ಈಡಿಪಸ್ ಕಾಂಪ್ಲೆಕ್ಸ್ ನ ‘ಕೆಂಪು ಮುಡಿಯ ಹೆಣ್ಣು’

ಸುಮಾವೀಣಾ    

 ಕನ್ನಡದ ಪ್ರತಿಷ್ಟಿತ ಲೇಖಕರಲ್ಲಿ ಒಬ್ಬರಾಗಿರುವ ಒ. ಎಲ್. ನಾಗಭೂಷಣ ಸ್ವಾಮಿಯವರು  ಇಂಗ್ಲಿಷಿನಿಂದ  ಕನ್ನಡಕ್ಕೆ ತಂದಿರುವ ವಿಶಿಷ್ಟ ಕೃತಿ  ‘ಕೆಂಪುಮುಡಿಯ ಹೆಣ್ಣು’.  ವಿಶಿಷ್ಟ ಕಥನ ಹಾಗು ತಂತ್ರಗಾರಿಕೆಯಿಂದ  ಈ ಕೃತಿ ರಚನೆಯಾಗಿದೆ.   ಅನುವಾದಕರ ಸರಳ ಹಾಗು ನೇರ ಶೈಲಿಯಿಂದ ಈ ಕಥೆ ನಮ್ಮ  ದೇಶಿ ನೆಲದ್ದೆ. ನಮ್ಮ ಸುತ್ತ ಸುಳಿದಾಡುವ ತಿಳಿದಿರುವ ಪಾತ್ರಗಳು ಇಲ್ಲಿಯವು ಅನ್ನುವಷ್ಟರ ಮಟ್ಟಿಗೆ ಈ ಕೃತಿ ಓದುಗರನ್ನು ಓದಿಸಿಕೊಂಡು ಹೋಗುತ್ತದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ  ಓರ್ಹಾನ್ ಪಮುಖ್ ಅವರ  ‘ರೆಡ್ ಹೇರ್ಡ್ ವುಮೆನ್ ‘ಕೃತಿಯನ್ನು ಒ. ಎಲ್. ನಾಗಭೂಷಣ ಸ್ವಾಮಿ ‘ಕೆಂಪು ಮುಡಿಯ ಹೆಣ್ಣು’ ಎಂಬ ಶೀರ್ಷಿಕೆಯಲ್ಲಿ ಅನುವಾದ ಮಾಡಿದ್ದಾರೆ .  250  ರೂಗಳ ಮುಖಬೆಲೆ ಇರುವ ಕೃತಿಯನ್ನು ಬೆಂಗಳೂರಿನ ಅಭಿನವ ಪ್ರಕಾಶನದವರು  ಹೊರತಂದಿದ್ದಾರೆ.

ಫ್ರಾಯ್ಡ್ ಹೇಳಿದ  ಈಡಿಪಸ್ ಕಾಂಪ್ಲೆಕ್ಸ್, ಪರ್ಶಿಯಾದ ಐತಿಹಾಸಿಕ ರುಸ್ತುಮ್ ಹಾಗು ಸೊಹ್ರಾಬ್ನ  ಕಥೆಗಳ  ಧ್ವನಿಗಳ ತೆಕ್ಕೆಯಲ್ಲಿ ಮುಂದುವರೆಯುವ  ಈ ಕಾದಂಬರಿಯ ಕಥಾಹಂದರ ಆಧುನಿಕ ಸಮಾಜ ಹಾಗು ಪ್ರಾಚ್ಯ ಸಮಾಜಗಳನ್ನು  ಓದುಗರಿಗೆ ತೌಲನಿಕವಾಗಿ ದರ್ಶಿಸುತ್ತದೆ.

ತಾಯಿ ಮಕ್ಕಳ ಪ್ರೀತಿಯ ವಿವಿಧ ಆಯಾಮಗಳು,  ತಾಯಿ ಪ್ರೇಯಸಿ ಆಗುವ ವಿಕೃತತೆ , ‘ಪಿತೃ ಹತ್ಯೆ’ ಹಾಗು ‘ಪುತ್ರ ಹತ್ಯೆ’ ಹಾಗು ಕಥಾನಾಯಕನ ಪಾಪಪ್ರಜ್ಞೆ ಕಾದಂಬರಿಯ ಪ್ರಮುಖ ಅಂಶಗಳು.  ‘ಕೆಂಪು ಮುಡಿಯ ಹೆಣ್ಣು’ ಇಲ್ಲಿ ಕೇವಲ ಹೆಣ್ಣಲ್ಲ ಸಮಾಜಿಕರು ಕೆಲವೊಮ್ಮೆ  ನಂಬಬಹುದಾದ ಕೆಲವೊಮ್ಮೆ ನಂಬಲಾಗದ ಸಂಬಂಧಗಳ ಪ್ರತಿನಿಧಿಯಂತೆ  ಚಿತ್ರಿತಳಾಗಿದ್ದಾಳೆ.

ಅಂದ ಹಾಗೆ ಈಕೆಯ ಕೆಂಪು ಮುಡಿ ಸಹಜವಾದದ್ದಲ್ಲ  ಖ್ಯಾತ ಚಿತ್ರ ಕಲಾವಿದ ರೊಸೆಟ್ಟಿ ರಚಿಸಿದ್ದ ಕೆಂಚು ಕೂದಲುಗಳನ್ನುಳ್ಳ ಮಹಿಳೆಯ ಚಿತ್ರವನ್ನು ತಾನೂ ನೋಡಿ ತಾನೇ ತಾನಾಗಿ ತನ್ನ ಕೂದಲ ಬಣ್ಣವನ್ನು ಬದಲಿಸಿಕೊಂಡಾಕೆ.  ಕೆಂಚು ಕೂದಲು ಇಲ್ಲಿ ಸಾಂಸ್ಕೃತಿಕ  ದೃಷ್ಟಿಯ ಹಿನ್ನೆಲೆಯಲ್ಲಿ ಬಂದಿದೆ. 

ಮೂಲತಃ ಇವರು ಮೆಚ್ಚುಗೆ,ಅಸೂಯೆ,ಲೇವಡಿ,ಅಸಹ್ಯ ಪ್ರಕ್ರಿಯೆಗಳಿಗೆ ಕಾರಣರಾಗುತ್ತಾರೆ,  ಇವರು ಶೀಘ್ರಕೋಪಿಗಳು, ಕಾಮುಕರು, ಮರುಳು ಮಾಡುವಂಥವರು ,ಚಂಚಲ ಚಿತ್ತರು, ಶೀಲಗೆಟ್ಟವರು ಎಂಬೆಲ್ಲಾ ಧೋರಣೆಗಳು  ಇವರನ್ನು ಕುರಿತಹಾಗೆ ಪ್ರಚಲಿತವಾಗಿವೆ.   ಜೀವನದ ಎಲ್ಲಾ ಮಜಲುಗಳನ್ನು ಕಂಡಾಕೆ  ಕೆಂಪು ಮುಡಿಯ ಹೆಣ್ಣು  ಕಾದಂಬರಿಯಲ್ಲಿ ಬರುವ ಶ್ರೀಮತಿ ಗುಲ್ಸಿಹಾನ್ ಎಂಬ ಮಹಿಳೆ. ಕಡೆಗೆ ಮಗನ ಹಿತ ಮುಖ್ಯ ಎಂದೆನಿಸಿ ಆ ನಿಟ್ಟಿನಲ್ಲಿ ಮಗನ ಮನಸ್ಸನ್ನು ಬದಲಾವಣೆ  ಮಾಡುತ್ತಾಳೆ.  

ಸತ್ತ ಗಂಡನ ತಮ್ಮನನ್ನು ಮದುವೆಯಾಗಿ, ಕಾದಂಬರಿ ನಾಯಕ ಸೆಮ್ ನನ್ನೂ ಸೇರಿ ಒಂದೇ  ಕುಟುಂಬದ ಮೂರು ತಲೆಮಾರಿನ ಗಂಡುಗಳ ಜೀವನದಲ್ಲಿ ಪ್ರಭಾವ ಬೀರುತ್ತಾಳೆ. ಅನುವಾದಕರು ಆ ಸೂಕ್ಷ್ಮವನ್ನು ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾತ್ವಿಕ, ನೈತಿಕ ಚಿಂತನೆಯನ್ನು ಒಳಗೊಂಡಿರುವ ಈ   ಕಾದಂಬರಿ ಪರಂಪರೆ  ಪಾಶ್ಚಿಮಾತ್ಯದೇಶದ ಕತೆಯಿಂದ   ಆರಂಭವಾಗುತ್ತದೆ. ಕಾಲ್ಪನಿಕ ಕಥೆಗಳ ಮೂಲಕ ತನ್ನ ಸಮಾಜದ ನೈತಿಕ, ರಾಜಕೀಯ, ಧಾರ್ಮಿಕ ಇತ್ಯಾದಿ ಸಂಗತಿಗಳ  ವಿಮರ್ಶೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಕ್ರಿ.ಶ. 1500 ರಲ್ಲಿ ಪಿಂಗಳಸೂರಿಯು ತೆಲುಗಿನಲ್ಲಿ ಬರೆದ ‘ಕಲಾಪೂರ್ಣೋದಯಂ’ ಎಂಬ ಕಾದಂಬರಿ ಸ್ವರೂಪದ ಕಾವ್ಯ  ಸಂಪೂರ್ಣ  ಕಾಲ್ಪನಿಕ ಕಥೆಯ ಮೂಲಕ ತಾತ್ವಿಕ ಪ್ರಮೇಯಗಳನ್ನು ಮಂಡಿಸುವ   ಹಾಗೆ  ಈ ಕೃತಿಯೂ ಇದೆ.

ಟರ್ಕಿಯ ದಂಗೆಯ ನಂತರ  ಪ್ರಜಾಪ್ರಭುತ್ವ  ನೆಲೆಗೊಳ್ಳುವ  ಸಂಧಿ ಕಾಲದಲ್ಲಿ   ಕಾದಂಬರಿಯ ಕತೆ ಭೂತಕಾಲದ ಘಟನೆಗಳನ್ನು ವರ್ತಮಾನದಲ್ಲೂ  ಓದುಗರ ಮನಸ್ಸಿನಲ್ಲಿ ತಲ್ಲಣಗಳನ್ನು ಸೃಷ್ಟಿಸುವಂತಿದೆ.  ಬಾವಿ ತೋಡುವ  ಉಸ್ತಾದ್  ಮೊಹಮದ್ ಮತ್ತವನ ಕೈಯ್ಯಾಳುಗಳ ಜೊತೆಗೆ  ಕಾದಂಬರಿ ತೆರೆದುಕೊಳ್ಳುತ್ತದೆ. ಹಿಂದೆ ಬಾವಿಯನ್ನು ಹೇಗೆತೋಡುತ್ತಿದ್ದರು ಬಾವಿ ಮಣ್ಣು ಕುಸಿಯದಂತೆ ಕಾಂಕ್ರೀಟ್ ಹಾಕುವುದು.

ಬಾವಿಯಲ್ಲಿ ಇಳಿಯುವ ಮೊದಲು ಬಕೆಟಿನಲ್ಲಿ ಕ್ಯಾಂಡಲ್ ಹೊತ್ತಿಸಿ ಕೆಳಕ್ಕೆ ಬಿಡುವುದು, ಅದು ಉರಿಯುತ್ತಿದ್ದಲ್ಲಿ ಅಲ್ಲಿ ವಿಷ ಗಾಳಿ ಇಲ್ಲವೆಂದು ಖಾತ್ರಿ ಮಾಡಿಕೊಂಡು ತಾವೂ ಇಳಿಯುವುದು ಆಗಿನವರ ಜ್ಞಾನಕ್ಕೆ ಹಿಡಿದ  ಕೈಗನ್ನಡಿಯಾಗಿದೆ.

ಹಳ್ಳಿಯಿಂದ ಬದುಕು ನಗರಕ್ಕೆ ಸ್ಥಿತ್ಯಂತರವಾದದ್ದನ್ನೂ ನಾವಿಲ್ಲಿ ಕಾಣಬಹುದು.  ಇಲ್ಲಿ ಪಾಶ್ಚಿಮಾತ್ಯದ  ‘ಈಡಿಪಸ್’ ಹಾಗು ಪೌರ್ವಾತ್ಯದ ‘ರುಸ್ತಮ್’ ತಂದೆ ಮಕ್ಕಳ ಕಥೆಗಳ ನಡುವೆ ಇಸ್ತಾಂಬುಲ್ನ ತರುಣ ನಾಯಕನ ಇರುವಿಕೆಯಿದೆ.  ಈತ ಕಾದಂಬರಿಯಲ್ಲಿ ಉಸ್ತಾದ್ ಮೊಹಮದನಿಂದ “ಜೆಂಟಲ್ಮ್ಯಾನ್” ಎಂದೇ ಕರೆಸಿಕೊಂಡಿದ್ದ.

ಆತ ಅನುಭವಿಸುವ ತಲ್ಲಣ, ತಂದೆ ವಿಚಾರದ ನೋವು , ತಾಯಿಯ ಆಶಯಗಳು, ಒಂದು ಕಾಲಕ್ಕೆ ಶ್ರೀಮಂತ ತಂದೆಯ ಮಗನಾದರೂ ಆತ ಜೈಲು ಕಂಡ ಬಳಿಕ ಹಣಕ್ಕೆ ಪರಿಪಾಟಲು ಪಡುವ ಬಗೆ, ಉಸ್ತಾದನಲ್ಲಿ ತನ್ನ ತಂದೆಯನ್ನು ಕಾಣುವುದು. ತಾಯಿಯ ಹಾಗೆ ಇರಬೇಕಾದವಳು ಪ್ರೇಯಸಿಯಾಗುವುದು. ಅವಳ ಕಾರಣಕ್ಕೆ ಅವನಮ್ಮ  ತಂದೆಯಲ್ಲಿ ನಡೆಸಿದ ವಾಗ್ಯುದ್ಧ, ಆತನನ್ನು ಚಿಂತೆಯಲ್ಲಿ ಮುಳುಗಿಸುತ್ತದೆ.

ಕಥಾ ನಾಯಕ ಸೆಮ್  ಅಮ್ಮನನ್ನು  ಓಲೈಸಿ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಬಾವಿ ತೋಡುವ ಕೆಲಸಕ್ಕೆ  ತನ್ನ ದೊಡ್ಡಪ್ಪನ ಮೂಲಕ ಬರುತ್ತಾನೆ ಹಾಗೆ ಶ್ರಮ ಪಡುತ್ತಾನೆ.  ಬಾವಿ ತೋಡಲು ಆರಂಬಿಸಿದಾಗ ಆತನ ಕೈಗಳಲ್ಲಿ ಬೊಬ್ಬೆಗಳು ಏಳುತ್ತವೆ ಕ್ರಮೇಣ  ಮುಂದಿನ ಗುರಿ  ಸ್ಪಷ್ಟವಾಗಿದ್ದ ಕಾರಣ ಆ ಕೆಲಸಕ್ಕೆ ಹೊಂದಿಕೊಳ್ಳುತ್ತಾನೆ. ಜೊತೆಗೆ ಬಾವಿಯ ಮಾಲೀಕ ಹೆಯರಿ ಬೇ ಕೊಡಬಹುದಾದ ಉಡುಗೊರೆಗಳ ಬಗ್ಗೆ  ಬಹು ನಿರೀಕ್ಷೆಯಿಡುತ್ತಾನೆ .

ಬಾವಿಯಲ್ಲಿ ನೀರು ಸಿಗದಾಗ  ಆತ ಉತ್ಸಾಹ ಕಳೆದುಕೊಳ್ಳುತ್ತಾನೆ.  ತನ್ನ ತಂದೆ ಹಾಗು ಬಾವಿ ತೋಡುವ ಮೇಸ್ತ್ರಿ ಉಸ್ತಾದ ಮೊಹಮ್ಮದ್  ಇವರೀರ್ವರ ನಡುವೆ ಕೆಲವೊಮ್ಮೆ ಸಾಮ್ಯವನ್ನು ಕಂಡರೂ ಕೆಲವೊಮ್ಮೆ ಅಪ್ಪ ಗುಟ್ಟು ಮಾಡುತ್ತಿದ್ದ ಎಲ್ಲವನ್ನು ನೇರವಾಗಿ ಹೇಳುತ್ತಿರಲಿಲ್ಲ   ಆದರೆ ಈತ ಮನಸ್ಸು ಬಿಚ್ಚಿ ಮಾತನಾಡುತ್ತಾನೆ  ಎಂದೇ ಅವನಿಗೆ ಹೊಂದಿಕೊಳ್ಳುತ್ತಾನೆ.

 ಬಾವಿ ತೊಡುವ  ಕೆಲಸಕ್ಕೆ ಸಲಕರಣೆಗಳನ್ನು ಖರೀದಿಸಿ ಕುದುರೆ ಗಾಡಿಯಲ್ಲಿ ತುಂಬಿಸಿಕೊಂಡು ಹೋಗುವ ಪ್ರಯಾಣ ಈತನ ಬದುಕಿನ  ದಿಕ್ಕನ್ನು ಅಲುಗಿಸಿದ್ದು ಹೌದು. ಅಲ್ಲೊಂದು ತೆರೆದ ಬಾಗಿಲು ಅಲ್ಲಿ ಕಂಡ ಕೆಂಪು ಮುಡಿಯ ಹೆಂಗಸು  ಆಕೆಯ ಮೃದುವಾದ, ಸವಿಯಾದ ನಗು.   ಆಕೆಯನ್ನು ಮನಸ್ಸಿನ ಲ್ಲಿ  ಆಪ್ತವಾಗಿಸಿಕೊಂಡ  ಕ್ಷಣ ಕಾದಂಬರಿಯ ಮೇಲೆ ತನ್ನ ಛಾಯೆಯನ್ನು ಉಳಿಸಿದೆ.

ನಮ್ಮ ‘ಗರುಡ ಹಾಗು ಕಾಲನ’ ಕಥೆಯಲ್ಲಿ ಯಮನಿಂದ ಗುಬ್ಬಿಹೇಗೆ ತಪ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲವೋ  ಅಂತೆಯೇ ಇಲ್ಲಿ ವಿಧಿ ಎಂತಹವರನ್ನೂ ಬಿಡುವುದಿಲ್ಲ  ಎನ್ನುವಂತೆ  “ಢ್ರೀಮ್ಸ್ ಆ್ಯಂಡ್ ಲೈಫ್ “ಎಂಬ ಕಥಾ ಸಂಕಲನದ ಕಥೆಯ ಸಾವಿನ ದೇವತೆ ‘ಅಝರೆಲ್ನ’ ಸನ್ನಿವೇಶ ಬರುತ್ತದೆ. ಇವೆಲ್ಲವೂ  “ ಬಿಧಿ ಸಮಕಟ್ಟಿಕೊಟ್ಟೊಡೆ ವಿಧಿಯಂ ಕಿಡಿಸಲ್ ಕುಡಿಸಲ್ ಸಮರ್ಥರಾರ್” ಎಂಬ ಪಂಪನ  ಮಾತುಗಳನ್ನು ನೆನಪಿಗೆ ತರುತ್ತವೆ.

ಊರು ಬಿಡುವ ಮಾತು ಕಾದಂಬರಿಯ ಮೊದಲಲ್ಲಿ ಸಹಜವಾಗಿ ಬಂದರೆ ಅಂತ್ಯದಲ್ಲಿ ಪ್ರತಿಮೆಯಾಗಿ ಬರುತ್ತದೆ.   ಜೀವನ ಒಂದು ನಾಟಕ ಶಾಲೆ ಎಂಬಂತೆ   ನಡೆಯುವ ಪ್ರತೀ ಸನ್ನಿವೇಶಗಳು ನಾಟಕದ ಸನ್ನಿವೇಶಗಳಂತೆ ಮರೆಯಾಗಿ ಮರಳಿ ಇನ್ನೊಂದು ಸನ್ನಿವೇಶಕ್ಕೆ ತೆರೆದುಕೊಂಡು ನಿರಂತರತೆಯನ್ನು  ಕಾಪಾಡಿಕೊಳ್ಳುತ್ತದೆ.  

ಬಾವಿಯಲ್ಲಿ ನೀರು ಸಿಗುತ್ತದೆ ಎಂಬುದು ಉಸ್ತಾದನ ವಾದ ಅವನು ತೋಡುತ್ತಿರುವ ಬಾವಿಯಿಂದ ಮಾತನಾಡುವ ಮಾತುಗಳು  ರಾಕ್ಷಸ ಜೀನ್ಗಳಿಗೆ ಹುಟ್ಟಿದ  ಯಾವುದೋ ಜೀವಿ ಪಾತಾಳ ಲೋಕದಿಂದ ಅರಚುತ್ತಿವೆಯೆನೋ ಎಂಬಂತೆ ಕಾದಂಬರಿಯ ನಾಯಕನಿಗೆ ಭಾಸವಾಗುತ್ತವೆ.  “ತಾನು ಕೆಂಪು ಮುಡಿಯ ಹೆಂಗಸಿನ ಸಹವಾಸ ಮಾಡಿದ್ದು ತಪ್ಪು”  ಎಂದು ತಿಳಿದರೆ ಉಸ್ತಾದ್ ಏನೆನ್ನುತ್ತಾನೋ ಎಂಬ ಭಯವೂ ಇರುತ್ತದೆ . ಆ ಸಂಕ್ಷೋಬೆಯಿಂದಲೇ ಕೆಲಸ ಮಾಡುವಾಗ ಬಕೆಟ್ ಜಾರಿ ಬಿದ್ದಾಗ ಸೆಮ್ ಹೊರಬಂದು ಯಾರನ್ನದರೂ ಸಹಾಯ ಕೇಳ ಬಯಸಿದರು ಅದು ಸಫಲವಾಗುವುದಿಲ್ಲ.

ಆತ  ನಾಟಕ ನೋಡಲು ಹೋಗುತ್ತಿದ್ದ ಟೆಂಟ್ ಹರಿದ ಟಿಕೇಟ್ಗಳನ್ನು ಮಾತ್ರವೇ ಉಳಿಸಿ ಇನ್ನಿಲ್ಲವಾಗಿರುತ್ತದೆ.  ಕೇವಲ ನಿಮಿಷಗಳ ಅಂತರದಲ್ಲಿ  ಕೆಲವು ದಿನಗಳ ಬದುಕಿಗೆ ವಿದಾಯ ಹೇಳಿ ತನ್ನ ಲಗೇಜ್ ತುಂಬಿಸಿ ಹೊರಡುತ್ತಾನೆ.  ತಾಯಿಯನ್ನು  ನೋಡಿದ  ,ಮೇಲೆಯೂ ಆಕೆಯ ಇರುವು ಧೈರ್ಯ ತುಂಬಿಸಿದರೂ ಒಬ್ಬನೆ ಇದ್ದಾಗ ಬಾವಿಯಲ್ಲಿ ಬಿದ್ದ ಉಸ್ತಾದ ಏನಾಗಿರಬಹುದು?   

ಪೋಲೀಸರು ಈ ದಿನ ಬರಬಹು! ನಾಳೆ ಬರಬಹುದು!  ಇಂದಿನ ಸ್ವಾತಂತ್ರ್ಯದ ಬದುಕು ಇಲ್ಲಿಗೆ ಕೊನೆಯಾಗಬಹುದು! ಕೊಲೆ ಆಪಾದನೆ ಮೇಲೆ ಪೋಲಿಸರು ತನ್ನಸ್ವಚ್ಛಂದ ಬದುಕಿನಲ್ಲಿ ಪ್ರವೇಶ ಪಡೆಯಬಹುದು ಎಂಬ  ಆತಂಕದಲ್ಲಿ ಕಳೆಯುತ್ತಾನೆ. ಬೇರೆಯವರಲ್ಲಿ ಹೇಳಿ ಸುಖವಿಲ್ಲ  ಹಾಗು ಅಪಾಯವೆಂದು ಆ ನೋವನ್ನು ತಾನೊಬ್ಬನೆ ಅನುಭವಿಸುತ್ತಾನೆ.

 ಓರಗೆಯವರು ಸಿಕ್ಕಾಗ ನನ್ನ ಚಿಕ್ಕಮ್ಮನ ಗಂಡ  ಕನ್ಸಟ್ರ್ಕ್ಷನ್ ಬ್ಯುಸಿನೆಸಿನಲ್ಲಿ  ಕೆಲಸ ಕೊಡಿಸಿದ್ದ ಎಂದು ಹೇಳಿ ತನ್ನ ಘನತೆಯನ್ನು ಕಾಪಾಡಿಕೊಳ್ಳುತ್ತಾನೆ.  ಓದಿನಲ್ಲಿ ಅಪಾರ ಆಸಕ್ತಿ ಹೊಂದಿದ ಕಥಾನಾಯಕ ಅಧ್ಯಯನ ನಿರತನಾದಾಗ “ನಾನು ಪಕ್ಕ ಕುಡುಮಿಯಾದೆ” ಅಂದರೆ ಎಲ್ಲವನ್ನು ಬಾಯಿಪಾಠ ಮಾಡುತ್ತಿದ್ದೆ ಎಂದು ಹೇಳುತ್ತಾನೆ ಅಂದರೆ ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೆ ಏರಬೇಕೆಂಬ ಕನಸನ್ನು ಹೊಂದಿದ್ದ ಎನ್ನುವುದು  ಇದರಿಂದ ಅರ್ಥವಾಗುತ್ತದೆ.  

1987ರಲ್ಲಿ ಸಿಇಟಿ ಬರೆದು 5ನೆಯ ರ್ಯಾಂಕ್ ಪಡೆದು ಇಸ್ತಾಂಬುಲ್ನ ಟೆಕ್ನಿಕಲ್ ಯೂನಿವರ್ಸಇಟಿಯಲ್ಲಿ  ಜಿಯಾಜಲಿ ಇಂಜಿನಯರ್ ವ್ಯಾಸಂಗಕ್ಕೆ ಸೇರಿ ಸಫಲನೂ ಆಗುತ್ತಾನೆ.  ಓದುವ ಹವ್ಯಾಸ ಹೊಂದಿದ್ದ  ಈತ ತನ್ನ ಪತ್ನಿಗೆ ಆಕೆ ಪ್ರೇಯಸಿಯಾಗಿದ್ದಾಗ  ‘ಕರಮಝೋಮ್’ ಕಾದಂಬರಿಯನ್ನು ಕೊಡುತ್ತಾನೆ.  ಒಂದೊಮ್ಮೆ ಅವಳನ್ನೂ ಅಡ್ಡದಾರಿಗೆ ತರಲು ಯತ್ನಿಸಿದರೂ ಆಕೆ ಸಂಪ್ರದಾಯ ಮನೆತನದ ಹೆಣ್ಣಾದ್ದರಿಂದ ಸಂಯಮ ಕಳೆದುಕೊಳ್ಳುವುದಿಲ್ಲ.    

ಓದಿನ ನಂತರ ಟರ್ಕಿ,ಉಕ್ರೇನ್, ಅರಬ್ ದೇಶಗಳಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು   ಸಂಭಾವಿತ ಬದುಕನ್ನು ಬದುಕುತ್ತಾನೆ. ಅವರ ಬದುಕಿನ ಕೊರತೆ ಎಂದರೆ  ಅವರಿಬ್ಬರಿಗೆ ಮಕ್ಕಳು ಇಲ್ಲದೆ ಇರುವುದು. ಆದು ಸಮಸ್ಯೆಯಾಗಬಾರದೆಂದು  ಆಕೆಯಲ್ಲಿ ಸುದೀರ್ಘ ಚರ್ಚೆಯನ್ನು ನಡೆಸುವುದು . ಸೊಹ್ರಾಬ್ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಮಾಡುತ್ತಾನೆ.

ಅದರೆ ಆ ಕಂಪೆನಿಯ ಪ್ರಚಾರಕ್ಕೆ ಜಾಹಿರಾತಿನಲ್ಲಿ ದಂಪತಿಗಳು ಕಾಣಿಸಿಕೊಂಡು ಟೀಕೆಗೆ ಗುರಿಯಾಗುವುದು ಅಗುತ್ತದೆ. ಒಂದು ಪ್ರಶಂಸೆಯ ವಿಚಾರ ಎಂದರೆ ಎಲ್ಲೂ ಶ್ರೀಮಂತಿಕೆಯನ್ನು ಪ್ರದರ್ಶಿಸದೆ ಸಾಮಾನ್ಯ ಬದುಕನ್ನು ಬದುಕುತ್ತಿದ್ದುದು.

 ಕಾಲದ ತೆಕ್ಕೆಯಲ್ಲಿ ಆಗುವ ಎಲ್ಲಾ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ತಕ್ಕಂತೆ ಹೊಂದಿಕೊಳ್ಳಲು ಬಯಸಿದರು ‘ಕೆಂಪು ಮುಡಿಯ ಹೆಣ್ಣಿ’ನ  ಸೆಳೆತ  ಕಾದಂಬರಿಯ ನಾಯಕನಿಗೆ ಇದ್ದೇ ಇರುತ್ತದೆ. ಇಟಲಿಯ  ಕಾದಂಬರಿಕಾರ,ಚಿತ್ರಕಾರ ಚಲನಚಿತ್ರ ನಿರ್ದೇಶಕ ಪಿಯರ್  ಪಸೊಲೊನಿಯ ಚಿತ್ರದ ಸುಂದರಿಯ  ತಲೆಗೂದಲು  ಆಕೆಯ  ಹಾವಭಾವಗಳನ್ನು ನೋಡಿ ಅದನ್ನು ಮತ್ತೆ  ಕ್ಯಾಸೆಟ್ನ ರೂಪದಲ್ಲಿ ನೋಡುವ ಬಯಕೆ  ಸೆಮ್ ನಲ್ಲಿ ಬರುತ್ತದೆ.  ಅಂದರೆ ಸುಪ್ತಮನಸ್ಸಿನ ನಾಯಕಿಯಾಗೆ  ಕೆಂಪು ಮುಡಿಯ ಹೆಣ್ಣು  ಸೆಮ್ನನ್ನು ಕಾಡುತ್ತಿರುತ್ತಾಳೆ.

ಎಡಪಂಥೀಯ ಧೋರಣೆಗಳು  ಇಷ್ಟವಾಗದೆ ಇದ್ದರೂ ಅಪ್ಪ ಎನ್ನುವ ಕಾರಣಕ್ಕೆ ಮತ್ತೆ ಆತನ ಎರಡನೆ ಹೆಂಡತಿಯ ಮೇಲ್ ನೋಡಿ ಅಪ್ಪನಲ್ಲಿಗೆ ಹೊಗುವುದು. ಅಲ್ಲಿ ಅಪ್ಪನ ಜೊತೆಗೆ ಮಾತನಾಡುವಾಗ 1986 ರಲ್ಲಿ “ನಾನು ಬಾವಿ ತೋಡುವ ಕೆಲಸಕ್ಕೆ ಸೇರಿಕೊಂಡೆ” ಎನ್ನುವುದು ಆತನ ಪತ್ನಿ ಆಯೆಷಾಗೆ ಆತನ ಕಷ್ಟವನ್ನು ನೆನಪಿಗೆ ತರಿಸಿದರೆ ತಂದೆಗೆ ಬಿಟ್ಟು ಹೋದ ಕರ್ತವ್ಯ ಪ್ರಜ್ಞೆಯನ್ನು ನೆನಪಿಗೆ ತರಿಸುತ್ತದೆ. 

ಆತ ಸತ್ತಾಗ ಕೂಡ  ಹೋಗಿ ಸತ್ತ ಅಪ್ಪನ ತೋಳ್ತೆಕ್ಕೆಯಲ್ಲಿ ಮಲಗಿ “ಅಪ್ಪನ ವಾಸನೆ ಹಾಗೆ ಇದೆ” ಎಂದು ಅದನ್ನು ಮಗನಾಗಿ ಅನುಭವಿಸುವ  ಸಂದರ್ಭ  ರಕ್ತ ಸಂಬಂಧದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.  ಶವಸಂಸ್ಕಾರದಲ್ಲಿ ಆಪ್ತರು, ಬಿಸಿನೆಸ್ನವರು ಮತ್ತೆ ಅಪ್ಪನ ಎಡಪಂಥೀಯ  ಸ್ನೇಹಿತರು ಬರುವುದು ಯಾವ ವರ್ಗದ ಜನರಿಗೆ ಯಾವ ರೀತಿಯ ಆದ್ಯತೆ ಇರುವುದನ್ನು ಅರ್ಥ ಮಾಡಿಸುತ್ತದೆ.  ತಾನು ಇದ್ದ ಜಾಗವನ್ನು ತಾನೆ ಖರೀದಿಸಬೆಕೆಂಬ ಹಂಬಲದಿಂದ ಅಲ್ಲಿ ಪಾರ್ಟಿಯನ್ನು ಆಯೋಜನೆ ಮಾಡುವುದು ಆತನ ಸಾವಿಗೆ ವೇದಿಕೆಯಾಗುತ್ತದೆ ಎಂದರೆ ತಪ್ಪಿಲ್ಲ. 

ಕಾದಂಬರಿಯ ನಾಯಕನಿಗೆ ಬರುವ ಅನಾಮಧೇಯ ಕಾಗದದಿಂದ  ಕಾದಂಬರಿ ಬಿರುಸು ಪಡೆದುಕೊಳ್ಳುತ್ತದೆ . ಕೆಂಪು ಮುಡಿಯ ಪ್ರೇಯಸಿಯ ಮಗನೆ ನನ್ನ ಮಗನು ಎಂದಾಗ ,ಆತನ ಹೆಂಡತಿ ಪ್ರತಿಕ್ರಿಯಿಸುವ ರೀತಿ  ಆಕೆಯ ಭಾವನೆಗಳು ನಿರ್ಲಿಪ್ತ ಅನ್ನಿಸಿದರೂ ಆಗಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ವಾಸ್ತವವನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ಅರಿವು ಮಾಡಿಸುತ್ತದೆಯೇ ವಿನಃ ಒಪ್ಪಿಕೊಳ್ಳಲೇ ಬೇಕೆಂಬ ನಿಯಮವನ್ನಲ್ಲ ಎಂದು ನನ್ನ ಅನಿಸಿಕೆ.

ಸೆಮ್ ನ ಮಗ ಅನ್ವರ್  ವಿಶ್ವವಿದ್ಯಾನಿಲಯದಲ್ಲಿ  ಸಾಧಾರಣ ಉದ್ಯೋಗವನ್ನು ಹೊಂದಿರುತ್ತಾನೆ. ಬದುಕಿನ  ಕಡೆಯ ದಿನಗಳ ಬಗ್ಗೆ ಯೋಚಿಸಿದಾಗ ಕೆಂಪು ಮುಡಿಯವಳಿಗೆ  ಮಗನ ವಿಚಿತ್ರ ವೇಷಭೂಷಣ, ವಿಚಿತ್ರ ನಡವಳಿಕೆಯನ್ನು ಸಹಿಸುವುದು ಮಗನನ್ನು ತಂದೆಯನ್ನು ಒಪ್ಪಿಕೊಳ್ಳುವಂತೆ ಮಾಡುವುದು ಅದಕ್ಕಾಗಿ ಸಿಡುಕುವುದು. ನಿನಗೆ ಖಾತ್ರಿಯಿದೆಯಾ? ಎಂದು ಮಗ ಕೇಳಿದಾಗ ಹೌದು! ಎನ್ನುವ ಸನ್ನಿವೇಶಗಳು  ಮತ್ತು ಅವರಿಬ್ಬರು ಸಹಜತೆಗೆ ಹಿಂದಿರುಗುವುದು ಓದುಗರನ್ನು ಮರುಕಕ್ಕೂ  ಅಸಮಾಧಾನಕ್ಕೂ ದೂಡುತ್ತವೆ.   

ಅನ್ವರ್ ಮಗನೆಂದು ಗೊತ್ತಾದಾಗ ಸೆಮ್ನಲ್ಲಿ  ಉಂಟಾಗುವ ಅನಿಸಿಕೆಗಳು ಸಹಜ ಅನ್ನಿಸುತ್ತವೆ. ತನ್ನ ಮಗನೆ ಅಕಸ್ಮಿಕವಾಗಿ ತಂದೆಯನ್ನು ಕೊಂದಿರಬಹುದು  ಎಂದಾಗ ಶ್ರೀಮತಿ ಗುಲ್ಸಿಹಾನ್ಗೆ  ಅಂದರೆ ಕೆಂಪು ಮುಡಿಯ ಹೆಣ್ಣಿಗೆ ನಾಟಕದ ಸ್ಟೇಜಿನ ಮೆಲೆ ಹೋಗಿ ತಬ್ಬಿಕೊಂಡಂತೆ ತಬ್ಬಿ ಎಲ್ಲರಿಗೂ ಕೇಳಿಸುವಂತೆ ಅಳಬೇಕು ಅನ್ನಿಸುವುದು.  ಮಾಜೀ ರಂಗ ನಟಿ, ಧ್ವನಿಕಲಾವಿದೆ, ಮಗನೇ ತಂದೆಯನ್ನು ಕೊಂದುದಕ್ಕೆ ಸಾಕ್ಷಿಯಾಗಬೇಕಾದ ದಯನೀಯ ಸ್ಥಿತಿ ಈ ಕಾದಂಬರಿಯಲ್ಲಿದೆ.,

 ನಾಟಕದಲ್ಲಿ ಕೇಳಿ ಬರುವ “ಜರ್ನಿ ಟು ದಿ ಅರ್ಥ್ “ಎನ್ನುವ ಮಾತು ಇಲ್ಲಿ ಧ್ವನಿ ಪೂರ್ಣವಾಗಿ ಬಂದಿದೆ.  ಇಲ್ಲಿ ಪ್ರಾರಂಭ ಹಾಗು ಅಂತ್ಯಗಳಲ್ಲಿ ಹೋಲಿಕೆ ತರುವ  ತಂತ್ರಗಾರಿಕೆ ಕಾದಂಬರಿಯ ಸೊಬಗನ್ನು ಹೆಚ್ಚಿಸಿದೆ.  ಅಂದರೆ ಕಾದಂಬರಿಯ ಪ್ರಾರಂಭಕ್ಕೆ ಬರುವ ಸನ್ನಿವೇಶಗಳು ಕಡೆಗೂ ಬಂದು ನಡುವೆ ಕಾದಂಬರಿ ವಿಕಾಸವಾಗುತ್ತಾ ಹೋಗುತ್ತದೆ. ಅಂಥ ಸನ್ನಿವೇಶಗಳನ್ನು  ಉಲ್ಲೇಖ ಕೆಳಗಿನಂತಿದೆ.

 1.ನಾಯಕನ ಅಪ್ಪ- ಅಮ್ಮನ ನಡುವೆ ಪ್ರವೇಶವಾಗಿದ್ದ ಕೆಂಪು ಮುಡಿಯ ಹೆಣ್ಣಿನಿಂದ ಪ್ರಾರಂಭವಾದ ಕಾದಂಬರಿ ಆಕೆಯಿಂದಲೆ ಕೊನೆಗೊಳ್ಳುತ್ತದೆ. 

2.ಕಾದಂಬರಿಯ ನಾಯಕ  ಸೆಮ್ ಸಾಹಿತಿಯಾಗಬೇಕೆಂಬ ಕನಸನ್ನು ಹೊಂದಿರುತ್ತಾನೆ  ಅಲ್ಲಿ ಆತನ ತಾಯಿ ವಿಷಾದದ ನಗೆಯಿಂದ ತಿರಸ್ಕರಿಸುತ್ತಾಳೆ. ಕಾದಂಬರಿಯ ಅಂತ್ಯಕ್ಕೆ ಅವನ ಮಗ  ಅನ್ವರ್ ಕಾದಂಬರಿ ಬರಹನಾಗುವ ಸನ್ನಿವೇಶ ಬಂದಾಗ ಅವನ ತಾಯಿ  ಗುಲ್ಸಿಹಾನ್ ಅದನ್ನು ಕಣ್ಣೀರಿನಿಂದ ಸ್ವಾಗತಿಸುತ್ತಾಳೆ. 

3. ಸೆಮ್ ಸ್ಟೇಷನ್ ಚೌಕದಲ್ಲಿ ಆಕಾಶದನೀಲಿ ಬಣ್ಣದ ಜೀನ್ಸನ್ನು ತೊಟ್ಟ ಕೆಂಫುಮುಡಿಯವಳನ್ನು   ಮೊದಲು ನೋಡಿದ್ದು ಕಾದಂಬರಿಯ ಅಂತ್ಯದಲ್ಲೂ ಅದೇ ಬಣ್ಣದ ಉಡುಪಿನಿಂದ ನೋಡುವುದು.

4. ಹೆಣ್ಣಿನ ಪರಿಚಯಕ್ಕೆ   ಮೊದಲಿಗೆ ಮಾರ್ಗವಾದದ್ದು  ಟೆಂಟ್ ಕಡೆಗೆ ಸೊಹ್ರಾಬ್ನ ಪಾರ್ಟಿಯಲ್ಲಿ  ಅದೇ ಟೆಂಟ್ ಎಂಬ ಪರಿಭಾಷೆ ರಂಗ ಮಂದಿರವಾಗಿ   ಸ್ಥಾಪನೆ  ಆಗಬೇಕೆನ್ನುವ  ಆಶಯ ಅಭಿಪ್ರಾಯದ ರೀತಿಯಲ್ಲಿ ಮೂಡಿದೆ. 

 5.ಬಾವಿಯ ಸ್ಥಳದಿಂದ ಕಾಲ್ತೆಗೆಯುವಾಗ ಅಂಗಾತ ಮಲಗಿದ್ದ ಆಮೆಯ ವಿಚಾರ  ನಂತರವೂ ಬರುತ್ತದೆ.

6.ರೊಸೆಟ್ಟಿ ರಚಿಸಿದ ಕೆಂಪು ಮುಡಿಯ ಚಿತ್ರ ಕಾದಂಬರಿಯಲ್ಲಿ   ಮೂರುಬಾರಿ ಬಂದು ತನ್ನ   ಬಲವಾದ ಅಸ್ತಿತ್ವ ಅಥವಾ ಕಾದಂಬರಿಯ ಜೀವಾಳವನ್ನು ಸಾಬೀತು ಮಾಡುತ್ತದೆ.

  “ಕೆಂಪು ಮುಡಿಯ ಹೆಣ್ಣನ್ನು  ಬಯಸಿ ತಪ್ಪು ಮಾಡಿದ್ದೇನೆ” ಎಂಬ  ಭ್ರಮೆಯಲ್ಲಿ  ನಾಯಕನನ್ನು ಸಿಲುಕಿಸುತ್ತದೆ. . ಕಡೆಗೆ ಅದರಿಂದ ಹೊರಬರಲಾರದೆ  ಆಸೆಗಳನ್ನು ಆತಂಕಗಳನ್ನು  ತನ್ನ  ಮನಸ್ಸೆಂಬ ಬಾವಿಯೊಳಗೆ ಹಾಕುತ್ತಾನೆ. ಅಂತ್ಯದಲ್ಲಿ ನಿಜವಾಗಿಯೂ ತಾನೆ ತೋಡಿದ ಬಾವಿಗೆ ತಾನೆ ಬೀಳುತ್ತಾನೆ.  

ಹಳೆಯ ನೆನಪುಗಳು ಸೆಮ್ನ ಮನಸ್ಸಿನಾಳದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಕಾದಂಬರಿಯ  ಆರಂಭ ಮತ್ತು ಮುಕ್ತಾಯದಲ್ಲಿ ಸಮೀಕರಣವಾಗುವ ಸನ್ನಿವೇಶಗಳು ಕಾದಂಬರಿಯ ವಿಶೇಷತೆಯಾಗಿದೆ ಇದು ಮೂಲ ಲೇಖಕರ  ಬರೆಹದ ಶೈಲಿಯನ್ನು ಪರಿಚಯಿಸುತ್ತದೆ. 

ಒಂಗೊರೆನ್, ಇಸ್ತಾಂಬುಲ್, ಸ್ಕೂಲ್, ಬೆಶಿಕ್ತಶ್,  ಕಾಫಿ ಶಾಪ್,  ರಿಕ್ಕಿ,ಸೈಪ್ರಸ್, ಹೊಟೇಲ್, ಪೈನ್ ಮರಗಳ  ಸಾಲು. ಅಪಾರ್ಟ್ಮೆಂಟ್,ಬ್ಯಾಂಕ್,ವಿಮಾನ,ಫ್ಯಾಕ್ಟರಿ, ಕಾಂಪೌಂಡು, ಡೇನಿಯರ್ಸ್ಲೇನ್,ರುಮೇಲಿಯನ್ ಕಾಫಿ ಹೌಸ್ ಅಟಾರ್ಟರ್ಕನ ಪ್ರತಿಮೆ,ಡ್ರಿಂಕ್ಸ್,ಸ್ಯಾನ್ವಿಚ್, ಮೀಟಿಂಗ್ ,ಮೊಹೊಲ್ಲಾ ಚೌಕ,ಸ್ಟೇಷನ್  ಮೊದಲಾದ ಪದಗಳು ಕಾದಂಬರಿಯ ನಿರಂತರತೆಗೆ ಸಾಕ್ಷಿಯಾಗಿವೆ.

ಆರಂಭಕ್ಕೆ ಟರ್ಗೇ, ಅಂತ್ಯಕ್ಕೆ ನಿಕಾಟಿ,ಮಿಸ್ಟರ್ ಸಿರ್ರಿ ಎಂಬ  ಎರಡು ಪಾತ್ರಗಳು  ಬಂದು ಕಾದಂಬರಿಯ ಪ್ರಮುಖ ತಿರುವಿಗೆ  ಕಾರಣವಾಗಿವೆ.  ಇನ್ನು ಕಾದಂಬರಿಯಲ್ಲಿ ನಾವು ಮರುಕ ಪಡಬೇಕಾಗಿರುವುದು ಸೆಮ್ನ ತಾಯಿಗಾಗಿ.  ಪಾಪದ ಹೆಣ್ಣು ಆಕೆ .ಆ ಬಿಟ್ಟು ಹೋದ ಗಂಡ ಮಗನಲ್ಲಿ  “ನಿನ್ನ ತಾಯಿ ಹೇಗಿದ್ದಾಳೆ?” ಎಂದು ಪ್ರಸ್ತಾಪವಾಗಿರುವುದು ಆಕೆಯ ಗಟ್ಟಿತನವನ್ನು ತೋರಿಸುತ್ತದೆ.

ಎರಡನೆಯದಾಗಿ ಬಾವಿ ತೋಡುವ ಮೇಸ್ತ್ರಿ ಉಸ್ತಾದ್ ಮೊಹಮದನ ಪಾತ್ರ. ಬಾವಿಯಲ್ಲಿ ನೀರು ಬಂದೇ ಬರುತ್ತದೆ ಎಂಬ  ಆಶಾವಾದದಿಂದ ಇರುತ್ತಾನೆ. ಅಂತೆಯೇ ತನ್ನ ಭುಜ ಮುರಿದಿದ್ದರೂ  ಬಾವಿ ತೋಡ ಹೊರಡುವ ಆತನ ವ್ಯಕ್ತಿತ್ವ ಸ್ವಾವಲಂಬಿತನವನ್ನು ತೋರಿಸುತ್ತದೆ.

 ಮೂರನೆಯದಾಗಿ ಆಯೇಷಾ ಗಂಡ ಹೇಳಿದ ಕಥೆಗಳನ್ನು ಕೇಳಿ  ಅನ್ವರ್  ನಿಂದ ತೊಂದರೆಯಾಗಬಹುದು ಎನ್ನುವ ಸುಳುಹನ್ನು  ಗಂಡನಿಗೆ ನೀಡುತ್ತಾಳೆ. ಆತನ ಜೊತಿಗಿದ್ದ ಅಷ್ಟೂ ದಿನಗಳವರೆಗೆ ಸಮೃದ್ಧಿಯ ಜೀವನ ನಡೆಸಿದರೂ ಗಂಡನ ತಂದೆಯ ಜೀವನದಲ್ಲಿ ಬಂದ ಹೆಣ್ಣುಗಳು, ತನ್ನ ಗಂಡನ ಜೀವನದಲ್ಲಿ ಬಂದ ಹೆಣ್ಣು ದುಃಖದಲ್ಲಿದ್ದಾಗಲು ಧೈರ್ಯ ತುಂಬುವ ಪ್ರಯತ್ನ ಮಾಡುತ್ತಾಳೆ.   

ಆಕ್ರೋಶದ ಹೊರತು ಬದುಕುವ ಸಂಯಮತೆ ಆಕೆಗೆ ಮಾತ್ರ ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.  ಒಟ್ಟಾರೆಯಾಗಿ ಈಡಿಪಸ್ ಕಾಂಪ್ಲೆಕ್ಸ್ನ  ಚೌಕಟ್ಟಿನ ಒಳಗೆ ಸುಳಿದಾಡಿ ಅದರಂತೆ ಅಂತ್ಯ ಕಾಣುವ ‘ಕೆಂಪು ಮುಡಿಯ ಹೆಣ್ಣು’ ಕೃತಿ ಒ.ಎಲ್. ನಾಗಭೂಷಣಸ್ವಾಮಿಯವರ ಅಭಿಪ್ರಾಯದಂತೆ ಸಾಹಿತ್ಯದ ಗಂಭೀರ ಓದುಗರ  ಅಗತ್ಯ ಕೃತಿಯಾಗಿದೆ.

‍ಲೇಖಕರು Avadhi

October 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಪ್ರಸನ್ನ ಸಂತೆಕಡೂರು 'ನೂರು ಸಿಂಹಾಸನಗಳು' ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This