ಈಗಲೂ ಒಂದು ಹನಿ ನೀರಿದ್ದೀತು, ಆ ಕಣ್ಣುಗಳಲ್ಲಿ…!

door_number142.jpg“ಡೋರ್ ನಂ. 142”

 

 

ಬಹುರೂಪಿ

ದೀಪಾವಳಿ ಬಂತು ಎಂದರೆ ಸಾಕು, ನನಗೆ ಏಕೋ ಆ ಕಣ್ಣುಗಳು ನೆನಪಾಗುತ್ತವೆ. ಆ ಕಣ್ಣುಗಳು ಎಷ್ಟೆಲ್ಲಾ ಮಾತನಾಡುತ್ತಿದ್ದವು. ಸಹಜವಾಗಿಯೋ ಏನೋ ಒಂದಿಷ್ಟು ಹನಿ ಸದಾ ಅಲ್ಲಿರುತ್ತಿತ್ತು. ಒಂದು ಜೊತೆ ಕಣ್ಣಿಗೆ ಇಷ್ಟೆಲ್ಲಾ ಶಕ್ತಿ ಇದೆ ಎಂದು ಗೊತ್ತಾಗಿದ್ದು ಆಗ.

ನಮ್ಮ ಮನೆಯಲ್ಲೊಂದು ಹಸು ಇತ್ತು. ನಾನು ಎರಡನೆಯದೋ ಮೂರನೆಯದೋ ಕ್ಲಾಸಿನಲ್ಲಿದ್ದಾಗಿನ ಕಾಲ ಅದು. ನಾವಿದ್ದದ್ದು ಖಂಡಿತಾ ಬೆಂಗಳೂರೇ. ಬೆಂಗಳೂರಲ್ಲ ಎಂದು ನಾವು ಹೇಳುತ್ತಿದ್ದ ಕಾಲ ಅದು. ಆಗಿನ್ನೂ ಕಾಂಕ್ರೀಟ್ ಕಟ್ಟಡ, ಗಾಜಿನ ಗೋಡೆಗಳು, ಹೊಗೆಯ ದಾಳಿ, ಬರೀ ಶಬ್ದ ಕಾಲಿಟ್ಟಿರದ “ಹಳ್ಳಿ” ಅದು. ಯಾಕೆ ನಾವು ಹಸು ಸಾಕಿದ್ದೆವೋ ನನಗೆ ಈಗಲೂ ಉತ್ತರ ಸಿಕ್ಕಿಲ್ಲ. ಅಪ್ಪನಿಗೆ ಹಳ್ಳಿಯ ಪುಳಕ ಇಲ್ಲವಾಗುವುದು ಬೇಡವಾಗಿತ್ತೊ ಏನೊ. ಅಥವಾ ಮನೆಯಲ್ಲಿ ದಂಡಿಯಾಗಿದ್ದ ಮಕ್ಕಳಿಗೆ ಸಾಕಷ್ಟು ಒಳ್ಳೇ ಹಾಲು ಸಿಕ್ಕಲಿ ಎಂಬ ಆಸೆಯಿತ್ತೊ, ಅಂತೂ ಹಸು ಇತ್ತು. ಹಸು ಇದ್ದ ಕಾರಣ ಜೊತೆಗೊಂದು ಕರು.

mombatti.jpg

ಈ ಮಧ್ಯೆ ದಿಢೀರನೆ ಬೆಂಗಳೂರು ಎಂದು ನಾವು ಅಂದುಕೊಳ್ಳುತ್ತಿದ್ದ, ಈಗ ಅಬ್ಬಾ ಇಲ್ಲಿರಲು ಪುಣ್ಯ ಮಾಡಿದ್ದೀರಿ ಎಂದೇ ಅನ್ನಿಸಿಕೊಳ್ಳುವ ಬೆಂಗಳೂರಿಗೆ ಬಂದುಬಿಟ್ಟೆವು. ನಮ್ಮ ಜೊತೆ ಹಸು, ಕರು ಸಹಾ ಬಂತು. ಅಪ್ಪ ನೀಟಾಗಿ ನಮ್ಮ ಮನೆಯ ಮುಂಭಾಗವನ್ನೇ ಕೊಟ್ಟಿಗೆಯಾಗಿ ಬದಲಾಯಿಸಿದರು. ನಮಗೋ ಹಿಗ್ಗೋ ಹಿಗ್ಗು. ಆದರೆ ಕ್ರಮೇಣ ಬೆಂಗಳೂರಿನಲ್ಲಿ ಒಂದು “ಜನ” ಆಗಬೇಕೆಂದರೆ ಹಳ್ಳಿತನ ಇರಬಾರದು ಎಂಬುದು ಗೊತ್ತಾಗತೊಡಗಿತು. ನಮ್ಮೊಳಗೆ ಸಿಟಿ ಆಕ್ರಮಣ ಶುರು ಮಾಡಿದ್ದು ಹೀಗೆ.

ಪಕ್ಕದ ಮನೆಯ ಪುಣ್ಯಾತ್ಮ ಗಂಜಲ, ಸಗಣಿ ನೋಡಿ ಬಾಯಿಗೆ ಚಾಲನೆ ಕೊಟ್ಟ. ಮೂಗು ಮುಚ್ಚಿ ಓಡಾಡತೊಡಗಿದ. ನಾವು ಹಸು ಇಟ್ಟುಕೊಂಡಿದ್ದೇವೆ ಎನ್ನುವುದೇ ನಾವು ಆಟವಾಡುತ್ತಿದ್ದ ಹುಡುಗರ ಮಧ್ಯೆಯೂ ವಿಷಯವಾಗಿ ಹೋಗಿತ್ತು. ಈ ಮಧ್ಯೆ ಹಸುವಿಗೆ ಯಾವಾಗ ಸಗಣಿ ಹಾಕಬೇಕು, ಗಂಜಲ ಹುಯ್ಯಬೇಕು ಎಂಬ ಕಾಮನ್ ಸೆನ್ಸ್ ಇಲ್ಲ ಎಂಬುದು ನಮಗೆ ಗೊತ್ತಾಗತೊಡಗಿತು. ಈ ಮಧ್ಯೆ ಹುಟ್ಟಿದ ಸಮಸ್ಯೆ ಎಂದರೆ ಹಸುವನ್ನು ಮೇಯಿಸುವುದು ಹೇಗೆ? ಕಾಂಕ್ರೀಟ್ ನಗರಿಯಲ್ಲಿ ಮನೆಯ ಮಾಡಿ ಹಸುವಿಗೆ ಹುಲ್ಲು ಹುಡುಕಲು ಅಂಜಿದೊಡೆಂತಯ್ಯಾ ಎಂಬ ಸ್ಥಿತಿ ನಮ್ಮದಾಗಿ ಹೋಗಿತ್ತು. ಜೊತೆಗೆ ಹುಲ್ಲಿನ ಬಳಿ ಕರೆದುಕೊಂಡು ಹೋಗಿ ಮತ್ತೆ ಕರೆದುಕೊಂಡು ಬರುವವರು ಯಾರು? ಹಸು ನಮಗೆ ಭಾರವಾಗತೊಡಗಿತ್ತೇ? ಬೆಂಗಳೂರು ನಮ್ಮೊಳಗೆ ಹೊಕ್ಕು ಹಸುವನ್ನು ಭಾರ ಎನ್ನುವಂತೆ ಮಾಡತೊಡಗಿತ್ತೇ? ಪಾಪ, ಹಸು ಹಳ್ಳಿಯಲ್ಲಿ ಹಾಲು ಕೊಟ್ಟಂತೆ ಇಲ್ಲೂ ಕೊಡುತ್ತಿತ್ತು. ಆದರೆ ಕೊಡುತ್ತಿತ್ತು ಎಂಬುದು ಮಾತ್ರ ನಮ್ಮ ನೆನಪಿನ ಹಿಂಬದಿಗೆ ಸರಿಯುತ್ತಿತ್ತು.

ಹೀಗಾಗಿ ಒಂದು ಷಾರ್ಟ್ ಕಟ್ ಹುಡುಕಿಕೊಂಡೆವು ಅಥವಾ ಬೆಂಗಳೂರು ಅದನ್ನು ಹುಡುಕಿಕೊಳ್ಳುವುದನ್ನು ನಮಗೆ ಕಲಿಸಿತ್ತು. ಬೆಳಗ್ಗೆ ಹಾಲು ಕರೆದ ತಕ್ಷಣ ಹಸುವಿನ ಹಗ್ಗ ಬಿಚ್ಚಿ ಬಿಟ್ಟುಬಿಡುವುದು. ಎಲ್ಲಿ ಬೇಕಾದರೂ ಹುಲ್ಲು ಮೇಯ್ದುಕೊಂಡು ಬರಲಿ. ಸಂಜೆ ಬಂದಾಗ ಗೂಟಕ್ಕೆ ಕಟ್ಟುವುದು. ಯಾರಪ್ಪಾ ಈ ಬುದ್ಧಿ ಕೊಟ್ಟವರು? ಅಂತೂ ಇದೇ ಕೆಲಸ ಆರಂಭವಾಯಿತು. ಆ ಹಸುವಿಗೆ ಆ ಕಾಂಕ್ರೀಟ್ ಜಂಗಲ್ ನಲ್ಲಿಯೂ ಅದೇಗೆ ಇಷ್ಟನೇ ಬ್ಲಾಕ್, ಇಷ್ಟನೇ ಕ್ರಾಸ್, ಇಷ್ಟನೇ ನಂಬರಿನ ಮನೆಯೇ ನನ್ನದು ಎಂದು ಗುರುತಾಗುತ್ತಿತ್ತೊ ಗೊತ್ತಿಲ್ಲ. ಸಂಜೆ ಸರಿಯಾಗಿ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿತ್ತು. ಇಲ್ಲಿ ಇನ್ನೊಂದು ಸಮಸ್ಯೆ ಇತ್ತು. ಇದೇ ಬೆಂಗಳೂರು ಮನಸ್ಸು ಸೃಷ್ಟಿ ಮಾಡಿಟ್ಟ ಸಮಸ್ಯೆ. ಆ ಹಸುವಿಗೋ ಮನೆ ಗೊತ್ತಾಗುತ್ತೆ ಆದರೆ ಯಾವಾಗ ಬರಬೇಕು ಎಂದು ಗೊತ್ತಾಗುವುದಿಲ್ಲವಲ್ಲ ಎಂದು ನಾವು ಮೂಗು ಮುರಿದುಕೊಳ್ಳುವಂತೆ ಮಾಡುತ್ತಿತ್ತು. ಸರಿಯಾಗಿ ನಾವು ಗೆಳೆಯ ಗೆಳತಿಯರ ಜೊತೆ ಲಗೋರಿ, ಐಸ್ ಪೈಸ್, ಕ್ರಿಕೆಟ್ ಆಡುತ್ತಿರುವಾಗಲೇ ಈ ಹಸು ಬಂದುಬಿಡುತ್ತಿತ್ತು. ನಾವು ಎಲ್ಲರ ಮುಂದೆ ಹಗ್ಗ ಜಗ್ಗುತ್ತಾ ಹಸುವನ್ನು ಕೊಟ್ಟಿಗೆ ಎಂಬ ಕೊಟ್ಟಿಗೆಗೆ ಕಟ್ಟಬೇಕಾಗಿತ್ತು.

ಆ ಹಸುವಿಗೆ ಏನು ಹೆಸರಿಟ್ಟಿದ್ದೆವೋ, ಕರುವಿಗೆ ನಾಮಕರಣ ಮಾಡಿದ್ದೆವೋ ಇಲ್ಲವೋ ಮರೆತೇ ಹೋಗಿದೆ. ಹೀಗಿರುವಾಗಲೇ ಬಂದಿದ್ದು ದೀಪಾವಳಿ. ನಮಗಾದರೂ ಎಲ್ಲಿ ಗೊತ್ತಿತ್ತು ಸಿಟಿ ಮಂದಿಯ ದೀಪಾವಳಿ ಹೀಗಿರುತ್ತದೆ ಎಂದು. ಅಥವಾ ಹೆಚ್ಚು ಶಬ್ದ ಮಾಡಿದಷ್ಟೂ ಅಟ್ರಾಕ್ಷನ್ ಜಾಸ್ತಿ ಎಂದು. ನಮಗೋ ಅದುವರೆಗೂ ಗೊತ್ತಿದ್ದದ್ದು ದೀಪ ಹಚ್ಚಿಡುವ, ಹೊಸ ಬಟ್ಟೆ ತೊಡುವ, ಕಜ್ಜಾಯ ತಿನ್ನುವ ದೀಪಾವಳಿ ಮಾತ್ರ. ದೀಪಾವಳಿ ಎಂದರೆ ಆಟಂಬಾಂಬು, ಆನೆಪಟಾಕಿ, ಲಕ್ಷ್ಮಿಪಟಾಕಿ, ರಾಕೆಟ್ಟು, ಸುರುಸುರುಬತ್ತಿ, ಭೂಚಕ್ರ, ವಿಷ್ಣುಚಕ್ರ ಎಂದೆಲ್ಲಾ ಗೊತ್ತಾದದ್ದು ನಮ್ಮ ಮೊದಲ ಸಿಟಿ ದೀಪಾವಳಿಯಲ್ಲಿಯೇ.

ಆವತ್ತೂ ಎಂದಿನಂತೆ ಹಸುವಿನ ಹಗ್ಗ ಬಿಚ್ಚಿ ಬಿಟ್ಟೆವು. ಅದು ಎಲ್ಲಿ ಹೋಗುತ್ತಿತ್ತೋ, ಏನು ತಿನ್ನುತ್ತಿತ್ತೋ ಯಾರಿಗೆ ಗೊತ್ತು? ಹುಲ್ಲು ತಿನ್ನುತ್ತಿತ್ತೋ ಸಿಟಿಯ ಪ್ಲಾಸ್ಟಿಕ್ ಹಾಳೆ ಮೆಲ್ಲುತ್ತಿತ್ತೋ ಯಾರಿಗೆ ಗೊತ್ತು? ಅದರ ಬಗ್ಗೆ ಯೋಚನೆ ಮಾಡುವುದು ಎಂದರೆ ಇನ್ನೊಂದಿಷ್ಟು ಸಮಸ್ಯೆ ಯಾ ಎಮೋಷನಲ್ ವಿಷಯಗಳಿಗೆ ಕೈಹಾಕಿದಂತೆ ಆ ವಿಷಯ ನಮ್ಮದಲ್ಲ, ಆ ಹಸುವಿನದ್ದೇ ಎಂಬಂತೆ ಬಿಟ್ಟುಬಿಟ್ಟಿದ್ದೆವು. ನಾವು ಹೇಗೆ ಸಿಟಿಯಲ್ಲಿ ಬದುಕಲು ಕಲಿಯುತ್ತಿದ್ದೇವೋ ಹಾಗೇ ಅದೂ ಕಲಿತುಕೊಳ್ಳಲಿ ಬೇಕಾದರೆ ಎಂಬ ನಿರ್ಲಕ್ಷ್ಯ ಇತ್ತೇನೊ.

ಅಂತೂ ಸಂಜೆಯಾಯಿತು. ಪಟಾಕಿ ಅಬ್ಬರ ಆರಂಭವಾಯಿತು. ನಾವು ಅದುವರೆಗೂ ಕಂಡು ಕೇಳರಿಯದ ಸದ್ದು. ಬಣ್ಣಬಣ್ಣದ ಚಿತ್ತಾರ. ನಾವೇ ಬೆರಗಿನ ಮೂಟೆಯಾಗಿಬಿಟ್ಟಿದ್ದೆವು. ಹಸು ಬರುವ ಹೊತ್ತಾಯ್ತು. ಪಟಾಕಿ ನಿಲ್ಲಲಿಲ್ಲ. ಹಸು ಗಂಟೆ ತಡವಾದರೂ ಬರಲಿಲ್ಲ. ಕತ್ತಲೂ ಆಯ್ತು, ಬರಲಿಲ್ಲ. ಈಗ ಬರಬಹುದು, ಆಗ ಬರಬಹುದು, ಬಂದೇಬಿಡುತ್ತದೆ ಎಂದು ಕಾದಿದ್ದಷ್ಟೇ ಬಂತು. ಹಸು ಬರಲೇ ಇಲ್ಲ. ಕೊನೆಗೆ ಪಟಾಕಿಯಿಂದ ಬೆದರಿ ಎಲ್ಲೋ ನಿಂತಿರಬೇಕು, ದಾರಿ ತಪ್ಪಿ ಅಲೆದಾಡುತ್ತಿರಬೇಕು, ಬೆಳಕಾದಾಗ ಬರುತ್ತದೆ ಎಂದು ಸಮಾಧಾನ ಮಾಡಿಕೊಂಡೆವು. ಬೆಳಕೂ ಆಯಿತು. ಮತ್ತೆ ಕತ್ತಲೂ ಆಯಿತು. ಹಾಗೆ ಕತ್ತಲೆ ಬೆಳಕುಗಳು ನಿರಂತರವಾಗಿ ಉರುಳಿ ಎದ್ದವು. ಆದರೆ ಹಸು ಬರಲೇ ಇಲ್ಲ.

ಏನಾಯ್ತು? ಏನಾಗಿ ಹೋಯ್ತು?
ಅದಿರಲಿ, ಈ ಎಲ್ಲಾ ಯಾಕೆ ನನಗೆ ಕಂಡಕಂಡಾಗಲೆಲ್ಲಾ ನೆನಪಾಗುತ್ತದೆ? ಹಸು ನೆನಪಿಗೆ ಬಂದಾಗಲೆಲ್ಲಾ ಯಾಕೋ ನನಗೆ ಆ ಇಡೀ ಹಸುವಿನ ಬದಲು ಅದರ ಕಣ್ಣು ನೆನಪಾಗುತ್ತದೆ. ಅದು ದಿಟ್ಟಿಸಿ ನನ್ನನ್ನೇ ನೋಡುತ್ತಿದ್ದುದು ನೆನಪಾಗುತ್ತದೆ. ಅದರ ಮೈ ನೇವರಿಸುವಾಗಿನ ಕೃತಜ್ಞತೆ ಇಣುಕುತ್ತಿದ್ದುದು ನೆನಪಾಗುತ್ತದೆ. ಸದಾ ಅದರ ಕಣ್ಣಿಂದ ಜಿನುಗುತ್ತಿದ್ದ ನೀರು ನೆನಪಾಗುತ್ತದೆ.

ಹಸು ಏನಾಯ್ತು? ಅದರ ಕಣ್ಣುಗಳು ಏನಾಯ್ತು?
ಮನಸ್ಸು ಕದಡಿಹೋಗಿದೆ. ಅಂದಿನಿಂದಲೂ ಯಾಕೋ ನನ್ನೊಳಗೆ ಆ ಒಂದು ಜೊತೆ ಕಳೆದುಹೋದ ಕಣ್ಣುಗಳು ಮಾತ್ರವಲ್ಲ, ನನ್ನಿಂದ ಕಳಚಿಹೋದ ನೂರಾರು ಕಣ್ಣುಗಳು ಮನೆ ಮಾಡಿವೆ. ನಾನೂ ಸಹ ಇಂದಿಗೂ ಅಲ್ಲಿ, ಇಲ್ಲಿ, ಜೊತೆಗಾತಿಯಲ್ಲಿ, ಸಜ್ಜನರ ಸಂಗದಲ್ಲಿ ಆ ಕಣ್ಣುಗಳನ್ನು ಹುಡುಕುತ್ತಲೇ ಇದ್ದೇನೆ…          

‍ಲೇಖಕರು avadhi

November 14, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

೧ ಪ್ರತಿಕ್ರಿಯೆ

  1. harish

    Very happy to read in kannada, But My kannada font doesnt work peroerly or I dont know how to use it.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: