ಇದು 'ಅ' ಮತ್ತು 'ಆ' ಜೋಡಿಯಾದ ಕಥೆ..

ಕನ್ನಡ ಸಾಹಿತ್ಯ ಲೋಕಕ್ಕೆ’ ಅ’ ಮತ್ತು ‘ಆ’ ಪ್ರವೇಶಿಸಿದೆ. ಗದಗದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ಲಾಗ್ ಲೋಕದ ಬಾಗಿನ ನೀಡಬೇಕೆಂದು ನಿರ್ಧರಿಸಿದಾಗ ಕೈಗೂಡಿಸಿದ್ದು ಈ ‘ಅ’ ಮತ್ತು ‘ಆ’- ಅವಧಿ ಮತ್ತು ಆಲೆಮನೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.
ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’ ಎಂಬ ಹೊಸ ಬ್ಲಾಗ್ . ‘ಅವಧಿ’ ಚಿತ್ರದುರ್ಗದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ನಿಮ್ಮ ಮುಂದಿಟ್ಟ ರೀತಿ ನಿಮಗೆಲ್ಲರಿಗೂ ಗೊತ್ತಿದೆ. ಪ್ರತೀ ಘಂಟೆ ‘ಅವಧಿ’ ತನ್ನ ಬ್ಲಾಗ್ ಅನ್ನು ಅಪ್ಡೇಟ್ ಮಾಡಿತ್ತು. ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಪ್ರಕಟಿಸಿತ್ತು. ಸಮ್ಮೇಳನದ ಮೆರವಣಿಗೆ, ಮುಖ್ಯ ವೇದಿಕೆಯಲ್ಲಿನ ಉದ್ಘಾಟನೆ, ಸಮಾರೋಪಕ್ಕೆ ಮಾತ್ರ ಸೀಮಿತವಾಗಿರದೆ. ಸಮ್ಮೇಳನದ ಅಂಗಳದಲ್ಲೆಲ್ಲಾ ಓಡಾಡಿತ್ತು. ಜೋಗಿ ಎಳನೀರು ಕುಡಿದದ್ದು, ನಾಗತಿಹಳ್ಳಿ ರಮೇಶ್ ವ್ಯಾನ್ ಮುಂದೆ ಸಿ ಡಿ ಬಿಡುಗಡೆ ಮಾಡಿದ್ದು, ಕಿ ರಂ ಉತ್ಸಾಹದಿಂದ ಬೇರೆಯವರ ಫೋಟೋ ತೆಗೆಯುತ್ತಿದ್ದುದು ಎಲ್ಲವೂ ನಿಮ್ಮ ಮುಂದಿತ್ತು.

ಆ ಧೂಳು, ಆ ಗೋಳು, ಆ ಜ್ಹಳ , ಆ ಜಗಳ ಎಲ್ಲವೂ ನಿಮ್ಮ ಕಣ್ಣಿಗೆ ಸಿಕ್ಕಿತು. ಈಗ ಇಲ್ಲಿ ಇದ್ದರಲ್ಲಾ ಎನ್ನುವಷ್ಟರ ವೇಳೆಯಲ್ಲಿ ‘ಅವಧಿ’ ತಂಡ ತನ್ನದೇ ಮೇಫ್ಲವರ್ ಮೀಡಿಯಾ ಹೌಸ್ ಸ್ಟಾಲ್ ನಿಂದ ಆಗಲೇ ಜಗತ್ತಿಗೆ ಸಮ್ಮೇಳನದ ಸುದ್ದಿ ಅಪ್ಲೋಡ್  ಮಾಡಿ ಮುಗಿಸುತ್ತಿತ್ತು.
ಈ ಬಾರಿ ಇನ್ನಷ್ಟು ರುಚಿಕರವಾಗಿ ಸಮ್ಮೇಳನವನ್ನು ಬಡಿಸಲು ‘ಅವಧಿ’ ಸಜ್ಜಾಗಿದೆ. ಇದಕ್ಕೆ ಆಲೆಮನೆ ಸಹಾ ಕೈ ಜೋಡಿಸಿದೆ. ಹೀಗಾಗಿ ಈ ಬಾರಿಯ ಸಮ್ಮೇಳನ ಅವಧಿ- ಆಲೆಮನೆ ನುಡಿನಮನ ಅಂತ ಹೆಸರಿಟ್ಟುಕೊಂಡಿದೆ. ತಮ್ಮನ್ನು ಆಲೆಮನೆಯ ಬೆಲ್ಲಕ್ಕೆ ಮುತ್ತಿದ ಇರುವೆಗಳು ಎಂದು ಬಣ್ಣಿಸಿಕೊಂಡ ಒಂದು ಗುಂಪು ನುಡಿನಮನಕ್ಕೆ ಸಜ್ಜಾಗಿ ನಿಂತಿದೆ. ಆಲೆಮನೆ, ಇರುವೆ, ನುಡಿನಮನ ಈ ಹೆಸರೇ ಎಷ್ಟು ಚಂದ ಅಲ್ಲವೇ..? ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ವಿದ್ಯಾರ್ಥಿಗಳ ಪೈಕಿ ನಾಲ್ವರು ನಮ್ಮ ಯೋಜನೆಯ ಅಂಗವಾಗಿ ಗದಗಕ್ಕೆ ಹೊರಟು ನಿಂತಿದ್ದಾರೆ.
ಆದಿತ್ಯ ಭಾರದ್ವಾಜ್ ಎನ್ನುವ ಅತಿ ಉತ್ಸಾಹಿ ತರುಣ ಈ ಇರುವೆ ಸಾಲಿನ ಲೀಡರ್. ಮೇಫ್ಲವರ್ ಮೀಡಿಯಾ ಹೌಸ್ ನ ಗುರುತು ಕಾರ್ಡ್ ಹೊತ್ತ ಈ ಎಲ್ಲರೂ ಸಾಹಿತ್ಯ ರಸಪಾಕದ ಅಂಗಳದಲ್ಲಿ ದಿಢೀರ್ ಎದುರಾಗಿ ಮೈಕ್ ಹಿಡಿದರೆ. ಫೋಟೋ ಕ್ಲಿಕ್ಕಿಸಿದರೆ, ಮಾತನಾಡಿ ಎಂದರೆ ನಿಮ್ಮ ೩೨ ಹಲ್ಲುಗಳೊಂದಿಗೆ ಸಹಕರಿಸಿ.
ಆಲೆಮನೆ ರೂಪಿಸಿರುವ ‘ನುಡಿನಮನ’ ಎಂಬ ಸಂಚಿಕೆ ನೋಡದೆ ನೀವು ಸಮ್ಮೇಳನಕ್ಕೆ ಹೋಗುವಂತೆಯೇ ಇಲ್ಲ. ಹೋಂ ವರ್ಕ್ ಮಾಡದೆ ಕ್ಲಾಸ್ ಗೆ ಹೋದ ಹಾಗಿರುತ್ತದೆ. ಆದ ಕಾರಣ ಇನ್ನು ಮುಂದೆ ಪ್ರತೀ ದಿನ ಆಲೆಮನೆಗೆ ಭೇಟಿ ಕೊಡಿ. ಅಲ್ಲಿನ ಇರುವೆಗಳು ಕಚ್ಚಿದರೆ ಮುಗಿಯಿತು ಮತ್ತೆ ಮತ್ತೆ ನೀವೇ ಅಲ್ಲಿಗೆ ಓಡೋಡಿ ಹೋಗುತ್ತೀರಿ. ಸೊ ವೆಲ್ಕಂ ಟು ಕನ್ನಡ ಸಾಹಿತ್ಯ ಸಮ್ಮೇಳನ ಅಂತ ಶುದ್ಧ ಕನ್ನಡದಲ್ಲಿ ಸ್ವಾಗತಿಸುತ್ತಿದ್ದೇವೆ..

‍ಲೇಖಕರು avadhi

February 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This