ಆ ದಿನಗಳ ಸಿಹಿ ಗಾಳಿ

551

-ಎ ಆರ್ ಮಣಿಕಾಂತ್

ಚಿತ್ರ: ಆ ದಿನಗಳು

ಗೀತೆರಚನೆ: ಕೆ. ಕಲ್ಯಾಣ್

ಸಂಗೀತ: ಇಳಯರಾಜ

ಗಾಯನ: ಇಳಯರಾಜ, ನಂದಿತಾ

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ

ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ ||ಪ||

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ

ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ

ಲೋಕವೊಂದೆ ಸಾಕು, ದಿನವು ಬೆರೆಯಲೇಬೇಕು

ಪ್ರೇಮ ಅಮೃತದ ಗೀತೆ ಬರೆಯೋಣ ಬಾ ||1||

ಬಾನಾಡಿಗೊಂದು ಸವಿಮಾತು ಕಲಿಸುವ

ಆ ವೀಣೆಗೊಂದು ಎದೆರಾಗ ತಿಳಿಸುವ

ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ

ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ

ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೆ

ಪ್ರೇಮವೇ ಇಲ್ಲದೆ ನಾನು ನೀನು ಯಾಕೆ? ||2||

as02_musicNotesಒಂದು ಸಿನಿಮಾದ ಹಿಂದಿನ ದೃಶ್ಯಕ್ಕೂ, ನಂತರ ಆರಂಭವಾಗುವ ಹಾಡಿಗೂ ಸಂಬಂಧ ಇರುತ್ತೆ. ಹಾಗಂತ ಚಿತ್ರರಂಗದಲ್ಲಿ ಒಂದು ನಂಬಿಕೆಯಿದೆ. ಉದಾಹರಣೆಗೆ, ನಾಯಕ-ನಾಯಕಿಗೆ ಅಥವಾ ನಾಯಕಿ-ನಾಯಕನಿಗೆ `ನಾನು ನಿನ್ನನ್ನು ಪ್ರೀತಿಸ್ತಾ ಇದೀನಿ’ ಅಂತ ಹೇಳಿದ ನಂತರ ಒಂದು ಪ್ರೇಮಗೀತೆ ಶುರುವಾಗುತ್ತೆ ಅಥವಾ ಇವನ ಪ್ರೀತಿಯನ್ನು ಅವಳೋ; ಅವಳ ಪ್ರೀತಿಯನ್ನು ಇವನೋ ನಿರಾಕರಿಸಿ ಹೋಗಿಬಿಟ್ಟಾಗ ವಿರಹಗೀತೆ ಶುರುವಾಗುತ್ತೆ ಅಥವಾ ನಾಯಕನಿಗೆ ವಿಪರೀತ ಅವಮಾನವಾದಾಗ, ಒಂದು ಸೇಡಿನ ಹಾಡು ಕೇಳಿಬರುತ್ತೆ. ಒಂದು ರೀತಿಯಲ್ಲಿ ಇದು ಗಾಂನಗರದ ವ್ಯಾಕರಣ.

ಇಂಥದೊಂದು ನಂಬಿಕೆಯನ್ನೇ; ವ್ಯಾಕರಣವನ್ನೇ ಬದಲಿಸಿಬಿಟ್ಟ ಹೆಚ್ಚುಗಾರಿಕೆ `ಆ ದಿನಗಳು’ ಚಿತ್ರಕ್ಕೆ ಸಲ್ಲಬೇಕು. ಏಕೆಂದರೆ, ಆ ಚಿತ್ರದ `ಸಿಹಿಗಾಳಿ ಸಿಹಿಗಾಳಿ ಸಹಿಹಾಕಿದೆ ಮನಸಿನಲಿ…’ ಹಾಡಿಗೂ ಅದರ ಹಿಂದಿನ ದೃಶ್ಯಕ್ಕೂ ಸಂಬಂಧವಿಲ್ಲ. ಬದಲಿಗೆ, ಹಾಡಿಗೂ ಮುಂದಿನ ದೃಶ್ಯಕ್ಕೂ ಸಂಬಂಧ ಇದೆ! ಅದು ಹೇಗೆ ಎಂದು ತಿಳಿಯುವ ಮುನ್ನ, ಆ ದಿನಗಳು ಚಿತ್ರದ ಸನ್ನಿವೇಶವನ್ನು ಒಮ್ಮೆ ನೆನಪು ಮಾಡಿಕೊಳ್ಳಿ.

ಕಥಾನಾಯಕ, ಆಗರ್ಭ ಶ್ರೀಮಂತನ ಒಬ್ಬನೇ ಮಗ. ಅವನ ತಂಗಿ ಭರತನಾಟ್ಯ ಶಾಲೆಗೆ ಹೋಗುತ್ತಿರುತ್ತಾಳೆ. ತಂಗಿಯನ್ನು ಡ್ಯಾನ್ಸ್ ಕ್ಲಾಸಿಗೆ ಬಿಟ್ಟು ಹೋಗಲು ಬಂದ ನಾಯಕ, ಡ್ಯಾನ್ಸ್ ಟೀಚರರನ್ನೇ (ಅವಳೇ ಕಥಾನಾಯಕಿ) ಮೋಹಿಸುತ್ತಾನೆ. ನಾಯಕನ ತಂಗಿ, ತನ್ನ ಸಹಪಾಠಿಗಳೊಂದಿಗೆ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾಗಲೇ ಅತ್ತ ನಾಯಕಿಯೊಂದಿಗೆ, ಹೀರೊ  ಪಾಕರ್್ ಸುತ್ತುತ್ತಿರುತ್ತಾನೆ. ಹೀಗೆ ಪ್ರೀತಿಯ ಹೊಳೆಗೆ ಬಿದ್ದು ಒಂದಷ್ಟು ದಿನ ಕಳೆವುದರೊಳಗೆ ಅವರ ಮಧ್ಯೆ ಪ್ರೀತಿಗೆ ಸಂಬಂಸಿದ ಮಾತು ಮುಗಿದಿರುತ್ತದೆ. ನಮ್ಮ ದಾಂಪತ್ಯದ ಬದುಕು ಹೇಗಿರಬೇಕು ಎಂಬ ಬಗ್ಗೆ ಇಬ್ಬರೂ ಲೆಕ್ಕ ಹಾಕಲು ಶುರುಮಾಡಿರುತ್ತಾರೆ. ಹಾಗೆಯೇ, ನಮ್ಮ ಪ್ರೀತಿಯ ವಿಷಯವನ್ನು ಇಡೀ ಜಗತ್ತಿಗೇ ಸಾರಿ ಹೇಳಬೇಕು, ನಮ್ಮ ಪ್ರೀತಿಯ ಸವಿಯನ್ನು ಈ ಪ್ರಕೃತಿಗೂ ಹಂಚಬೇಕು ಎಂದೆಲ್ಲ ಅವರು ಮಾತಾಡಿಕೊಂಡ ಕ್ಷಣದಲ್ಲೇ ಶುರುವಾಗುತ್ತದೆ ಹಾಡು: `ಸಿಹಿಗಾಳಿ ಸಿಹಿಗಾಳಿ ಸಹಿಹಾಕಿದೆ…’

ಈ ಹಾಡು, ಸಿನಿಮಾದ ಹಿಂದಿನ ದೃಶ್ಯಕ್ಕೆ ಬದಲು ಮುಂದಿನ ದೃಶ್ಯಕ್ಕೆ ಸಂಬಂಧ ಕಲ್ಪಿಸುತ್ತದೆ ಅಂದಿದ್ದೆ ಅಲ್ವಾ? ಈಗ ಅಲ್ಲಿಗೇ ಬರೋಣ: ಹಾಡು ಮುಗಿದ ನಂತರ, ನಾಯಕ-ನಾಯಕಿಯನ್ನು ಹಾಸ್ಟೆಲ್ ಹತ್ತಿರ ಡ್ರಾಪ್ ಮಾಡಿ ಹೋಗಿಬಿಡ್ತಾನೆ. ಅವಳು ಒಂದೆರಡು ಹೆಜ್ಜೆ ಮುಂದೆ ಇಡುವುದರೊಳಗೆ ಅಲ್ಲಿ ಕಾಣಿಸಿಕೊಳ್ಳುವ ಕೊತ್ವಾಲ ರಾಮಚಂದ್ರ ಎಂಬ ರೌಡಿ- `ನೋಡೂ, ಇವತ್ತೇ ಕೊನೆ. ವತ್ತಿಂದಾನೇ ಅವನನ್ನು ಮಾತಾಡಿಸೋದು, ಅವನೊಂದಿಗೆ ಸುತ್ತೋದು ಹಾಗೂ ಅವನನ್ನು ಪ್ರೀತಿಸೋದನ್ನು ನೀನು ನಿಲ್ಲಿಸಬೇಕು. ಇಲ್ಲದಿದ್ರೆ ಪರಿಸ್ಥಿತಿ ಚೆನ್ನಾಗಿರೊಲ್ಲ’ ಎಂದು ಧಮಕಿ ಹಾಕುತ್ತಾನೆ. ಆಕೆ ಅನಾಥೆ, ಬೇರೆ ಜಾತಿಯವಳು ಹಾಗೂ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವಳು ಎಂಬ ಕಾರಣದಿಂದ ಈ ಕೆಲಸವನ್ನು ನಾಯಕನ ಅಪ್ಪನೇ ಆ ರೌಡಿಗೆ ಒಪ್ಪಿಸಿರುತ್ತಾನೆ!

ಹೀಗೆ, ನಾಯಕಿಗೆ ಕೊತ್ವಾಲ ರಾಮಚಂದ್ರ ಆವಾಜ್ ಹಾಕುತ್ತಿದ್ದ ಸಂದರ್ಭದಲ್ಲೇ, ಇತ್ತ ಕಾರಿನೊಳಗೇ ತನ್ನ ಗೆಳತಿಯ ವ್ಯಾನಿಟಿ ಬ್ಯಾಗ್ ಇರುವುದು ನಾಯಕನ ಗಮನಕ್ಕೆ ಬರುತ್ತೆ. ಅದನ್ನು ಮರಳಿಸುವ ಉದ್ದೇಶದಿಂದ ವಾಪಸ್ ಬಂದರೆ, ಅಲ್ಲಿ ಕೊತ್ವಾಲ ಎದುರಾಗುತ್ತಾನೆ. ಹೀರೋಯಿನ್ಗೆ ಹಾಕಿದ್ದನಲ್ಲ? ಅಂಥದೇ ಬೆದರಿಕೆಯನ್ನು ಹೀರೋಗೂ ಹಾಕುತ್ತಾನೆ. `ಆ ದಿನಗಳು’ ಚಿತ್ರದ ಅತಿ ಮುಖ್ಯವಾದ ಸನ್ನಿವೇಶವೇ ಇದು. ಏಕೆಂದರೆ, ಹೀರೊ-ಹೀರೊಯಿನ್ ಬಹಳ ಸಂತೋಷವಾಗಿರುವಂಥ ಸನ್ನಿವೇಶ ಈ ಹಾಡಲ್ಲೇ ಬರೋದು. ಈ ಹಾಡಿನ ನಂತರ ಅವರಿಬ್ಬರ ಬದುಕಿನ ದಿಕ್ಕೇ ಬದಲಾಗಿಬಿಡುತ್ತೆ. ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲಿಕ್ಕಾಗಿ ಕೊತ್ವಾಲ ರಾಮಚಂದ್ರನನ್ನೇ ಮುಗಿಸುವ ಅಪಾಯಕಾರಿ ನಿಧರ್ಾರಕ್ಕೆ ನಾಯಕ ಬಂದುಬಿಡುತ್ತಾನೆ…

* * *

`ಭೂಗತಲೋಕದ ಬದುಕಿನ ಕಥೆಯನ್ನು ಉಳಿದವರಿಗಿಂತ ಭಿನ್ನವಾಗಿ ತೋರಿಸಬೇಕು’ ಎಂಬ ಆಸೆ `ಆ ದಿನಗಳು’ ಚಿತ್ರದ ನಿಮರ್ಾಪಕ `ಅಗ್ನಿ ಶ್ರೀಧರ್’ ಅವರಿಗಿತ್ತು. ಹಾಗೆಂದೇ ಇಡೀ ಚಿತ್ರದಲ್ಲಿ ಹಾಡುಗಳಿರಬಾರದು ಅಂದುಕೊಂಡಿದ್ದರು. ಆದರೆ, ಚಿತ್ರೀಕರಣ ಆರಂಭವಾದ ನಂತರ ಯಾವ್ಯಾವ ದೃಶ್ಯ ಹೇಗೆ ಬರಬೇಕು ಎಂದು ನಿದರ್ೇಶಕ ಚೈತನ್ಯ ಹಾಗೂ ಸಹ ನಿದರ್ೇಶಕಿ ಸುಮನಾ ಕಿತ್ತೂರ್ ಅವರೊಂದಿಗೆ ಚಚರ್ಿಸುತ್ತಿದ್ದ ಸಂಗೀತ ನಿದರ್ೇಶಕ ಇಳಯರಾಜ ಅವರಿಗೆ, ಒಂದು ಸಂದರ್ಭಕ್ಕೆ ಹಾಡು ಬೇಕು ಅನಿಸಿತಂತೆ. ಆಗ, ಚೆನ್ನೈನಲ್ಲಿದ್ದ ಚಿತ್ರ ತಂಡದ ಮಂದಿಗೆ- `ಒಂದು ಹಾಡು ಬರೆಸಿದ್ರೆ ಚೆನ್ನಾಗಿರುತ್ತೆ. ನಾಳೆನೇ ಆ ಕೆಲ್ಸ ಆಗಬೇಕು. ಯಾರಿಂದ ಬರೆಸೋಣ?’ ಎಂದು ಕೇಳಿದರಂತೆ ಇಳಯರಾಜ. ಸಹನಿದರ್ೇಶಕಿ ಸುಮನಾ ತಕ್ಷಣವೇ- `ಕೆ. ಕಲ್ಯಾಣ್ ಅವರಿಂದ ಬರೆಸೋಣ ಸಾರ್’ ಎಂದಿದ್ದಾರೆ. ಅದಕ್ಕೆ ಇಳಯರಾಜ- `ಓ, ನೀನು ಈಗ ಫೋನ್ ಮಾಡಿ ಕರೆದುಬಿಟ್ರೆ ಅವನು ಬೆಂಗಳೂರಿಂದ ಓಡಿ ಬಂದ್ಬಿಡ್ತಾನಾ?’ ಎಂದು ಕಿಚಾಯಿಸಿದ್ದಾರೆ. ಹಟಕ್ಕೆ ಬಿದ್ದ ಸುಮನಾ- `ಸಾರ್, ಕರೆದ್ರೆ ಅವರು ಬಂದೇ ಬರ್ತಾರೆ’ ಎಂದಿದ್ದಲ್ಲದೆ, ತಕ್ಷಣವೇ ಕಲ್ಯಾಣ್ಗೆ ಫೋನ್ ಮಾಡಿ, ಎಲ್ಲವನ್ನೂ ವಿವರಿಸಿದ್ದಾರೆ. ಮುಂದೆ ಏನೇನಾಯ್ತು ಎಂಬುದನ್ನು ಕಲ್ಯಾಣ್ ಅವರ ಮಾತುಗಳಲ್ಲೇ ಕೇಳೋಣ:

`ಸುಮನಾಳ ಫೋನ್ ಬಂದಾಗ ಸಂಜೆ ಏಳೂವರೆ. ಆಗ ನನ್ನ ಕಾರ್ನ ಏ.ಸಿ. ಕೆಟ್ಟುಹೋಗಿತ್ತು. ಅದರ ರಿಪೇರಿ ಮಾಡಿಸ್ತಾ ಇದ್ದಾಗಲೇ ಈ ಮಹಾರಾಯ್ತಿ ಫೋನ್ ಮಾಡಿ `ತಕ್ಷಣ ಚೆನ್ನೈಗೆ ಬನ್ನಿ. ನಾವೆಲ್ಲ ನಿಮಗೋಸ್ಕರ ಕಾಯ್ತಾ ಇದೀವಿ’ ಅಂದಳು. ನನ್ನ ಪರಿಸ್ಥಿತಿ ವಿವರಿಸಿದೆ. ಈಗಲೇ ಆಗಲ್ಲ. ಬೆಳಗ್ಗೆ ಖಂಡಿತ ಬರ್ತೇನೆ ಅಂದೆ.

ಮರುದಿನ ಬೆಳಗ್ಗೆ ಚೆನ್ನೈನ ಏರ್ಪೋಟರ್್ಗೆ ಬಂದಿದ್ದ ಸುಮನಾಗೆ, `ನಾನು ಇವತ್ತೇ ವಾಪಸ್ ಹೋಗಬೇಕು. ಬೆಂಗಳೂರಲ್ಲಿ ತುಂಬಾ ಕೆಲಸವಿದೆ. ಹಾಗಾಗಿ, ಹಾಡು ಬರಬೇಕಾದ ಸಂದರ್ಭ ವಿವರಿಸು’ ಅಂದೆ. ಆಕೆ ಸ್ಟುಡಿಯೋಗೆ ಹೋಗುವ ದಾರಿಯಲ್ಲೇ ಎಲ್ಲವನ್ನೂ ವಿವರವಾಗಿ ಹೇಳಿದ್ಲು. ಸ್ಟುಡಿಯೊ ತಲುಪಿ, ಇಳಯರಾಜ ಅವರಿಗೆ ನಮಸ್ಕರಿಸಿ, ಸಂಕೋಚದಿಂದಲೇ ನನ್ನ ಫಜೀತಿಯ ಬಗ್ಗೆ ಹೇಳಿಕೊಂಡೆ.

ಸಾಮಾನ್ಯವಾಗಿ ಇಳಯರಾಜ ಅವರು ಹಾಡಿನ ಟ್ಯೂನ್ನ ಕೆಸೆಟ್ ಕೊಟ್ಟು- `ನಂತರ, ರೂಂಗೆ ಹೋಗಿ ಟ್ಯೂನ್ ಕೇಳಿಸ್ಕೊಂಡು ಹಾಡು ಬರೀರಿ’ ಅಂತಾರೆ. ಆದರೆ, ನಾನು ಅವತ್ತೇ ಬೆಂಗಳೂರಿಗೆ ವಾಪಸ್ ಬರಬೇಕಿತ್ತಲ್ಲ? ಅದೇ ಕಾರಣ ಮುಂದೆ ಮಾಡಿ- `ಸರ್, ಇಲ್ಲೇ ಟ್ಯೂನ್ ಕೇಳಿಸಿ’ ಅಂದೆ. ತಕ್ಷಣವೇ ಹಾರ್ಮೋನಿಯಂ ತೆಗೆದುಕೊಂಡ ಇಳಯರಾಜ ಒಂದು ಟ್ಯೂನ್ ಕೇಳಿಸಿ `ಹೂಂ, ಹಾಡು ಬರೆಯೋಕೆ ಶುರುಮಾಡು’ ಅಂದರು.

ಆಗ ಮಟಮಟ ಮಧ್ಯಾಹ್ನ, ಹೇಳಿಕೇಳಿ ಚೆನ್ನೈನ ಬಿಸಿಲು. ಕೇಳಬೇಕಾ? ವಿಪರೀತ ಸೆಖೆ ಆಗ್ತಾ ಇತ್ತು. ಕೈಲಿ ಗಾಳಿ ಬೀಸಿಕೊಂಡು, ಶಟರ್್ನ ಗುಂಡಿಗಳನ್ನು ಬಿಚ್ಚಿ- `ಉಫ್’ ಎಂದು ಗಾಳಿ ಊದಿಕೊಂಡು ಕೂತೆ. ಉಹುಂ, ಹೇಗೆಲ್ಲ ಯೋಚಿಸಿದರೂ ಹಾಡಿನ ಸಾಲು ಹೊಳೆಯುತ್ತಲೇ ಇಲ್ಲ.

ನನ್ನ ಫಜೀತಿ ನೋಡಿದ ಇಳಯರಾಜ ಅವರ ಸಹಾಯಕ ತಕ್ಷಣವೇ ಫ್ಯಾನ್ ಹಾಕಿದ. ನಂತರದ ಎರಡೇ ನಿಮಿಷಗಳಲ್ಲಿ ತಂಪುಗಾಳಿ ತೇಲಿಬಂತು. ಆ ಕ್ಷಣಕ್ಕೆ ತುಂಬಾ ಹಿತ ಅನ್ನಿಸಿತು. ನನ್ನ ಟೆನ್ಶನ್ ಹಾಗೂ ಸೆಖೆ ಏಕಕಾಲಕ್ಕೆ ಮಾಯವಾಯಿತು. ವಾಹ್, ಈ ಫ್ಯಾನ್ ಗಾಳಿ ತುಂಬ ತಂಪಾಗಿದೆ ಅಂದುಕೊಂಡು- `ಸಿಹಿಗಾಳಿ ಸಿಹಿಗಾಳಿ’ ಎಂದು ಪ್ಯಾಡ್ ಮೇಲೆ ಬರೆದುಕೊಂಡೆ. ಹೀಗೆ ಬೀಸಿಬಂದ ಗಾಳಿಯಿಂದ ಉಂಟಾದ ನೆಮ್ಮದಿ ಮನದಲ್ಲಿ ಬೇರೂರಿತ್ತಲ್ಲ? ಅದಕ್ಕೇ `ಸಹಿಹಾಕಿದೆ ಮನಸಿನಲಿ’ ಎಂದು ಬರೆದೆ. ಸಿನಿಮಾದಲ್ಲಿ ಹೀರೊ-ಹೀರೊಯಿನ್ ಇಬ್ರೂ ಕೈ ಕೈ ಹಿಡಿದು ಓಡಾಡುವ ಸಂದರ್ಭಕ್ಕೆ ಈ ಸಾಲೇ  ಎಂಬ ಐಡಿಯಾ ತಕ್ಷಣವೇ ಬಂತು. ನನ್ನ ಯೋಚನೆಗೆ ನಾನೇ ಖುಷಿಯಾದೆ. ಹಿಂದೆಯೇ- ಅವರಿಬ್ರೂ ತಮ್ಮ ದಾಂಪತ್ಯದ ಬಗ್ಗೆ ಕನಸು ಕಾಣ್ತಾ ಇರ್ತಾರೆ ಎಂಬುದು ನೆನಪಾದ ತಕ್ಷಣ `ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ’ ಎಂಬ ಸಾಲೂ ಕೈ ಹಿಡಿಯಿತು.

ಅದನ್ನೂ ಬರೆದು `ಪಲ್ಲವಿ ಹೀಗಿದೆ ನೋಡಿ’ ಎಂದು ನಿದರ್ೇಶಕ ಚೈತನ್ಯ ಹಾಗೂ ಸುಮನಾಗೆ ತೋರಿಸಿದೆ. ಅವರಿಬ್ಬರೂ ಅದನ್ನು ಇಳಯರಾಜ ಅವರಿಗೆ ದಾಟಿಸಿದರು. ಪಲ್ಲವಿಯನ್ನು ನೋಡಿ `ತನನಾನಾ ತನನಾನಾ ತನನಾನನ ತಾನಾನಾ’ ಎಂದು ಗುನುಗಿದ ಇಳಯರಾಜ, ವೆರೀಗುಡ್. ಈ ಸಾಲಿನಲ್ಲಿ ಎಂಥದೋ ಸೆಳೆತವಿದೆ. ಪಲ್ಲವಿ ಓ.ಕೆ. ನೀನು ಇವತ್ತೇ ಹೋಗಬೇಕು ಅಂತಿದೀಯ. ಬೇಗ ಚರಣ ಬರೆಯಪ್ಪಾ ಎಂದು ರೇಗಿಸಿದರು. ನಂತರದ ಹತ್ತು ನಿಮಿಷದಲ್ಲಿ ಚರಣವನ್ನೂ ಬರೆದುಕೊಟ್ಟೆ. ಅದನ್ನು ಓದಿಕೊಂಡ ಇಳಯರಾಜ-  `ಹಾಡು ಬಹಳ ಚೆನ್ನಾಗಿದೆ. ಹಿಟ್ ಆಗುತ್ತೆ ಕಣಯ್ಯಾ. ನೀನು ಹೊರಡು. ಟೈಂ ಆಗುತ್ತೆ ನಿಂಗೆ’ ಅಂದರು. ಅವರ ಮಾತು ಕೇಳುತ್ತಿದ್ದಾಗಲೇ ಇನ್ನೊಂದು ಚರಣ ಹೊಳೆಯಿತು. ತಕ್ಷಣವೇ -`ಸಾರ್. ಇನ್ನೊಂದು ಚರಣ ಹೊಳೆದಿದೆ ಅದನ್ನೂ ಬರೆದು ಕೊಡ್ತೇನೆ’ ಅಂದೆ. ಇಳಯರಾಜ ನಿಧರ್ಾರದ ಧ್ವನಿಯಲ್ಲಿ ಹೇಳಿದ್ರು: `ಬೇಡಪ್ಪಾ’, ಈಗ ಬರೆದಿರೋದೇ ಸಾಕು. ಚೆನ್ನಾಗಿದೆ ಇದು. ಯೋಚನೆ ಮಾಡದೆ ಆರಾಮ್ಸೆ ಬೆಂಗಳೂರಿಗೆ ಗಾಡಿಬಿಡು’ ಅಂದರು.

ನಾನು ಹೊರಡುವ ಮುನ್ನ `ಯಾರಿಂದ ಹಾಡಿಸೋಣ? ಒಂದಿಬ್ಬರ ಹೆಸರು ಸೂಚಿಸು’ ಅಂದರು. ತಕ್ಷಣವೇ ನಂದಿತಾರ ಹೆಸರು ಹೇಳಿದೆ. ನಂತರ- `ಸರ್, ಇಡೀ ಹಾಡು ಚೆನ್ನಾಗಿದೆ ಅಂತ ನೀವೇ ಹೇಳಿದ್ದೀರಿ. ನೀವೇ ಹಾಡಿಬಿಡಿ. ಆಗ ಮಾತ್ರ ಈ ಹಾಡಿಗೆ ನ್ಯಾಯ ಒದಗಿಸಿದಂತಾಗುತ್ತೆ ಎಂದೆ. ಇಳಯರಾಜ ಅದಕ್ಕೂ ಒಪ್ಪಿಕೊಂಡರು. ಅಷ್ಟೇ ಅಲ್ಲ, ಆ ಸಂದರ್ಭವನ್ನು ಅನುಭವಿಸಿ ಹಾಡಿದರು. ಹಾಡು ಸೂಪರ್ ಹಿಟ್ ಆಯಿತು. ಕೇಳಿದವರೆಲ್ಲ- `ಎಲ್ಲ ಪ್ರೇಮಿಗಳಿಗೂ ಅನ್ವಯಿಸುವಂಥ, ಎಲ್ಲ ಪ್ರೇಮಿಗಳೂ ಒಂದಲ್ಲ ಒಂದು ಸಂದರ್ಭದಲ್ಲಿ ಅನುಭವಿಸಿದಂಥ ಸಂತಸ-ಸಂಕಟಗಳೇ ಈ ಹಾಡಲ್ಲಿದೆ’ ಅಂದರು. ಅಂಥ ಮಾತು ಕೇಳಿದಾಗ ಹಾಡು ಬರೆದದ್ದು ಸಾರ್ಥಕ ಅನ್ನಿಸಿತು…’

ಇಷ್ಟು ಹೇಳಿ ಮೌನಿಯಾದರು ಕಲ್ಯಾಣ್…

ಅವರ ಮಾತು ಮುಗಿಯುತ್ತಿದ್ದಂತೆ ಕಿಟಕಿಯಿಂದ ತಂಗಾಳಿ ಬೀಸಿಬಂತು. ತಕ್ಷಣವೇ ಅಷ್ಟು ಹೊತ್ತೂ ಮಾತಾಡಿದ್ದರಿಂದ ಆದ ಆಯಾಸವನ್ನು ಮರೆತು ಕಲ್ಯಾಣ್ ಹಾಡಿಯೇಬಿಟ್ಟರು: `ಸಿಹಿಗಾಳಿ ಸಿಹಿಗಾಳಿ ಸಹಿಹಾಕಿದೆ ಮನಸಿನಲಿ…’

‍ಲೇಖಕರು avadhi

June 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This