ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ…

ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು..

-ಚಿತ್ರಾ ಕರ್ಕೇರ

ಶರಧಿ

img_9009b

ಕಳೆದ ತಿಂಗಳಿಂದ ಬರೇ, ನೋವು ವಿಷಾದಗಳೇ ಅಕ್ಷರರೂಪ ಪಡೆಯುತ್ತಿವೆ. ಅದೇ ಯಾಕೋ ಗೊತ್ತಿಲ್ಲ..ಇನ್ನು ತೀರ ಹಾಸ್ಯಮಯವಾಗಿ, ಚೆನ್ನಾಗಿ, ಖುಷಿಖುಷಿಯಾಗಿ ಬರೆಯೋಕೆ ನಂಗೆ ಬರಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ.

ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ. ನನ್ನಜ್ಜ ಮೂರ್ತೆದಾರ(ಶೇಂದಿ ತೆಗೆಯುತ್ತಿದ್ದರು). ಬೆಳ್ಳಂಬೆಳಿಗ್ಗೆ ಅಜ್ಜ ಶೇಂದಿ ತೆಗೆಯೋ ಕಥೆ ಹೇಳುತ್ತೇನೆ. ಇದು ನನ್ನಜ್ಜನ ಕಥೆ ಅನ್ನೋದಕ್ಕಿಂತಲೂ ಶೇಂದಿ ತೆಗೆಯೋದು ನಮ್ಮ ಕುಲಕಸುಬು ಅದು. ನಾವು ಚಿಕ್ಕವರಿರುವಾಗ ಅಜ್ಜ ಶೇಂದಿ ತೆಗೆಯುತ್ತಿದ್ದರು. ಆವಾಗ ಅಜ್ಜ ಶೇಂದಿ ತೆಗೆಯೋದ್ರಲ್ಲಿ ನಿಸ್ಸೀಮರು, ಹಾಗೇ ಊರೆಲ್ಲಾ ಭಾರೀ ಫೇಮಸ್ಸು. ನಮ್ಮ ತಲಾತಲಾಂತರಗಳಿಂದ ಮಾಡಿಕೊಂಡು ಬರುತ್ತಿದ್ದ ಕುಲಕಸುಬಿದು. ನಮ್ಮ ಮುತ್ತಜ್ಜನ್ನೂ ಅದೇ ಮಾಡುತ್ತಿದ್ದರು. ಅಜ್ಜ ರಾತ್ರಿ ೪.30ಗೆ ಸರಿಯಾಗಿ ಶೇಂದಿ ತೆಗೆಯೋಕೆ ಹೊರಡೋರು. ಸೊಂಟಕ್ಕೆ ಒಡಂಕ್(ಪಟ್ಟಿ) ಹಾಗೂ ಕೈಯಲ್ಲಿ ಅರ್ಕತ್ತಿ(ಕಳ್ಳು ತೆಗೆಯುವ ಹರಿತವಾದ ಕತ್ತಿ) ಕಟ್ಟಿಕೊಂಡು, ಬೆನ್ನಿಗೆ ಪ್ಲಾಸ್ಟಿಕ್ ಕೊಡಗಳನ್ನು(ಕಳ್ಳು ತುಂಬಿಸಿಕೊಂಡು ಬರಲು) ಹೋಗುವ ಹಣ್ಣು ಹಣ್ಣು ಮುದುಕ ನಮ್ಮಜ್ಜ ಥೇಟ್ ನಮ್ ಥರದ ತರಲೆ ಹುಡುಗರ ಥರ ಕಾಣುತ್ತಿದ್ದರು.

ಹಾಗೇ ಹೋದ ಅಜ್ಜ ತಾಳೆಮರದ ಬುಡಕ್ಕೆ ಹೋದಂತೆ ಅಲ್ಲಿ ಊರಿನ ಗೌಡರೆಲ್ಲ ಶೇಂದಿ ತೆಗೆದು ಮರದಿಂದ ಇಳಿಯುವ ಅಜ್ಜನಿಗಾಗಿ ಕಾಯುತ್ತಿದ್ದರು. ಲೀಟರ್ ನಲ್ಲಿ ಅಜ್ಜ ಅಳೆದು ಶೇಂದಿ ಕೊಡುತ್ತಿದ್ದರು. ಕೆಲವೊಮ್ಮೆ ಶೇಂದಿ ಬೆಳ್ಳಂಬೆಳಿಗ್ಗೆ ತಾಳೆ ಮರದ ಬುಡದಲ್ಲೇ ಶೇಂದಿ ಮೂರ್ತಿ ಮಾರಾಟವಾಗುತ್ತಿತ್ತು. ಉಳಿದರೆ ಮಾತ್ರ ಗುತ್ತಿಗೆಗೆ( ಪರವಾನಗಿ ಶೇಂದಿ ಅಂಗಡಿ) ಮಾರುತ್ತಿದ್ದರು. ಹಾಗೇ ೧೦ ಗಂಟೆಗೆ ಶೆಂದಿ ಮಾರಾಟ ಮುಗಿದು ಬರುವಾಗಲೇ ಅಜ್ಜನೂ ಒಂದು ಲೀಟರ್ ಕುಡಿದು ಬಂದವರೇ ಅಜ್ಜಿಗೆ ಗದರುತ್ತಿದ್ದರು. ಬಂದ ತಕ್ಷಣ ತಂಗಳನ್ನು ಮೊಸರು ತಿಂದು ಮಲಗಿದವರೆ ಮತ್ತೆ ಮದ್ಯಾಹ್ನ ೧೨ ಗಂಟೆಗೆ ಮೂರ್ತೆ ಕೆಲಸಕ್ಕೆ ಹೋಗೋರು…ಆಮೇಲೆ ೨ ಗಂಟೆಗೆ ಬಂದು ಊಟ ಮಾಡಿ..ಮತ್ತದೆ ಸಂಜೆಗೆ ಮತ್ತೆ ಹೋಗುವರು. ಎಷ್ಟು ನಿಯತ್ತಾಗಿ ಅವರು ಮೂರ್ತೆ ಕೆಲಸ ಮಾಡೋರಂದ್ರೆ ಒಂದು ದಿನನೂ ಚಕ್ಕರ್ ಹಾಕಲ್ಲ. ಒಂದು ವೇಳೆ ಆ ಸಮಯಕ್ಕೆ ಸರಿಯಾಗಿ ಹೋಗಕ್ಕಾಗಲಂದ್ರೆ ಬೇರೆ ಯಾರನ್ನಾದ್ರೂ ಸಂಬಳಕ್ಕೆ ನೇಮಿಸಿ ಹೋಗುವರು ಅಜ್ಜ. ಆವಾಗ ಕುಟಂಬ ನಡೆಯುತ್ತಿದ್ದುದೇ ಮೂರ್ತೆಯಿಂದ. ಶೇಂದಿ ಮಾರಾಟ ಮಾತ್ರವಲ್ಲ ಅದರಿಂದ ಬೆಲ್ಲನೂ (ಓಲೆ ಬೆಲ್ಲ) ಮಾಡುತ್ತಿದ್ದರು. ಅದ್ರಲ್ಲಿ ತುಂಬಾ ಹಣ ಬರುತ್ತಿತ್ತು. ಕೈತುಂಬಾ ಹಣ ಬರುವಾಗ ಮನೆಯ ಯಜಮಾನನಾದ ಅಜ್ಜನ ಮುಖದಲ್ಲಿ ಯಜಮಾನಿಕೆ ಒಂಥರಾ ಏನೋ , ಗತ್ತು -ಗಡುಸು ಇದ್ದಂತೆ ಕಾಣುತ್ತಿತ್ತು. ಮಕ್ಕಳಾದ ನಾವೆಲ್ಲ..ಅಜ್ಜ ಕ್ಯಾಂಡಿಗೆ 5 ಪೈಸೆ ಕೊಡಿ ಅಂದ್ರು ಅಜ್ಜ ಮುಖ ಮೂತಿ ನೋಡದೆ ಬೈಯುತ್ತಿದ್ದರು. ಆವಾಗ ೫ ಪೈಸೆ ಕ್ಯಾಂಡಿಗೆ ಇತ್ತೆನ್ನುವುದು ನೆನಪು.

ಆಮೇಲೆ ನಮ್ಮಜ್ಜ ಶೇಂದಿಯಿಂದ ಊರಲೆಲ್ಲಾ ಫೇಮಸ್ಸು..ಯಾರಿಗೆ ಶೇಂದಿ ಬೇಕಾದ್ರೂ ಮೊದಲ ದಿನವೇ ಹೇಳಿ ಹೋಗುವರು. ಊರಿನ ಗೌಡ್ರೆಲ್ಲ ಹೇಳಿದ್ರೆ..ಅದನ್ನು ಹಾಗೇ ಇಡಬೇಕೆನ್ನುವುದು ಗೌಡರ ತಾಕತ್ತು. ಮಾರಿದ್ರೆ..ಅಜ್ಜನ ತಲೆನೇ ಹೋಗಬಹುದು. ಆ ನಮ್ಮ ಹಳ್ಳಿಯಲ್ಲಿ ಇದ್ದ ತಾಳೆಮರಗಳೆಲ್ಲ ಹೆಚ್ಚಿನವು ನಮ್ಮ ಅಜ್ಜನ ವ್ಯಾಪ್ತಿಗೆ ಬರುತ್ತಿದ್ದವು. ವರ್ಷಕ್ಕೆ ಇಷ್ಟು ಹಣಕ್ಕೆ ಅಂತ ಬೇರೆಯವರಿಂದ ಗುತ್ತಿಗೆ ಆಧಾರದಲ್ಲಿ ತಾಳೆಮರಗಳನ್ನು ಕೊಂಡುಕೊಳ್ಳಲಾಗುತ್ತಿತ್ತು. ಮತ್ತೆ ತಾಳೆಮರ ಮಾಲೀಕನಿಗೆ ವರ್ಷಕ್ಕೆ ಇಂತಿಷ್ಟು ಹಣದ ಜೊತೆಗೆ ದಿನಾ ಬೆಳಿಗ್ಗೆ ಉಚಿತವಾಗಿ ಒಂದು ಲೀಟರ್ ಗಟ್ಟಲೆ ಶೇಂದಿ ಕೊಡಬೇಕು..ಅದೂ ಬೆಳ್ಳಂಬೆಳಿಗ್ಗೆ ಆತ ತಮ್ಮ ಮನೆಯವರನ್ನು ಕಳಿಸಿಕೊಡುತ್ತಿದ್ದ ಶೇಂದಿ ಮರದ ಬುಡಕ್ಕೆ. ಒಂದು ವೇಳೆ ಕೊಟ್ಟಿಲ್ಲವೋ…ಬರುವ ವರ್ಷ ಅಜ್ಜನಿಗೆ ತಾಳ ಮರ ಇಲ್ಲ! ಕೊಡಲ್ಲಂದ್ರೆ…ಸಂಸಾರದ ಗತಿ?! ಹಾಗೇ ಹೆದರಿಕೊಂಡೇ ಅವರಿಗೆ ಶೇಂದಿ ಕೊಡುತ್ತಿದ್ದರು. ಮತ್ತೆ ಕೆಲವರು ತಾಳೆಮರಕ್ಕಾಗಿಯೇ ಶೇಂದಿ ಕೊಡೋದ್ರಲ್ಲಿ ಪೈಪೋಟಿ ಇರುತ್ತಿತ್ತು.

ಅಷ್ಟೇ ಅಲ್ಲ, ಶೇಂದಿ ತೆಗೆಯೋದು ಕೂಡ ಒಂದು ಕಲೆ. ನಮ್ಮ ಜಾತೀಲಿ ಅದೊಂದು ಗೌರವ, ಪ್ರತಿಷ್ಠೆಯ ಕೆಲಸ. ಎಲ್ಲರೂ ಮರಕ್ಕೆ ಹತ್ತಿ ಶೇಂದಿ ತೆಗೆಯಕ್ಕೆ ಆಗಲ್ಲ..ಅದಕ್ಕೆ ಅಭ್ಯಾಸ ಬೇಕು. ಆಗಿನ ಕಾಲದಲ್ಲಿ ಶೇಂದಿ ತೆಗೆಯಕನೇ ತರಬೇತಿ ಕೊಡುತ್ತಿದ್ದರು. ಅಷ್ಟುದ್ಧದ ತಾಳೆಮರಕ್ಕೆ ಹತ್ತಬೇಕು..ಅದು ಕತ್ತಿ, ಬಿಂದಿಗೆಗಳನ್ನು ಹಿಡಕೊಂಡು ತುಂಬಾ ಕಷ್ಟ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಅಂಚುಗಳಲ್ಲಿ ಮಾತ್ರ ಇಂಥ ತಾಳೆಮರಗಳು, ಶೇಂದಿ ತೆಗೆಯೋದು ಕಾಣಬಹುದು.

ಹೌದು..ನಮ್ಮ ಕುಲಕಸುಬು ಅಂದೆ. ಈವಾಗ? ಆ ಕಸುಬು ಏನೂಂತ ಗೊತ್ತಿಲ್ಲ. ಹಳ್ಳಿಗಳಲ್ಲಿ ತಾಳೆಮರಗಳೇ ಕಾನುತ್ತಿಲ್ಲ. ಈಗ ಕೆಲವೆಡೆ ತೆಂಗಿನ ಮರದಿಂದಲೂ ಶೇಂದಿ ತೆಗೆಯುತ್ತಾರೆ..ಅದಕ್ಕೆ ಏನೇನೂ ಮಿಶ್ರ ಮಾಡಿ ಶೇಂದಿಯ ನಿಜವಾದ ರುಚಿಯೇ ಸಿಗಲ್ಲ. ನಾವು ಚಿಕ್ಕದಿರುವಾಗ ಶೇಂದಿ ಕುಡಿಯುತ್ತಿದ್ವಿ..ಅದೂ ಚಳಿಗಾಲದಲ್ಲಿ ಸಿಹಿ ಇರುತ್ತೆ..ಅದನ್ನು ಕುಡಿಯಕೆ ಖುಷಿಯಾಗುತ್ತಿತ್ತು. ನಮ್ಮಜ್ಜ ನಮಗೆಲ್ಲಾ ೨-೩ ನಷ್ಟು ಶೇಂದಿ ಬಾಯಿಗೆ ಹಾಕೋರು..ಆದ್ರೆ ಅದೇ ಅಮಲು. ಥೇಟ್ ಇಂಗು ತಿಂದ ಮಂಗನ ಪಾಡು ನಮ್ಮದು. ಈವಾಗ ಊರಿಗೆ ಹೋದ್ರೆ..ಯಾರು ಶೇಂದಿ ತೆಗೆಯಲ್ಲ. ನಮ್ಮ ಕುಟುಂಬದಲ್ಲೇ ಇಲ್ಲ. ಇಡೀ ಹಳ್ಳಿಯಲ್ಲಿ ಒಬ್ಬರಷ್ಟೇ ಶೇಂದಿ ತೆಗೆಯೋದನ್ನು ಉದ್ಯೋಗ ಮಾಡಿಕೊಂಡು ಬಂದಿದ್ದಾರೆ. ಯಾರಾದ್ರೂ ಆ ಬಗ್ಗೆ ಮಾತಾಡಿದ್ರೆ..”ಅಯ್ಯೋ ಅದನ್ನಾರು ಮಾಡುತ್ತಾರೆ” ಎಂದು ಉದಾಸೀನ ತೋರುವವರೇ ಜಾಸ್ತಿ.

ಎಷ್ಟು ಬೇಗ ಬದುಕು ಬದಲಾಗುತ್ತೆ ನೋಡಿ. ಒಂದು ಸಂಸಾರಕ್ಕೆ ಅನ್ನ ಹಾಕುತ್ತಿದ್ದ ಮೂರ್ತೆ ಕೆಲಸ ಈಗ ಯಾರಿಗೆ ಬೇಕು? ಯಾರೂ ಇಷ್ಟಪಡಲ್ಲ. ಹೊಲದಲ್ಲಿ ದುಡಿಯೋದನ್ನು ಯಾರು ಇಷ್ಟಪಡುತ್ತಾರೆ? ನನ್ನ ಮಗ ಹುಟ್ಟುವಾಗಲೇ ಕಂಪ್ಯೂಟರ್ ಮೌಸ್ ಹಿಡಿಬೇಕು..ಅವನ್ನ ನೋಡಿ ಜಗತ್ತು ಮೂಗಿನ ಮೇಲೆ ಕೈ ಇಡಬೇಕು..ಅನ್ನೋ ಹೆತ್ತವರೇ ಜಾಸ್ತಿ. ಮೊನ್ನೆ ಮೊನ್ನೆ ಆರ್ಥಿಕ ತಜ್ಷರೊಬ್ರು ‘ಆರ್ಥಿಕ ಬಿಸಿ’ ಕುರಿತು ಮಾತಾಡಿ ಇನ್ನು ವ್ಯವಸಾಯನೇ ಗತಿ ಅನ್ನುತ್ತಿದ್ದರು. ಇನ್ನು ‘ಕಂಪ್ಯೂಟರ್ ಮೌಸ್’ (ನಾನೂ ಹೊರತಾಗಿಲ್ಲ)ಹಿಡಿದವ್ರು ಏನು ಮಾಡಬೇಕೋ?…!

‍ಲೇಖಕರು avadhi

September 7, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ lokesh mosaleCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: