ಈಗ ಆ ಮಾತು ಬ್ಯಾಡ ಬಿಡ್ರಿ.. ಸುಳ್ಳಂತ ಸಾಬೀತು ಮಾಡ್ಯಾರ


ಕನ್ನಡದ  ಮುಖ್ಯ ಕಥೆಗಾರ್ತಿ ಸಂಧ್ಯಾ ಹೊನಗುಂಟಿಕರ್ . ಕಲಬುರ್ಗಿಯ ಸಂಧ್ಯಾ ಅವರ ಕಥಾ ಸಂಕಲನ ‘ಹರಿದ ಹಾಸಿಗೆ ಹಂಬಲ’ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆಯಲ್ಲದೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಪಡೆದಿದೆ.
ಸಂಧ್ಯಾ ಇತ್ತೀಚಿಗೆ ಗೀತಾ ನಾಗಭೂಷಣ ಅವರ ಸಂದರ್ಶನ ನಡೆಸಿದ್ದರು. ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆದ್ದ, ತಮ್ಮ ಸಾಹಿತ್ಯ ಕೊಡುಗೆಗಾಗಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವಕ್ಕೆ ಪಾತ್ರರಾದ ಗೀತಾ ನಾಗಭೂಷಣ ಗದಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂತೋಷದ ಹಿನ್ನೆಲೆಯಲ್ಲಿ ಸಂಧ್ಯಾ ಅವರು ನಡೆಸಿದ ಸಂದರ್ಶನ ಇಲ್ಲಿದೆ. ಪ್ರಕಟಣೆಗೆ ಅನುಮತಿ ನೀಡಿದ ಅವರಿಗೆ ವಂದನೆಗಳು.
-ಸಂಧ್ಯಾ ಹೊನಗುಂಟಿಕರ್
ಕನ್ನಡದ ಪ್ರಮುಖ ಲೇಖಕಿ ಗೀತಾ ನಾಗಭೂಷಣ್. ಗುಲ್ಬರ್ಗ ಜಿಲ್ಲೆಯ ಸಾವಳಗಿ ಗ್ರಾಮದ ಗಂಗಾಮತಸ್ಥ ಸಮುದಾಯಕ್ಕೆ ಸೇರಿದ ಅವರು ನಾಡೋಜ ಪ್ರಶಸ್ತಿ ಪುರಸ್ಕೃತೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿದ್ದು ಅವರ ಯಶೋಗಾಥೆಯನ್ನೇ ಹೇಳುತ್ತದೆ. ಬರಗಾಲ ನೆಲದ ಕತೆಯನ್ನೇ ಕಾದಂಬರಿಯಾಗಿಸಿದರು. 27 ಕಾದಂಬರಿಗಳನ್ನು ರಚಿಸಿದವರು.  ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ, ನಾಡೋಜ ಪ್ರಶಸ್ತಿಗಳು ಇವರ ಮುಡಿ ಸಿಂಗರಿಸಿವೆ.
‘ಹಸಿಮಾಂಸ ಮತ್ತು ಹದ್ದುಗಳು’ ಮರಾಠಿ ಭಾಷೆಗೆ ಅನುವಾದವಾಗಿದ್ದು, ಕತೆಗಳು ತೆಲುಗು, ತಮಿಳು ಭಾಷೆಗಳಿಗೆ ಅನುವಾದವಾಗಿವೆ. ಸದ್ಯ ಗುಲ್ಬರ್ಗದಲ್ಲಿ ವಿಶ್ರಾಂತ ಜೀವನ ಅನುಭವಿಸುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕದ ಬದುಕನ್ನು ಅದರ ಬಿಸಿಯೊಂದಿಗೆ, ಹಸಿಯಾಗಿ ಬಿಡಿಸಿಟ್ಟ ಲೇಖಕಿಯ ದಿಟ್ಟ ಹಾಗೂ ಗಟ್ಟಿಯಾದ ನೇರ ನುಡಿಗಳು ಈ ಕೆಳಗಿವೆ.
‘ಮಹಿಳಾ ಸಾಹಿತ್ಯ’ ಎಂಬ ಹಣೆಪಟ್ಟಿ ಕಿತ್ತಿಹಾಕುವುದ್ರೊಳಗ ದಲಿತ ಮಹಿಳೆಯಾಗಿ ನಿಮ್ಮ ಪಾಲು ಮುಖ್ಯದ. ಅದನ್ನ ಹೆಂಗ ವಿಶ್ಲೇಷಿಸ್ತೀರಿ?
‘ಮಹಿಳಾ ಸಾಹಿತ್ಯ’ ಎಂಬ ಹಣೆಪಟ್ಟವನ್ನು ಹಲವಾರು ವರ್ಷಗಳ ಹಿಂದೆ ಕೆಲವು ವಿದ್ವಾಂಸರು ಹುಟ್ಟು ಹಾಕಿದ್ದು ಖರೇ. ಹಾಂಗ ನೋಡಿದ್ರ ಸಾಹಿತ್ಯ ಅಂದ್ರ ಸಾಹಿತ್ಯ ಅಷ್ಟೇ. ಪುರುಷ ಸಾಹಿತ್ಯ, ಮಹಿಳಾ ಸಾಹಿತ್ಯ ಅಂತ ಅದಕ್ಕೂ ಲಿಂಗವನ್ನು ಆರೋಪಿಸ್ಲಿಕ್ಕಿ ಅಗಂಗಿಲ್ಲ. ಹಾಗೆ ಮಾಡಬಾರದೂ ಕೂಡ.
‘ಮಹಿಳಾ ಸಾಹಿತ್ಯ’ ಅಂತ ಹೆಸರಿಟ್ಟು ಕೆಲವು ವಿಮರ್ಶಕರು ಲೇಖಕಿಯರ ಸಾಹಿತ್ಯವನ್ನು ಉಪೇಕ್ಷೆಯಿಂದಲೇ ಕಂಡರೆನ್ನಬಹುದು. ಅದು ಬರೆ ಅಡುಗೆಮನೆ ಸಾಹಿತ್ಯ, ಉಪ್ಪಿಟ್ಟು ಬಾಳೆಹಣ್ಣಿನ ಸಾಹಿತ್ಯ ಹಾಗೆ ಹೀಗೆ ಅಂತ ಹಗೂರಾಗಿ ಮಾತಾಡಿದ್ದೂ ಇದೆ. ಆದ್ರೆ ಒಂದು ಮಾತು ಸಂಧ್ಯಾ, ನಮ್ಮ ಹಿಂದಿನ ಲೇಖಕಿಯರು ಸಾವಿರ ಪುಟಗಟ್ಟಲೇ ಕತೆ ಕಾದಂಬರಿಗಳನ್ನು ಬರೆದರಲ್ಲ, ಅದು ಬರೀ ಮನರಂಜನೆಯನ್ನು ಕೊಡತಿತ್ತು ಅಂತ ಅಂದರೂ ಅದರಿಂದ ಒಂದು ಲಾಭ ಆಯ್ತು ಅನಬಹುದು. ಯಾರೂ ಅದನ್ನು ಮರೆಯುವಂತಿಲ್ಲ. ಅದೇನಂದ್ರ ಅವರು ಶ್ರೀಸಾಮಾನ್ಯ ಓದುಗರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಿದರು. ಅವರ ಸಹಜ, ಸುಂದರ, ನಿರೂಪಣೆ, ಎಲ್ಲರಿಗೂ ಅರ್ಥವಾಗುವಂತಹ ಭಾಷೆಯ ಆಕರ್ಷಣೆ ಮತ್ತು ಇಂಗ್ಲಿಷ್ ಮಿಶ್ರಿತ ಕನ್ನಡದ ವಿಚಿತ್ರ ಮೋಹಕತೆ ನಮ್ಮ ಯುವ ಪೀಳಿಗೆಯನ್ನು ಸೆಳೆದುಕೊಂಡದ್ದು ಸುಳ್ಳಲ್ಲ.
ಅದ್ರ ಮಹಿಳೆಯಿಂದ ಶಬ್ದ ಸಾಹಿತ್ಯ ಬರಲಿಲ್ಲ ಅಂತ ದೂರಿತ್ತು. ಅದನ್ನ ಒಪ್ಪಿಕೊಳ್ಳಲೇಬೇಕು. ಅದ್ರ ಅದಕ್ಕ ಹಲವಾರು ಕಾರಣಗಳವ. ಈಗ ಆ ಮಾತು ಬ್ಯಾಡ ಬಿಡ್ರಿ. ಆ ಮಾತನ್ನ ಈಗ ಮಹಿಳಾ ಸಾಹಿತಿಗಳು ಸುಳ್ಳಂತ ಸಾಬೀತು ಮಾಡ್ಯಾರ. ನಮ್ಮ ಹಲವಾರು ಲೇಖಕಿಯರು ಗಟ್ಟಿಯಾದ ಸಾಹಿತ್ಯ ಸೃಷ್ಟಿಸುತ್ತ ರಾಜ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿಗಳನ್ನೂ ಬಾಚಿಕೊಳ್ಳುತ್ತಿದ್ದಾರ. ಒಂದು ಮಾತು. ಇಂಥ ಲೇಖಕಿಯರು ಬಹಳಷ್ಟು ಮಂದಿ ಕೆಳವರ್ಗದಿಂದಲೇ ಬಂದಾರ. ಅಂದರೆ ನೋವುಂಡ ಜನವರ್ಗದಿಂದ.
ನೀವು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಗಳಲ್ಲಿ ಅನೇಕ ಕಾರಣಗಳಿರುತ್ತವೆ. ದಲಿತ ವರ್ಗದಿಂದ ಬಂದವರು ಎಂದಿರಬಹುದು. ಮಹಿಳೆ ಅಂತಿರಬಹುದು ಅಥವಾ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಸೃಜನಶೀಲವಾದ ಗಟ್ಟಿ ಸಾಹಿತ್ಯ ಪುರುಷರಲ್ಲಿ ಬರದಿರಬಹುದು. ಯಾವ ಕಾರಣಗಳನ್ನು ನೀವು ಸಮರ್ಥಿಸಿಕೊಳ್ಳುತ್ತೀರಿ.
ಮಹಿಳಾ ಸಾಹಿತಿಯೊಬ್ಬಳು ಅಕಾಡೆಮಿ ಅಧ್ಯಕ್ಷಳಾದಾಗ ಅದರ ಹಿನ್ನೆಲೆಯನ್ನು ಹುಡುಕುವ ಕೆಟ್ಟ ಕುತೂಹಲ ಕೆಲವರಿಗಿರುತ್ತದೆ. ಅಕಾಡೆಮಿಯ ಅಧ್ಯಕ್ಷಸ್ಥಾನ ಮೊದಲಿನಿಂದಲೂ ಗಂಡಸರ ಗುತ್ತಿಗೆಯಾಗಿತ್ತಲ್ಲ. ಈಗ ಏಕದಂ ಒಬ್ಬ ಮಹಿಳೆ ಆ ಕುರ್ಚಿಗೆ ಕುಳಿತರೆ ಬಹಳ ಜನಕ್ಕೆ ಆಶ್ಚರ್ಯ ಮಿಶ್ರಿತ ಹೊಟ್ಟೆಯುರಿ ಆಗಿದ್ದರೂ ಆಗಿರಬಹುದು (ನಗು). ಅದಕ್ಕೆಯೇ ಇರಬೇಕು, ಅವಳು ಅಧ್ಯಕ್ಷೆಯಾಗಿ ಆಯ್ಕೆಯಾದ ಹಿನ್ನೆಲೆಗೆ ಕಾರಣಗಳನ್ನು ಹುಡುಕುತ್ತಾರೆ. ಈ ನಿಮ್ಮ ಪ್ರಶ್ನೆಗೆ ನಾನೇನಂತ ಉತ್ತರಿಸಲಿ? ನನ್ನ ಆಯ್ಕೆ ಮಾಡಿದವರು ಮಾತ್ರ ಇದಕ್ಕೆ ಉತ್ತರಿಸಲಿಕ್ಕೆ ಸಾಧ್ಯ.
ತಾವು ಉದ್ಯೋಗ ಕ್ಷೇತ್ರದಲ್ಲಿದ್ದು ಉದ್ಯೋಗಸ್ಥ, ವಿದ್ಯಾವಂತ ಮಹಿಳೆಯರೂ ಎದುರಿಸಬೇಕಾದದ್ದು, ಅನುಭವಿಸಿದ್ದು ಸಾಕಷ್ಟಿದೆ. ಅದೆಲ್ಲ ತಮ್ಮ ಸಾಹಿತ್ಯ ಕೃಷಿಯೊಳಗೆ ಬಿಂಬಿತವಾಗಲೇ ಇಲ್ಲ, ಯಾಕೆ?
ಮೂಲತಃ ನಾ ಹಳ್ಳಿಯಾಕೆ. ನನ್ನ ಬೇರುಗಳೆಲ್ಲ ಹಳ್ಳಿಯ ನೆಲದಲ್ಲಿಯೇ ಹುದುಗಿವೆ. ಅಲ್ಲೇ ಹುಟ್ಟಿ ಬೆಳೆದ ನನಗೆ ದಲಿತ ಮಹಿಳೆಯರ ಬದುಕಿನ ಹಲವಾರು ಮಗ್ಗುಲಗಳು ಭೂತಗನ್ನಡಿಯಲ್ಲ ಕಂಡಷ್ಟು ಸ್ಪಷ್ಟ. ಆ ಅನಕ್ಷರಸ್ಥ ಮುಗ್ಧ ಹೆಂಗಸರ ಶೋಷಣೆ, ಪ್ರತಿಭಟನೆಗಳು ನನ್ನನ್ನು ಬಾಲ್ಯದಿಂದಲೂ ಕಾಡುತ್ತಲೇ ಬಂದಿವೆ. ದೇವರು ದೆವ್ವಗಳ ಹೆಸರಿನ ಮೇಲೆ ರೂಢಿ ಸಂಪ್ರದಾಯಗಳ ನೆಪಗಳಲ್ಲಿ ತಾವು ಶೋಷಣೆಗೊಳಪಡುತ್ತಿದ್ದೇವೆ ಎಂಬ ಅರಿವು ಕೂಡ ಇಲ್ಲದೆ ತಲೆ ಕೊಟ್ಟವರು ಅವರು. ಅವರ ಕೊರಳಿಗೆ ದನಿಯಾಗಬೇಕು, ಅವರ ನಾಲಿಗೆಗೆ ಮಾತಾಗಬೇಕು ಎಂಬುದು ನನ್ನ ಅದಮ್ಯ ಕಾಳಜಿಯಾಗಿತ್ತು
ಅಲ್ಲದೆ ಇಲ್ಲಿಯವರೆಗೆ ಬಂದ ನಮ್ಮ ಕನ್ನಡ ಸಾಹಿತ್ಯದಲ್ಲಿ ರೊಪಡಪಟ್ಟಿಯ ಸಾಹಿತ್ಯ ಬಂದಿದ್ದೇ ತೀರ ಕಡಿಮೆ. ಬಂದರೂ ಅದೂ ಇತ್ತೀಚಿನ ದಿನಗಳಲ್ಲಿ. ಸಾಹಿತ್ಯ ಚರಿತ್ರೆಯಲ್ಲಿ ಉಂಡುಟ್ಟವರ, ತೇಗಿಯವರ ಬದುಕೇ ದಾಖಲಾಗಿದೆ. ಹಿಂಗಿದ್ದಾಗ ನನ್ನಿ ಗುಡಸಲುಗೇರಿಯ, ಹಳ್ಳಿಯ ಅಮಾಯಕ ಹೆಣ್ಣುಗಳ ಬದುಕು ಎಲ್ಲಿ ದಾಖಲಾದಾವು? ಎಲ್ಲಿಯೂ ದಾಖಲಾಗದಾಗ ಪ್ರತಿಭಟಿಸಲೂ ಅನಿವಾರ್ಯವಾದಾಗ ಸಾಹಿತ್ಯ ಚರಿತ್ರೆಯೊಳಗ ದಾಖಲಾಗಲೇಬೇಕು ಅಂತ ಹಟದಿಂದ ಬರೆದೆ.
ಬಂಡಾಯ ಮತ್ತು ದಲಿತ ಸಂವೇದನೆಗಳು ಇಂದು ತೀವ್ರತೆ ಕಳೆದುಕೊಂಡಿವೆ ಎಂಬ ಮಾತಿದೆ. ಈ ಥಕಾವಟ್‌ಗೆ ಕಾರಣ ಏನಿರಬಹುದು.
ತೀವ್ರತೆ ಕಳೆದುಕೊಂಡವ ಅನ್ನೋದು ಅಷ್ಟು ಸರಿಯಲ್ಲ. ಅವು ರೂಪಾಂತರಗೊಂಡವ ಅನಬಹುದು. ಪ್ರಾರಂಂಭದ ಅಬ್ಬರ ಆರ್ಭಟ, ಜೋಷ್‌ಗಳು ತಣ್ಣಗಾಗಿವೆ. ಆದ್ರ ಆ ಸಂವೇದನೆಗಳು ತಮ್ಮ ಒಳ ಹರಿವನ್ನು ಹೆಚ್ಚಿಸಿಕೊಂಡು ಮತ್ತಷ್ಟು ಆಳಕ್ಕಿಳಿಯುತ್ತಿವೆ.
ಅಬ್ಬರಿಸಿ ಒದರಾಡಿದರೆ ಮಾತ್ರ ಬಂಡಾಯವಲ್ಲ. ಮೌನವಾಗಿಯೂ ಬಂಡಾಯವೇಳಬಹುದು. ಇದು ಪರಿಣಾಮಕಾರಿ ಕೂಡ ನನ್ನ ‘ಬದುಕು’ ಕಾದಂಬರಿಯಲ್ಲಿ ನೀಲಮ್ಮನನ್ನೇ ತಗೋರಿ, ತನ್ನ ಪ್ರೇಯಸಿ ಕಾಶಮ್ಮಳನ್ನು ಲಿಂಗರಾಜು ತಂದು ತೋಟದೊಳಗಿಟ್ಟುಕೊಂಡಾನೆಂಬ ಸುದ್ದಿ ತಿಳಿದಾಗ ನೀಲಮ್ಮ ಗಂಡ ಲಿಂಗರಾಜನ ದೈಹಿಕ ಸಂಪರ್ಕ ಕಡಿದುಕೊಳ್ಳುತ್ತಾಳೆ.
ಹರೆಯದ ಹೆಣ್ಣ ಆಕೆ. ತನ್ನ ಮೈಯ ಕಾಮನೆಗಳಿಗೆಲ್ಲ ಬೆಂಕಿಯಿಟ್ಟು ಇಂಥ ನಿರ್ಧಾರ ತೆಗೆದುಕೊಳ್ಳುವುದು.. ಇದು ಬಂಡಾಯವೇ.. ಈ ರೀತಿ ದಲಿತ ಬಂಡಾಯ ಸಂವೇದನೆಗಳು ನೀವಂದುಕೊಂಡಂತೆ ಥಕಾವಟ್ಗೊಂಡಿಲ್ಲ. ಹೈರಾಣಾಗಿಲ್ಲ. ಇನ್ನು ಗಟ್ಟಿಯಾಗಿ, ಬೇರುಗಳನ್ನು ಆಳಕ್ಕಿಳಿಸುವಂತ ಕೃತಿಗಳು ಬರುತ್ತಿವೆ
ನಿಮ್ಮ ಕೃತಿಯೊಳಗ ಸೆಕ್ಸ್ ಬಹಳ ಇರ್ತದ, ಬಹಳ ಖುಲ್ಲಂಖುಲ್ಲಾ ಬರೀತಾರ ಎಂದೆನ್ನುವ ಮಡಿವಂತರಿದ್ದಾರೆ, ಹದಿಹರೆಯದ ಹುಡುಗ್ರಿಗೆ ಕಚಗುಳಿ ಇಡಲಿಕ್ಕೆ ಕೆಲವು ಸಲ ಬರಿಬೇಕಾಗ್ತದ ಅಂತ ನೀವು ಹೇಳಿದ್ದೀರಿ. ಬಹುಶಃ ಇದು ಕಮರ್ಷಿಯಲ್ ಗಿಮಿಕ್ಕೂ ಇರಬಹುದೆ….? ಅಥವಾ ಕಾಮ ಎಂಬೋದು ಈ ಜಗತ್ತಿನ ಎಲ್ಲ ವ್ಯಾಪಾರಕ್ಕೂ ಮೂಲ ಸರಕಾ?
ನನ್ನ ‘ಬದುಕು’ ಕಾದಂಬರಿಯ ಮುನ್ನಡಿಯೊಳಗೇ ಇದಕ್ಕೆ ಉತ್ತರ ಸಿಗ್ತದ. ಕಾಮ ಮನುಷ್ಯ ಬದುಕಿನ ಅವಿಭಾಜ್ಯ ಅಂಶ. ಅದನ್ನು ಅಲಕ್ಷಿಸುವುದಾಗಲಿ, ಮೂಗು ಮುರಿದು ಕದ್ದು ಮುಚ್ಚಿ ಅನುಭವಿಸುತ್ತ ಮುಚ್ಚಿಡುವುದಾಗಲಿ ಮಾಡಬಾರದು. ಮನುಷ್ಯನ ಸಹಜ ಕ್ರಿಯೆಗಳಲ್ಲಿ ‘ಕಾಮ’ವೂ ಒಂದು. ಅಷ್ಟೇ, ನಿಮಗೇ ಗೊತ್ತಿವೆಯಲ್ಲ. ನನ್ನ ಬರವಣಿಗೆಯಲ್ಲಿ ತಂತ್ರ, ಕುತಂತ್ರ ಗಿಮಿಕ್ಕುಗಳು ಇಲ್ಲವೇ ಇಲ್ಲ. ಅನುಭವಗಳನ್ನು ಸಹಜ ಸರಳ ಭಾಷೆಯೊಳಗ ಸಾಮಾನ್ಯರಿಗೆಲ್ಲ ತಿಳಿಯುಹಂಗ ಬರೀತೀನಿ. ಇನ್ನು ‘ಕಮರ್ಶಿಯಲ್ ಗಿಮಿಕ್!’ ಹಂಗಂದ್ರೇನು?
ನಿಮ್ಮ ಕತೆ ಕಾದಂಬರಿಯ ಲಚ್ಚಿ, ತುಳಜಾ, ಸೋನಿ, ಕಾಶವ್ವ, ಚಿಕ್ಕಿ ಇವರೆಲ್ಲ ನಿಮಗೆ ಈಗಲೂ ಸಿಗುತ್ತಿರುತ್ತಾರೆ. ಸಿಕ್ಕಿದ್ದರೆ ಯಾವ ರೂಪದಲ್ಲಿ? ಇವರನ್ನು ಶೋಷಿಸಿದ ಪಾತ್ರಗಳು ಯಾವ ಸೋಗಿನಲ್ಲಿ? ಇವರೆಲ್ಲರಿಂದ ಹೊಸ ವೇದಿಕೆಯಲ್ಲಿ ಹೊಸ ನಾಟಕ ನಡೆದಿರಬಹುದೆ?
ಯಾವಾಗಲೋ ಆಗೊಮ್ಮೆ ಈಗೊಮ್ಮೆ ಸಿಗುತ್ತಿರುತ್ತಾರೆ. ರೂಪ ಬದಲಾದರೂ ಅವರೆಲ್ಲರ ಕಂಪ್ಲೆಂಟ್ ಮಾತ್ರ ಒಂದೇ.. ‘ಅವ್ವಾರೇ.. ಹಿಂದೆಲ್ಲ ನಮ್ಮನ್ನ ಶೋಷಿಸೋರು ತಮ್ಮದೇ ಮಾರಿ ಹೊತ್ತು ನೇರವಾಗಿ ಬರ್ತಿದ್ದರು. ಹಂಗಾಗಿ ಅವರನ್ನು ಗುರುತು ಹಿಡಿಯೋದು ಸುಲಭಿತ್ತು. ಅದರೀಗ ರಾವಣ ರಾಮನ ಮುಖವಾಡ, ದುಶ್ಶಾಸನ ಧರ್ಮರಾಯನ ಮುಖವಾಡ ಹಾಕ್ಕೊಂಡು ಬರ್ಲಿಕತ್ತಾರ್ರಿ.. ಹಿಂಗಾಗಿ ಅವರ ಕೂನ ಹಿಡಿಯೋದೇ ಮುಶ್ಕಿಲ್ ಅಗ್ಯಾದರೀ..’
ಹೌದು. ಈಗ ಮುಖವಾಡಗಳ ಮರೆಯಲ್ಲಿ ಶೋಷಣೆಗಳು ನಡಿತ್ತಾವ. ನೋಡ್ರಿ ಸಂಧ್ಯಾ.. ಈ ಗಂಡಸರಿರುವವರೆಗೂ ಹೆಂಗಸರಿಗೆ ಶೋಷಣೆ ತಪ್ಪಿದ್ದಲ್ಲ. ಒಟ್ಟಾರೆ ಯಾವ್ಯಾವ ರೂಪದಲ್ಲೋ ಇದೆಲ್ಲ ಚಾಲ್ತಿಯಲ್ಲಿರ್ತದ ಅಂತನ್ನಿಸ್ತದ.
‘ಬದುಕು’ ನಂತರದಲ್ಲಿ ಏನಿದೆ? ಬಿಚ್ಚು ಮನಸ್ಸಿನ ಆತ್ಮಕತೆಗಳ ಬರವಣಿಗೆ ಹೆಚ್ಚು ಪ್ರಸಿದ್ಧವಾಗಿವೆ. ತಮ್ಮ ಆತ್ಮಕತೆಯ ನಿರೀಕ್ಷೆ ಮಾಡಬಹುದೆ?
ನೋಡವಾ.. ನಿರೀಕ್ಷೆ ಮಾಡೋದು ನಿಮಗ ಬಿಟ್ಟದ್ದು. ಆದರೆ ನನ್ನ ಆತ್ಮಕತೆ ಬರೆಯೋದು ನನಗ ಬಿಟ್ಟದ್ದು. ಅಲ್ಲ? ಖರೇ ಹೇಳಬೇಕಂದ್ರ ಈಗೀಗ ನನ್ನಲ್ಲಿ ಬರಿಯೋ ಉತ್ಸಾಹ ಬತ್ತಿಹೋಗ್ಯದೇನೋ ಅನ್ನಿಸ್ತದ. ಈ ಮಂಡಿನೋವು ಸ್ವಲ್ಪ ಪುರುಸೊತ್ತು ಕೊಟ್ಟ ನರಳೋದು ಬಿಟ್ಟು ಬರಿತೀನೇನೋ. ನನಗೂ ನನ್ನ ಬದುಕಿನ ಕತೆ ಬರಿಬೇಕಂತ ಆಸೆ ಅದ.
ಬದುಕು ಮತ್ತು ಬರಹ ಯಾವುದು ಹೆಚ್ಚು ತೃಪ್ತಿ ಕೊಟ್ಟಿದೆ?
ಯಾವುದೂ ಇಲ್ಲ

‍ಲೇಖಕರು avadhi

January 8, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

 1. Ganesh Shenoy

  An interesting interview. Geetha Nagabhushana seems to be an imaginative writer having an answer for every question asked of her.

  ಪ್ರತಿಕ್ರಿಯೆ
 2. ಸಂದೀಪ ನಾಯಕ

  ಗೆಳೆಯರೆ,
  ಗೀತಾ ನಾಗಭೂಷಣ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು. ಈ ಆಯ್ಕೆ ಅತ್ಯಂತ ಸೂಕ್ತ ಆಯ್ಕೆಯೇ ಸರಿ.
  ‘ಈ ಸಂತೋಷದ ಹಿನ್ನೆಲೆಯಲ್ಲಿ ಸಂಧ್ಯಾ ಅವರು ನಡೆಸಿದ ಸಂದರ್ಶನ ಇಲ್ಲಿದೆ’ ಎಂದಿದ್ದೀರಿ. ಈ ಸಂದರ್ಶನವನ್ನು ಈ ಮೊದಲು ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟಿಸಿದ ‘ ಪ್ರಜಾವಾಣಿ’ಯನ್ನು ಸ್ಮರಿಸಬಹುದಿತ್ತಲ್ಲವೆ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: