ಇದು ‘ಸಕಾಲ’…

img_9628.jpg 

‘ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ನಂಬಿಕೆಯೊಂದಿಗೆ ಒಂದು ಪತ್ರಿಕೆ ಕುಡಿಯೋದೆದಿದೆ. ಇದರ ಹೆಸರೇ ‘ಸಕಾಲ’. ಎರಡು ತಿಂಗಳಿಗೊಮ್ಮೆ ಪ್ರಕಟವಾಗುವ ಈ ಪತ್ರಿಕೆ ಒಂದು ವರ್ಷ ಪೂರೈಸಿದೆ. ಇಂದು ಬಂದು ನಾಳೆ ಬಿದ್ದು ಹೋಗುವ ಹಲವು ಕನಸಿಗರೇ ಪತ್ರಿಕೋದ್ಯಮದಲ್ಲಿ ತುಂಬಿರುವಾಗ ಎಸ್ ತುಕಾರಾಂ, ಚಿಕ್ಕಮಗಳೂರು ಗಣೇಶ, ಮಂಜುನಾಥ್ ಲತಾ ನೇತೃತ್ವದಲ್ಲಿ ಈ ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿದೆ.

ಆದಷ್ಟೂ ಒಂದು ಇಡೀ ಸಂಚಿಕೆಯನ್ನು ನಿರ್ಧಿಷ್ಟ ವಿಷಯಕ್ಕೆ ಮೀಸಲಾಗಿಡುವ ಈ ಪತ್ರಿಕೆ ಅದನ್ನು ವಿವಿಧ ಮಗ್ಗುಲುಗಳಿಂದ ಮುಟ್ಟಿ ನೋಡುವ ಪರಿ ಬೆರಗು ತರಿಸುವಂತದ್ದು. ಈ ಹಿಂದೆ ರಾಮದಾಸ್ ಅವರ ಬಾಲ್ಯದ ನೆನಪುಗಳನ್ನು ಕುರಿತ ಲೇಖನವನ್ನು ಅವಧಿ ಸಕಾಲದಿಂದ ಆಯ್ದು ಪ್ರಕಟಿಸಿತ್ತು. ಪ್ರತಿಯೊಂದು ಸಂಚಿಕೆಯನ್ನೂ ಅಪಾರ ಪ್ರೀತಿಯಿಂದ ಈ ತಂಡ ಹೊರ ತರುತ್ತಿದೆ. ಹಲವರು ಇನ್ನೂ ತಿರುಗಿ ಕೂಡಾ ನೋಡದ ವಿಷಯಗಳನ್ನು ಕೈಗೆತ್ತಿಕೊಂಡಿದೆ. ಅಚ್ಚುಕಟ್ಟುತನ ಈ ಪತ್ರಿಕೆಯ ಹೈಲೈಟ್. ಉತ್ತಮ ಛಾಯಾ ಚಿತ್ರಗಳು, ಆರ್ಟ್ ವರ್ಕ್ ಈ ಪತ್ರಿಕೆಯ ಆಕರ್ಷಣೆ. ಈ ಬಾರಿ ಮಂಜುನಾಥ್ ಲತಾ ಈ ಹಿಂದೆ ಬರೆದಿದ್ದ ಮಹಿಳಾ ರಾಷ್ಟ್ರಪತಿ ಮತ್ತು ಪುರುಷಾಹಂಕಾರಂ! ಲೇಖನವನ್ನು ಪ್ರಕಟಿಸುತ್ತಿದ್ದೇವೆ.

ಪತ್ರಿಕೆಗೆ ಸಂಪರ್ಕ:
ಚಲನ ಫೌಂಡೇಶನ್
ಬಿ ೨೧, ಮಹಡಿ, ಮಲ್ಲಿಗೆ ರಸ್ತೆ, ಕುವೆಂಪು ನಗರ್, ಮೈಸೂರು- ೨೩
ಈ ಮೈಲ್:[email protected]
ಮೊಬೈಲ್: ೯೩೪೨೨ ೭೪೩೩೧

img_1113.jpg

ಮಹಿಳಾ ರಾಷ್ಟ್ರಪತಿ ಮತ್ತು ಪುರುಷಾಹಂಕಾರಂ!

 -ಮಂಜುನಾಥ್‌ಲತಾ

ಅದೇ ತಾನೇ ಡಾ.ಪೂರ್ಣಾನಂದ ನನ್ನೊಂದಿಗೆ ಇದೇ ವಿಷಯ ಚರ್ಚಿಸಿದ್ದರು: ಮಹಿಳೆಯೊಬ್ಬಳು ಈ ದೇಶದ ಅಧ್ಯಕ್ಷೆಯಾಗುವುದು ಮತ್ತು ಅಲ್ಪಸಂಖ್ಯಾತರ, ದಲಿತರ ಪರವಾಗಿರುವ ಸರ್ಕಾರವೊಂದು ಅಂತಹ ಮಹಿಳೆಯನ್ನು ಚುನಾವಣಾ ಕಣಕ್ಕಿಳಿಸುವುದು ಈ ದೇಶದ ಹಲವು ಮನಸ್ಸುಗಳಿಗೆ ಸಹಿಸಲು ಸಾಧ್ಯವಾಗುವುದಿಲ್ಲವಲ್ಲ, ಇದಕ್ಕೇನನ್ನುವುದು? ಎಂದು ಬೇಸರ ಪಟ್ಟುಕೊಂಡಿದ್ದರು.
ಅದೇ ಸಂಜೆ ಮೈಸೂರಿನ ಗೆಳೆಯರೆಲ್ಲ ಕ್ಯಾಂಟೀನಿನಲ್ಲಿ ಟೀ ಕುಡಿಯುತ್ತಿದ್ದಾಗ ಪಕ್ಕದ ಟೇಬಲ್‌ನಲ್ಲಿ ಇದೇ ವಿಷಯವಾಗಿ ಬಿಸಿಬಿಸಿ ಚರ್ಚೆಯೊಂದು ರಂಗು ಪಡೆದಿತ್ತು. ತೀರಾ ಉಡಾಫೆಯ ದನಿಯಲ್ಲಿ ಆ ಗುಂಪಿನಲ್ಲಿದ್ದ ಹಿರಿಯ ವ್ಯಕ್ತಿಯೊಬ್ಬರಿಗೆ ಮಹಿಳೆಯೊಬ್ಬಳು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ತಮಾಷೆಯ ವಸ್ತುವಾಗಿದ್ದಂತಿತ್ತು. ಮಹಿಳೆ ರಾಷ್ಟ್ರಪತಿ ಹುದ್ದೆಗೆ ಏರುತ್ತಿರುವುದು ಭಾರತೀಯ ಪ್ರಜಾಪ್ರಭುತ್ವದ ವಿಸ್ಮಯಕ್ಕಿಂತ ಆಕೆಯನ್ನು ರಾಷ್ಟ್ರದ ಪತಿ ಎನ್ನಬೇಕೋ ಪತ್ನಿ ಎನ್ನಬೇಕೋ ಎನ್ನುವುದನ್ನೇ ಹೇಳಿಕೊಂಡು ಆತ ಕೇಕೆ ಹಾಕುತ್ತಿದ್ದ. ಇದನ್ನೇ ಗಮನಿಸುತ್ತಿದ್ದ ಗೆಳೆಯ ಗಣೇಶ, ನೋಡು ಗುರು, ಈ ದೇಶದಲ್ಲಿ ಹೆಂಗಸೊಬ್ಬಳು ಅಧಿಕಾರಕ್ಕೇರುವ ಕುರಿತು ಪುರುಷ ಮನಸ್ಸುಗಳಲ್ಲಿ ಎಂತಹ ಅಸಹನೆ ಇದೆ ಅಂದ. ನನಗೆ ತಕ್ಷಣ ಕನ್ನಡ ಟೈಮ್ಸ್ನಲ್ಲಿ ಪ್ರತಿಭಾ ಪಾಟೀಲ್ ಕುರಿತು ಬಂದ ಬರಹವೊಂದರ ಬಗ್ಗೆ ಓದುಗರೊಬ್ಬರು ಆಕ್ಷೇಪ ಎತ್ತಿದ್ದು ನೆನಪಾಯಿತು.

ಪತ್ರಿಕೆಗಳಲ್ಲಿ ಪ್ರತಿಭಾ ಪಾಟೀಲ್ ಅವರ ಹಗರಣಗಳು, ಅವರ ಸಂಪತ್ತಿನ ಗಳಿಕೆ, ಕೊಲೆ ಪ್ರಕರಣದ ಆರೋಪ ಎಲ್ಲದರ ಬಗ್ಗೆ ಬರುತ್ತಿರುವಾಗ ನೀವು ಯಾಕೆ ಅವರ ಪರವಾಗಿ ಅಷ್ಟೊಂದು ಹೊಗಳಿ ಬರೆದಿದ್ದೀರಿ ಎಂದು ಓದುಗರೊಬ್ಬರು ಕನ್ನಡ ಟೈಮ್ಸ್ ಲೇಖನಕ್ಕೆ ಪ್ರತಿಕ್ರಿಯಿಸಿದ್ದರು. ಈ ವಿಷಯವನ್ನು ನಾನು ಗೆಳೆಯರಲ್ಲಿ ಪ್ರಸ್ತಾಪಿಸಿದೆ.

ನಮ್ಮಲ್ಲಿ ಇನ್ನೊಂದು ಬುದ್ಧಿ ಇದೆ: ಮೀಡಿಯಾಗಳಲ್ಲಿ ಬಂದ ವಿಚಾರಗಳನ್ನೇ ಅಧಿಕೃತವೆಂದು ನಂಬುವ ಮಧ್ಯಮ ವರ್ಗದ ಅರೆಶಿಕ್ಷಿತ ಬುದ್ಧಿ ಅದು. ಇಂತಹ ಬುದ್ಧಿವಂತರಲ್ಲಿ ಮೀಡಿಯಾಗಳು ತಮ್ಮದೇ ಅಭಿಪ್ರಾಯಗಳನ್ನು ನಿಜವಾದ ಜನಾಭಿಪ್ರಾಯ ಎಂಬಂತೆ ಬಿತ್ತುತ್ತಾ ಹೋಗುತ್ತವೆ… ಗೆಳೆಯ ಪ್ರಭು ಹೀಗೆಂದ. ನನಗೂ ಇದು ಹೌದೆನ್ನಿಸಿತು.

ಮೊನ್ನೆ ತಾನೇ ಕನ್ನಡ ದೈನಿಕವೊಂದು ಇದೇ ವಿಷಯವನ್ನು ತನ್ನ ಮುಖಪುಟದ ಲೇಖನವಾಗಿ ಪ್ರಕಟಿಸಿದ್ದು ನೆನಪಿಗೆ ಬಂತು. ಆ ದಿನ ರಾಜ್ಯದಲ್ಲಿ ನಡೆದ ವಿವಿಧ ಪ್ರಮುಖ ವಿದ್ಯಮಾನಗಳ ಸುದ್ದಿಗಳಿದ್ದರೂ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಪ್ರತಿಭಾ ಪಾಟೀಲ್ ಕುರಿತು ಎನ್‌ಡಿ‌ಎ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದನ್ನೇ ಅದು ತನ್ನ ಅಗ್ರಸುದ್ದಿಯಾಗಿ ಪ್ರಕಟಿಸಿತ್ತು. ಅದು ಒಂದು ರೀತಿಯಲ್ಲಿ ತನಿಖಾ ವರದಿಯಂತೆಯೂ ಇತ್ತು. ಅಲ್ಲದೆ ಸುದ್ದಿಯೇ ಅಲ್ಲದ ಸಂಪಾದಕೀಯದ ಮಾದರಿಯ, ವಿಶ್ಲೇಷಣಾ ವರದಿಯನ್ನೂ ಇದೇ ವಿಷಯ ಕುರಿತು ಬರೆದುಕೊಂಡಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎದುರಿಗಿರುವ ಎನ್‌ಡಿ‌ಎಗಿಂತ ಈ ಪತ್ರಿಕೆಯೇ ಪ್ರತಿಭಾ ಪಾಟೀಲ್ ಕುರಿತು ಹೆಚ್ಚು ವಿವರಗಳನ್ನು ಕಲೆ ಹಾಕಿರುವಂತೆ ತೋರಿತು. ಬಹುಶಃ ಇಂತಹುದೇ ವರದಿಯೊಂದನ್ನು ಓದಿಕೊಂಡ ಓದುಗರು ಕನ್ನಡ ಟೈಮ್ಸ್‌ನಲ್ಲಿ ಪ್ರಕಟವಾದ ಅಭಿಪ್ರಾಯದ ಕುರಿತು ಹೀಗೆ ಪ್ರತಿಕ್ರಿಯಿಸಿರಬಹುದೆಂದುಕೊಂಡೆ.

ನಿಜ, ಪ್ರತಿಭಾ ಪಾಟೀಲ್‌ರ ಹಿಂದಿನ ಹಗರಣಗಳು, ಕಳಂಕಗಳು ಏನೇ ಇರಬಹುದು, ಅದರಲ್ಲಿ ಅರೆಸತ್ಯ ಅರೆಸುಳ್ಳು ಎಲ್ಲವೂ ಇರಬಹುದು. ಆದರೆ ಮಹಿಳೆಯೊಬ್ಬಳು ಈ ದೊಡ್ಡ ದೇಶದ ಉನ್ನತ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶ ಇದೆಯಲ್ಲ, ಅದು ಬಹಳ ಮುಖ್ಯವಾದದ್ದು. ಪ್ರತಿಭಾ ಪಾಟೀಲ್ ಮಹಿಳಾ ಪ್ರತಿನಿಧೀಕರಣದ ಸಂಕೇತ ಮಾತ್ರ. ಈ ಹಿಂದೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೆ ಸನಿಹವಾಗುತ್ತಿದ್ದಾಗಲೂ ಈ ದೇಶದ ಮಡಿವಂತ, ಪ್ರಗತಿ ವಿರೋಧಿ ಮನಸ್ಸುಗಳು ಕುದಿದು ಹೋಗಿದ್ದವು.

ಈ ಅಸಹನೆಯ ಹಿಂದೆ ಇರುವುದು ಕೇವಲ ರಾಜಕೀಯ ಅಜೆಂಡಾ ಮಾತ್ರವಲ್ಲ; ಹೆಣ್ಣನ್ನು ದ್ವಿತೀಯ ದರ್ಜೆಯಲ್ಲೇ ಇಟ್ಟು ನೋಡುವ ಪುರುಷಾಹಂಕಾರವೂ ಇದೆ ಅನ್ನಿಸತೊಡಗಿತು. ಹಾಗೆಯೇ ನಾನು ಮೊದಲು ಹೇಳಿದ ಪತ್ರಿಕೆಯ ವರದಿಯನ್ನು ಪತ್ರಕರ್ತನ ಬದಲಿಗೆ ಪತ್ರಕರ್ತೆಯೊಬ್ಬಳು ರೂಪಿಸಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸತೊಡಗಿದೆ.

‍ಲೇಖಕರು avadhi

January 12, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This