ಇವತ್ತಿನ ರಾಜಕಾರಣದ ಭಾಷೆ ಮತ್ತು ಸಜ್ಜನರ ಆತಂಕ

gali.gif“ಗಾಳಿ ಬೆಳಕು”

ನಟರಾಜ್ ಹುಳಿಯಾರ್

ನಂತಮೂರ್ತಿಯವರ ೭೫ನೇ ಹುಟ್ಟುಹಬ್ಬದ ಸಭೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದ ವಿಧಾನಪರಿಷತ್ತಿನ ಸಭಾಪತಿಗಳಾದ ಪ್ರೊ ಬಿ.ಕೆ.ಚಂದ್ರಶೇಖರ್ “ಕಳೆದ ಎರಡು, ಮೂರು ವರ್ಷಗಳಲ್ಲಿ, ಅದು ಯಾವುದೇ ಪಕ್ಷವಿರಲಿ, ನಮ್ಮ ರಾಜಕಾರಣದಲ್ಲಿ ಬಳಸಲಾಗುತ್ತಿರುವ ಭಾಷೆ ಹಾಗೂ ಅಲ್ಲಿ ನಡೆಯುತ್ತಿರುವ ಚರ್ಚೆ ತೀರಾ ಕೆಳಮಟ್ಟದ್ದಾಗಿದೆ” ಎಂದು ಕಳವಳ ವ್ಯಕ್ತಪಡಿಸುತ್ತಿದ್ದರು. ಅದಕ್ಕೆ ದನಿಗೂಡಿಸಿದ ಚರಿತ್ರಕಾರರು ಪ್ರೊ ಎಸ್.ಶೆಟ್ಟರ್ “ಇವತ್ತು ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದರೆ ಏನು ಬೇಕಾದರೂ ಮಾಡಬಹುದು” ಎಂಬ ಅರ್ಥ ಬರುತ್ತಿರುವುದರ ಬಗ್ಗೆ ಆತಂಕಗೊಂಡಿದ್ದರು.

ನಮ್ಮ ನಿತ್ಯದ ರಾಜಕಾರಣದ ಭಾಷೆಯಲ್ಲಿ ಕಾಣುತ್ತಿರುವ ಭಂಡತನದ ಬಗ್ಗೆ ಮೊನ್ನೆ ನಮ್ಮ ಮುಖ್ಯ ಕವಿಗಳೊಬ್ಬರು ಕೂಡ ಇದೇ ಧಾಟಿಯಲ್ಲಿ ಹೇಳುತ್ತಿದ್ದರು: “ಬೆಳಗಾಗೆದ್ದು, ನಾವು ಈ ಪಕ್ಷದ ಜೊತೆ ಹೋಗಲ್ಲ ಎನ್ನುತ್ತಾರೆ. ಮಧ್ಯಾಹ್ನ ಅವರ ಜೊತೆಗೇ ಹೋಗುತ್ತೇವೆ ಎನ್ನುತ್ತಾರೆ. “ಇದೇಕೆ ಒಂದೇ ದಿನದಲ್ಲಿ ಎರಡೆರಡು ಸಲ ಮಾತು ಬದಲಿಸುತ್ತೀರಿ?” ಎಂದರೆ, “ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು” ಎನ್ನುತ್ತಾರೆ. ಹಾಗಾದರೆ ನಮಗೆಲ್ಲಾ ಅನ್ವಯಿಸುವ ನಿಯಮಗಳು ಹಾಗೂ ನೈತಿಕತೆಗಳು ರಾಜಕಾರಣಿಗಳಿಗೆ ಅನ್ವಯವಾಗುವುದೇ ಇಲ್ಲವೇ?”

ಆ ಕವಿಗಳು ನಮ್ಮ ಸ್ಥಿತಿಯ ಬಗ್ಗೆ ಗಂಭೀರವಾಗಿ ಮಾತಾಡುತ್ತಿದ್ದರಿಂದ ನಾನು ಅವರ ಮಾತನ್ನು ಕೇಳಿಸಿಕೊಳ್ಳತೊಡಗಿದೆ. ಅವರು ಮುಂದುವರೆಸಿದರು: “ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು” ಎಂಬುದಾಗಲೀ ಅಥವಾ ರಾಜಕಾರಣ ಎನ್ನುವುದು ನೀಚರ ಕಟ್ಟಕಡೆಯ ಆಶ್ರಯ” ಎಂಬ ಹೇಳಿಕೆಯಾಗಲೀ ರಾಜಕಾರಣದ ಅಧೋಗತಿಯನ್ನು ಹೇಳಲು ಬಯಸುವ ಮಾತುಗಳು. ಆದರೆ ಇವತ್ತಿನ ರಾಜಕಾರಣಿಗಳು ಅದನ್ನೇ ಪಾಸಿಟಿವ್ ಹೇಳಿಕೆ ಎಂಬಂತೆ “ಹೌದು, ನಾನು ನೀಚ. ಆದ್ದರಿಂದ ಇದೇ ನನ್ನ ಕಟ್ಟಕಡೆಯ ಆಶ್ರಯ” ಎಂದು ಕೂಗುತ್ತಿರುವುದು ಅಸಹ್ಯಕರವಾಗಿದೆ.”

ಭಾಷೆಯ ಈ ಬಗೆಯ ಮಲಿನತೆ ಕವಿಯಾದ ಅವರಿಗೆ ದುಗುಡವನ್ನುಂಟು ಮಾಡಿದ್ದರೆ ಆಶ್ಚರ್ಯವಲ್ಲ. ಆದರೆ ರಾಜಕಾರಣಿಗಳ ಈ ಬಗೆಯ ಭಾಷೆ ಹಾಗೂ ವರ್ತನೆಗಳನ್ನು ಜನ ಸಲೀಸಾಗಿ ನುಂಗಿಕೊಳ್ಳುತ್ತಿರುವ ಸ್ಥಿತಿ ನಿರ್ಮಾಣವಾಗತೊಡಗಿರುವುದು ಮಾತ್ರ ಆತಂಕಕಾರಿ.

ಆದರೆ ಒಂದು ಅಂಶವನ್ನು ನಾವು ಮರೆತಿದ್ದೇವೆ: ಅದೇನೆಂದರೆ, ಈಚೆಗೆ ತೀರಾ ಕೆಟ್ಟಿದೆಯೆಂದು ಭಾವಿಸಲಾದ ಅಧಿಕಾರ ರಾಜಕಾರಣದ ಭಾಷೆಯಲ್ಲಿ ಹಿಂದಿನಿಂದಲೂ ಈ ಕೇಡು ಇದ್ದೇ ಇದೆ. ಇಡೀ ರಾಜಕೀಯದ ಭಾಷೆ “ಸುಳ್ಳನ್ನು ನಿಜವೆಂಬಂತೆ, ಕೊಲೆಯನ್ನು ಗೌರವಾನ್ವಿತ ಕೆಲಸವೆಂಬಂತೆ ಕಾಣಿಸಲು ತಕ್ಕ ಹಾಗೆ ರೂಪುಗೊಂಡಿರುವುದನ್ನು ಲೇಖಕ ಜಾರ್ಜ್ ಆರ್ವೆಲ್ ಬಹಳ ಹಿಂದೆಯೇ ತೋರಿಸಿದ್ದ. ಇಂಥ ಕಡೆ ಭಾಷೆ ಮನುಷ್ಯನೊಬ್ಬ ತನ್ನೊಳಗಿರುವುದನ್ನು ಹೇಳುವುದಕ್ಕಿಂತ ತನ್ನ ಆಲೋಚನೆಯನ್ನು ಮುಚ್ಚಿಡಲು ಬಳಕೆಯಾಗುತ್ತಿರುವುದನ್ನು ಕುರಿತು ಆರ್ವೆಲ್ ಚರ್ಚಿಸಿದ್ದ. ಆದ್ದರಿಂದ ನಮ್ಮ ರಾಜಕೀಯದಲ್ಲಿ ಬಳಸಲಾಗುತ್ತಿರುವ ಭಾಷೆಯ ಪತನ ನಿನ್ನೆ ಮೊನ್ನೆ ಶುರುವಾದದ್ದೇನಲ್ಲ.

ಯಾಕೆಂದರೆ, ಪ್ರತಿನಿತ್ಯ ಸಾರ್ವಜನಿಕ ಬದುಕಿನಲ್ಲಿ, ಶಾಸನಸಭೆಗಳಲ್ಲಿ ಆಡಲಾಗುವ ಮಾತುಗಳಲ್ಲಿ ಅಪಾರ ಸುಳ್ಳಿರುತ್ತದೆ ಹಾಗೂ ಆ ಸುಳ್ಳು ಅತ್ಯಂತ ಅಶ್ಲೀಲವಾಗಿರುತ್ತದೆ. ಭಾರತದ ಇವತ್ತಿನ ರಾಜಕೀಯ ಸನ್ನಿವೇಶವನ್ನು ನೋಡುತ್ತಿರುವ ಅನೇಕ ಸಜ್ಜನರು ಈ ಬಗೆಯ ದೈನಂದಿನ ಸುಳ್ಳುಗಳಲ್ಲಿರುವ ಅಶ್ಲೀಲತೆಯನ್ನು ಸರಿಯಾಗಿ ಗಮನಿಸುತ್ತಿರುವುದಿಲ್ಲ. ಬದಲಿಗೆ ಯಾವನಾದರೂ ರಾಜಕಾರಣಿ “ನೀನು ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ…” ಎಂದ ತಕ್ಷಣ ಅದು ಸಜ್ಜನರಿಗೆ ಅಶ್ಲೀಲವಾಗಿ ಕಾಣುತ್ತದೆ.

ಸದ್ಯದ ರಾಜಕಾರಣದ ಭಾಷೆಯ ಮಟ್ಟದ ಬಗ್ಗೆ ಆತಂಕ ತೋರುತ್ತಿರುವ ನಮ್ಮ ಸೂಕ್ಷ್ಮಜ್ಞರು ಕಳೆದ ಎರಡು ದಶಕಗಳಿಂದ ಜನರನ್ನು ಒಡೆಯುವ ಕುತಂತ್ರಿ ಧಾರ್ಮಿಕ ಭಾಷೆ ಭಾರತದ ರಾಜಕಾರಣದಲ್ಲಿ ಎಗ್ಗಿಲ್ಲದೆ ಚಲಾವಣೆಯಲ್ಲಿರುವ ಬಗೆಗೂ ಇಷ್ಟೇ ದಿಗ್ಭ್ರಾಂತಿಯಿಂದ ಮಾತಾಡುವ ಅಗತ್ಯವಿದೆ. ರಿಯಲ್ ಎಸ್ಟೇಟ್, ಜಾತಿರಾಜಕಾರಣ ಹಾಗೂ ಗಣಿಗಾರಿಕೆಯ ಹಣದ ಕೊಬ್ಬಿನಿಂದ ಬಳಸಲಾಗುತ್ತಿರುವ ಒರಟು ಭಾಷೆಯ ಹಾಗೇ ಮಾತೆಯರ ಬಗ್ಗೆ, ಗೋವುಗಳ ಬಗ್ಗೆ “ಸಭ್ಯ”ರು ಮೆಚ್ಚುವ ಭಾಷೆಯನ್ನು ಬಳಸುತ್ತಾ ಅಧಿಕಾರ ಹಿಡಿಯಬಯಸುವ ಸಮಯ ಸಾಧಕರ ಭಾಷೆಯೂ ಅಪಾಯಕಾರಿಯೇ. ಮಾತೆಯರ ಬಗ್ಗೆ ಗೌರವ ತೋರುವ ಹುಸಿ ಭಾಷೆ ಬಳಸುವವರು ಅಥವಾ ಸ್ತ್ರೀಯರನ್ನು ಪರದೆ ಹಾಕಿ ಕೂರಿಸುವವರು ಸ್ಕರ್ಟ್ ಹಾಕಿದ ಹುಡುಗಿಯರ ವಿರುದ್ಧ ಕಾನೂನು ಮಾಡಬೇಕೆಂಬ ಠೇಂಕಾರದ ಗಂಡು ಭಾಷೆ ಬಳಸುವುದನ್ನು ನಾವು ನೋಡಿದ್ದೇವೆ.

ಹಾಗೆಯೇ, ಸಂಶೋಧಕರೊಬ್ಬರು ಬರೆದ ಪುಸ್ತಕ ತಮಗೆ ಒಪ್ಪಿಗೆಯಾಗದಿದ್ದಾಗ ಅವರ ವಿರುದ್ಧ ಅಶ್ಲೀಲ ಗೋಡೆ ಬರಹ ಬರೆಸುವ, ಬಾಯಿಗೆ ಬಂದಂತೆ ಚೀರುವ ಪುಂಡ ಧಾರ್ಮಿಕರ ಭಾಷೆ ಕೂಡ ಅಷ್ಟೇ ಕ್ರೂರವಾದುದು. ಒಂದು ಕಾದಂಬರಿ ಅಥವಾ ಒಂದು ಪೇಂಟಿಂಗ್ ಇಷ್ಟವಾಗದಿದ್ದಾಗ ಮೂಲಭೂತವಾದಿ ಗುಂಪುಗಳ ಭಾಷೆ ಕೂಡ ಇಂಥದ್ದೇ. ವೋಟಿಗೋಸ್ಕರ ಗಾಂಧಿಯನ್ನು ಕೊಂದ ಗೋಡ್ಸೆಯನ್ನು, ಮಸೀದಿ-ಮಂದಿರಗಳ ಜಗಳವನ್ನು ವೈಭವೀಕರಿಸುವವರ ಭಾಷೆ ಅತ್ಯಂತ ಅಶ್ಲೀಲ ಹಾಗೂ ಅಪಾಯಕಾರಿಯಲ್ಲವೆ?

ಈ ಎಲ್ಲ ಬಗೆಯ ಅಶ್ಲೀಲ ಭಾಷೆಯ ಬಗ್ಗೆ ಕರ್ನಾಟಕದ ರಾಜಕಾರಣಿಗಳೂ ಸೇರಿದಂತೆ, ಬಗೆಬಗೆಯ ವಲಯಗಳ ಸೂಕ್ಷ್ಮಜ್ಞರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಅದರ ಜೊತೆಗೆ, ನಯವಾದ, ಘನವಾದ ಭಾಷೆ ಬಳಸಿ ನೀಚ ಕೆಲಸವನ್ನೇ ಮುಂದುವರೆಸುವ ಎಲ್ಲ ಬಗೆಯ ಚಟುವಟಿಕೆಗಳ ಬಗೆಗೂ ಈ ವಿರೋಧ ವಿಸ್ತರಣೆಯಾಗುವ ಅಗತ್ಯವಿದೆ. ಅಂದರೆ ನಮ್ಮ ಸಾರ್ವಜನಿಕ ಚರ್ಚೆ ಹಾಗೂ ಭಾಷೆಯ ಅಧೋಗತಿ ನಮ್ಮ ಅಧಿಕಾರಶಾಹಿ ರಾಜಕಾರಣದ ಹಿಡನ್ ಅಜೆಂಡಾಗಳಲ್ಲೇ ಇದೆ ಎಂಬ ಸತ್ಯದ ಬಗ್ಗೆ ನಾವು ಇನ್ನಷ್ಟು ವ್ಯವಸ್ಥಿತವಾಗಿ ಪ್ರತಿಕ್ರಿಯೆ ತೋರಬೇಕಾಗಿದೆ. ಇವತ್ತಿನ ಆಧುನಿಕೋತ್ತರ ಚರ್ಚೆಗಳಲ್ಲಿ ರಾಜಕೀಯ ಹಾಗೂ ರಾಜಕಾರಣ ಎಂಬ ಶಬ್ದಗಳು ವ್ಯಾಪಕ ಅರ್ಥ ಪಡೆದಿವೆಯಾದರೂ ಸದ್ಯ ಅಧಿಕಾರ ರಾಜಕಾರಣದ ಭಾಷೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಈ ಪ್ರತಿಕ್ರಿಯೆ ಬರೆದಿರುವೆ.

‍ಲೇಖಕರು avadhi

December 29, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

  1. tumkurnaveed

    Ne Mi chandrara Davashem blurbnallina padagalanne punaruchdhisidalli “hitler nammalli athava nammanaduve huttadanthe echcharike vahisabekada chaaritrika anivaryatheya aathanka hula natarajaravara lekhanadidnda managanabahudu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: