ಇದು 'ಯಾನ'

ಜಿ ಎನ್ ಮೋಹನ್
(ಇಂದಿನ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ)

ರವೀಂದ್ರ ರೇಷ್ಮೆ ಅಚಾನಕ್ಕಾಗಿ ಹಲವು ವರ್ಷಗಳ ನಂತರ ಮಾತಿಗೆ ಸಿಕ್ಕರು. ಅಗ್ನಿ ಬಸವರಾಜುಗೆ ಆಗ ತಾನೇ ಫೋನ್ ತಿರುಗಿಸಿ ಕೂತಿದ್ದೆ. ನನ್ನ ಟೇಬಲ್ ಮೇಲೆ ವಿರಾಜಮಾನವಾಗಿರುವ ‘ಸಿನೆಮಾ ಯಾನ’ವನ್ನು ಎಷ್ಟು ಮುದ್ದಾದ ಪ್ರಿಂಟಿಂಗ್ ಎಂದು ತಿರುವಿ ಪಕ್ಕಕ್ಕಿಟ್ಟಿದ್ದೆ. ಚಿದಂಬರ ಬೈಕಂಪಾಡಿ ಬರೆದ ‘ಮುಂಗಾರು’ ಪುಸ್ತಕದ ಹಸ್ತಪ್ರತಿ ಓದುತ್ತಾ ಇದ್ದೆ ಅಲ್ಲಿ ಕೆ.ಪುಟ್ಟಸ್ವಾಮಿ ಹೆಸರು. ಇಷ್ಟೆಲ್ಲಾ ಆಗುವ ವೇಳೆಗೆ ದಿಲ್ಲಿಯಿಂದ ಅಲ್ಲಿನ ವಾರ್ತಾ ಅಧಿಕಾರಿ, ಗೆಳೆಯ ಗಿರೀಶ್ ಫೋನ್ ಮಾಡಿದ ಕೆ. ಪುಟ್ಟಸ್ವಾಮಿ ಅವರ ’ಸಿನೆಮಾಯಾನ’ಕೃತಿಗೆ ’ಸ್ವರ್ಣಕಮಲ’ ಬಂದಿದೆ ಅಂತ. ಒಂದು ಒಳ್ಳೆಯ ಸುದ್ದಿಯ ಹಿಂದೆ  ಎಷ್ಟೆಲ್ಲಾ ಕೊಂಡಿಗಳು!!.

ಓದಿದ್ದು ಕೃಷಿ, ಸೇರಿದ್ದು ಪತ್ರಿಕೋದ್ಯಮ, ಬರೆದದ್ದು ಪರಿಸರದ ಬಗ್ಗೆ, ಪ್ರಶಸ್ತಿ ಗೆದ್ದದ್ದು ಚಿತ್ರರಂಗದ ಬರಹಕ್ಕೆ… ಇದು ಡಾ.ಕೆ.ಪುಟ್ಟಸ್ವಾಮಿಯ ಅತ್ಯಂತ ಬ್ರೀಫ್ ಪರಿಚಯ. ಬಿ.ವಿ.ಕಾರಂತರು ರಂಗಾಯಣದ ಅಂಗಳದಲ್ಲಿ ಕುಳಿತು ಒಮ್ಮೆ ನನ್ನೊಡನೆ ಮಾತನಾಡುತ್ತಾ ‘ಒಬ್ಬ  ಕಲಾವಿದ ಎನ್ನುವವನು ಭಿಕ್ಷುಕನ ಜೋಳಿಗೆಯಿದ್ದಂತೆ. ದಾರಿಯಲ್ಲಿ ಸಿಕ್ಕಿದ್ದೆಲ್ಲಾ ಆತ ತುಂಬಿಕೊಳ್ಳುತ್ತಾ ಹೋಗಬೇಕು’ ಎಂದಿದ್ದರು. ಅದು ಒಬ್ಬ ಪತ್ರಕರ್ತನ ವಿಷಯದಲ್ಲೂ ಅಷ್ಟೇ ನಿಜ. ಪುಟ್ಟಸ್ವಾಮಿ ಎಷ್ಟೆಲ್ಲಾ ವಿಷಯಗಳನ್ನು ಅರಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಅವರ ಈ ನಡೆ ಸಾಕ್ಷಿ.

’ವಿಕ್ರಾಂತ ಕರ್ನಾಟಕ’ದಲ್ಲಿ ಈ ಸಿನೆಮಾ ಯಾನ ಧಾರಾವಾಹಿಯಾಗಿ ಆರಂಭವಾದಾಗಲೇ ಅದು ಸಾಕಷ್ಟು ಓದುಗರ ಗಮನ ಸೆಳೆದಿತ್ತು. ಅಗ್ನಿ ಬಸವರಾಜು ಇದನ್ನು ಪುಸ್ತಕವಾಗಿ ಕಟ್ಟಿಕೊಟ್ಟ ರೀತಿಯಂತೂ ಇನ್ನೂ ಒಂದಷ್ಟು ಘನತೆ ತಂದುಕೊಟ್ಟಿತು. ನನಗೆ ಸದಾ ಇಷ್ಟವಾಗುವ, ಒಳ್ಳೆಯ ಮುನ್ನೋಟದ ಎನ್. ಎಸ್. ಶಂಕರ್  ’ಉಜ್ವಲ ಸಿನೆಮಾ ಧ್ಯಾನ’ ಎನ್ನುವ ಒಂದು ಮುನ್ನುಡಿ ಈ ಪುಸ್ತಕಕ್ಕೆ ಬರೆದಿದ್ದಾರೆ. ಪುಟ್ಟಸ್ವಾಮಿ ಎಂಬ ‘ಸಿನೆಮಾಪೋತ’ನ ಬಗ್ಗೆ ಶಂಕರ್ ಅಲ್ಲದೆ ಇನ್ನಾರು ಇಷ್ಟು ಚೆನ್ನಾಗಿ ಬರೆಯಬಲ್ಲರು?.
ಪುಟ್ಟಸ್ವಾಮಿ ಈ ಪುಸ್ತಕ ಬರೆಯುವಾಗ ಸ್ಪಷ್ಟವಾಗಿ ಹೇಳುತ್ತಾರೆ- ಇದು ಚಿತ್ರರಂಗದ ಒಂದು ರಸಯಾತ್ರೆ; ಚರಿತ್ರೆ ಅಲ್ಲ’ ಅಂತ. ಚರಿತ್ರೆ ಬರೆಯ ಹೊರಟವರು ತಮಗೆ ಕಂಡ ಅರ್ಧಸತ್ಯಗಳನ್ನು, ಬೇಕೆಂದೇ ಬರೆವ ವಿಚಿತ್ರ ಸತ್ಯಗಳನ್ನು, ಮುಂದಿನ ಜನಾಂಗಕ್ಕೆ ಕೂಡಿಸಿಡುವ ಸುಳ್ಳು ಕಂತೆಗಳನ್ನು ಅಥವಾ ಮತ್ತೊಂದು ಗಣಿತ ಪುಸ್ತಕವೇನೋ ಎಂಬಂತೆ ಇಡಿಕಿರಿದು ಬಿಡುವ ಅಂಕೆ ಸಂಖ್ಯೆಗಳನ್ನು ಕಂಡಿರುವ ನಮಗೆ ಈ ರಸಯಾತ್ರೆಯೇ ಇಷ್ಟ. ಇದು ರಸಯಾತ್ರೆ ಮಾತ್ರ ಅಲ್ಲ ಶಂಕರ್ ಬರೆದಂತೆ ಇದೊಂದು ಸಿನೆಮಾ ಕುರಿತ ಉಜ್ವಲ ಧ್ಯಾನ.
ಪುಟ್ಟಸ್ವಾಮಿ, ಚಂದ್ರಶೇಖರ ಗುಬ್ಬಿ, ಕೃಪಾಕರ, ಸೇನಾನಿ, ಎನ್.ಎಸ್.ಶಂಕರ್ ಹೀಗೆ ಒಂದು ಸದಭಿರುಚಿಯ ಗ್ಯಾಂಗ್ ಸೃಷ್ಟಿಸುತ್ತಿರುವ ಈ ಕೆಲಸಗಳು ಕನ್ನಡದ ಎಲ್ಲಾ ರಂಗಗಳನ್ನು ಒಂದು ಹೆಜ್ಜೆ ಬೆಳಸುತ್ತಿದೆ. ಈ ಗ್ಯಾಂಗ್ ತಮ್ಮನ್ನು ಬೆನ್ನು ತಟ್ಟಿಕೊಳ್ಳುತ್ತಾ ಬೆಳೆದವರಲ್ಲ. ಪರಸ್ಪರ ಸಂವಾದ, ಚರ್ಚೆ, ಜಗಳಗಳ ಮೂಲಕ ಬೆಳೆದವರು. ಅದಕ್ಕೆ ಮುನ್ನುಡಿ ಬರೆದ ಶಂಕರ್ ’ಜಗಳವಾಡಲೂ ಈ ಪುಟಗಳಲ್ಲಿ ಅವಕಾಶಗಳಿವೆ’ ಎಂಬುದನ್ನು ಸಾರಿದ್ದಾರೆ. ಒಂದು ಕೃತಿಗಿರಬೇಕಾದ ಶಕ್ತಿಯೇ ಅದು. ಅದು ಭಿನ್ನ ಅಭಿಪ್ರಾಯಕ್ಕೆ, ಸಂವಾದಕ್ಕೆ ಓದುಗರನ್ನು ಆಹ್ವಾನಿಸಬೇಕು.
ಪುಟ್ಟಸ್ವಾಮಿ ಕನ್ನಡಕ್ಕೆ ಮೊದಲ ಬಾರಿಗೆ ಸಿನೆಮಾ ಕುರಿತ ಬರಹಕ್ಕೆ ಸ್ವರ್ಣ ಕಮಲ ತಂದುಕೊಟ್ಟಿದ್ದಾರೆ. ಆ ಮೂಲಕ ಎದುರಿಸಿದ ಮೊದಲ ಬಾಲ್‌ನಲ್ಲಿಯೇ ಸಿಕ್ಸರ್ ಎತ್ತಿದ್ದಾರೆ. ಹಾಗೆ ಸಿಕ್ಸರ್ ಎತ್ತುವುದು ಪುಟ್ಟಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತು. ಏಕೆಂದರೆ, ಅವರು ಕ್ರೀಡಾ ಜಗತ್ತಿನ ವಿಸ್ಮಯ, ಪು ಳಕವನ್ನು ಅನಾವರಣ ಮಾಡುವ ’ಭುವನದ ಬೆಡಗು’ ಸಹಾ ಬರೆದಿದ್ದಾರೆ.
ಹೀಗೆಲ್ಲಾ ಅಂದುಕೊಳ್ಳುತ್ತಿರುವಾಗಲೇ ಮ್ಯಾಂಚೆಷ್ಟರ್‌ನಿಂದ ಪ್ರೊ.ಬಿ.ಎ.ವಿವೇಕ ರೈ ಅವರು ಫೇಸ್‌ಬುಕ್‌ನಲ್ಲಿ ಪುಟ್ಟಸ್ವಾಮಿಯವರನ್ನು ಅಭಿನಂದಿಸುತ್ತಾ ‘ಕನ್ನಡ ವಿಶ್ವವಿದ್ಯಾಲಯದ ಡಾಕ್ಟರೇಟ್‌ಗೊಂದು ಕೀರ್ತಿ ತಂದಿರಿ’ ಎಂದಿದ್ದರು. ಕೆ.ವಿ ನಾರಾಯಣ್ ಹೇಳಿದಂತೆ ಲವಲವಿಕೆಯ ಬರಹವೊಂದು ಕನ್ನಡಕ್ಕೆ ದಕ್ಕಿದೆ.
ಇಷ್ಟೆಲ್ಲಾ ಹೇಳುವಾಗ ಪುಟ್ಟಸ್ವಾಮಿ ಈ ಪುಸ್ತಕವನ್ನು ಅರ್ಪಿಸಿರುವುದು ಯಾರಿಗೆ? ಎನ್ನುವ ಕುತೂಹಲ ಯಾಕೋ ಬಂತು. ಪುಟ ತಿರುಗಿಸಿದೆ. ‘ಸುಳ್ಳು ಹೇಳಿ ಕಾಸು ಕೊಡಿಸಿ, ಎಳನೀರು ಕದ್ದು ಮಾರಿ, ದುಡ್ಡು ಮಾಡಿ, ಹೋಟೆಲಿನ ಸಂಬಳದಲ್ಲಿ ವಸಿ ಮಿಗಿಸಿ, ಅತ್ತೆ ಮಾವ ಕಾಣದಂತೆ ಗಂಡನನ್ನು ಪುಸಲಾಯಿಸಿ, ಹೀಗೆ…. ಏನನ್ನೂ ನಿರೀಕ್ಷಿಸದೆ ಬರೀ ಒಂದೇ ಅಭಿಮಾನದಿಂದ ಚಿತ್ರಗಳನ್ನು ನೋಡುತ್ತಾ, ಕನ್ನಡ ಚಿತ್ರರಂಗವನ್ನು ಉಳಿಸುತ್ತಾ ಬಂದ ಕನ್ನಡ ಪ್ರೇಕ್ಷಕ ಪ್ರಭುಗಳಿಗೆ, ಅವರ ಅಖಂಡ ಅಭಿಮಾನಕ್ಕೆ…’ ಪುಸ್ತಕವನ್ನು ಅರ್ಪಿಸಿದ್ದರು.
ಅಂತಹ ಪ್ರೇಕ್ಷಕ ಪ್ರಭುಗಳ ಅರಿವನ್ನು ವಿಸ್ತರಿಸಿದ, ತಿದ್ದಿದ ಪುಟ್ಟಸ್ವಾಮಿ ಅವರಿಗೆ ನನ್ನದೊಂದು ಸಲಾಂ!.

‘ಪಾ’ ಕುರಿತ ಸುಘೋಷ್ ಎಸ ನಿಗಳೆ ಲೇಖನಕ್ಕೆ
ಪುಟಾಣಿ ಪಾರ್ಟಿ ಕುರಿತ ಜಯಲಕ್ಷ್ಮಿ ಪಾಟೀಲ್ ಅವರ ಲೇಖನಕ್ಕೆ-
ಭೇಟಿ ಕೊಡಿ- ಮ್ಯಾಜಿಕ್ ಕಾರ್ಪೆಟ್

‍ಲೇಖಕರು avadhi

September 19, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

Trackbacks/Pingbacks

  1. ಕನ್ನಡಕ್ಕೆ ಪ್ರಪ್ರಥಮ ಬಾರಿ ಸಿನೆಮಾ ಕುರಿತ ಪುಸ್ತಕಕ್ಕೆ ಸ್ವರ್ಣಕಮಲ « ಪುಸ್ತಕ ಪ್ರೀತಿ - [...] ಹಸಿರು ಪ್ರಕಾಶನ. ಹೆಚ್ಚಿನ ವಿವರಗಳಿಗೆ ಇದು ‘ಯಾನ’ ಕ್ಕೆ ಭೇಟಿ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: