‘ಇಂಪ್ರೆಸ್ ಮಾಡಲು ಈ ವಾಕ್ಯ ಬಳಸಲೇಬೇಕಿತ್ತು..’

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ಹರಿವುಮೂಲಕ ರಾಷ್ಟ್ರದ ಗಮನ ಸೆಳೆದ ಇವರು ನಾತಿಚರಾಮಿಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ಅವಧಿಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.ಇವರ ಮೊದಲ ಚಿತ್ರ ಹರಿವುನಿರ್ಮಾಣಗೊಂಡ ಕಥನವೂ ಅವಧಿಯಲ್ಲಿಯೇ ಪ್ರಕಟವಾಗಿತ್ತು. 

ಓದುಗರಲ್ಲಿ ಮೊದಲಿಗೆ ಕ್ಷಮೆ ಕೇಳುತ್ತಿದ್ದೇನೆ. ಆಕ್ಟ್ 1978 ಸಿನೆಮಾದ ಬಿಡುಗಡೆಯ ಕೆಲಸಗಳ ಒತ್ತಡದಲ್ಲಿದ್ದ ಕಾರಣದಿಂದಾಗಿ ಧೀರ್ಘಾವಧಿಗೆ ಅಂಕಣ ಬರೆಯಲಾಗಲಿಲ್ಲಾ. ಸಿನೆಮಾದ ಕೆಲಸಗಳು ಇನ್ನೂ ಮುಗಿದಿಲ್ಲವಾದರೂ ಅವಧಿಯವರ ಶಿಸ್ತಿಗೆ ಮತ್ತೆ ಮತ್ತೆ ಭಂಗತರಲು ಮನಸ್ಸಾಗದೇ ಅಂಕಣ ಮುಂದುವರೆಸುತ್ತಿದ್ದೇನೆ.

|ಕಳೆದ ಸಂಚಿಕೆಯಿಂದ|

ಆವತ್ತು ಭಾನುವಾರ ಬೆಳಗ್ಗಿಂದ ಶೃತಿ ಹರಿಹರನ್ ಅವರನ್ನು ಹೇಗೆ ಕೇಳುವುದು ಎಂಬ ಗೊಂದಲದಲ್ಲಿ ಒದ್ದಾಡುತ್ತಿದ್ದೆ. ಆ ಸಮಯದಲ್ಲಿ ಅವರು ತುಂಬಾ ಬ್ಯುಸಿ ನಟಿ, ಬಿಗ್ ಬಡ್ಜೆಟ್ಟಿನ ಸಿನೆಮಾದಲ್ಲಿ ನಟಿಸುತ್ತಿದ್ದರು. ತೆಲುಗು, ತಮಿಳು ಹಾಗೂ ಮಲಯಾಳಂ ಸಿನೆಮಾಗಳಿಂದಲೂ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದ್ದ ಸಮಯವದು.

ಅವರ ಎರಡು ಸಿನೆಮಾದ ಪೇಮೆಂಟ್ ನನ್ನ ಸಿನೆಮಾದ ಒಟ್ಟೂ ಬಡ್ಜೆಟ್, ಸಾಕಷ್ಟು ಒದ್ದಾಡಿದ ನಂತರ ಈ ಹಿಂದೆ ಅವರು ಹೇಳಿದ್ದ ಮಾತು ನೆನಪಾಯಿತು, ಯಾವುದೋ ಸಿನೆಮಾದ ಪ್ರೀಮಿಯರ್ ಶೋಗೆ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋಗೆ ಹೋಗಿದ್ದಾಗ ಶೃತಿ ಅವರನ್ನು ಮೊದಲ ಬಾರಿ ಮುಖತಃ ಭೇಟಿಯಾಗಿ ಮಾತಾಡಿದ್ದೆ. ಆಗ ಅವರು ನನ್ನ ಜೊತೆ ಸಿನೆಮಾ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆಗ ನಾನು ‘ನೀವೆಲ್ಲಾ ದೊಡ್ದ ಬಡ್ಜೆಟ್ ಸಿನೆಮಾ ಮಾಡೋವ್ರು, ನಾನು ಸಣ್ಣ ಪುಟ್ಟ ಸಿನೆಮಾ ಮಾಡೋದು. ನಿಮ್ ಪೆಮೇಂಟ್ ನನ್ ಕೈಲಿ ಕೊಡೋದಿಕ್ಕಾಗಲ್ಲ’ ಅಂತ ಅಂದಿದ್ದೆ.

ಅದಕ್ಕೆ ಶೃತಿಯವರು, ‘ಒಳ್ಳೆ ಕತೆ ಇದ್ರೆ ಯಾವ ಸಿನೆಮಾ ಬೇಕಾದ್ರು ಮಾಡ್ತೀನಿ,’ ಅಂತ ಹೇಳಿದ್ರು. ಆ ಮಾತು ನೆನಪಾಗಿ. ಓಕೆ ಧೈರ್ಯ ಮಾಡಿ ಕೇಳೇ ಬಿಡೋಣ ಅಂತ ನಿರ್ಧಾರ ಮಾಡಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ namasthe madam, Hegideera? ಎಂದು ಮೆಸೇಜ್ ಕಳಿಸಿದೆ. ರಿಪ್ಲೈ ಬಂದರೆ ಆಮೇಲೆ ವಿಷಯ ಪ್ರಸ್ತಾಪ ಮಾಡೋಣ ಅಂತ ಎಣಿಸಿದೆ. ಸಂಜೆ ನಾಲ್ಕು ಗಂಟೆಗೆ ಅವರಿಂದ ರಿಪ್ಲೇ ಬಂತು. sir, Namasthe super aagiddini.

ಮಧ್ಯಾಹ್ನ ಒಂದು ಗಂಟೆಗೆ ನಾನು ಮೆಸೇಜ್ ಕಳಿಸಿದ್ದು, ಶೃತಿ ಅವರಿಂದ ರಿಪ್ಲೈ ಬರೋ ಮಧ್ಯದಲ್ಲಿ ಕಾಯುತ್ತಾ, ಅವರು ಮರುತ್ತರ ಕಳಿಸಬಹುದು ಎಂಬ ಆಸೆಯನ್ನೇ ಕೈ ಬಿಟ್ಟಿದ್ದೆ. ಮುಂದೇನು ಎಂದು ಯೋಚಿಸುತ್ತಿರುವ ಸಮಯದಲ್ಲೇ ಅವರಿಂದ ಮೆಸೇಜ್ ಬಂದಿದ್ದಕ್ಕೆ ತಕ್ಷಣಕ್ಕೆ ಹೇಗೆ ರಿಪ್ಲೈ ಮಾಡಬೇಕೋ ಗೊತ್ತಾಗ್ಲಿಲ್ಲ, ಹೇಗೆ ಕೇಳೋದು, ಅವರು ಏನು ಹೇಳಬಹುದು ಎಂದೆಲ್ಲಾ ಯೋಚಿಸಿ ಕೊನೆಗೆ ಅವರಿಗೆ ಹೀಗೆಂದು ಮೆಸೇಜ್ ಕಳಿಸಿದೆ.

“Madam ನಿಮ್ಮ appointment ಬೇಕಿತ್ತು. ನಾನೊಂದು ಹೊಸ ಸ್ಕ್ರಿಪ್ಟ್ ರೆಡಿ ಮಾಡ್ತಿದೀನಿ. ಇದನ್ನ ಅತ್ಯಂತ ಕಡಿಮೆ ಬಡ್ಜೆಟ್, ಅಂದರೆ 25 ಲಕ್ಷದ ಒಳಗೆ ಮುಗಿಸಿ, ಈ ಡಿಸೆಂಬರ್ 31ರ ಒಳಗೆ ಸೆನ್ಸಾರ್ ಮಾಡಿಸಬೇಕು ಅನ್ನುವ ಯೋಜನೆ ಇದೆ. 

ಇದು ಮಹಿಳಾ ಪ್ರಧಾನ ಕತೆ, ಈ ಕತೆ ಬೆಳೆದಂತೆಲ್ಲಾ ಮೊದಲು ಕಣ್ಮುಂದೆ ಬಂದಿದ್ದೇ ನೀವು, ಆದರೆ ನೀವು busy ನಟಿ, ಇಂತಹ ಸಣ್ಣ ಬಡ್ಜೆಟ್ಟಿನ ಸಿನೆಮಾಗೆ ನಿಮ್ಮನ್ನು ಹೇಗೆ approach ಮಾಡುವುದೋ ಎಂಬ ಯೋಚನೆಯಲ್ಲೇ ಇದ್ದೆ. ಇವತ್ತು ಧೈರ್ಯ ಮಾಡಿ ನಿಮ್ಮನ್ನು ಕೇಳುತ್ತಿದ್ದೇನೆ. ನಾಳೆ ಅಥವಾ ನಾಡಿದ್ದು ನಿಮ್ಮನ್ನು ಭೇಟಿ ಮಾಡಲು ಸಮಯ ನೀಡಲು ಸಾಧ್ಯವಾಗುತ್ತದೆಯೇ? ಒಪ್ಪುವುದು ಬಿಡುವುದು ನಿಮಗೆ ಸೇರಿದ್ದು. ಆದರೆ ಒಮ್ಮೆ ಕತೆ ಕೇಳಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಾ?

ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ.

ಮಂಸೋರೆ.”

<< ಈ ಕತೆ ಬೆಳೆದಂತೆಲ್ಲಾ ಮೊದಲು ಕಣ್ಮುಂದೆ ಬಂದಿದ್ದೇ ನೀವು,>> ಅವರನ್ನು ಇಂಪ್ರೆಸ್ ಮಾಡಲು ಈ ವಾಕ್ಯ ಬಳಸಲೇ ಬೇಕಿತ್ತು. ಅವರಿಂದ ಏನು ಪ್ರತಿಕ್ರಿಯೆ ಬರುವುದೋ ಎಂಬ ನಿರೀಕ್ಷೆಯಲ್ಲಿದ್ದ ನನಗೆ ಕೂಡಲೇ ಅವರಿಂದ ಕಾಲ್ ಬಂದಿದ್ದು ಆಶ್ಚರ್ಯವಾಗಿತ್ತು. ಕಾಲ್ ರಿಸೀವ್ ಮಾಡಿದೆ. ಬಡ್ಜೆಟ್ ಬಗ್ಗೆ ಮಾತನಾಡಬಹುದೇನೋ ಎಂಬ ನಿರೀಕ್ಷೆ ನನಗಿತ್ತು. ಆದರೆ ಅವರು ‘ಸರ್, ನಾಳೆ ಬೆಳಗ್ಗೆ ಹೈದರಬಾದಿಗೆ ಹೋಗಬೇಕು, ಎಂಟು ಗಂಟೆಗೆ ಬರಲು ಸಾಧ್ಯವೇ? ಅರ್ಧ ಗಂಟೆ ಮಾತನಾಡುವ. ಎಂದು ಕೇಳಿದರು’. ನನಗೆ ಅವರ ಅಪಾಯಿಂಟ್ಮೆಂಟ್ ಸಿಕ್ಕಿದ್ದೇ ಖುಷಿ. ಕೂಡಲೇ ಒಪ್ಪಿಕೊಂಡೆ.

ಮರುದಿನ ಅವರ ಮನೆಗೆ ಎಂಟು ಗಂಟೆಗೆ ಸಮಯಕ್ಕೆ ಸರಿಯಾಗಿ ಅವರ ಮನೆಗೆ ತಲುಪಿದೆ. ಸ್ಟಾರ್ ನಟಿಯೊಬ್ಬರ ಮುಂದೆ ಕೂತಿದ್ದಿದ್ದು ಅದೇ ಮೊದಲು. ನಟಿಯರು ಹೇಗೆ ಮಾತನಾಡುತ್ತಾರೋ ಅವರೊಂದಿಗೆ ಹೇಗೆ ಬಿಹೇವ್ ಮಾಡಬೇಕೊ ಎಂಬ ಗೊಂದಲದಲ್ಲಿ ಸ್ವಲ್ಪ ಮುಜುಗರದಿಂದಲೇ ಅವರ ಮುಂದೆ ಕುಳಿತಿದ್ದೆ. ಅವರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಬಹಳ ಸಹಜವಾಗಿ ತುಂಬಾ ಫ್ರೆಂಡ್ಲಿಯಾಗಿ ಒಂದು ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿದರು.

ಮೊದಲಿಗೆ ಕತೆ ಹೇಗೆ ಹೇಳುವುದು ಎಂದು ಯೋಚಿಸುತ್ತಿದ್ದೆ. ನನಗೆ ಇವತ್ತಿನವರೆಗೂ ಕತೆ ಹೇಳುವುದು ಕಷ್ಟದ ಕೆಲಸ. ಸಾಮಾನ್ಯವಾಗಿ ಯಾರಿಗೇ ಕಥೆ ಹೇಳುವುದಕ್ಕಿಂತ ಪೂರ್ತಿ ಸ್ಕ್ರಿಪ್ಟ್ ಅವರ ಕೈಗೆ ಓದಲು ಕೊಡುತ್ತೇನೆ. ಆನಂತರ ಅವರ ಪ್ರಶ್ನೆಗಳಿಗೆ ಉತ್ತರಿಸುವುದು ನನಗೆ ಸುಲಭ. ಇವರಿಗೂ ಹಾಗೇ ಮಾಡುವುದಾ ಅಥವಾ ಕಥೆ ಹೇಳುವುದಾ ಎಂದು ಯೋಚಿಸುತ್ತಿರುವಾಗಲೇ, ಅವರು ಟೀ ತರಿಸಿ ಕೊಟ್ಟರು. ಟೀ ಕುಡಿಯುತ್ತಾ ಸ್ಕ್ರಿಪ್ಟ್ ತೆಗೆದು ಅವರ ಮುಂದಿಟ್ಟು, ‘ಮೇಡಂ ನನಗೆ ಕಥೆ ವಿವರಿಸುವುದು ಸ್ವಲ್ಪ ಕಷ್ಟ ನೀವೆ ಓದಿಕೊಂಡು ಬಿಡಿ, ಆನಂತರ ನಿಮ್ಗೆ ಅನುಮಾನ ಇರುವುದರ ಬಗ್ಗೆ ವಿವರಣೆ ಕೊಡುತ್ತೇನೆ’ ಎಂದು ಹೇಳಿದೆ.

ಅದಕ್ಕೆ ಶೃತಿ ಅವರು ‘ಸರ್ ನಾನು ಕನ್ನಡ ಓದುವುದು ತುಸು ನಿಧಾನ, ಫ್ಲೈಟ್ಗೆ ಲೇಟಾಗುತ್ತೆ, ಅದಕ್ಕಿಂತ ಹೆಚ್ಚಾಗಿ ನನಗೆ ನರೇಷನ್ ಇಷ್ಟ, ನೀವು ಅರ್ಧ ಗಂಟೆಯಲ್ಲಿ ಸಂಕ್ಷಿಪ್ತವಾಗಿ ಹೇಳಿ, ಇನ್ನೊಮ್ಮೆ ಬೇಕಿದ್ದರೆ ವಿವರವಾಗಿ ಚರ್ಚಿಸೋಣ ಎಂದು, ಒಂದು ಡೈರಿ, ಪೆನ್ ಹಿಡಿದು, ವಿಧೇಯ ವಿದ್ಯಾರ್ಥಿಯಂತೆ ಮುಂದೆ ಕುಳಿತುಬಿಟ್ಟರು. ನನಗೆ ಅನ್ಯ ಮಾರ್ಗವಿಲ್ಲದೆ ಪೂರ್ಣ ಕತೆ ಹೇಳಲು ಪ್ರಾರಂಭಿಸಿದೆ.

ಅವರು ನನಗೆ ನೀಡಿದ್ದ ಸಮಯ ಅರ್ಧ ಗಂಟೆ ಆದರೆ ನನಗೆ ಪೂರ್ತಿ ಕತೆ ಹೇಳಲು ತೆಗೆದುಕೊಂಡ ಸಮಯ ಒಂದೂವರೆ ಗಂಟೆ. ಕತೆ ಹೇಳುವ ಭರದಲ್ಲಿ ಸಮಯ ಹೋಗಿರುವುದನ್ನೇ ಮರೆತು ಬಿಟ್ಟಿದ್ದೆ. ಕತೆ ಮುಗಿದು ಸಮಯ ನೋಡಿಕೊಂಡರೆ ಅದಾಗಲೇ 9.45 ಆಗೋಗಿತ್ತು. ಆತಂಕದಿಂದ ಅವರ ಕಡೆ ನೋಡಿದೆ. ಅವರು ಅವರ ಮ್ಯಾನೇಜರ್ ಗೆ ಕಾಲ್ ಮಾಡಿ ಬೇರೊಂದು ಫ್ಲೈಟಿಗೆ ಟಿಕೆಟ್ ಬುಕ್ ಮಾಡಲು ಹೇಳಿ, ನಂತರ ನನ್ನ ಕಡೆ ನೋಡಿ, ಕೈ ಮುಂದೆ ಮಾಡಿ ಹೇಳಿದರು, ‘ಸರ್ ನಾನು ಈ ಸಿನೆಮಾ ಮಾಡುತ್ತೇನೆ.’

ನನಗೆ ಹತ್ತಿಯಷ್ಟು ಹಗುರಾದ ಭಾವ, ಆದರೂ ‘ಮೇಡಂ, ಅದೂ ಪೇಮೆಂಟ್..?’ ‘ಸರ್ ಪೇಮೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ ಕೈಲಿ ಎಷ್ಟಾಗುತ್ತೋ ಅಷ್ಟೇ ಕೊಡಿ ಸಾಕು, ಬಾಕಿ ಸಿನೆಮಾ ಲಾಭ ಮಾಡಿದ ಮೇಲೆ ಕೊಡಿ ಪರವಾಗಿಲ್ಲಾ. ಈ ಕಥೆಗೂ ನನ್ನ ಜೀವನಕ್ಕೂ ಹತ್ತಿರದ ಸಂಬಂಧ ಇದೆ. ಖಂಡಿತ ನಾನು ಈ ಸಿನೆಮಾ ಮಾಡಲೇ ಬೇಕು, ಮಾಡ್ತೀನಿ’ ಅಂತಂದ್ರು.

ಆ ಕ್ಷಣಕ್ಕೆ ನನಗಾದ ಖುಷಿ ಪದಗಳಲ್ಲಿ ವಿವರಿಸಲು ಬರುವುದಿಲ್ಲ. ಕೊನೆಯಲ್ಲಿ ಅವರು ಇನ್ನೊಂದು ಮಾತು ಸೇರಿಸಿದರು, ‘ಸರ್ ನನ್ನ ಪೇಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಸಾಧ್ಯವಾದರೆ ಇನ್ನೂ ಸ್ವಲ್ಪ ಬಡ್ಜೆಟ್ ಜಾಸ್ತಿ ಮಾಡ್ಕೊಳ್ಳೋದಿಕ್ಕಾಗುತ್ತಾ ನೋಡಿ, ಸಾಧ್ಯವಾದಷ್ಟು ಪ್ರೊಡಕ್ಷನ್ ಚೆನ್ನಾಗಿ ಆಗಲಿ, ಕ್ವಾಲಿಟಿಯಲ್ಲಿ ಕಾಂಪ್ರೊಮೈಸ್ ಆಗೋದು ಬೇಡ. ಬೇಕಿದ್ದರೆ, ನನ್ನ ಕಡೆಯಿಂದ ಇನ್ ಫಿಲಂ ಬ್ರಾಂಡಿಂಗ್ ಟ್ರೈ ಮಾಡ್ತೀನಿ, ಇನ್ನು ಮುಂದಿನದು ನಮ್ಮ ಮ್ಯಾನೇಜರ್ ವಿಘ್ನೇಶ್ ಹತ್ರ ಮಾತಾಡಿ, ನಿಮ್ ಜೊತೆ ಮಾತಾಡೋದಿಕ್ಕೆ ಹೇಳ್ತೀನಿ ಅಂತ ಭರವಸೆನೂ ಕೊಟ್ರು.

’ಇಷ್ಟು ಸಾಥ್ ಕೊಟ್ರೆ ಸಾಕು ಈ ಸಿನೆಮಾ ಆರಾಮಾಗಿ ಆಗುತ್ತೆ ಅಂತ ಅವರಿಗೆ ಹೇಳಿ, ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಬಂದೆ. ಹೊರಗೆ ಬಂದು ಒಂದು ಟೀ ಅಂಗಡಿಯ ಬಳಿ ಗಾಡಿ ನಿಲ್ಲಿಸಿ, ಟೀ ಕುಡಿಯುತ್ತಾ, ನಮ್ಮ ನಿರ್ಮಾಪಕರಿಗೆ ಈ ವಿಷಯ ತಿಳಿಸಿದೆ. ಅವರಿಗೂ ಖುಷಿ ಆಯ್ತು. ಮ್ಯಾನೇಜರ್ ಹತ್ರ ಮಾತಾಡಿ ಒಂದು ಮೀಟಿಂಗ್ ಫಿಕ್ಸ್ ಮಾಡಿ, ಮುಂದಿನದು ಮಾತಾಡೋಣ ಅಂತ ತಿಳಿಸಿದ್ರು. ಅಂತೂ ಈ ಸಿನೆಮಾ ಖಂಡಿತ ಟೇಕಾಫ್ ಆಗುತ್ತೆ ಅನ್ನೋ ನಂಬಿಕೆ ಬಲವಾಗತೊಡಗಿತು. ಅದೇ ಖುಷಿಯಲ್ಲಿ ಮನೆಯ ಕಡೆ ಹೊರಟೆ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಮಂಸೋರೆ

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾವಿರದ ಶರಣವ್ವ ಕರಿಮಾಯಿ ತಾಯೆ…

ಸಾವಿರದ ಶರಣವ್ವ ಕರಿಮಾಯಿ ತಾಯೆ…

ಡಾ ಎಂ ಎಸ್ ವಿದ್ಯಾ ಸಾವಿರದ ಶರಣವ್ವ ಕರಿಮಾಯಿ ತಾಯೆ...ತಾಯೇ... ಈ ಹಾಡು ಕೇಳುತ್ತಲೇ ನೃತ್ಯ ಬಲ್ಲದವರಿಗೂ ಕುಣಿಯುವಂತಾಗುತ್ತದೆ, ಉತ್ಸಾಹ,...

ರೋಸಾ ಲಕ್ಸಂಬರ್ಗ್ ನೆರಳಿನಲ್ಲಿ..

ರೋಸಾ ಲಕ್ಸಂಬರ್ಗ್ ನೆರಳಿನಲ್ಲಿ..

ಮ ಶ್ರೀ ಮುರಳಿಕೃಷ್ಣ ಒಂದುನೂರು ಐವತ್ತು ವರ್ಷಗಳ ಹಿಂದೆ, ಅಂದರೆ ಮಾರ್ಚ್ 5, 1871ರಂದು ಇಂದಿನ ಪೋಲ್ಯಾಂಡ್ ನಲ್ಲಿ (ಅಂದು ಅದು ರಷ್ಯಾ...

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This