ಇಲ್ಲಿ ಜಾಗವಿದೆ… ಎಲ್ಲಕ್ಕೂ

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾಮಣ್ಣಪಳ್ಳದ ಮೂಕಿಚಿತ್ರದಲ್ಲಿ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಮಣಿಪಾಲವನ್ನು ಬೇರೆ ಊರಿಗರು ಅನೇಕ ಕಾರಣಗಳಿಗಾಗಿ ಹುಡುಕಿ ಬರುತ್ತಾರೆ. ಆದರೆ ಮಣಿಪಾಲದಲ್ಲಿ ಅವರು ನಿಲ್ಲುವ ದಿನಗಳು ಮಾತ್ರ ಬಂದ ಕಾರಣಗಳನ್ನು ಅವಲಂಬಿಸುರತ್ತದೆ. ಮಣಿಪಾಲವನ್ನುಶಿಕ್ಷಣಕ್ಷೇತ್ರ ಆವರಿಸಿಕೊಂಡಿರುವಷ್ಟೇ ಪ್ರಮಾಣದಲ್ಲಿ ಇಲ್ಲಿನ ಆಸ್ಪತ್ರೆ ಮತ್ತು ಅಲ್ಲಿಗೆ ಆರೋಗ್ಯವನ್ನು ಅರಸಿ ಬರುವವರೂ ಆವರಿಸಿಕೊಂಡಿದ್ದಾರೆ. ಅಭ್ಯಾಸವಿಲ್ಲದವರಿಗೆ ಯಾವ ಕಡೆ ಹೊಕ್ಕು ಹೇಗೆ ಹೊರಟು ಬರುವುದು ಎಂದು ಗೊತ್ತೇ ಆಗದಂತ ಆಸ್ಪತ್ರೆಯ ಒಳಗೂ ಮತ್ತು ಅದರ ಸುತ್ತಲೂ ಕಂಡಷ್ಟೂ ಚಿತ್ರಗಳಿವೆ. ಅದರಲ್ಲಿ ಹುಟ್ಟು, ನೋವು, ಸಾವು ಎಲ್ಲಕ್ಕೂಜಾಗವಿದೆ.

ಘಟ್ಟದ ಕಡೆಯವರು ಮಣಿಪಾಲಕ್ಕೆ ಬರಬೇಕಾದರೆ ಆಸ್ಪತ್ರೆಗೆ ಹೋಗುವ ದರ್ದೇ ಇರಬೇಕು ಎಂಬ ತಮಾಷೆಯ ಮಾತಿದೆ. ಹೊರ ರೋಗಿಗಳು ಮತ್ತು ಅವರೊಂದಿಗೆ ಅವರ ಕುಟುಂಬ ಅಥವಾ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಈ ಊರಿಗೆ ಬರುವುದು ಆರೋಗ್ಯಕ್ಕಾಗಿಯೇ. ಮಣಿಪಾಲದ ಆಸ್ಪತ್ರೆಗೆ ಗಂಟೆಗಳಲ್ಲಿ ಹಿಂತಿರುಗುವ ಆಲೋಚನೆಯಲ್ಲಿ ಬಂದವರು ತಿಂಗಳುಗಟ್ಟಲೆ ಉಳಿದುಬಿಡುವುದು ಹೊಸತೇನಲ್ಲ.

ನನ್ನ ಸ್ನೇಹಿತರೊಬ್ಬರ ಸಲುವಾಗಿ ಆಸ್ಪತ್ರೆಗೆ ಹೋಗಿ ಬರುತ್ತಿದ್ದ ದಿನಗಳಲ್ಲಿ ನಾನು ಭೇಟಿಯಾದದ್ದು ಮದ್ಯವಯಸ್ಸಿನ ಜಲಜಳನ್ನ. ಶುದ್ಧ ಕುಂದಗನ್ನಡ ಮಾತಾಡುವ ನನ್ನೂರಿಗೆ ಹತ್ತಿರದವಳು. ನಿನ್ನೆ ಮೊನ್ನೆಯವರೆಗೂ ಆರೋಗ್ಯವಾಗಿದ್ದ ಗಂಡ ದಿಢೀರನೆ ಹೊಟ್ಟೆ ನೋವಿಂದ ನರಳಿದ್ದಕ್ಕೆ, ಅವರೂರಿನ ನಂಬಿಯಾರರು ಹೇಳಿದ್ದಕ್ಕೆ, ರಾತ್ರೋ ರಾತ್ರಿ ಬಾಡಿಗೆ ರಿಕ್ಷಾದಲ್ಲಿ ಮಣಿಪಾಲಕ್ಕೆ ಬಂದಿದ್ದರು. ಬಂದ ಸ್ವಲ್ಪವೇ ಹೊತ್ತಲ್ಲಿ ಗಂಡ ಐಸಿಯು ಒಳಸೇರಿದ್ದ ಮತ್ತು ಅವಳು ಅದೇ ಐಸಿಯುನ ಹೊರ ಮೂಲೆಯಲ್ಲಿದ್ದ ಕುರ್ಚಿಯನ್ನು ಸೇರಿದ್ದಳು.

ನಾ ಅವಳನ್ನ ಮಾತಾಡಿಸಿದ ದಿನಕ್ಕೆ ಅವಳು ಆಸತ್ರೆಗೆ ಬಂದು ಹತ್ತಿರ ಹತ್ತಿರ ಒಂದು ವಾರವೇ ಆಗಿತ್ತು. ಇಲ್ಲಿಯವರೆಗೆ ಜ್ವರ ಕೆಮ್ಮಿಗೆ ಊರಿನ ನಂಬಿಯಾರರ ಬಿಟ್ಟು ಹೊರ ಆಸ್ಪತ್ರೆಗಳನ್ನೇ ಕಾಣದ ಇವಳಿಗೆ ಜಾತ್ರೆಯಲ್ಲೆಲ್ಲೋ ಕಳೆದು ಹೋದ ಹಾಗಿದೆ. “ಅದೆಂತದೋ ಸಣ್ಣಕರಳಂಗೆ ಬಾವ್ಅಂಬ್ರ್”  ಅಂತ ತಾನು ಅರ್ಥ ಮಾಡಿಕೊಂಡಂತೆ ಗಂಡ ಆಸ್ಪತ್ರೆ ಸೇರಿದ ಕಾರಣ ಹೇಳಿದ್ದಳು.

ಗಂಡ ಹುಷಾರಾಗಬೇಕು, ಡಾಕ್ಟರ್ಹೇಳಿದಷ್ಟು ಮಾಡಬೇಕು, ಆಸ್ಪತ್ರೆಗಾಗುವಷ್ಟು ಹಣ ಹೊಂದಿಸಬೇಕು, ಮನೆಗೆ ಹಿಂತಿರುಗಿ ವಾಪಸ್ಸು ದುಡಿಮೆ ಶುರುವಾಗಬೇಕು ಅನ್ನೋದನ್ನ ಬಿಟ್ಟು ಹೆಚ್ಚಿನ ವಿಚಾರಗಳು ಅವಳ ಆಲೋಚನೆಗೆ ಇಳಿಯುವುದಿಲ್ಲ.

ಊರಲ್ಲಿ ಗಂಡ ಹೆಂಡರಿಬ್ಬರೂ ಹೊಲಿಗೆ ಮಾಡುತ್ತಾರಂತೆ. ಸದ್ಯ ಒದಗಿದ ಆಸ್ಪತ್ರೆಯ ಖರ್ಚಿಗೆ ಹೋಲಿಸಿದರೆ ಅವರು ವರ್ಷಪೂರ್ತಿ ದುಡಿಯುವುದೂ ಚಿಲ್ಲರೆಯೇ. ದಿನದ ದುಡಿಮೆ ಅದೇ ದಿನದ ಖರ್ಚಿಗೆ ಅನ್ನುವ ಪರಿಸ್ಥಿತಿಯಲ್ಲಿ ಕೂಡಿಡುವುದೆಲ್ಲ ಅವಳಿಗೆ ಸಾಧ್ಯವಿಲ್ಲ. ಆಸ್ಪತ್ರೆಯವರು ಸಣ್ಣ ಆಪರೇಷನ್ಮಾಡಬೇಕಾಗಬಹುದು ಯಾವುದಾದರೂ ಕಾರ್ಡು ಮಾಡಿಸಿದ್ದೀರಾ ಅಂದಾಗ ಮೇಲೆ ಕೆಳಗೆ ನೋಡಿ ಒಂದೆರಡು ವರ್ಷದ ಹಿಂದೆ ಹಠಕಟ್ಟಿ ಮಾಡಿಸಿದ್ದ ಅರೋಗ್ಯಕಾರ್ಡ್ ಒಂದನ್ನ ತೋರಿಸಿ ಸಮಾಧಾನಪಟ್ಟು ಕೊಂಡಿದ್ದಳು.

ಮೇಲ್ಖರ್ಚಿಗೆ ಮನೆಯಿಂದ ಹೊರಡುವಾಗ ಕಳೆದ ಮದುವೆ ಸೀಸನ್ಅಲ್ಲಿ ಆದ ಒಂದಿಷ್ಟು ದುಡಿಮೆಯನ್ನ ಸೆರಗಲ್ಲಿ ಕಟ್ಟಿ ಬಂದಿದ್ದವಳು, ಆಮೇಲೆ ತಮ್ಮನ ಹತ್ರದಮ್ಮಯ್ಯ ಅಂದು ಒಂದಿಷ್ಟು ಸಾವಿರವನ್ನು ತರಿಸಿಕೊಂಡಿದ್ದಳು. ಆದರೆ ಕೈಯಲ್ಲಿರುವುದು ಯಾವಗಳಿಗೆಗೆ ಖಾಲಿಯಾಗುವುದೆಂಬ ಅಂದಾಜೂ ಅವಳಿಗಿಲ್ಲ.

ಹೇಳಿಕೊಳ್ಳುವಂತ ಬಳಗವಿಲ್ಲದ ಜಲಜ ಒಬ್ಬಳೇ ದಿನದ ಅರ್ಧಹೊತ್ತು ಯಾವ ಡಾಕ್ಟರ್ಬಂದು ಏನು ಹೇಳಿಯಾರು ಎಂದು ಕಿವಿನೆಟ್ಟ ಮಾಡಿಕೊಂಡು ಐಸಿಯುನ ಹೊರಗೂ, ಇನ್ನರ್ದ ಹೊತ್ತು ಹೊರಾಂಗಣದಲ್ಲಿನ ಮರದ ಅಡಿಗೆ,ಬಟ್ಟೆ ತುಂಬಿದ ಪ್ಲಾಸ್ಟಿಕ್ತೊಟ್ಟೆ ಹಿಡಿದು ಕೂತು ಬಿಡುತ್ತಿದ್ದಳು. ಗಂಡನ ಅನಿರೀಕ್ಷಿತ ಅನಾರೋಗ್ಯ ಒಂದೆರಡು ದಿನ ಅವಳನ್ನ ಕಂಗಾಲು ಮಾಡಿತ್ತಾದರೂ, ತನ್ನಂತೆಯೇ ಕಾರಿಡಾರಿನ ಉದ್ದಕ್ಕೂ ಕೂತಿದ್ದವರ ಕಂಡು ಸಮಾಧಾನಪಟ್ಟು ಮೂರನೇ ದಿನದಿಂದ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಳು.

ಬೆಳಿಗ್ಗೆ ಎದ್ದು ಆಸ್ಪತ್ರೆಯ ಶೌಚಾಲಯದಲ್ಲೇ ತಯಾರಾಗಿ, ಮದ್ಯಾಹ್ನದವರೆಗೆ ಮೂಲೆಯಲ್ಲಿನ ಕುರ್ಚಿ ಏರಿ ಕೂತುಬಿಡುವುದು, ದಿನದ ಎರಡು ಹೊತ್ತು ಗಂಡನ ಮುಖ ನೋಡಿ, ಬ್ರೆಡ್ಮತ್ತು ಹಾಲು ಇಟ್ಟು ಬರುವುದು. ಅತೀ ಹಸಿವಾದಾಗ ಮಾತ್ರ ಕ್ಯಾಂಟೀನ್ಗೆ ಹೋಗಿ ತಿಂದು ಬರುವುದು, ಸಂಜೆ ಹೊತ್ತಲ್ಲಿ ಅದೇ ಮರದ ಅಡಿ ಹಾಗೂ ರಾತ್ರಿ ಆಸ್ಪತ್ರೆಯ ಕಾರಿಡಾರಿನಲ್ಲಿ ಚಾದರ ಹಾಸಿ ಮಲಗಿ ಬಿಡುವುದು ಅವಳಿಗೆ ಆಸ್ಪತ್ರೆಯ ದಿನಚರಿಯಾಗಿತ್ತು. ಗಂಡನ ಜೀವ ಮತ್ತು ಅವಳ ಜೀವನವೆರಡೂ ಇಲ್ಲಿ ಒಂದೇ ತಕ್ಕಡಿಯಲ್ಲಿ ತೂಗುತ್ತಿತ್ತು.

ಜಲಜಾಳಂತ ಅಪರಿಚಿತ ಮುಖಗಳು ಮಣಿಪಾಲಕ್ಕೆ ಇಡೀ ಬದುಕನ್ನ ಹೊತ್ತು ಬಂದಿರುತ್ತಾರೆ. ಆಸ್ಪತ್ರೆಯ ಸುತ್ತಮುತ್ತ ಏನೂ ಅರ್ಥವಾಗದ ಭಾವಗಳೊಂದಿಗೆ ನಮಗೆ ಇದಿರಾಗುತ್ತಾರೆ. ಅನಿವಾರ್ಯತೆಯಿಂದ ಬಂದ ಅವರಿಗೆ ಈಊರಿನಲ್ಲಿ ಎಲ್ಲವೂ ಅಪರಿಚಿತ. ಅವರೆಲ್ಲರಿಗೂ ಇಲ್ಲಿಗೆ ಬಂದ ಕಾರಣ ಮತ್ತು ಆರೋಗ್ಯದಿಂದ ವಾಪಸ್ಸಾದರೆ ಸಾಕು ಎಂಬ ವಿಚಾರಗಳಷ್ಟೇ ಗೊತ್ತು.

“ಈ ತಿಂಗ್ಳ್ದುಡಿಮಿ ಪೂರಾ ಹೋತ್. ಆರುಬದ್ಕರೆ ಬೆಲ್ಲ ಬೇಡ್ಕಂಡ್ತಿಂಬೆ. ನಾನ್ ಒಬ್ಳೆ ಹೊಲಿಗಿ ಮಾಡುಕ್ ಆತ್ತಾ?” ಎಂದವಳ ಮಾತಲ್ಲಿದ್ದದ್ದು ವಾಸ್ತವದ ಚಿಂತೆಯೇ. ಆ ಹೊತ್ತಿಗೆ ಗಂಡ ಹುಷಾರಾದರೆ ಸಾಕು ಎಂಬಂತಿದ್ದರೂ ಊರಿಗೆ ಹೋದ ಮೇಲೆ ಆಸ್ಪತ್ರೆಯ ಸಲುವಾಗಿ ಮಾಡಿದ ಸಾಲವನ್ನೂ ತೀರಿಸಬೇಕೆಂಬ ಅವಳ ಮಾತು ಕೂಡ ಸತ್ಯ.

ಜಲಜನಿಗೆ ಬದುಕು ತಾನು ಕಟ್ಟಿಕೊಂಡಷ್ಟು ಮಾತ್ರ ಗೊತ್ತು. ಅವಳಿಗೆ ಇಂತಹ ಅನಿರೀಕ್ಷಿತಗಳು ದುಡಿಮೆಗೆ ಮತ್ತು ಬದುಕಿಗೆ ಹೊಡೆತವೇ. ಭತ್ತತೊಳುಕೈಗೆ ಭೈಣಿಮುಳ್ಹೆಟ್ಟಿತ್… ಎಂಬ ಜನಪದರ ಸಾಲಿನಂತೆ.

ಸ್ವಲ್ಪ ದಿನದ ಮೇಲೆ ಆಸ್ಪತ್ರೆಯ ದಾರಿಯಿಂದ ಬಹಳ ಮುಂದೆ ನಡೆದುಕೊಂಡು ಹೋಗುತ್ತಿದ್ದವಳು, ನನ್ನ ಕರೆದು ಮಾತಾಡಿಸಿ” ಇವ್ರಿಗ್ ಹುಷಾರ್ ಆಯ್ತ್ . ನಾನ್ ಅಲ್ಐಕಂಡ್ ಎಂತ ಮಾಡುದ್ ಈಗ? ಎರಡ್ದಿನದಗೆ ಜನರಲ್ವಾರ್ಡಿಗ್ಹಾಕ್ತರ್ಅಂಬ್ರ. ಇವತ್ನರ್ಸ್ಹೇಳ್ರ್.  ಮಣಿಪಾಲುನ್ ಒಂದ್ಸತಿಕಂಡಕ ಬಪ್ಪುವ ಅಂದೇಳಿ ಹೋತಿದ್ದೆ “.ಎಂದಳು. ಬಂದ ಮೊದಲದಿನ ಆಸ್ಪತ್ರೆಯ ಒಳಗಿನ ದಾರಿಯನ್ನು ಹುಡುಕಲು ಹೆಣಗುತ್ತಿದ್ದವಳು. ಆವತ್ತು ಮಣಿಪಾಲ ಸುತ್ತಿ ಬರಲು ಹೊರಟಿದ್ದಳು.

ಬಡತನ ಮತ್ತು ಅನಾರೋಗ್ಯ ಎರಡೂ ಒಟ್ಟಿಗೆ ತರುವವರು ಮಣಿಪಾಲದೊಳಗೆ ಕಳೆದು ಹೋಗಿರುತ್ತಾರೆ. ಕಟ್ಟಿಕೊಂಡ ಬದುಕುಗಳು ಒಡೆಯುವುದು ಅಥವಾ ಇದ್ದಂತೆಯೇ ಇರಲಿ ಎಂದು ಹೆಣಗುವುದು ಎಲ್ಲವೂ ಇಲ್ಲಿ ಸಾಮಾನ್ಯ. ಈ ಊರಲ್ಲಿ ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯೆಗಳು ಮತ್ತು ಅನುಕೂಲಕ್ಕೆ ತಕ್ಕಂತೆ ಚಿಂತೆಗಳ ಆಯ್ಕೆ ಇದೆ.

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

2 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಲಾಯ್ಕಾಯ್ತು ಬರದದ್ದು ಕಾಣಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: