ಇಷ್ಟಕ್ಕೂ ಪ್ರೀತಿ ಸೋತು ಹೋಗುವುದು ಯಾವಾಗ?

ಹೇಗೆ ಮರೆಯೋದು ಹೇಳು ಬದುಕಿಗೆ ಕೊಳ್ಳಿ ಇಟ್ಟವನನ್ನ

ಇಷ್ಟಕ್ಕೂ ಪ್ರೀತಿ ಸೋತು ಹೋಗುವುದು ಯಾವಾಗ?
ಯಾವ ಪ್ರಿತಿಯನ್ನ.. ಯಾರ ಪ್ರೀತಿಯನ್ನ ಎದೆಗಪ್ಪಿಕೊಂಡು… ಕೈ ಕೈ ಹಿಡಿದುಕೊಂಡು ತಿರುಗಾಡುತ್ತೇವೆಯೋ ಅದೇ ಪ್ರೀತಿ ಒಂದೊಂದ್ಸಲ ಥತ್ ತೇರಿಕೆ ಅನ್ನಿಸಿಬಿಡುತ್ತದೆ. ಇಷ್ಟೇನಾ ಈ ಪ್ರೀತಿಯ ಅರ್ಥ ಅನಿಸಿಬಿಡುತ್ತದೆ. ಹಾಗಂತ ಪ್ರೀತಿ ಸೋತಿತು ಅಂತಲ್ಲ. ಕೆಲವು ಸಲ ನಾವೇ ಪ್ರಿತಿಗೆ ಅರ್ಹರಾಗಿರೋಲ್ಲ ಅಷ್ಟೆ.
ಹೇಳಬೇಕೆಂದೆರೆ, ನಾನು ನೀನು ಜನ್ಮ ಇರೋ ತನಕ ಪ್ರೀತಿಸೋಣ ಅನ್ನೋದು ಆ ಕ್ಷಣದ ಭಾವುಕತೆಯಾಗಿರುತ್ತದೆ.ಇಂಥ ಮಾತುಗಳು ಕೆಲವೊಮ್ಮೆ ಇಷ್ಟಪಟ್ಟವರನ್ನ ಒಲಿಸಿಕೊಳ್ಳಲು ಒಂದು ಅಸ್ತ್ರವಾಗಬಹುದು. ಇದು ಪ್ರೀತಿಯಲ್ಲ… ಯಾವಾಗ ಪ್ರ್ರೀತಿ ನಾಟಕವಾಗುತ್ತದೋ… ಒಂದು ಅಸ್ತ್ರವಾಗುತ್ತದೋ ಅಲ್ಲಿ ಪ್ರೀತಿಗೆ ಬೆಲೆ ಇರೋದಿಲ್ಲ. ಆಡಿದ ನಾಟಕಕ್ಕೆ ಅರ್ಥ ಇರೋದಿಲ್ಲ. ಇತ್ತೀಚೆಗೆ ನನಗೊಂದು ಹುಡುಗಿ ಪೋನ್ ಮಾಡಿದ್ದಳು. ಹೆಸರು ಲಕ್ಷ್ಮೀ. ಆಕೆ ಹುಡುಗನೊಬ್ಬನನ್ನು ಇಷ್ಟ ಪಟ್ಟು ಪ್ರೀತಿಸುತ್ತಿದ್ದಳಂತೆ. ಪ್ರೀತಿ ಒಂದು ಹಂತಕ್ಕೆ ಬಂದಾಗ ಮನೆಯವರನ್ನೆಲ್ಲ ದಿಕ್ಕರಿಸಿ ಮದುವೆ ಆಗಿದ್ದರು. ಇಷ್ಟು ಸಾಕು ನಮ್ಮ ಪ್ರೀತಿ ಗೆದ್ದಿತು ಅಂತ ಬೆಂಗಳೂರಿಗೆ ಬಂದು ಸಂಸಾರ ಹೂಡುವಷ್ಟರಲಿ ಪ್ರೀತಿಗೆ ಹುಳು ಬಿದ್ದಿತ್ತು. ಬದುಕಿನ ರಿಯಾಲಿಟಿ ಎದ್ದು ಕುಳಿತಿತ್ತು. ಪರಸ್ಫರ ಈಗೊ ಇಬ್ಬರ ಕಣ್ಣಲ್ಲಿ ಕುಣಿಯುತ್ತಿತ್ತು. ನಾವಿಬ್ರೂ ತುಂಬಾನೆ ಪ್ರೀತಿಸುತ್ತಿದ್ವಿ. ಎರಡು ಕುಟುಂಬವನ್ನ ಎದುರುಹಾಕಿಕೊಂಡು ಹೊರಗೆ ಬಂದು ಮದುವೆ ಕೂಡ ಆದ್ವಿ. ಇನ್ನೂ ಒಂದು ವರ್ಷ ತುಂಬಿಲ್ಲ. ಆಗಲೇ ಈಗ ಅದರ ಕಷ್ಟ ಗೊತ್ತಾಗ್ತಿದೆ. ನನ್ನ ಪತಿ ಅನಿಸಿಕೊಂಡ ಭೂಪ ಕೆಲಸ ಬಿಟ್ಟು ಮನೇಲಿ ಕುಳಿತಿದ್ದಾನೆ. ಅವನಿಗೆ ವಿಪರೀತ ಇನ್ಫೀರಿಯಾರಿಟಿ. ಡೌಟು. ಯಾರೊ ನಿನ್ನನ್ನ ಹಿಂಬಾಲಿಸ್ತಿದಾನೆ ಅಂತ ನನ್ನ ಕೈಲಿದ್ದ ಕೆಲಸವನ್ನೂ ಬಿಡಿಸಿಬಿಟ್ಟ.ಇಬ್ಬರೂ ಮನೆಯಲ್ಲಿ ಕುಳಿತಿದ್ದೇವೆ. ನನ್ನ ಮಾತನ್ನ ಅವನು ಕೇಳುತ್ತಿಲ್ಲ… ಅವನ ಮಾತನ್ನೂ ನಾನು ಕೇಳುತ್ತಿಲ್ಲ. ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ. ಬದುಕು ಇಲ್ಲಿಗೆ ಸಾಕು ಅನಿಸಿಬಿಟ್ಟಿದೆ. ಈ ಕೆಟ್ಟ ಪ್ರೀತೀನ ನಂಬಿಕೊಂಡು ನನ್ನೆಲ್ಲ ಸಂಬಂಧಗಳನ್ನ ಕಳೆದುಕೊಂಡು ಬಿಟ್ಟೆ ಅಂತ ಕಣ್ಣೀರಾದಳು ಲಕ್ಷ್ಮಿ. ಇಂಥ ಸೋತ ಪ್ರೀತಿಗಳೆಷ್ಟೋ…. ಒಡೆದು ಹೋದ ಮನಸುಗಳೆಷ್ಟೋ… ಹಾಗಂತ ಪ್ರೀತಿಸುವುದು ನಿಂತುಹೋಯ್ತಾ? ನೋ. ಆದ್ರೆ ಜನ ಯಾಕೋ ಪ್ರೀತಿಯನ್ನ ನಂಬಿಕೊಂಡಷ್ಟು ಸಂಖ್ಯೆಯಲ್ಲಿ ಬದುಕಿನ ಸತ್ಯವನ್ನ ನಂಬಿಕೊಳ್ಳುವುದಿಲ್ಲ. ಹಸಿವು ಪ್ರೀತಿಗಿಂತ ದೊಡ್ಡದಾಗಿ ಕಂಡಾಗ ಪ್ರೀತಿ ಸತ್ತು ಹೋಗುತ್ತದೆ. ಅವಮಾನಗಳು ಹೆಡೆ ಎತ್ತುತ್ತವೆ. ನಂಬಿಕೆ ಗೋತಾ ಹೊಡೆಯುತ್ತದೆ. ಅವನು ಕೆಲಸಕ್ಕೆ ಹೋಗುತ್ತಿಲ್ಲ… ಇವಳನ್ನೂ ಅನುಮಾನದಿಂದ ಬಿಡಿಸಿದ. ಹೊಟ್ಟೆಗೇನು ತಣ್ಣೀರು ಬಟ್ಟೆ ಹಾಕಿಕೊಂಡು ಇರಲಿಕ್ಕಾಗುತ್ತದಾ? ನಿಜ್ಜ ಹೇಳ್ತೀನಿ, ಹಸಿವಿನ ಗರ್ಭದಲ್ಲಿ ಪ್ರೀತಿ ಹುಟ್ಟಲಾರದು. ಆದ್ರೆ ಇಂತ ಮನೆಬಿಟ್ಟು ಓಡಿ ಬರುವ ಪ್ರೇಮಿಗಳಿಗೆ ಬದುಕಿನ ಕಟು ಸತ್ಯ ಗೊತ್ತಾಗುವುದು ಯಾವಾಗ?
ಇಲ್ಲಿ ಗಮನಿಸಬೇಕಾದ್ದು ಪ್ರೀತಿಸುತ್ತೇವೆ ಅಂತ ಹೊರಟವರ ಜಿದ್ದು. ಪ್ರೀತಿ ಸಿಕ್ತಲ್ಲ ಇನ್ನೆಲ್ಲ ಸಿಕ್ಕಿತು ಬಿಡು ಅಂತ ಅಂದುಕೊಂಡುಬಿಡುವ ಮೂರ್ಖತನ. ಯಾವ ಪ್ರೀತಿಯೂ ಹಸಿವಿಗೆ ಮದ್ದಲ್ಲ ಅನ್ನುವುದು ಗೊತ್ತಿದ್ದರೆ ಚೆನ್ನ. ಬದುಕಿನ ರಿಯಾಲಿಟಿ ಅರಿತುಕೊಳ್ಳದ ಹೊರತು ಎಷ್ಟೇ ಪ್ರೀತಿ ಇದ್ದರೂ ವೇಸ್ಟ್.
ನನ್ನ ಗೆಳೆಯನೊಬ್ಬನಿದ್ದ ಜಗ್ಗಿ ಅಂತ. ಊರಿನಲ್ಲಿ ಆತ ಲೇಡಿಸ್ ಟೈಲರ್. ಪಕ್ಕಾ ಹುಂಬ ಮನಸ್ಸಿನವ. ಪ್ರೀತಿ ಮಾಡೊದು ಅವನಿಗೊಂದು ಖಯಾಲಿ. ಬಟ್ಟೆ ಹೊಲಿಸಿಕೊಳ್ಳಲು ಬರುವ ಬಹುತೇಕ ಹುಡುಗೀರ ಜೊತೆ ಅವರಿಗೆ ಇಷ್ಟವಾಗುವ ಹಾಗೆ ಮಾತಾಡುತ್ತಿದ್ದ. ಜೋಕ್ ಮಾಡುತ್ತಿದ್ದ. ನಗಿಸುತ್ತಿದ್ದ. ಕೀಟಲೇ ಮಾಡುತ್ತಿದ್ದ. ಕೆಲವು ಚೆಲುವೆಯರಿಗೆ ಜಗ್ಗಿ ಪಕ್ಕನೆ ಇಷ್ಟ ಕೂಡ ಆಗಿಬಿಡುತ್ತಿದ್ದ. ನಾವೆಲ್ಲ ಅವನ ಹೀರೋಯಿಸಂ ನೋಡಿ ಬೆಕ್ಕಸ ಬೆರಗಾಗುತ್ತಿದ್ದೆವು. ಹುಡುಗೀರ ಮುಂದೆ ಅಷ್ಟೆಲ್ಲ ಶಾಣ್ಯಾತನ ತೋರಿಸಿ ಅವರನ್ನ ಬುಟ್ಟಿಗೆ ಹಾಕಿಕೊಳ್ಳುವ ಅವನ ಕಲೆ ನಮಗೆ ಮಿರಾಕಲ್ ಥರ ಕಾಣಿಸುತ್ತಿತ್ತು. ಅವನಿಗೋ ಊರ ತುಂಬಾ ಪ್ರೇಯಸಿಯರಿದ್ದರು.ವಾರದಲ್ಲಿ ಒಂದೆರಡು ದಿನ ಒಬ್ಬೊಬ್ಬರ ಜೊತೆ ಹೊರಗೆಲ್ಲೋ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ನಮಗೋ ಒಳಗೊಳಗೇ ಹೊಟ್ಟೆಕಿಚ್ಚು.
ಮೇಲಿಂದ ಮೇಲೆ ಅವನ ಹುಡಗೀರ ಆಪಾದನೆಗಳು ಕೇಳಿಬಂದವು. ಅದನ್ನೆಲ್ಲ ಹೇಗೋ ಮ್ಯಾನೇಜ್ ಮಾಡಿಕೊಳ್ಳುತ್ತಿದ್ದ ಜಗ್ಗಿ, ಒಂದ್ಸಲ ವಿಪರೀತ ಯಡವಟ್ಟು ಮಾಡಿಕೊಂಡುಬಿಟ್ಟಿದ್ದ. ಹುಡುಗಿಯೊಬ್ಬಳನ್ನು ಪ್ರೀತಿಸುವ ಅವನ ಇನ್ನೊಂದು ನಾಟಕ ಆರಂಭವಾಗಿತ್ತು. ಆ ಪ್ರೀತಿ ಕೂಡ ಹುಟ್ಟಿಕೊಂಡಿದ್ದೇ ವಿಚಿತ್ರ. ಜಗ್ಗಿಯ ಅಣ್ಣನಿಗೆ ಹೆಣ್ಣು ನೋಡಲು ಹೋದಾಗ ಆ ಮದುವೆ ಕುದುರಿರಲಿಲ್ಲ. ಆದ್ರೆ ಜಗ್ಗಿ ಹುಡುಗಿಯ ತಂಗಿಯನ್ನ ಒಲಿಸಿಕೊಂಡುಬಿಟ್ಟಿದ್ದ. ನೋಡ ನೋಡುತ್ತಿದ್ದಂತೆ ಅವನ ಓಡಾಟ ಜೋರಾಗತೊಡಗಿತು. ಟೈಲರ್ ಅಂಗಡಿ ಬಾಗಿಲು ತೆಗೆಯುವುದೇ ಅಪರೂಪವಾಗಿತ್ತು. ಬಟ್ಟೆ ಹೊಲಿಯಲು ಕೊಟ್ಟಿದ್ದ ಮಹಿಳೆಯರು ಬೈದುಕೊಂಡು ತಿರುಗಾಡತೊಡಗಿದರು. ನಾವು ಕೂಡ ಆ ಅಡ್ಡ ಬದಲಾಯಿಸಿದೆವು. ಹೀಗಿರುವಾಗಲೇ ಜಗ್ಗಿ ಒಂದಿನ ಎಲ್ಲಿಂದಲೋ ಫೋನ್ ಮಾಡಿದ್ದ. ನನಗೊಂದು ಹೆಲ್ಪ್ ಆಗಬೇಕು ರವೀ ಅಂತ. ಏನು ಅಂದಿದ್ದೆ. ನಾನು ಒಂದು ಹುಡುಗಿಯನ್ನ ಕರೆದುಕೊಂಡು ಬಂದುಬಿಟ್ಟಿದ್ದೇನೆ. ಏನು ಮಾಡುವುದೋ ಗೊತ್ತಾಗುತ್ತಿಲ್ಲ ಅಂದ.
ಯಾರು ಆ ಹುಡುಗಿ? ಅಂದೆ. ಅದೇ ನಾನು ಇತ್ತೀಚೆಗೆ ಪ್ರೀತಿಸುತ್ತಿದ್ದೆನಲ್ಲ ಅದೇ ಹುಡುಗಿ ಅಂದ. ಇನ್ನಾರಾದ್ರೂ ಹೊಸಬರು ಸಿಕ್ಕಿರಬೇಕು ಅಂದುಕೊಂಡ ನಾನು ಯಾರು ಗೊತ್ತಾಗ್ತಿಲ್ಲ ಕಣೋ ಅಂದೆ. ಪ್ರಣತಿ ಕಣೋ ಅಂದ. ನನಗೆ ನಿಜಕ್ಕೂ ಶಾಕ್ ಆಗಿದ್ದು ಆಗಲೇ… ಯಾಕೆಂದ್ರೆ ಆ ಹುಡುಗಿ ಸೌಮ್ಯ ಸ್ವಭಾವದವಳು. ಮರ್ಯಾದಸ್ತ ಮನೆತನದವಳು. ಅಂಥವಳು ಇವನ ಬಲೆಗೆ ಬಿದ್ದುಬಿಟ್ಟಳು ಅಂದ್ರೆ ಇವನು ಎಂಥ ಗಾಳ ಹಾಕಿರಬೇಡ…?
ಬೆಂಗಳೂರಿಗೆ ಬಂದು ಮೂರು ದಿನ ಆಯ್ತು. ಯಾರದ್ದೋ ಸಂಬಂಧಿಕರ ಮನೆಯಲ್ಲಿದ್ದೇವೆ. ಯಾಕೋ ಭಯ ಆಗ್ತ್ತಿದೆ. ಏನ್ಮಾಡ್ಲೀ ಅಂತ ಕಣ್ಣೀರಾಕಿದ್ದ. ಇಂಥವನಿಗೆ ಏನೂ ಮಾಡಬಾರದು ಅಂತ ನನಗಾಗಲೇ ಗೊತ್ತಾಗಿಹೋಗಿತ್ತು ಹಾಗಾಗಿ ಆಯ್ತು ನೋಡೋಣ ಅಂತ ಸುಮ್ಮನಾದೆ. ವಾರ ಕಳೆಯುವಷ್ಟರಲ್ಲಿ ಆತ ನಮ್ಮ ಊರಿಗೆ ಅವಳ ಜೊತೆ ಬಂದಿದ್ದ. ಮಗಳು ಪ್ರಣತಿ ನಾಪತ್ತೆ ಆಗಿದ್ದು ಈ ಟೈಲರ್ ಜೊತೆಗೇ ಅಂತ ಗೊತ್ತಾದ ಆಕೆಯ ಮನೆಯವರು ವ್ಯಗ್ರರಾಗಿದ್ದರು. ಸಿಗಲಿ ಕತ್ತರಿಸಿ ಹಾಕುತ್ತೇವೆ ಅಂತ ಅಬ್ಬರಿಸುತ್ತಿದ್ದರು. ಕತ್ತರಿಸಿ ಹಾಕಿದ್ರೆ ಗತಿ ಏನು ಅನ್ನೋದು ನಮ್ಮೆಲ್ಲರ ಆತಂಕವೂ ಆಗಿತ್ತು.
ಪ್ರಣತಿ ಒಂದು ರಾತ್ರಿ ಮನೆ ತಲುಪಿದ್ದಳು. ಆದ್ರೆ ಅವಳನ್ನು ಬಿಟ್ಟ ಜಗ್ಗಿ ಅಬ್ಸ್ಕ್ಯಾಂಡ್. ಎಲ್ಲಿ ಹೋದ? ಆಕೆಯ ಮನೆಯವರು ಹುಡುಕತೊಡಗಿದರು. ನಾವು ಪ್ರಣತಿಯನ್ನ ಭೇಟಿ ಆಗಿ ಏನೆಲ್ಲ ನಡೀತು ಅಂತ ತಿಳಿದುಕೊಂಡೆವು. ನಿನ್ನನ್ನ ಮದುವೆ ಆಗುತ್ತೇನೆ ಅಂತ ನಂಬಿಸಿ ಜಗ್ಗಿ ಪ್ರಣತಿಯನ್ನ ಕರೆದುಕೊಂಡು ಹೋಗಿದ್ದನಂತೆ. ಹುಡುಗಿಗೆ ಸತ್ಯ ಅರ್ಥವಾಗಿತ್ತು. ನನಗೆ ಜಗ್ಗಿಯ ಜೊತೆ ಇಷ್ಟವಿಲ್ಲ ಅಂತ ಗೋಳಾಡುತ್ತಿದ್ದಳು. ಅವಳಿಗೆ ಅವನ ಇನ್ನೊಂದು ಮುಖ ಆಗಲೇ ತಿಳಿದುಹೋಗಿತ್ತು. ಆದ್ರೆ ಏನೂ ಮಾಡುವ ಹಾಗಿರಲಿಲ್ಲ. ಊರ ತುಂಬಾ ಇವರಿಬ್ಬರ ವಿಷಯವೇ ಗುಲ್ಲು ಗುಲ್ಲು. ಪ್ರಣತಿಯಂತೂ ವಾರದಲ್ಲೇ ಸೊರಗಿಹೋಗಿದ್ದಳು. ಎರಡು ರಾತ್ರಿ ಏನೂ ತಿಂದಿರಲಿಲ್ಲವಂತೆ. ನನಗೆ ಈ ಪ್ರೀತೀನು ಬೇಡ ಏನೂ ಬೇಡ. ಊರಿಗೆ ಕರೆದುಕೊಂಡು ಹೋಗಿ ಬಿಟ್ಟುಬಿಡು ಅಂತ ಹಟ ಹಿಡಿದಿದ್ದಳಂತೆ. ಆದ್ರೆ ಜಗ್ಗಿ ಅಷ್ಟು ಸುಲಭವಾಗಿ ಬಿಡುವವನಲ್ಲ.
ಒಂದಿನ ಜಗ್ಗಿ ಊರಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ. ಮೊದಲೇ ಹೇಳಿದಂಗೆ ಹುಂಬು ಧೈರ್ಯ ಅವನದ್ದು. ಪ್ರಣತಿಯ ಮನೆಯವರು ಜಗ್ಗಿಯನ್ನ ಹಿಡಿದು ಯಾವ ಪರಿ ತದುಕಿದ್ದರೆಂದ್ರೆ ಕೊಂದೇ ಹಾಕಿಬಿಡುತ್ತಾರೆನೋ ಅಂತ ನಾವೆಲ್ಲ ಗಾಬರಿ ಆಗಿದ್ದೆವು. ಇಬ್ಬರನ್ನೂ ಕೂರಿಸಿಕೊಂಡು ಮದುವೆ ಆಗ್ತಿರಾ ಅಂತ ಕೇಳಿದ್ರೆ ಪ್ರಣತಿ ಬಿಲ್ಕುಲ್ ನಾನು ಮದುವೆ ಆಗೊಲ್ಲ ಅಂದುಬಿಟ್ಟಿದ್ದಳು. ಜಗ್ಗಿಗೂ ಅವಳು ಬೇಕಾಗಿರಲಿಲ್ಲ. ಇವಳಿಲ್ಲದಿದ್ರೆ ಇನೊಬ್ಬಳು ಅನ್ನುವ ಆಸಾಮಿ ಆತ. ಪ್ರಣತಿ ಹೋದರೇನು …? ಆ ಕೇಸ್ ಅಲ್ಲಿಗೆ ಹೇಗೋ ಸ್ತಭ್ದವಾಯಿತು.
ಇದಾದ ಮೇಲೆ ಒಂದೆರಡು ತಿಂಗಳು ಸರಿಯಾಗಿ ಬಾಗಿಲು ತೆಗೆದ ಜಗ್ಗಿ. ಆದ್ರೆ ನಾಯಿ ಬಾಲ ನೆಟ್ಟಗಾದೀತೆ. ಮತ್ತೆ ಅವನ ಬೇಟೆ ಶುರುವಾಗಿತ್ತು. ಪ್ರಣತಿಯನ್ನ ಅವಳ ಮನೆಯವರು ತರಾತುರಿಯಲ್ಲಿ ಮದುವೆ ಮಾಡಿ ಬೆಂಗಳೂರಿಗೆ ಹುಡುಗನ ಮನೆಗೆ ಕಳುಹಿಸಿಕೊಟ್ಟುಬಿಟ್ಟಿದ್ದರು. ಅವಳು ಒಮ್ಮೆ ಊರಿಗೆ ಬಂದಾಗ ನನಗೆ ಸಿಕ್ಕಿದ್ದಳು. ಎಲ್ಲೋ ಜಗ್ಗಿ ಅಂದಿದ್ದಳು. ನೀನು ಅವನನ್ನ ಇನ್ನೂ ಮರೆತಿಲ್ವಾ… ಅಂದೆ. ಬದುಕಿಗೆ ಕೊಳ್ಳಿ ಇಟ್ಟವನನ್ನ ಹೇಗೋ ಮರೆಯೋದು ಅಂದಿದ್ದಳು.
ಹೇಗಿದೆ ಹೊಸ ಜೀವನ ಅಂದೆ. ನಿನ್ನ ಗೆಳೆಯನ ಪ್ರೀತಿ ನಂಬಿಕೊಂಡಿದ್ರೆ ನಾನು ಹಸಿವಿನಿಂದ… ಕೀಳರಿಮೆಯಿಂದ.. ದುಃಖದಿಂದ ಸತ್ತು ಹೋಗ್ತಿದ್ದೆ ಕಣೋ. ದೇವರು ಡೊಡ್ಡವನು. ಆದ್ರೆ ಆ ನೋವಿನ್ನೂ ಎದೆಯಲ್ಲಿ ಜೀಕುತ್ತಿದೆ. ಅದನ್ನ ಸಮಾಧಿ ಮಾಡಲುಪ್ರಯತ್ನಿಸುತ್ತಿದ್ದೇನೆ ಅಂದಿದ್ದಳು. ಕಣ್ಣು ಒದ್ದೆ ಒದ್ದೆ.
***
ಯಾಕೋ ಲಕ್ಷ್ಮಿಯಂಥವರ ಫೋನ್ ಕರೆಗಳು ಬಂದಾಗಲೆಲ್ಲ ಪ್ರೀತಿಯ ಇನ್ನೊಂದು ಮುಖ ಕೈ ಹಿಡಿದು ಜಗ್ಗಿದಂತಾಗುತ್ತದೆ. ಟೇಕ್ ಕೇರ್

]]>

‍ಲೇಖಕರು avadhi

October 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

೧ ಪ್ರತಿಕ್ರಿಯೆ

  1. Harish Nalla

    otnalli istella odidmelu nange en comment madbeku antane gottagtilla.. Really am too confusion about this article and also love….
    Ene andru “PREETHINA PREETHIYINDA PREETHSI”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: