ಇದು ಎದೆ ತುಂಬಿ ಬಂದ ಸನ್ನಿವೇಶವೂ ಹೌದು..

ಸಮಯ ಪರಿಪಾಲನೆ ಮತ್ತು ಔಚಿತ್ಯ!

ಜಿ ಎನ್  ಅಶೋಕ ವರ್ಧನ

ಅತ್ರಿ ಬುಕ್ ಸೆಂಟರ್

ಜೈಲಿನಿಂದ ಜೈಲಿಗೆ ರಂಗ ಯಾತ್ರೆ – ನಮಗೆ ನಾಲ್ಕು ದಿನ (ಇದೇ ಜುಲೈ೨, ೩, ೪ ಮತ್ತು ೫ ಮಂಗಳೂರಿನ ಪುರಭವನದಲ್ಲಿ ಪ್ರತಿ ಸಂಜೆ ಆರು ಗಂಟೆಯಿಂದ.) ಅಕ್ಷರಶಃ ಅಪೂರ್ವ ರಂಗಾನುಭವ. ಇದು ಎದೆ ತುಂಬಿ ಬಂದ ಸನ್ನಿವೇಶವೂ ಹೌದು. ಸಂಕಲ್ಪ ಮೈಸೂರು ಮತ್ತು ಕರ್ನಾಟಕ ಕಾರಾಗೃಹಗಳ ಇಲಾಖೆಯ ಸಹಯೋಗದಲ್ಲಿ ನಡೆದ ನಾಟಕೋತ್ಸವಕ್ಕೆ ಇನ್ಯಾವುದೇ ರಂಗಪ್ರದರ್ಶನಗಳಿಗಿಂತ ತೀರಾ ಭಿನ್ನವಾದ ಲಕ್ಷ್ಯವಿತ್ತು ಮತ್ತು ಅದನ್ನು ಅಷ್ಟೇ ಯಶಸ್ವಿಯಾಗಿ ಅದು ಸಾಧಿಸಿದೆ ಎಂದು ಘಂಟಾಘೋಷವಾಗಿ ಹೇಳುವಲ್ಲಿ ನನ್ನೊಡನೆ ಬಂದ ಕುಟುಂಬ ಸದಸ್ಯರು, ಮಿತ್ರ ಬಳಗವೆಲ್ಲ ನಿರ್ವಿವಾದವಾಗಿ ಒಕ್ಕೊರಲಾಗುತ್ತದೆ.

ಮನುಷ್ಯ ಪ್ರಕೃತಿಯ ಒಂದು ರೂಪ. ಈ ರೂಪಕ್ಕೆ ವಿಶಿಷ್ಟವಾದ ‘ಬುದ್ಧಿ’ ವಿಕಾಸಗೊಂಡಿರುವುದರಿಂದ ಮನುಷ್ಯನೇ ಸಂಸ್ಕೃತಿ, ಸಮಾಜವನ್ನು ರೂಪಿಸಿಕೊಂಡ. ಆದರೆ ಕಾಲಪ್ರವಾಹದಲ್ಲಿ ‘ನೆಲ’ ಮತ್ತು ‘ಪ್ರಭಾವ’ಗಳು ಎಲ್ಲ ವ್ಯಕ್ತಿಗಳಿಗೂ ಒಂದೇ ರೀತಿಯಲ್ಲಿ ಸಿಗುವುದಿಲ್ಲ. ಸಹಜವಾಗಿ ಮಹಾ ಹರಿವಿನಲ್ಲಿ ಕೆಲವು ಸಿಡಿದ ಹನಿಗಳು ಸಂಸ್ಕೃತಿಗೆ ಎರವಾದಂತೆ, ಸಮಾಜಕ್ಕೆ ವಿರೋಧಿಯಾದಂತೆ ಕಾಣುವುದಿವೆ. ಅವರೇ ಈ ಖೈದಿಗಳು. ಈ ಕಾಲ್ಪನಿಕ ಹೊಳೆಯಲ್ಲಿ ಹುಗಿದು ಕುಳಿತ ಬಂಡೆಗಳು, ಕರಗದುಳಿದ ಕಸ ಬೊಡ್ಡೆಗಳು, ವಿಷ ಕಲ್ಮಶಗಳು, ದುರ್ಬಲಗೊಂಡ ದಂಡೆಗಳು, ಸಮಾಜವೇ ಎಳಸೆಳಸಾಗಿ ಮಾಡಿದ ನೂರೆಂಟು ಚೇಷ್ಟೆಗಳನ್ನೆಲ್ಲಾ ಪಟ್ಟಿ ಮಾಡುವ ಸಮಯ ಇದಲ್ಲ. ಹಾಗೆ ದೂರಾದವರನ್ನು ‘ಶುದ್ಧಾಂತರಂಗ’ದಿಂದ, ಕೆಳದಂಡೆಯಲ್ಲಿ ಬರುವ ಕಿರು ತೊರೆಗಳಂತೆ, ಮತ್ತೆ ಸೇರಿಸಿಕೊಳ್ಳುವ ತುರ್ತನ್ನು ನೆನಪಿಸುವ ಮಹಾ ಕೆಲಸವಾಗಿ ಈ ಜೈಲಿನಿಂದ ಜೈಲಿಗೆ ರಂಗಯಾತ್ರೆ ನಮ್ಮನ್ನು ತಟ್ಟಿದೆ. ಉಳಿದೆಲ್ಲಾ ರಂಗಪ್ರಯೋಗಗಳಲ್ಲಿ ಒಂದೋ ಹವ್ಯಾಸಿ ಇಲ್ಲವೇ ವೃತ್ತಿಪರ ಕಲಾವಿದರು ತಮ್ಮೆಲ್ಲ ಪ್ರತಿಭೆ ತೊಡಗಿಸಿ ಜನಮನ ರಂಜಿಸುವುದೂ ಪರೋಕ್ಷವಾಗಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವುದೂ ತಿಳಿದೇ ಇದೆ. ಆದರಿಲ್ಲಿ ರಂಗಪ್ರಯೋಗ ಸ್ಪಷ್ಟವಾಗಿ ಪರಿವರ್ತನೆಯ ಚಿಕಿತ್ಸೆಯೇ ಆಗಿದೆ. ಪ್ರೇಕ್ಷಕವರ್ಗ ಅರ್ಥಾತ್ ಸಮಾಜ ಅದನ್ನು ಮನಗಂಡು ಒಪ್ಪಿಸಿಕೊಳ್ಳುವ, ಔದಾರ್ಯದ ಕೈಗಳನ್ನು ಚಾಚಿ ಅಪ್ಪಿಕೊಳ್ಳುವ ಬಲುದೊಡ್ಡ ಅವಕಾಶ ತೆರೆದಿದೆ. ಇಂಥ ಒಂದು ಯೋಜನೆಯ ಹೊಳಹು ಹಾಕಿ, ಅವಿರತ ಹನ್ನೆರಡು ವರ್ಷ ಅದರಲ್ಲಿ ಸಕುಟುಂಬ ತೊಡಗಿ, ಮುಂದೆಯೂ ನಡೆಸಲಿರುವ ಹುಲಗಪ್ಪ ಕಟ್ಟೀಮನಿ ಎಂಬ ವ್ಯಕ್ತಿ (ರಂಗಾಯಣದ ಹಿರಿಯ ಕಲಾವಿದ ಎನ್ನುವುದು ಕೇವಲ ಅವರ ವೃತ್ತಿಸೂಚಕ) ಅಕ್ಷರಶಃ ಮುರಿದ ಮನಿ/ನೆಗಳನ್ನು. ಕುಸಿದ ಮನಗಳನ್ನು ಕಟ್ಟುತ್ತಿದ್ದಾರೆ. ಸಾಮಾನ್ಯ ಜೀವಾವಧಿ ಶಿಕ್ಷೆಯ ಅವಧಿಯನ್ನೇ ಇವರ ಕುಟುಂಬ, ಯಾವ ತಪ್ಪೂ ಮಾಡದೆ ಸ್ವಯಂವಿಧಿಸಿಕೊಂಡು ಜೈಲಿನೊಳಗೆ ಕಳೆದಿದ್ದಾರೆ! ಅವರ ‘ಸಂಕಲ್ಪ, ಮೈಸೂರು’ ಒಂದು ಸಾಂಸ್ಥಿಕನಾಮವಲ್ಲ, ಅವರಿಟ್ಟುಕೊಂಡ ಬಲುದೊಡ್ಡ ಲಕ್ಷ್ಯದ ಸುಘೋಷ. ಮೈಸೂರು ಕಾರಾಗೃಹ ವಾಸಿಗಳು ಪ್ರಯೋಗಿಸಿದ್ದು ಶೇಕ್ಸ್‌ಪಿಯರನ ಕನ್ನಡ ರೂಪದ ‘ಕಿಂಗ್ ಲಿಯರ್.’ ಹೊಗಳು ಭಟ್ಟಂಗಿತನವೇ ವಾಸ್ತವದ ಪ್ರೀತಿ ಎಂಬ ತಪ್ಪು ತಿಳುವಳಿಕೆಯ ರಾಜನೊಬ್ಬ ಕೊನೆಯಲ್ಲಿ ಪಶ್ಚಾತ್ತಾಪದಲ್ಲಿ ಬೇಯುವುದನ್ನು ಇದು ತೋರಿಸಿತು. ಬೆಂಗಳೂರು ಸೆರೆಮನೆಯವರು ಡಿ.ಆರ್ ನಾಗರಾಜರ ‘ಕತ್ತಲೆ ದಾರಿ ದೂರ’ವನ್ನು ಪ್ರಭಾವಿ ಅಭಿವ್ಯಕ್ತಿಯಲ್ಲಿ ಜನಮನಕ್ಕೆ ಸನಿಹಗೊಳಿಸಿದರು. ಆ ನಾಟಕ ನಾವು ಭ್ರಮಿಸುವ ‘ಸಾಮಾಜಿಕ ಸ್ವಾಸ್ಥ್ಯ’ವನ್ನೇ ಬಲು ದಿಟ್ಟವಾಗಿ ಒರೆಗೆ ಹಚ್ಚಿತ್ತು. ಹಿಂಡಲಗಾದ ಕತ್ತಲ ಕೂಪದಿಂದೆದ್ದವರು ಚಂದ್ರಶೇಖರ ಕಂಬಾರರ ‘ಶಿವರಾತ್ರಿ’ಯ ಕಾರಿರುಳನ್ನೇ ಆಯ್ದುಕೊಂಡರೂ ‘ಮಹಾಮನೆಯ’ ಮಹೋಜ್ವಲ ಬೆಳಕನ್ನು ಹರಿಸಿದರು. ಧಾರವಾಡದ ಬಂಧೀಖಾನೆಯವರು ಮೂರು ದಿನಗಳ ಗಾಂಭೀರ್ಯದ ಹೊರೆ ಇಳಿಸುವಂತೆ ಚಂದ್ರಶೇಖರ ಪಾಟೀಲರ ‘ಗೋಕರ್ಣದ ಗೌಡಶಾನಿ’ಯನ್ನು ಕರೆ ತಂದಿದ್ದರು! ಒಂದೆಡೆ ಪುರಾಣದಿಂದ ವರ್ತಮಾನದವರೆಗಿನ ಯಾವುದನ್ನೂ ಬಿಡದ ವ್ಯಂಗ್ಯ ನಗೆಚಾಟಿಕೆಯ ಚಮತ್ಕಾರ. ಜೊತೆಜೊತೆಗೆ ‘ತನ್ನ ಮುಂದುವರಿಸುವ’ ಜೀವತುಡಿತದ ಆಶಯವನ್ನು ನಿರ್ಭಿಡೆಯಿಂದ ಸ್ಥಾಪಿಸಿತು. ಇದು ನಾಟಕದ ಹೊರಗಿನ ಅಂದರೆ, ನಾಲ್ಕು ದಿನಗಳ ಉತ್ಸವ ಸಮಾಪನದ ಮಾತುಗಳಿಗೂ ಬಲಕೊಟ್ಟಿತು ಎನ್ನಲೇಬೇಕು. ಎರಡನೇ ದಿನ ನಾಟಕಕ್ಕೂ ಮುನ್ನ ಪಿ. ಶೇಷಾದ್ರಿಯವರು ಈ ರಂಗಯಾತ್ರೆಯ ಕುರಿತು ನಿರ್ದೇಶಿಸಿದ ಒಂದು ವಾರ್ತಾಚಿತ್ರವನ್ನೂ ಪ್ರದರ್ಶಿಸಿದ್ದರು. ಅದು ಕರ್ನಾಟಕದ ವಿವಿಧ ಕಾರಾಗೃಹಗಳೊಳಗೆ ಕಳೆದ ಹನ್ನೆರಡು ವರ್ಷಗಳಲ್ಲಿ ಈ ರಂಗ ತರಬೇತಿ ನಡೆದು ಬಂದ ದಾರಿಯನ್ನು ಸುಂದರವಾಗಿ, ಸಂಗ್ರಹವಾಗಿ ಸಾರ್ವಜನಿಕರಿಗೆ ಮುಟ್ಟಿಸುವ ದಾಖಲಾತಿ. ‘ಅಪರಾಧಿ’ಗಳಿಂದ ಕಲಾವಿದರನ್ನು ಆಯ್ಕೆ ಮಾಡುವ ಪ್ರಾಥಮಿಕ ಕ್ರಿಯೆಯೂ ಸಣ್ಣದಲ್ಲ. ಮಂಗಳೂರಿನ ಜೈಲ್ ವರಿಷ್ಠ (ಅಧೀಕ್ಷಕ) ಅಂಬೇಕರ್ ಒಮ್ಮೆ ಖಾಸಾ ಮಾತಿನಲ್ಲಿ ಹೇಳಿದರು “ನಾ ನಟ್ನಾಗ್ಬೇಕು ಎಂದು ಹಂಬಲ್ಸಿ ಬರೋರಿಂದ, ಹತ್ತು ಕಲಿಕೆಗಳ್ನ ಮೈಗೂಡುಸ್ಕೊಂಡಿರೋ ಉತ್ಸಾಹಿಗಳಿಂದ ಆರ್ಸೋದೂ ನಾಟ್ಕ ಮಾಡ್ಸೋದು ವಿಶೇಷವಲ್ಲ. ಆದ್ರೆ ಸಮಾಜ್ದಲ್ಲಿ ಏನೋ ಆಗಿದ್ದೋರು, ಇಲ್ಗ್ಬಂದು ಏನೂ ಬೇಡ, ಹೊರಗಿನ ತಮ್ಮ ಸಂಬಂಧಗಳೇನಾಗುತ್ತೋ ಏನೋ ಎಂದು ಕೊರಗಿನಲ್ಲೇ ಇರ್ತಾರೆ. ಅವ್ರೊಳ್ಗೆ ಆರ್ಸೋದೂ ಮತ್ತವರನ್ನೊಲ್ಸ್ಕೊಂಡು ನಾಟ್ಕಾ ಮಾಡ್ಸೋದು… ಛೆ, ನಿಗದಿತ್ ಡೂಟಿ ಬಿಟ್ರೇ ಏನ್ಬೇಕಾದ್ರೂ ಮಾಡೋ ಸ್ವಾತಂತ್ರ್ಯ ಇರುವ ನಾವೇ, ನಾಟ್ಕನೋ ಇನ್ನೊಂದೋ ಎಂದ್ರೆ ಮಾರು ದೂರ ಹಾರ್ತೀವಿ. ಇನ್ನಿವರನ್ನ ಹಾಕ್ಕೊಂಡು…” ಚಿತ್ರ ಬರೆಸಿ, ವಿಗ್ರಹ ಮಾಡಿಸಿ, ಹಾಡು ಕಲಿಸಿ, ಕುಣಿಸಿ ಹಂತ ಹಂತದಲ್ಲಿ ಅನ್ಯ ಮನಸ್ಕತೆಯನ್ನು ತೊಡೆದು ನಾಟಕಕ್ಕೆ ಒಲಿಸಬೇಕು. ಇವನು ಬೆಂಗಳೂರು ಕಳ್ಳ, ಮತ್ತೊಬ್ಬ ಬಳ್ಳಾರಿ ಕೊಲೆಗಾರ, ಮಗುದೊಬ್ಬ ತುಮಕೂರು ವಂಚಕ, ಇತ್ಯಾದಿ ಒಂದು ಮುಖ. ಇನ್ನು ಮೂಲ ಸಾಮಾಜಿಕ ಸ್ಥಾನಮಾನ, ಜಾತಿ, ಸಾಂಸ್ಕೃತಿಕ ತರತಮಗಳು, ಎಲ್ಲಕ್ಕೂ ದೊಡ್ಡದಾಗಿ ಬಂಧೀಖಾನೆಗಳಲ್ಲಿ ಪರಸ್ಪರ ಮುಖಾವಲೋಕನವೇ ಇರದ ಗಂಡು ಹೆಣ್ಣು ಇನ್ನೊಂದೇ ಮುಖ. ಇವರ ನಡುವೆ ನಾವೆಲ್ಲ ಅಪರಾಧದ ಕೊಳೆ ಕಳೆಯುವ ಏಕ ಉದ್ದೇಶಕ್ಕೆ ಇಲ್ಲಿರುವ ಒಂದು ಸಮುದಾಯ ಎನ್ನುವ ಸತ್ಯ ಅರಳಿಸಬೇಕು. ಕಟ್ಟೀಮನಿ ಹೇಳಿದ ಬೀಸು ಕಂಸಾಳೆ ರೂಪಕವನ್ನೇ ನೋಡಿ – ಒಂದು ಬೀಸು, ಒಂದು ನಡೆ ತಪ್ಪಿದರೆ ಒಂದೋ ತನಗೇ ಪೆಟ್ಟು, ಇಲ್ಲಾ ಇನ್ಯಾರಿಗೋ ಜಖಂ ಖಾತ್ರಿ. ಆ ಭಾವ ಮೂಡಿ ನಾಟಕ ರೂಪದಲ್ಲಿ ಒಂದು ಭವ್ಯ ಆದರ್ಶವನ್ನು ಅನಾವರಣಗೊಳಿಸುವ ಶ್ರದ್ಧಾವಂತ, ಜವಾಬ್ದಾರಿಯುತ ಕಲಾವಿದರಾಗಿ ಪರಿವರ್ತನೆಗೊಳ್ಳುವುದನ್ನು ಚಿತ್ರದ ಕಾಲಮಿತಿಯಲ್ಲಿ ಶೇಷಾದ್ರಿ ಚೆನ್ನಾಗಿಯೇ ನಿರೂಪಿಸಿದ್ದಾರೆ. ಉತ್ಸವ ಎಂದ ಮೇಲೆ ಉದ್ಘಾಟನೆ, ಸಮಾರೋಪ ಇರುವಂತದ್ದೇ. ಅದೂ ಕಾರಾಗೃಹವಾಸಿಗಳ ಕಲಾಪ್ರದರ್ಶನದಂಥ ಅಸಾಧಾರಣ ಪ್ರಸ್ತುತಿ ಎಂದಾಗ ಕೇಳಬೇಕೇ. ಉದ್ಘಾಟನೆಗೇನೋ ಹೆಚ್ಚುವರಿ ಎರಡು ಗಂಟೆಗಳನ್ನೇ ಇಟ್ಟುಕೊಂಡಿದ್ದರು. (ಜುಲೈ ಎರಡು) ಸಂಜೆ ನಾಲ್ಕರ ಸುಮಾರಿಗೆ ತೊಡಗಿದ ಸಭಾ ಕಾರ್ಯಕ್ರಮ ಆರೂವರೆಯ ಪ್ರದರ್ಶನಾವಧಿಯ ಮೇಲೂ ತುಸು ಚಾಚಿಕೊಂಡಿತ್ತು. ಅದೃಷ್ಟವಶಾತ್ ನಮ್ಮ ಬಳಗ ಆರು ಗಂಟೆಯ ಸುಮಾರಿಗೇ ಪುರಭವನಕ್ಕೆ ಹೋದದ್ದರಿಂದ ಪ್ರದರ್ಶನಕ್ಕೆ ವಿಶೇಷ ಹೊರೆಯಾಗಲಿಲ್ಲ. ಆದರೆ ಸಮಾರೋಪ ಹೀಗಾಗಲಿಲ್ಲ. ಹಿಂದಿನ ದಿನವೇ ಸ್ಪಷ್ಟವಾಗಿ ಆರಕ್ಕೆ ಸುರುಮಾಡಿ, ಅರ್ಧ ಗಂಟೆಯಲ್ಲಿ ಪ್ರದರ್ಶನಕ್ಕೆ ರಂಗವನ್ನು ತೆರವು ಮಾಡುವ ಮಾತಾಡಿದ್ದರು. ಆದರೆ ಸಭೆ ಆರಂಭಗೊಳ್ಳುವಾಗಲೇ ಅರ್ಧ ಗಂಟೆ ತಡ. ಮತ್ತೆ ಏಳೂ ಮುಕ್ಕಾಲರವರೆಗೂ ಲಂಬಿಸಿದ್ದಂತೂ ತಪ್ಪೇ ತಪ್ಪು. ಇದರ ಪರಿಣಾಮಕ್ಕೆ ನನ್ನೊಬ್ಬನ ಅನುಭವಕ್ಕೆ ಬಂದ ಉದಾಹರಣೆ ನೋಡಿ. ನಮ್ಮ ಗೆಳೆಯರೊಬ್ಬರು ರಾತ್ರಿ ಪಾಳಿ ಕೆಲಸಕ್ಕೆ, ಪಣಂಬೂರಿನ ದೂರಕ್ಕೆ ಒಂಬತ್ತು ಗಂಟೆಯ ಸುಮಾರಿಗೆ ತಲಪಲೇ ಬೇಕಿತ್ತು. ಇನ್ನೊಬ್ಬರು ಮನೆಗೆ ಧಾವಿಸಿ, ಊಟ ಮುಗಿಸಿ, ಗಂಟು ಹಿಡಿದು, ಹತ್ತು ಗಂಟೆಯ ಮೈಸೂರು ಬಸ್ಸು ಹಿಡಿಯಲೇ ಬೇಕಿತ್ತು. ಇಬ್ಬರೂ ಮತ್ತವರಿಗೆ ಸಂಬಂಧಿಸಿದವರೂ ನಾಟಕ ಕಳೆಗಟ್ಟುತ್ತಿರುವಂತೆ ಬಿಟ್ಟೋಡಬೇಕಾಯ್ತು. ಈ ಉತ್ಸವ ಬರಿಯ ನಾಟಕದ್ದಲ್ಲ, ಒಂದು ದೊಡ್ಡ ಭಾವಲಹರಿ ಎಂದು ಎಲ್ಲರಿಗೂ ತಿಳಿದಿತ್ತು. ಅದಕ್ಕೂ ಹೆಚ್ಚಿಗೆ ಸಂಘಟಕರಿಗೆ ತಿಳಿದಿರಲೇಬೇಕು. ಕಲಾವಿದರಾಗಿ ಕಾಣಿಸಿಕೊಂಡ ಒಬ್ಬೊಬ್ಬರದೂ ಒಂದೊಂದು ಕಥೆ, ಹೇಳಿ ಮುಗಿಯದ ವ್ಯಥೆ. ನಮಗೆಲ್ಲರಿಗೂ ಕಿವಿಯಾಗುವ, ಹೃದಯವಾಗುವ ತವಕವೂ ಧಾರಾಳ ಇತ್ತು. (ಹಾಗಾಗಿಯೇ ನೋಡಿ ಸಮಯದ ಶಿಸ್ತು ತಪ್ಪಿದಾಗಲೂ ಸಭೆಯಿಂದ ಒಂದು ಅಪಸ್ವರ ಬರಲಿಲ್ಲ) ಆದರೆ ‘ಬಂದೋಬಸ್ತಿ’ಗೆ ನೂರೆಂಟು ಜನ ಮತ್ತು ಕ್ರಮ ತೊಡಗಿಸಿಕೊಂಡಂತೇ ಕಲಾವಿದರ ‘ಆತ್ಮ ನಿವೇದನೆಗೆ’ ಒಂದು ಶಿಸ್ತನ್ನು ಹೇರಿಕೊಳ್ಳಲೇಬೇಕಿತ್ತು. ಖೈದಿ-ಕಲಾವಿದರ ನುಡಿಗಳಷ್ಟೂ ಸಹಜ ಸ್ಫುರಣೆಗಳೆಂದೇ ನಾನು ನಂಬುತ್ತೇನೆ. ಆದರೆ ಅವರು ದೊಡ್ಡ ವಲಯದ ಮತ್ತು ಸರಕಾರದ ಧೋರಣಾತ್ಮಕ ವಿಚಾರಗಳ ಮಿತಿಯನ್ನು ಮೀರಿದ್ದರೆ? ಉದಾಹರಣೆಗೆ ಜೈಲಿನ ಒಳಗಿನ ಆಡಳಿತದ ಬಗ್ಗೆ, ವೈಯಕ್ತಿಕ ಹೆಸರುಗಳನ್ನು ಎತ್ತಿ ಆಡಿದ್ದರೂ ನಾವೇನೋ ಅದೇ ಸಹೃದಯತೆಯಿಂದ ಕೇಳುತ್ತಿದ್ದೆವು. ಆದರೆ ಸಂಘಟನೆ ಒಪ್ಪಿಕೊಳ್ಳುತಿತ್ತೇ? ಅಂಥವು ನುಸುಳದಂತೆ ಖಡಕ್ ಪೂರ್ವಸೂಚನೆಗಳು ಇದ್ದಿರಲಾರದೇ? ಅವೇನಿದ್ದರೂ ಇಲ್ಲದಿದ್ದರೂ ಕನಿಷ್ಠ ಸಮಯದ ಶಿಸ್ತನ್ನು ಉಳಿಸಿಕೊಳ್ಳಲೇಬೇಕಿತ್ತು. ನಾಟಕೋತ್ಸವದ ಸಮಯಪಾಲನೆಯ ಅಶಿಸ್ತು ಕೇವಲ ಒಂದು ಪ್ರಾದೇಶಿಕ, ಒಂದು ಸನ್ನಿವೇಶದ ಕೊರತೆಯಿರಬಹುದು ಮತ್ತು ಮುಂದಕ್ಕೆ ಯಾರೂ ಸುಲಭದಲ್ಲಿ ತಿದ್ದಿಕೊಳ್ಳುವಂತದ್ದು. ಆದರೆ ಅಲ್ಲಿ ಎಲ್ಲರೂ ರಂಗಪ್ರದರ್ಶನದ ಹೊರಗೆ ಒಂದು ಧ್ವನಿಯಲ್ಲಿ ಎತ್ತಿತೋರಿದ ಮಾನವೀಯ ಸಮಸ್ಯೆ ಒಂದಕ್ಕಾಗಿರುವ ಕೊರತೆ ತುಂಬ ದೊಡ್ಡ ಆಯಾಮದ್ದು, ಅದನ್ನು ಸರಿಪಡಿಸಲು ವಿಚಾರವಂತ ಸಮಾಜ ಧ್ವನಿ ಎತ್ತಲೇ ಬೇಕಾದದ್ದು ಮತ್ತು ಎಲ್ಲಕ್ಕೂ ಮುಖ್ಯವಾಗಿ ಜವಾಬ್ದಾರಿಯುತ ಸರಕಾರ ತುರ್ತಾಗಿ ಕ್ರಿಯಾಶೀಲವಾಗಬೇಕಾದದ್ದು. ಅದಕ್ಕೆ ಪೂರಕವಾಗಿ ನಾನು ಸಂಬಂಧಿಸಿದ ಇಬ್ಬರಿಗೆ ಬರೆದ ಪತ್ರದ ಮುಖ್ಯಾಂಶವನ್ನು ಕೆಳಗೆ ಕೊಡುತ್ತಿದ್ದೇನೆ. ಇದನ್ನು ನೀವೂ ಪೂರ್ಣ ಮನಸ್ಸಿನಿಂದ ಅನುಮೋದಿಸಿ ಶ್ರೀ ಗೋಪಾಲ ಹೊಸೂರು, ಮುಖ್ಯಸ್ಥರು, ರಾಜ್ಯ ಗುಪ್ತ ವಾರ್ತೆ, ಕರ್ನಾಟಕ ಸರಕಾರ, ಬೆಂಗಳೂರು ೫೬೦೦೦೧ ಮತ್ತು ಶ್ರೀ ಗಗನದೀಪ್, ಹೆಚ್ಚುವರಿ ಪೊಲಿಸ್ ಮಹಾ ನಿರ್ದೇಶಕರು, ಕರ್ನಾಟಕ ಸರಕಾರ, ಬೆಂಗಳೂರು ೫೬೦೦೦೧ ಪತ್ರ ಬರೆಯಬೇಕಾಗಿ ಕೇಳಿಕೊಳ್ಳುತ್ತೇನೆ. ನಿಮ್ಮ ಪತ್ರಗಳು ಇನ್ನಷ್ಟು ಇಂಥ ಸದ್ವಿಚಾರಗಳಿಗೆ ಪ್ರೇರಣೆ ಕೊಡುವಂತಾಗಲು, ಅವುಗಳ ಯಥಾ ಪ್ರತಿಯನ್ನು ಇಲ್ಲೇ ಕೆಳಗಿನ ಪ್ರತಿಕ್ರಿಯಾ ಅಂಕಣಕ್ಕೂ ತುಂಬುವಿರಾಗಿ ನಂಬಿದ್ದೇನೆ.   ಸ್ವಾತಂತ್ರ್ಯೋತ್ಸವಕ್ಕೆ ಅರ್ಥ ಕೊಡಿ ಮಾನ್ಯರೇ, ಸಮಾಪನದ ಔಪಚಾರಿಕತೆಯ ಎಡೆಯಲ್ಲಿ ಕೆಲವು (ಖೈದಿತನಕ್ಕೆ ಹೊರತಾಗಿ ಮೆರೆದವರಾದ್ದರಿಂದ) ಕಲಾವಿದರೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ನಾಟಕ ಎಂದರೆ ಬರಿಯ ಉರುಹಚ್ಚುವುದಲ್ಲ, ನಿತ್ಯಕ್ಕೆ ಹೊರತಾದ ಬಣ್ಣ ಬಟ್ಟೆ ಎಳೆದುಕೊಳ್ಳುವುದಲ್ಲ. ಇದು ನೋಡಿದವರಿಗೆಷ್ಟೋ ಆಡಿದವರಿಗೂ ಅಷ್ಟೇ – ರಂಜನೆ, ಶಿಕ್ಷಣ, ಪರಿವರ್ತನೆ. ಈ ಮಹಾಮೌಲ್ಯಗಳಿಗೆ ಅಭಿವ್ಯಕ್ತಿ ಕೊಟ್ಟವರು ನಮ್ಮ ಮನಸ್ಸುಗಳನ್ನು ಅನಿವಾರ್ಯವಾಗಿ ಮತ್ತು ಅಷ್ಟೇ ಗಾಢವಾಗಿ ಆವರಿಸಿಕೊಂಡರು. ಈ ಕಲಾವಿದರು (ಒಬ್ಬಿಬ್ಬರು ಅತಿಥಿ ಕಲಾವಿದರನ್ನು ಹೊರತುಪಡಿಸಿ) ಕೊಲೆ, ದರೋಡೆ, ವಂಚನೆ ಎಂದಿತ್ಯಾದಿ ಹೆಸರಿಸಲಾಗುವ ಏನೇ ಸಮಾಜ ವಿರೋಧೀ ಕೃತ್ಯ ಮಾಡಿದ್ದಿದ್ದರೂ (ಮಾಡದೇ ಅನ್ಯ ಸಾಂದರ್ಭಿಕ ಆಕಸ್ಮಿಕಗಳ ಬಲಿ ಎಂದೇ ಇಟ್ಟುಕೊಂಡರೂ) ಹೊಸ ಪಾತ್ರದ, ಹೊಸ ಚಿಂತನೆಯ ಪಥ ಹಿಡಿದದ್ದು ಎದ್ದು ಕಾಣುತ್ತಿತ್ತು. ನಾಲ್ಕೂ ದಿನಗಳಲ್ಲಿ ಪ್ರದರ್ಶನ ಇಲ್ಲದ ತಂಡಗಳ ಸದಸ್ಯರು ಸಭಾಸದರೊಡನೆ ಯಾವುದೇ ಕಿಸುರಿಲ್ಲದೆ ಒಡನಾಡಿದ್ದರಲ್ಲಿ ಅನುಭವಕ್ಕೂ ಬರುತ್ತಿತ್ತು. ‘ಅನಾರೋಗ್ಯ’ ಕಳಚಿಕೊಂಡದ್ದಕ್ಕೆ ಎಷ್ಟೂ ನಿದರ್ಶನಗಳು (ಸಾಕ್ಷಿ ಎನ್ನುವುದು ತೀರಾ ದುರ್ಬಲ ಮತ್ತು ‘ನಿಂದಿತ’ ಪದ) ಸಿಕ್ಕುತ್ತಿದ್ದವು. ಅವರ ಮಾತು ಮತ್ತು ಎಲ್ಲಾ ಕ್ರಿಯೆಗಳಲ್ಲೂ ಮತ್ತೆ ಮತ್ತೆ ಹಣಿಕುತ್ತಿದ್ದ ಒಂದು ಬಲವತ್ತರವಾದ ಕಾತರ (ಕೊರಗೂ ಹೌದು!), “ನಾನೆಂದು ಸೇರಿಯೇನು, ಸಮಾಜದ ಮುಖ್ಯವಾಹಿನಿಗೆ.” ಸಮಾಜ ಮಾಡಿಕೊಂಡ ಕಾನೂನಿನನ್ವಯ ಒಮ್ಮೆಗೆ ಅವರೆಲ್ಲ ಶಿಕ್ಷಾರ್ಹ ಅಪರಾಧಿಗಳೇ ಎಂದು ಒಪ್ಪಿಕೊಳ್ಳೋಣ. ಆದರೆ ಪ್ರಕೃತಿ ಸದಾ ಚಲನಶೀಲ. ಯಾರು ಇಷ್ಟಪಟ್ಟರೂ ಪಡದೇ ಇದ್ದರೂ ಪ್ರತಿ ಕ್ಷಣವೂ ಕಳೆದುಹೋದ ಕ್ಷಣದ ಉತ್ತಮರೂಪಕ್ಕೆ ತುಡಿತವಿರುತ್ತದೆ ಎನ್ನುವುದನ್ನು ಮರೆಯಬಾರದು. ಅಂದರೆ ಇವರೆಲ್ಲ ಶಿಕ್ಷೆಗೊಳಗಾದ ಯಾವುದೋ ಘಟನೆಯ ಮರುಕ್ಷಣದಿಂದ, ವಿಚಾರಣೆಯ ಉದ್ದಕ್ಕೆ, ಇದುವರೆಗೆ ಅನುಭವಿಸಿದ ಶಿಕ್ಷಾವಧಿಯಲ್ಲಿ, ಸಂಪರ್ಕಕ್ಕೆ ಬಂದ ಹೊರಗಿನವರಿಂದ, ಎಲ್ಲಕ್ಕೂ ಮಿಗಿಲಾಗಿ ತನ್ನದೇ ವಿಚಾರಶಕ್ತಿಯಿಂದ ಪರಿವರ್ತನೆಗೆ ಒಳಗಾಗುತ್ತಿದ್ದವರೇ ಸರಿ. ಆ ಎಲ್ಲ ಅಸ್ಪಷ್ಟಗಳಿಗೆ ಖಚಿತ ಮಾತು ರೂಪಗಳನ್ನು ಒದಗಿಸಿದ ಮತ್ತು ತಾವೇ ಅದಾಗಿ ಕಂಡುಕೊಳ್ಳುವ ಅವಕಾಶ ಕೊಟ್ಟ ಈ ನಾಟಕ ಪ್ರಯೋಗಗಳಂತೂ ನಿಸ್ಸಂದೇಹವಾಗಿ ಅವರನ್ನು ಹೊಸ ಮನುಷ್ಯರನ್ನಾಗಿಸಿವೆ. ಶಿಕ್ಷೆ ಎಂದಿದ್ದರೂ ಅನುಭವಿಸುವವರಿಗೆ ನೋವೇ ಸರಿ. ಆದರೆ ವಿಧಿಸುವವರ ಸ್ಪಷ್ಟ ಲಕ್ಷ್ಯ – ಪರಿವರ್ತನೆ. ಇದಕ್ಕಾಗಿ ‘ಅಪರಾಧ’ದ ಭಾರ ನಿರ್ಧರಿಸಿ, ಸಮಯ ಮತ್ತು ವಿಧಾನಗಳನ್ನು ಕಾನೂನು ರೂಪಿಸಿದೆ. ಅದರೊಳಗೂ ಉದಾರವಾಗಿ, ನಿರೀಕ್ಷೆ ಮೀರಿದ ‘ಸಾಧನೆ’ಯನ್ನು ಧಾರಾಳ ಪುರಸ್ಕರಿಸುವ ಅವಕಾಶಗಳನ್ನು ತೆರೆದು ಇಟ್ಟಿದೆ. ಅವುಗಳಲ್ಲಿ ಬಹುಮುಖ್ಯವಾದವು ಅವಧಿ ಮುನ್ನದ ‘ಸನ್ನಡತೆ’ಯ ತತ್ಕಾಲೀನ ಬಿಡುಗಡೆ ಮತ್ತು ಖಾಯಂ ಬಿಡುಗಡೆಗಳು. ಆದರೆ ಕಳೆದ ಆರು ವರ್ಷಗಳಿಂದ ಕೇವಲ ಕರ್ನಾಟಕದ ಖೈದಿಗಳಿಗೆ ಇದು ಸಿಕ್ಕಿಯೇ ಇಲ್ಲವೆಂದು ಕೇಳಿ ತೀರಾ ವಿಷಾದವಾಯ್ತು. ಕಾರಣಗಳ ಸಿಕ್ಕುಬಿಡಿಸುವ ಹೊತ್ತು ಇದಲ್ಲ. ‘ಕಾನೂನು ಕತ್ತೆ’ ಎನ್ನುವ ಮಾತಿದೆ. ಅದರ ನೆಪಹಿಡಿದು ಹಿಂಬಾಲಿಸ ಹೊರಟವರಿಗೆ ಒದೆಗಳು ತಿನ್ನುವ ಅವಕಾಶ ಹೆಚ್ಚು. ಆದರೆ ನಿಷ್ಪಾಕ್ಷಿಕ ನಿದರ್ಶನಗಳು ಸ್ಪಷ್ಟ ಇರುವಲ್ಲಿ ಸನ್ನಡತೆಯ ವ್ಯಕ್ತಿಗಳಿಗೆ ಮೊದಲು ಬಿಡುಗಡೆ ಒದಗಿಸಲೇ ಬೇಕು; ಕಾನೂನಿನ ಆಶಯದ ಹಗ್ಗ ಜಗ್ಗಿದರೆ ‘ಕತ್ತೆ’ ಹಿಂಬಾಲಿಸುವುದು ಖಂಡಿತ. ಈ ನಾಟಕ ಪ್ರಯೋಗಗಳಲ್ಲಿ ‘ಲೆಕ್ಕದ ಹೊರಗಿನ’ (ಹೌದು, ಪ್ರದರ್ಶನದ ಹಿಂದಿನ ದಿನ ರಾತ್ರಿ ಹತ್ತೂವರೆಯವರೆಗೂ ಇವರು ಸ್ವಯಿಚ್ಛೆಯಿಂದ ಅಭ್ಯಾಸ ನಡೆಸಿದ್ದು ಸಾಮಾನ್ಯವೇ?) ದೈಹಿಕ ದಂಡನೆ ಇರಬಹುದು. ಆದರೆ ಗಳಿಸಿದ ಮಾನಸಿಕ ಬಲದ, ವಿಶಾಲ ಅರ್ಥದಲ್ಲಿ ಸಮಾಜಹಿತದ ಪಾಠ ವ್ಯರ್ಥವಾಗುವುದು ಸಾಧ್ಯವೇ ಇಲ್ಲ. ನಾಟಕ ನೋಡಿದ ನಾವೆಲ್ಲ, ನೋಡಲು ಸಮಯಾನುಕೂಲವಾಗದೆಯೂ ನಮ್ಮಿಂದ ಕೇಳಿದಷ್ಟಕ್ಕೆ, ಪತ್ರಿಕೆಗಳಲ್ಲಿ ಸೂಕ್ಷ್ಮವಾಗಿಯೇ ಆದರೂ ಓದಿದಷ್ಟಕ್ಕೆ ಕರಗಿದ ವಿಚಾರವಂತ ಸಾರ್ವಜನಿಕರೂ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ – “ಖೈದಿಗಳಲ್ಲಿ ಯೋಗ್ಯರನ್ನು ಪುರಸ್ಕರಿಸುವ ಕಾರ್ಯದಲ್ಲಿ ಇನ್ನೂ ವಿಳಂಬ ಮಾಡಬಾರದು. ಸನ್ನಡತೆ ತೋರಿದವರನ್ನು ಆಡಳಿತಾತ್ಮಕ ಬಂಧಗಳಲ್ಲಿ, ಪಕ್ಷರಾಜಕೀಯದ ಕಟ್ಟಿನಲ್ಲಿ, ಸಾಕಷ್ಟು ನವೆಯಿಸಿದ್ದಾಗಿದೆ; ಇನ್ನಾದರೂ ಬಿಡುಗಡೆ ಮಾಡಿ. ಬರುತ್ತಿರುವ ಆಗಸ್ಟ್ ಹದಿನೈದರ ಪಾವಿತ್ರ್ಯಕ್ಕೆ ಅರ್ಥ ತುಂಬುವಂತೆ, ಅರ್ಹ ಸನ್ನಡತೆಯ ಖೈದಿಗಳೆಲ್ಲರಿಗೂ ಸ್ವಾತಂತ್ರ್ಯದ ನಿಜಮೌಲ್ಯ ಅನುಭವವೇ ಆಗುವಂತೆ ಸ್ವಾತಂತ್ರ್ಯ ಕೊಡಿ.  ]]>

‍ಲೇಖಕರು G

August 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This