ಯಾರಿಗೂ ಇಲ್ಲ ಬಿಡಿ ಎಂದಾಗ ಅವಳು ಹೆಮ್ಮೆಯಿಂದ ಬೀಗುತ್ತಾಳೆ.. ಅಂದು ಆದದ್ದು ಅದೇ. ತನ್ನ ಮೊಮ್ಮಗಳು ತನ್ನ ಹಣೆಗೊಂದು ಬಿಂದಿ ಇತ್ತು ತುಂಬ ಚೆನ್ನಾಗಿ ಕಾಣ್ತಿದೆ ಅಜ್ಜೀ ಎಂದಾಗ  ಇವಳಿಗೆ ಖುಷಿಯಾಗುತ್ತದೆ. ಬೇಡ ಬೇಡ ಎನ್ನುತ್ತಲೇ ಅದನ್ನು ಹಣೆಗಿಟ್ಟು ಸಂಭ್ರಮಿಸುತ್ತಾಳೆ. ಯಾರಿಗೂ ಕಾಣದಂತೆ ಧೂಳು ತುಂಬಿದ ಆ ಕನ್ನಡಿಯಲ್ಲೊಮ್ಮೆ ನೋಡಿಕೊಳ್ಳುತ್ತಾಳೆ. ಕೆಂಪನೆಯ ಮುಖದಲ್ಲಿ ಮಿರಮಿರನೆ ಮಿಂಚುತ್ತಿದೆ ಕಪ್ಪು ಬಿಂದಿ. ಅವಳ ಮೈ ಬೆವರುತ್ತದೆ ಖುಷಿಗೆ.
ಅಷ್ಟೊತ್ತಿಗೆ ಅವಳ ಇಬ್ಬರು ಗಂಡು ಮಕ್ಕಳ ಆಗಮನವಾಗುತ್ತದೆ. ವಿಧವೆ ತಾಯಿ ಹಣೆಯಲ್ಲಿ ಬಿಂದಿ. ಹಿರಿಯ ಮಗ ಇದೇನಮ್ಮ ಬಿಂದಿ ಇಟ್ಕೊಂದಿದ್ದಿಯ. ಜನ ಏನಂದ್ಕೋತಾರೆ ತೆಗೆದುಬಿಡಮ್ಮ.
ಆ ದ್ವನಿಗೆ ಅವಳು ಬೆಚ್ಚಿಬೀಳು ತ್ತಾಳೆ.
ಹಣೆಯಿಂದ ಬಿಂದಿ  ತೆಗೆದು ಇದನ್ನು  ಇಟ್ಕೊಂಡಿದ್ದು ನಾನಲ್ಲ ಕಣೋ. ನಿನ್ನ ಮಗಳೇ ಇಟ್ಟಿದ್ದು ಎಂದು ಸಮಝಾಯಿಷಿ ನೀಡುತ್ತಾಳೆ.

‍ಲೇಖಕರು avadhi

October 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Guru Baliga

    ಕತೆಯ ವಸ್ತು ಚೆನ್ನಾಗಿದೆ. ಹೆಣಿಗೆಯಲ್ಲಿ ಬಳಸಿದ ತಂತ್ರಗಳು ಓದುಗನನ್ನು ಹಿಡಿದಿಟ್ಟು ಓದಿಸುತ್ತವೆ.

    ಪ್ರತಿಕ್ರಿಯೆ
  2. Tejaswini

    ಕಥೆಯ ನಿರೂಪಣಾ ಶೈಲಿ ಮನೆಸೂರೆಗೊಂಡಿತು.. ಆದರೆ ಕಥೆಯ ಅಂತ್ಯವೇಕೋ ಅಸಮಂಜಸವೆನಿಸಿತು. ಅದರಲ್ಲೂ ಕೊನೆಯ ವಾಕ್ಯದಲ್ಲೇ ಕಥೆಯನ್ನು ಕೊನೆಗೊಳಿಸಿದ್ದೇಕೋ ಕಥಾ ಸ್ವಾರಸ್ಯವನ್ನು ತುಸು ಕೆಡಿಸಿದಂತೆನಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: