ಆ ದಿನಗಳು . . .

ಮಾಧ್ಯಮ ಲೋಕವನ್ನು ಒಂದಿಷ್ಟು ಅರ್ಥಪೂರ್ಣವಾಗಿಸಲು ಶ್ರಮಿಸುತ್ತಿರುವ ರಾಮೋಜಿ ರಾವ್ ಬಗ್ಗೆ ಡಿ ಎನ್ ಶ್ರೀದೇವಿ ಬರೆದ ಲೇಖನ ಓದಿದ್ದೀರಿ. ಈಗ ಗ್ರೀಷ್ಮ ರಾಮೋಜಿ ಫಿಲಂ ಸಿಟಿ ಯಲ್ಲಿ ತಾವು ಕೆಲಸ ಮಾಡಿದ ದಿನಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ. ಗ್ರೀಷ್ಮ ಅವರ ಬ್ಲಾಗ್ ಗ್ರೀಷ್ಮಗಾನ ದಲ್ಲಿ ಈ ಲೇಖನ ಇದೆ.

 

img_1979ಚಿತ್ರ: ಜಿ ಎನ್ ಮೋಹನ್ 

ಕೆಲವು ನೆನಪುಗಳು ಸದಾ ಹಸಿರು ; ನೆನಪಾದಾಗ ಮನಸ್ಸಿನಲ್ಲಿ ಸಂತೋಷದ ಬುಗ್ಗೆ, ಏನೋ ಉಲ್ಲಾಸ ; ಅಂಥವುಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡ್ತ ಹೈದರಾಬಾದಿನಲ್ಲಿ ಕಳೆದ ದಿನಗಳದೂ ಒಂದು. ಈಗಷ್ಟೇ, ಅಲ್ಲೇ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತನೊಬ್ಬನಿಗೆ ಫೋನಾಯಿಸಿದ್ದೆ, ಅವನ ಜೊತೆ ಮಾತಾಡುತ್ತಿರುವಾಗ ಅಲ್ಲಿಯ ಚಿತ್ರಗಳೆಲ್ಲ ಕಣ್ನ ಮುಂದೆ – ಹೈದರಾಬಾದಿನ ಬಸ್ ಸ್ಟ್ಯಾಂಡ್, ಕೋಟಿ, ಫಿಲ್ಮ್ ಸಿಟಿ, ಆಫೀಸ್, ಕ್ಯಾಂಟೀನ್, ನಾನು ಮನೆ ಮಾಡಿಕೊಂಡಿದ್ದ ಸ್ಥಳವಾದ ಭಾಗ್ಯಲತಾ, ಸುಲ್ತಾನ್ ಬಜಾರ್ . . . . ಹೀಗೆ ಪ್ರತಿಯೊಂದೂ. ಫೋನ್ ಇಟ್ಟ ಎಷ್ಟೋ ಹೊತ್ತಿನ ನಂತರವೂ ಅದೇ ಗುಂಗು. ಯಾವಾಗಲೂ ಮನುಷ್ಯನಿಗೆ ಬಿಟ್ಟುಬಂದಿದ್ದರ ಬಗ್ಗೆ ವ್ಯಾಮೋಹ ಜಾಸ್ತಿ ಅಂತೆ; ಹ್ಯದರಾಬಾದಿನ ವಿಷಯದಲ್ಲಿ ನಾನೂ ಈ ಭಾವವನ್ನು ಅನುಭವಿಸಿದ್ದೇನೆ, ಅನುಭವಿಸುತ್ತಿರುತ್ತೇನೆ.

ಎಂ.ಎ. ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿದ್ದ ದಿನಗಳವು ; ವರ್ಷದ ಮೇಲಾದರೂ ಕೆಲಸ ಸಿಗದಿದ್ದಾಗ ಪಿ.ಯೂ.ಸಿ.ಯಲ್ಲಿ ಮೊದಲು ಸ್ಯನ್ಸ್ ತೆಗೆದುಕೊಂಡು , ನಂತರ ಆರ್ಟ್ಸ್ ಗೆ ಬದಲಾಯಿಸಿಕೊಂಡು, ಅದರಲ್ಲೂ ಕನ್ನಡ ಆಪ್ಶನಲ್ ತೆಗೆದುಕೊಂಡು ನಂತರ ಅದರಲ್ಲೇ ಎಂ.ಎ. ಮಾಡಿದ್ದಕ್ಕೇ ಹೀಗೆ ಎಂದು ಖಿನ್ನತೆಗೆ ಜಾರಿದ್ದುಂಟು. ಯಾರಿಗಿರುವುದಿಲ್ಲ ಹೇಳಿ, ದುಡಿಯುವ ಆಸೆ ; ಅದರಲ್ಲೂ ನನಗಂತೂ ನನ್ನ ಕಾಲ ಮೇಲೆ ನಿಂತುಕೊಂಡು ನನ್ನ ಅನ್ನ ನಾನೇ ಸಂಪಾದಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿತ್ತು ; ಹಾಸ್ಟೆಲ್ಲಿನಲ್ಲಿರುವಾಗ ಗೆಳತಿಯರೆಲ್ಲ ಸೇರಿ ಆ ದಿನಗಳ ಬಗ್ಗೆ ಕನಸು ಕಟ್ಟಿಕೊಂಡು ಖುಷಿಪಡುತ್ತಿದ್ದೆವು. ಮುಂದೆ ಈಟಿವಿ ಯಲ್ಲಿ ಕೆಲಸ ಸಿಕ್ಕು ಹೊರಟು ನಿಂತಾಗ ಬಂದ ಪ್ರತಿಕ್ರಿಯೆಗಳು ಅಷ್ಟೇನೂ ಆಶಾದಾಯಾಕವಾಗಿರಲಿಲ್ಲ ; ಕೆಲಸಕ್ಕೋಸ್ಕರ ಅಷ್ಟು ದೂರ . . . ? ಬೇರೆ ರಾಜ್ಯಕ್ಕೆ ಹೋಗಬೇಕಾ ? ಅದರಲ್ಲೂ ಹೆಣ್ಣುಮಗಳು !!! ಅಲ್ಲಿ ಒಬ್ಬಳೇ ಹೇಗಿರ್ತೀಯಾ ?- ಎನ್ನುವಂತಹ ನಿರುತ್ತೇಜಕ ಮಾತುಗಳು ; ನನ್ನ ಮನೆಯಲ್ಲಿ ಹೋಗುವುದು ಬೇಡ ಎಂದು ಹೇಳದಿದ್ದರೂ ಕಳಿಸುವುದಕ್ಕೆ ಅಷ್ಟೇನೂ ಮನಸ್ಸಿರಲಿಲ್ಲ, ಅಲ್ಲಿಗೆ ಹೋದರೆ ಮದುವೆ ಮಾಡುವುದಕ್ಕೆ ತೊಂದರೆಯಾಗುತ್ತದೆ ಎನ್ನುವ ಆತಂಕ. .    

ಈ ಜನ ಯಾಕೆ ತಮ್ಮ ಜೀವನವನ್ನು ಸೀಮಿತಗೊಳಿಸಿಕೊಂಡು ಆಲೋಚಿಸುತ್ತಾರೆ, ಹಾಗೆಯೇ ಬದುಕುತ್ತಾರೆ ? ಮದುವೆ-ಗಂಡ-ಮನೆ-ಮಕ್ಕಳು ಈ ಚೌಕಟ್ಟಿನಿಂದ ಹೊರಗೆ ಬಂದು ಹೊಸ ಹೊಸ ಅನುಭವಗಳನ್ನ ಯಾಕೆ ಪಡೆಯಲಿಚ್ಛಿಸುವುದಿಲ್ಲ ? ಎದ್ದಿದ್ದವು ಪ್ರಶ್ನೆಗಳು ; ಆದರೆ ಕೇಳುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ ಎಂದೆನಿಸಿ ಹೈದರಾಬಾದಿಗೆ ಹೊರಟುಬಂದಿದ್ದೆ. ರಾಮೋಜಿ ಫಿಲ್ಮ ಸಿಟಿ, ಈಟೀವಿ ಇವುಗಳ ಬಗ್ಗೆ ಹೊರಗಿನವರಿಗೆ ಸಹಜವಾಗಿ ಒಂದು ರೀತಿಯ ಆಕರ್ಷಣೆ ಇರುವಂತೆ ನಾನೂ ಸಂಭ್ರಮ, ಕುತೂಹಲ, ಆತಂಕ ಇನ್ನೂ ಹೇಳಲಾಗದ ಭಾವಗಳೊಂದಿಗೆ ಹೊಸಾ ಪ್ರಪಂಚದಲ್ಲಿ ಕಾಲಿಟ್ಟಿದ್ದೆ. ಅಲ್ಲಿಂದ ಶುರುವಾಗಿತ್ತು ಹೊಸಾಜೀವನ ; ಪರಿಸರ-ಜನರು-ಭಾಷೆ ಪ್ರತಿಯೊಂದೂ ಹೊಸತೇ.

ರಾಮೋಜಿರಾವ್ ನ ಸಾಮ್ರಾಜ್ಯ ಫಿಲ್ಮ್ ಸಿಟಿ ಒಂದು ಮಾಯಾನಗರಿ ; ಸಿನೆಮಾ ಶೂಟಿಂಗ್ ಗಾಗಿ ಎತ್ತೆರೆತ್ತರದ ಬಿಲ್ಡಿಂಗ್ ಗಳು, ಅರಮನೆ, ಕೋಟೆಗಳು, ದೇಚಸ್ಥಾನ, ಜಗತ್ತಿನ ಬೇರೆ ಬೇರೆ ಸ್ಥಳಗಳ ಮಾದರಿಗಳು ಎಲ್ಲವನ್ನೂ ಕೃತಕವಾಗಿ ನಿರ್ಮಿಸಿ ಅದೇ ಪ್ರದೇಶ ಎಂಬ ಭ್ರಮೆ ಹುಟ್ಟಿಸುತ್ತಾರೆ. ಯಶೋಧಾ ಹಾಸ್ಪಿಟಲ್ ಎಂಬ ಬೋರ್ಡ್ ಇದ್ದ ದೊಡ್ಡ ಕಟ್ಟಡವೊಂದನ್ನು ಎಷ್ಟೋ ದಿನಗಳ ಕಾಲ ನಾನು ನಿಜವಾದ ಆಸ್ಪತ್ರೆ ಎಂದೇ ಭಾವಿಸಿದ್ದೆ!!!. ಪ್ರವಾಸಕ್ಕೆಂದು ಬರುವವರಿಗೆ ನಾನಾ ಬಗೆಯ ಆಟಗಳು, ಮನರಂಜನೆಗಳು, ಕಣ್ಮನ ತಣಿಸುವ ಸುಂದರ ಉದ್ಯಾನವನಗಳು ಜೊತೆಗೆ ಹದಿಮೂರು ಭಾಷೆಗಳ ಈಟಿವಿ ಛಾನಲ್ ಗಳ ಕಛೇರಿಗಳಿರುವುದೂ ಇಲ್ಲೇ. ಮನೆಯಲ್ಲಿದ್ದಾಗ ಕೆಲವು ಧಾರಾವಾಹಿಗಳನ್ನ ನೋಡುತ್ತಿದ್ದ ನನಗೆ ಆ ವಿಭಾಗದಲ್ಲಿಯೇ ಕೆಲಸ ಸಿಕ್ಕಿದ್ದು ವಿಶೇಷ. ಮನೆಯಲ್ಲಿ ಆರಾಮಾಗಿ ಕುಳಿತು ಟೀವಿ ನೋಡುತ್ತಿದ್ದ ನನಗೆ ಅದರ ಹಿಂದೆ ಎಷ್ಟೆಲ್ಲ ಜನರ ಶ್ರಮ, ಏನೆಲ್ಲಾ ತಯಾರಿಗಳಿರುತ್ತವೆ ಎಂದು ಗೊತ್ತಾಗಿದ್ದೇ ಆಗ; ಒಟ್ಟಿನಲ್ಲಿ ಹೊಸಾ ರೀತಿಯ ಕೆಲಸ, ಹೊಸಾ ಅನುಭವ . . .

ಐದಾರು ಜನ ಸ್ನೇಹಿತರು ಸೇರಿಕೊಂಡು ಬಾಡಿಗೆ ಮನೆಗಾಗಿ ಅಲೆದಿದ್ದು.ಮನೆ ಸಿಕ್ಕ ನಂತರ ಮಲಗಲು ಹಾಸಿಗೆ-ತಡಿಗಾಗಿ ಕಷ್ಟಪಟ್ಟಿದ್ದು, ಅಂಗಡಿಗಳಿಗೆ ಏನಾದರೂ ತರಲು ಹೋದಾಗ ಭಾಷೆ ಬರದೆ ಒದ್ದಾಡಿದ್ದು ಎಲ್ಲವೂ ವಿಭಿನ್ನ ಅನುಭವಗಳೇ. ಬೆಂಗಳೂರಿನ ಹಾಗೆ ಅಲ್ಲಿ ಬಾಡಿಗೆ ಮನೆಗೆ ಹೆಚ್ಚು ಹಣ ಇಲ್ಲ, ಜೊತೆಗೆ ಅಡ್ವಾನ್ಸ್ ಎಂದು ಸಾವಿರಾರು ರೂಪಾಯಿ ಸುರಿಯಬೇಕಾಗಿಲ್ಲ, ಒಂದು ತಿಂಗಳ ಬಾಡಿಗೆಯನ್ನು ಹೆಚ್ಚು ಕೊಟ್ಟರಾಯಿತಷ್ಟೆ. ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ಆರಾಮಾಗಿ ಇರಬಹುದು ; ಜೀವನನಿರ್ವಹಣಾವೆಚ್ಚವೂ ಬೆಂಗಳೂರಿಗೆ ಹೋಲಿಸಿದಾಗ ತುಂಬ ಕಡಿಮೆಯೇ ; ಇಲ್ಲಿ ಪ್ರತಿಯೊಂದಕ್ಕೂ ಹೆಚ್ಚು ಹಣ ಸುರಿಯುವಾಗ ಅಲ್ಲಿಯ ದಿನಗಳು, ಸಂಜೆಗಳು ನೆನಪಾಗುತ್ತವೆ.

ಆರ್ಥಿಕ ಸ್ವಾವಲಂಬನೆ ಮನುಷ್ಯನಿಗೆ ಒಂದು ರೀತಿಯ ನೆಮ್ಮದಿ-ವಿಶ್ವಾಸವನ್ನು ಕೊಡುತ್ತದಂತೆ ; ಮೊದಲ ಸಂಬಳ ಪಡೆದಿದ್ದು, ಅದರಲ್ಲಿ ಮೊಬೈಲ್ ತೆಗೆದುಕೊಂಡಿದ್ದು, ಮೊದಲ ಬಾರಿ ಊರಿಗೆ ಬರುವಾಗ ಅಮ್ಮನಿಗೆ ಸೀರೆ ತಂದಿದ್ದು ಎಲ್ಲವೂ ಖುಷಿ ಕೊಡುವ ನೆನಪುಗಳೇ. ಅಲ್ಲಿ ಕಳೆದಷ್ಟು ದಿನ ಯಾವ ಕಟ್ಟುಪಾಡುಗಳೂ ಇರಲಿಲ್ಲ ; ನನ್ನದೇ ಚಿಕ್ಕ ಮನೆ, ಕೆಲಸ, ಖರ್ಚಿಗೆ ದುಡ್ಡು, ಮನಸೋ ಇಚ್ಛೆ ಅಲೆಯುವುದು . . . . . . ಸ್ವಾತಂತ್ರ್ಯದ ಪರಮಾವಧಿಯನ್ನು ಅನುಭವಿಸಿದ ದಿನಗಳವು.
img_14841
ಯಾಕೆ ಹೀಗೆ ಹೇಳುತ್ತಿರುವುದೆಂದರೆ ನಮ್ಮ ಸಮಾಜದಲ್ಲಿ ಹುಡುಗಿಯರಿಗೆ ನಿರ್ಬಂಧಗಳು ಜಾಸ್ತಿ ; ಎಲ್ಲಿಗೋ ಹೋಗಬೇಕು, ಯಾರನ್ನೋ ಭೇಟಿ ಮಾಡಬೇಕು, ಏನನ್ನಾದರೂ ಮಾಡಬೇಕು ಎಂದರೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ, ಅನುಮಾನದ ನೋಟಗಳನ್ನು ಎದುರಿಸಬೇಕಾಗುತ್ತದೆ; ತಮ್ಮಿಚ್ಛೆಯಂತೆ ಬದುಕನ್ನು ರೂಪಿಸಿಕೊಳ್ಳುವುದು, ಬದುಕುವುದು ಅಷ್ಟು ಸುಲಭವಲ್ಲ ; ಬದುಕೆಂದರೆ ಇಷ್ಟೇ, ಹೀಗೇ ಇರಬೇಕು ಎಂದು ಮಿತಿಗಳನ್ನು ಹಾಕುತ್ತಾರೆ ; ಮಿತಿಗಳಲ್ಲಿ ಬದುಕುವುದು ನನಗಿಷ್ಟವಿಲ್ಲ, ನನ್ನ ಮನೋಭಾವಕ್ಕೆ ಒಗ್ಗುವಂತಹುದೂ ಅಲ್ಲ. ಪ್ರಪಂಚ ವಿಶಾಲವಾಗಿದೆ ; ಎಷ್ಟೊಂದು ಹೊಸ ವಿಷಯಗಳಿವೆ, ವಸ್ತುಗಳಿವೆ, ಅಚ್ಚರಿಗಳಿವೆ ; ಇರುವುದೊಂದೇ ಬದುಕು, ಸಾಧ್ಯವಾದಷ್ಟೂ ವಿಶಿಷ್ಟ-ವಿಭಿನ್ನ ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ತಿಳಿದುಕೊಳ್ಳಬೇಕು, ಸಮೃದ್ಧಗೊಳಿಸಿಕೊಳ್ಳಬೇಕು ; ಹಿಂಜರಿದರೆ ಎಷ್ಟೋ ಅದ್ಭುತ ಎನಿಸುವಂಥ, ಖುಷಿ ಕೊಡುವಂಥ ಅನುಭವಗಳಿಂದ ವಂಚಿತರಾಗಬೇಕಾಗುತ್ತದೆ. ಹೀಗಾಗಿಯೇ ನನಗೆ ಆ ದಿನಗಳು ವಿಶೇಷವೆನಿಸಿದ್ದು, ಪದೇ ಪದೇ ಕಾಡುವುದೂ ಕೂಡಾ.

‍ಲೇಖಕರು avadhi

November 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

4 ಪ್ರತಿಕ್ರಿಯೆಗಳು

 1. srujan

  RFC adbhutha.Sumaru geleyaru e-kannada dalliddaru,Bhagyalatha colony talli 2nd floor avara mane,Lavanya dalli raathri uta,madhyahna paradise na hyderabad biryani,Bank street na vishalandhra books,Supreme audio’s na cd/dvd raashigalu..salarjung, vijaya paala dairi…jeevantha nenapugala hyaderabadannu sogasagi nenapu madikottiri.
  dhanyavaadagalu..

  ಪ್ರತಿಕ್ರಿಯೆ
 2. ರಾಹುಲ್

  ನನ್ನ ಕೆಲ ಸ್ನೇಹಿತರಿಗೆ ನಮ್ಮ ರಾಜ್ಯದಲ್ಲಿಯೇ ಕೆಲಸದ ಆಫರ್ ಬಂದಾಗ
  “ಓ ಅಷ್ಟು ದೂರ ಹೋಗ್ಬೇಕಾ?” ಎಂದು ತಪ್ಪಿಸಿಕೊಂಡವರಿದ್ದಾರೆ.
  ಅಂಥವರಿಗೆ ನಿಮ್ಮ ಬರಹ ಕಣ್ತೆರೆಸುವಂತಿದೆ. ಇರುವುದೊಂದೇ
  ಬದುಕಿನಲ್ಲಿ ಸಾಧ್ಯವಾದಷ್ಟೂ ವಿಶಿಷ್ಟ-ವಿಭಿನ್ನ ಅನುಭವಗಳಿಗೆ ತೆರೆದುಕೊಳ್ಳುವ
  ಪ್ರಯತ್ನವನ್ನು ಮಾಡುವ ಹುಮ್ಮಸ್ಸು ಎಲ್ಲರಲ್ಲೂ ಬರುವಂತಾಗಲಿ.
  ಚನ್ನಾಗಿ ಬರೆದಿದ್ದೀರಾ.

  ಪ್ರತಿಕ್ರಿಯೆ
 3. chithranna

  ramoli filmcity yalli naanu kelasa madi bande
  aadre nange mathra naraka andre nenapagode adu…
  loko binna ruchi bidi…..

  ಪ್ರತಿಕ್ರಿಯೆ
 4. 'ಶಮ', ನಂದಿಬೆಟ್ಟ

  ನೀವು ಹೇಳಿದ್ದು ಸತ್ಯ. ಬದುಕು ಕವಲೊಡೆದು ಹಲವು ವಿಸ್ತಾರಗಳನ್ನು ಪಡೆದು ಸಾಗುವ ನಿಟ್ಟಿನಲ್ಲಿ ಇವೆಲ್ಲ ಅನುಭವಗಳು ಬೇಕು. ನೀವು ಅಲ್ಲಿಗೆ ಹೋದ ಹಾಗೇ ನಾನು ‘ಶಮ’ ಎಂಬ ಬೆಳ್ತಂಗಡಿಯ ನಂದಿಬೆಟ್ಟದ ಹುಡುಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ಬದುಕು ಕಟ್ಟಿಕೊಂಡಿದ್ದು ಹಾಗೆಯೇ.
  -‘ಶಮ’, ನಂದಿಬೆಟ್ಟ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ರಾಹುಲ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: