ಇನ್ನಷ್ಟು ಗುಜರಿ

ಹರಿದ ಚಪ್ಪಲಿ, ಮುರಿದ ಬಕೀಟುಗಳ ನಡುವೆ…
ಬಿ ಎಂ ಬಷೀರ್
gujari_head44
ನಾನು ಬರೆದ ಒಂದಿಷ್ಟು ಚಿಲ್ಲರೆ ಕತೆ, ಕವಿತೆಗಳನ್ನೆಲ್ಲ ಕಾಲ ತನ್ನ ತಕ್ಕಡಿಯಲ್ಲಿಟ್ಟು ತೂಗಿ ‘ತಕೋ…ಇದರ ಬೆಲೆ ಇಷ್ಟು’ ಎಂದು ಎತ್ತಿ ಮೂಲೆಗೆಸೆದಿವೆ. ಹರಿದ ಚಪ್ಪಲಿ, ಮುರಿದ ಬಕೀಟು, ನಜ್ಜುಗುಜ್ಜಾದ ಡಬ್ಬಗಳಿಂದಾವೃತವಾದ ಗುಜರಿ ಅಂಗಡಿಯ ರಾಶಿಗಳಲ್ಲಿ ಬೆಲೆಬಾಳುವಂತದ್ದೇನಾದರೂ ಇರಬಹುದೋ ಎಂದು ತಡಕಾಡುವ ಗುಜರಿ ಆಯುವ ಹುಡುಗನ ಆಸೆ ಮಾತ್ರ ಇನ್ನೂ ಹಾಗೇ ಇದೆ(ನಂಬಿಕೆ). ಗುಜರಿ ಅಂಗಡಿಯ ಮಧ್ಯದಲ್ಲಿ ರಾಜಮಾನವಾಗಿರುವ ತಕ್ಕಡಿಯ ಮುಳ್ಳುಗಳು ನನ್ನಾಳದಲ್ಲಿ ಎಲ್ಲೋ ಆಗಾಗ ಕದಲುತ್ತವೆ. ಏನೋ ಬರೆಯಬೇಕು ಅನ್ನಿಸುತ್ತದೆ. ಬರೆಯಬೇಕು ಬರೆಯಬೇಕು…ಹೀಗೆ ಭಾವಿಸುತ್ತಲೇ ಬದುಕುತ್ತಾ ಬಂದಿದ್ದೇನೆ…
ಶಬ್ದಗಳನ್ನು ರಕ್ತದಂತೆ ಕಕ್ಕಬೇಕು. ಎದೆಯ ಭಾರವನ್ನು ಹಗುರ ಮಾಡಬೇಕು. ಆದರೆ, ಪ್ರತಿ ಕವಿತೆಗಳನ್ನು ಬರೆದು ಮುಗಿಸಿದಾಗಲೂ, ನಾನು ಬರೆಯಲು ಹೊರಟದ್ದು ಇದಾಗಿರಲಿಲ್ಲ ಎಂಬ ಗಾಢ ನಿರಾಶೆ. ಗರ್ಭಪಾತವಾದ ಹೆಣ್ಣಿನ ಹತಾಶೆ…ಖಿನ್ನತೆ! ಬರಹ ಸುಖ ಕೊಡುತ್ತದೆ ಎಂದು ಹೇಳಿದ ಆ ಪುಣ್ಯಾತ್ಮ ಯಾರೋ!? ಎಲ್ಲವನ್ನೂ ಬಿಟ್ಟು ಹೀಗೇ…ಪತ್ರಿಕೆ, ರಾಜಕೀಯ ಸಮಾಜ, ದೇಶ ಎಂಬಿತ್ಯಾದಿ ಹೊರಗಿನ ಗದ್ದಲಗಳಲ್ಲಿ ಕಳೆದುಹೋಗುವುದೇ ಕೆಲವೊಮ್ಮೆ ಹೆಚ್ಚು ನೆಮ್ಮದಿ ಖುಷಿ ಕೊಡುತ್ತದೆ. ನನ್ನೊಳಗಿನ ಧ್ವನಿಯೇ ಕೇಳದಷ್ಟು ದೂರ ನಡೆದೇ ಬಿಡಬೇಕು ಎನ್ನುವ ಬಯಕೆ. ಆದರೂ ಎಲ್ಲೋ ಆಳದಲ್ಲಿ ಬಾಯಾರಿದ ಮಗುವೊಂದು ಅತ್ತೂ ಅತ್ತೂ ಸುಸ್ತಾಗಿ ಏದುಸಿರು ಬಿಡುತ್ತಿರುವಂತೆ ಅನ್ನಿಸುತ್ತದೆ…ಒಮ್ಮೊಮ್ಮೆ ತಟ್ಟನೆ ತಲ್ಲಣಿಸಿ ನಿಂತು ಬಿಡುತ್ತೇನೆ.
ಈ ಬ್ಲಾಗ್ ಎನ್ನುವುದು, ಶಬ್ದಗಳ ಸಂತೆಯಿಂದ ಒಂದಿಷ್ಟು ದೂರದಲ್ಲಿ ನಾನು ತೆರೆದ ಗುಜರಿ ಅಂಗಡಿ. ಸಂತೆಗಳೆಲ್ಲ ಮುಗಿದ ಬಳಿಕ ದೊಡ್ಡದೊಂದು ಗೋಣಿ ಚೀಲದೊಂದಿಗೆ ಸಂತೆಯ ಮೈದಾನದಲ್ಲಿ ಅಳಿದುಳಿದ ಏನೇನನ್ನೋ ಹುಡುಕುವ, ಆಯ್ದು ಚೀಲದೊಳಗೆ ತುಂಬಿಸುವ ಹುಡುಗನಂತೆ ನನ್ನ ಮಾತುಗಳನ್ನು ತುಂಬಿಸಿ ಈ ಗುಜರಿ ಅಂಗಡಿಯಲ್ಲಿ ವ್ಯಾಪಾರಕ್ಕಿಡಲು ಹೊರಟಿದ್ದೇನೆ. ನನ್ನ ಕತೆ, ಕವಿತೆ ಮತ್ತು ತೀರಾ ಒಳಗಿನ ಮಾತುಗಳನ್ನು ಈ ಬ್ಲಾಗ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ.
ಒಂದು ರೀತಿಯಲ್ಲಿ ಹೇಳದೆ ಕೇಳದೆ ಮನೆ ಬಿಟ್ಟು ಹೋದ ಬೇಜವಾಬ್ದಾರಿ ಮಗ ನಾನು. ಮತ್ತೆ ಕವಿತೆಯ ಬಾಗಿಲು ತಟ್ಟುತ್ತಿದ್ದೇನೆ.
ತುಂಬಾ ದಿನಗಳ ಹಿಂದೆ ನನ್ನ ಗೆಳೆಯನೊಬ್ಬ ಕೇಳಿದ್ದ “ನೀನು ಪಕ್ಕಾ ಬ್ಯಾರಿ ಅಂದರೆ ಬ್ಯಾರಿ ಮಾರಾಯ. ಒಂದೇ ಒಂದು ಬಾಳೇ ಗೊನೆಯನ್ನು ಹಿಡಿದುಕೊಂಡು ಅದೆಷ್ಟು ಸಂತೆಗಳಲ್ಲಿ ವ್ಯಾಪಾರ ಮಾಡಿದ್ದೀಯ?”
ಆ ಮಾತಿನಲ್ಲಿ ಸತ್ಯ ಇದೆ ಅನ್ನಿಸುತ್ತದೆ. ‘ಬಾಳೆ ಗಿಡ ಗೊನೆ ಹಾಕಿತು” ನನ್ನ ಒಂದೇ ಒಂದು ಕತಾ ಸಂಕಲನ.(ಲೋಹಿಯಾ ಪ್ರಕಾಶನ ಇದನ್ನು ಹೊರತಂದಿದೆ. ಮೈಸೂರಿನ ಚದುರಂಗ ಪ್ರತಿಷ್ಠಾನದವರು ಇದಕ್ಕೊಂದು ಪ್ರಶಸ್ತಿಯನ್ನು ನೀಡಿದ್ದಾರೆ. ಜೊತೆಗೆ ಹತ್ತು ಸಾವಿರ ರೂಪಾಯಿಯನ್ನೂ ಕೂಡ) ಆದರೂ ನನ್ನ ಕೆಲವು ಗೆಳೆಯರು ಆಗಾಗ ‘ಹೊಸ ತಲೆಮಾರಿನ ಕತೆಗಾರ’ ಎಂದೆಲ್ಲ ಕೊಂಡಾಟ ಮಾಡುವುದಿದೆ. ಬಹುಶಃ ಅದು ಈ ಗೆಳೆಯನ ಹೊಟ್ಟೆಕಿಚ್ಚಿಗೆ ಕಾರಣವಿರಬೇಕು. ನಾನು ಕೆಲ ಸಮಯ ಮುಂಬಯಿಯಲ್ಲಿದ್ದೆ. ಸುಮಾರು ಐದು ವರ್ಷ. ಮುಂಬೈಯ ಧಾರಾವಿಯಲ್ಲಿ. ಆಗ ಒಂದಿಪ್ಪತ್ತೈದು ಕವಿತೆಗಳನ್ನು ಒಟ್ಟು ಸೇರಿಸಿ ಪುಸ್ತಕ ಮಾಡಿದ್ದೆ. “ಪ್ರವಾದಿಯ ಕನಸು” ಎಂದು ಹೆಸರು ಕೊಟ್ಟಿದ್ದೆ. ಆಗ ಅದಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಸಿಕ್ಕಿದಾಗ ನನಗಾದ ಖುಷಿ, ಸಂಭ್ರಮಗಳ ಬಗ್ಗೆಯೇ ಯೋಚಿಸುತ್ತೇನೆ. ಈಗ ಯಾಕೆ ಅದೇ ತರಹ ಖುಷಿ ಸಂಭ್ರಮಗಳಿಲ್ಲ. ಒಂದು ಕವಿತೆ ಪತ್ರಿಕೆಯಲ್ಲಿ ಪ್ರಕಟವಾದರೆ ಆಗೆಲ್ಲ ಅದೆಷ್ಟು ರೋಮಾಂಚನ…ಸಡಗರ..ಈಗ ಮಾತ್ರ…ಊಹೂಂ…
ಇದೀಗ…ಕೈಯಲ್ಲಿ ಒಂದಿಷ್ಟು ಚಿಲ್ಲರೆ ಕತೆಗಳು, ಕವಿತೆಗಳನ್ನು ಇಟ್ಟುಕೊಂಡು ಗುಜರಿ ಅಂಗಡಿಯ ಮುಂದೆ ನಿಂತಿದ್ದೇನೆ. ತಕ್ಕಡಿಯೋ ಅದನ್ನು ನಿಕೃಷ್ಟ ಕಣ್ಣಲ್ಲಿ ನೋಡಿ ತಲೆಯಾಡಿಸುತ್ತಿದೆ….ನನ್ನ ಬ್ಲಾಗಿನ ಕುರಿತಂತೆ ಇಷ್ಟು ಸಾಕು ಅನ್ನಿಸುತ್ತದೆ.
ದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೆಯಲ್ಲಿ ಸಂಪಾದಕೀಯ, ಸಿನಿಮಾ, ವ್ಯಂಗ್ಯ, ಲೇಖನ, ವಿಮರ್ಶೆ, ವರದಿ, ಸುದ್ದಿ ಎಂದು ಪ್ರತಿ ವಾರ ಬರೆಯುತ್ತಲೇ ಇರುತ್ತೇನೆ. ಅದಾವುದರ ಭಾರವನ್ನೂ ಇಲ್ಲಿ ನಿಮ್ಮ ಬೆನ್ನ ಮೇಲೆ ಹೊರಿಸಲಾರೆ ಎಂಬ ಭರವಸೆಯನ್ನು ನೀಡುತ್ತೇನೆ

‍ಲೇಖಕರು avadhi

October 30, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This