ಇವರು ಅಲೆಮಾರಿ…ಅವರ ಪ್ರಕಾರವೇ ಬಣ್ಣಿಸುವುದಾದರೆ ಕರುನಾಡಿನಲ್ಲಿರುವ ಬೆಂಗಳೂರಿನ ಮಹಾನಗರಿಕ. ಗಂಡು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಮೀಡಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಯಾರು ಬಲ್ಲೆಯೇನು..? ಎಂದು ಕೇಳುವುದಷ್ಟೇ ನಮ್ಮ ಕೆಲಸ. ಅದು ಹೇಗಾದರೂ ಇರಲಿ. ಇವರ ಒಳಗೂ..ಹೊರಗೂ.. ಎಂಬ ಬ್ಲಾಗ್ ಓದಲೇಬೇಕು ಎನಿಸುವಷ್ಟು ಚೆನ್ನಾಗಿದೆ. ನಮ್ಮನ್ನೆಲ್ಲಾ ಕಾಡುತ್ತಿರುವ ಅಮೃತಾ ಪ್ರೀತಂ ಅವರ ಬಗೆಗಿನ ಬರಹ ಹಾಗೂ ಕವನದೊಂದಿಗೆ ಅವರ ಬ್ಲಾಗ್ ಲೋಕಕ್ಕೆ ಬಾಗಿಲು ತೆರೆಯುತ್ತಿದ್ದೇವೆ…ಸಿಂಪ್ಲಿ ಎಂಜಾಯ್ ಮಾಡಿ…
ಅಮೃತಾ ಪ್ರೀತಮ್ ಅನ್ನು ಕುಶವಂತ್ ಸಿಂಗ್ ಪಂಜಾಬ್ ಸಾರಸ್ವತ ಲೋಕದ ರಾಣಿ ಅಂತಾ ಕರೆದರು. ಆ ಹೊತ್ತಿಗೆ ಆಕೆ ಇರಲಿಲ್ಲ. ಇದೇ ಕುಶವಂತ್ ಸಿಂಗ್ ನಿನ್ನ ಆತ್ಮಕಥೆಯನ್ನು ಒಂದು ರಸೀದಿ ತಿಕೀಟಿನ ಹಿಂದೆ ಬರೆಯಬಹುದು ಹೋಗು ಅಂದಿದ್ದರಂತೆ. ಅದಕ್ಕೆ ರಸೀದಿ ತಿಕೀಟಿನಲ್ಲೇ ಉತ್ತರ ಕೊಟ್ಟಿದ್ದರು ಅಮೃತಾ. ಆಕೆಯ ಕಥೆ, ಕಾವ್ಯ, ಕಾದಂಬರಿ ಏನನ್ನಾದರೂ ಓದಿ… ಜೀವನ, ಪ್ರೀತಿ, ನೋವು ಎಲ್ಲದರಲ್ಲೂ ಅದೆಂಥ ತೀವ್ರತೆ! ಸಾಹಿರ್ನನ್ನು ಆರಾಧಿಸಿದರ ರೀತಿ, ಇಮ್ರೋಜ್ರೊಂದಿಗೆ ಅಷ್ಟೇ ಉತ್ಕಟವಾದ ಒಲವಿಟ್ಟುಕೊಂಡು ಸಂಗಾತಿಯಾಗಿದ್ದ ಪರಿ. ಅಮೃತಾ ಎಂಬ ವ್ಯಕ್ತಿ ವಾಸ್ತವಾಗಿ ಇದ್ದಳೋ… ಅಥವಾ ಆಕೆಯ ಸೃಷ್ಟಿಸಿದ ಪಾತ್ರವೋ ಅನ್ನಿಸುತ್ತದೆ.
ಕಾಲೇಜು ದಿನಗಳಲ್ಲಿ ಆಕೆಯ (ಕಪ್ಪು ಗುಲಾಬಿ ಇರಬೇಕು) ಕವನ ಸಂಕಲನದಿಂದ ಆಯ್ದ ಪದ್ಯಗಳನ್ನು ಹಾಮಾನಾ ಕನ್ನಡಕ್ಕೆ ತಂದಿದ್ದರು. ಸೊನೇರಿ ಅದರ ಹೆಸರು. ಅಮೃತಾ ನನಗೆ ಪರಿಚಯವಾಗಿದ್ದೆ ಆಗ. ಆಮೇಲೆ ಪಿಂಜರ್ ಓದಿದೆ. ಮತ್ತಷ್ಟು ಪದ್ಯಗಳನ್ನು ಓದಿದೆ. ಆಕೆ ನನ್ನ ಮೆಚ್ಚಿನ ಕವಿಯಾಗಿ ಬಿಟ್ಟಳು.
ಆಕೆ ಸಾಯುವ ಮುನ್ನ ೪೦ ವರ್ಷಗಳಿಗೂ ಹೆಚ್ಚು ಕಾಲ ಸಂಗಾತಿಯಾಗಿದ್ದ ಇಮ್ರೋಜ್ಗಾಗಿ ಒಂದು ಬರೆದರು. ಅದೇ ಮತ್ತೆ ಭೆಟ್ಟಿಯಾಗುತ್ತೇನೆ. ಅದನ್ನು ಸೇರಿ ನಾನು ಅನುವಾದಿಸಿದ ಇನ್ನೆರೆಡು ಪದ್ಯಗಳನ್ನು ಆಕೆಯ ನೆನಪಿನಲ್ಲಿ ನಿಮ್ಮ ಮುಂದಿಟ್ಟಿದ್ದೀನಿ….
ನಿನ್ನ ಕ್ಯಾನ್ವಾಸಿಗೆ ಮತ್ತೆ ಬರುವೆ….
ಹೇಗೆ? ಎಲ್ಲಿ?
ನನಗದು ತಿಳಿಯದು.
ಬಹುಶಃ
ಕಲ್ಪನೆಯಾಗಿ, ನಿಗೂಢ ರೇಖೆಯಾಗಿ
ನಿನ್ನ ಕ್ಯಾನ್ಬಾಸಿನ ಮೇಲೆ ಹರಡಿಕೊಳ್ಳಬಹುದು,
ನಿನ್ನನ್ನು ನೋಡುತ್ತಲೇ ನಿಲ್ಲಬಹುದು.
ಬಹುಶಃ
ನಿನ್ನ ಬಣ್ಣಗಳನ್ನು ಆಲಂಗಿಸಿಕೊಂಡು
ಸೂರ್ಯ ಕಿರಣವಾಗಿ ನಿನ್ನ ಕ್ಯಾನ್ವಾಸಿನ ಮೇಲೆ
ನನ್ನನ್ನು ನಾನೇ ಚಿತ್ರಿಸಿಕೊಳ್ಳಬಹುದು.
ಎಲ್ಲಿ? ಹೇಗೆ?
ಆದರೆ, ನಿಜವಾಗಿಯೂ ಭೆಟ್ಟಿಯಾಗುತ್ತೇನೆ.
ವಸಂತವಾಗಿ ಬರಬಹುದು;
ನಿನ್ನ ಮೈ ಮೇಲಿನ
ಬೆವರ ಹನಿಗಳನ್ನು ತಣಿಸಿ,
ಉರಿವ ನಿನ್ನೆದೆಗೆ
ತಂಪೆರೆಯಬಹುದು.
ಈ ಜೀವನ ನಿನ್ನೊಂದಿಗೆ ಇರುವುದು.
ನನಗಿದು ಬಿಟ್ಟು ಬೇರೇನು ತಿಳಿಯದು.
ಅಂದೇ ಎಲ್ಲ ಕರಗಿ ಹೋಗುವುದು.
ನಿನ್ನ ನೆನಪಿನ ಎಳೆಗಳಲ್ಲಿ ಹೆಣೆದು
ಹೇಗಾದರೂ ನಿನ್ನ
ಮತ್ತೆ ಭೆಟ್ಟಿಯಾಗುತ್ತೇನೆ.
he is Mr Kumar. at present he is working in kannada prabha as sub editor. he entered into the field of journalism at a very early age. his interests are many. he writes in the blog are nice, informative. his style of writing is quite attractive
sathish
thanks for the input
-avadhi
ಅವಧಿಗೆ,
ನನಗೆ ತಿಳಿದಿದ್ದನ್ನು ಖುಷಿಗೆ ಬರೆದುಕೊಳ್ಳುತ್ತಿದ್ದೆ, ಬರೆದು ಖುಷಿಯಾಗಿರುತ್ತಿದ್ದೆ. ನೀವು ನೋಡಿ, ಕನ್ನಡ ಬ್ಲಾಗ್ ಬಳಗಕ್ಕೆ ನನ್ನ ಬ್ಲಾಗ್ ಪರಿಚಯಿಸಿದ್ದಕ್ಕೆ ಸಂತೋಷವಾಗಿದೆ. ನಿಮಗೆ ಥ್ಯಾಂಕ್ಸ್.
ಬ್ಲಾಗ್ ನೋಡುತ್ತಿರಿ. ಪ್ರೋತ್ಸಾಹಿಸಿ.
ಅಲೆಮಾರಿ….