ಇದು ಮಸಣದಲ್ಲಿ ಮಾಂಸದ ಪಾಲಿಗೆ ಯುದ್ಧ…!

ಯುದ್ಧ ಎಂದಾಕ್ಷಣ ಕಿವಿ ನೆಟ್ಟಗಾಗಿ, ಯಾವಾಗ ಯಾರೊಟ್ಟಿಗೆ, ಹೇಗೆ ಯುದ್ಧ ಮಾಡಬೇಕೆಂಬ ಮಂಡಿಗೆ ತಿನ್ನುವುದರಲ್ಲೇ ದೇಶ ಮಗ್ನವಾಗಿರುವಾಗ ಮೊನ್ನೆ ಸಿಎಜಿ ವರದಿಯೊಂದು ದೇಶದಲ್ಲಿರುವ ಹತ್ಯಾರುಗಳು ಏನೇನೂ ಸಾಲದೆಂದದ್ದು ಭಾರೀ ಸುದ್ದಿ ಆಗಿದೆ.

ಹಾಲಿ ಸರಕಾರ ಬಂದ ತಕ್ಷಣ ಮಾಡಿದ ಮೊದಲ ಕೆಲಸಗಳಲ್ಲೊಂದು – ರಕ್ಷಣಾ ಇಲಾಖೆ ಇರುವ ಸೌತ್ ಬ್ಲಾಕಿಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ನಿಯಂತ್ರಿಸಿದ್ದು. ಈಗ ಸಿಎಜಿ ವರದಿ ಬೆನ್ನಲ್ಲೇ ಮಾಧ್ಯಮಗಳು ಸೀಳುನಾಯಿಗಳಂತೆ ಆ ವರದಿಯನ್ನು ಹರಿದುಮುಕ್ಕುತ್ತಿವೆ. ಈ ಚಾಪೆ-ರಂಗೋಲಿಗಳಡಿ ಇನ್ನೂ ಯಾವ್ಯಾವ ಸ್ಕೀಮುಗಳಿವೆಯೋ ಯಾರು ಬಲ್ಲರು? ಅಂದಹಾಗೆ, ಈಗ ಯುದ್ಧ ಬೇಕಾದದ್ದು ಯಾರಿಗೆ?!!

ವರ್ಷಪೂರ್ತಿ ತನ್ನ ಆಡಿಟ್ ವರದಿಗಳನ್ನು ಪ್ರಕಟಿಸುತ್ತಲೇ ಇರುವ ಸಿಎಜಿ ಸುದ್ದಿಮಾಡುವುದು ಯಾವತ್ತಾದರೊಮ್ಮೆ ಗ್ಯಾಲರಿಯತ್ತ ಸಿಕ್ಸರ್ ಬಾರಿಸಿದಾಗ ಮಾತ್ರ. ಈಗ ಹೊರಬಂದಿರುವ ಡಿಫೆನ್ಸ್ ಆಡಿಟ್ ಅಂತಹದೇ ಒಂದು ಸಿಕ್ಸರ್. ಇದೇ ಸಿಎಜಿ ಈ ವರ್ಷ ಮಾರ್ಚ್ ಅಂತ್ಯಕ್ಕೆ ಕ್ರಷಿ ಇಲಾಖೆಯದೂ ಒಂದು ವರದಿ ಪ್ರಕಟಿಸಿತ್ತು. ಅದು ನಮ್ಮ ಹೊಟ್ಟೆತುಂಬಿದ ಮಾಧ್ಯಮಗಳಿಗೆ ಫಾಯಿದೆ ಇಲ್ಲದ ವರದಿ. ದೇಶದಲ್ಲಿ ರೈತರು ಹೇಳಹೆಸರಿಲ್ಲದೆ ಜೀವ ಕಳೆದುಕೊಳ್ಳುತ್ತಿರುವ ಈ ಹಂತದಲ್ಲಿ ಕೇಂದ್ರ ಸರ್ಕಾರದ ಕ್ರಷಿ ವಿಮೆ ಯೋಜನೆ ಹೇಗೆ ಕಾರ್ಯಾಚರಿಸುತ್ತಿದೆ ಎಂಬುದರ ಮೌಲ್ಯಮಾಪನ ಈ ವರದಿಯಲ್ಲಿದೆ. 1985 ರಿಂದಲೂ ಬೇರೆ ಬೇರೆ ಹೆಸರುಗಳಲ್ಲಿ ಚಾಲ್ತಿ ಇರುವ ಬೆಳೆ ವಿಮೆ ಈಗ 2016ರಿಂದೀಚೆಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನಾ ಎಂಬ ಹೆಸರಲ್ಲಿ ಚಾಲ್ತಿ ಇದೆ.

ಈ ಯೋಜನೆಯ ಕಾರ್ಯವಿಧಾನದ ಬಗ್ಗೆ ಕೆಲವು ಒಳನೋಟಗಳು ಇಲ್ಲಿವೆ:

* ರೈತನಿಗೆ ಬೆಳೆನಷ್ಟ ಸಂಭವಿಸದಂತೆ ನೋಡಿಕೊಳ್ಳಲು ಉದ್ದೇಶಿಸಿರುವ ಈ ಬೆಳೆ ವಿಮೆ ಯೋಜನೆಗಳು ತಮ್ಮ ಮೂಲ ಉದ್ದೇಶವನ್ನೇ ಮರೆತು, ಬ್ಯಾಂಕುಗಳಿಗೆ ಕೊಟ್ಟ ಬೆಳೆ ಸಾಲ ನಷ್ಟ ಆಗದಂತೆ ನೋಡಿಕೊಳ್ಳುವ ಯೋಜನೆಗಳಾಗಿಬಿಟ್ಟಿವೆ ಎಂಬುದಕ್ಕೆ ಅಂಕಿ ಅಂಶಗಳು ಲಭ್ಯವಿವೆ. ಎಲ್ಲ ವಿಧದ ರೈತರಿಗೆ ಸಿಗಬೇಕಾಗಿದ್ದ ಬೆಳೆಸಾಲವನ್ನು ಬ್ಯಾಂಕಿನಲ್ಲಿ ಸಾಲ ಮಾಡಿರುವ ರೈತರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಬ್ಯಾಂಕು ಸಾಲ ಇಲ್ಲದ ರೈತರು, ಇನ್ನೊಬ್ಬರ ಹೊಲದಲ್ಲಿ ತಮ್ಮ ಬೆಳೆ ಬೆಳೆದುಕೊಳ್ಳುವವರು, ಭೂರಹಿತ ಕ್ರಷಿ ಕೆಲಸಗಾರರು ಇವರೆಲ್ಲ ಸರ್ಕಾರದ ಲೆಕ್ಕದಲ್ಲೇ ಇಲ್ಲ! ಹಾಗಾಗಿ ಅವರಿಗೆ ವಿಮೆಯೂ ಇಲ್ಲ!!

* ಕೇಂದ್ರ ಕ್ರಷಿ ಇಲಾಖೆಯು ಭಾರತೀಯ ಕ್ರಷಿ ವಿಮಾ ಕಂಪನಿ (AICIL) ಮೂಲಕ ರಾಜ್ಯಗಳು ಮತ್ತು ಜಿಲ್ಲಾಡಳಿತಗಳ ಸಹಕಾರದಿಂದ ಈ ವಿಮಾ ಯೋಜನೆಯನ್ನು ನಡೆಸುತ್ತಿದೆ. ಕ್ರಷಿ ಇಲಾಖೆಯಿಂದ ಬಿಡುಗಡೆ ಆದ ದುಡ್ಡು ರಾಜ್ಯಗಳ ಮೂಲಕ ವಿಮಾ ಕಂಪನಿಗಳನ್ನೋ, ಬ್ಯಾಂಕುಗಳನ್ನೋ ತಲುಪುವ ಹೊತ್ತಿಗೆ ತೀರಾ ವಿಳಂಬವಾಗಿ ಊಟಕ್ಕಿಲ್ಲದ ಉಪ್ಪಿನಕಾಯಿಗಳಾಗಿಬಿಟ್ಟಿರುತ್ತವೆ; ಇದಕ್ಕೆ ಯಾವುದೇ ನಿಯಂತ್ರಣ ಇಲ್ಲ.

* ಈ ವಿಮೆಯನ್ನು ಕೆಲವು ಖಾಸಗಿ ವಿಮಾ ಕಂಪನಿಗಳಿಗೂ ವಹಿಸಲಾಗಿದೆ. ಅವುಗಳಿಗೆ ಯಾವುದೇ ನಿಯಂತ್ರಣ ಇಲ್ಲ, ಅವು ಸಿಎಜಿ ವ್ಯಾಪ್ತಿಗೂ ಬರುವುದಿಲ್ಲ. ಉದಾಹರಣೆಗೆ ಹರ್ಯಾಣದಲ್ಲಿ ಐಸಿಐಸಿಐ ಲೋಂಬಾರ್ಡ್, ರಿಲಯನ್ಸ್ ಜನರಲ್ ಇನ್ಸೂರೆನ್ಸ್, ಬಜಾಜ್ ಆಲಿಯನ್ಸ್ ಸಂಸ್ಥೆಗಳಿಗೆ ಈ ವಿಮೆ ವಿತರಣೆ ಜವಾಬ್ದಾರಿಯನ್ನು ನೀಡಲಾಗಿದೆ ಆದರೆ ಅವು ಆ ಕೆಲಸವನ್ನೇ ಮಾಡಿಲ್ಲ. ಆದರೂ ಅವನ್ನು ಇನ್ನೂ ಸರ್ಕಾರ ತನ್ನ ಪಟ್ಟಿಯಿಂದ ಕೈಬಿಟ್ಟಿಲ್ಲ. 2011-16 ನಡುವೆ ದೇಶದಾದ್ಯಂತ ಈ ಖಾಸಗಿ ಕಂಪನಿಗಳಿಗೆ 3622.79 ಕೋಟಿ ರೂಪಯಿಗಳ ಪ್ರಿಮಿಯಂ ಸಬ್ಸಿಡಿ ಒದಗಿಸಲಾಗಿದೆ. ಆದರೆ ಏನು ಕೆಲಸ ಆಗಿದೆ ಎಂಬ ಬಗ್ಗೆ ಸರ್ಕಾರದ ಕಡೆಯಿಂದಲೂ ಯಾವುದೇ ಪರಿಶೀಲನೆ ಆಗಿಲ್ಲ.

* 2011ರ ಜನಗಣತಿ ಪ್ರಕಾರ ದೇಶದಲ್ಲಿ 4.86ಕೋಟಿ ರೈತರಿದ್ದು, ಅವರಲ್ಲಿ 83%  ಅಂದರೆ, 4.04 ಕೋಟಿ ಮಂದಿ ಸಣ್ಣ ಹಾಗೂ ಅತಿಸಣ್ಣ ರೈತರು. ಇವರು ಈ ಬೆಳೆಸಾಲದ ವ್ಯಾಪ್ತಿಗೆ ಬಂದಿರುವುದು ಬರೇ 1-24% ನಷ್ಟು ಮಾತ್ರ. ಅಂದರೆ, ಬೆಳೆಸಾಲದ ಲಾಭ ಪಡೆಯುತ್ತಿರುವುದು ರೈತರಲ್ಲ, ಬದಲಾಗಿ ಕಾರ್ಪೋರೇಟ್ ಫಾರ್ಮಿಂಗ್ ನಲ್ಲಿರುವವರು ಮತ್ತು ದೊಡ್ಡ ರೈತರು.

* ರೈತನಿಗೆ ತನ್ನ ಬೆಳೆಯ 150% ಪಾಲು ವಿಮೆ ಮಾಡುವ ಅವಕಾಶ ಇದ್ದರೂ ಬ್ಯಾಂಕುಗಳು ಕೇವಲ ತಮ್ಮ ಸಾಲದ ಮೊತ್ತಕ್ಕೆ ಹೊಂದಿಸಿಕೊಂಡು ವಿಮೆ ನೀಡುತ್ತಿವೆ ಎಂಬುದು ಒಂದೆಡೆಯಾದರೆ, ಇನ್ನೊಂದೆಡೆ ಬೆಳೆ ಬೆಳೆದ ಜಾಗಕ್ಕಿಂತ ಹೆಚ್ಚಿನ ಪ್ರಮಾಣದ ಜಾಗಕ್ಕೆ ವಿಮೆ ಮಾಡಿರುವುದೂ ವ್ಯಾಪಕವಾಗಿ ನಡೆದಿದೆ.

* ಹಿಂದಿನ ಸರ್ಕಾರಗಳ ಹಳೆಯ ಬೆಳೆ ವಿಮೆ ಸ್ಕೀಮುಗಳದೇ ಅಪಾರ ಕ್ಲೇಮ್ ಇನ್ನೂ ರೈತರಿಗೆ ಸಿಗದೇ ಕೊಳೆಯುತ್ತಾ ಬಿದ್ದಿದೆ. NAIS ಯೋಜನೆಯಡಿ 7010 ಕೋಟಿ ರೂ. MNAIS ಯೋಜನೆಯಡಿ 332.45 ಕೋಟಿ ರೂ ಮತ್ತು WDCIS ಯೋಜನೆಯಡಿ 999.28 ಕೋಟಿ ರೂಪಾಯಿ ಕ್ಲೇಮುಗಳು 2016 ಆಗಸ್ಟ್ ವೇಳೆಗೆ ರೈತರಿಗೆ ಸಿಗದೇ ಕೊಳೆತುಬಿದ್ದಿವೆ.

* ಐಸಿಐಸಿಐ ಲೊಂಬಾರ್ಡ್ ಸಂಸ್ಥೆ 2012-13ರಲ್ಲಿ 21,875ರೈತರಿಂದ 2.35 ಕೋಟಿ ರೂಪಾಯಿಗಳ ವಿಮಾ ಪ್ರಿಮಿಯಂ ಸಂಗ್ರಹಿಸಿತ್ತು. ಅದರಲ್ಲಿ ದಾಖಲೆಗಳು ಸರಿಯಾಗಿಲ್ಲ ಎಂಬ ಕಾರಣಕ್ಕಾಗಿ 14,753ರೈತರಿಗೆ ವಿಮೆ ನಿರಾಕರಿಸಿತ್ತು. ಆದರೆ 2017 ಮಾರ್ಚ್ ತನಕವೂ ಆ ನಿರಾಕರಿಸಿದ ರೈತರಿಗೆ ಅವರ ಅಸಲು ಪ್ರಿಮಿಯಂ ಹಣವನ್ನೂ ವಿಮಸಂಸ್ಥೆ ಹಿಂದಿರುಗಿಸಿಲ್ಲ ಎಂದು ಸಿಎಜಿ ವರದಿ ಬೊಟ್ಟುಮಾಡುತ್ತದೆ. ಇದು ಸುಮಾರು 1.4 ಕೋಟಿ ರೂಪಾಯಿಗಳಷ್ಟಾಗುತ್ತದೆ.

*  ಗಮನಿಸಬೇಕಾದ ಸಂಗತಿ ಎಂದರೆ, ಈ ಸಿಎಜಿ ವರದಿ ಬಂದಿರುವುದು ಕೇವಲ 9ರಾಜ್ಯಗಳ ಆಡಿಟ್ ನಡೆಸಿ. ಇನ್ನುಳಿದ ರಾಜ್ಯಗಳ ಕಥೆ ಇದಕ್ಕಿಂತ ಭಿನ್ನವಂತೂ ಇರಲಾರದು. ರೈತರ ಸಂಕಟ- ಆತ್ಮಹತ್ಯೆಗಳಿಗೆ ಮೊಸಳೆ ಕಣ್ಣೀರಿನಿಂದಾಚೆಗೆ ಬೇರೇನಾದರೂ ನಮ್ಮ ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳಿಂದ ಸಿಕ್ಕಿದ್ದಿದೆಯೇ?

‍ಲೇಖಕರು sakshi

July 24, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹುಲಿಹೊಂಡದ ಹುಲಿಯಪ್ಪ ನೆನಪು

ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: