ಇವರು ತಪ್ಪಿಸಿಕೊಂಡವರಂತೆ!…

-ಡಾ.ಬಿ.ಆರ್. ಸತ್ಯನಾರಾಯಣ ನನ್ದೊಂದ್ಮಾತು ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹೋಗುತ್ತಿದ್ದರು. ಒಂದೆರಡು ಕಡೆ ಒಂದಿಬ್ಬರು ತಿಪ್ಪೆ ಗುಂಡಿ ಕೆದಕುತ್ತಿದ್ದರು. ಅವರೆಲ್ಲಾ ಭಿಕ್ಷುಕರ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದವರು ಎಂಬ ನಮ್ಮ ಮಾತಿಗೆ ಆಟೋ ಡ್ರೈವರ್ ಹೀಗೆ ಹೇಳಿದ. ‘ಸರ್, ಲೋಕದ ಕಣ್ಣಿಗೆ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದವರು. ಆದರೆ ಅವರನ್ನು ಅಲ್ಲಿಯವರೇ ಬಟ್ಟು ಕಳುಹಿಸುತ್ತಿದ್ದಾರೆ, ಅಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಸಾಯುವ ಬದಲು ಬೇರೆಡೆ ಸಾಯಲಿ ಎಂದು ಸರ್ಕಾರವೇ ಅವರನ್ನು ಅನಧಿಕೃತವಾಗಿ ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ’ ಎಂದ. ನಂತರ ಮಾತನಾಡುತ್ತಾ ಅತ ನೀಡಿದ ಕೆಲವು ಮಾಹಿತಿಗಳು ಗಾಬರಿ ಹುಟ್ಟಿಸುವಂತಿದ್ದವು. ಸರ್ ಅದೊಂದು ನರಕ. ಬೆಳಿಗ್ಗೆಯಿಂದ ಅಲ್ಲಿ ಭಿಕ್ಷುಕರು ಹೊರಬರುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನಲ್ಲಿಯೇ ಅವರು ಬರುತ್ತಿದ್ದಾರೆ. ಅವರೇನು ತಪ್ಪಿಸಿಕೊಂಡು ಹೋಗುವವರು ಹೀಗೆ ರಾಜಾರೋಷವಾಗಿ ಮುಖ್ಯ ಬಾಗಿಲಿನಲ್ಲಿ ಹೋಗುತ್ತಯಾರೆಯೇ? ನಂತರ ಅಲ್ಲಿ ಹೊರಗೆ ಬಂದ ತಕ್ಷಣ ಭಿಕ್ಷೆ ಕೇಳುವುದಕ್ಕೆ ಶುರುವಿಟ್ಟುಕೊಂಡರು. ಅಲ್ಲಿನ ನಮ್ಮ ಆಟೋಸಂಘದವರು, ಸ್ವಲ್ಪ ಹಣ ಸೇರಿಸಿ, ಅಕ್ಕಪಕ್ಕದ ಅಂಗಡಿಗಳವರ ಮನವೊಲಿಸಿ, ಎಲ್ಲರಿಗೂ ಬ್ರೆಡ್ಡು ಬಿಸ್ಕೆಟ್ ಕೊಡಿಸಿದೆವು. ನಂತರ ಕೆಲವರು ಅಲ್ಲಿಯೇ ಮಲಗು ಶುರುಮಾಡಿದರೆ, ಇನ್ನು ಕೆಲವರು ಮೆಜೆಸ್ಟಿಕ್ ಕಡೆ ಹೊರಟರು. ಯಾವುದೇ ಸಿಟಿ ಬಸ್ಸಿನವನೂ ದುಡ್ಡು ಕೊಡುತ್ತೇನೆಂದರೂ ಅವರನ್ನು ಹತ್ತಿಸಿಕೊಳ್ಳಲಿಲ್ಲ. ಆಗ ನಾವು ಒಂದಷ್ಟು ಜನ ಸ್ನೇಹಿತರು, ನಮ್ಮ ನಮ್ಮ ಆಟೋಗಳಲ್ಲಿ ನಾಲ್ಕೈದು ಜನರನ್ನು ಕೂರಿಸಿಕೊಂಡು ಮೆಜೆಸ್ಟಿಕ್ ತಲುಪಿಸಿದೆವು. ಹೀಗೆ ನಾನು ನಾಲ್ಕು ಟ್ರಿಪ್ ಅವರನ್ನು ಉಚಿತವಾಗಿ ಸಾಗಿಸಿ, ಇನ್ನಾದರೂ ಮನೆಗೆ ಹೋಗಬೇಕೆಂದು ಹೋಗುತ್ತಿದ್ದೆ. ಇಂದು ಬೆಳಿಗ್ಗೆಯಿಂದ ನನಗೆ ಐವತ್ತು ರೂಪಾಯಿಕೂಡಾ ಆಗಿರಲಿಲ್ಲ. ಮನೆಯಲ್ಲಿ ಹಬ್ಬ. ಅದಕ್ಕೆ ನೀವು ಯಶವಂತಪುರಕ್ಕೆ ಕರೆದಾಗ ತಡವಾಗಿದ್ದರೂ ನಾನು ಬರಲೊಪ್ಪಿದೆ. ಆದರೂ ಹಬ್ಬದ ದಿನ ನಾವು ಇಷ್ಟು ನಮ್ಮ ಕೈಲಾದ ಸೇವೆಯನ್ನು ಮಾಡಿದೆವೆಂಬ ತೃಪ್ತಿ ನಮಗಿದೆ ಎಂದ. ಅಷ್ಟರಲ್ಲಿ ಯಶವಂತಪುರದ ಮಾರ್ಗದಲ್ಲಿ ಇನ್ನೂ ಹತ್ತಾರು ಜನ ಭಿಕ್ಷುಕರು ನಡೆದುಕೊಂಡು ಹೋಗುವುದನ್ನು ನಮಗೆ ಆತ ತೋರಿಸಿದ. ನಂತರ ಆತ ಹೇಳಿದ (ಕೆಲವು ಭಿಕ್ಷುಕರು ಅವನಿಗೆ ನೀಡಿದ್ದ ಮಾಹಿತಿಗಳು) ಕೆಲವು ವಿಚಾರಗಳು ಹೀಗಿವೆ. ಅಲ್ಲಿಯೇ ಆಡಳಿತದವರೇ ಕೆಲವು ಆಯ್ದ ಭಿಕ್ಷುಕರನ್ನು ಬೆಳಿಗ್ಗೆ ಹೊರಕ್ಕೆ ಬಿಡುವುದು. ಸಂಜೆ ಅವರನ್ನು ಎತ್ತಿಕೊಂಡು ಬರುವುದು. ಬೆಳಿಗ್ಗೆಯಿಂದ ಅವರು ಭಿಕ್ಷೆ ಎತ್ತಿ ಸಂಪಾದಿಸಿದ್ದ ಹಣವನ್ನು ಅಲ್ಲಿನ ಜವಾನರು ಆಯಾಗಳು, ಸೆಕ್ಯೂರಿಟಿ ಗಾರ್ಡ್ಸ ಅಧಿಕಾರಿಗಳು ಕಿತ್ತುಕೊಂಡು ಹಂಚಿಕೊಳ್ಳುತ್ತಿದ್ದರಂತೆ. ಅಲ್ಲಿ ಅಶಕ್ತ ಭಿಕ್ಷುಕರನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಲಾಗಿದೆಯಂತೆ. ಆದರೆ ಅವರೆಷ್ಟು ಕ್ರೂರಿಗಳೆಂದರೆ, ಹತ್ತು ಇಪ್ಪತ್ತು ಜನರನ್ನು ಒಟ್ಟಿಗೆ ಕೂರಿಸಿ ಬಕೆಟ್ಟಿನಿಂದ ನೀರನ್ನು ಎರಚಿ, ಸ್ನಾನವಾಯಿತು ಎಂದು ಕಳುಹಿಸುತ್ತಿದ್ದರಂತೆ. ಸಾವಿರಾರು ಟವೆಲ್ ಪಂಚೆ ಮುಂತಾದವುಗಳನ್ನು ಖರೀದಿಸುತ್ತಿದ್ದರೂ ಒಂದನ್ನೂ ಭಿಕ್ಷುಕರ ಕೈಗೆ ಕೊಡುತ್ತಿರಲಿಲ್ಲವಂತೆ. ಸ್ನಾ ಮಾಡಿಸುವಾಗ ಮಾಡಿಸಿದ ನಂತರ ಬಟ್ಟೆ ಬಸಲಾಯಿಸುವ ಕೆಲಸವೇ ಇಲ್ಲ. ಬೆಟ್ಟೆ ಹಾಕಿಕೊಂಡೇ ಸ್ನಾನ, ಆ ಬಟ್ಟೆಗಳು ಒಣಗುವುದು ಮೈಮೇಲೆಯೇ ಅಂತೆ!. ಯಾರಾದರೂ ಹೊರಗಿನವರು ಬಂದರೆ, ಅವರೆದುರು ಏನೂ ಮಾತನಾಡದಂತೆ ಹೆದರಿಸುತ್ತಿದ್ದರಂತೆ. ಹೊಡೆಯವುದು ಬಡಿಯುವುದು ಸಾಮಾನ್ಯ ಸಂಗತಿ. ಒಂದು ರೂಮಿನಲ್ಲಿ ಇಪ್ಪತ್ತು ಮೂವತ್ತು ಜನರನ್ನು ಕೂಡಿ ಹಾಕಿ ರಾಥ್ರಿಯೆಲ್ಲಾ ಅಲ್ಲಿಯೇ ಮಲಗಿಸುತ್ತತಿದ್ದರಂತೆ. ಕುಳಿತಲ್ಲಿಯೇ ಒಂದ ಎರಡ ಎಲ್ಲಾ. ಸ್ವಲ್ಪ ಓದು ಬರಹ ಬರುವ, ಪ್ರತಿಭಟನಾ (ಪುನರ್ವಸತಿ ಕೇಂದ್ರದವರ ಮೇಲೆ ರೇಗುವ, ದೈಹಿಕ ಹಲ್ಲೆಗೆ ಮುಂದಾಗುವ) ಮನೋಭಾವದ ಭಿಕ್ಷುಕರೂ ಅಲ್ಲಿದ್ದರಂತೆ. ಅವರನ್ನು ಕಂಡರಂತೂ ಆಯಾಗಳಿಗೂ ಅಧಿಕಾರಿಗಳಿಗೂ ಕೆಂಡಾಮಂಡಲ ಕೋಪ. ಅವರನ್ನಂತೂ ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರಂತೆ. ಕೊನೆಗೆ ಆಟೋಡ್ರೈವರ್ ಹೇಳಿದ್ದು. ಸರ್ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬಹುದಿತ್ತು. ಅವರನ್ನು ಉದ್ಧಾರ ಮಾಡುವುದಾಗಿ ತಂದು ಇಲ್ಲಿ ಕೂಡಿ ಹಾಕುವುದು ಯಾವ ನ್ಯಾಯ. ಈಗ ಅಲ್ಲಿ ಸಾಯುತ್ತಿರುವವ ಸಂಕ್ಯೆ ಹೆಚ್ಚಾಗಿ ಟೀ.ವಿ.ಪೇಪರಿನಲ್ಲಿ ಸುದ್ದಿ ಬರಲು ಶುರುವಾದಾಗ, ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಟಕ ಆಡುವುದೇಕೆ? ಈಗ ಇವರೆಲ್ಲ ಮತ್ತೆ ಜನಗಳ ಮಧ್ಯೆ ಬಂದು ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ? ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ ಎಂದ. ಆಗ ನನ್ನ ಜೊತೆ ಬರುತ್ತಿದ್ದ ನನ್ನ ಸ್ನೇಹಿತರು, ಇನ್ನ ರಸ್ತೆಯಲ್ಲಿ ಅನಾಥ ಹೆಣಗಳು ಸಂಖ್ಯೆ ಹೆಚ್ಚಾಗುತ್ತದೆ. ಸರ್ಕಾರಕ್ಕೆ, ಅವರು ಅಲ್ಲಿ ಸಾಯುವ ಬದಲು ಹೊರಗೆಲ್ಲಾದರೂ ಸತ್ತರೆ ಅಷ್ಟು ಸುದ್ದಿಯಾಗುವುದಿಲ್ಲ ಎಂದೂ ಗೊತ್ತಿದೆ. ಅದಕ್ಕೆ ಈಗ ತಪ್ಪಿಸಿಕೊಂಡು ಹೋದರು ಎಂಬ ಸುದ್ದಿ ಹಬ್ಬಿಸಿ ಬಿಟ್ಟು ಓಡಿಸುತ್ತಿದ್ದಾರೆ ಎಂದರು. ‘ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ’ ಎಂದ ಆಟೋ ಡ್ರೈವರನ ಮಾತುಗಳಲ್ಲಿರುವ ಸತ್ಯವನ್ನು ಕುರಿತು ಯೋಚಿಸುತ್ತಿದ್ದೆ. ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ಓಡಾಡುವ ಮಾತನಾಡುವ ಸಂದರ್ಭ ಬಂದರೆ ಸಾಕ್ಷಿ ನುಡಿಯುವ ಶಕ್ತಿಯಿರುವ ಸಹವಾಸಿ ಮನುಷ್ಯರ ವಿಚಾರದಲ್ಲಿಯೇ ಸರ್ಕಾರಿ ವ್ಯವಸ್ಥೆ ಈ ರೀತಿಯಾಗಿ ನಡೆದುಕೊಂಡಿದೆ. ಇನ್ನು ಮುದಿ ಗೋವುಗಳನ್ನೂ ನಾನೇ ಸಾಕುತ್ತೇನೆ ಎಂದು ಹೊರಟಿರುವ ಈ ವ್ಯವಸ್ಥೆ, ಆ ಮೂಕ ಪ್ರಾಣಿಗಳನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳಬಹುದು. ಈಗ ಸಾವಿರಾರು ಸಂಖ್ಯೆಯ (ಯೂನಿಫಾರ್ಮ್ ಧರಿಸಿರುವ) ಭಿಕ್ಷುಕರು ರಸ್ತೆಯಲ್ಲಿ ಕುಂಟುತ್ತಾ, ಕಾಲೆಳೆಯುತ್ತಾ ಹೋಗುವುದನ್ನು ನೋಡಬೇಕಾಗಿರುವಂತೆ, ಮುಂದೆ ಇನ್ನೇನನ್ನು ನೋಡಬೇಕೋ ತಿಳಿಯುತ್ತಿಲ್ಲ. ಕೊಸರು: ಬೆಳಿಗ್ಗೆ ವಾರ್ತೆಯಲ್ಲಿ, ಅಲ್ಲಿನ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ, ಹಾಗೂ ಸಚಿವರೊಬ್ಬರನ್ನು ಸಂಬಂಧಪಟ್ಟ ಖಾತೆಯಿಂದ ಕಿತ್ತುಕೊಂಡು, ಬೇರೆ ಖಾತೆಗೆ ನಿಯುಕ್ತಗೊಳಿಸಿದ್ದನ್ನು ಪ್ರಸಾರ ಮಾಡುತ್ತಿದ್ದರು. ಹಾಗೆ ವಜಾ ಮಾಡುವುದರಿಂದ, ಖಾತೆ ಬದಲಾಯಿಸುವುದರಿಂದ ಆಗಿರುವ ತಪ್ಪು ಸರಿಹೋಗುತ್ತದೆಯೇ?ಮುಖ್ಯಮಂತ್ರಿಗಳೇ ಯೋಚಿಸಬೇಕು]]>

‍ಲೇಖಕರು avadhi

August 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Iynanda Prabhu

  ಇವನ್ನೆಲ್ಲಾ ನೋಡ್ತಾ, ಇವುಗಳ ಕುರಿತು ಓದ್ತಾ, ಕೇಳ್ತಾ, ಮಾನವ ಜನಾಂಗದ ಮೇಲೇ ಜಿಗುಪ್ಸೆಯಾಗುತ್ತೆ. ಹಣಕ್ಕಾಗಿ ಕೆಲವರು ಹೆತ್ತವಳನ್ನೂ ಮಾರಲು ಹೇಸರು ಎಂದೆನ್ನಿಸುತ್ತೆ.
  ಬಹುಶಃ ಮನುಷ್ಯ ಜಾತಿ ಮೊದಲಿಂದಲೂ ಹೀಗೆಯೊ ಏನೋ! ಅದಕ್ಕೇ ದಾಸರು “ಮಾನವ ಜನ್ಮ ದೊಡ್ಡದಣ್ಣಾ!” ಎಂದು ಕೆಟ್ಟದ್ದರಲ್ಲೂ ಒಳ್ಳೆಯದನ್ನು ತುಂಬುವ ಪ್ರಯತ್ನ ಮಾಡಿದರೇನೋ!

  ಪ್ರತಿಕ್ರಿಯೆ
 2. ಎ ವಿ ಗೋವಿಂದ ರಾವ್

  ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದ ವಿವಿಧ ರೂಪಗಳನ್ನು ನೋಡುವಾಗ ನಾವು ಅಧಿಕಾರ ದೊರೆತ ತಕ್ಷಣ ಒಂದು ರೀತಿಯಲ್ಲಿ ಸಜಾತಿಭಕ್ಷಕರಾಗುತ್ತಿದ್ದೇವೆ ಅಂದನ್ನಿಸುವುದಿಲ್ಲವೇ?

  ಪ್ರತಿಕ್ರಿಯೆ
 3. ಅಶೋಕವರ್ಧನ

  ಪುಸ್ತಕೋದ್ಯಮದ ಸಂದರ್ಭದಲ್ಲಿ ನಾನು ಕಂಡುಕೊಂಡ ಸತ್ಯ – ಪ್ರಜಾಸತ್ತೆ ರಾಜಸತ್ತೆಗೆ ಪರ್ಯಾಯವಾಗಿ ಬಂದದ್ದಲ್ಲ, ಇಂದಿನ ರಾಜಕಾರಣಿಗಳು ಸೀಮಿತ ಅವಧಿಯ ರಾಜ ಮಹಾರಾಜರಲ್ಲ. ರಾಜಕಾರಣಿಗಳು ಯಜಮಾನರಲ್ಲ, ಕೇವಲ ನಿರ್ವಾಹಕರು. ಎಲ್ಲಾ ವ್ಯಕ್ತಿಗಳು, ವೃತ್ತಿಗಳು ಸಮಾಜದ ಒಳಿತಿಗಾಗಿ ದುಡಿಯುವ ಪರಿಸರವನ್ನಷ್ಟೇ ಸರಕಾರ ಕಟ್ಟಬೇಕಿತ್ತು. ಪುಸ್ತಕೋದ್ಯಮದ ಪರಮ ಪಾತಕ ಸುರುವಾದದ್ದೇ ಸರಕಾರವೇ ಪ್ರಕಾಶಕ (ಅನುದಾನ, ಇಲಾಖೆಗಳು, ಅಕಾಡೆಮಿಗಳು, ಪ್ರಾಧಿಕಾರಗಳು ಇತ್ಯಾದಿ), ಸರಕಾರವೇ ಕೊಳ್ಳುಗ (ಗ್ರಂಥಾಲಯಗಳು, ವಿದ್ಯಾ ಸಂಸ್ಥೆಗಳು ಇತ್ಯಾದಿ) ಎನ್ನುವ ವಿಪರೀತ ಬೆಳೆದು ಇಂದು ಪುಸ್ತಕೋದ್ಯಮ ಮಾತ್ರವಲ್ಲ ಎಲ್ಲಾ ಗೌರವಾನ್ವಿತ ವೃತ್ತಿಗಳೂ ಭಿಕ್ಷಾ ಕೇಂದ್ರಗಳೇ ಆಗಿವೆ. ಉದ್ದಿಮೆ ನಮ್ಮದು, ಅದರ ಕಾರಣ ಕೆಟ್ಟ ಪರಿಸರ ರಕ್ಷಣೆ ನಮ್ಮದು, ಅದರ ಕಾರಣ ನಿರ್ವಸಿತರಾದ, ನಿರುದ್ಯೋಗಿಗಳಾದ ಜನರೂ ನಮ್ಮವರೇ! ಶಿಕ್ಷಣದ ಮೂಲ ಅವಶ್ಯಕತೆಗಳನ್ನು ಬಿಟ್ಟು ಹಾಲು ಕೊಡ್ತೇವೆ, ಮೊಟ್ಟೆ ಕೊಡ್ತೇವೆ, ಬಿಸಿಯೂಟ ಕೊಡ್ತೇವೆ, ಸೈಕಲ್ ಕೊಡ್ತೇವೆ, ಬಟ್ಟೆ, ಪುಸ್ತಕ ಏನೆಲ್ಲಾ ಕೊಟ್ಟದ್ದೇ ಕೊಟ್ಟದ್ದು ಯೋಗ್ಯ ಶಿಕ್ಷಣ (ವ್ಯವಸ್ಥಿತ ಶಾಲೆ, ಆರೋಗ್ಯಪೂರ್ಣ ಶಿಕ್ಷಕವರ್ಗ) ಒಂದು ಬಿಟ್ಟು. ಇಂದು ಗ್ರಾಮೀಣ (ಮುಖ್ಯವಾಗಿ ಸಮಾಜಪೋಷಕ ಕೃಷಿಯಾಧಾರಿತ) ಬದುಕು ಮಾತ್ರವಲ್ಲ ನಗರ ಜೀವನವೂ ಅಸಹನೀಯವೆನ್ನುವ ಸ್ಥಿತಿಗೆ ಮುಟ್ಟಿದ್ದರ ಸಣ್ಣ ಉದಾಹರಣೆ ಈ ಭಿಕ್ಷುಕರ ಪುನರ್ವಸತಿ ಕೇಂದ್ರ. ಇಂದು ‘ವೃತ್ತಿ ನಿರ್ಮಾಣ’ ಎನ್ನುವುದು ಬಹಳ ಪಾವಿತ್ರ್ಯ ಪಡೆದಿದೆ. ಮಂತ್ರಿಯಿಂದ ತೊಡಗಿ ಆಯಾವರೆಗೆ ಅಗಾಧವಾಗಿ ಬೆಳೆದು ನಿಂತ ಇಲಾಖೆಯನ್ನೇ ಬರ್ಖಾಸ್ತುಗೊಳಿಸಿ, ಇನ್ನಷ್ಟು ಭಿಕ್ಷುಕರನ್ನು ಸೃಷ್ಟಿಸದ ಆಡಳಿತ ಪ್ರಜ್ಞೆ ನಮ್ಮ ಜನಪ್ರತಿನಿಧಿಗಳಿಗೆ ಬರಲಿ ಎಂದು (ವ್ಯರ್ಥ) ಆಶಿಸುವುದಷ್ಟೇ ಉಳಿದಿದೆ.
  ಅಶೋಕವರ್ಧನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: