ಇವರು ಸುರಕೋಡ ಮಾಸ್ತರರು

ಮಹದೇವ ಹಡಪದ್

ನಮ್ಮೂರಿನಲ್ಲಿ ನನಗೆ ಸಿಕ್ಕ ಎರಡು ಆದರ್ಶಗಳು ಅಂದರೆ ಒಬ್ಬರು ವಿ.ಪಿ.ಕುಲಕರ್ಣಿ ಮತ್ತೊಬ್ಬರು ಹಸನ್ ನಯೀಂ ಸುರಕೋಡರು. ಒಂದು ಸಣ್ಣ ಗೂಡಂಗಡಿಯ ಯಜಮಾನ ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಹೆಸರಾಂತ ಅನುವಾದಕರು ಹೌದು ಎಂದು ಯಾರೋ ಹೇಳಿದರು. ವಿಚಿತ್ರವೆಂದರೆ ಆ ವ್ಯಕ್ತಿಯನ್ನು ಸೋಮುವಾರ ಹೊರತುಪಡಿಸಿ ವಾರದ ಆರು ದಿನವೂ ಗ್ರಂಥಾಲಯದಲ್ಲಿ ನೋಡುತ್ತಿದ್ದೆ ಆದರೆ ಅವರೆ ಸುರಕೋಡರು ಅನ್ನೋದು ಗೊತ್ತಾದದ್ದು ತುಂಬ ತಡವಾಗಿ. ಆ ಸರಳವಾದ ಮನಸ್ಸು ಅದೇನನ್ನೋ ಧೇನಿಸುತ್ತ, ಗ್ಯಾನದೊಳಗಿನ ಏಕಾಂತದ ಶೃತಿ ಹದ ಮಾಡುತ್ತಲೆ ಮಾಡಬೇಕಾದ ಅದೆಷ್ಟೋ ಅನುವಾದದ ಕೃತಿಗಳನ್ನು ಜಪಿಸುತ್ತಿರುತ್ತದೆ. ಅವರ ಸಜ್ಜನಿಕೆ-ಪರಿಚಿತರು ಎದುರಾದಾಗ ತಲೆಯೆತ್ತಿ ಕೊಂಚವೇ ತುಟಿ ಅಗಲಿಸಿ ನಗಾಡುವ ಅವರ ನಗು ಮತ್ತು ಮೆದು ಮಾತುಗಳು ಸೃಜನಶೀಲ ಮನಸ್ಸಿನ ಒಂದು ಭಾಗವಾಗಿ ಕಾಣತೊಡಗುತ್ತವೆ. ನಾನು ರಾಮದುರ್ಗಕ್ಕೆ ಹೋದಾಗೊಮ್ಮ ಅವರನ್ನು ಭೇಟಿಯಾಗಲೂ ಇಡಿಕಿರಿದಾದ ಆ ಸಂದುಗೊಂದುಗಳಲ್ಲಿಳಿದು ಮಡ್ಡಿ ಓಣಿಯ ಅವರ ಮನೆಗೆ ಹೋಗಿಬರುತ್ತೇನೆ. ಹೋದಾಗಲೆಲ್ಲ ಒಂದೀಟು ಬಿಡುವಿಲ್ಲದೆ ಹೈರಾಣದವರ ಹಾಗೆ ಕಾಣುವ ಅವರು ನನ್ನ ಕಂಡೊಡನೆ ನನ್ನದೇ ವಯಸ್ಸಿಗಿಳಿದು ಮಾತಾಡಲು ಹವಣಿಸುತ್ತಾರೆ…. ಅವರ ಮುಂಗಾರು ಪತ್ರಿಕೆಯಿಂದ ಹಿಡಿದು ಇಂದಿಗೆ ಓದುತ್ತಿರುವ ಇಲ್ಲವೇ ಅನುವಾದಿಸುತ್ತಿರುವ ಕತೆಗಳ ಬಗ್ಗೆ ಗಂಟೆಗಟ್ಟಲೆ ಮನಸು ಬಿಚ್ಚಿ ಮಾತಾಡುತ್ತಾರೆ. ಬಿ.ಸಿ.ದೇಸಾಯಿ, ಮಹದೇವಪ್ಪ ಪಟ್ಟಣ, ನಿಲಗಂಗಯ್ಯ ಪೂಜಾರ, ಗೋಪಾಲಗೌಡ್ರು, ಲೋಹಿಯಾ, ಮಧುಲಿಮಯೆ, ಕರ್ಪೂರಿ ಠಾಕೂರ, ಹೆಬ್ಬಳ್ಳಿ ರೈತ ಹೋರಾಟ, ರಾಮದುರ್ಗ ದುರಂತ, ರಾಮದುರ್ಗ ಆಸ್ಥಾನ ದೇಸಾಯಿಯ ಪಿಸ್ತೂಲು ಹೀಗೆ ನಾನು ಸಿಕ್ಕಾಗಲೆಲ್ಲ ಒಂದೊಂದು ಕತೆ ಹೇಳಿ, ಕೆಲ ಪತ್ರಿಕೆಗಳಿಗೆ ಚಂದಾದಾರನನ್ನಾಗಿ ಮಾಡಿ ನನ್ನ ಅಕ್ಷರ ಲೋಕವನ್ನು,ಓದನ್ನು ವಿಸ್ತರಿಸಿದ ಗುರುಗಳು ಹಸನ್ ನಯೀಂ ಸುರಕೋಡರು. ನಾನೊಮ್ಮೆ ನಮ್ಮ ಪುಟ್ಟ ನಾಟಕ ತಂಡವನ್ನು ಬೆನ್ನಿಗಂಟಿಸಿಕೊಂಡು ಯಾರ ನೆರವಿಲ್ಲದೆ ರಾಮದುರ್ಗದ ತಾಲ್ಲೂಕ ಆಫಿಸಿನ ಸಭಾಭವನದಲ್ಲಿ ನಾಟಕ ಪ್ರದರ್ಶನಕ್ಕಾಗಿ ಹೋಗಿದ್ದೆ. ನಾವು ಆಡುವ ನಾಟಕ “ಅಕ್ರಮ ಸಂತಾನ”. ನನ್ನೂರಿನಲ್ಲಿ ನಾನೇ ಅಪರಿಚಿತನಾಗಿ ಉಳಿದಿದ್ದ ಹೊತ್ತಲ್ಲಿ ಸುರಕೋಡ ಸಾರ್ ನೈತಿಕ ಬೆಂಬಲ ನೀಡಿದರು. (ಹಂಗ ನೋಡಿದರ ನನ್ನನ್ನ ನಾಟಕಕ್ಕ ಕಳಿಸಿದ್ದು ಅವರೆ) ಆ ಊರಿನಲ್ಲಿ ಒಂದಿಲ್ಲೊಂದು ಸಮಾಜವಾದಿ ಚಿಂತನೆಯ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳುತ್ತಲಿರುತ್ತಾರೆ. ಅಲ್ಲಿಯೇ ನಾನು ಸಿದ್ದನಗೌಡರನ್ನು, ತರೀಕೆರೆಯವರನ್ನು, ಭಟ್ಟರನ್ನು ಭೆಟ್ಟಿ ಮಾಡಿದ್ದು. ಸಮಾಜವಾದದ ಪುಟ್ಟ ಓಯಾಸಿಸ್ ಥರ ಕೆಲಸ ಮಾಡುವ ಅವರ ಬಳಗ ಈಗಲೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿರುತ್ತದೆ. ಬದುಕು ಹಣ್ಣಾದಂತೆ ಪಾತ್ರಕ್ಕೆ ಜೀವ ಬರುತ್ತದಂತೆ ಹಾಗೆ ಸುಸ್ತಾಗದ ಸುರಕೋಡ ಸರ್ ಕೆಲವೊಮ್ಮೆ ರಾತ್ರಿಯಿಡೀ ಓದಿ-ಬರೆದು ಹಗಲು ಮಲಗುತ್ತಾರೆ. ಅವರ ಭಾವದೊಳಗೆ ಅದೆಷ್ಟೋ ಬರಹಗಾರರು ಅನುವಾದಗೊಳ್ಳಬೇಕಿದೆ, ಅದೆಷ್ಟೋ ಚಿಂತನೆಗಳಿಗೆ ಕನ್ನಡತನ ತುಂಬಬೇಕಿದೆ…. ಅವರು ಕಂಡ ದರ್ಶನದಲ್ಲಿ ಬದುಕಿ ಬಾಳಿದ ಕಥನವೂ ಅವರಿಂದ ಆತ್ಮಕತೆ ರೂಪದಲ್ಲಿ ಬರಬೇಕಿದೆ ಎಂದು ಬಯಸುತ್ತೇನೆ. ಅವರ ಮೌನದ ಧಾಟಿಯೊಳಗೆ ಸಾಹಿರ್ ಲುಧಿಯಾನ್ವಿ, ಫೈಜ್ ಅಹ್ಮದ್ ಫೈಜ್, ರಾಗಾವಾಗಿ ಒಲಿಯುತ್ತಿರುತ್ತಾರೆ. ಪ್ರೀತನ ಭಾವಲೋಕದೊಳಗೆ ತಲ್ಲೀನಗೊಂಡವರಂತೆ ಕಾಣುತ್ತಾರೆ. ನನ್ನೊಳಗೆ ಸಮಾಜವಾದದ ಕನಸು ಬಿತ್ತಿದ ಅವರ ಬದುಕು ಮತ್ತು ಬರಹ ಒಂದಕ್ಕೊಂದು ಹೆಣೆದುಕೊಂಡಿದ್ದಾವೆ. ಈ ದಿನ ಆಕಸ್ಮಾತ್ತಾಗಿ ಫೇಸಬುಕ್ಕಿನ ಮೂಲೆಯಲ್ಲಿ ಅವರ ಫೋಟೋ ಕಂಡಾಗ ಎಲ್ಲಿಲ್ಲದ ಖುಷಿಯಾಗಿ ಫೋನಾಯಿಸಿ ಮಾತಾಡಿದಾಗಲೂ ಅದೇ ಧಾಟಿಯ ಮಾತುಗಳು ಮತ್ತೆ ಬಂದವು. ‘ಚಿಂತನ’ಕ್ಕಾಗಿ ಫೈಜ ಅವರ ಕುರಿತಾದ ಪುಸ್ತಕ ಅನುವಾದಿಸುತ್ತಿದ್ದಾರೆ.]]>

‍ಲೇಖಕರು G

April 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Gopal Wajapeyi

    ಹೌದೌದು… ಮೂಲ ಕನ್ನಡದ್ದೇ ಎಂಬಷ್ಟು ಸಹಜವಾಗಿ, ಸಶಕ್ತವಾಗಿ ಇರುತ್ತವೆ ಸುರಕೋಡರ ಅನುವಾದಗಳು. ಅವುಗಳನ್ನು ನಾನು ಹಸ್ತಪ್ರತಿಯಲ್ಲೇ ಓದಿ ಅನುಭವಿಸಿದ್ದೇನೆ, ಆನಂದಿಸಿದ್ದೇನೆ…
    ಅವರ ವ್ಯಕ್ತಿತ್ವವನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದೀರಿ ಮಹಾದೇವರೆ… ನಿಮಗೆ ಥ್ಯಾಂಕ್ಸ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: