ಇ-ಟ್ರೈನ್ ವಿಶೇಷ

burger.jpg

“ವೆಂಕಿ ಬರ್ಗರ್”

 

ವೆಂಕಿ

ನ್ಯೂಯಾರ್ಕಿನ ಸಬ್ ವೇ ಇ-ಟ್ರೈನ್ ಕುರಿತು ಯುಟ್ಯೂಬ್.ಕಾಮ್(YouTube.com)ನಲ್ಲಿ ೩೦ ಸೆಕೆಂಡ್ ಗಳ ಒಂದು ವಿಡಿಯೋ ದೃಶ್ಯಗಳ ಕ್ಲಿಪ್ ಇದೆ (ಹವ್ಯಾಸಿ ಚಿತ್ರಗ್ರಾಹಕರ ಈ ಅನ್ ಲೈನ್ ಯುಟ್ಯೂಬ್.ಕಾಮ್ ಪ್ರಯತ್ನ ಈಗ ಒಂದು ಜಾಗತಿಕ ಗೀಳು ಆಗಿಬಿಟ್ಟಿದೆ). ಈ ವಿಡಿಯೋ ಚಲನಚಿತ್ರದಲ್ಲಿ ಸಬ್ ವೇ ಟ್ರೈನ್ ಜಮೈಕಾ-ವಾನ್ ವಿಕ್ ನಿಲ್ಲುವುದು ಬೋಗಿಯ ಬಾಗಿಲು ತೆರೆದಂತೆ ಒಳಗಿನ ಸುಂದರವಾದ ದೃಶ್ಯದ ಹಿಂದೆಯೇ ಅದರ ಬಾಗಿಲು ಮುಚ್ಚುತ್ತಿದ್ದಂತೆಯೇ ಚಿತ್ರ ಮುಗಿಯುತ್ತದೆ. ಯುಟ್ಯೂಬ್ ನಲ್ಲಿ ನ್ಯೂಯಾರ್ಕನ್ನು ಮತ್ತು ಇಲ್ಲಿನ ಸಬ್ ವೇ ಕುರಿತಂತೆ ನ್ಯೂಯಾರ್ಕಿನ ಜನರಿಗಿರುವ ಪ್ರೀತಿ ತೋರುವ ನೂರಾರು ದೃಶ್ಯಗಳಲ್ಲಿ ಒಂದು.

ನನ್ನೊಡನೆ ಸಬ್ ವೇನಲ್ಲಿ ಸಾಗುವ ಲಕ್ಷಾಂತರ ಪಯಣಿಗರಂತೆ ನನಗೂ ಕೂಡ ಈ ದೊಡ್ಡ ಗೀಳಿನ ನಡುವೊಂದು ಪುಟ್ಟ ಗೀಳು ಇದೆ. ನನಗೆ ಇ-ಟ್ರೈನೇ ಒಂದು ಗೀಳು. ಇದು ಸಾಗುವ ಹಾದಿಯಲ್ಲಿ ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ನ ನಿಲ್ದಾಣವೂ ಒಂದಾಗಿತ್ತು (ಸದ್ಯದಲ್ಲಿ, ಸೆಪ್ಟೆಂಬರ್ ೧೧ರ ವೈಮಾನಿಕ ದಾಳಿಯ ನಂತರ ಈ ನಿಲ್ದಾಣವನ್ನು ಹಲವಾರು ತಿಂಗಳುಗಳಿಂದ ಮುಚ್ಚಲಾಗಿದೆ).

ಈ ನನ್ನ ಪ್ರೀತಿ, ಗೀಳಿಗೊಂದು ಕಾರಣ ನನಗಿರುವ ಕುತೂಹಲಕಾರಿ ಸ್ವಭಾವ (ನೋಡಲು, ತಿಳಿಯಲು, ಹೊಸತೇನೆಂದು ಕಂಡುಕೊಳ್ಳಲು, ಅನುಭವಿಸಲು) ಮತ್ತೊಂದು ಕಾರಣ ಬೇರೇನೂ ವಿಧಿಯಿಲ್ಲದಿರುವುದು (ಈ ರೈಲಿಲ್ಲದಿದ್ದರೆ ನಾನು ಹೇಗೆ ಕೆಲಸದ ಸ್ಥಳಕ್ಕೆ ಹೋಗೋದು ಸ್ವಾಮಿ!). ನಾನಿರುವ ದೂರದ ಅರೆನಗರ ಪ್ರದೇಶ ಲಾಂಗ್ ಐಲ್ಯಾಂಡ್ ನಿಂದ ಜನನಿಬಿಡ ಮಾನ್ ಹಟ್ಟನ್-ನಿಖರವಾಗಿ ಹೇಳಬೇಕೆಂದರೆ ಲೆಕ್ಸಿಂಗ್ಟನ್ ಅವೆನ್ಯೂ, ೫೩ನೇ ರಸ್ತೆಯ ನಿಲ್ದಾಣಕ್ಕೆ ನನ್ನ ಪ್ರೀತಿಯ ಇ_ಟ್ರೈನ್ ಅಲ್ಲದೆ ಬೇರಾರು ಕರೆತರಬೇಕು ಹೇಳಿ? ನನ್ನೀ ಟ್ರೈನ್ ನಲ್ಲಿ ನಾನು ಪಯಣಿಸಲು ಆರಂಭಿಸಿ ಈಗಾಗಲೇ ವಾರಗಳು ಕಳೆದರೂ, ಒಳಗೆ ಹೊರಗೆ ಎಂದು ಅಲ್ಲಲ್ಲಿ ಸೂಚನೆಗಳಿದ್ದೂ ಯಾವ ನಿಲ್ದಾಣದಲ್ಲಿ ಯಾವ ಬಾಗಿಲಿನಿಂದ ಒಳ ಹೋಗಬೇಕು, ಎಲ್ಲಿಂದ ಹೊರ ಬರಬೇಕು ಎಂದು ಚಕ್ರವ್ಯೂಹ ಹೊಕ್ಕಂತೆ ತಬ್ಬಿಬ್ಬಾಗುತ್ತಾ ಅರ್ಥ ಮಾಡಿಕೊಳ್ಳುತ್ತಿದ್ದೇನೆ.

pradosh_blueabstract_big1.jpgನನ್ನ ಜೀವನಕ್ಕೆ ಸಂಬಂಧಿಸಿದಂತೆ ಇ_ಟ್ರೈನ್ ಗೆ ಇನ್ನೊಂದು ಪ್ರಮುಖವಾದ ಪಾತ್ರವಿದೆ. ಜಗತ್ತಿನ ಎಲ್ಲೆಡೆಗೂ ಹಾರಿ ಹೋಗಲು ಇರುವ ಬಾಗಿಲಿಗೆ – ಜಾನ್ ಎಫ್.ಕೆನೆಡಿ (ಇಲ್ಲಿನ ಜನ ಇದನ್ನ ಬರಿ ಜೆ.ಎಫ್.ಕೆ ಅಂತಾರೆ) ವಿಮಾನ ನಿಲ್ದಾಣಕ್ಕೆ, ನನ್ನನ್ನು ಸಂಪರ್ಕಿಸುವುದೇ ಇ-ಟ್ರೈನ್. ಅಂತಾರಾಷ್ಟ್ರೀಯ ಪಯಣಿಗರು ಅತ್ಯಂತ ಹೆಚ್ಚು ಬಳಸುವ ಜೆ.ಎಫ್.ಕೆ ವಿಮಾನ ನಿಲ್ದಾಣವನ್ನು ನಗರದ ಅತ್ಯಂತ ಜನನಿಬಿಡವಾದ ಜಮೈಕಾ ರೈಲು ನಿಲ್ದಾಣಕ್ಕೆ ಸಂಪರ್ಕಿಸಲು ಏರ್ಪಡಿಸಿರುವ ಹಗುರ ರೈಲು ಸೇವೆ “ಏರ್ ಟ್ರೈನ್” ಅತ್ಯಂತ ಅಮೋಘವಾದ ಕಲ್ಪನೆ. ಇದಕ್ಕಾಗಿ, ನ್ಯೂಯಾರ್ಕ್ ನಗರವನ್ನು ಯೋಜಿಸಿದ ಜನರ ಮುಂದಾಲೋಚನೆ, ಪ್ರಾಯೋಗಿಕ ಮನಸ್ಸುಗಳನ್ನು ವಂದಿಸಲೇಬೇಕು.

ಜೆ.ಎಫ್.ಕೆ. ಮೂಲಕ ನಾನೆಲ್ಲಿಗೆ ಬೇಕಾದರೂ ಹೊರ ಜಗತ್ತಿಗೆ ಹಾರಬಹುದು – ನನ್ನ ನಿಜವಾದ ವಾಸಸ್ಥಳ ವರ್ಜೀನಿಯಾಕ್ಕೋ ಅಥವಾ ನನ್ನ ಕೆಲಸದ ಸ್ಥಳಗಳಾದ ಬಾಸ್ಟನ್, ಚಿಕಾಗೋ, ಡಾಲ್ಲಾಸ್, ಸೀಟಲ್, ಮತ್ತು ಸಾನ್ ಫ್ರಾನ್ಸಿಸ್ಕೋ ಅಥವಾ ಮುಂಬಯಿಗೂ ಕೂಡಾ ಎಲ್ಲಿಯೂ ನಿಲ್ಲದೆ ತಲುಪಬಹುದು. ನನ್ನ ಕೆಲಸ ಎಲ್ಲ ನ್ಯೂಯಾರ್ಕಿಗರಂತಲ್ಲವಲ್ಲ. ನಾನು ಸಂಪತ್ತಿನ ಉತ್ಪತ್ತಿಯಲ್ಲಿಲ್ಲ. ಒಂದು ರೀತಿ ಸಂಪತ್ತಿನ ಪಸರಿಸುವಿಕೆ, ವಿತರಿಸುವಿಕೆಯೇ ನನ್ನ ಕೆಲಸ. ಎಲ್ಲಿ ಸಂಪತ್ತು ಮತ್ತು ಸಂಪನ್ಮೂಲಗಳು ಸಾಕಷ್ಟು ಇದೆಯೋ ಅಲ್ಲಿಂದ ಅದರ ಅವಶ್ಯಕತೆ ಎಲ್ಲಿ ಇದೆಯೋ ಅಲ್ಲಿಗೆ ಹರಿದು ಜನರ ಬದುಕನ್ನು ಉಳಿಸಲು, ಹಸನುಗೊಳಿಸಲು ಮತ್ತು ನೊಂದವರ ಮುಖದಲ್ಲೊಂದು ಸಮಾಧಾನದ ನಗು ತರುವಂತೆ ಮಾಡುವುದು ನನ್ನ ಕೆಲಸ. ಏನು? ಆಶ್ಚರ್ಯವಾಯಿತೆ? ಇರಲಿ ಮುಂದೆ ಸಿಗುವ ಅವಕಾಶಗಳಲ್ಲಿ ಈ ಬಗ್ಗೆಯೇ ಬರೆಯುತ್ತೇನೆ.

ಇಷ್ಟೆಲ್ಲಾ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಹಾಗೂ ಅದರ ನವಿರತೆಗಳನ್ನು ಕೆಲಸಕ್ಕೆ ಹಚ್ಚಿ, ಜನರನ್ನು ಅಲ್ಲಿಂದಿಲ್ಲಿಗೆ ತೊಂದರೆ ಇಲ್ಲದೆ ಓಡಾಡಲು, ಆದಷ್ಟು ಸುಖವಾಗಿರಲು ಏರ್ಪಡಿಸಿರುವ ಮೂಲಭೂತ ವ್ಯವಸ್ಥೆಗಳು ಕಳೆದ ವಾರವಷ್ಟೇ ದೊಡ್ಡದೊಂದು ಪರೀಕ್ಷೆ ಎದುರಿಸಬೇಕಾಗಿ ಬಂದಿತ್ತು. ಹೋದ ಬುಧವಾರ ಸುರಿದ ಭಾರೀ ಮಳೆ, ಬಿರುಗಾಳಿ, ಎದ್ದ ಪ್ರವಾಹದಿಂದಾಗಿ ಇಡೀ ನಗರಕ್ಕೆ ನಗರವೇ, ತನ್ನ ಸಬ್ ವೇಗಳೊಂದಿಗೆ ಮುದುರಿ ಕುಳಿತುಕೊಳ್ಳುವಂತಾಗಿತ್ತು. ಇದೇನು ಹೊಸದಾ, ನಮ್ಮೂರಲ್ಲಿ ಇದು ಇದ್ದದ್ದೇ ಅಂತೀರೇನೋ? ನಮ್ಮ ನ್ಯೂಯಾರ್ಕಿನ ಜನ ಇನ್ನೊಂದು ದಿನವನ್ನು ಧೈರ್ಯದಿಂದಲೇ ಎದುರಿಸಿದರೆನ್ನಬಹುದು.

ಒಂದಿಡೀ ದಿನ ಶತಪ್ರಯತ್ನ ಪಟ್ಟು ಅಂತೂ ಇಂತೂ ಇ_ಟ್ರೈನ್ ಮತ್ತೆ ತನ್ನ ಪಟ್ಟಿಗಳ ಮೇಲೆ ಗಾಲಿ ತಿರುಗಿಸಲಾರಂಭಿಸಿತು. ಮತ್ತೆ ಜನ ಒಳಹೊರಗೆ ಓಡಾಡಲಾರಂಭಿಸಿದರು! ಜೀವನ ಹಾಗೇ ಮಾಮೂಲಿನಂತೆ ಎಂದು ನನಗನ್ನಿಸಿತು.

‍ಲೇಖಕರು avadhi

August 13, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This