ಈಗಿನ ಬರಹಗಾರರು ಬೋನ್ಸಾಯ್ ಟ್ರೀಗಳಿದ್ದಂತೆ….

kumveerabadhrappa_2.jpg

ಕುಂ ವೀ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಬಿಸಿಲ ಬೇಗುದಿಯನ್ನು ಉಂಡು ಅರಳಿದ ಕುಂ ವೀ ‘ಅರಮನೆ’ ಯಲ್ಲಿ  ಬಿಡಿಸಿಟ್ಟ ಜಾತಕದ ಬಗ್ಗೆ ಯುವ  ಬರಹಗಾರ ಶಶಿ ಸಂಪಳ್ಳಿ  ಕಣ್ಣೋಟ ಹರಿಸಿದ್ದಾರೆ. ದಿ ಸಂಡೇ ಇಂಡಿಯನ್ ಪತ್ರಿಕೆಗಾಗಿ ಸಂಪಳ್ಳಿ ನಡೆಸಿದ ಸಂದರ್ಶನದ ತುಣುಕು ಇಲ್ಲಿದೆ. 

 

‘ಅರಮನೆ’ ನಿಮ್ಮ ಇತರ ಕೃತಿಗಳಿಗಿಂತ ಎಷ್ಟರ ಮಟ್ಟಿಗೆ ಭಿನ್ನ?

ಸುಮಾರು 40- 50 ಸಾವಿರ ರೂಪಾಯಿ ಖರ್ಚು ಮಾಡಿಕೊಂಡು 15 ವರ್ಷ ಸುತ್ತಾಡಿ ಫೀಲ್ಡ್ ವರ್ಕ್ ಮಾಡಿ ಬರೆದ ಐತಿಹಾಸಿಕ ಕಾದಂಬರಿ ‘ಅರಮನೆ’. ಚರಿತ್ರೆ ಮತ್ತು ವಾಸ್ತವವನ್ನು ಬೆಸೆಯುವ ಪ್ರಯತ್ನದ ಈ ಕೃತಿಯಲ್ಲಿ ಕಾದಂಬರಿಯನ್ನು ಹೀಗೇ ಓದಬೇಕು ಎಂಬ ರೂಢಿಗತ ಕ್ರಮವನ್ನು ಮುರಿದು ಹೊಸ ಬಗೆಯ ಓದು ಸಾಧ್ಯವಾಗುವಂತೆ ಮಾಡಿದ್ದೇನೆ. ಕಾದಂಬರಿಯ ಯಾವ ಪುಟವನ್ನು ಓದಿದರೂ ಖುಷಿಪಡುವಂತಹ ವಿನ್ಯಾಸವಿದೆ. ಒಂದು ಸೆಂಟ್ರಲ್ ಥೀಮ್ ಎಂಬುದು ಇಲ್ಲ, 1800ರಲ್ಲಿ ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೋ ಅಧಿಕಾರ ವಹಿಸಿಕೊಂಡಾಗಿನಿಂದ 1827ರಲ್ಲಿ ಆತ ಸಾಯುವವರೆಗೆ 27 ವರ್ಷದ ಕಾಲಘಟ್ಟದ ರಾಯಲಸೀಮೆಯ ಬದುಕನ್ನು ಹಿಡಿದಿಟ್ಟಿದ್ದೇನೆ. ಮೊದಲು ನಾನು ಬರೆದು ಮುಗಿಸಿದಾಗ ಅದು 1200 ಪುಟಗಳಷ್ಟಿತ್ತು. ನಂತರ ಅದರ ಸಾಂದ್ರತೆ ಮುಕ್ಕಾಗದಂತೆ 500 ಪುಟಕ್ಕೆ ಇಳಿಸಿದೆ.

 

ದೇವನೂರು ಮತ್ತು ನೀವು ಇಬ್ಬರೂ ನಿಮ್ಮದೇ ಆದ ವಿಶಿಷ್ಟ ಭಾಷೆಯನ್ನು ದುಡಿಸಿಕೊಂಡವರು. ಆದರೆ, ಇಂದು ಜಾಗತೀಕರಣದ ಹಿನ್ನೆಲೆಯಲ್ಲಿ ಭಾಷೆಯ ವೈಶಿಷ್ಟ್ಯವೇ ಮರೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಇಂದಿನ ಲೇಖಕನ ಮುಂದಿನ ಸವಾಲು ಏನು?

ಹೌದು, ಇದೊಂದು ದೊಡ್ಡ ಸವಾಲೇ. ಅಂದು ನಮ್ಮದೇ ಆದ ಭಾಷೆಯನ್ನು ಅಭಿವ್ಯಕ್ತಿಗೆ ರೂಢಿಸಿಕೊಳ್ಳುವುದು ನಮ್ಮ ನೈತಿಕ ಹೊಣೆಯಾಗಿತ್ತು. ನಮ್ಮ- ನಮ್ಮ ಸೀಮೆಯ ಭಾಷೆಯನ್ನು ಬಳಸಿಕೊಳ್ಳುತ್ತಲೇ ನಾವು ಆ ಬದುಕನ್ನು ಕಟ್ಟಿಕೊಟ್ಟೆವು. ಆದರೆ, ಈಗ ಈ ತರಹದ ಸಮಸ್ಯೆ ಎದುರಾಗಿದೆ. ಎಲ್ಲವೂ ಏಕರೂಪಕ್ಕೆ ತಿರುಗುವ ಸ್ಥಿತಿ ಇದು. ಇದು ಲೇಖಕನಾದವನಿಗೆ ದೊಡ್ಡ ಸವಾಲು. ಜಾಗತೀಕರಣದ ವಿರುದ್ಧ ಒಬ್ಬ ಲೇಖಕ ಭಾಷೆಯ ಬಳಕೆಯ ದೃಷ್ಟಿಯಿಂದ ಹೋರಾಡಬೇಕಿದೆ. ಕಥೆ- ಕಾದಂಬರಿಗಳ ಮೂಲಕ ಆ ಬದುಕನ್ನು ಹಿಡಿದಿಡಬೇಕು. ಅವುಗಳನ್ನು ಕಾಯ್ದಿಟ್ಟು ಕಾಲಕೋಶಗಳಾಗುವಂತೆ ಮಾಡುವುದು ಲೇಖಕನ ಹೊಸ ಸವಾಲು.

kumveerabadhrappa_1.jpg

ಇವತ್ತಿನ ಹೊಸ ತಲೆಮಾರಿನವರ ಸಾಹಿತ್ಯದ ಬಗ್ಗೆ….

ಅಯ್ಯೋ ನೆನಸಿಕೊಂಡ್ರೆ ಬೇಜಾರಾಗುತ್ತೆ ಬಿಡಿ. ಪತ್ರಿಕೆಗಳಲ್ಲಿ ಈ ಮೊದಲು ನಾವು ಬರೆದ ಕಥೆಗಳೆಲ್ಲಾ ಪ್ರಕಟವಾಗುತ್ತಿದ್ದವು. ಆದರೆ, ಇವತ್ತು ಹಾಗಿಲ್ಲ. ಕೆಲವು ಪತ್ರಿಕೆಗಳಲ್ಲಿ ಇಷ್ಟೇ ಪದಕ್ಕೆ ಕಥೆ ಬೇಕು ಎಂದರೆ, ಇನ್ನೂ ಕೆಲವರು ಕಥೆ ಹಾಕುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಹಾಗೇ ಇಂದಿನ ಕಥೆಗಾರರು ಕೂಡ ಅರ್ಥವಾಗದಂತೆ ಬರೆಯುವುದೇ ಸಾಹಿತ್ಯ ಎಂದುಕೊಂಡಿದ್ದಾರೆ. ನಾವೆಲ್ಲಾ ಬರವಣಿಗೆ ಆರಂಭಿಸಿದಾಗ ನಮ್ಮ ಮುಂದೆ ಮಾಸ್ತಿಯವರ ಸರಳ ಮತ್ತು ಅರ್ಥಗರ್ಭಿತ ಕಥೆಗಳಿದ್ದವು. ಆದರೆ, ಇಂದಿನ ಕಥೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ವಿಮರ್ಶಕರ ನೆರವು ಬೇಕೇಬೇಕು ಎಂಬಂತಹ ಸ್ಥಿತಿ ಇದೆ. ನೇರವಾಗಿ ಅರ್ಥವಾಗದಂತೆ ಬರೆಯುವುದೇ ಯಶಸ್ಸು ಎಂದುಕೊಂಡಂತಿದೆ. ಹಾಗೇ ಮತ್ತೊಂದು ಕಡೆ ಎಲ್ಲವೂ ಕೆನೆಪದರದ ಬರಹವಾಗುತ್ತಿದೆ. ನಾವೆಲ್ಲಾ ಯೌವನದಲ್ಲಿದ್ದಾಗಿನ ಸವಾಲುಗಳು ಬೇರೆ ತೆರನಾಗಿದ್ದವು. ಎಲ್ಲಾ ಹುಡುಗರು ಹರೆಯದ ಹುಡುಗಿಯರತ್ತ ನೋಡುವ ಸಂದರ್ಭದಲ್ಲಿ ನಾವು ತುರ್ತು ಪರಿಸ್ಥಿತಿಯನ್ನು ಕಂಡಿದ್ದೆವು. ಅದರ ವಿರುದ್ಧದ ಹೋರಾಟದ ಮೂಲಕವೇ ಮನುಷ್ಯನ ಮೂಲಭೂತ ಸ್ವಾತಂತ್ರ್ಯ ಮತ್ತು ದಾಸ್ಯದ ಅರ್ಥವಾಗ್ತಾ ಇತ್ತು. ಹಾಗಾಗಿ ನಮಗೆ ವಯೋಸಹಜ ಆಕರ್ಷಣೆಗಳಿಗಿಂತ ಮಾನಸಿಕವಾಗಿ ಮತ್ತು ತಾತ್ವಿಕವಾಗಿ ಅಸ್ವಸ್ಥರಾಗುವ ಸ್ಥಿತಿ ಇತ್ತು. ನಾವೆಲ್ಲಾ ಜೈಲಿಗೆ ಹೋಗಲು ತಯಾರಿಮಾಡಿಕೊಳ್ಳುತ್ತಿದ್ದೆವು. ಆದರೆ, ನಮ್ಮನ್ಯಾರೂ ಅರೆಸ್ಟ್ ಮಾಡಲಿಲ್ಲ ಅಷ್ಟೇ! ನಮಗೆ ಆಗಿನ ತುಡಿತ ಮತ್ತು ಆ ದಿನಗಳು ಕಲಿಸಿದ ಪಾಠ ಎಲ್ಲಾ ವಿಶ್ವವಿದ್ಯಾನಿಲಯಗಳ ಪಾಠಕ್ಕಿಂತ ದೊಡ್ಡದು.

ಆದರೆ, ಈ ಬಗೆಯ ಸಾಮಾಜಿಕ ಬದ್ಧತೆ ನಿಮ್ಮ ಮುಂದಿನ ತಲೆಮಾರಿಗೆ ಇಲ್ಲವಾಯಿತಲ್ಲಾ?

ಈಗಿನ ಬರಹಗಾರರು ಒಂದು ರೀತಿಯಲ್ಲಿ ಬೋನ್ಸಾಯ್ ಟ್ರೀಗಳಿಂದ್ದಂತೆ. ಒಬ್ಬ ಬರಹಗಾರ ಕಾಡಾಗಬೇಕು, ಅತ್ಯುತ್ತಮ ಕುರುಚಲು ಕಾಡಾಗಬೇಕು, ಹೆಮ್ಮರವಾಗಿ ಬೆಳೆಯಬೇಕು ಎಂಬ ತುಡಿತವಿಲ್ಲ. ಈಗ ಅವರೆಲ್ಲಾ ಚಂದವಾಗಿ ಕಾಣುವ ಉದ್ಯಾನವನಗಳಾಗಬೇಕು, ಕೆನೆರೂಪಿ ಜನರು ವಿಹರಿಸುವಂತಹ ಸುಂದರ ತೋಟಗಳಾಗಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಾಹಿತ್ಯದಿಂದ ಸಮಾಜ ಏನನ್ನು ನಿರೀಕ್ಷಿಸುತ್ತದೆಯೋ ಅಂತಹ ನಿರೀಕ್ಷೆಗಳು ಈಗ ನೇಪಥ್ಯಕ್ಕೆ ಸರಿದುಕೊಂಡಿವೆ ಅನ್ನಿಸುತ್ತದೆ.

‍ಲೇಖಕರು avadhi

January 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This