
ಅಶ್ಫಾಕ್ ಪೀರಜಾದೆ
ಕವಿಯೊಬ್ಬ ಬರೆದ
ಮುಟ್ಟು ನೋವು ತುಂಬಿದೆದೆ
ಗಾಯಗೊಂಡ ಅಂಗಾಂಗ
ಭಗ್ನಗೊಂಡ ಹೃದಯ
ಅವಳ ಮೇಲಿನ
ನಿರಂತರ ಶೋಷಣೆ ಕುರಿತು
ಕಥೆಗಾರ ಕಥೆ ಕಟ್ಟಿದ
ಅವಳ ಬದುಕು ಬವಣೆ
ಹರಿದು ಚಿಂದಿಯಾದ ಧಿರಿಸು
ಕಿಂಡಿಗಳಿಂದ ಇಣುಕುವ ಪ್ರಾಯ
ರಣಹದ್ದುಗಳು ಮುಕ್ಕಿ ತಿಂದ
ಅವಳ ಅಂದ ಚೆಂದ ಮಾಂಸ
ಮಾದಕ ನೋಟ ನಾಭಿ
ಕುಚ ಕುಂಬಾದಿಗಳು ಬಗ್ಗೆ
ರಕ್ತದ ಮಡವಿನಲ್ಲಿ ಸತ್ತು ಬಿದ್ದ
ಹೆಣ್ಣಿನ ಸೊಂಟ
ತೊಡೆ ತುಟಿ ಕೆನ್ನೆ ಗಲ್ಲ ನಗ್ನ
ಮೈಗೆಲ್ಲ ಬಳೇದು ಮಣ್ಣಮಸಿ
ಕಣಕಣದಲ್ಲೂ ಜೀವ ತುಂಬಿದ
ಕಲಾವಿದ ಪಾಪ!
ಅವಳ ಸ್ಥಿತಿಗೆ ಮರಗುವ
ಕರುಣಾಮಯಿಗಳ ಹೃದಯ ತಣಿಸಿ
ಕರಗಿಸಿ ಕಣ್ಣಲಿ ನೀರು ತರಿಸಿದ ಭೂಪ !

ಓಹೋ.. ಭಾರತ
ಮಹಾಭಾರತ, ರಾಮಾಯಣ
ಕ್ರೈಂ ಪೈಲ್ಸ್, ಕ್ರೈಮ್ ಡೈರಿ …
ಕಿರು ತೆರೆ, ವಿಶಾಲ ಪರದೆಯ
ನಿರ್ದೇಶಕರೇನು ಕಡಿಮೆ !
ಕಾಮದ ಗೊಂಬೆ ಭೋಗದ
ವಸ್ತುವಾಗಿಸಿ ನಲಿಸಿ ಕುಣಿಸಿ
ಓಡಾಡಿಸಿ
ದುರ್ಯೋಧನನ ಕೈಯಿಂದ
ಸೀರೆ ಜಗ್ಗಿಸಿ ಬೆತ್ತಲೆಗೊಳಿಸಿ
ಮೋಜ ನೋಡುವ ಸಮಾಜದೆದುರು
ಅಳಿದುಳಿದ ಒಂದಿಷ್ಟು ಮಾನ
ಜೂಜಿಗೆ ಬಾಜಿಕಟ್ಟಿ
ಧರ್ಮರಾಜ ಹರಾಜಿಗಿಟ್ಟ..
ಸಭೆಗೆ ಹಾಜರಿದ್ದ ಮೂಕ ಪ್ರೇಕ್ಷಕರ
ದಿಗ್ಗಜರ ತಂಡದ ಮನ ಸೂರೆಗೊಂಡ
ಹೀಗೆ ಕಾಲಕಾಲಕ್ಕೂ ಹೆಣ್ಣು ಅಬಲೆ
ಕವಿ ಕಲಾವಿದರ ಕಾಗದ ಕುಂಚದಲಿ ಸೃಜನಶೀಲವಾಗುತ್ತ ರಕ್ತದ ಹೂವಾಗಿ
ಅರಳಿ ನಿಂತು ಪ್ರಜ್ಞಾವಂತ
ಸಮಾಜದ ಅನುಕಂಪದಲಿ
ಮನೋರಂಜನೆಯ ಸರಕಾಗಿ
ಕಣ್ಣೀರು, ನಿಟ್ಟುಸಿರು,
ಬಿರುದು ಬಾವಲಿ, ಹಣ ಸಂಪತ್ತು,
ಚಪ್ಪಾಳೆ ಗಿಪ್ಪಾಳೆ ಗಿಟ್ಟಿಸಿಕೊಟ್ಟ
ಬಿಸಿಬಿಸಿಯಾಗಿ ಮಾರಾಟವಾಗುತ್ತ
ಸಹೃದಯ ಕನಸಿನ ಲೋಕಕ್ಕೆ ಲಗ್ಗೆ ಇಟ್ಟಿದ್ದು
ಬರೆದು ಪ್ರಚಾರ ಪ್ರಿಯವಾದದ್ದು
ಇಂತಹದ್ದೇ ಇನ್ನೊಂದು ಈ ಕವಿತೆ !
0 ಪ್ರತಿಕ್ರಿಯೆಗಳು