ಇನ್ನೂ ಒಂದು ಹೆಣ

DPSFBಡಿ ಪಿ ಸತೀಶ್ CNN-IBN ಚಾನಲ್ ನ ನವದೆಹಲಿಯ ಪ್ರಧಾನ ಕಛೇರಿಯಲ್ಲಿ ಸುದ್ದಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಸ್ತಾರವಾದ ಓದು ಇವರ ಹೆಗ್ಗಳಿಕೆ. ಹರಿತ ವಿಶ್ಲೇಷಣೆ ಇವರ ಶಕ್ತಿ. ಖಡಕ್ ವ್ಯಕ್ತಿತ್ವ.
ನಾನು ಪಂಜಾಬಿ ಕಲಿಯುವ ಸಮಯದಲ್ಲಿ ಮೊದಲು ಓದಿದ ಕತೆಯಿದು. ಇದು ನನ್ನನ್ನು ಬಹುವಾಗಿ ಆಕರ್ಷಿಸಿತು. ಮತ್ತೆ ಮತ್ತೆ ಓದಿದೆ. ಈಗಲೂ ಒಮ್ಮೊಮ್ಮೆ ಓದುತ್ತಿರುತ್ತೇನೆ. ಪಂಜಾಬಿಯ ಶ್ರೇಷ್ಟ ಕತೆಗಾರ ಕರ್ತಾರ್ ಸಿಂಗ್ ದುಗ್ಗಲ್ ದೇಶ ವಿಭಜನೆಯ ಕೆಲವು  ವರ್ಷಗಳ ನಂತರ ಬರೆದ ಈ ಕತೆ ಮನುಷ್ಯನ ಕೀಳುತನ, ದುರಾಸೆ, ಲೌಕಿಕ ಜಗತ್ತಿನ ವಸ್ತುಗಳಿಗಾಗಿ ಅವನ ಹಪಹಪಿಕೆ, ನಿರಾಶ್ರಿತರ ಹೇಗಾದರೂ ಮಾಡಿ ಆರ್ಥಿಕವಾಗಿ ಮೇಲೆ ಹೋಗಬೇಕು ಎನ್ನುವ ಮನೋಭಾವಗಳಿಗೆ, ಹತಾಶೆ, ನೈತಿಕತೆಗಿಂತ ಹಣವೇ ಮುಖ್ಯ ಎನ್ನುವ ಮನಸ್ಥಿತಿಗಳಿಗೆ ಕನ್ನಡಿ ಹಿಡಿಯುತ್ತದೆ.
ಈ ಕತೆ ಇಂದಿಗೂ ಅಂದಿನಷ್ಟೇ ಪ್ರಸ್ತುತ. ಈಗಾಗಲೇ ಹಲವಾರು ಭಾಷೆಗಳಿಗೆ ಅನುವಾದವಾಗಿರುವ ಈ ಕತೆ, ಕನ್ನಡಕ್ಕೆ ಬಂದಿದೆಯೆ. ನನಗೆ ಗೊತ್ತಿಲ್ಲ.
ಪಂಜಾಬಿ ಮೂಲ – ಕರ್ತಾರ್ ಸಿಂಗ್ ದುಗ್ಗಲ್
ಅನುವಾದ – ಡಿ ಪಿ ಸತೀಶ್
ಸಿಂಧ್ ನಿಂದ ನಿರಾಶ್ರಿತನಾಗಿ ಓಡಿಬಂದಾಗಿನಿಂದ ಮಲ್ಕಾನಿಗಿದ್ದ ಏಕೈಕ ಆಸೆ ಹೇಗಾದರೂ ಮಾಡಿ ರಾವಲ್ ಕಟ್ಟಡದಲ್ಲೊಂದು ಸರ್ಕಾರಿ ಫ್ಲಾಟ್ ಪಡೆಯಬೇಕೆಂಬುದು. ವರ್ಷಗಳೇ ಸಂದರೂ ಅವನ ಪ್ರಯತ್ನ ಸಫಲವಾಗಲೇಯಿಲ್ಲ.
ರಾವಲ್ ಕಟ್ಟಡ ಅವನ ಸರ್ಕಾರಿ ಕಚೇರಿಯಿಂದ ಕೇವಲ ಹದಿನೈದು ನಿಮಿಷದ ಕಾಲುದಾರಿ. ಸೈಕಲ್ ನಲ್ಲಾದರೇ ಕೇವಲ ಮೂರು ನಿಮಿಷದ ಹಾದಿ. ಎಲ್ಲೆಲ್ಲೋ ಹೋಗಿ ಶಿಫಾರಸು ತಂದರೂ, ಎಷ್ಚೋ ಜನರಿಗೆ ಲಂಚ ಕೊಟ್ಟರೂ ಫ್ಲಾಟ್ ಮಾತ್ರ ಅಲಾಟ್ ಆಗಲೇಯಿಲ್ಲ. ಹೆಂಡತಿಗೆ ಚೆನ್ನಾಗಿ ಲಿಪ್ ಸ್ಟಿಕ್ ಹಚ್ಚಿಸಿ ಮೇಲಾಧಿಕಾರಿಗಳ ಬಳಿ ಕಳಿಸಿದ್ದೂ ಆಯಿತು. ಹೆಂಗಸರಿಂದ ಇಂತಹಾ ಕೆಲಸಗಳೂ ಬೇಗ ಆಗುತ್ತವೆ ಎಂದು ಯಾರೋ ಹೇಳಿದ್ದರೂ, ಮಲ್ಕಾನಿಗೆ ಫ್ಲಾಟ್ ಮಾತ್ರ ಸಿಗಲಿಲ್ಲ.
ಆದ್ದರಿಂದ ಮಲ್ಕಾನಿ ಕಚೇರಿಯಿಂದ ಹತ್ತು ಮೈಲು ದೂರದ ಮನೆಯಲ್ಲಿ ವಾಸಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ಅವನ ಕಚೇರಿಯ ಕೆಲಸಕ್ಕೂ ನಿರ್ದಿಷ್ಟ ಸಮಯವಿರಲಿಲ್ಲ. ಅದು ಕೆಲವೊಮ್ಮೆ ಹಗಲು, ಕೆಲವೊಮ್ಮೆ ರಾತ್ರಿ.
ಕಾಲಿಡಲೂ ಜಾಗವಿರದ ಬಸ್ ಗಳಲ್ಲಿ ತೂರಿಕೊಂಡು ಅವನು ರಾತ್ರಿ ಮನೆ ಸೇರಿದಾಗ ಅರೆ ಹೆಣವಾಗಿರುತ್ತಿದ್ದ. ಇದರಿಂದಾಗಿ ಊಟದ ಮೇಲಾಗಲೀ ಅಥವಾ ಹೆಂಡತಿಯ ಮೇಲಾಗಲೀ ಅವನಿಗೆ ಆಸಕ್ತಿಯೇ ಹೊರಟು ಹೋಗಿತ್ತು.
stripe_painting-762248
ಮರುದಿನ ಮತ್ತೆ ಕೆಲಸಕ್ಕೆ ಹೊರಡುವಾಗ ಹಿಂದಿನ ದಿನದ ಆಯಾಸದಿಂದ ಹೊರಬರಲೂ ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಪಾಕಿಸ್ತಾನದಲ್ಲಿದ್ದ ತನ್ನ ಮನೆ ಬಿಟ್ಟು ಜೀವ ಉಳಿಸಿಕೊಳ್ಳಲು ಓಡಿಬಂದನಂತರ ತನಗೆ ಯಾವಾಗಲೂ ಆಯಾಸ, ಸುಸ್ತು ಎಂದು ಮಲ್ಕಾನಿಗೆ ಒಮ್ಮೊಮ್ಮೆ ಅನಿಸಿದ್ದೂ ಉಂಟು.
ರಾವಲ್ ಕಟ್ಟಡದಲ್ಲಿ ಫ್ಲಾಟೊಂದು ಸಿಕ್ಕರೆ ತನ್ನೆಲ್ಲಾ ಸಮಸ್ಯೆಗಳೂ ಒಂದೇ ಏಟಿಗೆ ಪರಿಹಾರವಾಗುತ್ತವೆ ಎಂದು ಮಲ್ಕಾನಿ ಯಾವಾಗಲೂ ಕನಸು ಕಾಣುತ್ತಿದ್ದ. ಸಣ್ಣದೊಂದು ನೆಪ ಸಿಕ್ಕರೂ ಕಚೇರಿಯಿಂದ ಹೆಂಡತಿಯ ಬಳಿ ಓಡಬಹುದು, ಗಂಟೆಗಟ್ಟಲೇ ಬಸ್ ನಲ್ಲಿ ಸಿಕ್ಕು ಅಪ್ಪಚ್ಚಿಯಾಗುವ ಪ್ರಮೇಯವಿಲ್ಲ ಎಂದು ಸದಾ ಯೋಚಿಸುತ್ತಿದ್ದ. ಸಮಯಕ್ಕೆ ಸರಿಯಾಗಿ ಮನೆಗೆ ಮರಳಿದರೆ ಅದೆಷ್ಟೋ ಸಂಸಾರ ಸುಖ ಅನುಭವಿಸಬಹುದು, ಈಗ ಹೆಂಡತಿಯ ಮುಖ ಪರಿಚಯವೂ ಮಾಸುತ್ತಿದೆ ಎಂದು ಮಲ್ಕಾನಿಗೆ ಅನಿಸುತ್ತಿತ್ತು. ಅವನ ತಾಯಿಯಂತೂ ತನಗೆ ಮೊಮ್ಮಗ ಬೇಕು ಎಂದು ಸದಾ ಕಾಗದ ಬರೆಯುತ್ತಿದ್ದಳು. ಆದರೆ ಈ ದರಿದ್ರ ಕೆಲಸದಲ್ಲಿ, ಈ ನರಕದಂತಹಾ ಮಹಾನಗರದಲ್ಲಿ ಮಕ್ಕಳನ್ನು ಹುಟ್ಟಿಸಲು ಯಾರಿಗಾದರೂ ಸಮಯವಿದೆ.
ಕೊನಗೂ ಮಲ್ಕಾನಿಯ ಮೊರೆ ದೇವರಿಗೆ ತಲುಪಿ, ರಾವಲ್ ಕಟ್ಟಡದಲ್ಲಿ ಅವನಿಗೆ ಎರಡು ಕೋಣೆಗಳ ಪ್ಲಾಟೊಂದು ಮಂಜೂರಾಯಿತು. ಇದರಿಂದ ಸಾಮ್ರಾಜ್ಯವೇ ಸಿಕ್ಕಷ್ಟು ಸಂತಸ ಮಲ್ಕಾನಿಗಾಯಿತು. ಆಲಾಟ್ ಮೆಂಟ್ ಆದೇಶ ಬಂದ ದಿನವೇ ಮಲ್ಕಾನಿಯ ಗೃಹ ಪ್ರವೇಶವೂ ಆಯಿತು.
ಈಗ ನೀವು ಮನೆಗೆ ದಿನಾಲು ಬೇಗ ಬನ್ನಿ. ಮೊದಲಿನಂತೆ ತಡಮಾಡಬೇಡಿ ಎಂದು ಅವನ ಹೆಂಡತಿ ಆದೇಶಿಸಿದಳು. ಅವನೇನೋ ಆಗಲಿ ಎಂದು ಅವಳಿಗೆ ಭರವಸೆ ನೀಡಿದ. ಆದರೆ ಅವನ ಹೆಂಡತಿಯ ಸಲಹೆ ಅವನ ಮನಸ್ಸಿನಲ್ಲಿ ಬೇರೆಯದೇ ಆಲೋಚನೆ ಹುಟ್ಟುಹಾಕಿತ್ತು. ಮೊದಲು ಬಸ್ ಗಳಲ್ಲಿ ತೂರಿಕೊಂಡು ಹಾಳುಮಾಡುತ್ತಿದ್ದ ಸಮಯವನ್ನು ಈಗ ಓವರ್ ಟೈಮ್ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಬಹುದು. ಹೀಗೆ ಸಂಪಾದಿಸಿದ ಹಣದಿಂದ ನಿರಾಶ್ರಿತರಿಗೆ ಕಡಿಮೆ ಬಡ್ಡಿಗೆ ಸಿಗುವ ಸಾಲದ ಹಣದಲ್ಲಿ ಎಲ್ಲಾದರೂ ಜಾಗಕೊಂಡು ಸ್ವಂತ ಮನೆ ಮಾಡಬಹುದು. ಜಮೀನ್ದಾರಿ ನಿರಾಶ್ರಿತರ ಕಾಲೋನಿಗಳು ಈಗಾಗಲೇ ಎಲ್ಲೆಡೆ ಅಣಬೆಗಳಂತೆ ಹುಟ್ಟುತ್ತಿವೆ. ತಡಮಾಡಿದರೆ ಕಷ್ಟ ಎಂದು ಮಲ್ಕಾನಿಗೆ ಅನಿಸಿತು. ಹೀಗಾಗಿ ಮೊದಲ ದಿನದಿಂದಲೇ ಅವನು ಓವರ್ ಟೈಮ್ ಕೆಲಸ ಶುರುಮಾಡಿದ. ಇದು ಎಂತಹಾ ಗೀಳಾಯಿತೆಂದರೆ, ಮನೆಗೆ ವಾಪಸಾಗುವ ಸಮಯ ಈಗ ಮೊದಲಿಗಿಂತ ತಡವಾಯಿತು. ಊಟ, ನಿದ್ದೆಗಳ ಮೇಲೆ ಅವನಿಗೆ ಆಸೆಯೇ ಇಲ್ಲವಾಯಿತು.
ಅವನ ಪ್ಳಾಟ್ ಸಮೀಪವೇ ಕಚೇರಿ, ಬಜಾರ್ ಮತ್ತು ಶಾಲೆಯೂ ಇತ್ತು. ಮಗುವಾದ ನಂತರ ಶಾಲೆಯ ಸಮಸ್ಯೆಯಿಲ್ಲ. ಮಕ್ಕಳನ್ನು ಬಸ್ ನಲ್ಲಿ ಶಾಲೆಗೆ ಕಳಿಸುವುದು ಅಪಾಯಕಾರಿ. ಅದೂ ಹೆಣ್ಣುಮಗುವಾದರೇ ಇನ್ನೂ ಕಷ್ಟ ಎಂದು ಮಲ್ಕಾನಿಗೆ ಯಾವಾಗಲೂ ಅನಿಸುತ್ತಿತ್ತು. ತನಗೆ ಮೊದಲು ಆಗುವುದು ಹೆಣ್ಣು ಮಗುವೇ ಎಂದು ಅದ್ಯಾಗೋ ಅವನಿಗೆ ಖಾತರಿಯಾಗಿತ್ತು. ಆದರೆ ಹೆಂಡತಿಯ ಜೊತೆ ಕಳೆಯಲು ಮಾತ್ರ ಅವನ ಬಳಿ ನಿಮಿಷವೂ ಇರಲಿಲ್ಲ.
ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಸದಾ ಕಚೇರಿ, ಕಚೇರಿ.
ರಾವಲ್ ಕಟ್ಟಡದಲ್ಲಿ ಫ್ಲಾಟ್ ಸಿಗುವುದೆಂದರೆ ಸ್ವಂತಕ್ಕೇ ಸಿಕ್ಕಂತೆ. ಒಮ್ಮೆ ಅಲ್ಲಿ ಒಳಹೊಕ್ಕವರು ಮತ್ತೆ ಬಿಟ್ಟು ಹೋಗಿದ್ದು ಇಲ್ಲವೇ ಇಲ್ಲ. ಅವರ ಮಕ್ಕಳೂ ಅಲ್ಲೇ ಹುಟ್ಟಿ, ಬೆಳೆದು, ತಾವೂ ಅಲ್ಲೇ ಮಕ್ಕಳನ್ನು ಹುಟ್ಟಿಸಲು ಪ್ರಾರಂಭಿಸುತ್ತಿದ್ದವು.
ಕೆಲವರಿಗೆ ಭಡ್ತಿ ದೊರೆತು, ಬೇರೆಡೆಗೆ ಒಳ್ಳೆಯ ಜಾಗ ಸಿಕ್ಕರೂ ಇಲ್ಲಿಂದ ಹೋಗುತ್ತಿರಲಿಲ್ಲ.
ಗುಮಾಸ್ತರು, ಉಪ ಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳು – ಎಲ್ಲರದೂ ಒಂದೇ ವರಾತ. ಕೇವಲ ನನ್ನ ಹೆಣ ಮಾತ್ರ ಇದನ್ನು ಬಿಟ್ಟುಹೋಗುತ್ತದೆ.
ಕೆಲವು ತಿಂಗಳಿಂದ ಈ ಪ್ಲಾಟ್ ಗಳಿಗೆ ಅಧ್ಯಾವುದೋ ಮಾರಿ ಬಡಿದಿತ್ತು. ಪ್ರತಿವಾರ ಯಾರಾದರೂ ಸಾಯುತ್ತಿದ್ದರು. ಕೆಲವೊಮ್ಮೆ ಈ ಮಹಡಿಯಲ್ಲಿ, ಕೆಲವೊಮ್ಮೆ ಆ ಮಹಡಿಯಲ್ಲಿ ಗೋಳಾಟ-ಚೀರಾಟ ಕೇಳುತ್ತಲೇ ಇತ್ತು. ಅದೊಂದು ಎಂಟು ಮಹಡಿಗಳ 200 ಪ್ಲಾಟ್ ಗಳ ದೊಡ್ಡ ವಾಸಸ್ಥಾನ. ಅದೇ ಒಂದು ಪ್ರಪಂಚ.
ಆದರೂ, ಪ್ರತಿ ಕುಟುಂಬವೂ ಮತ್ತೊಬ್ಬರಿಗೆ ಅಪರಿಚಿತ. ಪಕ್ಕದ ಮನೆಯಲ್ಲಿ ಯಾರಿದ್ದಾರೆಂದು ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮದೇ ಕೆಲಸ, ತಮ್ಮದೇ ಪ್ರಪಂಚದಲ್ಲಿ ಮುಳುಗಿಹೋಗಿದ್ದರು. ಆದರೆ ಯಾರ ಮನೆಯಲ್ಲಾದರೂ ಏನಾದರೂ ಅನಾಹುತವಾದರೆ, ಯಾರದರೂ ಸತ್ತರೆ ಮಾತ್ರ ಎಲ್ಲರೂ ಕ್ಷಣಕಾಲ ತಮ್ಮ ಪ್ರಪಂಚದಿಂದ ಹೊರಬಂದು, ಮತ್ತೆ ಗೂಡು ಸೇರುತ್ತಿದ್ದರು. ಮಕ್ಕಳು ಇಡೀದಿನ ಒಟ್ಟಿಗೇ ಆಡುತ್ತಿದ್ದರೂ, ಹಿರಿಯರು ಮಾತ್ರ ಒಟ್ಟು ಸೇರುತ್ತಿರಲಿಲ್ಲ.
ಹಿಂದಿನ ವಾರ ಕೆಳಗಿನ ಮಹಡಿಯಿಂದ ಹೆಣವೊಂದು ಹೊರಬಿದ್ದಿತ್ತು. ಅದಕ್ಕೂ ಹಿಂದಿನ ವಾರ ಮೇಲಿನ ಮಹಡಿಯಿಂದ. ಮಲ್ಕಾನಿ ಈ ಎರಡೂ ಕುಟುಂಬಗಳಿಗೆ ವಿಷಾದ ಸೂಚಿಸಲು ಹೋಗಬೇಕೆಂದಿದ್ದ, ಆದರೆ ಅವನ ಹತ್ತಿರ ಎಂದಿನಂತೆ ಸಮಯವಿರಲಿಲ್ಲ. ಮೂರು ದಿನ ಅವನು ರಾತ್ರಿ ಪಾಳಿಯಲ್ಲಿದ್ದ. ತಿಂಡಿಗೆ ಮನೆಗೆ ಬಂದವ ಇಡೀ ದಿನ ಮಲಗಿದ್ದ. ಸಾಯಂಕಾಲ ಎದ್ದಾಕ್ಷಣ ಸಿಕ್ಕಿದ್ದು ತಿಂದು, ಕಚೇರಿಗೆ ಓಡುತ್ತಿದ್ದ.
ಆದರೆ ಅದೊಂದು ರಾತ್ರಿ ….
ಕೆಲಸ ಮಾಡುತ್ತಿದ್ದಾಗ ಮಲ್ಕಾನಿಗೆ ತಲೆತಿರುಗಿತು. ದೇಹದ ತಾಪಮಾನ ಏರಿತು, ತಲೆನೋವು ಶುರುವಾಯ್ತು. ಒಲ್ಲದ ಮನಸ್ಸಿನಿಂದಲೇ ಅವನು ಮನೆಗೆ ಹೋಗಲು ನಿರ್ಧರಿಸಿದ. ಅವನ ಸಹೋದ್ದೋಗಿಗಳೂ ಅವನು ರಜಾ ಪಡೆದಿದ್ದು ನೋಡಿ ಆಶ್ಚರ್ಯಚಕಿತರಾದರು. ಏಕೆಂದರೆ ವರ್ಷಗಳ ಕಾಲ ಅವನು ರಜಾ ಮಾತ್ರ ಪಡೆದಿರಲಿಲ್ಲ. ಯಾರದೋ ಸ್ಕೂಟರ್ ಏರಿ, ನಡು ರಾತ್ರಿಯಲ್ಲಿ ಮನೆ ತಲುಪಿದ. ಇಡೀ ಕಟ್ಟಡ ಗಾಢಾಂಧಕಾರದಲ್ಲಿ, ತಣ್ಣಗೆ ಮಲಗಿತ್ತು.
ಲಿಫ್ಟ್ ಮ್ಯಾನ್ ಕಟ್ಟಡದ ಜಗಲಿಯಲ್ಲಿ ಮಲಗಿದ್ದ. ಗೋಡೆಗೆ ತಲೆ ಆನಿಸಿ ರಾತ್ರಿ ಕಾವಲುಗಾರನೂ ನಿದ್ದೆಗೆ ಶರಣಾಗಿದ್ದ. ಮಲ್ಕಾನಿಯ ಹೆಜ್ಜೆ ಸಪ್ಪಳ ಕೇಳಿ, ಇಲಿಯೊಂದು ಓಡಿಹೋಯ್ತು. ಯಾರಿಗೂ ತೊಂದರೆ ಮಾಡಬಾರದು ಎಂದು ನಿರ್ಧರಿಸಿದ್ದ ಮಲ್ಕಾನಿ, ಸದ್ದುಮಾಡದೇ ಲಿಫ್ಟ್ ಹೊಕ್ಕು, ಬಟನ್ ಅದುಮಿ, ನಾಲ್ಕನೇ ಮಹಡಿ ತಲುಪಿದ.
ಲಿಫ್ಟ್ ಅವನ ಪ್ಲಾಟ್ ಎದುರೇ ನಿಂತಿತು. ಇಲ್ಲಿ ತನಕ ಯಾರಿಗೂ ತೊಂದರೆ ಮಾಡಬಾರದು ಎಂದು ನಿರ್ಧರಿಸಿದ್ದ ಮಲ್ಕಾನಿ ಈಗ ತೊಂದರೆ ಮಾಡಲೇಬೇಕಾದ ಸಂದರ್ಭವೊದಗಿಬಂದಿತ್ತು. ಬಾಗಿಲು ಬಡಿದರೆ ನೆರೆಯವರು ಎಚ್ಚರವಾಗಬಹುದು. ಆದರೆ ವಿಧಿಯಿಲ್ಲ. ಹೆಂಡತಿ ಗಾಢ ನಿದ್ದೆಯಲ್ಲಿರುವುದರಿಂದ ಜೋರಾಗಿ ಕೂಗಲೇ ಬೇಕು. ಬಾಗಿಲು ಬಡಿಯಲೇ ಬೇಕು.
ಆದರೆ ಕೈ ತಾಗಿದೊಡನೇ ಅವನ ಮನೆಯ ಬಾಗಿಲು ತೆರೆದುಕೊಂಡಿತು. ಅರೆ, ಇದೇಗೆ ಸಾಧ್ಯ. ಮತ್ತೆ ಹೊರಬಂದು ಪ್ಲಾಟ್ ನಂಬರ್ ಚೆಕ್ ಮಾಡಿದ. ತನ್ನದೇ ಮನೆ. ಅನುಮಾನವಿಲ್ಲ. ಮಲ್ಕಾನಿ ರಭಸವಾಗಿ ಬೆಡ್ ರೂಮ್ ನತ್ತ ಧಾವಿಸಿದ. ಮಂಚದ ಪರದೆ ಸರಿಸಿದಾಗ ಮಲ್ಕಾನಿಗೆ ಕಾಣಿಸಿದ್ದು ಬೇರೆ ಯಾರೋ ಗಂಡಸಿನ ಜೊತೆ ಮಲಗಿರುವ ತನ್ನ ಹೆಂಡತಿ.
ಅದನ್ನು ನೋಡಿ ಕಣ್ಣು ಕೆಂಪಾಗಿ, ತಲೆ ತಿರುಗಿ, ಮನಸ್ಸಿಗೆ ಕತ್ತಲು ಕವಿಯಿತು. ತಕ್ಷಣ ಸಾವರಿಸಿಕೊಂಡ ಮಲ್ಕಾನಿ ತನ್ನ ಶೂ ಕಳಚಿ ಆ ಗಂಡಸಿನ ಮೇಲೆ ಆಕ್ರಮಣ ಮಾಡಿದ. ಗಾಢ ನಿದ್ದೆಯಲ್ಲಿದ್ದ ಪ್ರಿಯಕರ ಧಡಕ್ಕಂತ ಎದ್ದು, ತನ್ನ ಬಟ್ಟೆ ಬರೆ ಒಟ್ಟುಮಾಡಿಕೊಂಡು ಬಾತ್ ರೂಮ್ ಮುಖಾಂತರ ಹಿಂದಿನ ಬಾಗಿಲಿನಿಂದ ಪಲಾಯನಮಾಡಿದ. ಅದೇ ಶೂನಿಂದ ತನ್ನ ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಲು ಮಲ್ಕಾನಿ ಆರಂಭಿಸಿದ. ಅವನ ಕೂಗಾಟ, ಚೀರಾಟ ಮುಗಿಲುಮುಟ್ಟಿತು.
ನೆರೆಹೊರೆಯವರು ನಿದ್ದೆಯಿಂದೆದ್ದು ಓಡೋಡಿಬಂದರು. ವಾಚ್ ಮ್ಯಾನ್ ಮತ್ತು ಲಿಫ್ಟ್ ಆಪರೇಟರ್ ಕೂಡಾ ಅವರನ್ನು ಸೇರಿದರು. ಕೆಲವರು ಕಳ್ಳ, ಕಳ್ಳ ಎಂದು ಕೂಗಿದರು. ಮತ್ತೆ ಕೆಲವರು ಇನ್ನೇನೋ ಕೂಗಿದರು.
ಮಲ್ಕಾನಿ ಮಾತ್ರ ಹೆಂಡತಿಯನ್ನು ನಿರಂತರವಾಗಿ ಹೊಡೆಯುತ್ತಲೇ ಇದ್ದ. ಅಲ್ಲಿದ್ದ ಜನ ಭಾರೀ ಪ್ರಯಾಸಪಟ್ಟು ಅವಳನ್ನು ಬಿಡಿಸಬೇಕಾಯ್ತು.
ಹಲ್ಲು ಕಡಿಯುತ್ತಿದ್ದ ಮಲ್ಕಾನಿ ಮತ್ತೆ, ಅದೇ ಶೂನಿಂದ ಹೆಂಡತಿಗೆ ಹೊಡೆದ. ನೆರೆಯವರು ಮತ್ತೆ ಅವನನ್ನು ಕಷ್ಟಪಟ್ಟು ಹಿಂದಕ್ಕೆ ಎಳೆದರು. ಕೆಲಕ್ಷಣದ ನಂತರ ಅವರಿಗೆ ಅಲ್ಲಿ ನಡೆದಿದ್ದೇನೆಂದು ಅರ್ಥವಾಯಿತು. ಪಿಸು ಮಾತಾಡುತ್ತಾ, ತಲೆಯಾಡಿಸುತ್ತಾ, ಅವರೆಲ್ಲಾ ಅಲ್ಲೆ ನಿಂತು ನೋಡತೊಡಗಿದರು.
ಮಲ್ಕಾನಿಯಂತೋ ಕೋಪದಿಂದ ಬುಸುಗುಡುತ್ತಿದ್ದ. ಈ ಸೂಳೆಯನ್ನು ಕೊಲ್ಲುತ್ತೇನೆ ಎಂದು ಎಗರಾಡುತ್ತಿದ್ದ. ಅಲ್ಲಿ ಸೇರಿದ್ದ ಜನ, ನಾವು ಇಲ್ಲಿಂದ ವಾಪಸಾದರೆ, ಇವನು ನಿಜವಾಗಿಯೂ ಹೆಂಡತಿಯನ್ನು ಕೊಂದಾನು ಎಂದು ಹೆದರಿ ಅಲ್ಲೇ ಉಳಿದರು. ಅವಮಾನದಿಂದ ಕಂಗೆಟ್ಟಿದ್ದ ಮಲ್ಕಾನಿಯ ಹೆಂಡತಿ, ಭೂಮಿ ಬಾಯಿ ತೆರೆದು ತನ್ನನ್ನು ಈ ಕ್ಷಣವೇ ನುಂಗಬಾರದೇ ಎಂದು ಹೇಳುತ್ತಿರುವಂತೆ ಕಾಣುತ್ತಿತ್ತು.
ಈ ಗಲಾಟೆ, ಗದ್ಗಲದ ನಡುವೆ ಬೆಳಗಾಯಿತು. ಅದೆಂತಹಾ ಗದ್ದಲ. ನೆರೆಹೊರೆ ಜನರಾರೂ ಇಡೀ ರಾತ್ರಿ ನಿದ್ದೆಮಾಡಲಿಲ್ಲ. ಕೆಲದಿನಗಳ ಹಿಂದೆ ಪಂಜಾಬಿ ಯುವಕನೊಬ್ಬ ಸತ್ತಾಗ ಇಡೀ ರಾತ್ರಿ ಯಾರೂ ನಿದ್ದೆಮಾಡಲಿಲ್ಲ. ಅದಾದ ನಂತರ ಕೆಳ ಮಹಡಿಯಲ್ಲಿ ಮಾರ್ವಾಡಿ ಹೆಂಗಸೊಬ್ಬಳು ಸತ್ತಾಗಲೂ ಯಾರ ಬಳಿಯೂ ನಿದ್ರಾದೇವಿ ಸುಳಿಯಲಿಲ್ಲ. ಈ ರಾತ್ರಿ ಸಿಂಧೀಗಳು ಈ ವಿಚಿತ್ರ ನಾಟಕ ಮಾಡಿದ್ದರು.
ಅಲ್ಲಿನ ಜನರಿಗೆ ಯಾರಿಗೆ ಸಹಾನುಭೂತಿ ವ್ಯಕ್ತಪಡಿಸಬೇಕು. ಹೆಂಡತಿಯನ್ನು ಅವಳ ಮಿಂಡನ ಜೊತೆ ರೆಡ್ ಹ್ಯಾಂಡಾಗಿ ಹಿಡಿದ ಮಲ್ಕಾನಿಗೋ, ಅಥವಾ ಅವಮಾನದಿಂದ ಕುಗ್ಗಿಹೋಗಿದ್ದ ಅವನ ಹೆಂಡತಿಗೋ ಎಂದು ನಿರ್ಧರಿಸಲಾಗಲಿಲ್ಲ.
ಈ ನಡುವೆ ಆ ಕಟ್ಟಡದ ಉಸ್ತವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆಗಮಿಸಿದ. ಅವನೋ, ಆರಡಿ ಎತ್ತರದ ಧೈತ್ಯ ಪಠಾಣ. ಚರ್ಮದ ಕವರ್ ನ ಕೋಲು ಮತ್ತು ಭಯಂಕರ ಆಲ್ಸೇಶನ್ ನಾಯಿಯ ಜೊತೆ ಅವನು ಅಲ್ಲಿಗೆ ಬಂದ.
‘ ಇದೇನು ಸೂಳೆಮನೆಯೇ? ಇದು ಸರ್ಕಾರಿ ಕಟ್ಟಡ. ವೈಶ್ವಾವಾಟಿಕೆಯಲ್ಲ. ಈ ತಲೆಹಿಡುಕರು, ಬೇವಾರ್ಸಿಗಳು ಎಲ್ಲಿಂದ ಬರುತ್ತಾರೆ ಎಂದು ದೇವರಿಗೇ ಗೊತ್ತು ಎಂದು ಕೂಗಾಡತೊಡಗಿದ. ಮಲ್ಕಾನಿ ಸಾಹೇಬರೇ ನಿಮ್ಮೆಲ್ಲಾ ಸಾಮಾನು ತೆಗೆದುಕೊಂಡು ಈಗಲೇ ಇಲ್ಲಿಂದ ಜಾಗ ಖಾಲಿಮಾಡಿ. ನಾನು ದೂರವಾಣಿ ಮೂಲಕ ಮೇಲಿನಿಂದ ನಿಮ್ಮನ್ನು ಓಡಿಸಲು ಆದೇಶ ಪಡೆದಿದ್ದೇನೆ ‘ ಎಂದು ಅರಚತೊಡಗಿದ.
‘ ಇನ್ನೊಂದು ಗಂಟೆಯಲ್ಲಿ ಇಲ್ಲಿಂದ ತೊಲಗದಿದ್ದರೆ ಪೊಲೀಸರು ಬಂದು ಹೊರಹಾಕುತ್ತಾರೆ. ಎಂತಹಾ ಕೆಟ್ಟ ದಿನಗಳು. ಒಬ್ಬರೂ ರಾತ್ರಿ ನಿದ್ದೆಮಾಡಲಾಗಲಿಲ್ಲ.
ಇಂತಹಾ ಹಲ್ಕಾಗಳು ಸರ್ಕಾರಿ ಕಟ್ಟಡಗಳಲ್ಲಿ ವಾಸಮಾಡಲು ಬಿಡಬಾರದು ‘ ಎಂದು ಅಬ್ಬರಿಸಿದ. ಅವನ ಕೋಪತಾಪ, ಹಾವಭಾವಗಳನ್ನು ಅಲ್ಲಿದ್ದ ಜನ ಮೂಖರಾಗಿ ನೋಡತೊಡಗಿದರು. ‘ ಮಲ್ಕಾನಿ ಸಾಹೇಬರೇ ನೀವೇಕೆ ನನ್ನತ್ತ ಹಾಗೇ ನೋಡುತ್ತಿದ್ದೀರಿ. ಇದು ಯೋಗ್ಯ ಜನ ವಾಸಿಸುವ ಸರ್ಕಾರಿ ಬಂಗಲೆ. ಸೂಳೆಮನೆಯಲ್ಲ ‘ ಎಂದು ಮತ್ತೆ ಅಬ್ಬರಿಸಿದ. ಅವನನ್ನು ಹೊರಹಾಕುವ ಪೀಠಿಕೆಯಾಗಿ ಮಲ್ಕಾನಿಯ ಮನೆಯ ಕುರ್ಚಿಯೊಂದನ್ನು ತೆಗೆದು ಹೊರಗೆಸೆದ.
ಅಲ್ಲಿತನಕ ಸುಮ್ಮನಿದ್ದ ಮಲ್ಕಾನಿ ‘ ಖಾನ್ ಸಾಹೇಬರೇ ಸ್ವಲ್ಪ ನಿಲ್ಲಿಸಿ. ಏನಾಯ್ತು ಎಂದು ಮೊದಲು ವಿಚಾರಿಸಿ. ಸಿಟ್ಟು, ಸೆಡವು ಬಿಡಿ ‘ ಎಂದು ಧೈರ್ಯದಿಂದ ಹೇಳಿದ.
‘ ಏನು. ಏನಾಯ್ತೋ. ನಿನ್ನ ಹೆಂಡತಿ ಯಾರ ಜೊತೆಗೋ ಮಲಗಿದ್ದಳು. ನೀನು ರಾತ್ರಿಯಿಡೀ ಗದ್ದಲಮಾಡಿದೆ. ಇಡೀ ಕಟ್ಟಡ ಇದರಿಂದ ರೌದ್ರಾವತಾರ ತಾಳಿದೆ ‘ ಎಂದು ಪಠಾಣ ಉತ್ತರಿಸಿದ.
‘ ಸುಳ್ಳು, ಸುಳ್ಳು, ಹಸೀ ಸುಳ್ಳು. ನಾನು ಮತ್ತು ನನ್ನ ಹೆಂಡತಿ ಯಾವುದೋ ವಿಷಯಕ್ಕೆ ಜಗಳವಾಡಿದೆವು. ಜಗಳವಾಡದ ಗಂಡ-ಹೆಂಡಿರು ಈ ಪ್ರಪಂಚದಲ್ಲಿ ಯಾರಾದರೂ ಇದ್ದಾರ
ಹೀಗಾದಾಗ ಒಂದೆರಡು ಪಾತ್ರೆ – ಪಗಡ ಒಡೆಯುವುದು, ಮನೆ ಅಲುಗಾಡುವುದು ಸಹಜ. ಇದರಲ್ಲಿ ಅಸಹಜವೇನಿದೆ. ನನ್ನ ನೆರೆಯವರು ಅಸೂಯೆಯಿಂದ ಕುದಿಯುತ್ತಿದ್ದಾರೆ. ನನ್ನನ್ನು ಒದ್ದೋಡಿಸಿದರೆ, ಈ ಫ್ಲಾಟ್ ತಮ್ಮ ನೆಂಟರಿಗೆ ಸಿಗುತ್ತೆ ಎಂದು ಮಸಲತ್ತು ಮಾಡಿದ್ದಾರೆ. ಇಲ್ಲೇನೂ ಆಗಿಲ್ಲ. ನನ್ನ ಹೆಂಡತಿಯಂತಹಾ ಒಳ್ಳೇ ಹೆಂಗಸಿನ ಮಾನಕಳೆಯುವುದು ಸರಿಯಲ್ಲ. ಇವರಿಗೆಲ್ಲಾ ಹಂಡತಿ, ಹೆಣ್ಣುಮಕ್ಕಳು ಇಲ್ಲವೇ ‘ ಎಂದು ಮಲ್ಕಾನಿ ಒಂದೇ ಉಸುರಿಗೆ ಉತ್ತರಿಸಿದ.
ಅಲ್ಲೀತನಕ ಮಲ್ಕಾನಿಯ ಉಚ್ಚಾಟನೆಗೆ ಕಾದಿದ್ದ ಜನರೆಲ್ಲಾ ನಿಧಾನವಾಗಿ ಖಾಲಿಯಾಗತೊಡಗಿದರು. ಕೊನೆಗೆ ಅಲ್ಲಿ ಉಳಿದಿದ್ದು ಕೇವಲ ಪಠಾಣ ಮತ್ತು ಮಲ್ಕಾನಿ.
ಇದೆಲ್ಲಾ ಮುಗಿದಾಗ ಇಡೀ ಕಟ್ಟಡ ಶವಾಗಾರದಂತೆ ಕಾಣುತ್ತಿತ್ತು. ಜನರೆಲ್ಲಾ ತಮ್ಮ ಮನೆ ಸೇರಿದ್ದರು. ಪಠಾಣ ತಲೆತಗ್ಗಿಸಿ, ಬಾಲ ಮುದುರಿದ ನಾಯಿಯನ್ನು ಹಿಡಿದುಕೊಂಡು ಅಲ್ಲಿದ್ದ ಕಾಲ್ಕಿತ್ತ. ಅವನು ಎಂಟನೇ ಮಹಡಿಯ ತನ್ನ ಫ್ಲಾಟ್ ಗೆ ಹೋಗುತ್ತಿದ್ದಾಗ ಜನರಾಡುತ್ತಿದ್ದ ಮಾತು ಕಿವಿಗೆ ಬಿತ್ತು.
‘ ಈ ಕಟ್ಟಡದಲ್ಲಿ ಜೀವನ ಮಜಬೂತಾಗಿದೆ. ಆದರೆ ಯಾರಾದರೂ ಸತ್ತಾಗ ಮಾತ್ರ ನಿದ್ದೆ ಮಾಡಲು ಸಾಧ್ಯವಿಲ್ಲ. ನಿನ್ನೆ ರಾತ್ರಿ ನಾಲ್ಕನೇ ಮಹಡಿಯಲ್ಲಿ ಯಾರೋ ಸತ್ತರು. ಇವತ್ತು ಇನ್ನೊಂದು ಹೆಣ ಬಿದ್ದಿದೆ


‍ಲೇಖಕರು avadhi

October 12, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: