ಆ ಗಾಳದ ಮೇಲೆ ನೆನಪುಗಳ ಸರಮಾಲೆ..

ನ್ಯಾಲೆಯ ಮ್ಯಾಲೆ ತೂಗುವ ಮನುಕುಲದ ಬಟ್ಟೆಗಳು
-ಸುಶ್ರುತ ದೊಡ್ಡೇರಿ
ಮೌನಗಾಳ
ಒಂದು ಊದ್ದನೆಯ ಹಗ್ಗ ಸಿಕ್ಕರೆ ಏನೇನು ಮಾಡಬಹುದು? ಹಗ್ಗ ತೆಳುವಾಗಿದ್ದರೆ, ಒಂದು ಗಾಳಿಪಟ ಮಾಡಿ ಅದಕ್ಕದನ್ನು ಕಟ್ಟಿ, ಬಯಲಿಗೊಯ್ದು ಹಾರಿಸಿ ಕಾಮನಬಿಲ್ಲನ್ನು ಭೂಮಿಗೆ ಇಳಿಸಬಹುದು. ಇಲ್ಲವೇ ಎರಡು ಬೆಂಕಿಪೊಟ್ಟಣಗಳಿಗೆ ದಾರದ ಎರಡು ತುದಿಗಳನ್ನು ಕಟ್ಟಿ ದೂರದೂರದಲ್ಲಿ ನಿಂತು ಅದನ್ನು ಕಿವಿಗಿಟ್ಟು ಹೃದಯದ ಲಬ್‌ಡಬ್ ಆಲಿಸಬಹುದು. ಹಗ್ಗ ಗಟ್ಟಿಯಿದ್ದರೆ, ಅದರ ಒಂದು ತುದಿಗೆ ಕುಣಿಕೆ ಗಂಟು ಹಾಕಿ, ಗಡಗಡೆಯ ಮೂಲಕ ತೂರಿಸಿ, ಕೊಡಪಾನವನ್ನು ಕುಣಿಕೆಗೆ ಬಿಗಿದು ಬಾವಿಯಲ್ಲಿ ಇಳಿಬಿಟ್ಟು ಪಾತಾಳದಿಂದ ಗಂಗೆಯನ್ನು ಮೇಲೆತ್ತಬಹುದು. ಹಗ್ಗ ತುಂಬಾ ಉದ್ದ ಇದ್ದರೆ? ಮಧ್ಯರಾತ್ರಿಯಲೆದ್ದು ಹಗ್ಗವನ್ನು ಬಯಲಿಗೊಯ್ದು, ಆಕಾಶದಲ್ಲಿ ಮಿನುಗುತ್ತಿರುವ ಎರಡು ತಾರೆಗಳಿಗೆ ಕಟ್ಟಿ ಜೋಕಾಲಿ ಆಡಬಹುದು. ಅತ್ತ ಗಟ್ಟಿಯೂ ಅಲ್ಲ ಇತ್ತ ತೆಳುವೂ ಅಲ್ಲದ ಹಗ್ಗ ಸಿಕ್ಕಿದರೆ? ಆಗ ಅಂಗಳದಲ್ಲಿ ಎರಡು ಕಂಬಗಳನ್ನು ನೆಟ್ಟು, ಆ ಕಂಬಗಳಿಗೆ ಹಗ್ಗವನ್ನು ಅಡ್ಡಡ್ಡ ಕಟ್ಟಿ, ತೊಳೆದ ಬಟ್ಟೆಯನ್ನೆಲ್ಲ ತಂದು ಒಣಹಾಕಬಹುದು. ಹೀಗೆ ಬಟ್ಟೆಯನ್ನು ತೂಗಿಸಿಕೊಂಡು ಬಿಸಿಲಿಗೆ ಸಾರ್ಥಕತೆಯ ಭಾವ ನೀಡುತ್ತಿರುವ ಹಗ್ಗವೇ ‘ನೇಲು’ ಅಥವಾ ‘ನ್ಯಾಲೆ’.
ಚಿತ್ರ: ಚಿನುವ
ನ್ಯಾಲೆಯಲ್ಲಿ ಏನಿಲ್ಲ ಏನಿದೆ? ಅಮ್ಮನ ಸೀರೆ, ಅಕ್ಕನ ಪೆಟ್ಟಿಕೋಟು, ಅಪ್ಪನ ಶರ್ಟು ಧರಿಸಿರುವ ಹ್ಯಾಂಗರು, ವಿಮಾನದಂತೆ ಕಾಣುತ್ತಿರುವ ಪುಟ್ಟನ ಅಂಡರ್‌ವೇರು, ಅಜ್ಜನ ಮಾಸಲು ಸಾಟಿಪಂಚೆ. ಕೆಲಸದವಳು ತೊಳೆದು ಒಣಗಿಸಿದ್ದ ಅಜ್ಜಿಯ ದಪ್ಪ ಬೆಡ್‌ಶೀಟು ಒಣಗಿದ್ದು ಇಲ್ಲೇ, ನಾಳೆ ಬೆಳಗ್ಗೆ ಧರಿಸಲು ಬೇಕೆಂದು ಗಟ್ಟಿಯಾಗಿ ಹಿಂಡಿ ಹಾಕಿದ್ದ ಬನೀನಿನ ನೀರು ಆರಿದ್ದು ಇಲ್ಲೇ. ಆಚೆಮನೆ ಗಣಪಯ್ಯ ಕಾಫಿ ಚೆಲ್ಲಿ ಆಗಿದ್ದ ಕಲೆಯನ್ನು ತೊಳೆದು ಒಣಗಿಸಿದ್ದ ಜಮಖಾನ, ಮನೆಗೆ ಬಂದಿದ್ದ ನೆಂಟರ ಮಗುವಿನ ಉಚ್ಚೆ ಪರಿಮಳದ ಬಟ್ಟೆ, ಮುಟ್ಟಾಗಿದ್ದಾಗ ಹೊರಗೆ ಮಲಗಿದ್ದ ಸೊಸೆ ಹೊದ್ದಿದ್ದ ಕಂಬಳಿ -ಎಲ್ಲವೂ ಇಲ್ಲೇ ಒಣಗಿ ಹೊಸದಾಗಿವೆ.
ಮನೆಯಲ್ಲಿ ಬಾಣಂತನವಿದೆ ಎಂದಾದರೆ ಹೊಸದೊಂದು ನ್ಯಾಲೆಯನ್ನೇ ಎಳೆಯಬೇಕಾಗುತ್ತದೆ. ಬಾಣಂತಿಯ ವಸ್ತ್ರಗಳ ಜೊತೆ, ಮಗು ಪದೇ ಪದೇ ಮಾಡಿಕೊಳ್ಳುವ ಹೇಲು-ಉಚ್ಚೆಯ ಬಟ್ಟೆಗಳು, ತೊಟ್ಟಿಲಿನ ಮೆತ್ತೆಗೆ ಹಾಕುವ ವಸ್ತ್ರಗಳು, ಮಗುವಿನ ಗೊಬ್ಬೆ, ಪುಟ್ಟ ಅಂಗಿ-ಚಡ್ಡಿ, ಸ್ವೆಟರು…. ಊಹುಂ, ಇರುವ ನ್ಯಾಲೆ ಸಾಕಾಗುವುದೇ ಇಲ್ಲ. ಯಾರದಾದರೂ ಮನೆಯಲ್ಲಿ ಬಾಣಂತಿಯಿದ್ದಾಳಾ ಅಂತ ಕಂಡುಹಿಡಿಯಲು ಮನೆಯೊಳಗೆ ಹೋಗಬೇಕಾಗಿಯೇ ಇಲ್ಲ, ಹೊರಗಿರುವ ನ್ಯಾಲೆಯನ್ನು ಗಮನಿಸಿದರೆ ಸಾಕು.
ಅಷ್ಟೇ ಅಲ್ಲ, ಅವಶ್ಯಕತೆಯಿದ್ದರೆ, ಮನೆಯೊಳಗಿರುವವರ ಜಾತಿ, ಧರ್ಮ, ಅಂತಸ್ತು, ಸಂಸ್ಕೃತಿ, ವಯಸ್ಸು -ಎಲ್ಲವಕ್ಕೂ ನ್ಯಾಲೆಯೇ ಬೆಳಕಿಂಡಿಯಾಗಬಲ್ಲದು. ನ್ಯಾಲೆಯಲ್ಲಿ ಮಡಿಪಂಚೆ-ಶಲ್ಯಗಳು, ಕೆಂಪು ಕೆಂಪು ಮಡಿ ಸೀರೆಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಕಪ್ಪು ಬುರ್ಕಾಗಳು, ಅಚ್ಚಬಿಳಿ ಜುಬ್ಬಾಗಳು ಇದ್ದರೆ ಅಥವಾ ನ್ಯಾಲೆಯಲ್ಲಿ ಬರೀ ಜೀನ್ಸ್ ಪ್ಯಾಂಟುಗಳು, ಟೀ ಶರ್ಟುಗಳು, ವಿ‌ಐಪಿ ಬನೀನುಗಳು ಇದ್ದರೆ… ಗೊತ್ತಾಗಿಯೇ ಬಿಡುತ್ತದೆ- ಮನೆಯವರು ಇಂಥವರು ಎಂದು. ಮನೆಯೊಳಗೊಬ್ಬ ಹರೆಯದ ಹುಡುಗಿಯಿದ್ದಾಳೆಯೇ ತಿಳಿಯಬೇಕೇ- ನ್ಯಾಲೆಯನ್ನು ಗಮನಿಸಿ ಸಾಕು. ಮನೆಯೊಳಗೊಬ್ಬ ಹಣ್ಣುಹಣ್ಣು ಮುದುಕ ಇದ್ದಾನೆಯೇ ತಿಳಿಯಬೇಕೇ- ನ್ಯಾಲೆಯತ್ತ ದೃಷ್ಟಿ ಹರಿಸಿ ಸಾಕು. ಈ ಮನುಕುಲದೆಲ್ಲ ಸಂಸಾರಗಳ ಒದ್ದೆಬಟ್ಟೆ ಒಣಗಿ ಹಸನಾಗುವುದು ನ್ಯಾಲೆಯೆಂಬ ನಾಲ್ಕು ಮೀಟರ್ ದಾರದ ಮೇಲೇ.
ಎಲ್ಲರ ಮನೆಯ ಬಚ್ಚಲಲ್ಲೂ ಒಂದು ಪುಟ್ಟ ನ್ಯಾಲೆಯಿದೆ. ಹೊರಗೆ ಒಣಗಿಸಲು ಹಿಂಜರಿದವರ ಅಂಡರ್‌ವೇರು, ಪ್ಯಾಂಟಿ, ಬ್ರಾಗಳು ಇಲ್ಲಿ ಮುಚ್ಚಟೆಯಲ್ಲಿವೆ. ಬಚ್ಚಲಿನ ಬಿಸಿನೀರಿನ ಹಬೆ ಬೆರೆತ ಗಾಳಿಯಲ್ಲೇ ಅವು ಒಣಗಿ ಪುನೀತವಾಗಬೇಕಿದೆ. ಸ್ನಾನದ ನಂತರ ಮೈ ಒರೆಸಿಕೊಳ್ಳಲಿಕ್ಕಿರುವ ಟವೆಲ್ಲಿಗೂ ಇಲ್ಲಿ ಸ್ಥಾನ. ಬಾತ್‌ರೂಮ್ ಸಾಂಗುಗಳೆಲ್ಲ ಇದಕ್ಕೆ ಬಾಯಿಪಾಠ. ಮನೆಯವರೆಲ್ಲರ ನಗ್ನ ದೇಹಗಳೂ ಇದಕ್ಕೆ ಪರಿಚಿತ. ಯವ್ವನಿಗನ ಮುಷ್ಟಿಮೈಥುನ, ಹುಡುಗಿ ಬದಲಿಸಿಕೊಂಡ ಸ್ಟೇಫ್ರೀಗಳ ಗುಟ್ಟು ಬಾತ್‌ರೂಮಿನ ನ್ಯಾಲೆಯ ಮೆಮರಿಯಲ್ಲಿ ಸುರಕ್ಷಿತ.
ಮಳೆಗಾಲದಲ್ಲಿ ಅಂಗಳ-ಟೆರೇಸುಗಳಲ್ಲಿನ ನ್ಯಾಲೆಗಳಿಗೆ ಬೇಸರ. ಸುರಿವ ಧೋ ಮಳೆಯಲ್ಲಿ ನಡುಗುತ್ತ ತನ್ನ ನೀಳ ಮೈಯ ಊದ್ದಕ್ಕೂ ಸ್ನಾನ ಮಾಡಿಕೊಳ್ಳುವ ಇದು ಮುಗಿಲಲ್ಲಿ ದಟ್ಟೈಸಿರುವ ಮೋಡಗಳತ್ತ ದೈನೇತಿ ಕಣ್ಣಲ್ಲಿ ನೋಡುತ್ತದೆ. ಗೆಳೆಯ ಸೂರ್ಯ ಎಲ್ಲಿಗೆ ಹೋದ ಎಂದು ಹುಡುಕುತ್ತದೆ. ತನ್ನ ನಿರುಪಯುಕ್ತ ಸ್ಥಿತಿಯಿಂದಾಗಿ ಈಗ ಮನೆಯೊಳಗೇ ಎಳೆಯಲ್ಪಟ್ಟಿರುವ ಟೆಂಪರರಿ ನ್ಯಾಲೆಯನ್ನು ಇದು ಅಸೂಯೆಯ ಕಣ್ಗಳಿಂದ ನೋಡುತ್ತದೆ. ಎಷ್ಟು ಬೇಗ ಮಳೆಗಾಲ ಮುಗಿದೀತೋ, ತನಗೆ ಮತ್ತೆ ಬೆಲೆ ಬಂದೀತೋ ಎಂದು ಕಾಯುತ್ತದೆ. ಆದರೆ, ತುಂತುರು ಮಳೆಯ ನಂತರ ಸಾಲು ಸಾಲು ಮಳೆನೀರ ಮಣಿಗಳನ್ನು ಧರಿಸಿ ಚಂದ ಕಾಣುವಾಗ ಮಾತ್ರ, ನ್ಯಾಲೆ ತನ್ನಂದಕ್ಕೆ ತಾನೇ ಮರುಳಾಗಿಬಿಡುತ್ತದೆ. ಬೀಸುಗಾಳಿಗೆ ಮಣಿಗಳು ಉದುರುವಾಗ ನ್ಯಾಲೆ ಕಣ್ಣೀರು ಹಾಕುವಂತೆ ಕಾಣುತ್ತದೆ.
ನ್ಯಾಲೆಗಳಿಗೆ ಕ್ಲಿಪ್ಪು ಮತ್ತು ಹ್ಯಾಂಗರುಗಳೆಂಬ ಇಬ್ಬರು ಸಖಿಯರು. ಕ್ಲಿಪ್ಪು ತಬ್ಬಿದರೆ ಹ್ಯಾಂಗರು ಜಗ್ಗುತ್ತದೆ. ಅಂಗಳವೇ ಇಲ್ಲದ ನಗರದ ಮನೆಗಳಲ್ಲಿ ಟೆರೇಸಿನಲ್ಲೇ ನ್ಯಾಲೆಗಳು. ಟೆರೇಸಿನ ನ್ಯಾಲೆಗಳಿಗೆ ಕ್ಲಿಪ್ಪು ಕಡ್ಡಾಯ. ಅದಿಲ್ಲದಿದ್ದರೆ ಒಣಗಿಸಿದ ಬಟ್ಟೆ ಹಾರಿಯೇ ಹೋಗಿತ್ತದೆ- ಮೋರಿಗೋ, ರಸ್ತೆಗೋ, ಪಕ್ಕದ ಟೆರೇಸಿಗೋ, ಗುಲಾಬಿ ಗಿಡದ ಟೊಂಗೆಗೋ. ಕರ್ಚೀಫುಗಳಂತೂ ಕಳೆದೇ ಹೋಗುತ್ತವೆ. ಅಂಗಿಗಳನ್ನು ಒಣಗಿಸಲಿಕ್ಕೆ ಹ್ಯಾಂಗರಿದ್ದರೆ ಒಳ್ಳೆಯದು. ಕಡಿಮೆ ಜಾಗ ಸಾಕು. ಹ್ಯಾಂಗರಿನಲ್ಲಿ ನೇತಾಡುತ್ತಿರುವ ಅಪ್ಪನ ಅಂಗಿಯನ್ನು ಸಡನ್ನಾಗಿ ನೋಡಿದರೆ ಅಪ್ಪನೇ ಅದರೊಳಗಿರುವಂತೆ ಭಾಸವಾಗುತ್ತದೆ.
ನ್ಯಾಲೆಯ ಮೇಲೆ ಗುಬ್ಬಚ್ಚಿ ಕೂತರೆ ನೋಡಲು ಚಂದ. ನ್ಯಾಲೆಗೂ ಆಗ ಆನಂದ. ಕೂತ ಹಕ್ಕಿಯನ್ನು ಸುವ್ವಿ ಸುವ್ವಾಲೆಯೆಂದು ಹಾಡುತ್ತಾ ಇದು ತೂಗುತ್ತಿದ್ದರೆ ಮನೆಯೊಳಗಿನ ಜೋಳಿಗೆಯಲ್ಲಿನ ಕಂದ ನಿದ್ದೆ ಹೋಗಬೇಕು. ತನ್ನನ್ನು ತೂಗಿದ ನ್ಯಾಲೆಗೆ ಗುಬ್ಬಚ್ಚಿ ಎಂದೂ ಕೃತಜ್ಞ. ಗುಬ್ಬಚ್ಚಿಗೂ ನ್ಯಾಲೆಗೂ ಭಲೇ ಗೆಳೆತನ. ವಜೆಯ ಬೆಡ್‌ಶೀಟು, ರಗ್ಗುಗಳನ್ನು ಒಣಗಿಸಿದಾಗ ತಾಳಲಾರದೆ ಪೂರ್ತಿ ಜಗ್ಗಿಹೋಗುವ ನ್ಯಾಲೆಯ ನೋವನ್ನು ಅರ್ಥ ಮಾಡಿಕೊಳ್ಳುವ ಗುಬ್ಬಚ್ಚಿ, ಆಗ ಅಲ್ಲಿಗೆ ಬಂದು, “ಇನ್ನೇನು ಸ್ವಲ್ಪ ಹೊತ್ತು, ಒಣಗಿಹೋಗುತ್ತೆ, ಒಯ್ದುಬಿಡುತ್ತಾರೆ, ನೀನು ನಿರಾಳವಾಗಬಹುದು..” ಅಂತೆಲ್ಲ ಸಮಾಧಾನ ಮಾಡುತ್ತದೆ. ಬೆಡ್‌ಶೀಟು, ರಗ್ಗುಗಳಿಂದ ನ್ಯಾಲೆಯ ಕಣ್ಣೀರು ಧಾರಾಕಾರ ಹರಿಯುತ್ತದೆ. “ಈಗೆಲ್ಲ ವಾಷಿಂಗ್ ಮಶೀನುಗಳ ಡ್ರೈಯರುಗಳಲ್ಲೇ ಒಣಗುತ್ತವಂತೆ ಬಟ್ಟೆ” ಎಂದರೆ ನ್ಯಾಲೆ, “ಛೇ ಬಿಡು, ಅವಕ್ಕೆ ನಿನ್ನನಾಲಂಗಿಸುವ ಭಾಗ್ಯವಿಲ್ಲ ಅಷ್ಟೇ” ಅಂತ ಉತ್ತರಿಸುತ್ತದೆ ಗುಬ್ಬಚ್ಚಿ.
ನಮ್ಮ ದೈನಿಕದ ಅವಶ್ಯಕತೆಗಳನ್ನು ಸಂಬಾಳಿಸಲಿಕ್ಕೆ ಸದ್ದಿಲ್ಲದೆ ಸಹಾಯ ಮಾಡುವ ಈ ದಾರ ಯಾವ ಊರಿನ ಯಾವ ತಿರುವಿನ ಯಾರ ಮನೆಯ ಯಾರ ಕೈಗಳಲ್ಲಿ ಹೊಸೆಯಲ್ಪಟ್ಟಿತು? ಹಾಸ್ಟೆಲ್ಲು, ಹಾಸ್ಪಿಟಲ್ಲು, ಜೈಲುಗಳಲ್ಲಿ ಮೀಟರುಗಟ್ಟಲೆ ಅಡ್ಡಾದಿಡ್ಡಿ ಎಳೆಯಲ್ಪಟ್ಟಿರುವ ನ್ಯಾಲೆಯ ತಂತಿಗಳು ಯಾವ ಕಾರ್ಖಾನೆಯಲ್ಲಿ ತಯಾರಾದವು? ಉರಿಬಿಸಿಲು, ಸುರಿಮಳೆ, ಘೋರ ಚಳಿಗಳಲ್ಲೂ ಹೊರಗೇ ಉಳಿದು ನಮ್ಮನ್ನು ಒಳಗೆ ನೆಮ್ಮದಿಯಲ್ಲಿಟ್ಟ ಬಟ್ಟೆಗಳ ನೂಲುಗಳಲ್ಲಿ ಆ ಬೆಚ್ಚನೆಯ ಭಾವ ತುಂಬಿದ ನ್ಯಾಲೆಗಳಿಗೆ ಹೇಗೆ ಹೇಳೋಣ ಕೃತಜ್ಞತೆ?
ಬೆಳದಿಂಗಳಲ್ಲಿ ತೋಯುತ್ತ ತಂಗಾಳಿಯೊಂದಿಗೆ ಮಾತನಾಡುತ್ತ ತೂಗುತ್ತಿದೆ ಹೊರಗೆ ನೇಲು.. ಕಪ್ಪು ಆಗಸದ ಬಿಳಿ ಬಿಳಿಯ ನಕ್ಷತ್ರಗಳ ಕೈಬೀಸಿ ಕರೆಯುತ್ತಿದೆ ತುದಿಯಲ್ಲಿ ಒಂದು ಯಾರದೋ ವೇಲು.

‍ಲೇಖಕರು avadhi

March 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

  1. chandrashekhar mumbai

    ONDU OLLE NAVIRAADA LEKHANA,ODI KHUSHI AYTU KELAVEDE KACHAGULI KELAVEDE PAAPA
    ANNISTU

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: