‘ಆ ದಶಕ’ವೇ ಹಾಗಿತ್ತು…

80 ರ ದಶಕವೇ ಹಾಗಿತ್ತು. ತಲ್ಲಣ, ಸ್ವಾಭಿಮಾನ, ಹೋರಾಟದ ಕಿಚ್ಚು ಎಲ್ಲವೂ ಮುಪ್ಪರಿಕೊಂಡ ಕಾಲ ಅದು. ಈ ಕಾಲವನ್ನು ಕಟ್ಟಿ ಹಾಕಿ ನಿಲ್ಲಿಸಿದವರು ಕೆ ಅಕ್ಷತಾ. ಕಡಿದಾಳು ಶಾಮಣ್ಣ ಅವರ ‘ಕಾಡ ತೊರೆಯ ಜಾಡು’ ಆತ್ಮ ಕಥಾನಕಕ್ಕೆ ಕೈ ಹಾಕಿದ ಅಕ್ಷತಾ ಅದಕ್ಕೂ ಮುನ್ನವೇ ಹೊಸ ಕೃತಿಯೊಂದಿಗೆ ನಮ್ಮೆದುರು ನಿಂತಿದ್ದಾರೆ.

ಕಡಿದಾಳು ಶಾಮಣ್ಣ ಬರೆದ ಲೇಖನಗಳು, ಪತ್ರಗಳು, ಅವರಿಗೆ ಸಿಕ್ಕ ಪ್ರತಿಕ್ರಿಯೆಗಳು ಎಲ್ಲವೂ ೮೦ ರ ದಶಕದ ಬೇಗುದಿಯನ್ನು ಬಣ್ಣಿಸುತ್ತವೆ. ಆ ದಶಕ ಗೊತ್ತಿಲ್ಲದ ತಲೆಮಾರಿಗೆ ಇದು ಅರಿವು, ಗೊತ್ತಿರುವವರಿಗೆ ನೆನಪ ದೋಣಿಯ ಪಯಣ ಎರಡನ್ನೂ ಈ ಪುಸ್ತಕ ಒದಗಿಸುತ್ತದೆ. ಎಂ ಎಸ್ ಆಶಾದೇವಿ, ಟಿ ಅವಿನಾಶ್,  ಕಿ ರಂ ಒತ್ತಾಸೆಯಲ್ಲಿ ಅಕ್ಷತಾ ಎಂಬ ಪ್ರಕಾಶಕಿ ಅರಳಿದ್ದಾಳೆ.

‘ಮತ್ತೆ ಮತ್ತೆ ಪಂಪ’, ‘ಮತ್ತೆ ಮತ್ತೆ ಬ್ರೆಕ್ಟ್’ ನಂತರ ಇದೀಗ ಅಕ್ಷತಾ ಆ ದಶಕವನ್ನು ನೀಡಿದ್ದಾರೆ. ಮುಂದಿನ ಕೃತಿ  ‘ಮತ್ತೆ ಮತ್ತೆ ಅಲ್ಲಮ’.

ಆ ದಶಕಕ್ಕೆ ನಟರಾಜ್ ಹುಳಿಯಾರ್ ಬರೆದಿರುವ ಮಾತು ಇಲ್ಲಿವೆ…

-ನಟರಾಜ ಹುಳಿಯಾರ್

ಕರ್ನಾಟಕದ ದಿಕ್ಕನ್ನು ಬದಲಿಸಿದ ಇಪ್ಪತ್ತನೇ ಶತಮಾನದ ಎಂಬತ್ತರ ದಶಕವನ್ನು ಸಮಾಜವಾದಿ ಕಡಿದಾಳು ಶಾಮಣ್ಣನವರ ಪತ್ರ ವ್ಯವಹಾರ ಹಾಗೂ ಬರಹಗಳ ಮೂಲಕ ಅರಿಯುವ ಈ ಪುಸ್ತಕದ ಕ್ರಮ ಚಾರಿತ್ರಿಕವಾದುದು. ಈ ಪುಟಗಳಲ್ಲಿ ತೇಜಸ್ವಿ, ಲಂಕೇಶ್, ರಾಮದಾಸ್, ದೇವನೂರು ಮಹದೇವ್, ಎಂ.ಡಿ.ನಂಜುಂಡಸ್ವಾಮಿ, ಸುಂದರೇಶ್, ರುದ್ರಪ್ಪ ಮುಂತಾದ ಹೆಸರುಗಳು ಕಣ್ಣಿಗೆ ಬೀಳುತ್ತಿದ್ದಂತೆಯೇ ಎಂಬತ್ತರ ದಶಕದ ಕರ್ನಾಟಕವನ್ನು ಈ ಮಹಾನ್ ಚೇತನಗಳನ್ನು ಬಿಟ್ಟು ಗ್ರಹಿಸುವುದು ಯಾವ ಚರಿತ್ರಕಾರನಿಗೂ ಸಾಧ್ಯವಿಲ್ಲ ಎಂಬ ಸತ್ಯ ಹೊಳೆಯುತ್ತದೆ.

ರೈತಸಂಘ, ಕಾರ್ಯಕರ್ತರು, ಜೈಲು, ಕೋರ್ಟು, ವಿಚಾರಣೆ, ದಲಿತ ಸಂಘರ್ಷ ಸಮಿತಿ, ಲಂಕೇಶ್ ಪತ್ರಿಕೆ, ಪ್ರಾದೇಶಿಕ ಪಕ್ಷ- ಈ ಎಲ್ಲದರ ಬಗೆಗೂ ಇಲ್ಲಿ ಪ್ರಸ್ತಾಪವಿದೆ. ಆ ದಶಕದ ಕರ್ನಾಟಕವನ್ನು ರೂಪಿಸಿದ ಮುಖ್ಯ ಶಕ್ತಿಗಳಾದ ರೈತಸಂಘ ಮತ್ತು ಲಂಕೇಶ್ ಪತ್ರಿಕೆಗಳೆರಡರ ನಡುವಣ ಕೊಂಡಿಯಂತೆ ಶಾಮಣ್ಣ ಕೆಲಸ ಮಾಡಿದ್ದು ಕೂಡ ಚಾರಿತ್ರಿಕ. ಹಾಗೆಯೇ ಚಳವಳಿಗಳು ರೂಪುಗೊಳ್ಳುವ, ಮುನ್ನುಗ್ಗುವ ಕಾಲದ ಹುಮ್ಮಸ್ಸು, ಅವು ಕುಸಿಯುವ ಕಾಲದ ಯಾತನೆ, ಒಂದು ಚಳವಳಿಯನ್ನು ಮುರಿಯುವ ನೀಚ ರಾಜಕಾರಣ ಹಾಗೂ ಸುಳ್ಳುಗಳು-ಇವೆಲ್ಲವನ್ನೂ ಶಾಮಣ್ಣನವರ ಮೂಲಕ ನೋಡಿದಾಗ ಅವೆಲ್ಲ ಅತ್ಯಂತ ಅಧಿಕೃತವಾಗಿ ಹಾಗೂ ಸತ್ಯಕ್ಕೆ ತೀರ ಹತ್ತಿರವಾಗಿ ಕಾಣತೊಡಗುತ್ತವೆ. ಇವೆಲ್ಲ ಚರಿತ್ರೆಯಲ್ಲಿ ದಾಖಲಾಗುವ ಅಂಶಗಳು ಎಂಬ ಬಗ್ಗೆ ಯೋಚಿಸಲು ಕೂಡ ಹೋಗದೇ, ಕಾಲ ಕಾಲಕ್ಕೆ ತಾವು ಕಂಡದ್ದನ್ನು ಹಾಗೂ ತಮಗೆ ಅನಿಸಿದ್ದನ್ನು ಶಾಮಣ್ಣ ಹೇಳಿರುವ ರೀತಿಯಿಂದಾಗಿ ಕೂಡ ಇವು ಅತ್ಯಂತ ಪ್ರಾಮಾಣಿಕವಾಗಿ ಕಾಣುತ್ತವೆ. ಆ ಸತ್ಯದ ಶಕ್ತಿಯಿಂದಾಗಿಯೇ ತೀವ್ರವಾದ ವಿಶ್ಲೇಷಣೆಗಳೂ ಆಗಿವೆ.

ಕೊನೆಯದಾಗಿ, ರೈತಸಂಘದಲ್ಲಿ ಆ ಕಾಲದ ಹಾಗೂ ವ್ಯಕ್ತಿಗತ ಒತ್ತಡಗಳಿಂದ ವಿಚಿತ್ರ ಬೆಳವಣಿಗೆಗಳು ನಡೆದು ಶಾಮಣ್ಣ ಸಂಘದಿಂದ ದೂರಾಗುವ ಕಾಲಕ್ಕೆ ತೇಜಸ್ವಿ ಬರೆದ ಒಂದು ಮಾತನ್ನು ಇಲ್ಲಿ ನೆನಪಿಸುತ್ತೇನೆ `ಇಷ್ಟಾದರೂ ನಾವ್ಯಾರೂ ರೈತಸಂಘಕ್ಕೆ ಕೇಡು ಬಗೆಯುವ ಅಗತ್ಯವಿಲ್ಲ. ಅವರಿಗೆ ತೊಂದರೆಯಾಗದಂತೆ ನಾವೇನು ಮಾಡಬಹುದೆಂದು ನಾವೆಲ್ಲಾ ಯೋಚಿಸುವ ಅಗತ್ಯವಿದೆ.. ಸುಮ್ಮನೆ ನಂಜುಂಡಸ್ವಾಮಿ ಜಪ ಮಾಡುತ್ತಾ ದೂಷಿಸಿ ಏನೇನೂ ಸುಖವಿಲ್ಲ.

`ಆ ದಶಕ’ ಎಂಬ ಈ ಪುಟ್ಟ ಚಾರಿತ್ರಿಕ ಪುಸ್ತಕದಲ್ಲಿ ಕರ್ನಾಟಕದ ಒಂದು ಕಾಲಘಟ್ಟದ ಬಗೆಬಗೆಯ ತಲ್ಲಣಗಳು, ವೈರುಧ್ಯಗಳು, ಕನಸುಗಳು ಕಟ್ಟುವ ಉತ್ಸಾಹ, ಕುಸಿದ ಕಾಲದ ವಿಷಾದ ಎಲ್ಲವನ್ನೂ ಸ್ವಲ್ಪ ಆ ಕಾಲದಿಂದ ದೂರ ನಿಂತು ಸಹನೆಯಿಂದ ಗ್ರಹಿಸುವ ನಿಟ್ಟಿನಲ್ಲಿ, ಮೇಲೆ ಹೇಳಿದ ತೇಜಸ್ವಿ ಅವರ ಮಾತು ತೋರು ದೀಪವಾಗಬೇಕಿದೆ. ಅಂದರೆ, ಈ ಪುಸ್ತಕದಲ್ಲಿ ದಾಖಲಾಗಿರುವ ವಿದ್ಯಮಾನಗಳು ಒಂದು ಕಾಲವನ್ನು ಮುಕ್ತವಾಗಿ ನೋಡಲು ಹಾಗೂ ನಮ್ಮನ್ನು, ನಾವು ನೋಡಿಕೊಳ್ಳಲು ನೆರವಾಗಬೇಕಾಗಿದೆಯೇ ಹೊರತು ಸಣ್ಣ ಪುಟ್ಟ ಧೂಳೆಬ್ಬಿಸಲು ಅಲ್ಲ ಎಂಬುದನ್ನು ತೇಜಸ್ವಿ ಅವರ ಮಾತಿನ ಬೆಳಕಿನಲ್ಲಿ ಈ ಪುಸ್ತಕದ ಓದುಗರು ಅರಿಯಬೇಕಾಗಿದೆ.

ಚಳವಳಿಯನ್ನು ಹಾಗೂ ಸಮಾಜದ ಕೆಲಸವನ್ನು ಸಹಜವಾದ ಮನೆಯ ಕೆಲಸವೆಂಬಂತೆ ತಿಳಿದು, ಸಾಧ್ಯವಾದಷ್ಟೂ ಹಿನ್ನಲೆಯಲ್ಲೇ ನಿಂತು ರೈತಸಂಘವನ್ನು ಕಟ್ಟಿದ ಶಾಮಣ್ಣನವರ ಪತ್ರಗಳು, ವರದಿಗಳು, ತೇಜಸ್ವಿ, ಲಂಕೇಶ್, ಬಸವರಾಜ ಕಟ್ಟಿಮನಿಯವರ ಪ್ರತಿಕ್ರಿಯೆಗಳು ಮುಂತಾದವುಗಳ ಮೂಲಕ ಒಂದು ದಶಕವನ್ನು ನೋಡಬಹುದೆಂಬ ಆಲೋಚನೆ ಈ ಪುಸ್ತಕವನ್ನು ರೂಪಿಸಿದ ಅಕ್ಷತಾಗೆ ಹೊಳೆದದ್ದು ಚಳುವಳಿಗಳಲ್ಲಿ ನಿಜವಾದ ಆಸಕ್ತಿ ಉಳ್ಳ ನಮ್ಮೆಲ್ಲರ ಭಾಗ್ಯ.

‍ಲೇಖಕರು avadhi

November 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  • akshatha.k, Aharnishi Publication, Shivamogga.

   The book `A Dashaka’ is available in most of the book stalls in Bangalore. However if you did not get this book or if you are from outside Bangalore you can contact 08182-241681 and the book will be sent to you.

   ಪ್ರತಿಕ್ರಿಯೆ
   • vasanth

    Thanks for information. Anyhow I will be visiting Bangalore next week. I will purchase it.
    Thanks

    ಪ್ರತಿಕ್ರಿಯೆ
 1. siddamukhi

  ಬಲಪಂಥೀಯ ವಿಚಾರಧಾರೆ ಬಲವಾಗಿರುವ ಈ ಕಾಲಘಟ್ಟದಲ್ಲಿ ಯಾವುದೇ ಜನಪರ
  ಚಳವಳಿಗೆ ಬೆಂಬಲ ಇಲ್ಲವಾಗಿದೆ. ಚಳವಳಿಯನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ
  ನಡೆಯುತ್ತಿದೆ. ಪ್ರಭುತ್ವ ಕೇಕೆ ಹಾಕಿ ನಗುತ್ತಿದೆ. ಹಕ್ಕು ಕೇಳಿದವರಿಗೆ ಇಕ್ಕುವ ಕೆಲಸ
  ಆಗುತ್ತಿದೆ. ಜನಪರ ದನಿ ಅಡಗಿಸಲು ಲಾಟಿ ಬೂಟುಗಳು ಹಗಲಿರುಳು ಶ್ರಮಿಸುತ್ತಿವೆ.
  ಇದು ಈಗಿನ ಸ್ಥಿತಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: