ಇದು ಒಬ್ಬ ನಿ೦ಗಪ್ಪನ ಕಥೆ ಅಲ್ಲ…

ಸಾಕ್ಷರತೆ – ನಾವು ಎಲ್ಲಿದ್ದೇವೆ? – ಪರೇಶ್ ಸರಾಫ್ ಆಫೀಸಿನಿಂದ ಮನೆಗೆ ಬರ್ತಾ ಇದ್ದೆ.. ರೋಡ ಮೇಲೆ ಒಬ್ಬ ಲಿಫ್ಟ್ ಕೊಡಿ ಎಂದು ಕೈ ತೋರಿಸಿದ. ಬೈಕ್ ನಿಲ್ಲಿಸಿದೆ. ಖುಷಿಯಿಂದ ಬಂದು ಕೂತ. ಹಾಗೆ ಮಾತಿಗೆ- “ಏನಪ್ಪಾ,, ಎಲ್ಲಿಯವರು ನೀವು?” ಎಂದಾಗ “ನಾವ್ ರಾಯಚೂರ್ ನವರು ರೀ ಸ್ವಾಮಿ” ಎಂದ.ಅಪ್ಪಟ ಕನ್ನಡಿಗ ಎಂದು ತಿಳಿದು ಬಹಳ ಆನಂದವಾಯಿತು.ಹೆಸರು ನಿಂಗಪ್ಪ. ಹಾಗೆ ಅವನ ಬಗ್ಗೆ ಕೇಳಿ ತಿಳಿದುಕೊಳ್ಳುವ ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದೆ. ಮೇಸ್ತ್ರಿ ಕೆಲಸ ಮಾಡುವುದಂತೆ. ಎಲ್ಲಿ ಕೆಲಸವಿದೆಯೋ ಅಲ್ಲೆಲ್ಲ ಸಂಸಾರ ಸಮೇತ ಹೋಗಿ ಅಲ್ಲೇ ಕಟ್ಟಡ ಕಟ್ಟುವ ಸ್ಥಳದ ಪಕ್ಕದಲ್ಲೇ ಟೆಂಟ್ ಹಾಕಿ ಉಳಿಯುವುದು. ಮತ್ತೆ ಅಲ್ಲಿ ಕೆಲಸ ಮುಗಿದ ಮೇಲೆ ಬೇರೆಡೆ ಮತ್ತೆ ಕೆಲಸ. ಎಲ್ಲೆಲ್ಲಿ ಹೋಗಿದ್ದೀರಿ ಎಂದು ಕೇಳಿದಾಗ, “ನಮಗೇನೂ ಗೊತ್ತಿಲ್ರೀ ಸ್ವಾಮೀ.. ಓನರ್ ಕರ್ಕೊಂಡು ಹೋಗೋ ಜಾಗಕ್ಕೆಲ್ಲ ಹೋಗ್ತೀವಿ” ಎಂದ. ಅವನ ಮುಗ್ಧತೆಯಿಂದ ಅವನಿಗೆ ಮತ್ತಷ್ಟು ಆಪ್ತನಾದೆ. ಮಾತು ಮುಂದುವರೆಯಿತು. ಎಷ್ಟು ಮಕ್ಕಳು ಎಂದು ಕೇಳಿದಾಗ. “ಮೂರು ಮಕ್ಕಳು ಸ್ವಾಮೀ” ಎಂದ. ಏನು ಓದುತ್ತಿದ್ದಾರೆಂದು ಕೇಳಿದಾಗ.-“ನಮಗೆಲ್ಲಿ ಸ್ವಾಮೀ ಓದು ಬರಹ.. ಅದೆಲ್ಲ ನಮಗೆ ಸರಿ ಹೊಂದಲ್ಲ” ಎಂದು ಖಡಾಖಂಡಿತವಾಗಿ ಹೇಳಿದ. ನನಗ್ಯಾಕೋ ಅವನ ಮಾತಿನ ಧಾಟಿ ಸರಿ ಎನ್ನಿಸದೇ ಚರ್ಚೆಗಿಳಿದೆ. ಆ ಚರ್ಚೆಯ ಕೆಲ ಆಯಾಮಗಳು ಹೀಗಿವೆ: ೧. ಮೊದಲನೆಯದಾಗಿ ಅವನು ಹೇಳಿದ್ದು, “ನಮ್ಮ ಹತ್ರ ಮಕ್ಕಳಿಗೆ ಕಲಿಸ್ಲಿಕ್ಕೆ ದುಡ್ಡಿಲ್ಲ ಸ್ವಾಮೀ.. ದುಡಿದಿದ್ದು ಊಟ ತಿಂಡಿಗೆ ಸಾಲಲ್ಲ, ಮತ್ತೆ ಕಲ್ಸೋ ಮಾತು ಎಲ್ಲಿಂದ ಬಂತು.” ಸರ್ಕಾರಿ ಶಾಲೆಗೆ ಕಳಿಸಿ. ಅಲ್ಲಿ ಎಲ್ಲಾ ಉಚಿತ. ನೀವೇನು ಖರ್ಚು ಮಾಡ್ಬೇಕಂತಿಲ್ಲ ಅಂತ ಹೇಳಿದೆ.” ಈಗ ಫ್ರೀ ಸ್ವಾಮೀ.. ಆಮೇಲೆ ೧೧ ನೆ ಕ್ಲಾಸ್, ಹನ್ನೆರಡನೆ ಕ್ಲಾಸ್ ತನಕ ಓದ್ತಾರೆ.. ಅದಾದ್ಮೇಲೆ ನಮ್ಹತ್ರ ಕಲ್ಸಕ್ಕೆ ಆಗಲ್ಲ. ಅಷ್ಟು ಓದಿದ್ದಕ್ಕೆ ನೌಕರೀನು ಸಿಗಲ್ಲ.. ಮತ್ತೆ ಮೇಸ್ತ್ರಿ ಕೆಲಸ ಮಾಡಕ್ಕೆ ಇಲ್ಲೇ ಬರ್ತಾರೆ. ಏನ್ ಉಪಯೋಗ ಆಯ್ತು ಅಂದ.” ೨. ಆಗ ನಾ ಕೊಟ್ಟ ಉತ್ತರ- ಕಲಿಯೋದು ಬರೀ ನೌಕರಿ ಮತ್ತು ದುಡ್ಡಿನ ಸಲುವಾಗಿ ಅಲ್ಲಪ್ಪ. ಮನೋ ವಿಕಸನಕ್ಕೆ, ಬದುಕಲು ಕಲಿಯೋದಕ್ಕೆ,ಮಾಡುವ ಕೆಲಸದಲ್ಲಿ ಕಲಿತದ್ದನ್ನು ಅಳವಡಿಸಿ ಮುಂದೆ ಬರುವುದಕ್ಕೆ. ಕಲಿತು ಮೇಸ್ತ್ರಿ ಕೆಲಸ ಮಾಡುವುದು ತಪ್ಪಲ್ಲ.. ಯಾವುದೇ ಕೆಲಸ ಮೇಲು ಕೀಳಲ್ಲ. ಆ ಕೂಡಲೇ ಅವ ಹೇಳಿದ- “ಸ್ವಾಮೀ, ಮಕ್ಳಿಗೆ ಕಲ್ಸಿ ಬಿಟ್ರೆ ಆಮೇಲೆ ಮೈ ಬಗ್ಗಿಸಲ್ಲ. ಇಂಥ ಕೆಲ್ಸಕ್ಕೆಲ್ಲ ಬರಲ್ಲ. ಆಮೇಲೆ ನೌಕರೀಗೂ ಹೋಗದೆ, ಕೆಲ್ಸಾನು ಮಾಡ್ದೆ ವೇಸ್ಟ್ ಆಗ್ಬಿಡ್ತಾರೆ” ಎಂದು. ೩. “ಊಟ ತಿಂಡಿಗೆ ದುಡ್ಡು ಸಾಲಲ್ಲ ಎಂದೆ. ನಿನ್ನ ಮಕ್ಳಿಗೂ ಇದೇ ಗತಿ ಬರಬೇಕಾ.. ಈಗ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸಿದರೆ ಮುಂದೆ ಅವರಾದರೂ ಸುಖವಾಗಿರ್ತಾರೆ” ಎಂದು ಹೇಳಿದೆ. ಅವನಿಗದು ಸ್ವಲ್ಪ ಸರಿ ಅಂತ ಅನಿಸಿದರೂ ಸಂಪೂರ್ಣ ಮನದಟ್ಟು ಆಗಲಿಲ್ಲ. “ನೀವು ಹೇಳಿದಷ್ಟು ಸುಲಭ ಇಲ್ಲಾ ಸ್ವಾಮೀ. ಊರೂರು ಸುತ್ತಾಡ್ತಾ ಇರ್ತೀವಿ. ತಿಂಗಳಿಗೊಂದು ಊರಲ್ಲಿ ಇರ್ತೀವಿ. ಅಂಥದ್ರಲ್ಲಿ ಶಾಲೆಗೆ ಕಳ್ಸೋದೆಲ್ಲ ಆಗಿ ಬರಂಗಿಲ್ಲ” ಅಂದ. ಅಷ್ಟರಲ್ಲಿ ಅವನು ಇಳಿಯಬೇಕಾದ ಜಾಗ ಬಂತು. ಸುಮ್ಮನೆ ಯೋಚಿಸಿದೆ.ಸಾಕ್ಷರತೆ, ಉಚಿತ ಶಿಕ್ಷಣ ಎಂದು ಸ್ಲೋಗನ್ನುಗಳನ್ನು ಹೇಳಿ ಹಿಗ್ಗುತ್ತೇವೆ. ಒಬ್ಬ ನಿಂಗಪ್ಪನ ಕಥೆ ಕೇಳಿದೆ.. ಆದರೆ ಅದೇ ಕಟ್ಟಡದ ನಿರ್ಮಾಣದ ಸ್ಥಳದಲ್ಲಿ ಇಂತಹ ಎಷ್ಟೋ ಕುಟುಂಬಗಳಿವೆ. ಬೆಂಗಳೂರಿನಲ್ಲಿ ಇಂಥ ಎಷ್ಟೋ ಕಟ್ಟಡ ನಿರ್ಮಾಣಗಳು ನಡೆಯುತ್ತವೆ. ಅದೆಷ್ಟು ಮಕ್ಕಳು ಹೀಗೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೋ? ಅಂಕಿ ಅಂಶಗಳಲ್ಲಿ ನಾವು ಮುಂದಿದ್ದರೂ, ಒಂದು ಮಗು ಶಿಕ್ಷಣದಿಂದ ವಂಚಿತನಾದರೂ ಅದು ಗಣನೀಯವೇ ಸರಿ. ಪ್ರತಿಯೊಬ್ಬ ಸುಶಿಕ್ಷಿತನಾಗುವ ವರೆಗೂ “ಸಾಕ್ಷರ ದೇಶ ನಮ್ಮದು” ಎಂದು ಎದೆ ತಟ್ಟಿಕೊಂಡು ಹೇಳುವುದು ನೈತಿಕವಲ್ಲ. ಇದಕ್ಕೆ ಪರಿಹಾರ ಹುಡುಕುವ ಕೆಲಸ ನಮ್ಮದಾಗಲಿ. ಇಂಥ ಮಕ್ಕಳನ್ನು ಶಾಲೆಯ ಮೆಟ್ಟಿಲು ಹತ್ತಿಸುವ ಪ್ರಚೋದನೆ ನೀಡೋಣ. ಇಂಥವರಿಗೊಸ್ಕರ ಯಾವುದಾದರೂ ಸ್ವಯಂ ಸೇವಾ ಸಂಸ್ಥೆಗಳಿದ್ದರೆ ಅದರ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ. ಸಾಕ್ಷರತೆಯ ಯಜ್ಞದಲ್ಲಿ ಎಲ್ಲರ ಹವಿಸ್ಸು ಇರಲಿ.]]>

‍ಲೇಖಕರು G

August 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. ಆಸು ಹೆಗ್ಡೆ

  ಚಿಂತನಾರ್ಹ ಬರಹ ಪರೇಶ್.
  ನಮ್ಮ ನಾಡಿನಲ್ಲಿ ವಿದ್ಯಾರ್ಹತೆಗೂ ನೌಕರಿಗೂ ತಳಕು ಹಾಕುವ ರೂಢಿ ಇದೆ.
  ನೌಕರಿ ಬರಿಯ ಒಂದು ಜೀವನೋಪಾಯ ಅನ್ನುವ ಸತ್ಯದ ಅರಿವಿಲ್ಲ.
  ಹಾಗಾಗಿ ಈ ಸಮಸ್ಯೆ.

  ಪ್ರತಿಕ್ರಿಯೆ
 2. Badarinath Palavalli

  ನಿಮ್ಮ ಆಶಯ ಚೆನ್ನಾಗಿದೆ. ಗ್ಯಾರೇಜುಗಳಲ್ಲಿ, ಹೋಟೆಲುಗಳಲ್ಲಿ, ಅಂಗಡಿಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ದುಡಿಯುವ ಬಾಲ ಕಾರ್ಮಿಕರಿಗೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ನಿಜವಾಗಲೂ ಕೆಲಸ ಆಗಬೇಕಾಗಿದೆ.

  ಪ್ರತಿಕ್ರಿಯೆ
 3. rajesh

  ಎಂತಹ ವಿಚಾರ , ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥ ಆಲೋಚನೆ.ನನಗೆ ನನ್ನ ಬಾಲ್ಯದ ನೆನಪು ಬಂತು. ಕಷ್ಟದಲ್ಲಿ ನನ್ನ ಅಪ್ಪ ಅಮ್ಮ ನನ್ನನು ಓದಿಸಿದ ಆ ಬಾಲ್ಯದ ನೆನಪು ಕಣ್ಣ ಮುಂದೆ ಬಂದಿತು. ಈಗಿನ ಕಾಲದಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಎ ಸರಿಯಾಗಿ ನಿಲ್ಲಿಸಲ್ಲ , ಅಂತಹದರಲ್ಲಿ ಯಾರೋ ಗುರುತು ಪರಿಚಯ ಇಲ್ಲದವರಿಗೆ ಡ್ರಾಪ್ ಮಾಡಿದ ನಿಮಗೆ ದೊಡ್ಡ ನಮಸ್ಕಾರ.ಕನ್ನಡದ ಬಗೆಗಿನ ನಿಮ್ಮ ಅಭಿಮಾನ ಮೆಚ್ಚಬೇಕಾದದ್ದು. ನನ್ನ ತರಹದ ಎಸ್ಟೋ ಯುವಕರಿಗೆ ನಿಮ್ಮ ಕವಿತೆ , ಬರಹ ದಾರಿದೀಪವಾಗಿದೆ.

  ಪ್ರತಿಕ್ರಿಯೆ
 4. Nagaratna Patagar

  ಉತ್ತಮ ವಿಚಾರ ಮತ್ತು ಆಶಯ ಪರೇಶ್. ನಿಜ ಇದು ಬರಿ ಒಬ್ಬ ನಿಂಗಪ್ಪನ ವಿಚಾರ ಮತ್ತು ಸಮಸ್ಯೆಯಲ್ಲ, ಇವತ್ತು ಕೇವಲ ಬೆಂಗಳೂರಿನಲ್ಲೇ ಎಷ್ಟೊಂದು ಜನ ನಿಂಗಪ್ಪನಂತಿದ್ದಾರೆ, ಎಷ್ಟೊಂದು ಕುಟುಂಬಗಳು ಈ ರೀತಿ ಊರೂರು ಅಲೆದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಇವತ್ತು ಬೆಂಗಳೂರಿನ ಬನಶಂಕರಿ ಬಡಾವಣೆಯಾದ್ರೆ ನಾಳೆ ಮಾರಾತ್ಹಳ್ಳಿಯ ಕಡೆ, ಆಮೇಲೆ ಬೆಂಗಳೂರಿಂದನೇ ಆಚೆ ಹೊರರಜ್ಯದಲ್ಲೋ, ಅಥವಾ ಬೇರೆ ನಗರದಲ್ಲೋ ಹೊಟ್ಟೆಪಾಡಿಗಾಗಿ ಕೆಲಸ. ಒಟ್ಟಿನಲ್ಲಿ ಹೇಳಬೇಕೆಂದ್ರೆ ಹೊಟ್ಟೆಪಾಡಿಗಾಗಿ ಅಲೆಮಾರಿ ಜೀವನ. ಈ ಪರಿಸ್ಥಿತಿಯಲ್ಲಿ ಮಕ್ಕಳು ವಿಧ್ಯಾಭ್ಯಾಸ ಮಾಡುವದಿರಲಿ, ಶಾಲೆಯ ಮುಖ ನೋಡುವುದು ಅವ್ರಿಗೆ ಕನಸಿದ್ದಂತೆ. ಕ್ರಮೇಣ ಈ ಮಕ್ಕಳು ಅಲ್ಲೇ ಜಲ್ಲಿ ಎತ್ತೊ ಕೆಲಸ ಇಲ್ಲಾಂದ್ರೆ ಅಲ್ಲೇ ಎಲ್ಲೋ ಹೊಟೇಲಲ್ಲಿ ಎಂಜಲೆತ್ತೋ ಕೆಲಸ,ಇಲ್ಲಾಂದ್ರೆ ಕೊನೆಯಲ್ಲಿ ಭಿಕ್ಷೆ ಬೇಡುವುದು ಇದು ಸರ್ವೇ ಸಾಮಾನ್ಯ. ಈ ರೀತಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ನೂರಾರು ಮಕ್ಕಳು ಬೆಂಗಳೂರು ಮಹಾನಗರದಲ್ಲೇ ಕಾಣಸಿಗತ್ತಾರೆ. ಈ ರೀತಿ ಅನಕ್ಷರಸ್ತರಾಗುತ್ತಿರುವ ಮಕ್ಕಳನ್ನು ಅಕ್ಷರಸ್ತರಾಗಿಸುವ ಕೆಲಸ ನಿಜ್ಜಕ್ಕೂ ನಡಿಯಬೇಕಾಗಿದೆ. ನಮ್ಮ ದೇಶದ ಅಭಿವೃದ್ದಿಗೆ ಇದೊಂದು ಮಹತ್ತರ ಹೆಜ್ಜೆ ಎನ್ನುವುದು ನನ್ನ ಅಭಿಪ್ರಾಯ .

  ಪ್ರತಿಕ್ರಿಯೆ
 5. Seema Burde

  Intaha chintanaarha ghatanegaLu tumba ive..ivella nODi mana karaguvudantu nija.. hottepaaDigaagi uLida janara unnatobhivrudhige tamma jeevanavannu teyuttiruvavara makkaLu shikshaNadinda vanchitaraaguttare..aadare idella kaNNige tOchidaru Ningappanantavaru odslikke kashta aagatte anta yochisi makkaLige moolabhoota avashyakateyannu pooraisalu shikshanadindaane vanchitarannagi maaDi bidtaare.. idu ondu shochaneeya vyathe.. raatri shaala paripaatha upayogakke barabahudemba aashaya..

  ಪ್ರತಿಕ್ರಿಯೆ
 6. savitri

  ನಿಜವಾಗಿಯೂ ಸುಮ್ಮನೆ ಈ ಸಮಸ್ಯೆ ಬಗ್ಗೆ ಬರೆಯೋದು, ಅದನ್ನು ಓದಿ ಅಭಿಪ್ರಾಯ ಹಂಚಿಕೊಳ್ಳುವುದಕ್ಕಿಂತ ಪರಿಹಾರಾತ್ಮಕ ಕಾರ್ಯ ಕೈಗೊಳ್ಳುವುದು ಸ್ವಲ್ಪ ಕಷ್ಟವೇ ಅನ್ನಿಸುವುದು. ಕೆಲಸ ಇದ್ದಲ್ಲಿಗೆ ಗುಳೆ ಎದ್ದು ಹೋಗುವ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಗಗನಕುಸುಮ ಆಗ್ತಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಬದುಕಿನ ಬಂಡಿ ನಡೆಸುತ್ತಿರುವ ಕುಟುಂಬಗಳ ಮಕ್ಕಳಿಗೆ ಅವರಿದ್ದಲ್ಲಿಗೆ ಹೋಗಿ ಪಾಠ ಮಾಡುವಂತಹ ಸರಕಾರೇತರ ಸಂಸ್ಥೆ ಒಂದು ಏನಾದರೂ ಇದೆಯಾ? ಅಥವಾ ಅಂತಹ ಒಂದು ಸಂಸ್ಥೆಯನ್ನು ಹುಟ್ಟು ಹಾಕುವುದಕ್ಕೆ ಎಲ್ಲ ರೀತಿಯಿಂದ ತ್ರಾಣ ಇದ್ದವರು ಯಾಕೆ ಮುಂದೆ ಬರಬಾರದು? ಇನ್ನೊಂದು ವಿಚಾರ ಸರಕಾರವೇ ಇಂತಹ ಜನರ ಮಕ್ಕಳಿಗಾಗಿ ಸಂಚಾರಿ ಶಿಕ್ಷಕರನ್ನು ಏಕೆ ನೇಮಿಸಿಕೊಳ್ಳಬಾರದು?

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಆಸು ಹೆಗ್ಡೆCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: