ಇದು ಅದಲ್ಲದಿದ್ದರೂ ಅದೇ…

ಡಾ. ನಾ ದಾಮೋದರ ಶೆಟ್ಟಿ

ವಿಪರೀತ ಮೈಕೈ ನೋವು. ಗಡಗಡ ನಡುಗಿಸುವಂಥ ಚಳಿ. ಹೊದ್ದುಕೊಳ್ಳುವುದಕ್ಕೊಂದು ಹೊದಿಕೆಯಿಲ್ಲ. ಅಪ್ಪನ ಪರಿಸ್ಥಿತಿಯನ್ನು ಕಂಡ ಮಗಳು ಚಂಪಾ ಕಾಲೆಳೆಯುತ್ತಾ ಆತನ ಬಳಿಗೆ ಬಂದಳು: ‘ಏನಪ್ಪಾ ಮಾಡೋದೀಗ? ಈ ರಾತ್ರೀಲಿ ಯಾರನ್ನು ಕರೆಯೋದು? ಇದು ‘ಅದೇ’ನಾದ್ರೂ ಆಗಿದ್ರೆ ಬರೋರೂ ಬರ್ಲಿಕ್ಕಿಲ್ಲ’ ಎಂದು ಆತಂಕಿತಳಾದಳು. ಕರುಳೊಳಗಿಂದ ಸಿಡಿದೇಳುತ್ತಿದ್ದ ಕೊರೆಯುವ ಚಳಿ ಐತಪ್ಪನ ಸ್ತಿಮಿತದ ಮೇಲೆ ಸವಾರಿ ಮಾಡುತ್ತಿತ್ತು. ಇನ್ನು ತಡೆಯಲಾಗದೆಂಬುದು ಆತನಿಗೆ ಮನದಟ್ಟಾಯಿತು. ಚಂಪಾ ತಾನು ಎಳೆದುಕೊಂಡು ತಂದಿದ್ದ ಹರಕಲು ಕಂಬಳಿಯನ್ನು ಅಪ್ಪನ ಮೈಮೇಲೆ ಎಕರಾಪೆಕರಾ ಹೊದಿಸಿದಳು.

ಅದನ್ನು ಹೊದ್ದುಕೊಂಡ ಐತಪ್ಪ ಚಳಿಯನ್ನು ಎದುರಿಸಲೆಂದು ಚಿಟ್ಟೆಯ ಮೇಲಿದ್ದ ಕಟ್ಟಿನಿಂದ ಬೀಡಿಯೊಂದನ್ನು ತೆಗೆದುರಿಸಿ ಜೋರಾಗಿ ಒಂದೆರಡು ದಮ್ಮು ಎಳೆದ. ಅದೇನೂ ಫಲಕೊಡಲಿಲ್ಲ. ಆ ಬೀಡಿ ಮುಗಿಯುವ ಮುನ್ನ ಮತ್ತೊಂದನ್ನು ಅಂಟಿಸಿ ಮತ್ತೂ ದಮ್ಮು ಎಳೆದ. ಊಹ್ಞುಂ. ನಡುಗುತ್ತಾ ಐತಪ್ಪ ಹೇಳಿದ: ‘ಈಗ ಊರಿಡೀ ಯಾರು ಕೇಳಿದ್ರು ‘ಅದ್ರ’ದ್ದೇ ಕತೆಯಲ್ವಾ ಹೇಳೋದು? ಹೇಗಾದ್ರೂ ಮಾಡಿ ನಾನೇ ಮೆಡಿಕಲ್ ಸಾಪ್‍ವರೆಗೆ ಹೋಗಿ ಏನಾದ್ರೂ ಮಾತ್ರೆ ಕೇಳಿ ತರ್ತೇನೆ. ಹಾಗೇನಾದ್ರೂ ಆದ್ರೆ ನಾಳೆ ನೋಡುವ. ಬಾಗಿಲು ಸರಿಸಿ ಹೋಗ್ತೇನೆ. ನಾನು ಬಂದಾಗ ಮತ್ತೆ ನೀನು ಏಳೋದೆಲ್ಲ ಬೇಡ.’ ಐತಪ್ಪ ನಡುಗುತ್ತ ಎದ್ದ. ಆ ಹೊತ್ತಿಗೆ ಯಾವ ಕ್ಲಿನಿಕ್ಕೂ ತೆರೆದಿರುವುದಿಲ್ಲ. ಒಂದಷ್ಟು ನಡೆದಾಗ ಅಲ್ಲೇ ಒಂದು ಮೆಡಿಕಲ್ ಶಾಪ್‍ನ ಬಾಗಿಲು ತೆರೆದದ್ದು ಕಾಣಿಸಿತು. ‘ಅಬ್ಬ’ ಎನ್ನುತ್ತ ಉರುಳಾಡಿಕೊಂಡು ಅಂಗಡಿ ತಲುಪಿದ.

‘ವಿಪರೀತ ಚಳಿ, ಏನಾರೂ ಮದ್ದುಕೊಡಿ ಸಾಮೀ’ ಎಂದ. ‘ಬರೀ ಚಳೀನಾ? ಜ್ವರ, ಮೈಕೈ ನೋವೇನಾದ್ರೂ ಇದೆಯಾ?’ ‘ಹ್ಞೂ ಸಾಮೀ, ಮೈಕೈ ನೋವು, ಜ್ವರ ಎಲ್ಲಾ ಇದೆ’ ಒಳ್ಳೆಯ ಔಷಧಿ ಸಿಕ್ಕಿಬಿಡಲಿ ಎಂಬ ಆಸೆಯಿಂದ ಐತಪ್ಪ ಎಲ್ಲಾ ಉಸುರಿದ. ಮೆಡಿಕಲ್ ಶಾಪಿನ ಆಸಾಮಿ ಗದ್ದದಡಿಯಲ್ಲಿ ನೇಲುತ್ತಿದ್ದ ಮಾಸ್ಕನ್ನು ರಪ್ಪನೆ ಮೇಲಕ್ಕೆಳೆದುಕೊಂಡು ಹಿಂದಕ್ಕೆ ಸರಿದು ನಿಂತ: ‘ಇಲ್ಲಿ ನಿಮಗೇನೂ ಔಷಧಿ ಸಿಗೋದಿಲ್ಲ. ಇದು ‘ಅದೇ’ ಆಗಿದ್ರೆ ಔಷಧಿ ಕೊಡೋ ರೈಟಿಲ್ಲ ನಮಗೆ. ಕೂಡಲೆ ಮಣಿಯೂರು ಆಸ್ಪತ್ರೆಗೆ ಹೋಗಿ’ ಎಂದ.

ಮಣಿಯೂರು ಆಸ್ಪತ್ರೆ! ಮೂರು ಮೈಲಿ ನಡೆಯಬೇಕು. ಐತಪ್ಪನಿಗೆ ದಾರಿ ಕಾಣದಾಯಿತು. ಹಿಂದಕ್ಕೆ ತೆರಳಲೆ? ಮುಂದಕ್ಕೆ ಹೋಗಲೆ? ಅಲ್ಲಿ ಅವರು ಹಿಡಿದು ಒಳಗೆ ಕೂರಿಸಿದರೆ? ಮನೆಯಲ್ಲಿ ಪಾಪ, ಚಂಪಾ ಒಬ್ಬಳೆ. ಯಾರನ್ನು ಕರೆಯಲು ಹೋಗುವುದಾಗಲೀ ಯಾರದ್ದಾದರು ಮನೆಯಲ್ಲಿ ಆಶ್ರಯ ಪಡೆಯುವುದಾಗಲೀ ಅವಳಿಂದ ಆಗದ ಕೆಲಸ. ಆದದ್ದಾಗಲಿ. ಐತಪ್ಪ ಮುಂದಕ್ಕೆ ನಡೆಯಲು ತೀರ್ಮಾನಿಸಿದ.

ತಾನು ನಿಜಕ್ಕೂ ನಡೆಯುತ್ತಿದ್ದಾನೆಯೇ ಅಥವಾ ಚಳಿಗಾಳಿ ತನ್ನನ್ನು ಮುಂದಕ್ಕೆ ತಳ್ಳುತ್ತಿದೆಯೇ ಎಂಬುದು ಆತನ ಅರಿವಿಗೆ ಬರಲಿಲ್ಲ. ಕೈಗಳೆರಡನ್ನು ಹರಿದ ಕಂಬಳಿಯೊಳಕ್ಕೆ ತೂರಿಸಿಟ್ಟುಕೊಂಡ. ಅಲ್ಲಲ್ಲಿ ಮಿನುಗುತ್ತಿದ್ದ ಬೀದಿದೀಪದ ಸಹಾಯದಿಂದ ಆತ ನಡೆದ. ಅಷ್ಟೇನೂ ದೂರವಲ್ಲದ ರಸ್ತೆ ಆತನ ಪಾಲಿಗೆ ಸವೆಯಲೇ ಇಲ್ಲ. ಇನ್ನೇನು, ಮಣಿಯೂರು ಆಸ್ಪತ್ರೆ ತಲುಪಿತು ಎಂದುಕೊಳ್ಳಬೇಕಿದ್ದರೆ ತಲುಪಲಿಲ್ಲ! ಐತಪ್ಪನ ಕಾಲು ಕೈಕೊಡಹತ್ತಿತು.

ಬೀದಿಬದಿಯ ಮುಚ್ಚಿದ ಅಂಗಡಿಗಳ ಕಂಬವನ್ನೋ ಗೋಡೆಯನ್ನೋ ಆಧರಿಸಿ ತುಸುತುಸುವೇ ನಡೆದ. ಆತನ ದೇಹ ಮತ್ತೂ ಮತ್ತೂ ರಸ್ತೆಬಿಟ್ಟು ಓಲಾಡುತ್ತಿತ್ತು. ಗಂಟಲು ನೀರ ಪಸೆಗಾಗಿ ಪರಿತಪಿಸಿತು. ತನಗೆಂಥ ಸ್ಥಿತಿ ಬಂದುಹೋಯಿತು ಎಂದುಕೊಳ್ಳುತ್ತಿದ್ದಂತೆಯೇ ಮಣಿಯೂರು ಆಸ್ಪತ್ರೆಯ ಗೇಟು ಕಾಣಿಸಿತು. ‘ಓ ತಲುಪಿಬಿಟ್ಟೆ’ ಎನ್ನಬೇಕಿದ್ದರೆ ಏನೋ ಆದಂತಾಗಿ ತಲೆತಿರುಗಿ ಐತಪ್ಪ ಗೇಟಿನ ಎದುರೇ ಬೋರಲಾಗಿ ಬಿದ್ದುಬಿಟ್ಟ!

ಎಚ್ಚರವಾದಾಗ ಬೆಳಗಾಗಿತ್ತು. ಜನರಲ್ ವಾರ್ಡಿನ ಮೂಲೆಯ ಬೆಡ್ಡಿನಲ್ಲಿ ಐತಪ್ಪ ಅನಾಥ ಶವದಂತೆ ಬಿದ್ದುಕೊಂಡಿದ್ದ. ಕೈಗೆ ಚುಚ್ಚಿಟ್ಟಿದ್ದ ಸೂಜಿಯ ಮೂಲಕ ತೊಟ್ಟಿಕ್ಕುತ್ತಿದ್ದ ದ್ರವ ಮೌನವಾಗಿ ದೇಹದೊಳಕ್ಕೆ ನುಸುಳುತ್ತಿತ್ತು. ಸುತ್ತ ನೀರವ ಮೌನ. ಶವದ ತಲೆಯನ್ನೋ ಎಂಬಂತೆ ತನ್ನ ತಲೆಯನ್ನು ತಾನೇ ತುಸು ಎಡಕ್ಕೆ ತಿರುಗಿಸಿದ. ಹೊದ್ದಿದ್ದ ಮಗಳ ಕಂಬಳಿ ಕಾಲಬುಡದಲ್ಲಿ ಬಿದ್ದುಕೊಂಡಿತ್ತು. ಮಗಳೇ ಬಳಿಬಂದಳೋ ಎಂಬಂತೆ ಬೇಗನೆ ಅದನ್ನೆಳೆದುಕೊಂಡು ಅಪ್ಪಿಕೊಂಡ. ನನಗೆ ಏನಾದರೂ ಹೆಚ್ಚುಕಡಿಮೆ ಆದರೆ ಚಂಪಾಳಿಗೆ ಏನುಗತಿ ಎಂಬುದೂ ಆ ಕ್ಷಣದಲ್ಲಿ ಮನಸ್ಸಿಗೆ ಬಂತು.

ದೂರದ ಕೌಂಟರ್‍ನಲ್ಲಿ ದಾದಿಯರು ಕಾಣಿಸಿದರು. ‘ಇದು ಅದೇ ಕೇಸು’ ಎಂದು ಅರೆಬರೆಯಾಗಿ ಮಾತನಾಡಿಕೊಳ್ಳುತ್ತಿದ್ದರು. ‘ಹಾಗಿದ್ದರೆ ಇದು ‘ಅದೇ’ ವಾರ್ಡ್ ಇರಬೇಕು. ನನ್ನ ಕತೆ ಮುಗಿದಂತೆಯೆ’ ಎಂದುಕೊಂಡ ಐತಪ್ಪ. ‘ರಿಪೋರ್ಟು ಬಾರದೆ ಏನೂ ಹೇಳುವಂತಿಲ್ಲ, ಅಲ್ಲೀ ತನಕ ನಾವೇ ನೋಡಿಕೊಳ್ಳಬೇಕಷ್ಟೆ. ಯಾವುದಕ್ಕೂ ಟ್ಯಾಬ್ಲೆಟ್ಸ್ ಕೊಟ್ಟು ಬರ್ತೇನೆ’ ಎನ್ನುತ್ತಾ ಪರಸ್ಪರ ಮಾತನಾಡಿಕೊಂಡ ದಾದಿಯರಲ್ಲಿ ಒಬ್ಬಾಕೆ, ಐತಪ್ಪನ ಬಳಿ ಬಂದರು. ಐತಪ್ಪನ ತೋಳಿನಡಿಯನ್ನು ಸ್ಯಾನಿಟೈಸ್ ಮಾಡಿ ಥರ್ಮೋಮೀಟರ್ ಇಟ್ಟು ಪರೀಕ್ಷಿಸಿದರು. ಮೈ ತುಸು ಬೆಚ್ಚಗಿದ್ದರೂ ಚಳಿಯ ಲಕ್ಷಣ ಕಾಣಿಸಲಿಲ್ಲ.

ರಾತ್ರಿ, ಐತಪ್ಪನ ಜೇಬಿನಲ್ಲಿದ್ದ ಐನೂರು ರೂಪಾಯಿ ತೆಗೆದು ಎಡ್ಮಿಶನ್ ಫೀ ಕಟ್ಟಿದ ವಿವರವನ್ನು ದಾದಿ ತಿಳಿಸಿದರು. ಆತನ ಮುಖವನ್ನೊಮ್ಮೆ ವೀಕ್ಷಿಸಿ, ತಂದಿದ್ದ ಮಾತ್ರೆಯನ್ನು ಕೊಟ್ಟು ನುಂಗಲೆಂದು ನೀರನ್ನೂ ಕೊಟ್ಟರು. ‘ಜ್ವರ, ಚಳಿ ಕಡಿಮೆಯಾದೀತು. ಹೆದರಬೇಡಿ’ ಎಂದ ದಾದಿಯ ಮಾತಿಗೆ ಐತಪ್ಪ ಬರಿದೆ ತಲೆ ಆನಿಸಿದ. ‘ಡಾಕ್ಟರ್ ಬಂದ ಮೇಲೆ ಮುಂದೇನೂಂತ ಹೇಳ್ತಾರೆ’ ಎಂದಾಗ ಐತಪ್ಪ ಅದಕ್ಕೂ ತಲೆ ಆನಿಸಿದ. ಏನು ಹೇಳಬೇಕೆಂಬ ನಿಖರ ಜ್ಞಾನ ಆತನಿಗಿದ್ದಂತಿಲ್ಲ. ‘ಮನೆಯಿಂದ ಯಾರೂ ಬರಲಿಲ್ವೆ?’ ಎಂದದ್ದಕ್ಕೆ ಆತ ಇಲ್ಲವೆಂದ. ‘ಇದು ‘ಅದೇ’ ಆಗಿದ್ದರೆ ನಿಮ್ಮನ್ನು ಇಲ್ಲಿ ಇರಿಸೋದಿಲ್ಲ, ಇನ್ನೊದು ಕಡೆ ಪ್ರತ್ಯೇಕ ವಾರ್ಡ್ ಇದೆ. ಅಲ್ಲಿಗೆ ಕಳಿಸ್ತಾರೆ’ ಎನ್ನುತ್ತಾ ಆಕೆ ಹೊರಟು ಹೋದರು.

ಇಲ್ಲಿ ದಾದಿಯರೂ ‘ಅದರ’ ಹೆಸರು ಹೇಳುವುದಕ್ಕೆ ಭಯಪಡುತ್ತಿದ್ದಾರಲ್ಲ! ಮನಸ್ಸಿನ ಯರ್ರಾಬಿರ್ರಿ ಓಟದ ನಡುವೆ ದೇವಸ್ಥಾನದಲ್ಲಿ ‘ಗೋವಿಂದಾರಿ ಗೋವಿಂದಾ’ ಅಂದಾಗ ಗಂಡನ ಹೆಸರು ಹೇಳಬಾರದ ಹೆಂಗಸು, ‘ನಂದೂ ಅದೇ, ನಂದೂ ಅದೇ’ ಎಂದದ್ದು ನೆನಪಾಗಿ ನೋವಿನ ನಡುವೆಯೂ ಸಣ್ಣಗೆ ನಗು ಬಂತು. ಡಾಕ್ಟರು ಬಂದು ಪರೀಕ್ಷಿಸಿದರು. ಅದರ ಬಗ್ಗೆ ಮಾತನಾಡಲಿಲ್ಲ. ಆಸ್ಪತ್ರೆಯವರು ಕೊಟ್ಟ ಆಹಾರ ರುಚಿಕರವಾಗಿದ್ದಂತೆ ಕಂಡರೂ ನಾಲಗೆ ಆಸ್ವಾದಿಸಲಿಲ್ಲ. ಮೆತ್ತಗೆ ಸ್ವಲ್ಪಸ್ವಲ್ಪವೇ ಗಂಟಲೊಳಗಿಳಿಸಿದ. ಮಾರನೆಯ ದಿನಕ್ಕೆ ಜ್ವರವೇನೋ ಕಡಿಮೆಯಾಯಿತು.

‘ಇದು ‘ಅದೇ’ ಆಗಿದ್ದರೆ ಇನ್ನೂ ಕೆಲವು ದಿವಸ ಬೇರೆ ವಾರ್ಡ್‍ನಲ್ಲಿ ಇರಬೇಕಾದೀತೋ ಏನೊ? ಮನೆಯಲ್ಲಿ ಚಂಪಾ ಪಾಪ, ಏನು ಮಾಡುತ್ತಿದ್ದಾಳೋ ಏನೊ? ಸೊಂಟ ಮುರಿದು ಹೋದ ಮೇಲೆ ಆಕೆಯನ್ನು ಬಿಟ್ಟು ಯಾವತ್ತೂ ತಾನು ಹೊರಗೆ ರಾತ್ರಿ ಕಳೆದಿರಲಿಲ್ಲ. ಎರಡು ದಿನಗಳಾದುವಲ್ಲ!! ಚಂಪಾಳನ್ನು ಮಾತನಾಡಿಸುವುದಕ್ಕೆ ಗೆಳತಿ ಕುಸುಮಾ ಒಮ್ಮೊಮ್ಮೆ ಬರೋದುಂಟು. ಒಂದು ವೇಳೆ ಆಕೆ ಬಂದಿದ್ದರೆ ಸರಿ, ಮಗಳು ಹೇಗಾದರೂ ಸುಧಾರಿಸಿಕೊಂಡಾಳು. ಬಾರದಿದ್ದರೆ…?’ ಐತಪ್ಪನ ಮನಸ್ಸು ಗೊಂದಲದ ಗೂಡಾಯಿತು.

‘ಬೆಳಿಗ್ಗೆ ಡಾಕ್ಟರ್ ಬಂದ ಮೇಲೆ ಡಿಸ್ಚಾರ್ಜ್ ಮಾಡ್ಬೋದು. ಬಿಪಿಎಲ್ ಕಾರ್ಡ್ ತಂದಿದ್ದೀರಾ?’ ಎಂದು ಕೇಳಿದರು ಜ್ವರ ಪರೀಕ್ಷಿಸಲು ಬಂದಿದ್ದ ದಾದಿ. ಐತಪ್ಪನಿಗೆ ಆಶ್ಚರ್ಯವಾಯಿತು:

‘ಹಾಗಾದರೆ ಇದು ‘ಅದ’ಲ್ವಾ ಸಿಸ್ಟರ್?’ ಎಂದು ಕಣ್ಕಣ್ಣು ಬಿಟ್ಟು ಕೇಳಿದ.

ಆಕೆ ನಗುತ್ತಾ, ‘ಅಲ್ಲ, ಅದಲ್ಲ. ಅದಾಗಿರುತ್ತಿದ್ದರೆ ಇನ್ನೂ ಕೆಲವು ಬೇರೆ ವಾರ್ಡಲ್ಲಿ  ಇರ್ಬೇಕಾಗ್ತಿತ್ತು’ ಎಂದರು.

‘ಅಯ್ಯಪ್ಪ’ ಎನ್ನುತ್ತ ಐತಪ್ಪ ಎದ್ದು ಕುಳಿತ.

‘ಬಿಪಿಎಲ್ ಕಾರ್ಡ್ ಕೊಡಿ’ ದಾದಿ ಮತ್ತೊಮ್ಮೆ ಕೇಳುತ್ತಾ ಒಂದು ಗಂಟಿನಂತೆ ಮಾಡಿ ಹಿಡಿದಿದ್ದ ಐತಪ್ಪನ ಕೈಯಿಂದ  ಆತನ ಕಂಬಳಿಯನ್ನು ತೆಗೆದು ಕೊಡವಿದರು. ಏನೂ ಸಿಗಲಿಲ್ಲ.

‘ಅದು ನನ್ನ ಮಗಳದ್ದು, ಚಳಿ ಇತ್ತಲ್ಲ, ಅದಕ್ಕೆ ಅವಳ ಕಂಬಳಿಯನ್ನೇ ನನಗೆ ಹೊದಿಸಿದ್ಲು ನನ್ನ ಮಗಳು’ ಎನ್ನುತ್ತ ಅದನ್ನು ಮತ್ತೊಮ್ಮೆ ಎದೆಗೆ ಅಂಟಿಸಿಕೊಂಡ.

‘ಕಾರ್ಡಿಲ್ಲದಿದ್ರೆ ಹಣ ಕಟ್ಟಬೇಕು’ ಎಂದರು ದಾದಿ.

‘’ಇಲ್ಲ ಸಿಸ್ಟರ್, ನನ್ನ ಕೈಲಿ ಏನೂ ಇಲ್ಲ.’ ಅಸಹಾಯಕನಂತೆ ಐತಪ್ಪ ಹೇಳಿದ. ಹರಿದ ಕಂಬಳಿ ಹೊರತಾಗಿ ಆತನ ಬಳಿ ಏನೂ ಇರಲಿಲ್ಲ.

‘ಕೂಡಲೆ ಮನೆಯಿಂದ ತರಿಸಿಕೊಳ್ಳಿ. ಕಾರ್ಡ್ ತಾರದಿದ್ದರೆ ಇಪ್ಪತ್ತಾರು ಸಾವಿರ ಕಟ್ಟಬೇಕು. ಆದೀತಾ?’ ದಾದಿ ಕನಿಕರದ ನಗೆ ಬೀರಿ ಕೇಳಿದಳು. ಆ ಬಗ್ಗೆ ಐತಪ್ಪ ಯೋಚಿಸಿಯೇ ಇರಲಿಲ್ಲ. ವಾಸ್ತವವಾಗಿ ತಾನು ಆಸ್ಪತ್ರೆಗೇಂತ ಬಂದವನೇ ಅಲ್ಲ. ಮೆಡಿಕಲ್ ಶಾಪಿನವರು ಮಾತ್ರೆ ಕೊಡದೆ ಸತಾಯಿಸಿದ್ದಕ್ಕೆ ಆಸ್ಪತ್ರೆಗೆ ಬಂದಿದ್ದ. ಆಸ್ಪತ್ರೆಯ ಸೇರ್ಪಡೆಯೂ ಐತಪ್ಪನ ಆಯ್ಕೆಯಾಗಿರಲಿಲ್ಲ. ಅಷ್ಟೊಂದು ಬಿಲ್ ಕಟ್ಟೋದು ಅಂದ್ರೆ? ‘ಮನೆಯಿಂದ ಕಾರ್ಡ್ ತರೋದಕ್ಕೆ ಯಾರೂ ಇಲ್ಲ. ನಾನೇ ಹೋಗಿ ತರ್ಲಾ ಸಿಸ್ಟರ್?’ ಮುಚ್ಚಿದ್ದ ಮಾಸ್ಕಿನೊಳಗಿಂದ ದಾದಿ ನಕ್ಕದ್ದು ಗುಹೆಯಿಂದ ಹೊರಟ ಗರ್ಜನೆಯಂತೆ ಮಾರ್ದನಿಸಿತು.

ಐತಪ್ಪ ಕಸಿವಿಸಿಕೊಂಡು ಅತ್ತಿತ್ತ ನೋಡಿದ. ಆಕೆ ಹಾಗೆ ಸುದೀರ್ಘವಾಗಿ ನಕ್ಕದ್ದರ ಅರ್ಥ ಐತಪ್ಪನಿಗೆ ಮನವರಿಕೆಯಾಗಲಿಲ್ಲ. ಮನೆಗೆ ಹೋಗುವ ಅವಸರ ಆತನಿಗೂ ಇತ್ತು. ಕಾಲುಬಾರದ ಮಗಳು ಅಪ್ಪನ ದಾರಿಕಾಣದೆ ಕೊರಗಿ ಕೊರಗಿ ಎಲ್ಲಿ ಮೂಲೆ ಸೇರಿದ್ದಾಳೊ? ತುತ್ತು ಗಂಜೀನೂ ಇದ್ದಂಗಿಲ್ಲ. ಕುಸುಮಾ ಎಲ್ಲಾದರೂ ಚಂಪಾಳನ್ನು ಮಾತಾಡಿಸ್ಲಿಕ್ಕೆ ಹೋಗಿರ್ತಿದ್ರೆ ಅವರ ಮನೆಯಿಂದ ಯಾರಾದ್ರೂ ಹುಡುಕಿಕೊಂಡು ಆಸ್ಪತ್ರೆಗೆ ಬರುತ್ತಿದ್ದರು. ಅದೂ ಇಲ್ಲ. ಮನೇಲಿದ್ದ ಬಿಪಿಎಲ್ ಕಾರ್ಡಿನಿಂದ ಏನು ಪ್ರಯೋಜನವಾದ ಹಾಗಾಯ್ತು? ಅದನ್ನು ತರಬೇಕಿದ್ದರೂ ಮನೆಗೇ ಹೋಗಬೇಕಷ್ಟೆ. ‘ರಾಮ ರಾಮಾ’ ಎನ್ನುತ್ತಾ ದೊಪ್ಪನೆ ಮಂಚದ ಮೇಲೆ ಬಿದ್ದುಕೊಂಡ. ಮರುದಿನ ಬೆಳಗ್ಗೆ ಡಾಕ್ಟರ್ ಬಂದವರೇ ಮತ್ತೊಮ್ಮೆ ಪರೀಕ್ಷಿಸಿ,

‘ಮನೆಗೆ ಹೋಗಿ ಒಂದು ವಾರ ರೆಸ್ಟ್ ತಗೋಬೇಕು ಏನು.. ನಾಳೆ, ನಾಡಿದ್ದರಲ್ಲಿ ಮೈಕೈ ನೋವೆಲ್ಲ ಹೋಗಿಬಿಡುತ್ತೆ. ಹಾಗಂತ ಕೆಲಸಕ್ಕೆ ಹೊರಟು ಬಿಡೋದಲ್ಲ. ಏನು…?’ಎಂದರು.

‘ಆಯ್ತು ಸಾಮಿ’ ಎಂದ ಐತಪ್ಪ, ವಿನೀತನಾಗಿ.

ಜೊತೆಗಿದ್ದ ದಾದಿ, ‘ಸರ್, ಪೇಷಂಟ್ ಜೊತೆ ಯಾರೂ ಬಂದಿಲ್ಲ, ಬಿಪಿಎಲ್ ಕಾರ್ಡೂ ತಂದಿಲ್ಲ. ಡಿಸ್ಚಾರ್ಜ್ ಮಾಡೋದು ಹೇಗೆ? ಬಿಲ್ ಇಪ್ಪತ್ತಾರು ಸಾವಿರ ಆಗಿದೆಯಂತೆ’ ಎಂದರು.

ಡಾಕ್ಟರ್ ಒಂದು ಕ್ಷಣ ಹೌಹಾರಿ, ‘ಏನ್ರಿ ಸಿಸ್ಟರ್? ಈಗ ಹೇಳ್ತೀರಲ್ಲ, ಕಾರ್ಡಿಲ್ಲಾಂತ. ಡಿಸ್ಚಾರ್ಜ್‍ಗೆ ಬರೆದ ಮೇಲೆ…’ ಎಂದು ದಾದಿಯನ್ನು ಪ್ರಶ್ನಿಸಿದವರೇ ತಿರುಗಿ ಐತಪ್ಪನೊಂದಿಗೆ, ‘ಕಾರ್ಡೂ ಇಲ್ಲ, ದುಡ್ಡೂ ಇಲ್ಲಾಂದ್ರೆ ಇದೇನು ಧರ್ಮಛತ್ರವೇನ್ರಿ?’ ಎಂದು ದುರುಗುಟ್ಟಿ ನೋಡಿದವರೇ ರಪರಪನೆ ಕೌಂಟರಿಗೆ ನಡೆದರು.

ದಾದಿಯರೊಂದಿಗೆ ಮಾತುಕತೆ ನಡೆಸಿದರು. ಇಂಟರ್ ಕಾಮ್‍ನಲ್ಲಿ ಯಾರೊಂದಿಗೋ ರೇಗಾಡಿದರು. ದೂರದ ಮೂಲೆಯಲ್ಲಿ ಮಲಗಿದ್ದ ಐತಪ್ಪನ ಕಡೆಗೆ ನೋಡುತ್ತಾ ದುರದುರನೆ ಹೊರನಡೆದರು. ಅವರ ಹಿಂದೆಯೇ ದಾದಿಯೂ ಓಡಿದರು.

ಅರ್ಧಗಂಟೆಯ ಹೊತ್ತು. ಶಾಂತಸಾಗರದಂತೆ ಎಲ್ಲವೂ ಸ್ತಬ್ದ. ಐತಪ್ಪನ ತಲೆಯೊಳಗೆ ಮಾತ್ರ ಭೋರ್ಗರೆತ. ಚಂಪಾ ಕಳೆದ ನಾಲ್ಕು ದಿನಗಳಿಂದ ಮನೆಯೊಳಗೆ ಒಬ್ಬಂಟಿ. ಕಾಲುಗಳಿರುತ್ತಿದ್ದರೆ ಹೊರಗೆ ಬಂದು ಯಾರನ್ನಾದರೂ ಗೋಗರೆದು ಕರೆತ್ತಿದ್ದಳು. ಅಯ್ಯೊ! ಹಾಗೆ ಕರೆದು, ಒಬ್ಬಳೇ ಮನೆಯಲ್ಲಿದ್ದಾಳಂತ ಗೊತ್ತಾಗುವುದೂ ಅಪಾಯಕಾರಿ. ಮನೆಯಲ್ಲಿ ತಿನ್ನೋದಕ್ಕೇನಿದೆ? ಒಂದು ಸೌಟು ಗಂಜೀನಾದರೂ ಬೇಯಿಸಿ ತಿಂದಿರಬಹುದೆ? ಅಥವಾ ಏನೂ ತಿನ್ನದೆ ಹಸಿದು ಕಂಗಾಲಾಗಿ ಬಿದ್ದುಕೊಂಡಿರಬಹುದೆ? ಅಲ್ಲಿಂದೆದ್ದು ಕಣ್ಣು ತಪ್ಪಿಸಿ ಓಡಿ ಹೋಗೋಣವೆಂದರೆ ಐತಪ್ಪನ ದೇಹದಲ್ಲಿ ತ್ರಾಣವೂ ಇಲ್ಲ. ‘ಅಯ್ಯೋ ದೇವರೆ, ಇಂದೆಂಥ ಸ್ಥಿತಿ ತಂದಿಟ್ಟೆ?’ ಎಂದು ಯೋಚಿಸುತ್ತಿರುವಾಗಲೆ ದಾದಿ ತನ್ನೆಡೆಗೇ ಬರುವುದು ಗೋಚರಿಸಿತು:

‘ಇನ್ನೂ ಕೆಲವು ದಿನ ನಿಮ್ಮನ್ನು ಡಿಸ್ಚಾರ್ಜ್ ಮಾಡಕ್ಕಾಗೋದಿಲ್ಲ ಐತಪ್ಪಣ್ಣಾ, ನಿಮಗೆ ‘ಅದು’ ಇದೇಂತ ಗೊತ್ತಾಗಿದೆ. ಆ ರಿಪೋರ್ಟು ಈಗಷ್ಟೆ ಬಂತು. ನಿಮ್ಮನ್ನು ಬೇರೆ ವಾರ್ಡಿಗೆ ಕರ್ಕೊಂಡು ಹೋಗ್ತಾರೆ’ ಎಂದು ದಾದಿ ಹೇಳುವಷ್ಟರಲ್ಲಿ ಸ್ಟ್ರೆಚರ್ ಹೊತ್ತ ಇಬ್ಬರು ‘ಅನ್ಯಲೋಕ’ದವರ ದಿರಸಿನಲ್ಲಿ ಬಂದು ಐತಪ್ಪನನ್ನು ಅನಾಮತ್ತಾಗಿ ಎತ್ತಿ ಅದರಲ್ಲಿ ಮಲಗಿಸಿ ಒಯ್ಯಲು ಮೊದಲಿಟ್ಟರು. ಐತಪ್ಪ ತಬ್ಬಿಬ್ಬಾಗಿ ಹೊಡಚಾಡ ತೊಡಗಿಸಿದ. ಅನ್ಯಲೋಕದವರು ಸ್ಟ್ರೆಚರಿನ ಬೆಲ್ಟಿನಿಂದ ಅವನ ಹೊಟ್ಟೆಯನ್ನು ಬಿಗಿದರು.

‘ಇದೆಂತ ಮಲಾಮತ್ತು? ಎಲ್ಲಿಗೆ ಕೊಂಡುಹೋಗ್ತಾ ಇದ್ದೀರಿ? ಈಗಷ್ಟೆ ಮನೆಗೆ ಹೋಗಬಹುದು ಎಂದಿರಿ.’ ಐತಪ್ಪ ದಾದಿಯ ಕಡೆನೋಡಿ ಜೋರಾಗಿ ಕೂಗಿದ.

‘ಅದಕ್ಕೆ ನೀವೇನು ದುಡ್ಡಾ ತಂದಿದ್ದೀರಿ? ಒಂದೆರಡಲ್ಲ, ಇಪ್ಪತ್ತಾರು ಸಾವಿರ. ಬಿಟ್ಟುಬಿಡ್ತಾರಾ?’ ಎನ್ನುತ್ತಾ ದಾದಿ ಕನಿಕರದ ನಗೆಬೀರಿ ನಡೆದುಹೋದರು.

‘ಅದಕ್ಕೆ….ಸಿಸ್ಟರ್….’ ಎನ್ನಬೇಕಿದ್ದರೆ ‘ಅನ್ಯ ಲೋಕದವರು’ ವಾರ್ಡ್ ದಾಟಿ ಎಲ್ಲಿಗೋ ತಲುಪಿದ್ದರು.

ಹೊಸಲೋಕ. ವಾರ್ಡ್ ತುಂಬ ಜನ. ಅಲ್ಲಲ್ಲಿ ಮೊಳಗುತ್ತಿದ್ದ ಶವದ ಮನೆಯ ಹಾಹಾಕಾರ. ಐತಪ್ಪ ಭೀತನಾಗಿ ಕಣ್ಣು ಪಿಳಿಪಿಳಿ ಬಿಟ್ಟು ಸುತ್ತ ನೋಡಿದ. ಗಂಟಲು ಒಣಗಿಯೇ ಹೋಗಿತ್ತು. ಮಗಳ ಕಂಬಳಿಯನ್ನು ತನ್ನ ಸರ್ವಸ್ವ ಎಂಬಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಅಲ್ಲಿನ ದಾದಿಯರು ಅನ್ಯಲೋಕದವರಂತೆ ತೋರಿದರು. ಯಾರದೂ ಗುರುತು ಹತ್ತುವಂತಿಲ್ಲ. ದೇಹವಿಡೀ ಮುಚ್ಚಿಕೊಂಡಿತ್ತು. ಒಬ್ಬರು ಬಂದು ಬಾಯಿ ತೆರೆಸಿ ಗಂಟಲಿನ ದ್ರವ ತೆಗೆದುಕೊಂಡು ಹೋದರು. ಮತ್ತೊಬ್ಬರು ಬಂದು ರಕ್ತ ತೆಗೆಯಲು ಆತನ ಕೈಹಿಡಿದರು.

ಐತಪ್ಪ ಕೊಸರಿಕೊಂಡು, ‘ಮತ್ತೇನು ಮಾಡ್ತಿದ್ದೀರಿ? ಇದೆಲ್ಲ ಅಲ್ಲಿಯೇ ಮಾಡಿದ್ದರಲ್ಲ?’ ಎಂದ.

‘ಅದು ಬೇರೆ. ಇದು ಬೇರೆ’ ಎಂದು ಗುಹೆಯಿಂದಲೋ ಎಂಬಂತೆ ಮಾತನಾಡಿ ಐತಪ್ಪನ ರಕ್ತ ಹೀರಿ ಹೊರಟು ಹೋದರು.

ರಾತ್ರಿಯಿಡೀ ಐತಪ್ಪನಿಗೆ ಮಗಳದೇ ಚಿಂತೆ. ಹೇಗೋ ಹೊರಳಾಡಿ ಬೆಳಗು ಮಾಡಿದ.

ಮಾರನೆಯ ದಿನ. ಜ್ವರ, ಮೈಕೈ ನೋವಿನ ಸುಳಿವಿರಲಿಲ್ಲ. ದಾದಿ ಬಂದು ಜ್ವರಪರೀಕ್ಷೆಯ ಶಾಸ್ತ್ರ ಮುಗಿಸಬೇಕಿದ್ದರೆ ಐತಪ್ಪ ಮತ್ತೊಮ್ಮೆ ಮೊರೆಯಿಟ್ಟ: ‘ಹೇಗಾದ್ರೂ ನನ್ನನ್ನೊಮ್ಮೆ ಬಿಡುಗಡೆ ಮಾಡಿ ಸಿಸ್ಟರ್. ನಾನು ಚೆನ್ನಾಗಿದ್ದೇನೆ. ಮನೆಯಲ್ಲಿ ಕಾಲುಬಾರದ ಮಗಳು ಒಬ್ಳೇ ಇದ್ದಾಳೆ. ನಿಮ್ಮ ದಮ್ಮಯ್ಯ ಅನ್ತೇನೆ.’ ಅಷ್ಟರಲ್ಲೆ ಅನ್ಯಲೋಕದ ದಿರಸು ಧರಿಸಿದ ಡಾಕ್ಟರ್ ರ ಪ್ರವೇಶ. ದೂರದಿಂದಲೇ ‘ನೋಡಪ್ಪಾ, ಇನ್ನೂ ಒಂದೆರಡು ದಿನ ಇಲ್ಲೇ ಇರಬೇಕಾದೀತು. ಜ್ವರ, ಮೈಕೈ ನೋವು ಪೂರ್ತಿ ವಾಸಿಯಾಗಬೇಕಲ್ಲ.’ ‘ವಾಸಿ ಆಗಿದೆ ಡಾಕ್ಟ್ರೇ’ ಐತಪ್ಪನ ದಯನೀಯತೆ ಯಾರಿಗಾದರೂ ಮರುಕ ಹುಟ್ಟಿಸುವಂತಿತ್ತು.

ಡಾಕ್ಟರು ದನಿ ಎತ್ತರಿಸಿದರು: ‘ಡಾಕ್ಟರು ನೀನೋ ನಾನೊ?’ ಐತಪ್ಪ ನಡುಗಿಹೋದ. ‘ನಾನು ಬೆಳಗ್ಗೆ ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆ ಮಾಡುತ್ತೇವೆ. ಸರಿ ಇದ್ರೆ ಆವತ್ತೇ ಸಂಜೆ ಕಳಿಸ್ತೇವೆ’ ಎಂದರು. ‘ಯಾಕೆ ಡಾಕ್ಟ್ರೇ ಹೀಗೆ ಮಾಡ್ತೀರಾ? ಒಮ್ಮೆ ನನ್ನನ್ನು ಮನೆಗೆ ಕಳುಹಿಸಿ. ಕಾರ್ಡು ತಂದು ಕೊಟ್ಟು ನಿಮ್ಮ ಸಾಲ ತೀರಿಸ್ತೇನೆ. ನನ್ನನ್ನು ನಂಬಿ ಡಾಕ್ಟ್ರೇ?’ ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೂ ಶಕ್ತಿ ಹಾಕಿ ಐತಪ್ಪ ಮಾತನಾಡಿದ. ಐತಪ್ಪನ ಮಾತುಕೇಳಿ ಕಸಿವಿಸಿಗೊಂಡ ಡಾಕ್ಟರ್ ಅದನ್ನು ತೋರ್ಪಡಿಸದೆ, ‘ಏನ್ರಿ ನೀವು ಹೇಳ್ತಿರೋದು? ಪರೀಕ್ಷೆ ರಿಸಲ್ಟ್ ನೆಗೆಟಿವ್ ಬಾರದೆ ನಿಮ್ಮನ್ನು ಕಳ್ಸಿದ್ರೆ ನಮ್ಮನ್ನು ಹಿಡಿದು ಜೈಲಿಗೆ ಹಾಕ್ತಾರೆ? ಹೇಳ್ರಿ ಸಿಸ್ಟರ್ ಅವ್ರಿಗೆ’ ಎನ್ನುತ್ತಲೆ ಡಾಕ್ಟರ್ ಬೀಸ ನಡೆದರು. ‘ನನಗೆ ಯಾವ ರೋಗಾನೂ ಇಲ್ಲ ಡಾಕ್ಟ್ರೇ..’ ಐತಪ್ಪ ಮತ್ತೊಮ್ಮೆ ಗೋಳಾಡಬೇಕಿದ್ದರೆ ಡಾಕ್ಟರು ಹೋಗಿಯಾಗಿತ್ತು!

ಮತ್ತೂ ಒಂದು ದಿನ ಕಳೆಯಿತು..

‘ತಾನು ಯಾಕಾದರೂ ಇಲ್ಲಿಗೆ ಬಂದೆನೊ?’ ಎಂದುಕೊಳ್ಳುತ್ತ ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ಕಂಬಳಿಯಲ್ಲಿ ಹುದುಗಿಸಿಕೊಂಡ. ಆ ಕುಸುಮಾಳ ಅಣ್ಣ ಗಣೇಶನಾದ್ರೂ ಒಮ್ಮೆ ಈ ಕಡೆ ಬರಬಹುದೂಂತ ಆಸೆ ಇಟ್ಟುಕೊಂಡಿದ್ದ. ‘ಯಾರೂ ಮನೆಯಿಂದ ಹೊರಗೆ ಹೋಗಬೇಡೀ’ ಅಂತ ಆಶಾಕಾರ್ಯಕರ್ತೆಯರು -ಮನೆಮನೆಗೂ ಬಂದು ಎಲ್ಲರಿಗೂ ಮುಖಗವಸ ಹಂಚಿ- ಹೇಳಿ ಹೋಗಿದ್ದರು.. ಗಣೇಶನಿಗೆ ಹಾಗೇನಾದ್ರೂ ಹೆದರಿಕೆ ಆಯಿತೆ? ಅಥವಾ ತಾನೆಲ್ಲಿದ್ದೇನೆ ಎಂಬುದು ಆತನಿಗೆ ಗೊತ್ತಾಗುವುದಾದರೂ ಹೇಗೆ?

‘ಅನ್ಯ ಲೋಕದವರು’ ಮತ್ತೇ…. ಬಂದರು. ಬಾಯಿತೆರೆಸಿ ದ್ರವ ತೆಗೆದರು. ನೆತ್ತರು ಬಸಿದರು. ಹೊರಟುಹೋದರು. ವಾರ್ಡಿನಲ್ಲಿದ್ದವರೆಲ್ಲ ಮಾಸ್ಕಿನಿಂದ ಮುಖ ಮುಚ್ಚಿಕೊಂಡಿದ್ದರೂ ಅದರೆಡೆಯಿಂದ ಭೀತಿಹಿಡಿಸುವ ರೋಧನ ಅಲ್ಲೊಮ್ಮೆ ಇಲ್ಲೊಮ್ಮೆ ಭುಗಿಲೇಳುತ್ತಿತ್ತು. ಅದರ ನಡುವೆಯೂ ಕೆಲವರು ಏನೇನೋ ಮಾತನಾಡಿಕೊಳ್ಳುತ್ತಿದ್ದರು:

‘ಇಲ್ಲಿ ಎಡ್ಮಿಟ್ ಆದ್ರೆ ದುಡ್ಡೇ ಕೊಡೋದು ಬೇಡವಂತೆ. ಎಲ್ಲ ಸರಕಾರ ನೋಡಿಕೊಳ್ಳುತ್ತಂತೆ’ ಒಬ್ಬ ಹೇಳುತ್ತಿದ್ದ.

‘ನಮಗೂ ದುಡ್ಡು ಕೊಡುತ್ತಾ ಸರ್ಕಾರ?’ ಇನ್ನೊಬ್ಬ ಕೇಳಿದ.

‘ಥೂ ನಿನ್ನ, ಪಿಟ್ಟಾಸಿ! ಒಮ್ಮೆ ಗುಣಾದ್ರೆ ಸಾಲ್ದಾ? ನಿನ್ದೊಂದು’

– ಎನ್ನುತ್ತಿದ್ದಾಗಲೇ ಮಾತು ಬೇರೆಡೆಗೆ ಸರಿದುಹೋಯಿತು. ಹಾಗೂ ಹೀಗೂ ಮಾಡಿ ಸಂಜೆಯನ್ನು ಕಂಬಳಿಯಲ್ಲಿ ಕಟ್ಟಿ ಎಳೆದು ತಂದ ಐತಪ್ಪ. ಆ ಹೊತ್ತಿಗೆ ದಾದಿ ಬಂದು ಮದ್ದಿನ ಚೀಲವೊಂದನ್ನು ಅವನ ಕೈಗೆ ಕೊಟ್ಟು ನಾಲ್ಕಾರು ಪೇಪರುಗಳಿಗೆ ಸಹಿಹಾಕಿಸಿದಳು. ‘ಮನೆಗೆ ಹೋಗಿ ಈ ಮದ್ದನ್ನು ಸರಿಯಾಗಿ ತೆಗೆದುಕೊಳ್ಳಿ. ಒಂದು ವಾರ ಬಿಟ್ಟು ಇಲ್ಲಿಗೆ ಬಂದು ಇನ್ನೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗೊತ್ತಾಯ್ತಾ?’ಎಂದರು. ‘ಕಾರ್ಡು ತರಬೇಡವೆ?’ ಆತ ಸಂಶಯಗ್ರಸ್ತನಾಗಿ ಕೇಳಿದ. ದಾದಿ ಮಾಸ್ಕಿನೊಳಗಿಂದ ಮುಸಿಮುಸಿ ನಗುತ್ತ ಹೇಳಿದರು: ‘ಕಾರ್ಡೂ ಬೇಡ. ಏನೂ ಬೇಡ. ಇದು ‘ಅದೇ.’ ‘ಅದ’ಕ್ಕೆ ಸರ್ಕಾರಾನೇ ಕೊಡುತ್ತೆ. ನೀವು ಆರಾಮವಾಗಿ ಮನೆಗೆ ಹೋಗಿ.’

‘ಅದಲ್ಲ ಅನ್ನೋರೂ ನೀವೇ. ಅದೇ ಅನ್ನೋರೂ ನೀವೆ. ಇದೊಳ್ಳೆ ಚೆನ್ನಾಗಿದೆ’ ಎನ್ನುತ್ತಾ ತಾನು ತಂದಿದ್ದ ಏಕೈಕ ಆಸ್ತಿಯನ್ನು ಭದ್ರವಾಗಿ ಮಡಚಿ ತೋಳಡಿಯಲ್ಲಿರಿಸಿ, ಮದ್ದಿನ ಚೀಲವನ್ನೂ ಹಿಡಿದುಕೊಂಡು ಸಾಧ್ಯವಾದಷ್ಟೂ ವೇಗವಾಗಿ ನಡೆದ. ‘ಅಲ್ಲಿ ಚಂಪಾ ಏನು ಮಾಡುತ್ತಿದ್ದಾಳೋ ಏನೊ, ನನ್ನ ಕಂದ?’ ಎನ್ನುತ್ತಾ ಚಡಪಡಿಸಿ ಹೇಗೋ ಮನೆ ತಲುಪಿದ. ‘ಮಗೂ ಚಂಪಾ, ಎಲ್ಲಿದ್ದೀಯಾ ಕಂದಾ? ಮಗಳೇ, ಚಂಪಾ…..ಚಂಪಾ…..’ ಎನ್ನುತ್ತಾ ಬಾಗಿಲು ದೂಡಿದ. ಒಂದು ಕೋಣೆ, ಒಂದು ಅಡುಗೆ ಮನೆಯಲ್ಲಿ ಅವಳನ್ನು ಹುಡುಕಾಡುವ ಪ್ರಶ್ನೆಯೇ ಇರಲಿಲ್ಲ. ಕೋಣೆಯ ಮೂಲೆಯಲ್ಲಿ ಚಂಪಾ ಬೋರಲಾಗಿ ಬಿದ್ದಿದ್ದಳು. ಐತಪ್ಪ ಜೋರಾಗಿ ಮೊರೆಯಿಡುತ್ತಾ ‘ಕಂದಾ, ಮಗಳೇ, ಕಣ್ಣುತೆರೆ ಕಂದಾ’ ಎನ್ನುತ್ತಾ ಆಕೆಯ ಮುಖವನ್ನು ತನ್ನತ್ತ ಸೆಳೆದುಕೊಂಡ. ಚಂಪಾ ಕಣ್ಣು ತೆರೆಯಲಿಲ್ಲ. ಮುಖಕ್ಕೆ ಒಂದಷ್ಟು ನೀರು ಚಿಮುಕಿಸೋಣವೆಂದು ಅಡುಗೆ ಮನೆಗೆ ಓಡಿದ. ನೋಡಿದರೆ ಒಂದು ತೊಟ್ಟು ನೀರಿಲ್ಲ! ಮನೆಯಲ್ಲಿ ನೀರಿಲ್ಲದಾಗಿ ಎಷ್ಟು ದಿನವಾಯ್ತೋ? ‘ನೀರು ತರ್ಲಿಕ್ಕೆ ಅಪ್ಪನೇ ಇರಲಿಲ್ವಲ್ಲ ಕಂದಾ? ಎಂಥ ಪಾಪಿ ನಾನು’ ಎನ್ನುತ್ತಾ ಚಂಪಾಳನ್ನು ಅಲ್ಲೇ ಬಿಟ್ಟು ಬಿಂದಿಗೆ ಹಿಡಿದುಕೊಂಡು ಗಣೇಶನ ಮನೆಯ ಬಾವಿಗೆ ಓಡಿದ.

ನೀರು ತಂದವನೇ ಮುಖಕ್ಕೆ ಚಿಮುಕಿಸಿದ. ‘ದೇವರೇ, ನನ್ನ ಕಂದನನ್ನು ಕಾಪಾಡು, ಅಬ್ಬ! ಮುಖದಲ್ಲಿ ಜೀವ ಕೂತಿತು. ಚಂಪಾ, ಎಚ್ಚರವಾಯಿತಾ ಮಗಾ’ ಎನ್ನುತ್ತಾ ತುಸುತುಸುವೇ ನೀರು ಕುಡಿಸಿದ. ಒಂದು ದಿನ ಮಾತ್ರ ನನಗೆ ಜ್ವರ ಬಂದದ್ದು ಮಗಾ, ನಾನು ಕಾರ್ಡು ಕೊಂಡೋಗಿರ್ಲಿಲ್ಲ ನೋಡು. ಅದಕ್ಕೇ ಇಷ್ಟು ದಿನ ಕೂರಿಸಿ ಬಿಟ್ರು. ಆಸ್ಪತ್ರೆಯಿಂದ ಬಿಡುಗಡೆಯಾದಾಗ ಕಾರ್ಡೇ ಬೇಡಾಂದ್ರು! ಏನು ತಮಾಷೇನೋ ಏನೊ! ಅವರ ತಮಾಷೆ ನನಗೆ ನನ್ನ ಮಗಳ ಜೀವಕ್ಕೆ ಎಲ್ಲಿ ಆಪತ್ತು ತರುತ್ತೋಂತ ಚಿಂತೆಯಾಗಿತ್ತು ಮಗಾ?’ ಅಷ್ಟು ಹೊತ್ತು ತಾನೇನು ಮಾಡುತ್ತಿದ್ದೇನೆ ಎಂಬುದರ ಅರಿವಿಲ್ಲದವನಂತಿದ್ದ ಐತಪ್ಪ ಇದೀಗ ವಾಸ್ತವ ಲೋಕಕ್ಕೆ ಬಂದ.

ಆಕೆಯ ಮೈ ಲೆಕ್ಕಕ್ಕಿಂತ ಅಧಿಕವೇ ಬೆಚ್ಚಗಿತ್ತು. ಚಂಪಾ ನಡುಗುತ್ತ ಹೇಳಿದಳು:

‘ಅಪ್ಪಾ, ಚಳಿಯಾಗ್ತಾ ಇದೆ. ಇದು ಕೊರೋನಾ ಇರಬಹುದೆ?’

‘ಬಿಡ್ತು ಅನ್ನು ಮಗಾ. ಅದರ ಹೆಸರೆತ್ತಬೇಡ. ಅಪಶಕುನ.’

ಐತಪ್ಪ ಮಗಳ ಮೈ ಮುಟ್ಟಿ ನೋಡಿದ. ಹೌದು. ಇದು ತನಗೆ ಬಂದಂಥದ್ದೇ ಜ್ವರ. ಐತಪ್ಪನಿಗೆ ಖಾತ್ರಿಯಾಯಿತು. ಆಸ್ಪತ್ರೆಯಿಂದ ಜ್ವರಕ್ಕೆಂದು ಕೊಟ್ಟಿದ್ದ ಒಂದು ಮಾತ್ರೆಯನ್ನು ಅವಳಿಗೆ ನುಂಗಿಸಿದ. ಅಷ್ಟರಲ್ಲೇ ನೆನಪಾಯಿತು, ಚಳಿಜ್ವರದಲ್ಲಿ ನಡುಗುತ್ತಿದ್ದ ತನ್ನ ದೇಹವನ್ನು ಬೆಚ್ಚಗಿರಿಸಿದ ಮಗಳ ಕಂಬಳಿಯೆಲ್ಲಿ? ಅತ್ತಿತ್ತ ಹುಡುಕಿದ. ಅಲ್ಲೇ ಬಾಗಿಲ ಮೂಲೆಯಲ್ಲಿ ಮುದುರಿಕೊಂಡು ಬಿದ್ದಿದ್ದ ಜೀವರಕ್ಷಕ ಕಂಬಳಿ, ತನ್ನ ಒಡತಿಯನ್ನು ಬೆಚ್ಚಗಿರಿಸುವುದಕ್ಕೆ ಕಾತರದಿಂದ ಕಾಯುತ್ತಿತ್ತು!

‍ಲೇಖಕರು Avadhi

December 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಇಂದ್ರಕುಮಾರ್ ಎಚ್ ಬಿ

    ಧುತ್ತನೆ ಬಂದೆರಗಿದ ಆಪತ್ಕಾಲಕ್ಕೆ ಕನಲಿ ಕಂಗಾಲಾಗಿ ಹೋದ ಕುಟುಂಬವೊಂದರ ಕಷ್ಟಕಾಲದ ಚಿತ್ರಣ ಚೆನ್ನಾಗಿ ಮೂಡಿಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: