ಇದೀಗ ಆ ಕೊಂಡಿ ಕಳಚಿದೆ…

 

ಅಕ್ಷತಾ ಕೆ

 

ದಣಪೆಯಾಚೆ…

 

 

ಅವರಿರುವರೆಗೆ ನಮ್ಮೂರು ಕಲೆ, ಸಂಸ್ಕೃತಿ, ಸಾಹಿತ್ಯ, ಸರಳತೆಯಿಂದ ನಳನಳಿಸ್ತಾ ಇತ್ತು. ಮೋಸ, ದಗಾ, ಜಾತಿ ಜಗಳ ಏನಂದ್ರೆ ಏನೂ ಇರ್ಲಿಲ್ಲ. ಒಂದ್ವೇಳೆ ಇದ್ರೂ ಅವರೊಂದು ಮಾತು ಹೇಳಿದ್ರೆ ಅಲ್ಲಿಗೆ ತೀಮರ್ಾನ ಆದಂಗೇನೆ. ಹಿಂಗಿದ್ದ ನಮ್ಮೂರು ಅವರು ಹೋಗಿದ್ದೆ ಹೋಗಿದ್ದು  ಇವತ್ತಿನ ಎಲ್ಲ ಊರುಗಳ ತರಾನೇ ಆಗೋಯ್ತು. ಹತ್ತರ ಜೊತೆ ಹನ್ನೊಂದು ಅಷ್ಟೆ ಎಂದರು ಗುರುರಾಜ್ ಅಂಕಲ್. ಅವರು ಹೇಳುತಿದ್ದುದು ಗಾಂಧಿವಾದಿ ವೈ.ಎಸ್. ಪುಟ್ಟಣ್ಣ(ನಾ ಕಂಡ ಮಲೆನಾಡು ಕೃತಿ ಬರೆದವರು) ನವರ ಬಗ್ಗೆ, ಅವರು ಬದುಕನ್ನು ಕಟ್ಟಿಕೊಂಡ ತೂದೂರು ಎಂಬ ಪುಟ್ಟ ಊರಿನ ಬಗ್ಗೆ. ಮೊನ್ನೆ ಪೊನ್ನಮ್ಮಾಳ್ ತೀರಿ ಹೋದಾಗ ಮತ್ತೆ ಮತ್ತೆ ಈ ಮಾತುಗಳು ನೆನಪಾದವು.

ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದಕ್ಕೆ ಆಹ್ವಾನಿತರಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ರ ವಿರುದ್ದ ನಕ್ಸಲ್ ವಾದದ ಪರವಿರುವವರು ಎಂದು ಎ.ಬಿ.ವಿ.ಪಿ ಸಂಘಟನೆ ಪ್ರತಿಭಟಿಸಿತ್ತಲ್ಲದೇ ಅವರಿಗೆ ಸಭೆಯಲ್ಲಿ ಮಾತನಾಡಲು ಅವಕಾಶ ಕೊಟ್ಟರೆ ಅಡ್ಡಿ ಪಡಿಸುವುದಾಗಿ ಹೇಳಿತ್ತು. ಎರಡು ದಿನದ ಹಿಂದಿನ ಕಲ್ಕುಳಿ ವಿಠಲ ಹೆಗ್ಡೆಯವರ ಗೋಷ್ಠಿಗೂ ಇದೇ ಕಾರಣಕ್ಕೆ ಅಡ್ಡಿ ಪಡಿಸಲಾಗಿತ್ತು. ಆದ್ದರಿಂದ ಪೊಲೀಸರು ಗೌರಿಯವರ ಗೋಷ್ಠಿಗೆ ಸಂಪೂರ್ಣ ಭದ್ರತೆ ಒದಗಿಸಿದ್ದರು.

p126188_2-copy-smallಗೋಷ್ಠಿಯ ದಿನ ಬೆಳಿಗ್ಗೆ  ಗೌರಿ ಒಂದು ಪತ್ರಿಕಾ ಗೋಷ್ಠಿಯನ್ನು ಮಾಡಿದರು. ರೈತಸಂಘದ ಕಟ್ಟಡದಲ್ಲಿ ಪತ್ರಿಕಾಗೋಷ್ಠಿ. ಗೋಷ್ಠಿ ನಡೆಯುತ್ತಿರುವಷ್ಟು ಹೊತ್ತು ಆ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರವನ್ನು ಕೂಡಾ ನಿರ್ಬಂಧಿಸಲಾಗಿತ್ತು. ಪತ್ರಕರ್ತರನ್ನು ಸಹ ಕಾರ್ಡ ನೋಡಿ, ಪತ್ರಿಕೆಯ ಹೆಸರು ಕೇಳಿ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿದ್ದರು. ಬಿಗುವಿನ ವಾತಾವರಣ ಪತ್ರಿಕಾ ಗೋಷ್ಠಿ ಪ್ರಾರಂಭವಾಗಬೇಕು ಎನ್ನುವಾಗ ಪೊಲೀಸರಿಬ್ಬರು ಬಂದು ಏನೋ ಹೇಳಿದರು. ಗೌರಿ ಮೆಟ್ಟಿಲಿಳಿದು ಹೋದರು. ನಾವೇನಾಯ್ತೋ ಎಂದು ಕಿಟಕಿಯಲ್ಲಿ ಹೊರಗೆ ಇಣುಕಿದರೆ ಅಲ್ಲಿ ಆಟೋದಲ್ಲಿ ಕುಳಿತು ಪೊನ್ನಮ್ಮಾಳ್ ಗೌರಿಯೊಂದಿಗೆ ಮಾತನಾಡುತಿದ್ದರು. ಮರಳಿ ಬರುವಾಗ ಗೌರಿ ಭಾವುಕರಾಗಿದ್ದರು, ಕಣ್ಣಲ್ಲಿ ನೀರು ತುಂಬಿತ್ತು. ಇಡೀ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದ್ದ ಪೊಲೀಸರು ಪೊನ್ನಮ್ಮಾಳ್ ಬಂದ ಕೂಡಲೇ ಅವರಿಗೆ ಮೆಟ್ಟಿಲು ಹತ್ತಲಾಗುವುದಿಲ್ಲ ಎಂಬುದನ್ನು ಅರಿತು ಕೊಂಡು ಅಂಥ ಸಂದರ್ಭದಲ್ಲೂ ಗೌರಿಯವರಿಗೆ ರಸ್ತೆಗೆ ಬಂದು ಪೊನ್ನಮ್ಮಾಳ್ ಜೊತೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು. ಇದು ಪೊನ್ನಮ್ಮಾಳ್ ಅವರ ಶಕ್ತಿ.

 ಆಶಾದೇವಿ ಮೇಡಂ ಪೊನ್ನಮ್ಮಾಳ್ರಿಗೆ ಸಂಬಂಧಿಸಿದಂತೆ ಒಂದು ಘಟನೆ ಹೇಳುತಿದ್ದರು. ಅವರು ಮತ್ತು ಪೊನ್ನಮ್ಮಾಳ್ ಗಾಂಧಿ ಜಯಂತಿಯ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಅತಿಥಿಗಳಾಗಿ ಪಾಲ್ಗೊಂಡಿದ್ದಾಗ. ಪಕ್ಕದಲ್ಲಿ ಕುಳಿತ ಪೊನ್ನಮ್ಮಾಳ್ ಅವರಿಗೆ ನೀವು ಉಟ್ಟಿರುವ ಖಾದಿ ಸೀರೆ ತುಂಬಾ ಚೆನ್ನಾಗಿದೆ ಎಂದು ಮೇಡಂ ಹೇಳಿದಾಗ ಇದು ಖಾದಿ ಅಂತ ಯಾರು ಹೇಳಿದ್ದು, ಯಾವತ್ತು ಕಳ್ಳರು, ಖದೀಮರು ಎಲ್ಲ ಖಾದಿ ಉಡೋಕೆ ಶುರುಮಾಡಿದ್ರೋ ಆವತ್ತೆ ನಾನು ಖಾದಿ ತೊಡೋದು ಬಿಟ್ಬಿಟ್ಟೆ. ಇದು ಮಲ್ ಬಟ್ಟೆ ಎಂದರಂತೆ ಪೊನ್ನಮ್ಮಾಳ್.

ಬಹುಶಃ ಎರಡು ವರ್ಷದ ಹಿಂದೆ ಶಿವಮೊಗ್ಗೆಯಲ್ಲಿ ನಡೆದ ಬಂಡಾಯ ಸಮ್ಮೇಳನ ಇರಬೇಕೆಂದು ಕಾಣುತ್ತದೆ ಸಮ್ಮೇಳನದ ಸಮಾರೋಪ ಮುಗಿಯುವುದು ಎಂಟು ಗಂಟೆಯ ಮೇಲಾಗಿತ್ತು. ಪೊನ್ನಮ್ಮಾಳ್ರ ಜೊತೆಗಿದ್ದ ಮಂಜುಳಾ ಆಟೋದವನನ್ನು ಕರೆಯಲು ಧಾವಿಸಿದರು. ನಾನು ಪೊನ್ನಮ್ಮಾಳ್ ಜೊತೆಗೆ ನಡೆಯುತಿದ್ದೆವು ಕತ್ತಲಲ್ಲಿ ಹೋಗುವಾಗ ಚೂರು ಎಡವಿದರು. ನಾನು ಅವರ ಕೈ ಹಿಡಿದು ನಡೆಸಲು ಹೋದರೆ ಬೇಡ ನಾನೇ ನಡಿತಿನಿ ಎಂದು ನೆರವಿಗೆ ಹೋದ ನನ್ನ ಕೈ ಯನ್ನು ಹಿಂದೆ ಸರಿಸಿ ನಡೆದೇ ಬಿಟ್ಟರು. ನಾನು ದಂಗಾಗಿ ನಿಂತಿದ್ದೆ. ನನಗೆ ಮತ್ತು ಒಂದು ಅಚ್ಚರಿ ಎಂದರೆ 88 ವರ್ಷ ಬದುಕಿದ ಅವರು ಅಷ್ಟೂ ವರ್ಷಗಳಲ್ಲಿ ವೈಯಕ್ತಿಕ ಬದುಕಿನ ಗೋಳುಗಳನ್ನು ಕುರಿತು ಯಾರೊಂದಿಗೂ ತೋಡಿಕೊಳ್ಳುವುದಿರಲಿ ಮಾತಾಡಿದ್ದೂ ಇಲ್ಲ ಅನಿಸತ್ತೆ. ಹಾಗೊಂದು ಶಿಸ್ತಿನ ವೈಯಕ್ತಿಕ ಬದುಕನ್ನು ಕಟ್ಟಿಕೊಂಡು ನಿರ್ವಹಿಸಿದವರಾಕೆ. ಆ ರೀತಿಯಲ್ಲೂ ಅವರ ಬದುಕು, ಚಿಂತನೆಗಳು ಪೂರ್ತಿಯಾಗಿ ಸಮಾಜಮುಖಿಯಾಗಿದ್ದವು.

ಮೊನ್ನೆ ಅರುಣಾ ಅಪಹರಣ ಕೇಸು ಖೊಟ್ಟಿ ಎಂದು ಶಿವಮೊಗ್ಗೆಯ ಕೋರ್ಟ್ ನಲ್ಲಿ ಪ್ರೂವ್ ಆಯಿತು. ಈ ಕೇಸ್ನಲ್ಲಿ ಆರೋಪಿ ಸ್ಥಾನದಲ್ಲಿ ಜನಪರ ಸಂಘಟನೆಯ ಹೆಣ್ಣು ಮಕ್ಕಳ ಪರವಾಗಿ ವಾದ ಮಂಡಿಸಿ ಗೆದ್ದ ಲಾಯರ್ ಶ್ರೀಪಾಲ್ರನ್ನು ಸಾಯುವುದಕ್ಕೆ ಒಂದು ವಾರ ಮುಂಚೆ ಆಸ್ಪತ್ರೆಗೆ ಹೋಗಿ ವಾಪಾಸ್ ಆಟೋದಲ್ಲಿ ಹೋಗುತಿದ್ದ ಪೊನ್ನಮ್ಮಾಳ್ ರಸ್ತೆಯಲ್ಲಿ ನೋಡಿದವರೇ ಸ್ವಲ್ಪ ಮುಂದೆ ಹೋದವರು ಆಟೋ ಡ್ರೈವರ್ಗೆ ಹೇಳಿ ಮತ್ತೆ ತಿರುಗಿಸಿಕೊಂಡು ಬಂದು ನಮ್ಮ ಹುಡುಗಿಯರನ್ನೆಲ್ಲ ಬಿಡಿಸಿದೆಯಲ್ಲಪ್ಪ ಎಂದು ಅಭಿನಂದಿಸಿ ಹೋದರಂತೆ. ಸಂಪೂರ್ಣ ನಿತ್ರಾಣಿ ಆಗಿದ್ದ ಸ್ಥಿತಿಯಲ್ಲೂ ಆರೋಗ್ಯಕರ ಮನಸ್ಸಿನ ಮನುಷ್ಯರನ್ನು ಬೆನ್ನು ತಟ್ಟುವ ಕೆಲಸವನ್ನು ಅವರು ಬಿಡಲಿಲ್ಲ.

ಕೊನೆಯ ವರೆಗೂ ಅವರು ಬೆಳಸಿದ್ದ ಸಂಸ್ಥೆಗಳು, ಸಂಘಟನೆಗಳೊಂದಿಗೆ ಯಾವುದೇ ಸಂದರ್ಭದಲ್ಲೂ ನಂಟನ್ನು ಕಳಚಿಕೊಂಡಿರಲಿಲ್ಲ. ಅವರ ಆಯ್ಕೆಯಲ್ಲಿ ನೈತಿಕತೆ ಮತ್ತು ಜನಪರ ಧೋರಣೆಗಳೆ ಮಾನದಂಡವಾಗಿದ್ದಿದ್ದರಿಂದ. ಆ ಧೋರಣೆಗಳನ್ನು ಅವರೂ ಕೊನೆಯವರೆಗೂ ಬಿಡಲಿಲ್ಲವಾದ್ದರಿಂದ ಇದು ಸಾಧ್ಯವಾಗಿರಬೇಕು.   ಸಮಾಜವಾದದ ಪ್ರಭಾವವನ್ನು, ಜನಪರ ಚಳುವಳಿಗಳ ಕಾವನ್ನು, ಮಲೆನಾಡು ಮತ್ತು ಬಯಲುಸೀಮೆ ಎರಡನ್ನೂ ಮಿಶ್ರಣ ಮಾಡಿದಂತಿದ್ದ ಗ್ರಾಮ್ಯದ ಸೊಗಡನ್ನು ಕಳೆದುಕೊಳ್ಳುತ್ತಾ ಪೂತರ್ಿ ಕಮಷರ್ಿಯಲ್ ಆಗುವತ್ತ ದಾಪುಗಾಲಿಡುತ್ತಿರುವ ಶಿವಮೊಗ್ಗೆಗೆ ಹಳೆಯದನ್ನೆಲ್ಲ ನೆನಪಿಸುವ ಜೊತೆಗೆ ಬೆಸೆಯುವ ಕೊಂಡಿಯಂತಿದ್ದರು ಪೊನ್ನಮ್ಮಾಳ್. ಇದೀಗ ಆ ಕೊಂಡಿ ಕಳಚಿದೆ.

‍ಲೇಖಕರು avadhi

November 6, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

2 ಪ್ರತಿಕ್ರಿಯೆಗಳು

 1. Tina

  ಅಕ್ಷತಾ,
  ಮನಸ್ಸು ತುಂಬಿಹೋಯಿತು. ಒಂದುಸಾರಿ ಪೊನ್ನಮ್ಮಾಳರ ಕಾಲಿಗೆ ಪೊಡಮಡಬೇಕಿತ್ತು ಅನ್ನಿಸಿತು.
  ಎಂಥ ಅಪರೂಪದ ವ್ಯಕ್ತಿಯ ಬಗ್ಗೆ ಬರೆದಿದೀರ. ಎಮ್ಥ ಕೊಂಡಿ ಕಳಚಿಹೋಯಿತಲ್ಲ ಅಂತ ಬೇಸರವಾಗಿದೇನೆ.

  ಪ್ರತಿಕ್ರಿಯೆ
 2. ಡಿ.ಎಸ್.ರಾಮಸ್ವಾಮಿ

  ಅಕ್ಷತಾ, ಕಡೆಗೂ ನಿಮ್ಮ ’ದಣಪೆಯಾಚೆ’ ಆ ಬದಿಯಿಂದ ಈ ಬದಿಗೆ ದಾಟಿಸುತ್ತಲ್ಲ, ಖುಶಿಯಾಗುತ್ತೆ. ನಿಮ್ಮ ಸಂಕಲನ ಸಿಕ್ಕಲೇ ಇಲ್ಲ. ಅವಿನಾಶ್ ಗೂ ನನ್ನ ನೆನಕೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: