ಇದು ಉಮಾಶ್ರೀ!!

-ಉದಯ ಇಟಗಿ
umashri
ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ ಉಮಾಶ್ರೀಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನಗೆ ಖುಶಿಯೋ ಖುಶಿ! ಏಕೆಂದರೆ ನಾನು ಆ ವೇಳೆಗಾಗಲೆ ‘ಸಂಗ್ಯಾ ಬಾಳ್ಯಾ’ ಚಿತ್ರದಲ್ಲಿನ ಅವರ ವಿಶೇಷ ಅಭಿನಯವನ್ನು ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ. ಆ ಚಿತ್ರಕ್ಕೆ ಅವರು ರಾಜ್ಯಮಟ್ಟದ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಯನ್ನೂ ಗಿಟ್ಟಿಸಿದ್ದರು.
ಇದೀಗ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಾರ್ಯಕ್ರಮದ ದಿನ ನಮಗೆಲ್ಲರಿಗೂ ಉಮಾಶ್ರೀ ಬರುತ್ತಾರೋ ಇಲ್ಲವೋ ಎನ್ನುವ ಆತಂಕ ಇತ್ತು. ಏಕೆಂದರೆ ಬಹಳಷ್ಟು ಸಿನಿಮಾ ನಟರು ಮೊದಲು ಒಪ್ಪಿಕೊಂಡು ಕೊನೆ ಘಳಿಗೆಯಲ್ಲಿ ಕೈಕೊಟ್ಟು ಬಿಡುತ್ತಾರೆ. ಆದರೆ ಇಲ್ಲಿ ಹಾಗಾಗಲಿಲ್ಲ. ಉಮಾಶ್ರೀ ಬಂದರು. ಪ್ರಾಂಶುಪಾಲರು ನಮ್ಮನ್ನು ಪರಿಚಯಿಸಿದಾಗ ನಮ್ಮತ್ತ ಒಂದು ಮಂದಸ್ಮಿತವನ್ನು ಬೀರಿದರು. ನಂತರ ಕಾರ್ಯಕ್ರಮಕ್ಕೆ ಹೊರಟೇಬಿಟ್ಟರು. ಅಷ್ಟುಬಿಟ್ಟರೆ ಆವತ್ತು ಸಮಾರಂಭದ ಗಡಿಬಿಡಿಯಲ್ಲಿ ಅವರೊಂದಿಗೆ ಮಾತನಾಡಲಾಗಲೇ ಇಲ್ಲ!
ಉಮಾಶ್ರೀ ಏನು ಮಾತನಾಡಬಹುದೆಂದು ನಮಗೆಲ್ಲ ಕುತೂಹಲವೋ ಕುತೂಹಲ! ಉಮಾಶ್ರೀ ಮಾತನಾಡಲು ಎದ್ದು ನಿಂತರು. ಒಮ್ಮೆ ಪ್ರೇಕ್ಷಕರತ್ತ ಮುಗುಳುನಗೆಯನ್ನು ಬೀರಿ ಆರಂಭಿಸಿಯೇ ಬಿಟ್ಟರು: ನಾವು ಗೆದ್ದಾಗ ಎಲ್ಲೊ ಒಂದು ಕಡೆ ಸೋತಿರುತ್ತೇವೆ, ಸೋತಾಗ ಇನ್ನೆಲ್ಲೋ ಒಂದು ಕಡೆ ಗೆದ್ದಿರುತ್ತೇವೆ! ಈ ಸೋಲು ಗೆಲವುಗಳನ್ನು ಸಮನಾಗಿ ಸ್ವೀಕರಿಸುವದೇ ಬದುಕು! ಹಾಗೆ ಸ್ವೀಕರಿಸುವದನ್ನು ಕಲಿಸುವದೇ ಕಲೆ! ಆ ಕಲೆ ಅಡಗಿರುವದೇ ಸಂಸ್ಕೃತಿಯಲ್ಲಿ! ಅಂಥ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲೆಂದೇ ಇಂಥ ಸಾಂಸ್ಕೃತಿಕ ಸಮಾರಂಭಗಳನ್ನು ನಡೆಸೋದು! ಎಂದು ಫಿಲಾಸಫಿಕ್ ಆಗಿ ಮಾತನಾಡಿ ನಮ್ಮೆಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದರು.
ಅಷ್ಟೇ ಅಲ್ಲದೆ ಸಮಾರಂಭದ ಆಶಯಕ್ಕೆ ತಕ್ಕಂತೆ ಸಂಸ್ಕೃತಿ ಎಂದರೇನು? ಕಲೆ ಎಂದರೇನು? ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಹಳಷ್ಟು ಅತಿಥಿಗಳು ಸಮಾರಂಭದ ಆಶಯವನ್ನೇ ಮರೆತು ಏನೇನೋ ಮಾತಾಡಿ ಬೋರ್ ಹೊಡೆಸಿಬಿಡುತ್ತಾರೆ. ಆದರೆ ಉಮಾಶ್ರೀ ಹಾಗೆ ನಿರಾಶೆಗೊಳಿಸಲಿಲ್ಲ. ಮಾತು ಮುಗಿದಾದ ಮೇಲೆ ಕಾರ್ಯಕ್ರಮದ ನಿರೂಪಕರು ಉಮಾಶ್ರೀಯವರನ್ನು “ಒಡಲಾಳ” ನಾಟಕದ ಒಂದೆರಡು ಡೈಲಾಗ್‍ಗಳನ್ನು ಹೇಳಲು ಕೇಳಿಕೊಂಡಾಗ “ಅಯ್ಯೋ, ಆ ಡೈಲಾಗ್ಸೆಲ್ಲಾ ಮರೆತಿದಿರೆ! ಬಹಳ ದಿವಸ ಆಯ್ತು ನೋಡಿ” ಎಂದು ಹೇಳಿ ನಕ್ಕು ಬೇರೆ ಇನ್ಯಾವುದೋ ಸಿನಿಮಾದ ಡೈಲಾಗ್‍ಗಳನ್ನು ಹೇಳುವದರ ಮೂಲಕ ಪ್ರೇಕ್ಷಕರ ಮನವನ್ನು ತಣಿಸಿದರು.
ಎಲ್ಲರೂ ಮಾತನಾಡಿದ ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳಿದ್ದವು. ಉಮಾಶ್ರೀ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮವನ್ನು ನೋಡಲು ಉಳಿದರು. ಕಾರ್ಯಕ್ರಮಗಳು ಶುರುವಾದವು. ವಿದ್ಯಾರ್ಥಿನಿಯರ ತಂಡವೊಂದು ಯಾವುದೋ ಒಂದು ಹಾಡಿಗೆ ನರ್ತಿಸುತ್ತಿದ್ದರು. ಮಧ್ಯದಲ್ಲಿ ಹುಡುಗಿಯೊಬ್ಬಳ ಸೆರಗು ಆಕಸ್ಮಿಕವಾಗಿ ಜಾರಿ ಕೆಳಗೆ ಬಿತ್ತು. ತಕ್ಷಣ ಆ ಹುಡುಗಿ ಅದನ್ನು ಸರಿಪಡಿಸಿಕೊಂಡಳಾದರೂ ಅಷ್ಟರಲ್ಲಿ ಸೇರಿದ್ದ ಹುಡುಗರೆಲ್ಲಾ ಅಸಹ್ಯ ರೀತಿಯಲ್ಲಿ ಸಿಳ್ಳೆ, ಚಪ್ಪಾಳೆಗಳನ್ನು ಹಾಕಿ ಆ ಹುಡುಗಿಗೆ ಅವಮಾನ ಮಾಡಿದರು.
ಈ ಘಟನೆಯಿಂದ ಆ ಹುಡುಗಿಗಿಂತ ಉಮಾಶ್ರೀಯವರೆಗೇ ತುಂಬಾ ನೋವಾಯಿತು. ಆ ನೃತ್ಯ ಮುಗಿಯುತ್ತಿದ್ದುದನ್ನೇ ಕಾಯುತ್ತಿದ್ದ ಉಮಾಶ್ರೀಯವರು ವೇದಿಕೆಗೆ ಬಂದು ಮೈಕ್ ತೆಗೆದುಕೊಂಡು “ನಾನು ಹಿಂದೆ ‘ಒಡಲಾಳ’ದಲ್ಲಿ ಸಾಕವ್ವನ ಪಾತ್ರ ಮಾಡುತ್ತಿದ್ದೆ. ಆ ಪಾತ್ರಕ್ಕೆ ರವಿಕೆ (ಬ್ಲೌಸ್) ಹಾಕದೆ ಬರಿ ಸೆರಗಿನಿಂದ ನನ್ನ ಎದೆಯನ್ನು ಮುಚ್ಚಿಕೊಂಡು ನಾಟಕದುದ್ದಕ್ಕೂ ಅಭಿನಯಿಸಬೇಕೆಂದು ನಿರ್ದೇಶಕರು ಹೇಳಿದ್ದರು. ನಾನು ಆಯ್ತು ಅಂದೆ. ಒಂದು ಶೋನಲ್ಲಿ ನಾನು ಹೀಗೆ ಅಭಿನಯಿಸುತ್ತಿದ್ದೆ. ಬಹಳ ಆವೇಶದ ಸನ್ನಿವೇಶವದು. ನಾನು ತಲ್ಲೀನಳಾಗಿ ಅಭಿನಯಸುತ್ತಿರಬೇಕಾದರೆ ಆಕಸ್ಮಿಕವಾಗಿ ನನ್ನ ಸೀರೆ ಸೆರಗೂ ಜಾರಿಬಿತ್ತು. ಆದರೆ ಅಲ್ಲಿರುವ ಪ್ರೇಕ್ಷಕರು ಯಾರೂ ನಗಲಿಲ್ಲ. ಏಕೆಂದರೆ ಅವರ ಗಮನವೆಲ್ಲಾ ನನ್ನ ಅಭಿನಯದ ಮೇಲಿತ್ತೇ ಹೊರತು ನನ್ನ ದೇಹದ ಮೇಲಲ್ಲ. ಅದು ಕಲೆಗೆ ಕೊಟ್ಟ ಗೌರವವಾಗಿತ್ತು. ಒಬ್ಬ ಕಲಾವಿದೆಯನ್ನು ನಡೆಸಿಕೊಂಡ ರೀತಿ ಅಂಥದ್ದಿತ್ತು!
ಅಲ್ಲಿದ್ದವರೆಲ್ಲಾ ಸಭ್ಯ ಕಲೋಪಾಸಕರು, ಇಲ್ಲಿರೋರು ಅಸಭ್ಯ ಕಲೋಪಾಸಕರು! ಇಂಥವರಿಗೆ ಸಂಸ್ಕೃತಿ ಮಹತ್ವವನ್ನು ಸಾರುವ ಸಾಂಸ್ಕೃತಿಕ ಸಂಘಗಳು ಬೇರೆ” ಎಂದು ವ್ಯಂಗವಾಗಿ ತಣ್ಣನೆಯ ಮಾತುಗಳಲ್ಲಿ ಆದರೆ ಮುಟ್ಟಿನೋಡಿಕೊಳ್ಳುವ ಹಾಗೆ ವಿದ್ಯಾರ್ಥಿಗಳಿಗೆ ಮಾತಿನ ಛಡಿಯೇಟನ್ನು ನೀಡಿದರು. ಅಷ್ಟು ಹೇಳಿದ್ದೇ ತಡ ಅವಮಾನ ಮಾಡಿದ ವಿದ್ಯಾರ್ಥಿಗಳೆಲ್ಲಾ ಒಬ್ಬೊಬ್ಬರಾಗಿ ಖಾಲಿಯಾದರು. ಇದು ಉಮಾಶ್ರೀ!! ಹಾಗೆಂದೇ ಅಂಥವರನ್ನು ತಡವಾದರೂ ಕಲಾಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ!

‍ಲೇಖಕರು avadhi

October 29, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: