ಆ ಹುಡುಗನ ಕಣ್ತುಂಬ ಆತಂಕದ ಕತ್ತಲು…

– ಶೂದ್ರ ಶ್ರೀನಿವಾಸ

ಕೃಪೆ : ವಾರ್ತಾ ಭಾರತಿ

 

ಒಂದು ನಾಗರಿಕ ಸಮಾಜದಲ್ಲಿ ಪುಂಡಾಟಿಕೆಗಳನ್ನು ಯಾವ ರೀತಿಯಲ್ಲಿ ವಿವರಿಸುವುದು? ಅದೇ ಸಮಯಕ್ಕೆ ಧರ್ಮದ ಹೆಸರಿನಲ್ಲಿ ಸಂಘಟ ನಾತ್ಮಕವಾಗಿ ಇಂಥದ್ದು ನಡೆದಾಗ; ಪ್ರಶ್ನೆ ಮತ್ತಷ್ಟು ಕ್ಲಿಷ್ಟವಾಗುವುದು ಸ್ವಾಭಾವಿಕ. ಪೊಲೀಸರು ಮತ್ತು ಸೈನ್ಯ ಬೇಲಿಯಾಕಾರದಲ್ಲಿ ನಿಂತರೂ;ಒಂದು ಚಾರಿತ್ರಿಕ ಸ್ಮಾರಕವನ್ನು ಧ್ವಂಸ ಮಾಡುವುದಿದೆಯಲ್ಲ; ಅದು ನಾಗರಿಕ ಸಮಾಜವನ್ನು ತಲ್ಲಣಗೊಳಿಸು ವಂಥದ್ದು.ಅಂಥ ತಲ್ಲಣ ಒಂದೇ ದಿವಸದಲ್ಲಿ ಕರಗಿ ಹೋಗುವುದಿಲ್ಲ. ವಿಷಾದದ ಮುಂದುವರಿದ ಭಾಗವಾಗಿ ನಮ್ಮ ಬರವಣಿಗೆ ಮತ್ತು ಚಿಂತನೆಗೆ ಮುಖಾಮುಖಿಯಾಗುತ್ತಲೇ ಇರುತ್ತದೆ. ಯಾಕೆಂದರೆ ಆ ಧ್ವಂಸದ ಸುತ್ತ ಕೇವಲ ಹಿಂಸೆ ಮಾತ್ರ ಇರುವುದಿಲ್ಲ.ಅದಕ್ಕಿಂತ ಭೀಕರವಾಗಿ ಹಿಂಸೆ ಸದಾ ಜೀವಂತ ವಾಗಿರುವಂತೆ ಕಾರ್ಯಕ್ರಮ ರೂಪುಗೊಳ್ಳುತ್ತಿರುತ್ತದೆ.ಇದು ಮುಗ್ಧ ಜನರಿಂದ ನಡೆಯುವುದಿಲ್ಲ;‘‘ನಾವು ವಿದ್ಯಾವಂತರು’’ ಎಂದು ಬೆನ್ನು ತಟ್ಟಿ ಕೊಳ್ಳುವುದರಿಂದ ನಿರಂತರತೆಯನ್ನು ಪಡೆಯುತ್ತದೆ.ಅವರನ್ನು ಯಾವುದೇ ರೀತಿ ಮಾನವೀಯ ಸಂಕೋಚಗಳು ಬಾಧಿಸುವುದಿಲ್ಲ.ಆದರೆ ಚಾರಿತ್ರಿಕವಾಗಿ ಒಂದು ಸಂಸ್ಕೃತಿಯನ್ನು ಗೌರವಿಸುವ ಮಂದಿಗೆ ಆಗುವ ಬಾಧೆಯನ್ನು ವ್ಯಾಖ್ಯಾನಿಸುವುದು ಕಷ್ಟ.ಅದೇ ಸಮಯಕ್ಕೆ ಈ ನೆಲದ ಉದ್ದಗಲಕ್ಕೂ ಪಿಳಪಿಳ ಕಣ್ಣುಬಿಡುತ್ತ ಭೀತಿಯನ್ನು ತುಂಬಿಕೊಂಡ ಸಾವಿರಾರು ಬಾಲಕರ ಮತ್ತು ಮುಗ್ಧ ಜನತೆಯನ್ನು ಕುರಿತು ಯೋಚಿಸುವಾಗ; ಎಂತೆಂಥದೋ ಮನಸ್ಥಿತಿ ಎದುರಾಗುತ್ತದೆ. ಇಂಥ ದುರಂತದ ಸನ್ನಿವೇಶದಲ್ಲಿ ಕೇವಲ ಎರಡು ಮೂರು ಘಂಟೆ ಮಾತ್ರ ಪರಿಚಯ ವಾದ ಆ ಬೆಳಗಾಂನ ಹುಡುಗ ‘ಮನಸ್ಸಿನ ತುಂಬ ಮತ್ತು ಕಣ್ಣಿನ ತುಂಬ’ ಎಷ್ಟೊಂದು ನಡುಕವನ್ನು ತುಂಬಿಕೊಂಡಿದ್ದ. ಈ ಹುಡುಗ ಪರಿಚಯವಾಗಿದ್ದೂ ಕೂಡ ಒಂದು ಆಕಸ್ಮಿಕ. ಆದರೆ ಕಳೆದೆರಡು ದಶಕಗಳಿಂದ ಮಾನಸಿಕ ವಾಗಿ ಆ ಹುಡುಗನನ್ನು ಜೊತೆಗಿಟ್ಟು ಕೊಂಡೇ ತಿರುಗುತ್ತಿದ್ದೇನೆ. ನಮ್ಮ ನಮ್ಮ ಬದು ಕಿನಲ್ಲಿ ಯಾರ್ಯಾರೋ ಬಂದು ಸೇರಿಕೊಳ್ಳುವ ರೀತಿಯಲ್ಲಿ; ಆ ಹುಡುಗನೂ ದೇಹ ಮತ್ತು ಮನಸ್ಸಿನ ಭಾಗವಾಗಿ ‘‘ಅಂಕಲ್ ನಿಮ್ಮಂಥ ಸಂಘಟನೆಗಳ ಜೊತೆ ಸಂಪರ್ಕವಿದ್ದರೆ; ಆಕಸ್ಮಿಕವಾಗಿ ನನ್ನನ್ನು ಯಾರಾದರೂ ಸಾಯಿ ಸಿದರೆ ಅಮ್ಮ- ಅಪ್ಪಗೆ ವಿಷಯ ತಿಳಿಯುತ್ತದೆ ಅಲ್ಲವೆ?’’ ನಿಜವಾಗಿಯೂ ಈ ವಾಕ್ಯದ ಒಂದೊಂದು ಶಬ್ದವೂ ನಾನಾ ರೀತಿಯ ಅನರ್ಥಗಳಿಂದ ಕೂಡಿದ ಆತಂಕದ ಮೊತ್ತ ವನ್ನು ಮುಂದಿಡುತ್ತಲೇ ಇದೆ. ಈ ಆತಂಕ ನನ್ನ ಸದಾ ಕಾಲದ ಪ್ರೀತಿಯ ಕವಿ ವಿಲಿಯಂ ಬ್ಲೇಕ್‌ನ ‘ದಿ ಮ್ಯಾರೇಜ್ ಆಫ್ ಹೆವನ್ ಅಂಡ್ ಹೆಲ್’ ಎಂಬ ಮಹಾಕಾವ್ಯದ ರೀತಿಯ ಕಾವ್ಯವನ್ನು ಓದಿಕೊಳ್ಳುವಾಗಲೂ ಆ ಹುಡುಗ ಕಾವ್ಯದ ನಾಯಕನಾಗಿ ಎದುರು ಬಂದು ನಿಲ್ಲುವನು. ಆಗ ನನ್ನ ಅಥವಾ ನಮ್ಮ ಅರ್ಥೈಸಿಕೊಳ್ಳುವ ಕ್ರಮ ಹೇಗಿರಬೇಕು? ಬ್ಲೇಕ್‌ನ ಆ ಕವನದ ಶೀರ್ಷಿಕೆಯೇ ‘ರೀಡ್ ಅಂಡ್ ಡಿಗ್, ಪೈನ್ಸ್ ಅಂಡ್ ಸಾರೋಸ್ ಆಫ್ ಲೈಫ್’ ಎಂದು ಹೇಳುವ ರೀತಿಯಲ್ಲಿದೆ. ನಿಜವಾಗಿಯೂ ನಾವು ಜಗತ್ತಿನ ಶ್ರೇಷ್ಠ ಕೃತಿಗಳನ್ನು ಓದಿಕೊಳ್ಳುವಾಗಲೆಲ್ಲ; ಅವ್ಯಕ್ತ ವಿಷಾದದ ನೆಲೆಗಳು ಬದುಕಿನ ಹಾದಿಯುದ್ದಕ್ಕೂ ಪಾಚಿ ಕಟ್ಟಿಕೊಂಡ ರೀತಿಯಲ್ಲಿ ವಿಸ್ತರಿಸಿ ಕೊಂಡಿರುತ್ತದೆ. ಆಗ ಈ ಎಲ್ಲ ಮತ,ಧರ್ಮಗಳು ಮನುಷ್ಯ ಸಂಬಂಧಗಳ ನಡುವೆ ಪಾಚಿಯ ರೀತಿ ಯಲ್ಲಿ ಮುಖಕ್ಕೆ ರಾಚುತ್ತಿರುತ್ತದೆ. ಹಿಂದೆ ರಾಚು ವುದು ನಮಗೆ ಅರ್ಥವಾಗುವುದು ಕೂಡ; ಮುಗ್ಧರ ಮೂಲಕ ಧುತ್ತನೆ ಮುಖಾಮುಖಿಯಾಗುವ ದೃಷ್ಟಿ ಯಿಂದ. ಯಾಕೆಂದರೆ ಆ ನೋಟ ಯಾವಾಗಲೂ ಕಾಲವನ್ನು ತೂಕ ಮಾಡುವಂಥದ್ದು. ಬೆಳಗಾಂನ ಆ ಬಾಲಕ ತುಂಬಿಕೊಂಡಿದ್ದ ಆತಂಕದ ನೋಟಕ್ಕೆ ಎಷ್ಟೊಂದು ಬೀಸು. ಒಂದು ದೃಷ್ಟಿಯಿಂದ ಹಿಂದೆ ಪ್ರಸ್ತಾಪಿಸಿದಂತೆ; ಆಕಸ್ಮಿಕವಾಗಿ ಎದುರಾದದ್ದು. ದೇಶದ ಉದ್ದಗಲಕ್ಕೂ ಬಾಬರಿ ಮಸೀದಿಯ ಧ್ವಂಸದ ಕಾರಣಕ್ಕಾಗಿ ಭುಗಿಲೆದ್ದಿದ್ದ ಹಿಂಸೆಯನ್ನು ಅಧ್ಯಯನ ಮಾಡಲು ನಮಗೆ ಅವಕಾಶ ಸಿಕ್ಕಿತ್ತು. ನನಗೆ ತುಂಬಾ ಆತ್ಮೀಯವಾಗಿ ಇಷ್ಟವಾಗುವ ಹಿರಿಯ ಪತ್ರಕರ್ತ ರಾದ ಕುಲದೀಪ ನಾಯರ್ ಅವರು ಪಿಯುಸಿ ಎಲ್ ಮತ್ತು ಸಿಎಫ್‌ಡಿ ಪರವಾಗಿ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲು ನಮಗೆ ಜವಾಬ್ದಾರಿ ವಹಿಸಿದ್ದರು. ಈ ಜವಾಬ್ದಾರಿಯನ್ನು ನಿರ್ವಹಿಸಲು ಪ್ರೊ. ಹಸನ್ ಮನ್ಸೂರು, ಡಾ. ರಾಮದಾಸ ರಾವ್ ಮತ್ತು ನನ್ನನ್ನು ನೇಮಿಸಿದ್ದರು. ಯಾಕೆಂದರೆ ನಾವೆಲ್ಲ ಪಿಯುಸಿಎಲ್ ಮತ್ತು ಸಿಎಫ್‌ಡಿಯಂಥ ಮಾನವ ಹಕ್ಕುಗಳ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೆವು. ನಾನು ಅದರ ರಾಜ್ಯಮಟ್ಟದ ಕಾರ್ಯದರ್ಶಿಯಾಗಿದ್ದೆ. ಈ ಜವಾಬ್ದಾರಿಯನ್ನು ಸಂತೋಷವಾಗಿ ಒಪ್ಪಿಕೊಂಡು ಮೊದಲು ನಾವು ಮೂರು ಮಂದಿಯೂ ಬೆಳಗಾಂಗೆ ಹೋದೆವು. ಮತೀಯ ಮತ್ತು ಭಾಷಾ ವಿಷಯಕ್ಕೆ ಸಂಬಂಧಿಸಿ ದಂತೆ ಹೆಚ್ಚು ಗೊಂದಲಮಯ ಪ್ರದೇಶವೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.ಆದರೆ ಅಪರೂಪದ ಮತ್ತು ಸಂತೋಷದ ಸುದ್ದಿಯೆಂದರೆ: ಬೆಳಗಾಂನಲ್ಲಿ ಕಿಂಚಿತ್ತೂ ಗದ್ದಲ ಮತ್ತು ಹಿಂಸೆ ಸಂಭವಿಸಿರಲಿಲ್ಲ. ಇದಕ್ಕೆ ಮುಖ್ಯ ಕಾರಣ: ಅಲ್ಲಿಯ ಬಹಳಷ್ಟು ಸಮಾಜಸೇವೆಯ ಸಂಘಟನೆಗಳು ಒಂದುಗೂಡಿದ್ದವು. ಅದರಲ್ಲಿ ಬಹುಪಾಲು ಮಂದಿ ಸ್ತ್ರೀಯರು. ಗಾಂಧೀಜಿಯವರ ಚಿಂತನೆಗಳಿಂದ ಬದುಕುತ್ತ ಬಂದ ಸರ್ವೋದಯ ಕಾರ್ಯಕರ್ತರು. ಇವರೆಲ್ಲ ಸೇರಿ ಬೆಳ ಗಾಂನ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಜ್ಯೋತಿಪ್ರಕಾಶ್ ಮಿರ್ಜಿಯವರನ್ನು ಭೇಟಿ ಯಾಗಿ; ನಗರದ ಯಾವುದೇ ಬಡಾವಣೆಗೆ ಪೊಲೀಸರನ್ನು ಮುನ್ನೆಚ್ಚರಿಕೆಯ ಕಾರಣಕ್ಕಾಗಿ ಕಳಿಸಬೇಡಿ. ನಾವು ನಿಮಗೆ ಸಹಕಾರ ನೀಡುವ ರೀತಿಯಲ್ಲಿ ಶಾಂತಿ ಮತ್ತು ಸಾಮರಸ್ಯದ ಸಂಘ ಟನೆಗಳನ್ನು ರೂಪಿಸಿದ್ದೇವೆ. ಇದರಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳೇ ಗಲ್ಲಿಗಲ್ಲಿಗಳಲ್ಲಿ ಸುತ್ತಾಡುತ್ತೇವೆ. ಮತ್ತು ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅದನ್ನು ಸುಸಂಸ್ಕೃತ ಪೊಲೀಸ್ ಅಧಿಕಾರಿಯಾದ ಮಿರ್ಜಿ ಯವರು ನಂಬಿದರು ಮತ್ತು ಸಹಕರಿಸಿದರು. ಈಗಿನ ಬೆಂಗಳೂರು ಮಹಾನಗರದ ಕಮಿಷನರ್ ಆಗಿರುವಂಥವರು. ಇದು ನಮಗೆ ತುಂಬ ಮೆಚ್ಚುಗೆಯಾಯಿತು. ನಾವು ಅಲ್ಲಿಯ ಮಾನವ ಹಕ್ಕುಗಳ ಸ್ನೇಹಿತರೊಡನೆ ನಗರವೆಲ್ಲ ಸುತ್ತಾಡಿ ದೆವು. ಬೇರೆ ಬೇರೆ ಸಂಘಟನೆಗಳ ಜೊತೆ ಚರ್ಚಿಸಿದೆವು. ಇದನ್ನೆಲ್ಲ ಗೆಳೆಯರಾದ ದಿಲೀಪ್ ಕಾಮತ್ ಅವರು ವ್ಯವಸ್ಥೆ ಮಾಡಿದ್ದರು. ಇದರ ಸಂಬಂಧವಾಗಿ ನಾವು ಜ್ಯೋತಿಪ್ರಕಾಶ್ ಮಿರ್ಜಿಯವರನ್ನು ಭೇಟಿಯಾದೆವು.ಅವರ ಮನೆಯಲ್ಲಿ ತಿಂಡಿ ಸ್ವೀಕರಿಸಿ ಸುಮಾರು ಒಂದು ಗಂಟೆ ಚರ್ಚಿಸಿದೆವು. ಮಿರ್ಜಿಯವರು ಬೆಂಗಳೂರಿನಲ್ಲಿ ಉಪ ಪೊಲೀಸ್ ಆಯುಕ್ತರಾಗಿದ್ದಾಗ;ಇಂಥ ಸಾಮರಸ್ಯದ ವಿಷಯಗಳಿಗೆ ಸಂಬಂ ಧಿಸಿದಂತೆ ಸಾಕಷ್ಟು ಸಹಕರಿಸಿದ್ದರೂ ನಗು ಮೋರೆಯ ವ್ಯಕ್ತಿತ್ವವನ್ನು ಹೊಂದಿದ್ದವರು. ನಾವು ಜ್ಯೋತಿ ಪ್ರಕಾಶ್ ಮಿರ್ಜಿಯವ ರನ್ನು ಭೇಟಿಯಾಗಿದ್ದು ತುಂಬ ಒಳ್ಳೆಯ ದಾಯಿತು. ಅವರು ತುಂಬ ಮುಕ್ತ ಮನಸ್ಸಿ ನಿಂದ ಶಾಂತಿ ಸಂಘಟನೆಯ ಮುಖ್ಯಸ್ಥ ರನ್ನು ಮತ್ತು ಕಾರ್ಯಕರ್ತರನ್ನು ತುಂಬ ಪ್ರಶಂಸಿಸಿದರು. ತಮಗೆ ಯಾವುದೇ ವಿಧವಾದ ಆತಂಕದ ಕ್ಷಣಗಳು ಬರದಂತೆ ನೋಡಿಕೊಂಡರು. ಇಂಥ ಮಾದರಿಗಳನ್ನು ರಾಜ್ಯದ ಎಲ್ಲ ಕಡೆ ವಿವರಿಸಬೇಕು. ಇದನ್ನು ಬೆಂಗಳೂರಿಗೆ ಹೋದಾಗ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮುಂದೆ ಚರ್ಚಿಸುವೆ ಎಂದಿದ್ದರು. ಇಂಥ ಚಿಂತನೆಗೆ ಸಂಬಂಧಿಸಿ ದಂತೆಯೇ 1990ರ ಕೊನೆಯ ದಿನಗಳಲ್ಲಿ ನಡೆದ ಒಂದು ಮುಖ್ಯ ಸಮಾರಂಭವನ್ನು ನೆನಪಿಸಿದೆ. ಅದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಿತರಣೆಯ ಸಂಭ್ರ ಮದ ಕಾರ್ಯಕ್ರಮ. ಪ್ರೊ.ಜಿ.ಎಸ್. ಶಿವರುದ್ರಪ್ಪ ಅವರು ಅಧ್ಯಕ್ಷರಾಗಿದ್ದರು. ಹಿರಿಯ ಸಾಹಿತಿಗಳಾದ ಚದುರಂಗ, ಶಾಂತರಸ, ಶಂಕರಮೊಕಾಶಿ ಪುಣೇಕರ,ಗಿರಡ್ಡಿ ಗೋವಿಂದರಾಜ, ಹೆಚ್.ಎಲ್. ಕೇಶವಮೂರ್ತಿ, ಸಾರಾ ಅಬೂಬಕರ್, ಕುಂವೀ, ಬೊಳುವಾರು ಮಹಮದ್ ಕುಂಞ ಮುಂತಾದವರೆಲ್ಲ ನೆರೆದಿದ್ದೆವು.ಅಂದಿನ ಕಾರ್ಯಕ್ರಮಕ್ಕೆ ಮರಾಠಿಯ ಪ್ರಸಿದ್ಧ ಲೇಖಕ ಮತ್ತು ಕಾದಂಬರಿಕಾರ ಬಾಲ ಚಂದ್ರ ನೇಮಾಡೆಯವರನ್ನು ಬರಮಾಡಿ ಕೊಂಡಿದ್ದೆವು. ಬಾಲಚಂದ್ರ ನೇಮಾಡೆಯವರು ಆಗ ಗೋವಾ ವಿಶ್ವವಿದ್ಯಾನಿಲಯ ದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು.ಅವರು ನಮ್ಮ ಸಾಹಿತ್ಯ ಸಂದರ್ಭದ ಲಂಕೇಶ್ ಅವರ ರೀತಿಯ ವ್ಯಕ್ತಿತ್ವವನ್ನು ಹೊಂದಿರುವಂಥವರು.ಅಂದು ಅವರು ಮುಂಬಯಿಯ ಕೆಲವು ಸೂಕ್ಷ್ಮ ಘಟನೆಗಳನ್ನು ಅವಲೋಕಿಸುತ್ತಲೇ ಬೆಳಗಾಂ ರೀತಿಯ ಗಡಿ ಪ್ರದೇಶದ ಸಾಮರಸ್ಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ತುಂಬಾ ಮಾರ್ಮಿಕವಾಗಿ ಮಾತಾಡಿದ್ದರು. ಆಗ ನಾವು ಕೆಲವು ಮಂದಿ ಒಂದಷ್ಟು ಸಮಯ ಮರಾಠಿಯಲ್ಲಿ ಮಾತಾಡಲು ಕೇಳಿ ಕೊಂಡೆವು. ಯಾಕೆಂದರೆ ಒಬ್ಬ ಮುಖ್ಯ ಲೇಖಕನ ಮಾತೃಭಾಷೆಯ; ಭಾಷಾ ಹರಿಯುವಿಕೆಯನ್ನು ನಾವು ಗ್ರಹಿಸಬೇಕಾಗಿತ್ತು. ಹಾಗೆಯೇ ಅಲ್ಲಿಯ ಮರಾಠಿ ಬಾಂಧವರು ಅದಕ್ಕೆ ಹೇಗೆ ಸ್ಪಂದಿಸುತ್ತಾ ರೆಂಬುದನ್ನು ತಿಳಿಯುವ ಕುತೂಹಲ ನಮಗಿತ್ತು. ಇದಕ್ಕೆ ನೇಮಾಡಿಯವರು ಮತ್ತು ಅಲ್ಲಿಯ ಮಂದಿ ತುಂಬ ಖುಷಿಪಟ್ಟರು. ಇದೊಂದು ಸಣ್ಣ ಘಟನೆ. ಆದರೆ ಜನರ ಮನಸ್ಸುಗಳನ್ನು ಹತ್ತಿರ ತರುವುದಕ್ಕೆ ಇಂಥವೆಲ್ಲ ಅರ್ಥಪೂರ್ಣ ಪೂರ ಕತೆಗೆ ಸಹಕಾರಿಯಾಗಿರುತ್ತದೆ. ಅಲ್ಲಿಯ ಸ್ಥಳೀಯ ಪತ್ರಿಕೆಗಳು ಇದಕ್ಕೆ ಹೆಚ್ಚು ಒತ್ತು ಕೊಟ್ಟು ವರದಿ ಮಾಡಿದ್ದರು. ಇಂಥದನ್ನೆಲ್ಲ ಮಿರ್ಜಿ ಯವರ ಹತ್ತಿರ ಚರ್ಚಿಸಿ; ಸಂಜೆಯ ಒಂದು ಸಾಮ ರಸ್ಯದ ಸಭೆಗೆ ಅನುಮತಿ ಪಡೆದು ಬಂದೆವು. ಸಂಜೆ ಐದು ಗಂಟೆ ಸಮಯ. ನೂರಾರು ಮಂದಿ ಸಾಮರಸ್ಯ ಪ್ರಿಯರು ಭಾಗವಹಿಸಿದ್ದರು. ನಾನು ಮಾತಾಡಲು ಎದ್ದು ನಿಂತಾಗ; ಒಬ್ಬ ವ್ಯಕ್ತಿ ಸಭಿಕರ ಮಧ್ಯೆ ವಿರಾವೇಷದಿಂದ ವಿಜೃಂಭಸತೊಡಗಿದ. ಮುಂದುವರಿದು ‘‘ನಾನು ಬಾಬರಿ ಮಸೀದಿಯನ್ನು ಧ್ವಂಸ ಮಾಡುವುದರಲ್ಲಿ ಭಾಗವಹಿಸಿದ್ದೆ. ಒಂದು ಪವಿತ್ರವಾದ ಕಾರ್ಯ ಮಾಡಿದ ಎಂಬ ಹೆಮ್ಮೆ ಇದೆ. ನೀವೆಲ್ಲ ಮುಸಲ್ಮಾನರನ್ನೆಲ್ಲ ಓಲೈಸುತ್ತಿದ್ದೀರಿ. ಅವರು ತಮ್ಮ ಜನಸಂಖ್ಯೆ ಜಾಸ್ತಿಯಾಗಲೆಂದು ಮಿತ ಸಂತಾನವನ್ನು ಒಪ್ಪಿಕೊಳ್ಳುತ್ತಿಲ್ಲ. ಮುಂದೆ ನಾವೆಲ್ಲ ಅವರ ಕೈಕೆಳಗೆ ಕೆಲಸ ಮಾಡಬೇಕಾಗುತ್ತದೆ’’ ಎಂದು ಕೂಗಾಡತೊಡಗಿದ್ದ. ನನಗೆ ತುಂಬ ಸಿಟ್ಟು ಬಂದಿದ್ದರೂ; ಇದು ಸಿಟ್ಟುಮಾಡಿಕೊಳ್ಳುವ ಸಂದರ್ಭ ಇದಲ್ಲ ಎಂದು ತಿಳಿದೆ. ಆಗ ‘‘ನೋಡಿ, ಜನಸಂಖ್ಯೆ ಪ್ರಶ್ನೆ ಬಂದಾಗ ನನ್ನ ದೊಡ್ಡಪ್ಪನಿಗೆ ಹದಿನೈದು ಮಂದಿ ಮಕ್ಕಳು. ಹಾಗೆಯೇ ನನ್ನ ಹೆಂಡತಿ ನನ್ನ ಮಾವನಿಗೆ ಎರಡನೆಯ ಹೆಂಡತಿಗೆ ಹದಿನಾರನೆಯವಳು. ಆದರೆ ಮನುಷ್ಯತ್ವದ ದೃಷ್ಟಿಯಿಂದ ದೊಡ್ಡ ವ್ಯಕ್ತಿಗಳು. ನನಗೆ ಬದುಕಿನ ಕೆಲವು ಮೂಲಭೂತ ಪಾಠಗಳನ್ನು ಕಲಿಸಿ ಹೋಗಿದ್ದಾರೆ. ಹಾಗೆಯೇ ನನಗೆ ಗೊತ್ತಿರುವ ನೂರಾರು ಮಂದಿ ಮುಸಲ್ಮಾನ ಗೆಳೆಯರು ಒಂದು ಮತ್ತು ಎರಡು ಮಕ್ಕಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಇಲ್ಲಿ ಬಡತನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಯೋಚಿಸಬೇಕು. ಅಂಕಿ ಅಂಗಳು ಗೊತ್ತಿಲ್ಲದೆ; ಒಂದೇ ಜನಾಂಗವನ್ನು ದೂಷಿಸುವುದು ತಪ್ಪಾಗುತ್ತದೆ’’ ಎಂದೆ. ಆತ ಕೂಗಾಡುತ್ತ ‘‘ನೀವೆಲ್ಲ ಸುಳ್ಳು ಹೇಳುತ್ತಿದ್ದೀರಿ’’ ಎಂದು ಪ್ರತಿಭಟಿಸಿ ಹೊರಗೆ ಹೋದ. ಸಭೆ ಆರಾಮವಾಗಿ ಮುಗಿಯಿತು ಎನ್ನುವ ಸಮಯಕ್ಕೆ ಒಬ್ಬ ಹದಿನೈದು ವರ್ಷದ ಹುಡುಗ ಎದ್ದು ನಿಂತು ‘‘ನೋಡಿ, ನನಗೆ ಈ ಸಭೆಯ ಮಾತುಕತೆ ತುಂಬ ಇಷ್ಟವಾಯಿತು. ನನ್ನಂಥವನು ಇಂಥ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವುದರಿಂದ ಯಾರಾದರೂ ನನ್ನಂಥವನನ್ನು ಸಾಯಿಸಿದರೆ ಅಮ್ಮ-ಅಪ್ಪಗೆ ವಿಷಯ ತಲುಪುತ್ತದೆ ಅಲ್ಲವೆ?’’ ಎಂದು ಕೇಳಿದಾಗ; ಒಟ್ಟು ಸಭೆ ಒಂದು ಕ್ಷಣ ಗಂಭೀರವಾಯಿತು. ಮತ್ತು ಎಲ್ಲರೂ ಒಂದು ರೀತಿಯ ಚಾರಿತ್ರಿಕ ವೇದನೆಯಿಂದ ಆ ಹುಡುಗನ ಕಡೆ ನೋಡಲು ಪ್ರಯತ್ನಿಸಿದ್ದರು. ನಾವು ಅಷ್ಟೊಂದು ಭೀತರಾಗುವ ಅವಶ್ಯಕತೆಯಿಲ್ಲ ಎಂದು ಆ ಹುಡುಗನಿಗೆ ಸಮಾಧಾನ ಹೇಳಿ ಕೂರಿಸಿದೆವು. ಇದನ್ನು ಬರೆಯುವ ಕಾಲಕ್ಕೆ ಆ ಹುಡುಗನ ಮೂಲಕ ಪಾಕಿಸ್ತಾನದ ಲಾಹೋರಿನಲ್ಲಿ ಒಬ್ಬ ಹುಡುಗ ಸ್ವಲ್ಪ ಹೆಚ್ಚು ಕಮ್ಮಿ ಇದೇ ರೀತಿಯ ಪ್ರಶ್ನೆಯನ್ನು ಕೇಳಿದ್ದ. ಲಾಹೋರಿನ ಪಂಜಾಬ್ ವಿಶ್ವ ವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಯೊಬ್ಬ ‘‘ಹೌದಾ ‘ಮುಂಬೈಯ ಎಲ್ಲ ಮುಸಲ್ಮಾನರನ್ನು ಕಡಿದು ಅರಬ್ಬೀ ಸಮುದ್ರಕ್ಕೆಸೆಯಬೇಕು’ ಎಂದು ಬಾಳಾ ಠಾಕ್ರೆ ಹೇಳಿದ್ದಾರಲ್ಲ?’’ ಎಂದು. ಆ ಮಾತು ಒಂದು ಕ್ಷಣ ನನಗೆ ದಿಗಿಲು ಹುಟ್ಟಿಸಿತು. ಅದೇ ಸಮಯಕ್ಕೆ ಆ ಹುಡುಗನಿಗೆ ಹೇಳಿದೆ: ನಾವು ಬಾಳಾಠಾಕ್ರೆಯಂಥವರಿಗೆ ಭಯಪಡಬೇಕಾಗಿಲ್ಲ. ಬಾಳಾ ಠಾಕ್ರೆಯವರನ್ನು ಮೀರಿದ ಸಾವಿರಾರು ಸಾಮರಸ್ಯದ ದೊಡ್ಡ ಮನಸ್ಸುಗಳು ಭಾರತದ ಉದ್ದಗಲಕ್ಕೂ ಇವೆ. ಅಷ್ಟೇ ಏಕೆ ಮುಂಬೈಯಲ್ಲೇ ಇದ್ದಾರೆ’’ ಎಂದಾಗ; ಆ ಹುಡುಗನ ಕಣ್ಣಲ್ಲಿ ತುಂಬಿಕೊಂಡಿದ್ದ ಆತಂಕದ ಕ್ಷಣಗಳು ಮಾಯವಾದುವು. ಇದನ್ನು ‘ವಾರ್ತಾಭಾರತಿ’ಯಲ್ಲಿ ‘ಪಾಕಿಸ್ತಾನದ ನೆಲದಲ್ಲಿ’ ಎಂಬ ಲೇಖನ ಮಾಲೆಯಲ್ಲಿ ಕಳೆದ ವರ್ಷ ಬರೆದಿದ್ದೆ. ಅದೇ ರೀತಿಯಲ್ಲಿ ಬೆಳಗಾಂನ ಆ ಹುಡುಗ ತನ್ನ ಕಣ್ತುಂಬ ಎಷ್ಟು ಆತಂಕದ ನೋಟ ಆವರಿಸಿಕೊಂಡಿತ್ತು. ನಮ್ಮೆಲ್ಲರ ವಿಳಾಸವನ್ನು ಪಡೆದು ನಿಮ್ಮ ಜೊತೆ ಸಂಪರ್ಕವನ್ನಿಟ್ಟುಕೊಂಡಿರುತ್ತೇವೆ. ಅಮ್ಮ ಅಪ್ಪಗೂ ಈ ವಿಷಯವನ್ನು ತಿಳಿಸುವೆ ಎಂದಾಗ; ನನಗೆ ವಿಲಿಯಂ ಬ್ಲೇಕ್‌ನ ಈ ಸಾಲುಗಳು ನೆನಪಾದುವು: “You never know what is enough unless you know what is more than enough” ”]]>

‍ಲೇಖಕರು G

May 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This