ಇಲ್ಲಿ ಎಲ್ಲರೂ ನಗ್ನರು..

ನಗ್ನತೆಯೇ ಮೈವೆತ್ತ ಓಸ್ಲೋ ದ ಶಿಲ್ಪಕಲಾ ಉದ್ಯಾನವನ -ಡಾ ಗುರುಮೂರ್ತಿ ಹೆಗಡೆ ಸಾಗರದಾಚೆಯ ಇಂಚರ ಬರಹ ಆರಂಬವಾಗುವುದೇ ನಾರ್ವೆಯ ಹ್ರದಯಭಾಗ, ರಾಜಧಾನಿ ಓಸ್ಲೋ ದ ಮೂಲಕ. ಸುಮಾರು 1048 ರಲ್ಲಿ ಹೆರಾಲ್ಡ್ 3, ರಾಜನಿಂದ ನಿರ್ಮಿತವಾದ ಓಸ್ಲೋ , ಸುಮಾರು 1624 ರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಬಹುತೇಕ ನಿರ್ನಾಮ ವಾಯಿತು. ಪುನಃ ಅದನ್ನು ಡ್ಯಾನಿಶ್ ರಾಜ ಕ್ರಿಸ್ತಿಯನ್ 3 ಕಟ್ಟಿದ. ಅದಕ್ಕೆ ”ಕ್ರಿಸ್ತಯಾನ” ಎಂದು ಕರೆಯಲಾಯಿತು. 1925 ರಲ್ಲಿ ಪುನಃ ಅದರ ಸ್ವಂತ ಹೆಸರಾದ ಓಸ್ಲೋ ವನ್ನು ನೀಡಲಾಯಿತು. ಇದು ಓಸ್ಲೋ ದ ಬಗೆಗಿನ ಚಿಕ್ಕ ಚೊಕ್ಕ ವಿವರಣೆ. ಇಂಥಹ ರಾಜಧಾನಿಯನ್ನು ನಾವು ತಲುಪಿದಾಗ ಬೆಳಗಿನ ಸುಮಾರು 10-45 ಆಗಿತ್ತು. ಕೈಯಲ್ಲಿ ನಕ್ಷೆ ಇದ್ದಿದ್ದರಿಂದ ನಾವು ಉಳಿದುಕೊಂಡಿದ್ದ ಹೋಟೆಲ್ ಹುಡುಕಲೇನು ಕಷ್ಟವಾಗಲಿಲ್ಲ. ಓಸ್ಲೋ ದ ರೈಲು ನಿಲ್ದಾಣ ಅತ್ಯಂತ ವ್ಯವಸ್ತಿತ ವಾದ ರೈಲು ನಿಲ್ದಾಣ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ (http://en.wikipedia.org/wiki/Oslo_Central_Station). ಹೋಟೆಲ್ ಗೆ ಹೋದ ಕೂಡಲೇ ಹೊಟ್ಟೆಗೆ ವ್ಯವಸ್ತೆ ಮಾಡಿಕೊಂಡು ಓಸ್ಲೋ ದಲ್ಲಿ ಇರುವ ಸ್ವಲ್ಪ ಸಮಯವನ್ನು ಹೇಗೆ ಉಪಯೋಗಿಸುವುದು ಎಂದು ಯೋಚಿಸಿದೆವು. ಕೆಲವೊಮ್ಮೆ ಏನೋ ನೋಡಲು ಹೋಗಿ, ಏನೇನೋ ನೋಡಿ, ಕೊನೆಗೆ ಏನು ಇಷ್ಟವಾಗದೆ, ಆ ನಗರವನ್ನೇ ಬೈದು ಬರುತ್ತೇವೆ. ಯಾವುದೇ ನಗರಕ್ಕೆ ಹೋದಾಗ ಅಲ್ಲಿನ ಬಹು ಮುಕ್ಯವಾದ ಕೆಲವನ್ನು ನೋಡಲೇಬೇಕು ಎನ್ನುವ ಸಿದ್ದಾಂತ ನನ್ನದು. ಎಲ್ಲ ನಗರಗಳಂತೆಯೇ ಓಸ್ಲೋ ದಲ್ಲೂ ನೋಡಲು ಬೇಕಾದಷ್ಟು ಚರ್ಚ್ ಗಳಿವೆ. ಪಾರ್ಕ್ ಗಳಿವೆ. ಮ್ಯುಸಿಯುಂ ಗಳಿವೆ. ಆದರೆ ಇರುವ ಸ್ವಲ್ಪ ಸಮಯದಲ್ಲಿ ಇದನ್ನೆಲ್ಲಾ ನೋಡುತ್ತಾ ಕುಳಿತರೆ ಹೇಗೆ? ಅಲ್ಲವೇ. ಸಮಯದ ಅಭಾವ ಯಾಕೆ ಕೇಳ್ತಿರಾ? ನಾವು ಮರುದಿನ ಬೆಳಿಗ್ಗೆ ಓಸ್ಲೋ ದಿಂದ ನಾರ್ವೆ ನೋಡಲು ಪ್ಯಾಕೇಜ್ ಟ್ರಿಪ್ ತೆಗೆದುಕೊಂಡಿದ್ದೆವು. ಹಿಂದಿನ ದಿನವೇ ಓಸ್ಲೋ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಹೋಗಬೇಕೆಂದು ಓಸ್ಲೋ ಬಂದಿಳಿದೆವು. ಅದಕ್ಕೆ ಹೇಳಿದ್ದು ”ಇರುವ ಸ್ವಲ್ಪ ಸಮಯ” ಎಂದು. ಯಾಕೆಂದರೆ ಓಸ್ಲೋ ನೋಡಲು ಒಂದು ದಿನ ಸಾಲದು. ನಗ್ನತೆಯೇ ಮೈವೆತ್ತ ಓಸ್ಲೋ ದ ಶಿಲ್ಪಕಲಾ ಉದ್ಯಾನವನ ಓಸ್ಲೋ ದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಓಸ್ಲೋ ಗೆ ಬಂದವರು ಇಲ್ಲಿನ ವಿಗೆಲಂದ್ ಶಿಲ್ಪಕಲಾ ಉದ್ಯಾನವನಕ್ಕೆ (Vigeland Sculpture Park) ಬಾರದೆ ಹೋಗುವುದಿಲ್ಲ. ಸುಮಾರು 80 ಎಕರೆ ಗಳಷ್ಟು ವಿಸ್ತಾರವುಳ್ಳ ಉದ್ಯಾನವನದ ಪ್ರವೇಶವೇ ನಿಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಇಲ್ಲಿನ ಸ್ವಚ್ಛತೆ, ಪ್ರಕ್ರತಿ ಸೌಂದರ್ಯ ಹೊಸ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಸುಮಾರು 212 ಕಂಚಿನ ಹಾಗೂ ಗ್ರಾನೈಟ್ ನ ಮೂರ್ತಿಗಳಿರುವ ಜಗಹ ತನ್ನ ಅಪ್ರತಿಮ ಸೌಂದರ್ಯಕ್ಕೆ ಹೆಸರುವಾಸಿ. ”ಗುಸ್ತಾವ್ ವಿಗಿಲೆಂದ್” ಎಂಬಾತ ಸ್ವತಹ ತಾನೇ ನಿಂತು ಕೆತ್ತಿದ ಶಿಲ್ಪಗಳಂತೆ ಇವು. ಬೇಲೂರಿನ ಶಿಲ್ಪಕಲೆ, ಅಜಂತಾ ಎಲ್ಲೋರಿನ ಶಿಲ್ಪಗಳೆಲ್ಲ ನಮ್ಮ ಕಣ್ಣೆದುರಿಗೆ ಬಂದು ನಿಂತು ನರ್ತಿಸಿದಂತೆ ಭಾಸವಾಯಿತು. ಸುಮಾರು 1924-1947 ರಲ್ಲಿ ಉದ್ಯಾನವನ ನಿರ್ಮಾಣ ವಾಯಿತು ಎಂದು ಹೇಳುತ್ತದೆ ಇಲ್ಲಿನ ಇತಿಹಾಸ. ಇಂಥಹ ಸ್ಥಳಗಳಿಗೆ ಬಂದರೆ ಇರುವ ದೊಡ್ಡ ತಲೆನೋವೆಂದರೆ ಕ್ಯಾಮೆರ ಜೊತೆಗಿರುವುದು. ಅಷ್ಟೊಂದು ಶಿಲ್ಪಕಲೆಗಳ ಫೋಟೋ ತೆಗೆಯುವುದು. ನಂತರ ಅದರೊಂದಿಗೆ ನಿಂತ ಜೀವಂತ ಶಿಲ್ಪಗಳು (ನಾವು ಎಂದು ಬೇರೆ ಹೇಳಬೇಕಾಗಿಲ್ಲ ತಾನೇ ), ನಂತರ ಆ ಶಿಲ್ಪಗಳೊಂದಿಗೆ ನಮ್ಮ ನರ್ತನ ಫೋಟೋ ಎಲ್ಲ ಸೇರಿ ದಿನದ ಕೊನೆಗೆ ಕ್ಯಾಮೆರ ಗುಂಡಿ ಒತ್ತಿ ಒತ್ತಿ ಕೈಯೆಲ್ಲ ಗುಂಡಿ ಒತ್ತುತ್ತಿರುವಂತೆ ಭಾಸವಾಗುತ್ತಿತ್ತು. ಇಲ್ಲಿನ ಶಿಲ್ಪಗಳ ವೈಶಿಷ್ಟ್ಯ ವೆಂದರೆ ಸಂಸಾರದ ಸಂಭಂಧ ಗಳ ಬಗೆಗಿನ ಚಿತ್ರಣ. ಹೆಣ್ಣಿನ ಗಂಡಿನ ಸಮಾಗಮದ ಚಿತ್ರಣ. ಎಲ್ಲಿಯೂ ಕಾಮಕ್ಕೆ ಆಸ್ಪದ ಕೊಡದೆ, ಪ್ರೇಮವನ್ನು ಬಿಡದೆ, ನಗ್ನತೆಯನ್ನೇ ಬಿಂಬಿಸಿ ತೋರಿಸುವ ಒಂದೊಂದು ಶಿಲ್ಪವೂ ಒಂದು ಶತಮಾನದ ಕಥೆ ನಮ್ಮೊಂದಿಗೆ ಹೇಳುತ್ತಿರುವಂತೆ ಭಾಸವಾಗುತ್ತದೆ. ಇಲ್ಲಿನ ಪ್ರತಿ ಶಿಲ್ಪದಲ್ಲಿಯೂ ಯಾವುದೋ ಜನ್ಮದ ಕಥೆಯಿದೆ, ಅದರ ಒಳಗಿನ ಭಾವನಗಳ ಮಿಳಿತವಿದೆ. ಮನುಷ್ಯನ ದಿನನಿತ್ಯದ ಹೋರಾಟದ ಮಾದರಿ ಇಲ್ಲಿದೆ, ನ್ರತ್ಯ, ಸಿಟ್ಟು, ಕೋಪ, ತಾಳ್ಮೆ, ಪ್ರೀತಿ, ಸ್ನೇಹ ಇವೆಲ್ಲವುಗಳ ಮೂರ್ತರೂಪವೇ ಉದ್ಯಾನವನ ಎಂದರೆ ತಪ್ಪಾಗಲಾರದೇನೋ. ಇಲ್ಲಿಯ ಮೂರ್ತಿಗಳಿಗೆ, ನಾವೇ ಅಲ್ಲಿ ಹೋಗಿ ನಿಂತಂತೆ ನಮ್ಮನ್ನು ಕರೆಯುವ ಸೆಳೆತವಿದೆ. ಆ ಮುಗ್ಧ ಮಗುವಿನ ಚಿತ್ರ, ಮಗುವನ್ನು ಆಡಿಸುತ್ತಿರುವ ಚಿತ್ರ, ಪ್ರೇಮದ ಪರಕಾಷ್ಟೆಯ ಚಿತ್ರ, ಆಗಸವನ್ನೇ ನೋಡುತ್ತಿರುವ ಚಿತ್ರ, ಒಂದೇ ಎರಡೇ, ಪ್ರತೀ ಚಿತ್ರವೂ ನನ್ನ ಕಾಡಿದೆ. ಚಿತ್ರದ ಹಿಂದೆ ಅದನ್ನು ಕೆತ್ತಿದ ಶಿಲ್ಪಿಯ ಮನೋಭಾವನೆಯ ತಿಳಿಯುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕುವಂತೆ ಮಾಡಿದೆ. ಹೆಣ್ಣು ಹೆಣ್ಣಿನ ಸಮಾಗಮದ ಕೆಲವು ಫೋಟೋಗಳು ಇಲ್ಲಿದ್ದರೂ ಎಲ್ಲಿಯೂ ಕಾಮದ ಸುಳಿವು ನೀಡುವುದಿಲ್ಲ. ಮನುಷ್ಯ ಮನುಷ್ಯನ ಸಹಜ ಪ್ರೀತಿಯನ್ನು ಸಹಜವಾಗಿಯೇ ಕೆತ್ತಿದ ಗುಸ್ತಾವ್ ಗೆ ಒಂದು ಸಲಾಂ. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಬ್ರಹತ್ ಫೌಂಟೆನ್ (ಕಾರಂಜಿ). ಸುಮಾರು 41 ವರ್ಷಗಳೇ ಬೇಕಾಯಿತಂತೆ ಇದನ್ನು ನಿರ್ಮಿಸಲು. ಸಾವಿನ ನಂತರ ಹೊಸ ಜೀವನವಿದೆ. ಬದುಕು ಕೇವಲ ನಶ್ವರವಲ್ಲ. ಅದೊಂದು ಶಾಶ್ವತ. ಸಾವಿನ ನಂತರದ ಬದುಕಿಗೆ ಹೊಸ ಮಾರ್ಗ ಎಂಬ ಸಂಕೇತ ಇಲ್ಲಿಯ ಕಾರಂಜಿ ಯ ಒಳಗೆ ಇರುವ ಶಿಲ್ಪಗಳಲ್ಲಿ ಇವೆ. ”ಸಾವು ಹೊಸ ಜೀವಕ್ಕೆ ನಾಂದಿ” ಎನ್ನುವ ಗುಸ್ತಾವ್ ನ ಕಲ್ಪನೆಗೆ ಮನಸಲ್ಲೇ ತಲೆದೂಗಿದೆ. ಕಾರಂಜಿಯ ನೀರಿನ ಅಲೆಗಳನ್ನು ಫೋಟೋದಲ್ಲಿ ಸೆರೆ ಹಿಡಿಯುವ ಪ್ರಯತ್ನವೂ ಇಲ್ಲಿ ನಮ್ಮಿಂದ ನಡೆಯಿತು. ನೀರ ಮೇಲೆ ಕುಳಿತ ಹಕ್ಕಿ ಇತಿಹಾಸಕ್ಕೆ ಕಳಶವಿಟ್ಟಂತೆ ತೋರಿತು. ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಇಲ್ಲಿನ ಉದ್ಯಾನವನದ ಬಹುಮುಖ್ಯ ಶಿಲ್ಪ ”ಮೊನೋಲಿತ್” . ಜೀವನ ಚಕ್ರ (The Circle of Life) ವನ್ನು ಬಿಂಬಿಸುವ ಚಿತ್ರ ಎಂಥಹ ನಿರ್ಭಾವುಕನಲ್ಲೂ ಭಾವನೆಗಳ ಅಲೆ ಎಬ್ಬಿಸುತ್ತದೆ. ಹಲವಾರು ಶಿಲ್ಪಗಳು ಒಂದರ ಮೇಲೆ ಒಂದು ಬಿದ್ದು ಕೊಂಡಂತೆ ಭಾಸವಾಗುವ ಮೊನೋಲಿತ್ ಗುಸ್ತಾವ್ ನ ಶಿಲ್ಪಕಲೆಗೆ ಸಾಕ್ಷಿಯೂ ಹೌದು. ಗ್ರೀಕ್ ಪದವಾದ ಮೊನೋಲಿಥಸ್ ನಿಂದ ಬಂದ ಮೊನೋಲಿತ್ ನ ನಿಜವಾದ ಅರ್ಥ ”ಒಂದೇ ಕಲ್ಲು” ಎಂದು. ಶಿಲ್ಪ ನೋಡಿದರೆ ಹಾಗೆಂದು ಅನ್ನಿಸುವುದಿಲ್ಲ. ಹಲವಾರು ಕಲ್ಲುಗಳನ್ನು ಕೆತ್ತಿ ನಿಲ್ಲಿದಂತೆ ಗೋಚರಿಸುತ್ತದೆ. ಇದನ್ನು ಒಂದೇ ಕಲ್ಲಿನಲ್ಲಿ ನಿರ್ಮಿಸಿದ ಗುಸ್ತಾವ್ ನ ಚಾಕ ಚಕ್ಯತೆ ಯಾವ ಜಕಣಾಚಾರಿಗೂ ಕಡಿಮೆ ಇರಲಿಲ್ಲ ಎಂದು ಒಮ್ಮೆ ಅನ್ನಿಸದೆ ಇರದು. ಸುಮಾರು 14 ಮೀಟರ್ ಗಳಷ್ಟು ಎತ್ತರವಿರುವ ಮೊನೋಲಿತ್ 121 ಮನುಷ್ಯರ ಆಕ್ರತಿಯನ್ನು ಹೊಂದಿದೆ. ಪ್ರತಿ ಆಕ್ರತಿಯೂ ಆಕಾಶದ ಕಡೆ ಚಲಿಸುತ್ತಿರುವಂತೆ ಗೋಚರಿಸುತ್ತದೆ. ಇದರ ಬಗ್ಗೆ ಸ್ಥಳೀಯರಲ್ಲಿ ಕೇಳಿದಾಗ ” ಮನುಷ್ಯನ ಆಸೆಗಳು ಅಧ್ಯಾತ್ಮದ ಕಡೆಗೆ, ಭಗವಂತನ ಕಡೆಗೆ, ಅಲೌಕಿಕ ದ ಕಡೆಗೆ ಸಾಗುವಂತಿರಬೇಕು ” ಎಂಬುದೇ ಅದರ ಮೂಲ ಮಂತ್ರ ಎಂದರು. ಪುನಃ ಅವರಲ್ಲಿ ಕೇಳಿದೆ, ”ಅದೇನೋ ಸರಿ, ಆದರೆ ಮನುಷ್ಯರು ಒಬ್ಬರಿಗೊಬ್ಬರು ಅಂಟಿ ಕೊಂಡಿದ್ದು ಯಾಕೆ? ” ಅವರಿಂದ ಉತ್ತರ ”ಮನುಷ್ಯ ಸದಾ ಜೊತೆಯಾಗಿರಬೇಕು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕಷ್ಟ ಸುಖ ಹಂಚಿಕೊಳ್ಳುತ್ತ ಅಲೌಕಿಕದ ಕಡೆಗೆ ಹೆಜ್ಜೆ ಹಾಕಬೇಕು, ನಮ್ಮ ನಮ್ಮಲ್ಲೇ ಕಚ್ಚಾಡಿ ಕೊಳ್ಳುತ್ತಾ, ಇನ್ನೊಬ್ಬರ ಬಗೆಗೆ ಅಸೂಯೆ ಪಡುತ್ತ ಬದುಕುವುದು ಮಾನವೀಯ ಬದುಕಲ್ಲ ಎಂಬುದೇ ಅದರ ಸಂಕೇತ” ಎಂದರು. ಅಷ್ಟು ವಿವರಣೆ ನನಗೆ ಸಾಕಾಗಿತ್ತು. ಎಂಥಹ ಅದ್ಭುತ ಕಲ್ಪನೆ, ಶತ ಮಾನಗಳು ಕಳೆಯುತ್ತಿದ್ದರೂ ನಮ್ಮ ಮೂಲ ಬುದ್ದಿ ಬದಲಾಗುತ್ತಿಲ್ಲ. ಸದಾ ಇನ್ನೊಬ್ಬರ ಬಗೆಗೆ ಮಾತಾಡಿಕೊಳ್ಳುತ್ತ, ಇನ್ನೊಬ್ಬನ ತಪ್ಪನ್ನೆ ದೊಡ್ಡದು ಮಾಡುತ್ತಾ, ನಮ್ಮ ಮನೆಯ ಮುಂದಿರುವ ಆನೆಯ ಬಗ್ಗೆ ಚಿಂತಿಸದೆ, ನೆರೆಮನೆಯವನ ಮುಂದಿರುವ ಇರುವೆಯನ್ನೇ ದೊಡ್ಡ ವಿಷಯ ಮಾಡುವ ನಮ್ಮ ಭಾವನೆಗಳು ಬದಲಾಗುವುದು ಎಂದು? ಎಂಬ ಚಿಂತೆ ಕೊರೆಯಲಾರಂಬಿಸಿತು. ಉದ್ಯಾನವನ ತುತ್ತ ತುದಿಗೆ ”Wheel of Life” ಎಂಬ ಪ್ರತಿಮೆಯಿದ್ದು ಬದುಕಿನ ಚಕ್ರಕ್ಕೆ ಕನ್ನಡಿಯಂತಿದೆ. ಇದನ್ನೆಲ್ಲಾ ನೋಡುತ್ತಾ ನೋಡುತ್ತಾ ಕೆಲವು ಕೀಟಲೆಗಳನ್ನು ಮಾಡುತ್ತಾ ಇರುವಾಗಲೇ ಸಮಯ ಕಳೆದು ಹೋಯಿತು. ಅಲ್ಲಿನ ಕಲಾಕ್ರತಿಯೊಂದಿಗೆ ವಿವಿದ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು ನೆನಪಿನ ಬುತ್ತಿಯಲ್ಲಿ ಎಲ್ಲವನ್ನೂ ತುಂಬಿಕೊಂಡು ಗುಸ್ತಾವ್ ನ ಪ್ರತಿಭೆಗೆ ವಂದಿಸುತ್ತಾ ಹೋಟೆಲ್ ಕಡೆ ಹೆಜ್ಜೆ ಹಾಕಿದೆವು. ಮುಂದಿನ ವಾರ ನಾರ್ವೆ ಯ ರಮಣೀಯ ಸ್ಥಳ ಗಳಲ್ಲಿ ಒಂದಾದ ”ಫ್ಲಾಂ” ”Flam” ಬಗ್ಗೆ ಹೇಳುತ್ತೇನೆ. ನನ್ನ ಬದುಕಿನಲ್ಲಿಯೇ ನೋಡದ ಅತ್ಯಂತ ಸುಂದರ ವರ್ಣನೆಗೂ ಸಿಲುಕದ ರಮಣೀಯ ಸ್ಥಳವದು. ಅಲ್ಲಿನ ಬೆಟ್ಟ ಗುಡ್ಡಗಳು, ಸುಂದರ ನದಿ, ಮನಸಿನಲ್ಲಿ ತುಂಬಿದೆ. ಅದನ್ನೆಲ್ಲ ಮುಂದಿನ ವಾರ ಹಂಚಿ ಕೊಳ್ಳುತ್ತೇನೆ.]]>

‍ಲೇಖಕರು avadhi

August 28, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

  1. venugopal kolar

    ee chitralekhana tumba chennagide. pravasa kathanagalu hechina gnanavannu needuvudu. abinandanegalu Dr.Gurumurthy hegadeyavarige.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: