ಇವರ ಕೈಯಲ್ಲಿ ಅರಳಿದ ಹೂವೇ ಪಾರಿಜಾತ

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ʼಮಣ್ಣಪಳ್ಳದ ಮೂಕಿಚಿತ್ರʼದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಆವತ್ತು ಮಣಿಪಾಲದ ಪ್ಲಾನಿಟೋರಿಯಂ ನ ಪಕ್ಕದಿಂದ ಹಾದು ಹೋಗುವಾಗ ಈರವ್ವನ ಕಾರು ಬಾರು ನಡೆದೇ ಇತ್ತು. ಆ ಕಡೆಯ ದರಲೆಗಳನ್ನು ಎಳೆದು ತಂದು ಗುಪ್ಪೆ ಮಾಡಿ ಅದರ ಸಾಗಣೆಗೆ ಸುಲಭ ಮಾಡಿ ಕೊಡುವುದರಲ್ಲಿ ಒಮ್ಮೆ, ಒಂದಷ್ಟು ಹೂ ಗಿಡಗಳಿಗೆ ಪಾತಿ ಮಾಡುವದರಿಲ್ಲಿಯೋ, ಇಲ್ಲ ಮಾಡಿಟ್ಟ ಪಾತಿಗೆ ನೀರು ಹಾಕುವುದರಲ್ಲಿಯೋ ಇನ್ನೊಮ್ಮೆ ಮಗ್ನವಾಗಿದ್ದಳು. ಅದೇ ಹಾದಿಯಲ್ಲಿ ವರ್ಷಗಟ್ಟಲೆ ಓಡಾಡಿರುವ ನನಗೆ ಈರವ್ವ ಹೊಸಬಳೇನಲ್ಲ. ಇತ್ತೀಚಿನ ವರ್ಷಗಳಲ್ಲಿ ಸುಮಾರು ಬಾರಿ ಅವಳನ್ನು ಅಲ್ಲಿಯೇ ಕಂಡಿದ್ದೇನೆ, ಮಾತಾಡಿಸಿದ್ದೇನೆ.

ಆ ಹೂದೋಟದ ಸುತ್ತಲೇ ದಿನವೂ ಸುತ್ತು ಹೊಡೆದರೂ ಇಳಿವಯಸ್ಸಿನ ಅವಳಿಗೆ ಆ ಗಿಡಗಳ ಗಂಧ ಗಾಳಿಯೂ ಗೊತ್ತಿಲ್ಲ. ದಿನಗೂಲಿಗೆ ಆ ಗಿಡಗಳ ಮದ್ಯ ಉಳಿದು, ತನಗೆ ಒಪ್ಪಿಸಿದ ಕೆಲಸ ಮಾಡುವ ಅವಳು ತಮ್ಮ ಮನೆಯಂಗಳದಲ್ಲಿ ಹೂದೋಟ ಮಾಡಿ ನಲಿವ ಹೆಂಗಸರಿಗಿಂತ ಭಿನ್ನವೇ ಬಿಡಿ. 

ಮಣಿಪಾಲದ ನಡು ನಡುವೆ ಹೀಗೆಯೇ ನಿರ್ಮಿತ ಹಸಿರು ಪ್ರದೇಶಗಳಿವೆ. ಅದನ್ನು ಸುತ್ತುವರೆದು ಕಾಲೇಜುಗಳು, ಹಾಸ್ಟೆಲ್ಗಳು, ಆಸ್ಪತ್ರೆಯ ದಾರಿ, ರಾಷ್ಟ್ರೀಯ ಹೆದ್ದಾರಿ ಎಲ್ಲಾ ಇದ್ದರೂ, ಹಸಿರು ಹೊದ್ದುಕೊಂಡು ಒಂದಿಷ್ಟು ಜನರಿಗೆ ಕೂತು ಸುಧಾರಿಸಿಕೊಳ್ಳುವ, ಇಲ್ಲದೆ ಹೋದರೆ ಕಣ್ಣು ತಂಪಾಗಿಸಿಕೊಳ್ಳುವ ಜಾಗಗಳು ಇವೆಲ್ಲ. ಇಂತಹ ಜಾಗಗಳ ಸುತ್ತಮುತ್ತ ಬೆಳ್ಳಂಬೆಳಗ್ಗೆಯೇ, ಒಂದೆಡೆ ಗಿಡಗಳಿಗೆ ಪಾತಿ ಮಾಡುತ್ತಾ, ಇನ್ನೊಂದೆಡೆ ಹಸಿರು ಹಾಸನ್ನು ಚೊಕ್ಕ ಮಾಡುತ್ತಾ ಹತ್ತಾರು ಈರವ್ವರು ಎದುರಾಗುತ್ತಾರೆ.

ಊರಿನ ಬೇರೆ ಬೇರೆ ಭಾಗಗಳಲ್ಲಿ ಕೆಲಸಕ್ಕೆ, ದಿನಗೂಲಿಯ ಆಧಾರದ ಮೇಲೆ ನೇಮಿಸಲ್ಪಡುವ ಕಾರ್ಮಿಕರು ಇವರು ಅನ್ನೋದು ಅನಾಯಾಸವಾಗಿ ಗುರುತು ಹಿಡಿಯಬಹುದಾದ ವಿಚಾರ. ಆ ದಿನಕ್ಕೆ ಯಾವ ಕೆಲಸ ಸಿಕ್ಕರೂ ಹಿಂದೂ ಮುಂದು ಯೋಚಿಸದೆ ಒಪ್ಪಿಕೊಳ್ಳಬೇಕಾದ ಇವರಿಗೆ “ಹೂ ಅರಳಿಸಲು ತಮ್ಮದೇ ಅಂಗಳವೂ ಇಲ್ಲ, ಬದುಕುವುದರ ಮಧ್ಯೆ ಹಸಿರು ಮತ್ತು ಹೂವು ಮುದ ನೀಡುವ ವಿಷಯಗಳು ಅನ್ನುವುದನ್ನು ಯೋಚಿಸಿಯೂ ಇಲ್ಲ” ಎಂದು ಈರವ್ವ ನಗುವಾಗ ಕೇಳಿದ್ದಕ್ಕೆ ನನ್ನನ್ನೇ ಬೈದುಕೊಳ್ಳುವ ಪರಿಸ್ಥಿತಿ. ಅವಳಿಗೆ ಕೆಲಸಗಳು ಬರಿಯ ಕೆಲಸಗಳಷ್ಟೇ.

ಆ ಜಾಗವನ್ನು ಹಸಿರಾಗಿರುವಂತೆ ನೋಡಿ ಕೊಳ್ಳೋಕೆ ಅಪ್ಪಣೆ ಆಗಿದೆ ಅನ್ನೋದಷ್ಟೇ ಅವಳ ಕಾಳಜಿ. ಒಂದು ಮರದ ದರಲೆ ಕಂಡರು, ಮತ್ತೊಂದು ಗಿಡ ಬಾಡಿದರೂ ಮೇಲಿನವರು ಮತ್ತೊಮ್ಮೆ ಕೆಲಸಕ್ಕೆ ಕರೆಯದೆ ಹೋದರೆ? ಅನ್ನೋದು ಬಿಟ್ಟು ಬೇರೇನೂ ಅವಳ ತಲೆಯಲ್ಲಿ ಓಡುವುದಿಲ್ಲ. ಮನೆ ಮಠ ಮಕ್ಕಳೆಲ್ಲವನ್ನು ಬಿಟ್ಟು ಮಣಿಪಾಲಕ್ಕೆ ಬಂದವಳಿಗೆ, ದಿನದ ಖರ್ಚು ಹುಟ್ಟಿದರೆ ಆಯಿತು.

ಈರವ್ವನ ವಿಚಾರ ನನ್ನೊಳಗೇ ಇದ್ದ ಇನ್ನೊಂದು ದಿನ ಸಾಯಂಕಾಲ, ಹೊರಟ ದಾರಿ ಎಲ್ಲಿ ಮುಟ್ಟುತ್ತದೋ ಎಂದು ಗೊತ್ತಿಲ್ಲದೆಯೇ, ಸಿಕ್ಕ ಸಿಕ್ಕ ದಾರಿಗಳನೆಲ್ಲ ಹೊಗ್ಗು ಪಕ್ಕದೂರಿನ ಬಾಗಿಲು ಮುಟ್ಟಿದ್ದೆ. ಹಾಗೆ ಉದ್ಯಾವರದ ಬಾಗಿಲಲ್ಲಿ ನಿಂತವಳಿಗೆ ಸಣ್ಣ ಮಡಿಲು ಜೋಪಡಿಯ ಕೆಳಗೆ ಅರಳಿ ನಿಂತಿದ್ದ ಹೂ ಗಿಡಗಳತ್ತ ಕಣ್ಣು ಹೋಗಿ, ಮನೆಗೆ ಒಂದೆರೆಡು ಗಿಡಗಳನ್ನ ಕುಂಡ ಸಮೇತ ಕೊಂಡರಾಯಿತು ಎಂದು, ಆಚೀಚೆ ನೋಡುವಾಗಲೇ, ಮಾರು ದೂರವಿದ್ದ ಮನೆಯಿಂದ ಹಣ್ಣು ಹಣ್ಣಾದ ಮುದುಕಪ್ಪ ಹೊರಗೆ ಬಂದ. ಇಷ್ಟು ಸಮೃದ್ಧವಾಗಿ ಬೆಳೆದ ಗಿಡಗಳ ಹಿಂದೆ ಯಾವುದೋ ಎಳೆ ಕೈ ಕೆಲಸ ಮಾಡಿರುತ್ತದೆ ಎಂದುಕೊಂಡರೆ, ನೆರಿಗೆ ಕಟ್ಟಿದ ಕೈಗಳೆರಡನ್ನು ಬೀಸುತ್ತಾ ಇವ ಬಂದಿದ್ದು ನೋಡಿ ಆಶ್ಚರ್ಯವಾಯಿತು. 

ನನ್ನ ಕಂಡು ಅವನ ಕಣ್ಣರಳಿದ್ದು ನೋಡಿ ಅವನೂ ಗ್ರಾಹಕರಿಗಾಗಿಯೇ ಕಾಯುತ್ತಿದ್ದ ಅನ್ನೋದು ಖಾತ್ರಿಯಾಯಿತು. “ಮೂಡು ಸಂಜೆ ಹೊತ್ತಲ್ಲಿ ಬಂದಿದ್ದೀರಲ್ಲಮ್ಮ! ವ್ಯಾಪಾರ ಮಾಡದೇ ಹೋಗೋ ಹಂಗೆ ಇಲ್ಲ” ಅಂತಾನೆ ಮಾತು ಶುರು ಮಾಡಿ ತನ್ನಲ್ಲಿದ್ದ ಗುಲಾಬಿಯ ಬಗೆಗಳಿಂದ ಹಿಡಿದು ನೀರು ಕಡಿಮೆ ಕುಡಿಯುವ ಕಳ್ಳಿ ಗಿಡಗಳ ವರೆಗೆ ತೋರಿಸಿದ. ಮಧ್ಯದಲ್ಲಿ ಒಳಗಿದ್ದ ಹೆಂಡತಿಯನ್ನು ಕರೆದು ಆ “ಒಂದೇ ಹೂ ಬಿಡುತ್ತೆ ಅಂತಾ ಅವ ಕೊಟ್ಟು ಹೋದ ಅಲ! ಆ ಗಿಡ ಯಾವುದು ಮಾರಾಯ್ತಿ?” ಎಂದು ಕೇಳಿದ.  ಆ ಕಡೆಯಿಂದ ಯಾವ ಉತ್ತರವೂ ಬರದಿದ್ದ ಮೇಲೆ ತಾನೇ ಗಿಡಗಳ ಸುತ್ತ ಕಣ್ಣಾಡಿಸ ತೊಡಗಿದ.

ಇತ್ತೀಚಿನ ವರ್ಷಗಳಲ್ಲಿ ಮುದುಕಪ್ಪ ಮತ್ತು ಹೆಂಡತಿ ಜೀವನೋಪಾಯಕ್ಕೆ ಮನೆಯ ಪಕ್ಕದಲ್ಲೇ ಒಂದಿಷ್ಟು ಹೂ ಗಿಡಗಳ ವ್ಯಾಪಾರಕ್ಕೆ ಶುರುವಿಟ್ಟಿದ್ದಾರೆ ಅನ್ನೋದು ಅವನ ಮಾತಲ್ಲಿ ಗೊತ್ತಾಯಿತು. ರಸ್ತೆಗೆ ತಾಗಿಯೇ ಇದ್ದ ಒಂದು ಶೆಡ್ಡಿನಂತ ಜಾಗದ ಎದುರು ಲೆಕ್ಕ ಮಾಡಿದರೆ ಐವತ್ತು ಗಿಡಕ್ಕಿಂತ ಜಾಸ್ತಿ ದಾಟದ ಅವನ ನರ್ಸರಿ ಸರ್ಕಾರದ ಒಂದಿಷ್ಟು ನೆರವಿನಿಂದ ಮತ್ತು ಅವನ ಒಂದಿಷ್ಟು ಕೈಕಾಸಿನಿಂದ ಎದ್ದು ನಿಂತದ್ದು.

ಅದರಲ್ಲಿ ಇದ್ದ ಗಿಡಗಳ ಹೆಸರು, ತಳಿ, ಪೋಷಣೆಯ ವಿಧಾನ ಯಾವುದೂ ಅವನಿಗೂ ನಗಣ್ಯ ಅನಿಸಿತು. ಯಾರಾದರೂ ಕೂಗಿದರೆ ಬಂದು ಗಿಡಗಳ ದರ ಹೇಳಿ ಮಾರಾಟ ಮಾಡುವುದಷ್ಟೇ ಅವನ ವಯಸ್ಸಿಗೆ ಸಾಧ್ಯವೆನಿಸುತ್ತಿದ್ದದ್ದು. ಅವನು ಉಟ್ಟಿದ್ದ ಮಾಸಲು ಲುಂಗಿ ಮತ್ತು ಹಳೇ ಮನೆ ಅವನು ಹೇಳದೆ ಇದ್ದದ್ದನ್ನು ಸ್ಪಷ್ಟೀಕರಿಸುತ್ತಿತ್ತು.

ಜನ ಓಡಾಡುವ ದಾರಿ ಆದದ್ದಕ್ಕೆ ಒಂದಿಷ್ಟು ವ್ಯಾಪಾರ ಆಗುತ್ತದಂತೆ. ಅವನಿಗಿಂತ ಮಾರೇ  ದೂರದಲ್ಲಿ  ದೊಡ್ಡ ಗಾತ್ರದ ನರ್ಸರಿ ಇರುವಾಗ ಮುದುಕಪ್ಪನ ಬಡ ಗಿಡಗಳು ಕಣ್ಣಿಗೆ ಬೀಳುವುದೇ ಇಲ್ಲ. ಇನ್ನೆಲ್ಲೋ ಕಣ್ಣಿಗೆ ಬಿದ್ದು, ಇವನ ವಯಸ್ಸಿನ ಕನಿಕರಕ್ಕೆ ಗಿಡಗಳನ್ನು ಕೊಳ್ಳಲು ಮುಂದಾಗುವವರೇ ಜಾಸ್ತಿ. ನಾನೂ ಹಾಗೆಯೇ ಒಂದೆರಡು ಎಳೆ ಗಿಡಗಳನ್ನು ಕೊಂಡ ಮೇಲೆ  “ಸರಕಾರ ಎರೆಹುಳು ಗೊಬ್ಬರ ಅಂತ ಕೊಡುತ್ತೆ ಅದೊಂದಿಷ್ಟು ತಗೊಂಡು ಬಿಡಿ ಇನ್ನೂರು ರೂಪಾಯಿ ಭರ್ತಿ ಆಗುತ್ತೆ” ಅಂದ. ನಾನೂ ತಲೆ ಅಲ್ಲಾಡಿಸಿದೆ.

ಅವನು ಎರೆಹುಳು ಗೊಬ್ಬರ ಇಟ್ಟಿದ್ದ ಹಳೆ ಶೆಡ್ ಅವನ ಮೊದಲ ಟೆಲಿಫೋನ್ ಭೂತ್ ಆಗಿತ್ತು ಅನ್ನೋದು ಅದರ ಬಾಗಿಲಿನ ಮೇಲಿನ STD ಅನ್ನೋ ಬರಹ ನೋಡಿ ಗುರುತು ಸಿಗುತ್ತಿತ್ತು. ಅದೇ ಜಾಗದಲ್ಲಿ ಜೀವನೋಪಾಯಕ್ಕಾಗಿ ಬೇರೆ ಬೇರೆ ದಾರಿ ಹಿಡಿದಿದ್ದ ಕುರುಹುಗಳೆಲ್ಲವೂ ಅಲ್ಲಿತ್ತು. ಅಲ್ಲಿಂದ ಹೊರಟು ವಾಪಸ್ಸು ಮಣಿಪಾಲ ಸೇರುವಾಗ ಗಿಡಗಳ ಜೊತೆಗೆ ಅವನ ಬದುಕಿನ ಕುರಿತ ಹಲವು ಪ್ರಶ್ನೆಗಳನ್ನು ತಂದಿದ್ದೆ.

ಈರವ್ವ ಮತ್ತು ಮುದುಕಪ್ಪ ನೆರೆ ಹೊರೆಯ ಊರಲ್ಲಿ ಹಸಿರನ್ನು ನಂಬಿಕೊಂಡು ಬದುಕುತ್ತಿರುವವರು. ಅವರಿಗೆ ಹಸಿರಿನ ಒಡನಾಟ ಬದುಕುವ ದಾರಿಯೇ ಹೊರತೂ ಅದಕ್ಕಿಂತ ಹೆಚ್ಚಿನದೇನಲ್ಲ. ಈಗಲೂ “ಅವ್ವ ಚಾ ಕುಡಿಯೋಕೆ?…” ಅಂತಾ ಆ ಹಣ್ಣು ಹಣ್ಣು ಈರವ್ವ ಆಸೆ ಕಣ್ಣುಗಳಿಂದ ನೋಡಿದಾಗ, “ಇದರ ಜೊತೆಗೆ ಹತ್ತು ರೂಪಾಯಿ ಎರೆಹುಳು ಗೊಬ್ಬರ ಕಟ್ಟಿಕೊಡಲಾ?” ಅಂತಾ ಮುದುಕಪ್ಪ ನನ್ನ ಹಿಂದೆಯೇ ಬಂದಾಗ ಅವರ ಕಣ್ಣಲ್ಲಿ ದುಡಿಮೆಗಿಂತ ಜಾಸ್ತಿ ಏನೂ ತೋರುವುದೇ ಇಲ್ಲ. ಮೂರು ನಾಲ್ಕು ವಾರದಲ್ಲಿ ಮುದುಕಪ್ಪ ಕೊಟ್ಟ ಗಿಡದಿಂದ ಹೂ ಬಂತು. ಈರವ್ವ ಪಾತಿ ತೆಗೆಯುವುದನ್ನೇ ಅನುಸರಿಸಿ ಕುಂಡದಿಂದ ತೆಗೆದು ನೆಲಕ್ಕೆ ನೆಟ್ಟೆ.

February 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This