‘ಇವರು ನರೇಗಲ್ಲರು… ‘ -ಗೋಪಾಲ ವಾಜಪೇಯಿ

-ಗೋಪಾಲ ವಾಜಪೇಯಿ

ಇವರು ನರೇಗಲ್ಲರು…

(ಚಿತ್ರ ಕೃಪೆ : ಕೃಷ್ಣಾನಂದ ಕಾಮತ್ / Kamat’s Potpourri)

 

೧೯೬೯-೭೦ರ ಸುಮಾರಿಗೆ ನಾನಿನ್ನೂ ಇಪ್ಪತ್ತರೊಳಗಿನ ಹುರುಪಿನ ಹುಡುಗ. ನಮ್ಮ ಊರಿನ (ಗದಗ ಜಿಲ್ಲೆಯ ಲಕ್ಷ್ಮೇಶ್ವರ) ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತ್ಯುತ್ಸಾಹದಿಂದ

ಪಾಲ್ಗೊಳ್ಳುತ್ತಿದ್ದೆ. ಸುತ್ತಮುತ್ತಲಿನ ಶಹರಗಳಿಂದ, ನಗರಗಳಿಂದ ಸಾಹಿತಿಗಳನ್ನು ಸಂಪರ್ಕಿಸಿ, ಆ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳೆಂದು ಒಪ್ಪಿಸಿ, ಕರೆತರುವ ಹೊಣೆ ನನ್ನದೇ

ಆಗಿರುತ್ತಿತ್ತು. ನಮ್ಮ ಓಣಿಯಲ್ಲಿ ‘ಆಧ್ಯಾತ್ಮ ಚಿಂತಕರ’ ಒಂದು ಸಂಘಟನೆ ಇತ್ತು. ಆಗಾಗ ಹಿರಿಯ ಆಧ್ಯಾತ್ಮ ಪಂಡಿತರ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದ ಆ ಸಂಘಟನೆಯ ಪದಾಧಿಕಾರಿಗಳು, ”ಈ

ಸರೆ ಹುಬ್ಬಳ್ಳಿಯಿಂದ ಪ್ರಹ್ಲಾದ ನರೇಗಲ್ಲ ಮಾಸ್ತರ್ನ ಕರಸಬೇಕು… ಮಹಲಿಂಗರಂಗ ಕವಿಯ ‘ಅನುಭವಾಮೃತ’ದ ಬಗ್ಗೆ ಅವರ ಉಪನ್ಯಾಸ ಏರ್ಪಡಸಬೇಕು…” ಎಂದು ಒಮ್ಮತದ ನಿರ್ಧಾರಕ್ಕೆ

ಬಂದರು.  (ಕವಿ ಮಹಲಿಂಗರಂಗರು ೧೬ನೆಯ ಶತಮಾನದ ಒಬ್ಬ ಅವಧೂತರು. ಅವರ ‘ಅನುಭವಾಮೃತ’ ಒಂದು ಷಟ್ಪದಿ ಕಾವ್ಯ. ಸಂಸ್ಕೃತದ ಹಂಗಿಲ್ಲದೆ ಬರೆದ ಕನ್ನಡದ ಹಿರಿಮೆಯ ಕಾವ್ಯ. ಅಷ್ಟೇ ಅಲ್ಲ, ಸಂಸ್ಕೃತಕ್ಕೆ ಅನುವಾದಗೊಂಡ ಕನ್ನಡದ ಮೊದಲ ಕಾವ್ಯ ಅದು. ಮಹಲಿಂಗರಂಗರು ದಾವಣಗೆರೆಯಲ್ಲಿದ್ದು, ಅಲ್ಲಿಯೇ ಕಾಲವಾದರೆಂದು ಹೇಳಲಾಗುತ್ತದೆ. ಅವರ ಸಮಾಧಿ ಮಠ ದಾವಣಗೆರೆಯಲ್ಲಿದೆ.)  ನರೇಗಲ್ಲ ಮಾಸ್ತರರು ಬೇಂದ್ರೆಯವರ ಗೆಳೆಯರ ಗುಂಪಿನ ಸದಸ್ಯರಾಗಿದ್ದವರು ; ವಿಶ್ವಕವಿ ರವೀಂದ್ರನಾಥ ಠಾಕೂರರ ಶಿಷ್ಯರಾಗಿ ‘ಶಾಂತಿನಿಕೇತನ’ದಲ್ಲಿ ಐದು ವರ್ಷ ಇದ್ದು ಬಿ.ಎ. ಮುಗಿಸಿದವರು ; ರವೀಂದ್ರರ ‘ಗೀತಾಂಜಲಿ’ಯ ಎಲ್ಲ ಕವಿತೆಗಳನ್ನು ಮೂಲ ಬಂಗಾಲಿಯಿಂದ ಕನ್ನಡಕ್ಕೆ ತಂದ ಮೊದಲಿಗರು ; ದೊಡ್ಡ ಕವಿಗಳು ; ‘ಜನಾನುರಾಗಿ ಶಿಕ್ಷಕ’ರೆನಿಸಿದ್ದ ಅವರು ನಿವೃತ್ತರಾಗಿ ಹುಬ್ಬಳ್ಳಿಯ ‘ತಬೀಬ್ ಲ್ಯಾಂಡ್’ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವರು ಎಂಬಿತ್ಯಾದಿ ಮಾಹಿತಿಯೆಲ್ಲ ನಮ್ಮ ಓಣಿಯ ಹಿರಿಯರ ಮಾತಿನಿಂದ ನನಗೆ ಗೊತ್ತಾಯಿತು. ಇದೆಲ್ಲದರಿಂದಾಗಿ, ನರೇಗಲ್ಲ ಮಾಸ್ತರರ ‘ಚಿತ್ರ’ವೊಂದು ನನ್ನ ಮನದಲ್ಲಿ ಮೂಡಿ ನಿಂತಿತು. ಹೀಗಾಗಿ, ನರೇಗಲ್ಲ ಮಾಸ್ತರರನ್ನು ಒಪ್ಪಿಸಿ ಕರೆತರಲು ನಾನು ತುಂಬ ಕುತೂಹಲಿಯಾಗಿಯೇ ಹುಬ್ಬಳ್ಳಿಗೆ ಓಡಿದೆ.

ಆಗೆಲ್ಲ ಹುಬ್ಬಳ್ಳಿಗೆ ಹೋಗುವ ಅವಕಾಶಕ್ಕಾಗಿ ನಾನು ಸದಾ ತುದಿಗಾಲ ಮೇಲೆಯೇ ನಿಂತಿರುತ್ತಿದ್ದೆ. ಆಗ ‘ಛೋಟಾ ಮುಂಬಯಿ’ ಎಂದೇ ಕರೆಸಿಕೊಳ್ಳುತ್ತಿದ್ದ ಹುಬ್ಬಳ್ಳಿ ಎಂದರೆ ನಮ್ಮ ಪಾಲಿನ

ಮಾಯಾಲೋಕ. ಕಾಮತ ಹೋಟೆಲಿನಲ್ಲಿ ಒಂದು ಮಸಾಲೆ ದೋಸೆ, ಮಲ್ಲಿಕಾರ್ಜುನ ಟಾಕೀಜಿನಲ್ಲಿ ರಾಜಣ್ಣನ ಒಂದು ಸಿನಿಮಾ, ಸುವರ್ಣ ಮಂದಿರದಲ್ಲಿ ಒಂದು ಮಿಸಳ ಭಾಜಿ, ಬಸಪ್ಪನ ಖಾನಾವಳಿಯಲ್ಲಿ ಭರ್ಜರಿ ಭಕ್ಕರಿ ಊಟ… ಅಲ್ಲದೆ ಊರಲ್ಲಿ ಅವರಿವರು ಹೇಳಿದ ಜಿನಸಿಗಳು, ಹೆಬಸೂರರ ಅಂಗಡಿಯಿಂದ ಏನೇನೋ ಔಷಧಿ ಬೇರುಗಳು ಮುಂತಾದುವನ್ನು ಹುಡುಕಿಕೊಂಡು ಹೋಗಿ ದುರ್ಗದ ಬೈಲಿನಲ್ಲಿ ಸುತ್ತು ಹಾಕುತ್ತ, ಗಿರ್ಮಿಟ್ಟು ತಿನ್ನುವ ಮಜಾ… ಇಷ್ಟೆಲ್ಲ ಮುಗಿದ ಮೇಲೆ ಊರಿಗೆ ಹಿಂದಿರುಗಲು ಕಡೆಯ ಬಸ್ಸು ಹಿಡಿಯುವ ಧಾವಂತ… ಒಂದು ವೇಳೆ ಕಡೆಯ ಬಸ್ಸು ತಪ್ಪಿಬಿಟ್ಟರೆ ತಗೋ, ಇನ್ನೂ ಹುಕಿ. ಗುಡಗೇರಿ ಕಂಪನಿಯ ‘ವರ ನೋಡಿ ಹೆಣ್ಣು ಕೊಡು’ ಇಲ್ಲವೇ ವಸಂತರಾವ್ ನಾಕೋಡರಕಂಪನಿಯ ‘ದೇಸಾಯರ ದರ್ಬಾರು’ ನಾಟಕ ನೋಡುವ ಚಾನ್ಸು. ನಾಟಕಕ್ಕೆ ನಾಟಕವೂ ಆಯಿತು, ಬೆಳತನಕ ಮಲಗಲು ಜಾಗವೂ ಸಿಕ್ಕಿತು.

ಹಾಂ, ನಮ್ಮ ಊರಿನಲ್ಲಿ ಆಗ ಯಾವುದೇ ಪತ್ರಿಕಾ ಸುದ್ದಿಗಾರ ಇರಲಿಲ್ಲ. ಹೀಗಾಗಿ ಊರ ಕಾರ್ಯಕ್ರಮಗಳ ವರದಿ ಬರೆದು ‘ಸಂಯುಕ್ತ ಕರ್ನಾಟಕ’ಕ್ಕೆ ಕೊಟ್ಟು ಬರುವ ಕಾಯಕವನ್ನೂ ನಾನೇ

ಮಾಡುತ್ತಿದ್ದೆ. ಈ ಕಾರಣದಿಂದ ‘ಸಂಯುಕ್ತ ಕರ್ನಾಟಕ’ ಕಚೇರಿಯಲ್ಲಿ ಒಂದಷ್ಟು ಜನರ ಪರಿಚಯವೂ ನನಗಾಗಿತ್ತು. ಹುಬ್ಬಳ್ಳಿಯ ಮುಖ್ಯ ಜಾಗಗಳೆಲ್ಲ ನನಗೆ ಓಡಾಡಿ ಗೊತ್ತಿದ್ದವೇ ಆಗಿದ್ದವು. ಆದರೆ, ನರೇಗಲ್ಲ ಮಾಸ್ತರರು ಇರುತ್ತಿದ್ದ ‘ತಬೀಬ್ ಲ್ಯಾಂಡ್’ ಮಾತ್ರ ನನಗೆ ಹೊಸದು. ಅಲ್ಲಿಗೆ ಹೋಗುವ ದಾರಿ ಯಾವುದೆಂದು ‘ಸಂಯುಕ್ತ ಕರ್ನಾಟಕ’ದಲ್ಲಿ ವಿಚಾರಿಸುತ್ತಿದ್ದಾಗ, ”ನೀವು ತಬೀಬ್ ಲ್ಯಾಂಡಿಗೆ

ಹೋಗ್ಬೇಕs…? ಬರ್ರಿ, ನಾನೂ ಅಲ್ಲಿಗೇ ಹೊಂಟೀನಿ…” ಎಂದೊಬ್ಬರು ನೆರವಿಗೆ ಬಂದರು.  ಅಪರಿಚಿತ ಪ್ರದೇಶಗಳಲ್ಲಿ ಹೀಗೊಬ್ಬರು ‘ದಾರಿ ತೋರುವವರು’ ಸಿಕ್ಕುಬಿಟ್ಟರೆ ಎಷ್ಟೋ ಧೈರ್ಯ.

ನಾನು ಅವರನ್ನು ಹಿಂಬಾಲಿಸತೊಡಗಿದೆ. ”ನೀವು ತಬೀಬ್ ಲ್ಯಾಂಡಿನ್ಯಾಗ ಯಾರ ಮನೀಗೆ ಹೋಗಬೇಕು…?” ”ಪ್ರಹ್ಲಾದ ನರೇಗಲ್ಲ ಮಾಸ್ತರ ಮನೀಗೆ…” ”ಹೌದs… ಬರ್ರಿ… ” ಎಂದು ಮುಂದೆ ಮುಂದೆ ಸಾಗತೊಡಗಿದ ಅವರು ಕೊಪ್ಪೀಕರ್ ರಸ್ತೆಯಿಂದ ದುರ್ಗದ ಬೈಲಿನ ಕಡೆ ಹೊರಟರು. ನಡುವೆ ಎಡಕ್ಕೆ ಹೊರಳಿ, ಕಿಲ್ಲೆಯಲ್ಲಿ ಹಾದು, ಸಿ.ಬಿ.ಟಿ. ಮೂಲಕ ಬಾಕಳೆ ಗಲ್ಲಿಯಲ್ಲಿ ಸಾಗಿದ ಆ ಗೃಹಸ್ಥ ದಾರಿಯುದ್ದಕ್ಕೂ ”ನಿಮ್ಮದು ಯಾವೂರು?” , ”ಇಲ್ಲಿಂದ ಎಷ್ಟು ದೂರ ಅದ…?” , ”ನೀವೇನ ಮಾಡ್ತೀರಿ…?” ,”ಮನ್ಯಾಗ ಎಷ್ಟ ಮಂದಿ ಇದ್ದೀರಿ…?”, ”ನರೇಗಲ್ಲ ಮಾಸ್ತರ ಹತ್ರ ಏನ ಕೆಲಸಾ…?” ಎಂದೆಲ್ಲ ಎಡೆಬಿಡದೆ ಪ್ರಶ್ನೆಗಳನ್ನು ಹಾಕುತ್ತ ನಡೆದೇ ನಡೆದರು. ನಡುವೆ ಸಿಕ್ಕ ಗುಡಿಗಳೆದುರು ನಿಂತು, ಜೋಡು ಕಳಚಿ ಕೈಮುಗಿದು, ಮತ್ತೆ ಸಾಗುತ್ತಿದ್ದರು. ನನಗೋ ಅವರ ಹಿಂದೆ ನಡೆನಡೆದು

ಸಾಕಾಗಿತ್ತು. ಅದಕ್ಕಿಂತ ಅವರ ‘ಪ್ರಶ್ನಚಾಪ’ಗಳು ನನಗೆ ಕಿರಿಕಿರಿಯುಂಟು ಮಾಡುತ್ತಿದ್ದವು. ಕೊನೆಗೊಮ್ಮೆ, ”ಇನ್ನೂ ಎಷ್ಟು ದೂರದರೀ ತಬೀಬ್ ಲ್ಯಾಂಡು…?” ಎಂದು ಕೇಳಿಯೇಬಿಟ್ಟೆ. ಅವರು ನನ್ನ ಬೇಸರವನ್ನು ಗಮನಿಸಿದರೇನೋ. ”ಎದರಿಗೆ ಕಾಣಸ್ತದಲ್ಲಾ ಆ ರಸ್ತೆ, ಅಲ್ಲೆ ಹೋಗಿ ಬಲಕ್ಕ ತಿರಗೀದ್ರ ಅದs ತಬೀಬ್ ಲ್ಯಾಂಡು…” ಎಂದು ನಕ್ಕು ಮುನ್ನಡೆಯತೊಡಗಿದರು. ಅಂತೂ ಫಾಜಾಗಟ್ಟಿ ಸಮೀಪ ಬಂತು ಎಂಬ ಸಮಾಧಾನ ನನಗೆ. ಹಾಗೆ ಬಲಕ್ಕೆ ಹೊರಳಿದ ಮೇಲೆ, ಬಲಗಡೆಯ ಹಂಚಿನ ಮನೆಯೊಂದನ್ನು ತೋರಿಸಿ, ”ಅದs ನರೇಗಲ್ಲ ಮಾಸ್ತರ ಮನಿ…” ಎಂದರು. ಮನೆಯ ಬಾಗಿಲು ಮುಚ್ಚಿತ್ತು. ನಾನು ಆ ಗೃಹಸ್ಥರತ್ತ ನೋಡಿದೆ. ”ಮಾಸ್ತರು ಮಲಗಿರಬೇಕು ಒಳಗ… ಬಾಗಲಾ ಬಡಿ ತಮ್ಮಾ… ನಾ ಬರ್ಲ್ಯಾs…?” ಎಂದು ಹಾಗೇ ಮುಂದೆ ಸಾಗಿ, ಆ ಸಾಲು ಮನೆಗಳ ಕೊನೆಗಿದ್ದ ಸಂದಿಯಲ್ಲಿ ಮರೆಯಾದರು. ನಾನೊಂದಷ್ಟು ಹೊತ್ತು ಬಾಗಿಲು ಬಡಿದೆ. ಏನೂ ಉತ್ತರ ಬಾರದಿದ್ದಾಗ ಚಿಲಕವನ್ನು ಬಾರಿಸಿದೆ. ಒಳಗಿನಿಂದ ಯಾರೋ ಹೆಂಗಸರು ಕ್ಷೀಣ ದನಿಯಲ್ಲಿ ”ಯಾರೂ…?” ಎಂದು ಕೇಳಿದರು. ಒಂದೆರಡು ಕ್ಷಣಗಳ ನಂತರ ಯಾರೋ ಬಾಗಿಲಿನತ್ತ ಬರುತ್ತಿರುವ ಸದ್ದು, ಒಳಗಿನಿಂದ ಬಾಗಿಲಿನ ಚಿಲಕ ತೆಗೆದ ಸದ್ದು ಕೇಳಿತು. ನಾನು ಸ್ವಲ್ಪ ಹಿಂದೆ ಸರಿದು, ಕೈಕಟ್ಟಿ ನಿಂತಿರುವಂತೆಯೇ ಎರಡು ಫಡಕಿನ ಬಾಗಿಲು ತೆರೆದುಕೊಂಡಿತು. ಅರೆ, ಬಾಗಿಲಿನಾಚೆ ಕಂಡವರು ನನ್ನನ್ನು ತಬೀಬ್ ಲ್ಯಾಂಡಿನವರೆಗೆ ಕರೆತಂದ ಅದೇ ಗೃಹಸ್ಥರು! ಕಣ್ಣಲ್ಲಿ ತುಂಟತನ ಉಕ್ಕಿಸುತ್ತ, ”ಬಾರೋ ಹುಡಗಾ ಒಳಗ ಬಾ… ನೀ ಏನೂ ಹೊರಗಿನಾವಲ್ಲ ಬಾ…” ಎಂದು ಚಿರಪರಿಚಿತ ಎಂಬಂತೆ, ಹೆಗಲ ಮೇಲೆ ಕೈ ಹಾಕಿ ಕರೆದೊಯ್ದು, ಕುರ್ಚಿಯಲ್ಲಿ ಕುಳ್ಳಿರಿಸಿದರು. ನಾನು ಅಕ್ಷರಶಹ ‘ಅಭ್ರಮ-ಸುಭ್ರಮ’ನಾಗಿದ್ದೆ. ಅದನ್ನು ಗಮನಿಸಿದ ಅವರು, ”ನೋಡೂ, ನಾನs ಪ್ರಹ್ಲಾದ ನರೇಗಲ್ಲ ಅಂತ ನಿನಗ ಅಲ್ಲೇ ಕೊಪ್ಪೀಕರ್ ರಸ್ತೇದಾಗs ಗೊತ್ತಾಗಿದ್ರ ಏನ್ ಮಾಡ್ತಿದ್ದೀ…? ನನ್ನ ಭೆಟ್ಟಿಗೆ ಬಂದ ಕಾರಣಾ ಹೇಳಿ, ಅಲ್ಲಿಂದಲ್ಲೇ ತಿರಗಿ ಹೋಗ್ತಿದ್ದಿ… ಹೌದಲ್ಲೋ…? ನೀ ನಮ್ಮನೀಗೆ ಬರಬೇಕು, ಒಂದು ವಾಟಗಾ ಚಾ ಕುಡೀಬೇಕು ಅನ್ನೋ ಕಾರಣಕ್ಕs ನಾ ಯಾರು ಅಂತ ನಿನಗ ಹೇಳ್ಲಿಲ್ಲಾ… ಲಕ್ಷ್ಮೇಶ್ವರ ನನಗ ಹೊಸಾದೇನಲ್ಲಾ… ಹಿಂದಕೆಲ್ಲಾ ನಾನು, ಗೋಕಾಕ, ಬೇಂದ್ರೆ ಮಾಸ್ತರು ಸಾಕಷ್ಟ್ ಸರೆ ಬಂದು ಹೋಗೀವಿ… ಅದಕ್ಕs ಅದು ನನ್ನೂರು… ನೀ ನಮ್ಮ ಹುಡಗ…” ಎಂದವರೆ, ನನ್ನೆದುರಿನ ಕುರ್ಚಿಯಲ್ಲಿ ಕೂತರು.

”ಮನ್ಯಾಗ ‘ಇಕೀ’ಗೆ ಆರಾಮ್ ಇರೂದಿಲ್ಲೇನಪಾ… ಹಿತ್ತಲ ಕಡೆ ಖೋಲಿ ಒಳಗ ಮಲಗಿರತಾಳ. ಅದಕ್ಕs ನಾವು ಹಿತ್ತಲ ಕಡಿಯಿಂದನ ಹೋಗಿ-ಬಂದು ಮಾಡ್ತೀವಿ…” ಎಂದು ಹೇಳಿದ ನರೇಗಲ್ಲರು ನಮ್ಮೂರಿಗೆ ಬರಲು ಖುಷಿಯಿಂದಲೇ ಒಪ್ಪಿಕೊಂಡರು.

”ನನ್ನ ಹತ್ರ ಮಹಲಿಂಗರಂಗರ ‘ಅನುಭವಾಮೃತ’ ಪುಸ್ತಕಾ ಇಲ್ಲೇನಪಾ… ಅದಕ್ಕs ನೀ ಒಂದು ಕೆಲಸಾ ಮಾಡು. ಅಲ್ಲೆ ‘ಸಾಹಿತ್ಯ ಭಂಡಾರ’ದಾಗ ಅದರ ಪ್ರತಿ ಸಿಗತಾವ. ಒಂದು ಪ್ರತಿ ನನಗ ತಂದು ಕೊಟ್ಟಬಿಡು. ಆರಾಮ್ ಎರಡ ದಿನಾ ನಿಮ್ಮೂರಿಗೆ ಬಂದು ಉಪನ್ಯಾಸಾ ಮಾಡ್ತೀನಿ…” ಅವರ ಆತ್ಮೀಯತೆ, ಸರಳ ನಡೆನುಡಿಗಳನ್ನು ಕಂಡ ನಾನು ಪುಂಗಿ ಎದುರಿನ ಹಾವಾಗಿದ್ದೆ… ಅವರು ಹೇಳಿದಂತೆ, ‘ಸಾಹಿತ್ಯ ಭಂಡಾರ’ದಿಂದ ‘ಅನುಭವಾಮೃತ’ದ ಒಂದು ಪ್ರತಿಯನ್ನು ಕೊಂಡು, ಸಂಜೆಯ ಹೊತ್ತಿಗೆ ಮತ್ತೆ ಅವರ ಮನೆಗೆ ಹೋದಾಗ, ನರೇಗಲ್ಲ ಮಾಸ್ತರರು ಅಕ್ಕಿ ಆರಿಸುತ್ತ ಕುಳಿತಿದ್ದರು. ”ಬಾ… ಸಂಜಿಗೆ ಬೇಕಲ್ಲಪಾ ಮಮ್ಮು… ಅದಕ್ಕs ಈ ಕಾಯಕ…” ಎನ್ನುತ್ತ ಮತ್ತೆ ನಗೆ ತುಳುಕಿಸಿದರು.

ನಮ್ಮೂರಿಗೆ ಅವರು ಬಂದು ಹೋದ ನಂತರದ ದಿನಗಳಲ್ಲಿ ನಾನು ನರೇಗಲ್ಲ ಮಾಸ್ತರರ ಪಾಲಿನ ‘ಮಾನಸಪುತ್ರ’ನಾಗಿಬಿಟ್ಟೆ. ಅವರು ನನಗೆ ಗುರುವಾಗಿ, ಮಾರ್ಗದರ್ಶಿಯಾಗಿ, ಹಿತೈಷಿಯಾಗಿ, ಬೆನ್ನ ಹಿಂದಿನ ಬಲವಾಗಿ ನಿಂತರು. ನನ್ನ ಭಾಷೆಯನ್ನು, ಬರವಣಿಗೆಯನ್ನು ತಿದ್ದಿ, ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ತಳೆಯಲು ಕಾರಣರಾದರು. ಆಕಾಶವಾಣಿ ನಾಟಕಗಳನ್ನು ಬರೆಯಲು, ರಂಗಭೂಮಿಯಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾದರು.

 

‍ಲೇಖಕರು G

March 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಗರದಾಚೆಯ ಸೂರು…

ಸಾಗರದಾಚೆಯ ಸೂರು…

ರಂಜನಾ ಹೆಚ್ ಬೆಚ್ಚಗಿನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ...

‘ಬಂಟಿ’ ನೆನಪು

‘ಬಂಟಿ’ ನೆನಪು

ಉಷಾ ನರಸಿಂಹನ್ ಎಲ್ಲೋ ಏನೋ ಕಳೆದು ಹೋದ ಹಾಗೆ… ಬದುಕಿನ ಮುಖ್ಯ ತಂತುವೊಂದು ಕಳಚಿಕೊಂಡ ಹಾಗೆ. ನ್ಯಾಯವೆ; ಎಲ್ಲಾ ಸಾವುಗಳು ಹತ್ತಿರದವರನ್ನು...

4 ಪ್ರತಿಕ್ರಿಯೆಗಳು

 1. sangamesh menasinakai

  tumba aaptavaada baraha… Gopal Vajapayee avaru Laxmeshwaradavaru annodu tilidu khushi aatu.

  ಪ್ರತಿಕ್ರಿಯೆ
 2. ಸುಧಾ ಚಿದಾನಂದಗೌಡ.

  ಮಾಹಿತಿಯನ್ನೂ, ಆಪ್ತಭಾವವನ್ನೂ ಒಟ್ಟೊಟ್ಟಿಗೆ ನೀಡಿದ ಲೇಖನ. ಧನ್ಯವಾದ ಸರ್.

  ಪ್ರತಿಕ್ರಿಯೆ
 3. Gowri Dattu

  ಸ್ವಾರಸ್ಯಕರ ಘಟನೆ. ಮೊನ್ನೆ ನಡೆದ ಕವಿಮನದಲ್ಲಿ ಇಷ್ಟೇ ಸ್ವಾರಸ್ಯವಾಗಿ ನಿರೂಪಿಸಿದಿರಿ. ಧನ್ಯವಾದಗಳು ಗೋಪಾಲ ವಾಜಪೇಯಿ ಯವರೆ.

  ಪ್ರತಿಕ್ರಿಯೆ
 4. Ganesh Shenoy

  Beautiful! Kept me engaged till the last word of the article and inspired me to know more about Shri Prahlada Naregalla through Wikipedia and other sources. Thank you Gopalanna!

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Ganesh ShenoyCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: