ಇಲ್ಲಿ ಅಂಥವರೂ ಇದ್ದಾರೆ…

-ಬಸವರಾಜು
ಕಲೆ, ಕಲಾವಿದ, ಕಲಾರಂಗ- ಅದೇ ಒಂದು ಪ್ರಪಂಚ. ಆ ಜಗತ್ತೇ ಬೇರೆ, ಆ ಜನಗಳೂ ಬೇರೆ. ಅವರ ಕಣ್ಣಿಗೆ ಕಾಣುವುದೂ ಬೇರೆ, ಕನಸೂ ಬೇರೆ, ಕ್ಯಾನ್ವಾಸಿನಲ್ಲಿ ಕಂಡಿರಿಸುವ ಕಲೆಯೂ ಬೇರೆ. ಒಂದು ಕಲಾಕೃತಿಯನ್ನು ನೋಡಿದಾಕ್ಷಣ- ಇದು ಚೆನ್ನಾಗಿದೆ, ಚೆನ್ನಾಗಿಲ್ಲ ಎನ್ನುವುದಕ್ಕಿಂತ, ಅದು ಏನನ್ನು ಧ್ವನಿಸುತ್ತದೆ ಎಂದು ಹೇಳುವುದೇ, ಭಾವ ಹೊಮ್ಮಿಸುವುದೇ ಕಲೆ. ಆದರದು ಸಾಮಾನ್ಯರಿಗೆ ಸುಲಭವಾಗಿ ಸ್ಪಂದನೆಗೆ ಸಿಲುಕುವ ಸಂಗತಿಯಲ್ಲ. ಕಲಾಜಗತ್ತೆ ಸೋಜಿಗ. ಅರ್ಥಪೂರ್ಣ ಕಲೆಯೂ ಅರ್ಥಹೀನ. ಇಲ್ಲದಿರುವಿಕೆಗೆ ಇರುವಿಕೆ, ಇರುವಿಕೆಯನ್ನು ಇಲ್ಲವಾಗಿಸುವಿಕೆಯ ಪ್ರಪಂಚವದು. ವಿಚಿತ್ರ ಜೀವಿಗಳ ಜಗತ್ತದು.
ಇಂತಹ ಕಲಾಜೀವಿಗಳ ಜಗತ್ತಿನಲ್ಲಿ, ಕಲಾವಿದ ಎಂಬ ಸೋಗಿಲ್ಲದೆ, ಸರಳವಾಗಿ ಬದುಕುತ್ತಿರುವವರು ನಮ್ಮ ನಡುವೆಯೇ ಇದ್ದಾರೆ. ಅವರು ಮಲ್ಲಿಕಾರ್ಜುನ ಭೀಮನಗೌಡ ಪಾಟೀಲ. ಅಂದರೆ ಎಂ.ಬಿ.ಪಾಟೀಲ್. ಸರಳ ರೇಖೆಯಂತೆ ಎತ್ತರದ ನಿಲುವುಳ್ಳ, ಕಪ್ಪಗಿನ, ತೆಳ್ಳಗಿನ ದೇಹದ, ಗುಳಿಬಿದ್ದ ಗಲ್ಲದ, ಸದಾ ಬಿಳಿ ಜುಬ್ಬಾ ಪೈಜಾಮ ಧರಿಸುವ, ನೋಡಿದಾಕ್ಷಣ ಹಳ್ಳಿಯಲ್ಲಿ ನಾಟಕ ಕಲಿಸುವ ಮೇಸ್ಟ್ರಂತೆ ಕಾಣುವ ಪಾಟೀಲರಿಗೆ, ಇದೇ ಡಿಸೆಂಬರ್ 10ಕ್ಕೆ 70 ವರ್ಷಗಳು ತುಂಬುತ್ತವೆ.

ಬಿಜಾಪುರ ಜಿಲ್ಲೆಯ ತಿಕೋಟಾದಲ್ಲಿ ಡಿಸೆಂಬರ್ 10, 1939ರಂದು ಜನಿಸಿದ ಪಾಟೀಲರು, ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರ ಕುಟುಂಬಕ್ಕೆ ಉತ್ತಮ ಶೈಕ್ಷಣಿಕ ಹಿನ್ನೆಲೆಯೂ ಇಲ್ಲ. ಕಲೆಗೆ ಬೇಕಾದ ಸೌಲಭ್ಯ, ಸಹಕಾರ, ಉತ್ತೇಜಕ ವಾತಾವರಣವೂ ಅಲ್ಲಿರಲಿಲ್ಲ. ಪಾಟೀಲರ ಪೋಷಕರು ತಕ್ಕಮಟ್ಟಿಗಿನ ಸ್ಥಿತಿವಂತರಾಗಿದ್ದರೂ, ವಿದ್ಯಾಭ್ಯಾಸದ ಕಲಿಕೆಗಾಗಿ ಶಾಲೆಗೂ ಸೇರಿಸಿರಲಿಲ್ಲ. ಆದರೆ ಬಾಲಕ ಪಾಟೀಲರಿಗೆ ಶಾಲೆಗೆ ಹೋಗಬೇಕೆಂಬ ಆಸೆ. ಅಪ್ಪನಿಗೆ, ಮಗ ಮನೆ ಕೆಲಸಕ್ಕಾಗಲಿ ಎಂಬ ಬಯಕೆ. ಎಮ್ಮೆ-ದನ ಮೇಯಿಸುವುದಕ್ಕಾಗಿಯೇ ಹುಟ್ಟಿದವನೇನೋ ಎನ್ನುವಂತೆ ಪಾಟೀಲರನ್ನು ಅವರ ತಂದೆ ಅಷ್ಟಕ್ಕೇ ಸೀಮಿತಗೊಳಿಸಿಬಿಟ್ಟಿದ್ದರು. ಪ್ರತಿದಿನ ಎಮ್ಮೆ-ದನ ಮೇಯಿಸುವುದು, ಕಸ ಬಾಚುವುದು, ಅವುಗಳ ನಿಗಾ ನೋಡುವುದು ಆತನ ಕಾಯಕವಾಯಿತು. ಎಮ್ಮೆ-ದನ ಮೇಯಿಸುವಲ್ಲಿಯೇ ಪಾಟೀಲರೊಳಗಿದ್ದ ಕಲಾವಿದ ಹುಟ್ಟಿದ್ದು. ಸುತ್ತಣ ಸ್ವಚ್ಛಂದ ಪರಿಸರ, ಹಸಿರು ಹಾಸು, ಬೆಟ್ಟ-ಗುಡ್ಡ… ಪ್ರಕೃತಿಯ ರಮ್ಯತೆಯನ್ನು ಕಣ್ತುಂಬಿಕೊಂಡರು. ಸೃಷ್ಟಿಯ ಸೋಜಿಗವನ್ನು ಕಂಡು ಬೆರಗಾದರು. ಸುತ್ತಲಿನ ಜಗತ್ತನ್ನು ಮಿದುಳಿಗೆ, ಮನಸ್ಸಿಗೆ ಇಳಿಸಿಕೊಂಡು ಧ್ಯಾನಿಸಿದರು. ಅದೇ ಆತನನ್ನು ಕಲಾವಿದನನ್ನಾಗಲು ಪ್ರೇರೇಪಿಸಿತು, ಕಲೆಯಾಗಿ ಅರಳಿತು, ಕಲಾರಸಿಕರ ಕಣ್ಮನ ಸೆಳೆಯಿತು, ಹೆಸರು ಗಳಿಸಿತು, ಬದುಕಿಗೊಂದು ಅರ್ಥ ತಂದುಕೊಟ್ಟಿತು.
ಆ ಸಂದರ್ಭದಲ್ಲಿ ಕಲೆಗೆ ಒತ್ತಾಸೆಯಾಗಿದ್ದವರು ಪಾಟೀಲರ ಮನೆಯಲ್ಲಿ ಒಡಹುಟ್ಟಿದ ಅಣ್ಣ ಮತ್ತು ಶಾಲೆಯಲ್ಲಿ ಬುರುಡ ಮಾಸ್ತರು. ಅಣ್ಣನ ಸಹಕಾರ ಹಾಗೂ ಬುಟ್ಟಿ ಹೆಣೆಯುವ ಪಂಗಡಕ್ಕೆ ಸೇರಿದ ಬುರುಡ ಮಾಸ್ತರ ಪ್ರೋತ್ಸಾಹ ಪಾಟೀಲರನ್ನು ಕಲಾವಿದನಾಗಲು ಹುರಿದುಂಬಿಸಿದವು. ಅದಕ್ಕೆ ಪೂರಕವಾಗಿ ಆ ಕಾಲದಲ್ಲಿ ಅವರ ಸುತ್ತಲೂ ಜರುಗುತ್ತಿದ್ದ ಸ್ವಾತಂತ್ರ್ಯ ಚಳುವಳಿಗಾರರ ಹೋರಾಟ, ಲಾವಣಿ ಪದ ಹಾಡುತ್ತಿದ್ದ ಹಾಡುಗಾರರು, ಊರಿಗೆ ಭಾಷಣಕ್ಕೆ ಬರುತ್ತಿದ್ದ ರಾಜಕೀಯ ನಾಯಕರು, ಆಗಾಗ ಕಣ್ಣಿಗೆ ಬೀಳುತ್ತಿದ್ದ ಕುದುರೆ ಸವಾರರು, ಚಳುವಳಿನಿರತರೊಂದಿಗಿನ ಒಡನಾಟ, ನಾಟಕಗಳಲ್ಲಿನ ಅಭಿನಯ- ಇವೆಲ್ಲವೂ ಪಾಟೀಲರನ್ನು ಕಲೆ-ಸಾಹಿತ್ಯದತ್ತ ಸೆಳೆದವು. ಸಂವೇದನಾಶೀಲ ಕಲಾವಿದನನ್ನಾಗಿ ರೂಪಿಸಿದವು.
ಆನಂತರ ಅಣ್ಣನ ಆಣತಿಯಂತೆ ಕಲಾ ವ್ಯಾಸಂಗಕ್ಕೆ ಮುಂಬೈಗೆ ಹೋಗಿದ್ದು, ಅಲ್ಲಿ ಬಣ್ಣ-ಕಾಗದ-ಬೋರ್ಡ್ ಕೊಂಡುಕೊಳ್ಳಲು ಹಣವಿಲ್ಲದೆ ಪರದಾಡಿದ್ದು, ಸಹಪಾಠಿಗಳೊಂದಿಗೆ ಸಲೀಸಾಗಿ ಒಡನಾಡಲಾಗದೆ ಅವಮಾನದಿಂದ ಕುಗ್ಗಿಹೋಗಿದ್ದು, ಹಸಿವಿನಿಂದ ಕಂಗೆಟ್ಟು ಪರೀಕ್ಷೆಗೆ ಕೂಡಲಾಗದೆ ಒದ್ದಾಡಿದ್ದು… ಒಂದೆರಡಲ್ಲ. ಹುಟ್ಟಿದ ಮನೆಯಲ್ಲೂ ಸುಖವಿಲ್ಲ, ಇಷ್ಟವಾದ ವಿಷಯವನ್ನು ಕಲಿಯುವಾಗಲೂ ಖುಷಿಯಿಲ್ಲ. ಅಪ್ಪನ ನೆರವು, ಹಿತನುಡಿ, ಪ್ರೋತ್ಸಾಹವಂತೂ ಇಲ್ಲವೇ ಇಲ್ಲ. ಇಷ್ಟೆಲ್ಲ ಇಲ್ಲಗಳ ನಡುವೆಯೂ ಪಾಟೀಲರು ಕಲಾ ವ್ಯಾಸಂಗ ಮುಗಿಸಿ ಮತ್ತೆ ತಿಕೋಟಾಗೆ ಬಂದಾಗ, ಅಲ್ಲಿ ಅವರು ಕಲಿತ ಕಲೆಗೆ ಕೆಲಸವೇ ಇಲ್ಲ. ಅಡಿಗಡಿಗೂ ತಿರಸ್ಕಾರ, ಅವಮಾನ.
ಹೀಗೆ ನಿರಂತರವಾಗಿ ಕಷ್ಟಗಳ ಕುಲುಮೆಯಲ್ಲಿಯೇ ಕುದ್ದೆದ್ದ ಪಾಟೀಲರು ಹುಬ್ಬಳ್ಳಿ, ಧಾರವಾಡ, ಬಿಜಾಪುರಗಳಲ್ಲಿ ಕೈಗೆ ಸಿಕ್ಕಿದ ಕೆಲಸವನ್ನೆಲ್ಲ ಮಾಡಿದರು. ಕೊನೆಗೆ ವಾತರ್ಾ ಮತ್ತು ಪ್ರಚಾರ ಇಲಾಖೆಯ ಕಲಾವಿದನ ಕೆಲಸಕ್ಕೆ ಆಯ್ಕೆಯಾದರು. ಸವದತ್ತಿ ತಾಲೂಕಿನ ಉಗರಗೋಳದ ಅರ್ಚಕರ ಮಗಳು ಕಸ್ತೂರಿಯನ್ನು ಮದುವೆಯಾದರು. ಹುಬ್ಬಳ್ಳಿಯಲ್ಲಿ 12 ರೂಪಾಯಿ ಬಾಡಿಗೆ ಮನೆ ಹಿಡಿದರು. ಅವತ್ತಿಗೆ ಈ ನವವಿಹಾಹಿತರ ನಡುವೆ ಇದ್ದದ್ದು ಪರಸ್ಪರ ಪ್ರೀತಿ-ವಿಶ್ವಾಸವೇ ಹೊರತು ಮತ್ತ್ಯಾವ ಆಡಂಬರ, ಆಸ್ತಿ-ಪಾಸ್ತಿಯೂ ಅಲ್ಲ. ಇನ್ನೊಬ್ಬರನ್ನು ನೋಡಿ ಕೀಳರಿಮೆಯಿಂದ ನರಳಲೂ ಇಲ್ಲ.
ಓದಿದ್ದು ಮುಂಬೈನಲ್ಲಿ, ಕೆಲಸಕ್ಕಾಗಿ ಅಲೆದಾಡಿದ್ದು ಹುಬ್ಬಳ್ಳಿ-ಧಾರವಾಡಗಳಂತಹ ನಗರಗಳಲ್ಲಿ. ಆಮೇಲೆ ಕೊನೆಗೂ ಒಂದು ಕೆಲಸ ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟು ನೆಲೆಯಾದದ್ದು ಬೆಂಗಳೂರಿನಲ್ಲಿ. ಇಷ್ಟೆಲ್ಲ ಅಲೆದಾಡಿದ, ಅನುಭವಿಸಿದ ಪಾಟೀಲರು ಇವತ್ತಿಗೂ ಅದೇ ಹಳ್ಳಿಯ ಮುಗ್ಧ.
ತಿಕೋಟಾ ಎಂಬ ಪುಟ್ಟ ಹಳ್ಳಿಯಿಂದ ಮುಂಬೈಗೆ, ಅಲ್ಲಿಂದ ಬೆಂಗಳೂರಿಗೆ, ದೇಶದೆಲ್ಲೆಡೆ ನಡೆಯುವ ಹತ್ತು ಹಲವು ಕಲಾ ಪ್ರದರ್ಶನಗಳಲ್ಲೆಲ್ಲ ಸುತ್ತಾಡಿರುವ, ಭಾಗವಹಿಸಿರುವ, ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿರುವ, ಕಲಿತ ಕಲೆಯನ್ನು ಹಂಚಿಕೊಂಡಿರುವ ಪಾಟೀಲರಿಗೆ ಹೊಸ ಜಗತ್ತಿನ ನಯ-ನಾಜೂಕುಗಳೂ ಗೊತ್ತು. ಆದರೆ ಅದು ಅವರಿಗೆ ಬೇಕಿಲ್ಲ. ಹೈ-ಫೈ ಕಲೆ, ಕಲಾವಿದರೂ ಗೊತ್ತು. ಆದರೆ ಅವರಂತಲ್ಲ. ಕಲೆಯನ್ನು ಮಾರುವ ಹೊಸ ತಲೆಮಾರಿನ ಕಲಾವಿದರ ಮಾರ್ಕೆಟ್ ಕಲೆಯೂ ಗೊತ್ತು. ಆದರೆ ಅದೂ ಬೇಕಿಲ್ಲ. ಪ್ರತಿಭೆಯನ್ನು ಪಣಕ್ಕಿಟ್ಟು ಪ್ರಶಂಸೆಗೊಳಗಾಗುವುದಕ್ಕಿಂತಲೂ ಹೆಚ್ಚಾಗಿ, ಕೇವಲ ಕಾಂಟಾಕ್ಟ್ನಿಂದಲೇ ಮಿಂಚಿದವರು, ಮೆರೆದವರು, ಕುಬೇರರಾದವರೂ ಗೊತ್ತು. ಅದಕ್ಕೂ ಅವರು ಮನಸ್ಸು ಮಾಡಲಿಲ್ಲ. ಒಳಗೊಂದು ನಡೆ, ಹೊರಗೊಂದು ನುಡಿ ಇವರಿಗೆ ಗೊತ್ತೇ ಇಲ್ಲ. ಅದನ್ನು ಅರಿಯುವ, ಅರಗಿಸಿಕೊಳ್ಳುವ ಅನಿವಾರ್ಯತೆಯೂ ಒದಗಿ ಬರಲಿಲ್ಲ. ಅಪ್ಪಟ ಹಳ್ಳಿಯವ ಎಂಬುದಕ್ಕೆ ಮಾದರಿ ಬೇಕಿದ್ದರೆ- ಈಗಲೂ ಪಾಟೀಲರನ್ನು ಹೆಸರಿಸಬಹುದು. ಅಷ್ಟರಮಟ್ಟಿಗೆ ಅವರು ಅವರಾಗಿಯೇ ಉಳಿದಿದ್ದಾರೆ. ಹಳ್ಳಿಯ ಸೊಗಡು, ಸರಳತೆ, ಸದಾಚಾರ, ಸಜ್ಜನಿಕೆಗಳು ಇವತ್ತಿಗೂ ಅವರಲ್ಲಿವೆ. ಕಲಾವಿದ ಎಂಬ ಅಹಂ ಇಲ್ಲ, ಅನಗತ್ಯ ಪೋಸಿಲ್ಲ. ಕಿರಿಯ ಕಲಾವಿದರ ಪಾಲಿನ ಅಚ್ಚುಮೆಚ್ಚಿನ ಮೇಸ್ಟ್ರಾಗಿರುವ, ಎಲ್ಲರನ್ನು ಸಮಾನವಾಗಿ ಗೌರವದಿಂದ ಕಾಣುವ, ಭೇದಭಾವ ಎಂದರೇನೆಂದೇ ತಿಳಿಯದ ಪಾಟೀಲರನ್ನು ಕಂಡರೆ ಕಲಾ ವಲಯದಲ್ಲಷ್ಟೇ ಅಲ್ಲ, ಇತರ ವಲಯದಲ್ಲಿಯೂ ಅಪಾರ ಗೌರವವಿದೆ, ಪ್ರೀತಿಯಿದೆ.
ಎಂ.ಬಿ.ಪಾಟೀಲರ ಬಗ್ಗೆ ಇತ್ತೀಚೆಗಷ್ಟೇ ನಿಧನರಾದ ಬಿ.ಎಸ್.ವೆಂಕಟಲಕ್ಷ್ಮಿಯವರು ಒಂದು ಕಡೆ ಬರೆಯುತ್ತಾ, `ಭೀಮನಂತೆ ಬಲಿಷ್ಠನಲ್ಲ, ಗೌಡರಿಗಿರುವ ಗತ್ತೂ ಇಲ್ಲ, ಪಟೇಲರಂತೆ ದರ್ಪವನ್ನೂ ತೋರುವವರಲ್ಲ- ಆದರೂ ಹೆಸರಲ್ಲಿ- ಮಲ್ಲಿಕಾಜರ್ುನ ಭೀಮನಗೌಡ ಪಾಟೀಲ- ಎಲ್ಲವೂ ಇದೆ’ ಎಂದು ದಾಖಲಿಸಿದ್ದಾರೆ. ಇದು ಅಕ್ಷರಶಃ ನಿಜ. ಒಂದಷ್ಟು ಆತ್ಮೀಯ ಗೆಳೆಯರು, ಗಂಟೆಗೊಂದು ಟೀ, ಕೈ ಬೆರಳುಗಳ ಸಂದಿಯಲ್ಲಿ ಸದಾ ಕಿಡಿಕಾರುವ ಸಿಗರೇಟು- ಇಷ್ಟಿದ್ದುಬಿಟ್ಟರೆ- ಪಾಟೀಲರಿಗೆ ಅದೇ ಸ್ವರ್ಗ. ಇಂತಹ ಪಾಟೀಲರು ಭಾವಚಿತ್ರಗಳನ್ನು ಬಿಡಿಸುವುದರಲ್ಲಿ ಸಿದ್ಧಹಸ್ತರು. ಮ್ಯೂರಲ್ಗಳನ್ನು ಮಾಡುವುದರಲ್ಲಿ ನಿಪುಣರು. ರೇಖೆಗಳ ಮೇಲೆ ಪ್ರಭುತ್ವ ಸಾಧಿಸಿರುವ ದೇಸೀ ಪ್ರತಿಭಾವಂತರು. ಇವರ ಕುಂಚದಿಂದ ಜಾನಪದ ಜಗತ್ತು ಜೀವಂತವಾಗಿದೆ. ಜೀವವುಕ್ಕುವ ಭಾವಚಿತ್ರಗಳು ಬೆರಗು ಹುಟ್ಟಿಸುತ್ತವೆ. ಅವರ ಕಲಾಕೃತ್ರಿಗಳಲ್ಲಿ ತಾಜಾತನವಿದೆ, ಮಾಂತ್ರಿಕತೆಯಿದೆ. ಪಾಟೀಲರು ಬಳಸುವ ಬಣ್ಣಗಳ ತೀವ್ರತೆ, ವಿಶಿಷ್ಟ ಶೈಲಿಯ ಬಣ್ಣಗಳ ಮಿಶ್ರಣ- ಎದ್ದು ಕಾಣುವ ಅಂಶ. ಹಾಗೆಯೇ ಅವರ ಸ್ಟ್ರೋಕ್ಗಳು ನಿಜದ ಪ್ರತಿಮೆಗಳನ್ನು ಕಣ್ಮುಂದೆ ತಂದು ನಿಲ್ಲಿಸುತ್ತವೆ.
ಕಳೆದ ಐದು ದಶಕಗಳಿಂದ ನಿರಂತರವಾಗಿ ತಮ್ಮ ಕುಂಚದಿಂದ ಬಣ್ಣಗಳೊಂದಿಗೆ ಅದ್ಭುತ ಸೃಷ್ಟಿಸುತ್ತಿರುವ ಕಲಾವಿದ ಪಾಟೀಲರು ಈಗ 70 ವಸಂತಗಳನ್ನು ದಾಟಿ 71ಕ್ಕೆ ಕಾಲಿಡುತ್ತಿದ್ದಾರೆ. ತುಳಿದ ಹಾದಿಯಲ್ಲಿ ಧಣಿದಿದ್ದಾರೆ, ಮಾಗಿದ್ದಾರೆ. ಬದುಕಿನುದ್ದಕ್ಕೂ ಆಡಂಬರ, ಅಬ್ಬರ, ಅಟಾಟೋಪಗಳಿಗೆ ಜಾಗವೇ ಕೊಡದಂತೆ; ಅಸ್ಥಿರತೆ, ಹಣಕಾಸಿನ ಕೊರತೆ ಕಾಡಿದರೂ ಕೀಳರಿಮೆಯತ್ತ ಮನಸ್ಸು ಜಾರದಂತೆ ಜಾಗರೂಕತೆಯಿಂದ ಬದುಕಿದ್ದಾರೆ. ಹೀಗೆ ಬದುಕುವುದು- ಆದರ್ಶ, ನಂಬಿಕೆ, ತತ್ವ-ಸಿದ್ಧಾಂತಗಳಿಗೆ ಕಟ್ಟುಬಿದ್ದು- ಬಲು ಕಷ್ಟ. ಆದರೂ ಬದುಕನ್ನು ಬಂದಂತೆಯೇ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾಗುವಂತೆ ಬದುಕಿದ್ದಾರೆ. ಇವತ್ತು ಹಿಂತಿರುಗಿ ನೋಡಿದರೆ- ಸವೆಸಿದ ಹಾದಿಯ ಬಗ್ಗೆ ಸಂತೃಪ್ತಭಾವವಿದೆ. ನೆಮ್ಮದಿಯ ನಿಟ್ಟುಸಿರಿದೆ. ಇದಕ್ಕಿಂತ ಇನ್ನಾವ ಪ್ರಶಸ್ತಿ-ಪುರಸ್ಕಾರಗಳು ಬೇಕೇಳಿ?
`ಕಲಾವಿದನಿಗೆ ವಿಶ್ರಾಂತಿರಹಿತ ವ್ಯಾಮೋಹವಿರಬೇಕು, ಕಾಣದ್ದನ್ನು ಕಂಡಿರಿಸಬೇಕೆಂಬ ತುಡಿತವಿರಬೇಕು’ ಎನ್ನುವ ಪಾಟೀಲರು, ನಿಜಕ್ಕೂ ನುಡಿದಂತೆಯೇ ನಡೆದವರು, ಕೈ ಹಿಡಿದ ಕಲೆಗೆ ಬೆಲೆ ತಂದವರು. ಇವತ್ತಿನ ಹೊಸ ತಲೆಮಾರಿನ ಕಲಾವಿದರು ತಮ್ಮ ಕಲಾಕೃತಿಗಳಿಗೆ ಜಾಗತಿಕ ಮಾರುಕಟ್ಟೆ ಕುದುರಿಸಿಕೊಳ್ಳುವ, ಮಿಂಚುವ, ಮೆರೆಯುವ, ಹಣ ಮಾಡುವ ಹಪಾಹಪಿಯಲ್ಲಿದ್ದರೆ, ಪಾಟೀಲರು ತಮ್ಮ ಪಾಲಿಗೆ ಬಂದ ತಣಿಗೆಯ ತುತ್ತಿಗಷ್ಟೆ ಆಸೆಪಟ್ಟವರು. ತಂತ್ರಗಾರಿಕೆ, ಚಾಣಾಕ್ಷತೆ, ಕುಟಿಲತೆಗಳ ಅಬ್ಬರದಲ್ಲಿ, ಅವಕಾಶವಾದಿಗಳ ಆರ್ಭಟದಲ್ಲಿ, ಹಣ-ಅಧಿಕಾರಕ್ಕಷ್ಟೇ ಬೆಲೆ ಕೊಡುವ ಕಾಲಘಟ್ಟದಲ್ಲಿ ಎಲೆಮರೆಯ ಕಾಯಿಯಂತೆ ಕಂಡೂ ಕಾಣದಂತಿರಲು ಕಾತರಿಸಿದವರು. ಇಲ್ಲಿ ಇಂಥವರೂ ಇದ್ದಾರೆ. ದುರುಳರು ಜಾಸ್ತಿಯಾದಷ್ಟೂ, ಸಜ್ಜನರ ಸಂಖ್ಯೆ ಕಡಿಮೆಯಾದಷ್ಟೂ- ಈ ವ್ಯತ್ಯಾಸ ಗುರುತಿಸಲಿಕ್ಕಾದರೂ ಇಂಥವರು ಇರಬೇಕು.

‍ಲೇಖಕರು avadhi

December 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಬಸವರಾಜು

    ಆತ್ಮೀಯ ಓದುಗರೆ, ಕಲಾವಿದ ಎಂ.ಬಿ.ಪಾಟೀಲರು ಹುಟ್ಟಿದ್ದು 10-12-1939ರಂದು. ಅಂದರೆ ಇವತ್ತಿಗೆ ಅವರಿಗೆ 70 ವರ್ಷಗಳು ತುಂಬುತ್ತವೆ. ಲೇಖನದ ಎರಡು ಮೂರು ಕಡೆ ಅರವತ್ತು ವರ್ಷಗಳು ಎಂದಾಗಿದೆ. ಅದನ್ನು 70 ವರ್ಷಗಳೆಂದು ಓದಿಕೊಳ್ಳಬೇಕಾಗಿ ವಿನಂತಿ. ಕಣ್ತಪ್ಪಿನಿಂದಾದ ಪ್ರಮಾದಕ್ಕೆ ಕ್ಷಮೆ ಇರಲಿ.
    -ಬಸವರಾಜು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: