ಇರಲಿ, ಹೋಗಿ ಬನ್ನಿ ಕ್ಯಾಸ್ಟ್ರೋ..

gnm-castro-vijaya-karnataka-27-11-2016

‘ವಿಜಯ ಕರ್ನಾಟಕ’ದ ಆಹ್ವಾನದ ಮೇರೆಗೆ ಬರೆದ ಲೇಖನ 

ಸಂಪಾದಕರಾದ ತಿಮ್ಮಪ್ಪ ಭಟ್ ಅವರಿಗೆ ವಂದನೆಗಳು 

150304151657-01-fidel-castro-0304-restricted-super-169

ಜಿ ಎನ್ ಮೋಹನ್

‘ಫಿಡೆಲ್ ಕ್ಯಾಸ್ಟ್ರೋ ಇನ್ನಿಲ್ಲ’- ಎನ್ನುವ ಸುದ್ದಿ ನನ್ನ ಕಿವಿಗೆ ಬೀಳುತ್ತಿದ್ದಂತೆ ನನ್ನ ಮನಸ್ಸು ಜಾರಿದ್ದು ಕ್ಯೂಬಾಗಲ್ಲ, ಅಮೆರಿಕಾಗೆ. ಅದಕ್ಕೆ ಕಾರಣವಿದೆ. 12 ವರ್ಷದ ಹಿಂದೆ ನಾನು ಅಮೆರಿಕಾದ ಅಟ್ಲಾಂಟಾದಲ್ಲಿರುವ ಸಿ ಎನ್ ಎನ್ ಕಚೇರಿಯಲ್ಲಿ ಕುಳಿತಿದ್ದೆ. ಕೊಠಡಿಯಲ್ಲಿ ಕತ್ತಲಾಯ್ತು. ಸಿ ಎನ್ ಎನ್ ನ ಸುದ್ದಿ ಬುಲೆಟಿನ್ ಆರಂಭವಾಯ್ತು. ಮೊದಲ ಹೆಡ್ ಲೈನ್- ‘ಫಿಡೆಲ್ ಕ್ಯಾಸ್ಟ್ರೋ ಡೆಡ್’ ಎಂದು ಘೋಷಿಸಿತು. ಆ ವೇಳೆಗಾಗಲೇ ಕ್ಯೂಬಾದ ಬಗೆಗಿನ ಸುದ್ದಿಯನ್ನು ಒಂದಿಂಚೂ ಬಿಡದೆ ಬೆನ್ನತ್ತಿ ಓದುತ್ತಿದ್ದ ನಾನು ಷಾಕ್ ಆದೆ.

ಕ್ಯಾಸ್ಟ್ರೋ ಸತ್ತಿದ್ದು ಯಾವಾಗ? ನನ್ನ ಕಣ್ಣನ್ನು ನಾನೇ ನಂಬಲಿಲ್ಲ. ಆದರೆ ಟಿ ವಿ ಸ್ಕ್ರೀನ್ ಮೇಲೆ ಸಂತಾಪದ ಸುರಿಮಳೆ ಆರಂಭವಾಯಿತು. ಫಿಡೆಲ್ ಕಾಸ್ಮೋ ಬದುಕಿನ ಪ್ಯಾಕೇಜ್ ಬಿತ್ತರವಾಯ್ತು. ನೋಡನೋಡುತ್ತಿದ್ದಂತೆ ಕ್ಯಾಸ್ಟ್ರೋ ಇಲ್ಲದ ಕ್ಯೂಬಾ ಏನಾಗಬಹುದು ಎನ್ನುವ ಪೇನಲ್ ಡಿಸ್ಕಷನ್ ಸಹಾ ಆರಂಭವಾಗಿ ಹೋಯಿತು. ನನ್ನ ಮೈಯನ್ನು ನಾನೇ ಒಮ್ಮೆ oswaldo-guayasamin-fidel-1995ಜಿಗುಟಿಕೊಂಡೆ. ಅರ್ಧ ಗಂಟೆಯ ಬುಲೆಟಿನ್ ಮುಗಿದು ಕೊಠಡಿಯಲ್ಲಿ ಮತ್ತೆ ಬೆಳಕು ಬಿದ್ದಾಗ ಎಲ್ಲರೂ ಗೊಂದಲದಲ್ಲಿದ್ದೆವು, ಸಿ ಎನ್ ಎನ್ ನ ಮುಖ್ಯಸ್ಥರಿಗೆ ನಮ್ಮ ಗೊಂದಲದ ಅರಿವಾಯಿತೇನೋ ‘ಇಲ್ಲ, ಕ್ಯಾಸ್ಟ್ರೋ ಸತ್ತಿಲ್ಲ’ ಎಂದರು. ಮತ್ತೆ ಷಾಕ್ ಗೆ ಒಳಗಾಗುವ ಸರದಿ ನನ್ನದಾಗಿತ್ತು. ಆಗ ಅವರು ಹೇಳಿದರು ‘ಕ್ಯಾಸ್ಟ್ರೊ ಸತ್ತಿಲ್ಲ, ಇದು ಅವರ ಸಾವಿಗೆ ನಮ್ಮ ಪ್ರಿಪರೇಷನ್’ ಸಿ ಎನ್ ಎನ್ ಜಗತ್ತಿನ ಯಾವುದೇ ಚಾನಲ್ ಗಳಿಗಿಂತ ಸದಾ ಒಂದು ಹೆಜ್ಜೆ ಮುಂದೆ. ಹಾಗಾಗಿಯೇ ಅಕಸ್ಮಾತ್ ಕ್ಯಾಸ್ಟ್ರೋ ಸತ್ತು ಹೋಗಿಬಿಟ್ಟರೆ ಎನ್ನುವ ಮುಂದಾಲೋಚನೆಯಿಂದ ಒಂದು ತಯಾರಿ ಮಾಡಿಕೊಂಡಿದ್ದರು. ನಾವು ನೋಡಿದ್ದು ಆ ತಯಾರಿ ಬುಲೆಟಿನ್ ಅನ್ನು.

ಈಗ ನಿಜಕ್ಕೂ ‘ಕ್ಯಾಸ್ಟ್ರೋ ಇನ್ನಿಲ್ಲ’ ಎನ್ನುವ ಸುದ್ದಿಯನ್ನು ಕೇಳಿ ಕುಳಿತಿರುವ ನನಗೆ ಇದು ಒಂದು ರೂಪಕದಂತೆ ಕಾಣುತ್ತಿದೆ. ಒಂದು ಪುಟ್ಟ ದೇಶ ಅಷ್ಟು ದೊಡ್ಡ ಅಮೆರಿಕಾವನ್ನು, ತನ್ನ ಕಿರುಬೆರಳ ಮೇಲೆ ಜಗತ್ತನ್ನೇ ಕುಣಿಸುತ್ತಿದ್ದ ಅಮೆರಿಕಾವನ್ನು ಇನ್ನಿಲ್ಲದಂತೆ ಮಣಿಸಿತು. ಹೊಟ್ಟೆ ಬಟ್ಟೆ ಕಟ್ಟಿಯಾದರೂ ಸ್ವಾಭಿಮಾನ ಮುಖ್ಯ ಎಂದು ಇಡೀ ದೇಶ ಎದ್ದು ನಿಂತಿತು. ಅದರ ಹಿಂದೆ ನಿಂತಿದ್ದದ್ದು ಇದೇ ಫಿಡೆಲ್ ಕ್ಯಾಸ್ಟ್ರೋ.

1997- ವಿಶ್ವ ವಿದ್ಯಾರ್ಥಿ ಹಾಗೂ ಯುವಜನ ಉತ್ಸವ ಆ ಬಾರಿ ಕ್ಯೂಬಾದಲ್ಲಿ ನಡೆಯುತ್ತಿತ್ತು. ಅದರಲ್ಲಿ ಯುವ ಪತ್ರಕರ್ತರ ಸಮಾವೇಶವಿತ್ತು. ಅದಕ್ಕೆ ಭಾರತದ ಪ್ರತಿನಿಧಿಯಾಗಿ ನಾನು ಆಯ್ಕೆಗೊಂಡಿದ್ದೆ. ಆ ವೇಳೆಗೆ ಜಾಗತೀಕರಣ ಕಳ್ಳ ಹೆಜ್ಜೆ ಹಾಕುತ್ತ ದೇಶದೊಳಗೆ ಬಂದಾಗಿತ್ತು. ಅಮೆರಿಕಾದ ಪಾಪ್ ಕೋಲಾ ಮಾಲ್ ಸಂಸ್ಕೃತಿ ಆಗಲೇ ದಟ್ಟವಾಗಿ ಪ್ರಭಾವ ಬೀರಿದ್ದವು. ಇಡೀ ದೇಶ ಅಮೆರಿಕಾದ ಸಮ್ಮೋಹಿನಿಗೆ ಒಳಗಾಗಿದ್ದಾಗ ನಾನು ಕ್ಯೂಬಾದಲ್ಲಿದ್ದೆ.

ಜಗತ್ತಿನ ನಾನಾ ದೇಶಗಳಿಂದ ಬಂದ ಸಾವಿರಾರು ಜನ ಕ್ಯೂಬಾದ ಅಧ್ಯಕ್ಷರ ಭವನದ ಮುಂದೆ ಒಗ್ಗೂಡಿದ್ದರು. ಎಲ್ಲರ ಬಾಯಲ್ಲೂ ‘ಗ್ವನ್ತನಮೇರ ಗ್ವಜಿರ ಗ್ವನ್ತನಮೇರಾ’ ಹಾಡಿನ ಸೊಲ್ಲು. ಎಲ್ಲರೂ ಹಾಗೆ ಹಾಡು ಕುಣಿತದಲ್ಲಿ ಮುಳುಗಿರುವಾಗಲೇ ಆ ಭವನದ ಮೆಟ್ಟಿಲಿನ ಮೇಲೆ ಕಾಣಿಸಿಕೊಂಡದ್ದು ಹಸಿರು ಯೂನಿಫಾರ್ಮ್, ಹಸಿರು ಕ್ಯಾಪ್ ತೊಟ್ಟ ಫಿಡೆಲ್ ಕ್ಯಾಸ್ಟ್ರೋ . ಅವರೇನೂ ಭಾಷಣ ಬಿಗಿಯಲಿಲ್ಲ. ಬದಲಿಗೆ ಒಂದು ಮಿನಿ ಜಗತ್ತಿನಂತೆ ಇದ್ದ ಜನರೆಡೆಗೆ ಕೈ ಬೀಸಿದವರೇ ಎಲ್ಲರಂತೆ ಗ್ವನ್ತನಮೇರಾ ಹಾಡಿಗೆ ತಾವೂ ದನಿಗೂಡಿಸಿದರು.
.
‘ಅವರು ಹಸಿದು ಸಾಯುವಂತೆ ಮಾಡಿದರು ಆದರೆ ನಾವು ಹಂಚಿ ತಿನ್ನುವುದನ್ನು ಕಲಿತೆವು’ ಎಂದ ಕ್ಯಾಸ್ಟ್ರೋ ಅಮೆರಿಕಾ ಎಂಬ ದೈತ್ಯ ಶಕ್ತಿಯ ವಿರುದ್ಧ ತೊಡೆ ತಟ್ಟಿ ನಿಂತೇ ಬಿಟ್ಟರು. ಅಮೆರಿಕಾ ಕ್ಯೂಬಾದ ಜೊತೆಗೆ ಯಾವ ರೀತಿಯ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ಆದೇಶಿಸಿತು. ಕ್ಯೂಬಾದ ಉತ್ಪನ್ನಗಳಿಗೆ ಅಮೆರಿಕಾವೇ ಮಾರುಕಟ್ಟೆಯಾಗಿತ್ತು. ಕ್ಯೂಬಾದಲ್ಲಿ ತಲ್ಲಣದ ಮಳೆ ಆರಂಭವಾಯಿತು. ಜನತೆ ಆತಂಕದಿಂದ ಕುಸಿದಾಗ ಕ್ಯಾಸ್ಟ್ರೋ ಹೇಳಿದರು. ‘ಮೋಡ ಇದೆ ಎಂದ ಮಾತ್ರಕ್ಕೆ ಆಕಾಶದಲ್ಲಿ ಸೂರ್ಯನಿಲ್ಲ ಎಂದು ಅರ್ಥವೇನು? ಮೋಡ ಹನಿಯೊಡೆದು ನೆಲಕ್ಕುದುರಿದರೆ ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರ್ಯನಿದ್ದಾನೆ’.

ಫಿಡೆಲ್ ಕ್ಯಾಸ್ಟ್ರೋ ಈ ಮಾತನ್ನು ಹೇಳಿದ್ದು ಕ್ಯೂಬನ್ನರಿಗಾದರೂ ಅದು ಇಡೀ ಜಗತ್ತಿಗೆ ಹೇಳಿದ ಮಾತಿನಂತಿತ್ತು.ಅಮೆರಿಕಾದ ಸಾಮ್ರಾಜ್ಯಶಾಹಿಯ ವಿರುದ್ಧ ಸೆಣಸಲು ಒದ್ದಾಡುತ್ತಿದ್ದ ಎಲ್ಲರಿಗೂ ಫಿಡೆಲ್ ಒಂದು ಮಿಣಿ ಮಿಣಿ ದೀಪದಂತೆ ಕಂಡಿದ್ದರು. ಅವರಿಗೆ ಗೊತ್ತಿತ್ತು. ಕ್ಯೂಬಾ ಒಂದೇ ಅಮೆರಿಕಾದ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು. ಆ ಕಾರಣಕ್ಕಾಗಿಯೇ ಅವರು ಹೇಳುತ್ತಿದ್ದರು- ‘ಬಹುಮತವಿರುವ ಒಂದು ಅಭಿಪ್ರಾಯಕ್ಕೆ ರಾಜನ ಶಕ್ತಿಗಿಂತಲೂ ಹೆಚ್ಚಾದ ಬಲವಿದೆ. ಅನೇಕ ನೂಲುಗಳಿಂದ ಹೆಣೆಯಲಾದ ಹಗ್ಗವು ಒಂದು ಸಿಂಹವನ್ನು ಬೇಕಾದರೂ ಕಟ್ಟಿ ಹಾಕಬಲ್ಲದು’

ಇದೇ ಕಾರಣಕ್ಕಾಗಿಯೇ ಇರಬೇಕು, ಜಗತ್ತಿನ ಅನೇಕ ದೇಶಗಳು ಫಿಡೆಲ್ ಕ್ಯಾಸ್ಟ್ರೋ ಪರವಾಗಿ ನಿಂತವು. ಅಮೆರಿಕಾ ದಿಗ್ಬಂಧನ ವಿಧಿಸಿದ ನಂತರ ಸೋವಿಯತ್ ದೇಶ ಕ್ಯೂಬಾ ನೆರವಿಗೆ ಧಾವಿಸಿ ಬಂದಿತು. ಆದರೆ ಸೋವಿಯತ್ ದೇಶವೇ ಕುಸಿದಾಗ ಕ್ಯೂಬಾ ಇನ್ನಿಲ್ಲದಂತೆ ಕಂಗೆಟ್ಟು ಹೋಯಿತು. ಆಗಲೇ ಫಿಡೆಲ್ ಕ್ಯಾಸ್ಟ್ರೊ ಭಾರತದತ್ತ ಮುಖ ಮಾಡಿದರು.

ನಾನು ಕ್ಯೂಬಾಗೆ ಹೋಗಲು ಸಜ್ಜಾಗುತ್ತಿದ್ದಾಗ ಎಲ್ಲರೂ ಹೇಳಿದರು. ‘ಒಂದಿಷ್ಟು ಮೈಸೂರು ಸ್ಯಾಂಡಲ್ ಸೋಪ್ ತೆಗೆದುಕೊಂಡು ಹೋಗು’ ಎಂದು. ನನಗೆ ವಿಚಿತ್ರ ಎನಿಸಿತ್ತು ಆದರೆ ಒಮ್ಮೆ ಕ್ಯೂಬಾದಲ್ಲಿಳಿದು ಅಲ್ಲಿನ ಮನೆಗಳಲ್ಲಿ ನಾನೂ ಒಬ್ಬನಾಗಿ ವಾಸ ಮಾಡಲು ತೊಡಗಿದಾಗ ಗೊತ್ತಾಯಿತು ಇಲ್ಲಿನ ಮನೆಗಳಲ್ಲಿ ಹಾಲಿಲ್ಲ, ಬ್ರೆಡ್ ಇಲ್ಲ, ಸಾಬೂನಿಲ್ಲ. ಅಲ್ಲಿಯವರೆಗೆ ನನಗೆ ಕ್ಯೂಬಾದಲ್ಲಿ ಕಷ್ಟವಿದೆ ಎಂದು ಗೊತ್ತಿತ್ತು ಆದರೆ ಅಲ್ಲಿದ್ದದ್ದು ಕಡು ಕಷ್ಟ. ನಾನು ತೆಗೆದುಕೊಂಡು ಹೋಗಿದ್ದ ಶ್ರೀಗಂಧದ ಸಾಬೂನು ನನ್ನ ಮತ್ತು ಕ್ಯೂಬಾದ ನಡುವೆ ಗೆಳೆತನದ ಪದಕವಾಗಿ ಹೋಗಿತ್ತು.

ಫಿಡೆಲ್ ಕ್ಯಾಸ್ಟ್ರೋಗೆ ಭಾರತ ಎಂದರೆ ಕಡುಗಾಲದ ಸನ್ಮಿತ್ರನಿದ್ದಂತೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಎಲ್ಲರೂ ಫಿಡೆಲ್ ರನ್ನು ತುಂಬು ಅಭಿಮಾನದಿಂದ ಕಂಡರು. ಅವರಷ್ಟೇ ಅಲ್ಲ, ಭಾರತದ ಜನಸಾಮಾನ್ಯರೂ.. ಫಿಡೆಲ್ ಕ್ಯೂಬಾದ ಕಷ್ಟವನ್ನು ಜಗತ್ತಿನೆದುರು ಬಿಚ್ಚಿಟ್ಟಾಗ ಭಾರತದಲ್ಲಿ ಕ್ಯೂಬಾ ಸೌಹಾರ್ದ ಸಮಿತಿ ಮನೆ ಮನೆಗಳಿಂದ ಗೋದಿಯನ್ನು ಸಂಗ್ರಹಿಸಿ ಕಳಿಸಿತು. ಕೊಲ್ಕೊತ್ತಾದ ಹಲ್ದಿಯಾ ಬಂದರಿನಿಂದ 10 ಸಾವಿರ ಟನ್ ಗೋದಿಯನ್ನು ಹೊತ್ತ ಕೆರಿಬ್ಬಿಯನ್ ಪ್ರಿನ್ಸೆಸ್ 37 ದಿನಗಳ ಕಾಲ ಪ್ರಯಾಣ ಮಾಡಿ ಕ್ಯೂಬಾ ಮುಟ್ಟಿದಾಗ ಫಿಡೆಲ್ ಕ್ಯಾಸ್ಟ್ರೊ ಭಾರತದ ಪ್ರಧಾನಿಯೇ ಬಂದಿದ್ದಾರೇನೋ ಎನ್ನುವಷ್ಟು ಸಂಭ್ರಮದಿಂದ ಅದನ್ನು ತಾವೇ ಬಂದರಿಗೆ ಹೋಗಿ ಸ್ವಾಗತಿಸಿದ್ದರು. ಅಷ್ಟೇ ಅಲ್ಲ ಅಲ್ಲೇ ಭಾಷಣ ಮಾಡಿದರು- ‘ಇದು ಕೇವಲ 10 ಸಾವಿರ ಟನ್ ಗೋದಿ ಮಾತ್ರವಲ್ಲ, ಇದು 10 ಸಾವಿರ ಟನ್ ಆತ್ಮವಿಶ್ವಾಸ. ಇದರಿಂದ ನಾನು ಕ್ಯೂಬಾದ ಪ್ರತಿಯೊಬ್ಬರಿಗೂ ಒಂದು ವಾರ ಅತ್ಯುತ್ತಮ ಬ್ರೆಡ್ ಒದಗಿಸುತ್ತೇನೆ’.

ಅಷ್ಟೇ ಅಲ್ಲ ಭಾರತದ ಈ ಪುಟ್ಟ ಕಾಣಿಕೆಯ ಬಗ್ಗೆ ಅವರು ಎಷ್ಟು ಭಾವುಕರಾಗಿದ್ದರೆಂದರೆ ‘ಸೌಹಾರ್ದತೆ ಎನ್ನುವುದು ರಕ್ತದಾನದಂತೆ..ಕಪ್ಪು ಅಥವಾ ಬಿಳಿ, ಆಸ್ತಿಕ ಅಥವಾ ನಾಸ್ತಿಕ, ಬಡವ ಇಲ್ಲವೇ ಶ್ರೀಮಂತ ಪುರುಷ ಇಲ್ಲವೇ ಮಹಿಳೆ ಎಂಬ ಬೇಧ ಇರುವುದಿಲ್ಲ. ಎಲ್ಲಾ ರಕ್ತವೂ ಕೆಂಪು. ಹಾಗೆಯೇ ನಿಮ್ಮ ಪ್ರೀತಿಯೂ..’ ಎಂದಿದ್ದರು. ಕ್ಯಾಸ್ಟ್ರೋಗೆ ಗಾಂಧಿ ಗೊತ್ತಿದ್ದಂತೆಯೇ ರವೀಂದ್ರನಾಥ ಟ್ಯಾಗೂರರೂ ಗೊತ್ತಿದ್ದರು. ಕ್ಯಾಸ್ಟ್ರೋಗೆ ದೆಹಲಿ ಗೊತ್ತಿದ್ದಂತೆ ಕೇರಳವೂ ಗೊತ್ತಿತ್ತು.

ondurupayiಕ್ಯಾಸ್ಟ್ರೋ ಕೈ ಕುಲುಕಿ ಅವರ ಭಾಷಣವನ್ನು ಕಿವಿದುಂಬಿಸಿಕೊಳ್ಳುತ್ತಾ ಕುಳಿತ ನನಗೆ ಅವರು ಕೇವಲ ಒಬ್ಬ ರಾಜಕಾರಣಿ ಮಾತ್ರ ಆನಿಸಲಿಲ್ಲ. ಆವರೊಳಗೊಬ್ಬ ಕವಿ ಇದ್ದಾನೆ ಎಂದು ಅನಿಸಿಹೋಯಿತು. ನಾನಿದ್ದ ಕ್ರೀಡಾಂಗಣದ ತುಂಬಾ ಜನರ ಬಾಯಲ್ಲಿ ಕ್ಯಾಸ್ಟ್ರೋ ಎನ್ನುವ ಕೂಗು ಮುಗಿಲುಮುಟ್ಟಿತ್ತು. ಕ್ಯಾಸ್ಟ್ರೋ ಅವರನ್ನೆಲ್ಲಾ ನೋಡುತ್ತಾ ಹೇಳಿದರು ‘ಸಗಣಿಯ ಮಧ್ಯೆಯಿಂದ ಸುಂದರ ಹೂಗಳು ಅರಳುವಂತೆ ಹೊಸ ದಾರಿಗಳು ಹುಟ್ಟುತ್ತಿವೆ’ ಎಂದು. ನನಗೆ ‘ಆಹಾ’ ಅನಿಸಿಹೋಯಿತು. ಕವಿ ಅಲ್ಲದವನಿಗೆ ಈ ಮಾತು ಸಾಧ್ಯವೇ ಎಂದು. ಭಾರತಕ್ಕೆ ವಾಪಸಾಗಿ ಪ್ಯಾಬ್ಲೋ ನೆರೂಡಾನ ಆತ್ಮಕಥೆಯನ್ನು ತಿರುವಿ ಹಾಕುತ್ತಿದ್ದೆ. ಅಲ್ಲಿ ನೋಡುತ್ತೇನೆ ಪ್ಯಾಬ್ಲೋ ನೆರೂಡಾ ಕೂಡಾ ಬೆರಗುಗಣ್ಣಿನಿಂದ ತಾನು ಕ್ಯಾಸ್ಟ್ರೋನ ಕಾವ್ಯಾತ್ಮಕ ಭಾಷಣ ಕೇಳಿದ್ದನ್ನು ಬಣ್ಣಿಸಿದ್ದಾನೆ.

ಸಕ್ಕರೆಯ ಬಟ್ಟಲು ಎಣಿಸಿದ ಕ್ಯೂಬಾದ ಒಡಲೊಳಗಿಂದ ಒಂದು ಹಕ್ಕಿ ಹಾರಿಹೋಗಿದೆ. ಇರಲಿ, ಹೋಗಿ ಬನ್ನಿ ಕ್ಯಾಸ್ಟ್ರೋ

‍ಲೇಖಕರು Admin

November 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಮ್ಮೊಳಗಿನ ಹಾಡು

'ನನ್ನೊಳಗಿನ ಹಾಡು ಕ್ಯೂಬಾ' ಓದಿ  ಪಾರ್ವತಿ ಎನ್  ನಿಮ್ಮೊಳಗಿನ ಹಾಡು ನನ್ನ ಕಾಡ ಹತ್ತಿದೆ ಬಾ ಎಂದು ಕರೆಯಹತ್ತಿದೆ ಕ್ಯೂಬಾ ಬಾರಿ ಬಾರಿ ಕೈ...

ಕ್ಯೂಬಾದಲ್ಲಿ ಮಮತಾ ಸಾಗರ್

C for Cuba ಕ್ಯೂಬಾಗಾಗಿ ಇಲ್ಲಿ ಕ್ಲಿಕ್ಕಿಸಿ  ಬದುಕಿದ್ದಾಗ ತಪ್ಪದೆ ನೋಡಬೇಕಾದ ಸ್ಥಳ ಕ್ಯೂಬಾ ಮಮತಾ ಜಿ ಸಾಗರ ಕ್ಯೂಬಾಕ್ಕೆ ಹೋಗೋ ಅವಕಾಶ...

4 ಪ್ರತಿಕ್ರಿಯೆಗಳು

 1. Shama, Nandibetta

  ವಾಹ್ ಸರ್.. ಎಂಥ ಬರಹ!! ಓದುತ್ತಿದ್ದಂತೆ ಕಣ್ಣು ತೇವ. ಇದು ಬರಹಗಾರರ ತಾಕತ್ತು.

  ಪ್ರತಿಕ್ರಿಯೆ
 2. ಸುಧಾ ಚಿದಾನಂದಗೌಡ

  ತುಂಬಾ ತುಂಭಾ ಸೊಗಸಾದ ವ್ಯಕ್ತಿಚಿತ್ರ ಲೇಖನ ಸರ್.
  ಯಾರನ್ನಾದರೂ ಕುರಿತು ಬರೆಯುವಾಗ ಒಂದು biographical note ಹಾಕಿಬಿಡುವುದು ನನ್ನಂಥವರ ಶೈಲಿ.
  ಕ್ಯಾಸ್ಟ್ರೋ ಕುರಿತು ನಾನು ಬರೆದಿದ್ದರೆ,
  ಎಲ್ಲಿ, ಯಾವಾಗ ಹುಟ್ಟಿದರು, ಏನು ಓದಿದರು, ಮಾಡಿದ ಸಾದನೆಗಳೇನು ಇತ್ಯಾದಿಗಳನ್ನೇ ಮುಖ್ಯಮಾಡಿಕೊಂಡಿರುತ್ತಿದ್ದೆ.
  ಅದಾವುದರ ಸುಳಿವೇ ಇಲ್ಲದೆ ಕ್ಯಾಸ್ಟ್ರೋರನ್ನು ನೀವು ಪರಿಚಯಿಸಿದ ರೀತಿ- this kind of writing is unique as Castro is.
  ಕ್ಯಾಸ್ಟ್ರೋ ಅವರದು ವಿಶೇಷ, ವೈಶಿಷ್ಟ್ಯಪೂರ್ಣ, ನಿಗಿನಿಗಿಸುವ ಸ್ವಾಭಿಮಾನಿ ವ್ಯಕ್ತಿತ್ವ.
  ಈಗವರು ಇತಿಹಾಸ ಸೇರಿ ಮತ್ತೂ ಜೀವಂತವಾದರು.
  ಅವರನ್ನು ಈ ರೀತಿ ಪರಿಚಯಿಸಿ, ವಿದಾಯ ಕೋರಿದ ನಿಮಗೆ ಅಭಿನಂದನೆ.
  ಧನ್ಯವಾದ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: