ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಓಡಿ ಬಂದು ಟ್ರೈನ್ ಹತ್ತಿಕೊಂಡವಳು ಎದುರಿಗೆ ಕೂತು ಒಂದೇ ಸಮನೆ ಅಳತೊಡಗಿದಳು. ಬೋಗಿಯ‌ ಉಳಿದ ಬಹುತೇಕ ಸೀಟುಗಳು ಖಾಲಿಯಿದ್ದದ್ದಕ್ಕೋ ಏನೋ ನನ್ನೆದುರು ಬಂದು ಕೂತಿರಬೇಕೆಂದುಕೊಂಡೆ. ಹೀಗೊಬ್ಬಳು ಅಳುತ್ತಿರುವುದನ್ನು ಯಾರಾದರೂ ನೋಡಿದರೆ ನನ್ನ ಬಗ್ಗೆ ಏನೆಂದುಕೊಂಡಾರೆಂಬ ಭಯ ಆಗಿತ್ತು. ಹಾಗಂತ ಎದುರು ಕೂತ ಅಪರಿಚಿತಳ ಅಳುವಿನ ಕಾರಣ ಕೇಳಿ ಸಮಾಧಾನ ಮಾಡುವುದೂ ಸೂಕ್ತ ಅನ್ನಿಸಲಿಲ್ಲ. ಏನೋ ಸ್ವಲ್ಪ ಹೊತ್ತು ಅತ್ತು ಸುಮ್ಮನಾದಾಳು, ಯಾರದ್ದೋ ಸಾವಿನ ಸುದ್ದಿ ಬಂದಿರಬೇಕು ಅದಕ್ಕೆ‌ ದುಃಖ ತಡೆಯಲಾಗುತ್ತಿಲ್ಲವೇನೋ ಅಂದುಕೊಂಡೆ.

ಆದರೆ ಟ್ರೈನು ತನ್ನ ವೇಗ ಹೆಚ್ಚಿಸಿಕೊಂಡು ಎಷ್ಟೋ ದೂರ ಹೋದಮೇಲೂ ಆಕೆಯ ಅಳು ಕಡಿಮೆಯಾಗಲಿಲ್ಲ. ಅರ್ಧ ತಾಸಿನಿಂದ ಬಿಡದೆ ಅಳುತ್ತಿದ್ದವಳ ಸಂಕಟಕ್ಕೆ ಮರುಗದೆ ಹೋದರೆ ನಾನೆಂಥ ಮನುಷ್ಯ ಅನ್ನಿಸಿ, ‘ಯಾಕ್ಹೀಗೆ ಅಳುತ್ತಿದ್ದೀರಿ? ಏನು ಸಮಸ್ಯೆ ನಿಮಗೆ?’ ಎಂದು ಕೇಳಿಯೇ ಬಿಟ್ಟೆ. ಅದಾಗಲೇ ಕತ್ತಲಾಗಿದ್ದರಿಂದ ಆಕೆ ಕಿಟಕಿಯಾಚೆ ನೋಡುತ್ತ ಕೂರುವುದೂ ಸಾಧ್ಯವಾಗಲಿಲ್ಲ. ಹಾಗಾಗಿ ನನ್ನ ಪ್ರಶ್ನೆಗೆ ಉತ್ತರಿಸುವ ಮನಸ್ಸು ಮಾಡಿದಳೇನೋ.

‘ನಾಳೆ ನಾನು ಸಾಯ್ತೀನಿ ಅಂತ ಗೊತ್ತಾದ ಮೇಲೆ ಅಳೋದ್ ಬಿಟ್ಟು ಏನ್ ಮಾಡೋಕಾಗುತ್ತೆ ಹೇಳಿ?’

ಬೋಗಿಯಲ್ಲಿ ಬೇರೆ ಜನರೇ ಇಲ್ಲವೇನೋ ಅನ್ನುವಷ್ಟು ಕಡಿಮೆ ಇದ್ದಾರೆ. ಇವಳು ನೋಡಿದರೆ ನಾಳೆ ನಾನು ಸಾಯುತ್ತೇನೆ ಅಂತ ಹೇಳ್ತಿದ್ದಾಳೆ. ನನಗೆ ಭಯವಾಯ್ತು.

ಅಷ್ಟರಲ್ಲಿ ಅವಳೇ ಹೇಳೀದಳು, ‘ಒಂದಿಡೀ ದಿನ ಎಷ್ಟು ಪ್ರೀತಿಯಿಂದ ನೋಡಿಕೊಂಡೆ. ಆದರೆ ಅವನು ಹೀಗೆ ಮಾಡಿದ್ದು ನ್ಯಾಯನಾ?’ ಎಂದು ಮತ್ತೆ ಬಿಕ್ಕಳಿಸತೊಡಗಿದಳು. ಅವಳು ತಕ್ಕಮಟ್ಟಿಗೆ ಸಹಜವಾಗುವವರೆಗೆ ಸುಮ್ಮನಿದ್ದು ನಂತರ ಕೇಳಿದೆ.


‘ಯಾರ್ ಏನ್ ಮಾಡಿದ್ರು? ನೀವ್ಯಾಕೆ ನಾಳೆ ಸಾಯ್ತೀರಿ? ಹಾಗೆಲ್ಲ ಏನೂ ಆಗುವುದಿಲ್ಲ. ಧೈರ್ಯದಿಂದಿರಿ’

‘ಅದು ಯಾರ ಕೈಯಲ್ಲೂ ಇಲ್ವಲ್ಲ… ಅದು ನಡದೇ ನಡೆಯುತ್ತೆ’

‘ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತೀರ?’

‘ಹೇಗಂದ್ರೆ, ಅದ್ನ ಅವನೇ ನನಗೆ ಹೇಳಿದ್ದು’

‘ಏನು ಅಂತ ಸ್ವಲ್ಪ ವಿವರವಾಗಿ ಹೇಳ್ಬೋದಾ ಮೇಡಂ? ನನ್ನ ಗೆಳೆಯನೊಬ್ಬ ಪೊಲೀಸ್ ಇಲಾಖೆಯಲ್ಲಿದ್ದಾನೆ. ನಿಮಗೇನಾದರೂ ಥ್ರೆಟ್ ಇದ್ರೆ ಅವನ ಸಹಾಯ ಪಡೀಬೋದು ನಾವು’.

‘ಇದು ಮನುಷ್ಯರನ್ನ ಮೀರಿದ ಮನುಷ್ಯರ ವಿಷಯ ಸರ್. ಪೊಲೀಸರಿಂದ ಉಪಯೋಗವೇನೂ ಆಗುವಂತೆ ಕಾಣಿಸೊಲ್ಲ’ ಎಂದು ವಾಷ್ ರೂಂ ಗೆ ಹೋದಳು. ಅವಳ ಬ್ಯಾಗಿನಲ್ಲಿ ಅರ್ಧಂಬರ್ಧ ಕಾಣಿಸುತ್ತಿದ್ದ ಪುಸ್ತಕವೊಂದನ್ನು ಹೊರಗೆ ತಗೆದೆ‌. ಇನ್ನೇನು ಅದನ್ನು ತೆಗೆದು ನೋಡಬೇಕೆನ್ನುವಷ್ಟರಲ್ಲಿ ಆಕೆ ಬಂದು ಬಿಟ್ಟಳು.‌ ವಾಪಾಸ್ ಅಲ್ಲಿಯೆ ಇಡಬೇಕಾಯಿತು.

ಹಾಗೆ ನಾನಿಟ್ಟಿದ್ದ ಆ ಪುಸ್ತಕವನ್ನು ಬ್ಯಾಗಿನಿಂದ ಹೊರ ತಗೆದ ಆಕೆ ಅದರಲ್ಲಿದ್ದ ಈ ಸಾಲುಗಳನ್ನು ಓದಿದಳು;

ಆಕರ್ಷಣೆ

ನೀರಿಗೆ ಮೀನಿನ
ಮೇಲೇನು ಅದು ಇಲ್ಲ
ಮೀನಿಗೂ ನೀರಿನ
ಮೇಲೆ ಅಂಥಾದ್ದೇನೂ ಇಲ್ಲ

ಆದರೂ…

ಮೀನು ನೀರು ಬಿಟ್ಟು
ಎಂದೂ ದೂರಾಗುವುದಿಲ್ಲ
ಆದರೆ …
ನೀರು ತನ್ನಿಷ್ಟದಂತೆ
ಮೀನನ್ನು ಹೊರ ಚೆಲ್ಲಬಲ್ಲದು

ನೀರು ನಾನು
ಮೀನು ನೀನು …

‘ಈ ಕವನಕ್ಕೂ ನೀನು ಅಳುತ್ತಿರುವುದಕ್ಕೂ ಏನು ಸಂಬಂಧ ?’ ಎಂದೆ.

‘ನೋಡಿ , ಆ ಇಡೀ ಪುಸ್ತಕದಲ್ಲಿ ಅದೊಂದು ಬಿಟ್ಟು ಬೇರೇನೂ ಇಲ್ಲ’

‘ಹೌದು … ಆದರೆ ಕೆಲವು ಹಾಳೆಗಳನ್ನು ಹರಿದು ಹಾಕಿದ ಗುರುತಿದೆಯಲ್ಲ?’

ಅವಳು ವಾಷ್ ರೂಮ್ ಗೆ ಹೋದಾಗ ನಾನು ಪುಸ್ತಕ ತೆಗೆದು ನೋಡಿದ್ದನ್ನು ನೋಡಿಯೇ ಅವಳು ಅದರ ಬಗ್ಗೆ ಹೇಳಲಾರಂಭಿಸಿದ್ದು ನನಗೂ ಸ್ಪಷ್ಟವಾಗಿತ್ತು.

‘ಆಗಬೇಕಾದ್ದು ಮಾತ್ರ ಅದರಲ್ಲಿರುತ್ತಂತೆ. ಆಗಿದ್ದನ್ನು ಹರಿದು ಹಾಕಲಾಗುತ್ತಂತೆ’

‘ಓಹ್! ಅದೆನು ಮ್ಯಾಜಿಕ್ ಬುಕ್ ಏನ್ರಿ?’

‘ನಿಜ.‌ ಅದು ಮ್ಯಾಜಿಕ್ ಬುಕ್ಕೇ.‌ ಇಲ್ಲವಾದರೆ ನಾನು ಪರಿಚಯವೇ ಇಲ್ಲದ ಅವನನ್ನು ಹುಡುಕಿಕೊಂಡು ಬಂದು ಒಂದು ದಿನದ ಮಟ್ಟಿಗೆ ಪ್ರೇಮಿಸಿ ಇಂಥ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಿದ್ದೆನೆ ಹೇಳಿ ?’

‘ಏನದು ಒಂದು ದಿನದ ಮಟ್ಟಿಗೆ ಪ್ರೇಮಿಸೋದು ಅಂದರೆ?’

‘ಹೌದು ಸರ್. ಆತ ಹೇಳಿದ್ದು ಹಾಗಯೇ. ಅವನು ಒಂದು ದಿನದ ಮಟ್ಟಿಗೆ ನನ್ನನ್ನು ಪ್ರೇಮಿಸಬೇಕು ಎಂದು ಈ ಪುಸ್ತಕದಲ್ಲಿ ಬರೆದಿಟ್ಟಿದ್ದನಂತೆ. ಹಾಗಾಗಿಯೇ ನಾನು ಅವನನ್ನು ಹುಡುಕಿಕೊಂಡು ಬಂದು ಕಳೆದ ಇಪ್ಪತ್ನಾಲ್ಕು ತಾಸು ಅವನ ಪ್ರೇಮಿಯಾಗಿದ್ದೆ. ತುಂಬಾ ಆತ್ಮೀಯತೆಯಿಂದ, ಅಕ್ಕರೆಯಿಂದ, ಪ್ರೀತಿಯಿಂದ ನೋಡಿಕೊಂಡ. ನನಗೂ ಅವನು ಅಪರಿಚಿತನಾಗಿದ್ದರೂ ಅವನೊಡನೆ ಬೆರೆಯಬಾರದು ಎಂದು ಅನ್ನಿಸಲೇ ಇಲ್ಲ. ಅದ್ಯಾವ ಶಕ್ತಿಯಿದೆಯೋ ಈ ಪುಸ್ತಕದಲ್ಲಿ’ ಎಂದು ಮತ್ತೆ ಕಣ್ಣೀರಾದಳಾಕೆ.

‘ಈ ಪುಸ್ತಕದ ಬಗ್ಗೆ ಅವನೇನು ಹೇಳಿದ’ ಎಂದೆ.

‘ಹೇಳಿದ. ಎಲ್ಲಾ ಹೇಳಿದ. ಹಾಗಾಗಿಯೇ ಈ ಕವನ ಓದಿ ನನಗೆ ಭಯವಾಗ್ತಿರೋದು’

‘ಏನು ಈ ಪುಸ್ತಕದ ಬಗೆಗಿನ ರಹಸ್ಯ?’

‘ಒಂದು ದಿನ ಅವನಿಗೆ ತನ್ನ ಮನೆಯ ಅಟ್ಟದ ಟ್ರಂಕ್ ಒಂದರಲ್ಲಿ ತುಂಬಾ ಹಳೆಯದಾದ ಚೆಸ್ ಬೋರ್ಡ್ ಸಿಕ್ಕಿತಂತೆ. ಸುಮ್ಮನೆ ಚೆಸ್ ಪಾನ್ ಗಳನ್ನು ಜೋಡಿಸಿಟ್ಟುಕೊಂಡು ಒಂದು ಪಾನ್ ಮೂವ್ ಮಾಡಿಟ್ಟು ಬಂದಿದ್ದನಂತೆ. ಮಾರನೆಯ ದಿನ ಅಟ್ಟಕ್ಕೆ ಹೋಗಿ ನೋಡಿದರೆ ಎದುರುಗಡೆಯ ಪಾನ್ ಒಂದು ಆಟಕ್ಕೆ ತಕ್ಕನಂತೆ ಮೂವ್ ಆಗಿತ್ತಂತೆ. ಭಯ ಆದ್ರೂ ಇನ್ನೊಂದು ಪಾನ್ ಮೂವ್ ಮಾಡಿ ಬಂದ್ನಂತೆ. ಮರುದಿನ ಮತ್ತೊಂದು ಎದುರಾಳಿ ಪಾನ್ ಮೂವ್ ಆಗಿತ್ತಂತೆ. ಇದು ಹೀಗೆ ಮುಂದುವರಿದು ಕೊನೆಗೆ ಆಟದಲ್ಲಿ ಇವನೇ ಗೆದ್ದನಂತೆ. ಆಗ ಚೆಸ್ ಬೋರ್ಡ್ ಜೊತೆಯಲ್ಲಿಯೇ ಈ ಪುಸ್ತಕವೂ ಪ್ರತ್ಯಕ್ಷವಾಗಿತ್ತಂತೆ. ಖಾಲಿ ಇದ್ದ ಪುಸ್ತಕದ ಮೊದಲ ಪುಟದಲ್ಲಿ ಇದು ನಿನ್ನ ಆಸೆಗಳನ್ನು ಈಡೇರಿಸುವ ಪುಸ್ತಕ. ಇದರಲ್ಲಿ ಬರೆದಂತೆ ನಿನ್ನ ಜೀವನದಲ್ಲಿ ಆಗುತ್ತದೆ. ಬೇಕಾದರೆ ಪರೀಕ್ಷಿಸಿ ನೋಡು ಎಂದು ಬರೆದಿತ್ತಂತೆ. ಅದಕ್ಕವನು ಹಾಗಾದರೆ ನನಗೆ ಇನ್ನು ಒಂದು ವಾರದಲ್ಲಿ ಪ್ರಮೋಶನ್ ಬೇಕು ಎಂದು ಬರೆದನಂತೆ.‌ ಅದು ಹಾಗೇ ಆಯಿತಂತೆ. ಅದಾದ ಮೇಲೆ ಅವನು ಥ್ರಿಲ್ ಆಗಿ, ತನಗೆ ಸಿಕ್ಕ ಈ ಮ್ಯಾಜಿಕ್ ಬುಕ್ ಬಗ್ಗೆ ಖುಷಿಗೊಂಡು ಇನ್ನೂ ಏನೇನೋ ಬೇಡಿಕೆಗಳನ್ನಿಟ್ಟು ಪೂರೈಸಿಕೊಂಡನಂತೆ. ಅವೆಲ್ಲವನ್ನು ಅವನು ನನ್ನ ಬಳಿ ಹೇಳಲಿಲ್ಲ. ಆದರೆ ಅವನು ನನ್ನನ್ನು ಎರಡು ವರ್ಷದ ಹಿಂದೆ ಹೋಟೆಲ್ ಒಂದರಲ್ಲಿ ನೋಡಿ ಮನಸೋತಿದ್ದನಂತೆ. ಹಾಗಾಗಿ ನನ್ನ ಬಗ್ಗೆ ಏನೊಂದೂ ತಿಳಿಯದ ಕಾರಣ ಕೇವಲ ಒಂದು ದಿನದ ಮಟ್ಟಿಗೆ ನಾನು ಅವನ ಪ್ರೇಯಸಿಯಾಗಿರಬೇಕು ಎಂದು ಬರೆದಿಟ್ಟಿದ್ದನಂತೆ.”

‘ಛೇ ..ಎಂಥ ನೀಚ ಮನುಷ್ಯ ಅವನು’

‘ಅವನು ನೀಚ ಎಂದು ನನಗನ್ನಿಸಲಿಲ್ಲ . ಏಕೆಂದರೆ ನನ್ನ ಒಪ್ಪಿಗೆಯಿರುತ್ತೋ ಇಲ್ಲವೋ, ಅಥವಾ ನನಗೆ ಮದುವೆ ಆಗಿದ್ದರೆ ಎಂಬ ಕಾರಣಕ್ಕೆ ಅವನು ಕೇವಲ ಇಪ್ಪತ್ನಾಲ್ಕು ತಾಸುಗಳ ಪ್ರೀತಿಯನ್ನು ನನ್ನಿಂದ ಬಯಸಿದ್ದ. ಆದರೆ ನಾವಿಬ್ಬರೂ ಒಂದಿಡೀ ದಿನ ಕಳೆದ ಮೇಲೆ ಅವನಿಗೆ ನನ್ನಲ್ಲಿ ನಿಜವಾದ ಪ್ರೀತಿ ಹುಟ್ಟಿರಬಹುದು. ನಾನಿನ್ನು ಮದುವೆಯಾಗಿಲ್ಲ ಎಂದು ತಿಳಿದ ಮೇಲೆ ಅವನಿಗೆ ಏನನ್ನಿಸಿದೆಯೋ ತಿಳಿಯದು. ಆದರೆ ಅವನು ನಮ್ಮ ಭೇಟಿಯ ನಂತರ ಪುನಃ ಈ ಪುಸ್ತಕವನ್ನು ಎಂದೂ ಬಳಸಬಾರದೆಂದು ತೀರ್ಮಾನಿಸಿದ್ದಾಗಿಯೂ ಹೇಳಿದ್ದ. ಅದಕ್ಕಾಗಿಯೇ ಈ ಪುಸ್ತಕವನ್ನು ನನಗೆ ಕೊಡುವುದಾಗಿಯೂ ಹೇಳಿದ್ದ.’

‘ಅಂದರೆ ನೀವು ನಿಮಗೇನೂ ಗೊತ್ತಿಲ್ಲದೆಯೇ ನಿಮ್ಮೂರಿನಿಂದ ಅವನನ್ನು ಹುಡುಕಿಕೊಂಡು ಬಂದು ಈ ಇಪ್ಪತ್ನಾಲ್ಕು ತಾಸುಗಳ ಪ್ರೇಮ ಸಲ್ಲಾಪದಲ್ಲಿ ಭಾಗಿಯಾದಿರಿ ಎಂದು ನಾನು ನಂಬಬೇಕೆ?’ ಕೊಂಚ ಅನುಮಾನಾಸ್ಪದವಾಗಿಯೇ ಅವಳನ್ನು ಕೇಳಿದೆ.

‘ನೀವು ನಂಬೋದು ನನಗೆ ಮುಖ್ಯವಲ್ಲ. ನಾನು ಅಳುತ್ತಿದ್ದಾಗ ನೀವು ಕೇಳಿದಿರಿ ಅದಕ್ಕೆ ಹೇಳಿದೆ ಅಷ್ಟೆ.’ ಎಂದು ಆಕೆ ನೇರವಾಗಿ ಹೇಳಿದಾಗ ನಾನು ಅಂಥ ಪುಸ್ತಕವೊಂದು ಇರಬಹುದಾದ ಸಾಧ್ಯತೆಯ ಬಗ್ಗೆ ಅನುಮಾನವಿಟ್ಟುಕೊಂಡೇ ಅದನ್ನು ನಂಬಿದೆ.

‘ಅಂದರೆ ಪವಾಡದಂತೆ ನೀವು ಅವನನ್ನು ಒಂದು ದಿನಕ್ಕೆ ಪ್ರೇಮಿಸಬೇಕಾಯಿತು. ಸರಿ. ‌ಆದರೆ ನೀವು ಈಗ ಅಳುತ್ತಿರುವುದೇಕೆ ? ನಾನು ಸಾಯುತ್ತೇನೆ ಎಂದು ಕೊಳ್ಳುತ್ತಿರುವುದೇಕೆ?’

‘ಆ ಪುಸ್ತಕದಲ್ಲಿರುವ ಕವನ ಓದಿಯೂ ಅರ್ಥ ಮಾಡಿಕೊಳ್ಳದೆ ಹೇಗಿರಲಿ? ನೋಡಿ ಎಷ್ಟು ಸೂಚ್ಯವಾಗಿ ಬರೆದಿದ್ದಾನೆ. ನೀರು ಮೀನಿನ ಹೆಸರಿನಲ್ಲಿ.

‘ನೀರು ಮೀನನ್ನು
ತನ್ನಿಷ್ಟದಂತೆ ಹೊರ ಚೆಲ್ಲಬಲ್ಲದು’
ನೀರು ನಾನು
ಮೀನು ನೀನು’

‘ಅಂದರೆ ನೀರಿಂದ ಹೊರ ಚೆಲ್ಲಿದ ಮೀನಿನ ಗತಿಯೇ ನನಗೂ ಆಗುತ್ತದೆ ಎಂದರ್ಥವಲ್ಲವೆ?’ ಎಂದು ಆಕೆ ಕೇಳಿದಾಗ ಅಷ್ಟು ಚೆನ್ನಾಗಿದ್ದ ಕವನದ ಸಾಲುಗಳಲ್ಲಿ ಇಂಥ ಕೊಲೆಪಾತಕ ಉದ್ದೇಶವಿದೆಯಾ ಎಂದು ನಾನು ವಿಚಲಿತನಾದೆ.

‘ನೀವು ಆ ಪುಸ್ತಕವನ್ನು ಅವನಿಂದ ಪಡೆಯಬಾರದಿತ್ತು. ಅವನು ಮ್ಯಾಜಿಕ್ ಪುಸ್ತಕ ಎಂದು ಹೇಳಿದ ಮೇಲೂ ನಿಮ್ಮನ್ನು ನಿಮಗೆ ಗೊತ್ತಿಲ್ಲದೆ ಅದು ಅವನೆಡೆಗೆ ಸೆಳೆದು ತಂದಿದ್ದು ಗೊತ್ತಿದ್ದ ಮೇಲೂ ನೀವು ಅದನ್ನು ಪಡೆದು ತಪ್ಪು ಮಾಡಿದಿರಿ’ ಅಂದೆ.

‘ಹೌದು‌. ನಾನು ಈ ಪುಸ್ತಕ ನನ್ನ ಬಳಿಯೂ ಏನಾದರೂ ಮ್ಯಾಜಿಕ್ ಮಾಡಬಹುದೇನೋ ಎಂದು ತಂದೆ. ಆದರೆ ಅದು ಸಾಧ್ಯವೇ ಇಲ್ಲ ಎಂದು ಈಗ ಅರ್ಥವಾಯಿತು.’ ಎನ್ನುತ್ತಾ ಮತ್ತೆ ಅಳಲಾರಂಭಿಸಿದಳು.

ನನಗೆ ಆ ಪುಸ್ತಕ ನಾನು ತೆಗೆದು ಓದದಿದ್ದುದೇ ಒಳ್ಳೆಯದಾಯ್ತು ಎನ್ನಿಸಿತು.
‘ನೀವು ಎಲ್ಲಿ ಇಳಿಯುತ್ತೀರಿ?’ ಎಂದೆ.
ಆಕೆ ಹೆಸರು ಹೇಳಿದಳು. ಅದು ನಾನು ಇಳಿಯವ ಊರೇ ಆಗಿತ್ತು.

ಆಕೆಯ ಅಳು ನಿಂತಿರಲಿಲ್ಲ. ಆ ಕವನದ ಸಾಲುಗಳನ್ನೇ ನೇವರಿಸುತ್ತಾ ಬಿಕ್ಕಳಿಸುತ್ತಿದ್ದಳು…

ನಮ್ಮಿಬ್ಬರ ಊರಿನಲ್ಲಿ ಟ್ರೈನ್ ನಿಂತಾಗ ರಾತ್ರಿ ಹತ್ತಾಗಿತ್ತು. ಪ್ಲಾಟ್ ಫಾರಂ ಮೇಲೆ ಇಳಿದು ಹೋಗುವಾಗ ಅದೇಕೋ ಕೊನೆಯ ಬಾರಿ ಎಂಬಂತೆ ಕೈ ಬೀಸಿದ ಆಕೆಯನ್ನು ನೋಡಿ ಮರುಕ ಉಂಟಾಯಿತು.

“Dark deeds are better done in the dark” ಎಂದು ಎಲ್ಲೋ ಓದಿದ ನೆನಪಾಯ್ತು. ಈ ಕಗ್ಗತ್ತಲ ರಾತ್ರಿ ಆಕೆಯನ್ನು ಬಲಿ ಪಡೆದು ಬಿಡುತ್ತದಲ್ಲ ಎಂದು ನೆನೆದು ಭಾರವಾದ ಹೆಜ್ಜೆಯಿಡುತ್ತಲೇ ಮನೆಗೆ ಮರಳಿದೆ. ಮರುದಿನದಿಂದ ಸತತ ಒಂದು ವಾರಗಳ ಕಾಲ ಎಲ್ಲಾ ಲೋಕಲ್ ಪತ್ರಿಕೆಗಳ ನಿಧನ ವಾರ್ತೆಗಳನ್ನು ತಪ್ಪದೇ ಫಾಲೋ ಮಾಡಿದೆ. ಎಲ್ಲಿಯೂ ಅವಳ ಸಾವಿನ ಸುದ್ದಿ ಬಂದಿರಲಿಲ್ಲ. ಅಷ್ಟೊಂದು ಮ್ಯಾಜಿಕ್ ಇರುವ ಪುಸ್ತಕಕ್ಕೆ ಒಂದು ಸಾವಿನ ವಿಷಯವನ್ನು ಹೊರ ಬರದಂತೆ ಮುಚ್ಚಿಡುವುದೂ ಕಷ್ಟವಾಗಿರಲಾರದು ಎಂದುಕೊಂಡು ನಾನು ಕ್ರಮೇಣ ಮರೆತೆ.

ಮರೆತೆನೆಂದರೂ ಮರೆಯಲಾಗಿಲ್ಲ…

ಅವಳನ್ನು ಹೋಟೆಲ್ ನಲ್ಲಿ ನೋಡಿದ ಅವನು ಅವಳನ್ನು ಪ್ರೀತಿಸಿಯೇ ತೀರಬೇಕೆಂದು ಇಂಥದ್ದೊಂದ್ದು ಮ್ಯಾಜಿಕ್ ಬುಕ್ ನ ಕಟ್ಟುಕಥೆ ಸೃಷ್ಟಿಸಿ, ಅವಳು ತನ್ನಡೆಗೆ ಬರಲು ಬೇಕಾದ ಎಲ್ಲಾ ಏರ್ಪಾಡುಗಳನ್ನು ಮಾಡಿ, ಅವಳಿಗೆ ಸಾವಿನ ಭಯವನ್ನೂ ಹುಟ್ಟಿಸಿ ಅವನನ್ನು ಅವಳು ಬದುಕುಳಿಯುವ ಅನಿವಾರ್ಯತೆಯಿಂದಾಗಿ ಒಪ್ಪಿಕೊಂಡು, ಅವನೇ ಅವಳನ್ನು ಹುಡುಕಿಕೊಂಡು ಹೋಗಿ ಪುಸ್ತಕದಲ್ಲಿ ಬರೆದುದನ್ನು ಸಮಯಕ್ಕೆ ಮುಂಚೆ ಹರಿದು ಹಾಕಿ ಅವಳನ್ನು ಬದುಕಿಸಿದನೆಂದು … ಹೀಗೆಲ್ಲ ಅವರಿಬ್ಬರ ಬಗ್ಗೆ ಎಂದಾದರೊಂದು ದಿನ ನಾನು ಕೇಳುತ್ತೇನೆಂದು ಭಾಸವಾಗುತ್ತಲೇ ಇರುತ್ತದೆ …

ಅದಲ್ಲದೆ,
ಒಂದು ವೇಳೆ ನಿಜಕ್ಕೂ ಅಂಥದ್ದೊಂದು ಪುಸ್ತಕ ಇದ್ದು ಅವಳು ಸತ್ತ ಮೇಲೆ ಅವನು ಆ ಪುಸ್ತಕ ಹಿಂಪಡೆದು ದಿನಕ್ಕೊಬ್ಬರಂತೆ ತಾನು ಬಯಸಿದ ಹೆಣ್ಣನ್ನು ಪ್ರೇಮಿಸಿ ಅದೇ ಕವನ ಬರೆದು ಎಲ್ಲರನ್ನೂ ಕೊಂದು ಹಾಕುತ್ತಿದ್ದಾನೋ ಏನೋ ಎಂದು ಕೂಡ ಆಗಾಗ ಯೋಚನೆ ಬರುತ್ತದೆ …

ನಾನಂತೂ ಮೊದಲ ಯೋಚನೆಯನ್ನೇ ಬಲವಾಗಿ ನಂಬಿದ್ದೇನೆ. ಎರಡನೆಯದು ಬರೀ ಫ್ಯಾಂಟಸಿ. ಮೊದಲನೆಯದ್ದು ಫ್ಯಾಂಟಸಿ ಪ್ರೇಮಕಥೆ …

November 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This