ಇಂಗ್ಲಿಷಿನಲ್ಲಿ mass frenzy ಅಂತಾರಲ್ಲ…

ಕರಿ, ಬಿಳಿ

kamarupi-nagerupa

ಎಂ ಎಸ್ ಪ್ರಭಾಕರ್ (ಕಾಮರೂಪಿ)

ಮೈಕೆಲ್ ಜಾಕ್ಸನ್ ತೀರಿಕೊಂಡ ಅಂತ ಬೆಳಿಗ್ಗೆ ರೇಡಿಯೋಲಿ ಸುದ್ದಿ ಕೇಳಿದಾಗ ಒಂದು ರೀತಿ ನನಗಿಂತ ಸಣ್ಣವರು ತೀರಿಕೊಂಡಾಗ ಸಹಜವಾಗೇ ಆಗುವ, ಈ ಸಣ್ಣವಯಸ್ಸಿನಲ್ಲಿ ಹೋಗಬಾರದಾಗಿತ್ತು ಅನ್ನಿಸಿಕೊಳ್ಳುವ, ಸಂತಾಪ ಆಯಿತು.

ಆದರೆ ಇಷ್ಟು ಹೇಳಿ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ತೀರಿಕೊಂಡ ವ್ಯಕ್ತಿ ಒಬ್ಬ ವಿಶ್ವಪ್ರಸಿದ್ಧ ವ್ಯಕ್ತಿ. ಲಕ್ಷಾಂತರ, ಏಕೆ ಕೋಟ್ಯಾಂತರ ಮಂದಿ, ಅದರಲ್ಲೂ ಯುವಕ ಯುವತಿಯರಸಮಾಜ, ಅವನನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿತ್ತು. ಅವನ ಹಾಡುಗಾರಿಕೆ, ಅವನ ಜೀವನ ಶೈಲಿ, ಇವೆಲ್ಲವೂ ಅವುಗಳ ವೈಶಿಷ್ಟ್ಯತೆಯಿಂದ ಪೃಥಿವಿಯ ಎಲ್ಲ ಭಾಗದವರನ್ನೂ ಸೆಳೆದಿದ್ದವು. ಹೊಟೆಲೊಂದರಲ್ಲಿ ಒಮ್ಮೆ ರಾತ್ರಿ ಕಳೆಯಬೇಕಾಗಿದ್ದಾಗ ಟಿವಿ ಯಲ್ಲಿ ಅವನ ಸಂಗಿತ, ಕುಣಿತದ ಕಾರ್ಯಕ್ರಮ ನೋಡಿದ್ದೆ. ಪ್ರೇಕ್ಷಕರನ್ನು ಹುಚ್ಚು ಹಿಡಿಸಬಲ್ಲ ಮಾಟ ಅವನದಾಗಿತ್ತು. ಇಂಗ್ಲಿಷಿನಲ್ಲಿ mass frenzy ಅಂತಾರಲ್ಲ, ಅದನ್ನು ಉತ್ತೇಜಿಸುವುದು, ಪ್ರಚೋದಿಸುವುದು, ಅದರಿಂದ ಲಾಭ ಗಳಿಸುವುದು ಅವನ ವೈಶಿಷ್ಟ್ಯ.

41EamKEmThL._SL500_AA280_

ಇಂತಹ ಸಂಗೀತದ ಮದೋನ್ಮತ್ತ ಉನ್ಮಾದಕ್ಕೆ ಪ್ರಚೋದಿಸುವ ಮಾಟಗಾರ ಅವನೊಬ್ಬನೇ ಆಗಿರಲಿಲ್ಲ. ಆದರೂ ಅವನಂತಹ ಇತರ ಅಭಿನಯಕಾರರ ತುಲನೆಯಲ್ಲೂ ಅವನು ಎತ್ತಿ ಕಾಣುತ್ತಿದ್ದ. ಇದಕ್ಕೆ ಕಾರಣಗಳು ಅನೇಕ. ಅವನ ಮಾಟದ ಚಮತ್ಕಾರಿಕೆಯನ್ನು ವಿವರಿಸುವುದು ಬಿಡಿ, ವರ್ಣಿಸುವುದೂ ಕಷ್ಟ. ಟಿವೀ ಅಡ್ವರ್ಟೈಸ್ಮೆಂಟುಗಳು, ಯಾರ ಕಲ್ಪನೆಗೂ ಮೀರಿದ ಹಣ, ಮೇಕಪ್ಪುಗಳು ತಯಾರಿಸಿದ ಮೋಹಕ ಸೌಂದರ್ಯ ಹೊಂದಿದ್ದ ಜೊತೆಯ ಕುಣಿತಗಾರರು, ಅಧ್ಬುತ ಶಕ್ತಿಯ ಧ್ವನಿವರ್ಧಕಗಳು, ನೂರಾರು ಸಾವಿರ ವಾಟ್ ಶಕ್ತಿಯ ಕಣ್ಣುಗಳನ್ನು ಕುರುಡಾಗಿಸುವ ಬಣ್ಣಬಣ್ಣದ ಲೈಟುಗಳು, ಸ್ಟ್ರೋಬ್ ಲೈಟುಗಳು, ಇನ್ನೂ ಏನೇನೋ, ಇವೆಲ್ಲಾ ಸೇರಿ ಒಂದು ಮಾಯಾಜಾಲವನ್ನು ಹರಡಿ ಪ್ರೇಕ್ಷಕರನ್ನು, ಶ್ರೋತೃಗಳನ್ನು ವಶೀಕರಣ ಮಾಡಿಕೊಳ್ಳುವ ವೈಶಿಷ್ಟ್ಯ ಮೈಕೆಲ್ ಜಾಕ್ಸನ್ ನ ಸಂಗೀತ. ಇವೆಲ್ಲಾ ಅವನ ಸಮಕಾಲೀನ ಇತರ ಚಮತ್ಕಾರಿಗಳೂ ಪಡೆದಿದ್ದರು. ಆದರೆ ಇದೆಲ್ಲಕ್ಕೂ ಮೀರಿದ ವೈಶಿಷ್ಟ್ಯ ಮೈಕೆಲ್ ಜಾಕ್ಸನ್ ಪಡೆದಿದ್ದ. ಅದು ಅವನ ವ್ಯಕ್ತಿತ್ವದ ವೈಶಿಷ್ಟ್ಯ, ವಿಚಿತ್ರತೆ.

ಆದರೆ ನನ್ನ ಮಟ್ಟಿಗೆ ಈ ವ್ಯಕ್ತಿ ವೈಶಿಷ್ಟ್ಯದ ಎರಡು ಅಂಶಗಳು ಅವನನ್ನು ಒಬ್ಬ ಅಸಹ್ಯಕರ ವ್ಯಕ್ತಿಯಾಗಿ ಪರಿವರ್ತಿಸಿದ್ದವು.

ಒಂದು, ಅವನಿಗೆ ತನ್ನ ದೇಹದ ಬಣ್ಣದ ಬಗ್ಗೆ ಇದ್ದ ಒಂದು ಸಂಕುಚಿತ ಮನೋಭಾವ, ಅಸಹ್ಯ ಮತ್ತು ತಿರಸ್ಕಾರ ಪ್ರವೃತ್ತಿ. ಅವನು ಹುಟ್ಟಿನಲ್ಲಿ ಕರಿಯ. ಆದರೆ ಅನೇಕಾನೇಕ ಕರಿಯರಂತೆ ಅವನು ತನ್ನ ದೇಹವರ್ಣವನ್ನು ನಿರಾಕರಿಸಲು ಜೀವನ ಪರ್ಯಂತ ಶ್ರಮ ಪಟ್ಟ. ಅನೇಕ ರೀತಿಯ ಔಷಧಿಗಳು, ಮಾತ್ರೆಗಳು, ಸ್ಕಿನ್ ಕ್ರೀಮುಗಳು, ಸ್ಕಿನ್ ಸರ್ಜರಿ, ರೇಡಿಯೇಷನ್ ಥೆರಪಿ, ಇನ್ನೂ ಏನೇನೋ ರೀತಿಯ ಉಪಯೋಗ ದುರುಪಯೋಗಗಳನ್ನು ಅವನು ಜೀವನ ಪರ್ಯಂತ ಬಳಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ಕರಿಯರು, ಅದರಲ್ಲೂ ಆಫ್ರಿಕನ್ ಕರಿಯರು, ಅವರು ಯಾವದೇಶದಲ್ಲಿ ವಾಸಸ್ಥರಾದರೂ ಸರಿ, ತಮ್ಮ ದೇಹದ ವರ್ಣದ, ಏಕೆ ತಮ್ಮ ವ್ಯಕ್ತಿತ್ವದ ಬಗ್ಗೆಯೇ ಒಂದು ತುಚ್ಛ ಅಭಿಪ್ರಾಯ ಬೆಳೆಸಿಕೊಳ್ಳಬೇಕೆಂದು ಅವರ ಮೇಲೆ ರಾಜಕೀಯ, ಆರ್ಥಿಕ ಮತ್ತು ಇದಕ್ಕೂ ಮೀರಿ ಸಾಂಸ್ಕೃತಿಕ ಆಧಿಪತ್ಯ ನಡೆಸಿದ್ದ ಬಿಳಿಯರು ಬಯಸುವುದು, ಮತ್ತು ಈ ಗುರಿಯನ್ನು ತಲುಪಲು ಖುಲಾಮತ್ತಾಗಿ ಅಥವಾ ಷಡ್ಯಂತ್ರಗಳ ಮೂಲಕ ಪರಿಶ್ರಮಿಸುವುದು ಸ್ವಾಭಾವಿಕ. ಆದರೆ ಈ ಕರಿ-ಬಿಳಿ ದ್ವಂದ್ವ ಮತ್ತು ವೈಷಮ್ಯ ಇಂದಿನದಲ್ಲ, ವಸಾಹತುಶಾಹಿ, ಸಾಮ್ರಾಜ್ಯಶಾಹಿ ಯುಗಗಳ ಪ್ರಜೋದಕತೆಯಿಂದ ಜನುಮಿಸಿದ್ದಲ್ಲ. ಈ ಪಾರ್ಥಕ್ಯ — ಇದು ನಿಜವಾದದ್ದೆ ಅಥವಾ ಕಲ್ಪಿತ ಪಾರ್ಥಕ್ಯವೇ ಇದರ ಚರ್ಚೆ ಇಲ್ಲಿ ಅಗತ್ಯವಿಲ್ಲ — ಅನುಸರಿಸಿ ಬಿಳಿ ಅಂದರೆ ಶುದ್ಧ, ಕರಿ ಅಂದರೆ ಅಶುದ್ಧ, ಬಿಳಿ ಅಂದರೆ ರೂಪ, ಕರಿ ಅಂದರೆ ವಿರೂಪ, ಬಿಳಿ ಅಂದರೆ ಒಳಿತು, ಕರಿ ಅಂದರೆ ಕೊಳೆತ, ಇತ್ಯಾದಿ ಮಾನಸಿಕ, ಸಾಂಸ್ಕೃತಿಕ, ಏಕೆ, ಧಾರ್ಮಿಕ ಪ್ರವೃತ್ತಿಗಳು ಸಹ ಪೃಥಿವಿಯ ಪ್ರಾಯ ಎಲ್ಲ ಸಮಾಜಗಳಲ್ಲೂ ಚೆನ್ನಾಗಿ ಬೇರೂರಿವೆ. ಹಿಂದೂಧರ್ಮದ ಒಂದು ಅವಿಭಾಜ್ಯ ಅಂಗವಾದ ಚಾತುರ್ವರ್ಣ ಮತ್ತು ಜಾತಿಪದ್ಧತಿಯಲ್ಲಂತೂ ಚೆನ್ನಾಗಿ ಬೇರೂರಿದೆ. ಈ ಮನೋಭಾವವೇ ಸಮಕಾಲೀನ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳ ಆರ್ಥಿಕ ಉನ್ನತಿಗೆ ಅತಿ ಅಗತ್ಯವಾದ ಕರಿಯ ಜನರ ಆರ್ಥಿಕ ಮತ್ತು ಸಾಮಾಜಿಕ ಶೋಷಣೆಗೆ ನೈತಿಕ ಸಮರ್ಥನೆಯನ್ನು ನೀಡಿದೆ.

41EamKEmThL._SL500_AA280_

ತನ್ನ ಜೀವನಶೈಲಿಯಿಂದ ಮೈಕೆಲ್ ಜಾಕ್ಸನ್ ಅನೇಕಾನೇಕ ಕರಿಯರ ಸ್ವವಿದ್ವೇಷಕ್ಕೆ ಒಂದ್ದು ಉಪಪತ್ತಿಯನ್ನು ಸಂಪಾದಿಸಿಕೊಟ್ಟಿದ್ದ.

ಅವನ ವ್ಯಕ್ತಿಗತ ಜೀವನದ ಇನ್ನೊಂದು ವೈಶಿಷ್ಟ್ಯ ಏನೆಂದರೆ ಅವನೇ ಪ್ರಚಾರಿಸಿದ್ದ ಸಣ್ಣಮಕ್ಕಳ ಬಗ್ಗೆ ಅವನಿಗಿದ್ದ ಪ್ರೀತಿ. ಈ ವಿಷಯ ಅನೇಕ ಸುಳ್ಳು ನಿಜಗಳ ಮಧ್ಯೆ ಹೂತುಹೋಗಿದೆ. ಅವನು ಈ ಮಕ್ಕಳನ್ನು ತನ್ನ ಕಾಮುಕತೆಯನ್ನು ತೃಪ್ತಿಪಡಿಸಲು ದುರುಪಯೋಗ ಮಾಡಿಕೊಂಡಿದ್ದ ಅಂತ ಅನೇಕ ದೂರುಗಳಿದ್ದವು. ಕೆಲವು ಪೋಲಿಸ್ ಕೇಸುಗಳೂ ರಿಜಿಸ್ಟರ್ ಆಗಿದ್ದವು. ಒಂದೆರಡು ಬಾರಿ ಅವನ ವಿರುದ್ಧ ಮೊಕದ್ದಮೆಯೂ ನಡೆಯಿತು. ಒಂದು ಕೇಸಿನಲ್ಲಿ ಆರೋಪಿಸಿದ್ದವರಿಗೆ ಹಣ ಕೊಟ್ಟು ಕೇಸು ವಾಪಸ್ ಮಾಡಿಸಿಕೊಂಡ ಅಂತ ಸುದ್ದಿ ಹರಡಿತ್ತು.

ಒಬ್ಬ high profile ವ್ಯಕ್ತಿಗೆ ಇಂತಹ ಆಪಾದನೆಗಳು, ಸುಳ್ಳು ಆಪಾದನೆಗಳನ್ನು ಹಚ್ಚಿ ಅಂತಹ ವ್ಯಕ್ತಿಯಿಂದ ಹಣ ಪಡೆಯುವ ಪ್ರಯತ್ನಗಳು, ದಿನಂಪ್ರತಿದಿನದ ಅನುಭವಗಳಿರಬೇಕು. ಅವನ ವಿಚಿತ್ರವ್ಯಕ್ತಿವೈಶಿಷ್ಟ್ಯದ ಕಾರಣ ಮೈಕೆಲ್ ಜಾಕ್ಸನ್ ಈ ಸಂಧಿಗ್ಧ ಪರಿಸ್ಥಿಗಳನ್ನು ಮತ್ತು ಅವು ಮುಂದಿಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿಲ್ಲ. ಅವನಂತಹ ಅನೇಕರಂತೆ ಅವನು ಎಷ್ಟು ಕೀರ್ತಿ ಸಂಪಾದಿಸಿಕೊಂಡರೂ, ಎಷ್ಟು ಧನವಂತನಾದರೂ ತನ್ನ ಹಿನ್ನೆಲೆಯ ದುರ್ಬಲತೆ ಮತ್ತು ಅಡಚಣೆಗಳಿಂದ ಮುಕ್ತನಾಗಲೇ ಇಲ್ಲ.

ಒಟ್ಟಿನಲ್ಲಿ ಹೇಳಬೇಕೆಂದರೆ ಅವನು ಒಮ್ಮೊಮ್ಮೆ ಬೇರೆಯವರು ದುರುಪಯೋಗ ಮಾಡಿಕೊಂಡ ಬಲಿಪಶು, ಒಮ್ಮೊಮ್ಮೆ ತಾನೇ ತನ್ನಮೇಲೆ ನಿರ್ಭರರಾಗಿದ್ದ ಅಬಲರನ್ನು ದುರುಪಯೋಗ ಮಾಡಿಕೊಂಡಿದ್ದ ಒಬ್ಬ ಶಕ್ತಿಯುತ ಧನವಂತ.

ಅವನ ಸಂಗೀತದ ಬಗ್ಗೆ ಬಹಳ ಹೇಳುವುದಿದೆ. ಅದು ಇನ್ನು ಯಾವಾಗಲಾದರೂ ಹೇಳುತ್ತೇನೆ

‍ಲೇಖಕರು avadhi

July 29, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. ರಮೇಶ್ ಹಿರೇಜಂಬೂರು

    ಪ್ರಭಾಕರ್ ಸರ್ ನೀವು ನಿಜಕ್ಕೂ ಮೈಕಲ್ ಜಾಕ್ಸನ್ ಬಗ್ಗೆ ಅರ್ಥ ಪೂರ್ಣವಾಗಿ ಬರೆದಿದ್ದೀರಿ. ಇಡೀ ಲೇಖನ ತುಂಬಾ ಚನ್ನಾಗಿದೆ. ಆತನಿಗಿದ್ದ ಕೀಳರಿಮೆ, ಛಲ, ಸಾಧನೆಗೆ ತೋರಿದ ಪ್ರಯತ್ನಗಳನ್ನ ಸುಂದರವಾಗಿ ಚಿತ್ರಿಸಿದ್ದೀರಿ. ಮೈಕಲ್ ನ ಸಾದನೆಯನ್ನು ಎಲ್ಲರು ಆಧರಿಸಲೇ ಬೇಕು. ಆದರೆ ಅವನಲ್ಲಿದ್ದ ಕೀಳರಿಮೆ, ಶೋಕಿತನ, ಅವನ ಕೆಟ್ಟ ಹವ್ಯಾಸಗಳಿಂದ ಎಲ್ಲ ಯುವ ಜನತೆ ದೂರವಿರಬೇಕು.

    ಪ್ರತಿಕ್ರಿಯೆ
  2. minchulli

    ತುಂಬಾ ಅರ್ಥಪೂರ್ಣ ಬರಹ .. ರಮೇಶ್ ರವರ ಅಭಿಪ್ರಾಯಕ್ಕೆ ನನ್ನದೊಂದು ವೋಟ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: