‘ಆ ಕಾರಂತ್ರಿಗೆ ವೋಟ್ ಹಾಕಿದ್ರೆ ನಮಗೇನು ತಿಂಡಿ ಪುಗಸಟ್ಟೆ ಕೊಡ್ತಾರಾ ?’

ಹಿಂತಿರುಗಿ ನೋಡಿದರೆ ಯಾರೂ ಇರಲಿಲ್ಲ..
-ಹರೀಶ್ ಕೇರ
ಬೆಟ್ಟದಡಿ
ಭಾನುವಾರ ನಾಗೇಶ್ ಹೆಗಡೆ ಅವರ ಆರು ಪುಸ್ತಕಗಳ ಬಿಡುಗಡೆಯಾಯ್ತು. ಅಂದು ಕೆ.ವಿ.ಅಕ್ಷರ ಮಾತನಾಡಿದ್ದನ್ನು, ಅದು ತುಂಬ ಮುಖ್ಯ ಅನಿಸಿದ್ದರಿಂದ, ನನಗೆ ನಾನೇ ಇನ್ನಷ್ಟು ಮನನ ಮಾಡಿಕೊಳ್ಳುವುದಕ್ಕಾಗಿ ಸಂಗ್ರಹಿಸಿ ಇಲ್ಲಿ ದಾಖಲಿಸಿದ್ದೇನೆ.
*
ನಾಗೇಶ್ ಹೆಗಡೆ ಕನ್ನಡದ ಮುಖ್ಯ ಪತ್ರಕರ್ತರಲ್ಲೊಬ್ಬರು. ಆಕ್ಟಿವಿಸಂ ಗುಣ ಹೊಂದಿದ್ದ ಕನ್ನಡದ ಶ್ರೇಷ್ಠ ಪತ್ರಕರ್ತರು ಕೂಡ. ರಾಜ್ಯದ, ದೇಶದ ಸದ್ಯದ ತುರ್ತನ್ನು ಗ್ರಹಿಸಿಕೊಂಡು ಅವರು ಬರೀತಾರೆ ಮಾತ್ರವಲ್ಲ, ಅಗತ್ಯ ಬಿದ್ದರೆ ಕಣಕ್ಕೆ ಇಳೀತಾರೆ ಕೂಡ. ಅವರಿಗೆ ಹೋಲಿಸಬಹುದಾದರೆ, ನಮ್ಮ ದೇಶದಲ್ಲಿ ಕಾಣಿಸೋ ಇನ್ನೊಬ್ಬ ಪತ್ರಕರ್ತ ಅಂದ್ರೆ ಪಿ.ಸಾಯಿನಾಥ್ ಮಾತ್ರ.
ಪರಿಸರದ ಬಗ್ಗೆ ಹೆಗಡೆಯವರ ಬದ್ಧತೆ ಪ್ರಶ್ನಾತೀತವಾದದ್ದು. ಒಂದು ಸನ್ನಿವೇಶ ನೆನಪಾಗ್ತಿದೆ. ಶಿವರಾಮ ಕಾರಂತರು ಉತ್ತರ ಕನ್ನಡದಿಂದ ಚುನಾವಣೆಗೆ ನಿಂತಿದ್ದರು. ನಿಂತ ಮೇಲೆ ತಮ್ಮ ಪಾಡಿಗೆ ಅಮೆರಿಕಕ್ಕೆ ಹೋಗಿದ್ದರು. ಆದರೆ ನಮಗೊಂದು ಇತ್ತಲ್ಲ, ಶಿವರಾಮ ಕಾರಂತರು ಸೋಲಬಾರದು ಅಂತ. ಹೀಗಾಗಿ ಪ್ರಚಾರಕ್ಕೆ ಮುಂದಾಗಿದ್ವಿ. ನಾಗೇಶ ಹೆಗಡೆಯವರು ಒಂದು ಪುಟ್ಟ ರೂಮು ಬಾಡಿಗೆಗೆ ಹಿಡಿದು ಕುರ್ಚಿ ಹಾಕಿಕೊಂಡು ಕುಳಿತಿದ್ದರು. ಅವರೇ ಶಿವರಾಮ ಕಾರಂತರ ಚೀಫ್ ಎಲೆಕ್ಷನ್ ಆಫೀಸರ್ ! ಆ ಹಳ್ಳಿ, ಈ ಹಳ್ಳಿ ಅಂತ ನಮ್ಮನ್ನು ಪ್ರಚಾರ ಭಾಷಣಕ್ಕೆ ಕಳಿಸ್ತಿದ್ದರು.
ಭಾಷಣ ಕೇಳಿಸಿಕೊಳ್ಲಿಕ್ಕೆ ಎರಡು ಜನ ಸಹ ಬರ್ತಿರಲಿಲ್ಲ. ಹಳ್ಳಿ ಜನರಿಗೆ ಕಾರಂತರ ಹೆಸರು ಕೇಳಿ ಸಹ ಗೊತ್ತಿರಲಿಲ್ಲ. ಒಂದು ಹಳ್ಳೀಲಿ ಹೋಟೆಲ್ ಇಟ್ಟಿದ್ದ ಇನ್ನೊಬ್ಬ ಕಾರಂತರಿದ್ದರು. ಜನ ಅವರನ್ನು ಇವರೆಂದು ಕನ್‌ಫ್ಯೂಸ್ ಮಾಡಿಕೊಂಡು ‘ಆ ಕಾರಂತ್ರಿಗೆ ವೋಟ್ ಹಾಕಿದ್ರೆ ನಮಗೇನು ತಿಂಡಿ ಪುಗಸಟ್ಟೆ ಕೊಡ್ತಾರಾ ?’ ಎಂದು ಕೇಳಿದ್ದುಂಟು. ಕಾರಂತರು ಸೋಲೋದು ನಮಗೆ ಆಗ್ಲೇ ಖಚಿತವಾಗಿತ್ತು.
ಒಮ್ಮೆ ನಾಗೇಶ್ ಹೆಗಡೆ ನಮ್ಮಲ್ಲಿಗೆ ಉಪನ್ಯಾಸ ನೀಡೋದಕ್ಕೆ ಬಂದಿದ್ರು. ಪರಿಸರ, ಬೃಹತ್ ಯೋಜನೆಗಳ ಬಗ್ಗೆ ಮಾತಾಡಿದರು. ಆಗ ಅವರು ಹೇಳಿದ ಮಾತು ನಂಗೆ ಈಗ್ಲೂ ಜ್ಞಾಪಕದಲ್ಲಿದೆ. “ಕೈಗಾ ಮುಂತಾದ ಬೃಹತ್, ಪರಿಸರ ಹಾನಿಕಾರಕ ಯೋಜನೆಗಳು ಉತ್ತರ ಕನ್ನಡಕ್ಕೆ ಬಂದಾಗ ನಾವೆಲ್ಲ ಅದನ್ನು ವಿರೋಸಿ ಹೋರಾಟ ಆರಂಭಿಸಿದೆವು. ಪ್ರತಿಭಟನೆ ಶುರು ಹಚ್ಚಿಕೊಂಡೆವು. ಆರಂಭದಲ್ಲಿ ಪ್ರತಿಭಟನೆಗೆ ಒಳ್ಳೆಯ ಬೆಂಬಲವೂ ವ್ಯಕ್ತವಾಯ್ತು. ಹಾಗೇ ಮುಂದುವರಿದೆವು. ಹೋಗ್ತಾ ಹೋಗ್ತಾ ಒಂದು ಹಂತದಲ್ಲಿ ನಿಂತು ಹಿಂದೆ ತಿರುಗಿ ನೋಡ್ತೇವೆ- ನಮ್ಮ ಹಿಂದಿದ್ದೋರೆಲ್ಲ ಇಟ್ಟಿಗೆ ಹೊತ್ತುಕೊಂಡು ಅಯೋಧ್ಯೆಯ ಕಡೆಗೆ ಹೋಗಿದ್ದರು…”
ನಾಗೇಶ್ ಹೆಗಡೆ ಅವರ ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಬೃಹತ್ ಯೋಜನೆಗಳು ಬರ್ತಿದ್ದವು. ಅದಕ್ಕೆ ಹೋರಾಟಗಳು ಹುಟ್ಟಿಕೊಳ್ಳುತ್ತಿದ್ದವು. ಹೆಗಡೆಯವರು ಅದರ ಧ್ವನಿಯಾಗಿ ಕೆಲಸ ಮಾಡಿದರು. ಆದ್ರೆ ‘ಪೋಸ್ಟ್ ನಾಗೇಶ್ ಹೆಗಡೆ’ ಕಾಲದಲ್ಲಿ ಏನಾಗ್ತಿದೆ ಅನ್ನೋದನ್ನೂ ನೋಡಬೇಕು.
ಸದ್ಯ ನಮ್ಮ ದೇಶದ ಕೃಷಿ ಕ್ಷೇತ್ರಕ್ಕೆ ಒದಗಿರುವ ಗಂಡಾಂತರವನ್ನು ಯಾರೂ ಸರಿಯಾಗಿ ಗ್ರಹಿಸಿದಂತಿಲ್ಲ. ಬಿಟಿ ಬದನೆ ಬರ್ತಿದೆ, ಬಿಟಿ ಹತ್ತಿ ಬೆಳೆದವರು ಆತ್ಮಹತ್ಯೆ ಮಾಡಿಕೊಂಡಿದಾರೆ, ಯಾವ ಬೆಳೆಗೂ ಸರಿಯಾದ ಬೆಲೆಯಿಲ್ಲ- ಇವೆಲ್ಲ ಇಶ್ಯೂಗಳಾಗಿವೆ ನಿಜ. ಆದರೆ ಕೃಷಿ ಎಂಬ ಒಂದು ಜೀವನ ವಿಧಾನವೇ ಇಲ್ಲವಾಗುತ್ತಿರೋದನ್ನು ಯಾರೂ ಮನಗಂಡ ಹಾಗಿಲ್ಲ.
ಇಲ್ಲಿಂದ ನೂರಾರು ಮೈಲು ದೂರದ ಒಂದು ಮಲೆನಾಡಿನ ಹಳ್ಳಿಯಲ್ಲಿ ಅಡಿಕೆ ಕೃಷಿ ಮಾಡಿಕೊಂಡು ಬದುಕುತ್ತಾ ಇರುವ ನನಗೆ ಇದು ಗೊತ್ತಾಗ್ತಿದೆ. ಮಲೆನಾಡಿನ ಅಡಿಕೆ ಕೃಷಿಕರಿಗೆ ಈಗಾಗಲೇ ತಮ್ಮ ಜಾಗ ಮಾರಿ ಪೇಟೆಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಒಂದು ಎಕ್ರೆ, ಎರಡೆಕ್ರೆ ಇರುವ ಸಣ್ಣ ಹಿಡುವಳಿದಾರರು ಇನ್ನು ಹತ್ತು ವರ್ಷಗಳಲ್ಲಿ ಹೇಳ ಹೆಸರಿಲ್ಲದಂತಾಗುತ್ತಾರೆ. ಆಮೇಲೇನಿದ್ದರೂ ನೂರಾರು ಎಕರೆ ಹೊಂದಿದ ಜಮೀನ್ದಾರರು, ಕಂಪೆನಿಗಳು ದೊಡ್ಡ ಪ್ರಮಾಣದ ಕೃಷಿ ಮಾಡಿ ಬದುಕಿಕೊಳ್ಳಬಹುದಷ್ಟೇ.
ನನ್ನ ಊರಿನಿಂದ ನಾನು ಬೆಂಗಳೂರಿಗೆ ಬರಬೇಕಾದರೆ ಪೀಣ್ಯ, ದಾಸರಹಳ್ಳೀಲಿ ನಡೀತಿರೋ ಅಗಾಧವಾದ ಮೆಟ್ರೋ, ರಸ್ತೆ, ಬಿಲ್ಡಿಂಗ್ ಕೆಲಸಗಳು ಇವನ್ನೆಲ್ಲ ದಾಟಿಕೊಂಡು ಬರಬೇಕು. ಅಲ್ಲಿ ನಡೀತಿರೋ ಕೆಲಸ, ಆ ದೈತ್ಯಾಕಾರದ ಯಂತ್ರಗಳು, ವಾಹನ ಪ್ರಮಾಣ ಇವನ್ನೆಲ್ಲ ನೋಡ್ತಾ ನೋಡ್ತಾ ನನಗೆ ವಿಚಿತ್ರವಾದ ಹಗಲುಕನಸುಗಳು ಬೀಳಲು ಶುರುವಾಗ್ತವೆ. ಇವೆಲ್ಲ ಏನು ? ಇವೆಲ್ಲ ಯಾವತ್ತಾದರೂ ಮುಗಿಯೋ ಕೆಲಸಗಳಾ ? ಇವು ಮಗಿದಾಗ ಮತ್ತೂ ಎಷ್ಟು ಲಕ್ಷ ವಾಹನಗಳು ರಸ್ತೆಗಿಳೀತವೋ ? ಆಗ ಮತ್ತೆ ಇವೆಲ್ಲ ಮೊದ್ಲಿಂದ…
ನೀವು ಪ್ರಯಾಣ ಹೊರಟು ನೋಡಿ, ಪ್ರತಿ ಹತ್ತು ಕಿಲೋಮೀಟರ್‌ಗೆ ಒಂದು ಕಡೆ ರಸ್ತೆ ರಿಪೇರಿ ನಡೀತಿರೋದು ಕಾಣಿಸ್ತದೆ. ಯಾವತ್ತೂ ಮುಗಿಯದ ರಿಪೇರಿ ಅದು. ಅಗೆದಲ್ಲೇ ಮತ್ತೆ ಮತ್ತೆ ಅಗೀತಾರೆ, ಮುಚ್ತಾರೆ. ಅಂದರೆ, ಇದು ಸರಕಾರಿ ಪ್ರಾಯೋಜಿತ ಬೀದಿ ನಾಟಕ ಅಷ್ಟೆ. ಜನರಿಗೆ ತೋರಿಸಬೇಕು- ಅಭಿವೃದ್ಧಿ ಆಗ್ತಿದೆ ಅಂತ. ಆದ್ರೆ ನಿಜವಾಗಿ ಆಗಿರಬಾರದು. ಹಾಗಾಗಿ ಇದು ಅಭಿವೃದ್ಧಿಯ ಬೀದಿ ನಾಟಕ.
ಇದನ್ನೆಲ್ಲ ಅರ್ಥ ಮಾಡಿಕೊಂಡು ಬರೆಯೋರು ನಿಜವಾಗಿ ನಾಗೇಶ್ ಹೆಗಡೆ ಅವರ ಉತ್ತರಾಕಾರಿಗಳಾಗ್ತಾರೆ.

‍ಲೇಖಕರು avadhi

February 3, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. JOGI

  THANKS HAREESH, ಆವತ್ತು ನಾನು ಊರಲ್ಲಿರಲಿಲ್ಲ. ಅಕ್ಷರ ಏನು ಮಾತಾಡಿದರು ಅಂತ ತಿಳ್ಕೊಳ್ಳೋದಕ್ಕೆ ಅಂತ ಹಲವರಿಗೆ ಫೋನ್ ಮಾಡ್ದೆ. ಮುಖ್ಯಾಂಶಗಳನ್ನು ವಿವೇಕ್ ಹೇಳಿದ್ರು, ವಿವರ ನಿಮ್ಮಿಂದ ಸಿಕ್ಕಿತು.

  ಪ್ರತಿಕ್ರಿಯೆ
  • ranganatha marakini

   thought provoking speech by Akshara and thank you for writing in blog.

   ಪ್ರತಿಕ್ರಿಯೆ
 2. ಆನಂದ ಕೋಡಿಂಬಳ

  ನಿಜ. ನಿಮ್ಮ ಚಿಂತನೆ ಖಂಡಿತ ಸಮರ್ಪಕವಾದುದು.ನಮ್ಮಲ್ಲಿ ಯುವಜನತೆಗೆ ಇಚ್ಛಾಶಕ್ತಿ ಇದ್ದಂತಿಲ್ಲ. ಸರಕಾರಿ ತುತ್ತೂರಿ ತಮ್ಮ ಬೇಳೆ ಸುಲಭವಾಗಿ ಬೇಯಿಸಿಕೊಳ್ಳಲು ಸಾಧ್ಯವಾಗುವುದು ಈ ಕಾರಣದಿಂದ. ಎಲ್ಲ ಕಡೆ ಸಂಘ ಪರಿವಾರ ಮತ್ತು ಅದರ ಮಿತ್ರ ಪ್ರಣಾಳಿತ ಗುಂಪುಗಳದ್ದೇ ಕಾರುಬಾರು. ಉಳಿದ ರಾಜಕೀಯ ಪಕ್ಷಗಳು ಸುಮ್ಮನೆ ತಮ್ಮ ಆತ್ಮರತಿಯಲ್ಲೇ ಕಾಲಕಳೆಯುವುದಾಯಿತು. ಸರಕಾರದ ಬೊಕ್ಕಸದ ಕುರಿತು ಗಂಟಾಘೋಷವಾಗಿ ಆರ್ಭಟಿಸುವವರು ಹೈಸ್ಕೂಲ್ ಮೇಸ್ಟುಗಳಿಗೆ ಮತ್ತು ಹಾಗೆ ಇನ್ನೂ ಕೆಲವು ಇಲಾಖೆಗಳ ನೌಕರರಿಗೆ ಐದಾರು ತಿಂಗಳುಗಳಿಂದ ಸಂಬಳವನ್ನೆ ಕೊಟ್ಟಿಲ್ಲ. ಮೇಸ್ಟುಗಳು ಬೀದಿಗೆ ಬಂದು ಎಚ್ಚರಿಸುವಾಗ ಇಂಥ ಹೇಳಿಕೆ ಕೊಡಲೂ ನಾಚಿಕೆ ಆಗುವುದಿಲ್ಲವಲ್ಲ.

  ಪ್ರತಿಕ್ರಿಯೆ
 3. ಆನಂದ ಕೋಡಿಂಬಳ

  ಹೆಗಡೆಯವರ ಕಾಳಜಿ ಮತ್ತು ಚಿಂತನೆಗಳು ವರ್ತಮಾನದ ಪರಿಸರ, ಸಮಾಜ, ರಾಜಕೀಯದ ಕುರಿತು ಕೂಲಂಕಷವಾಗಿ ಚಿಂತನೆಗೆ ಹಚ್ಚುವಂಥದ್ದು. ಪೂರ್ವಗ್ರಹೀತ ಚಿಂತನೆ ಬಿಟ್ಟು ಜನತೆ ತಮ್ಮ ತಮ್ಮ ಕಾಲಬುಡವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಮುಕ್ತವಾದ ಜವಾಬ್ದಾರಿ ಮತ್ತು ತಮ್ಮ ಹಕ್ಕು ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂಬ ಇಂಗಿತದಿಂದ ಕೂಡಿದ್ದು.

  ಪ್ರತಿಕ್ರಿಯೆ
 4. d.s.ramaswamy

  ಥ್ಯಾಂಕ್ಸ್ ಅಂದ್ರೆ ಕೃತಕವಾಗುತ್ತೆ.ಹೇಳದೇ ಇದ್ರೆ ನಾಚಿಕೆ ಉಳಿಯುತ್ತೆ, ಕೇರ! ದೂರದೂರಲ್ಲಿ ಕೂತೂ ನಾಗೇಶ ಹೆಗಡೆ ಬಗ್ಗೆ ಅಕ್ಷರರ ಮಾತು ಓದಿಕೊಳ್ಳವ ಭಾಗ್ಯಕ್ಕೆ ನೀವು ಸೇತುವೆ.
  ಡೀಎಸ್ಸಾರ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: